19 ಫೆಬ್ರವರಿ 2018

ಮಾರಿಹಬ್ಬ (ಕವನ)



*ಮಾರಿ ಹಬ್ಬ*


ಬರುತಲಿದೆ‌ ನಮ್ಮ ‌ಹಬ್ಬ
ಪ್ರಜಾಪ್ರಭುತ್ವದ ಹಬ್ಬ
ಸರ್ಕಾರ ರಚಿಸುವ ಹಬ್ಬ
ಚುನಾವಣಾ ಮಹಾಹಬ್ಬ

ಬರುವ ಚುನಾವಣೆ ಯುಗಾದಿ
ಇದರಲಿ ನಮಗೆ ಬೆಲ್ಲ ಹೆಚ್ಚಿರಲಿ
ಬೇವು ಕಡಿಮೆಯಿರಲಿ
ಅಂತವರ ಆಯ್ಕೆ ನಮ್ಮದಾಗಲಿ

ಬರುವ ಚುನಾವಣೆ ದೀಪಾವಳಿ
ಕತ್ತಲಿನಿಂದ ನಾವು ಮುಕ್ತವಾಗೋಣ
ಮತಿದೀವೀಗೆ ಬೆಳಗಿಸಿಕೊಳ್ಳೋಣ
ಯೋಗ್ಯರ ಆಯ್ಕೆ ಮಾಡೋಣ

ಮುಂದಿನ ಚುನಾವಣೆ ಹೋಳಿ
ಬಣ್ಣ ಬಣ್ಣದ ಕನಸ ಹೊಂದೋಣ
ಅದಕ್ಕೊಂದುವ ನಾಯಕರ ಆರಿಸೋಣ
ನಮ್ಮ ಬಣ್ಣದ ಬದುಕ ಕಟ್ಟೋಣ

ಮುಂಬರುವ ಚುನಾವಣೆ
ಸತ್ ನಾಯಕರಿಗೆ ಹಬ್ಬ
ಕೆಟ್ಟ ನಾಯಕರಿಗೆ ಆಗಲಿದೆ
ಮುಂದೈತೆ ಮಾರಿಹಬ್ಬ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 ಫೆಬ್ರವರಿ 2018

ಯಾವಾಗ (ಕವನ)

*ಯಾವಾಗ*

ಅವಳೊಬ್ಬಳು ಮುಚ್ಚಿದಳು
ಒಂದು ಕಣ್ಣು
ಮಾದ್ಯಮ ದಲ್ಲಿ
ಅದೇ ಸುದ್ದಿ

ಲಕ್ಷಾಂತರ ಮಂದಿ ಬಾಳುತ್ತಿದ್ದಾರೆ
ಎರಡೂ ಕಣ್ಣು ಮುಚ್ಚಿ
ಮಾದ್ಯಮದವರಿಗೆ ಕಾಣಲೇ ಇಲ್ಲ
ಅದೇ ಅವರ ಬುದ್ದಿ

ಯುದ್ಧಗಳಲ್ಲಿ ಯೋಧರು
ಶಾಶ್ವತವಾಗಿ ಮುಚ್ಚುತ್ತಿದ್ದಾರೆ
ತಮ್ಮ ಕಣ್ಣುಗಳ
ಎಲ್ಲೂ ಇಲ್ಲ ಅದರ ಸದ್ದು

ಮನರಂಜನೆಯೇ ಇವರ
ಪ್ರಥಮ ಪ್ರಾಶಸ್ತ್ಯ
ಮಾನವೀಯತೆ
ಕೆಲವರಿಗೆ ಮಾತ್ರ ಸ್ವಂತ


ಟಿ ಆರ್ ಪಿ ಲೈಕುಗಳಿಂದ
ಹೊರಬರುವುದು ಯಾವಾಗ
ಮನರಂಜನೆಗಿಂತ  ಮಾನವತೆಗೆ
ಬೆಲೆಕೊಡುವುದು ಯಾವಾಗ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೬ (ಗೊತ್ತಿರಲಿಲ್ಲ)ಕವಿಬಳಗ ವಾಟ್ಸಪ್ ಗುಂಪಿನ ಗಜ಼ಲ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಗಜ಼ಲ್

*ಗಜ಼ಲ್ ೨೬*

ಮಂದಹಾಸ ಮುಖವಾಡದಿ ಕಾರ್ಕೋಟಕ ವಿಷವಿರುವುದು ಗೊತ್ತಿರಲಿಲ್ಲ
ತಿಳಿಗೊಳದ ಆಳದಲಿ ಬಗ್ಗಡದ ಕೆಸರಿರುವುದು ಗೊತ್ತಿರಲಿಲ್ಲ

ಕೈಕುಲಕುವ ಹಸ್ತವು  ಬಗಲಲ್ಲಿಟ್ಟುಕೊಂಡಿದೆ ಬಾಕು
ಒಲವ ನಗೆ ಬರೀ ಹಲ್ಲಿನಿಂದ ಬಂದಿರುವುದು ಗೊತ್ತಿರಲಿಲ್ಲ

ಆಡಂಬರ,ಸ್ವಾರ್ಥ,ತೋರ್ಪಡಿಕೆಯ ಪೂಜೆ ಪುರಸ್ಕಾರಗಳು
ದಿಟದ ಜನಾರ್ದನ ಸೇವೆಯ ಮರೆಯವರೆಂಬುದು ಗೊತ್ತಿರಲಿಲ್ಲ

ನೀರು ,ಜಲ,ನೆಲ ಗಾಳಿ ಮಣ್ಣಿನ  ಬಗ್ಗೆ ಭಾಷಣದ ಪ್ರವರ
ಕಾಸಿಗಾಗಿ ಭೂತಾಯಿಯ ಮಾರಿ ಕೊಳ್ಳವರೆಂದು ಗೊತ್ತಿರಲಿಲ್ಲ


ಸೀಜೀವಿಗೆ ಸರ್ವೇ ಜನಾಃ ಸುಖಿನೋಭವಂತು ಆಸೆ
ಸ್ವಾರ್ಥಿಗಳ ಕೂಟಗಳು ಜಗವ ಕೆಡಿಸುವರೆಂದು ಗೊತ್ತಿರಲಿಲ್ಲ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಫೆಬ್ರವರಿ 2018

ಜೀವಿಸು(ಕವನ)

*ಜೀವಿಸು*

ಅವರ ಉಡುಪ ತುಂಡ
ಇವರದು ಉದ್ದ ಮತ್ಯಾರದೋ
ಮರ್ಯಾದೆಗೆಟ್ಟ ಬಟ್ಟೆ
ನಿನಗೇಕೆ ಅದರ ಉಸಾಬರಿ
ನಿನ್ನ ಬಟ್ಟೆ ನಿ‌ನ್ನದು .

ಅವರಿಗೆ ಬ್ರೆಡ್ ಆಹಾರ
ಇವರಿಗೆ ಮಾಂಸಾಹಾರ
ಸಸ್ಯಾಹಾರ ಮತ್ಯಾರಿಗೋ
ನಿನಗೇಕೆ ಬೇರೆಯವರ ಚಿಂತೆ
ನಿನ್ನ ಊಟ ನಿ‌ನ್ನದು .

ಒಬ್ಬನಿಗೆ  ಹಣ್ಣಿನ ಆಸೆ
ಮತ್ತೊಬ್ಬನಿಗೆ ಮಣ್ಣಿನಾಸೆ
ಹೊನ್ನು ವಜ್ರದ ಆಸೆ ಇನ್ನೊಬ್ಬಗೆ
ಯೋಚಿಸುವುದ ನಿಲ್ಲಿಸು
ಜೀವೀಸಲು ಆರಂಬಿಸು .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಗಜ಼ಲ್ ೨೪ ( ನಿನದೆ ನೆನಪು)ನನ್ನ ಕವಿಬಳಗ ಗಜ಼ಲ್ ಸ್ಪರ್ಧೆಯಲ್ಲಿ *ಗಮನಾರ್ಹ ಉಲ್ಲೇಖ* ಪುರಸ್ಕೃತ ಗಜ಼ಲ್


*ಗಜ಼ಲ್ ೨೪*

ತಂಗಾಳಿಯು  ಸುಳಿದಾಗ ನಿನದೆ ನೆನಪು
ಬೆಳದಿಂಗಳ ಹಾಲ್ಚೆಲ್ಲಿದಾಗ ನಿನದೆ ನೆನಪು

ತರುಲತೆಗಳು ಮರವ ತಬ್ಬಿವೆ ಮುದದಿ
ಸರಸದ ಸರಿಗಮ ನೆನದಾಗ ನಿನದೆ ನೆನಪು

ಗೊರವಂಕ ಕೋಗಿಲೆಗಳ ಇಂಪಾದ ಗಾನ
ಶಿವಶಿವೆಯರ ನಾಟ್ಯ ಕಂಡಾಗ ನಿನದೆ ನೆನಪು

ಧಮ್ಮಿಕ್ಕಿ ಹರಿಯುತಿದೆ ಹೃದಯದಿ ಪ್ರೇಮನದಿ
ಜುಳು ಜುಳು ಜಲದ ಸದ್ದು ಕೇಳಿದಾಗ ನಿನದೆ ನೆನಪು

ಸೀಜೀವಿಯು ತಡೆದರೂ ಕಾಲವು ನಿಲುತಿಲ್ಲ
ಬೆಳಗು ಬೈಯ್ಗು ಸರಿದಾಗ   ನಿನದೆ ನೆನಪು

*ಸಿ .ಜಿ.ವೆಂಕಟೇಶ್ವರ*
*ಗೌರಿಬಿದನೂರು*