01 ಮಾರ್ಚ್ 2018

*ಬರುವುದು ಒಳ್ಳೆದಿನ*(ಕವನ) ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಕವನ‌




*ಬರುವುದು ಒಳ್ಳೆದಿನ*(ಕವನ)

ಓದಿ ಬರೆವ ಕಾಲದಿ
ಮನ ಏಕೆ ನಿನಗೆ ಚಂಚಲವು
ಸವಿ ಕನಸ ಕಾಣೋ ವೇಳೆಯಲಿ
ಏಕೆ ಪ್ರೀತಿ ಗೊಡವೆಯು |ಪ|

ಈ ಕಾಲ ಸಿಗದು ನಾಳೆ
ಮೈಮರೆಯೆ ಬಾಳೆ ಗೋಳು
ಇದ ತಿಳಿದು ನೀನು ಅರಿತು ಬಾಳು
ಮುಂದೆ ಇಹುದು ನಾಕವು |೧|

ಹೆತ್ತವರ ಕನಸನ್ನು
ನನಸು ಮಾಡು ನೀನು
ಸುತ್ತಲಿನ ಜಗವನ್ನು
ಮೊದಲು ತಿಳಿ ನೀನು |೨|

ಹಿಡಿದಿಡು ನಿನ್ನ ಮನವ
ತರಿದಿಡು ಕೆಟ್ಟ ಚಟವ
ಹಿಡಿತವಿರಲಿ ಮನ
ಬರುವುದು ಒಳ್ಳೆ ದಿನ |೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*..

28 ಫೆಬ್ರವರಿ 2018

ಮಾನವರಾಗೋಣ (ಕವನ)

*ಮಾನವರಾಗೋಣ*

ಮನವಿರುವ ಮಾನವ ಮರ್ಕಟವಾದೆ
ಮನವ ನಿಯಂತ್ರಿಸದೆ ಮಂಗನಾದೆ
ನರನ ರೂಪವ ಕಳಚಿ ನರಿಯಾದೆ
ವಂಚನೆ ಮೋಸಕೆ ಅರಸನಾದೆ

ವ್ಯಾಘ್ರತೆಗೆ ಹೆಸರಾಗಿ ಹುಲಿಯಾದೆ
ಎಲ್ಲರ ಮೇಲೆರಗಿ  ಕೊಲೆಗೈದೆ
ಪರಚುತ ಅರಚುತ ಕರಡಿಯಾದೆ
ಹಲಸು ಜೇನ ಮರೆತು ಹೊಲಸಾದೆ

ಕಚ್ಚಾಡುವ ಗುಣದಿ ನಾಯಿಯಾದೆ
ಪ್ರಾಮಾಣಿಕತೆಯ ಮರೆತುಹೋದೆ
ದ್ವೆಷದಿ ವಿಷದಿ ನಾಗರ ಹಾವಾದೆ
ತನ್ನವರ ಪರರನು ನಿತ್ಯವೂ ದ್ವೇಷಿಸಿದೆ

ಯಾವ ಪ್ರಾಣಿ ಕೊಲ್ಲದು ತನ್ನವರ
ಮಾನವನೊಬ್ಬ ಬಿಡನು ಎಲ್ಲರ
ಎಲ್ಲಾ ಪ್ರಾಣಿಗಳ ದುರ್ಗುಣ ಪಡೆದ
ಮಾನವತೆಯ ಸದ್ಗುಣ ತೊರೆದ

ಕೊಲ್ಲು ಕೊಚ್ಚು ಕುಟಿಲತೆ ತೊರೆಯೋಣ
ಸ್ನೇಹ ಸಹಬಾಳ್ವೆ ಸದ್ಗುಣ ಕಲಿಯೋಣ
ದ್ವೇಷ ವಿಷ ಮೋಸಗಳ ಬಿಡೋಣ
ಪ್ರೀತಿ ತುಂಬಿದ ಮಾನವರಾಗೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ಫೆಬ್ರವರಿ 2018

ಚಿಂತೆಯೇಕೆ ( ಹನಿಗವನ)

*ಚಿಂತೆಯೇಕೆ*

ಬೇಸರಿಸದಿರು ಗೆಳತಿ ನಗು ಈಗ
ಬಂದೆ ಬರುವನು ಶ್ಯಾಮ ಬೇಗ
ಮನದ ದುಗುಡ ದೂರ ಮಾಡು
ನಿನ್ನಿನಿಯ ಬರುವ ದಾರಿ ನೋಡು
ತೊರೆದು ಬಿಡು ಚಿಂತೆಯನೀಗ
ಕಂಗೊಳಿಸಲಿ ಮಂದಹಾಸದಿ ಮೊಗ
ನವಿಲುಗರಿ ಮುಡಿದವಮ ಬರುವ
ನಿನ್ನಾಸೆಗಳನೀಗಲೇ ಈಡೇರಿಸುವ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಫೆಬ್ರವರಿ 2018

ನೆನಪುಗಳ ಪ್ರವಾಹ (ಕವನ)ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಉತ್ತಮ ಕವನ ಎಂದು ಪುರಸ್ಕಾರವನ್ನು ಪಡೆದ ಕವನ



*ನೆನಪುಗಳ ಪ್ರವಾಹ*

ನೀನಿರದೆ ಈ ಜಗ ಸುಡುಗಾಡು
ಬೇಗ ಬಂದು ನೀ ನನ್ನ ಕೂಡು
ಬೇಡವೆಂದರು ದಾಂಗುಡಿಯಿಡುತಿವೆ
ಸುಡುವ ನೆನಪುಗಳ ಪ್ರವಾಹ

ಸತ್ತಂತೆ ಬದುಕಿಹೆನು ಬದುಕಿಸಲು ಬಾ
ಬರದ ನಾಡಲಿ  ವರತೆಯ ತಾ ನೀನು
ದಾರಿ ಕಾದು ಕಾದು ಬಸವಳಿದಿವೆ
ಕಣ್ಣ ಮುಚ್ಚಿದರೆ ನಿನ್ನ ಬಿಂಬ ಬರುತಿದೆ

ನೀನಿರದ ನನ್ನೆದೆಯ ಅರಮನೆ ಖಾಲಿ
ನನ್ನ ಕನಸಿಗೆ ಹಾಕಲಾರೆ ಬೇಲಿ
ಬಂದು ಅಲಂಕರಿಸು  ನನ್ನೆದೆಯ
ತಾಳಲಾರೆ ಮನದ ಬೇಗುದಿಯ

ಬದುಕುವೆ ನಿನ್ನ ನೆನಪಲಿ ನೋಡು
ತಡಮಾಡದೆ  ಅವಸರಿಸಿ ಬಂದು ಬಿಡು
ಕಳೆದ ಸವಿನೆನಪುಗಳ ನೆನೆಯೋಣ
ಗತವನೀಗ ವರ್ತಮಾನ ಮಾಡೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 ಫೆಬ್ರವರಿ 2018

ಮಗು ನಗು (ಹನಿಗವನ)

*ಮಗು ನಗು*

ಪುಸ್ತಕವಿರಲಿ ಮಸ್ತಕವಿರಲಿ
ನಗುವೆಂದೆಂದಿಗೆ ಮಾಸದಿರಲಿ
ಪುಸ್ಕಕದಿಂದ ರಂಜೆನೆಯುಂಟು
ಮಸ್ತಕದಿ ಬುದ್ದಿಯು ಉಂಟು
ಪುಸ್ತಕ ಓದಿದ ನಮ್ಮ ಮಗು
ನಿಲ್ಲುವುದಿಲ್ಲ  ಅವನ ನಗು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*