02 ಮಾರ್ಚ್ 2018

ಫಲಿತಾಂಶ (ಕಿರುಗಥೆ)

"ಕಿರುಗಥೆ*

*ಫಲಿತಾಂಶ*

ತನ್ನ ಅಪ್ಪ ಹಾವು ಕಡಿದು ಕಾಲವಾದ ಮೇಲೆ ಬಾಲಜಿ ಮತ್ತು ಅಣ್ಣ ಇಂದ್ರೇಶ್ ಅಮ್ಮನೊಂದಿಗೆ ಮಾವನ ಮನೆಯಲ್ಲಿ ಇದ್ದರು .
ಅಣ್ಣಾ ಇಂದ್ರೇಶ್ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ಪಾಸಾದರೂ  ಪಿ.ಯು .ಸಿ ಯಲ್ಲಿ ಪೇಲಾಗಿ ಮಾವನ ಮನೆಯಲ್ಲಿ ಕೃಷಿ ಕೆಲಸ ಮಾಡುವುದು ನೋಡಿ ನಾಳೆ ನನ್ನ ಪಿ.ಯು ಸಿ   ಫಲಿತಾಂಶ ನಾನು ಫೇಲಾದರೆ? ಮುಂತಾದ ಯೋಚನೆಯಲ್ಲಿ ಬಾಲಜಿಗೆ ರಾತ್ರಿ ನಿದ್ದೆಯೇ  ಬರಲಿಲ್ಲ.
"ಯಾರು ಆ ಕೃಷ್ಣಪ್ಪನ ಅಳಿಯ ಇಡೀ ಕಾಲೇಜಿಗೆ ಪಸ್ಟ್ ಬಂದನಾ ?" ಎಂದು ಊರ ಜನರು ಅರಳಿ ಕಟ್ಟೆ ಮೇಲೆ ಕುಳಿತು ಮಾತನಾಡುತ್ತಿದ್ದರು ."ಓ ಆ ಹುಡುಗ ಒಂದು ದಿನನೂ ಈ ಕಡೆ ಕಾಣಿಸುತ್ತಿರಲಿಲ್ಲ ಚೆನ್ನಾಗಿ ಮಾರ್ಕ್ಸ್ ತೆಗೆದವ್ನಲ್ಲ" ಎಂದು ರಾಮಣ್ಣ ಹೇಳುವ ಸಮಯಕ್ಕೆ ಬಾಲಾಜಿ ಆ ಕಟ್ಟೆಯ ಮುಂದೆ ಬಂದ. ಅಲ್ಲಿನ ಜನ "ಇವನೆ ಅ ಹುಡುಗ  ಚೆನ್ನಾಗಿ ಓದಿದಿಯಾ ಮಗ ಈಗೆ ಓದು ಮುಂದೆ ನಿನಗೆ ಯಾವುದಾದರೂ ಗವರ್ನಮೆಂಟ್ ಕೆಲ್ಸ ಸಿಗುತ್ತೆ ನನ್ನ ಮಗ ನೂ ಅದಾನೆ ಕಳ್ ನನ್ ಮಗ ನಾಲಕ್ ಸಬ್ಜೆಕ್ಟ ಪೇಲ್ ಆಗವ್ನೆ" ಎಂದರು  .ತಿಮ್ಮಣ್ಣ ಮುಂದುವರಿದು "ಈ ಹುಡುಗುಂಗೆ ಅಪ್ಪ ಇಲ್ಲ ಅವರ ಮಾವ ಕೃಷ್ಣಪ್ಪ ಇಲ್ಲೆ ಓದಿಸತವ್ನೆ ಈ ಹುಡುಗನೂ ಚೆನ್ನಾಗಿ ಓದುತಾನೆ" ಎಂದರು .ಎಲ್ಲೋ ಬಾಲಜಿಗ ಸ್ವೀಟ್? ಎಂದು ಕೇಳುವ ಸಮಯಕ್ಕೆ ಕೃಷ್ಣಪ್ಪ ಕೈಯಲ್ಲಿ ಮೈಸೂರ್ ಪಾಕ್ ಬಾಕ್ಸ್ ಹಿಡಿದು ಅಲ್ಲಿಗೇ ಬಂದರು. ಊರವರಿಗೆ ಸಿಹಿ ಕೊಡಲು ಮುಂದಾದ ಕೃಷ್ಣಪ್ಪ ಗೆ "ಮೊದಲು ನಿನ್ನ ಅಳಿಯನಿಗೆ ಕೊಡು ಸ್ವೀಟ್ ನಾವೇನು ದಬ್ಬಾಕಿದಿವಿ" ಎಂದರು ಬಾಲಾಜಿಗೆ ಅವನ ಮಾವ ಸಿಹಿ‌ತಿನ್ನಿಸಿದಾಗ ಬಾಲಾಜಿಯ ಕಣ್ಣುಗಳಲ್ಲಿ ಗೊತ್ತಿಲ್ಲದೇ ನಾಲ್ಕು ಹನಿಗಳು ಹೊರಬಂದವು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಮಾರ್ಚ್ 2018

ಉತ್ತರ (ಹನಿಗವನ)

*ಹನಿಗವನ*

*ಉತ್ತರ*

ಒಲವಿನ ಉಡುಗೊರೆ
ನಲಿವಿನ ಕೊಡುಗೆ
ಚೆಲುವಿನ ಮುತ್ತು
ವಿಧ ವಿಧ ಕೊಡುಗೆಗಳ
ನೀಡುವೆನೆಂದು ಅವನು
ಪೀಡಿಸಿದನು
ವಿಧ ವಿಧದ ಜೋಡುಗಳಲಿ
ಕೊಡುವೆನೆಂದು ಅವಳು
ಜಾಡಿಸಿದಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಬರುವುದು ಒಳ್ಳೆದಿನ*(ಕವನ) ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಕವನ‌




*ಬರುವುದು ಒಳ್ಳೆದಿನ*(ಕವನ)

ಓದಿ ಬರೆವ ಕಾಲದಿ
ಮನ ಏಕೆ ನಿನಗೆ ಚಂಚಲವು
ಸವಿ ಕನಸ ಕಾಣೋ ವೇಳೆಯಲಿ
ಏಕೆ ಪ್ರೀತಿ ಗೊಡವೆಯು |ಪ|

ಈ ಕಾಲ ಸಿಗದು ನಾಳೆ
ಮೈಮರೆಯೆ ಬಾಳೆ ಗೋಳು
ಇದ ತಿಳಿದು ನೀನು ಅರಿತು ಬಾಳು
ಮುಂದೆ ಇಹುದು ನಾಕವು |೧|

ಹೆತ್ತವರ ಕನಸನ್ನು
ನನಸು ಮಾಡು ನೀನು
ಸುತ್ತಲಿನ ಜಗವನ್ನು
ಮೊದಲು ತಿಳಿ ನೀನು |೨|

ಹಿಡಿದಿಡು ನಿನ್ನ ಮನವ
ತರಿದಿಡು ಕೆಟ್ಟ ಚಟವ
ಹಿಡಿತವಿರಲಿ ಮನ
ಬರುವುದು ಒಳ್ಳೆ ದಿನ |೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*..

28 ಫೆಬ್ರವರಿ 2018

ಮಾನವರಾಗೋಣ (ಕವನ)

*ಮಾನವರಾಗೋಣ*

ಮನವಿರುವ ಮಾನವ ಮರ್ಕಟವಾದೆ
ಮನವ ನಿಯಂತ್ರಿಸದೆ ಮಂಗನಾದೆ
ನರನ ರೂಪವ ಕಳಚಿ ನರಿಯಾದೆ
ವಂಚನೆ ಮೋಸಕೆ ಅರಸನಾದೆ

ವ್ಯಾಘ್ರತೆಗೆ ಹೆಸರಾಗಿ ಹುಲಿಯಾದೆ
ಎಲ್ಲರ ಮೇಲೆರಗಿ  ಕೊಲೆಗೈದೆ
ಪರಚುತ ಅರಚುತ ಕರಡಿಯಾದೆ
ಹಲಸು ಜೇನ ಮರೆತು ಹೊಲಸಾದೆ

ಕಚ್ಚಾಡುವ ಗುಣದಿ ನಾಯಿಯಾದೆ
ಪ್ರಾಮಾಣಿಕತೆಯ ಮರೆತುಹೋದೆ
ದ್ವೆಷದಿ ವಿಷದಿ ನಾಗರ ಹಾವಾದೆ
ತನ್ನವರ ಪರರನು ನಿತ್ಯವೂ ದ್ವೇಷಿಸಿದೆ

ಯಾವ ಪ್ರಾಣಿ ಕೊಲ್ಲದು ತನ್ನವರ
ಮಾನವನೊಬ್ಬ ಬಿಡನು ಎಲ್ಲರ
ಎಲ್ಲಾ ಪ್ರಾಣಿಗಳ ದುರ್ಗುಣ ಪಡೆದ
ಮಾನವತೆಯ ಸದ್ಗುಣ ತೊರೆದ

ಕೊಲ್ಲು ಕೊಚ್ಚು ಕುಟಿಲತೆ ತೊರೆಯೋಣ
ಸ್ನೇಹ ಸಹಬಾಳ್ವೆ ಸದ್ಗುಣ ಕಲಿಯೋಣ
ದ್ವೇಷ ವಿಷ ಮೋಸಗಳ ಬಿಡೋಣ
ಪ್ರೀತಿ ತುಂಬಿದ ಮಾನವರಾಗೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ಫೆಬ್ರವರಿ 2018

ಚಿಂತೆಯೇಕೆ ( ಹನಿಗವನ)

*ಚಿಂತೆಯೇಕೆ*

ಬೇಸರಿಸದಿರು ಗೆಳತಿ ನಗು ಈಗ
ಬಂದೆ ಬರುವನು ಶ್ಯಾಮ ಬೇಗ
ಮನದ ದುಗುಡ ದೂರ ಮಾಡು
ನಿನ್ನಿನಿಯ ಬರುವ ದಾರಿ ನೋಡು
ತೊರೆದು ಬಿಡು ಚಿಂತೆಯನೀಗ
ಕಂಗೊಳಿಸಲಿ ಮಂದಹಾಸದಿ ಮೊಗ
ನವಿಲುಗರಿ ಮುಡಿದವಮ ಬರುವ
ನಿನ್ನಾಸೆಗಳನೀಗಲೇ ಈಡೇರಿಸುವ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*