19 ಡಿಸೆಂಬರ್ 2017

ಗಜ಼ಲ್ ೧೫ (ಮರುಗುತಿದೆ ಮನ)

*ಗಜ಼ಲ್ ೧೫*

ಭೌತಿಕ ಅಭಿವೃದ್ಧಿ  ಕಂಡು ಸಂತಸವಾಗಿದೆ ಮನ
ಮಾಲಿನ್ಯಗೊಂಡ ನೆಲ ಜಲಕೆ ಕೊರಗಿದೆ  ಮನ

ಜೀವಿಗಳ ಕೊಲ್ಲುತಿದೆ ರಾಸಾಯನಿಕ ವಿಷಗಾಳಿ
ಮಣ್ಣಮಲಿನ ಮಾಡುವರ ನೋಡಿ ಮುದುಡಿದೆ ಮನ

ಗಂಗೆಗೆ ವಿಶಪ್ರಾಶನ ಮಾಡಿ ಡೋಂಗಿ ಪೂಜೆ
ಮೂಟೆಗಟ್ಟಲೆ ಕಸ ನೋಡಿ ಮರುಗುತಿದೆ ಮನ

ಕಿವಿಗಡಚಿಕ್ಕುವ ಸದ್ದು ಮೈಕಾಸುರನ ಹಾವಳಿ
ಜೀವಿಗಳ ಚಡಪಡಿಕೆ ಕಂಡು ಸೊರಗುತಿದೆ ಮನ


ಮರಗಿಡಗಳ ಮಾರಣಹೋಮ ಪರಿಸರ ನಾಶ
ಸೀಜೀವಿಯ ಸ್ವಚ್ಛ ಭಾರತಕೆ ಹಾತೊರೆಯುತಿದೆ ಮನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 ಡಿಸೆಂಬರ್ 2017

ಹನಿಗವನ (ಹೋಲಿಕೆ)

*ಹನಿಗವನ *

*ಹೋಲಿಕೆ*

ನೋಡು ತಂಗಿ ಆ ಕಡೆಯ ಜನರ
ಬಂದಿಯಾಗಿಹರು ಕೆಡಿಸಿ ಪರಿಸರ
ಪರಿಸರದೊಂದಿಗೆ ಬದುಕು ನಮ್ಮದು
ಮಾಲಿನ್ಯಕಾರಕ  ಜೀವನ ಅವರದು
ನೆಮ್ಮದಿಯ ತೃಪ್ತಿಯ ಬಾಳು ನಮ್ಮದು
ಅತೃಪ್ತ ಸ್ವಾರ್ಥ ಆತ್ಮಗಳು ಅವರದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೧೪ (ಏಕೆ)

*ಗಜ಼ಲ್ ೧೪*

ಬಾಳದೋಣಿಯ ಪಯಣದ ಮಧ್ಯದಲಿ ಬಿಟ್ಟೆ ಏಕೆ?
ನಡುನೀರಿನಲಿ ಒಬ್ಬನನೆ ತೊರೆದು ಕೈಕೊಟ್ಟೆ    ಏಕೆ ?


ಜಕ್ಕವಕ್ಕಿಯ ಹಾಗೆ ಮಧುರ ಮಿಲನದಿ ಸುಖಿಸಿ
ಮಲ್ಲಿಗೆಯ ಸುಗಂಧ ಸವಿದು ಕನಸುಗಳ ಪೇರಿಸಿಟ್ಟೆ ಏಕೆ ?

ಚಳಿಗಾಲದಲ್ಲಿ ಮೈಬಿಸಿಯ ಶಾಖ ಸೋಕಿಸಿ ಬೆಚ್ಚನೆಯ
ನೆನಪುಗಳ ನೀಡಿ ನನ್ನಲ್ಲಿ ಹುಸಿ ಕನಸುಗಳ ನೆಟ್ಟೆ ಏಕೆ?

ಅಮರ ,ನಿಷ್ಕಲ್ಮಷ,  ನನ್ನ  ವಾಸ್ತವ ಪ್ರೀತಿಯ
ತೊರೆದು ಬಿಸಿಲುಗುದುರೆಯ ಹಿಂದೆ ಓಡಿಬಿಟ್ಟೆ ಏಕೆ?


ಹೂವಿಂದ ಹೂವಿಗೆ ಹಾರದ ದುಂಬಿ ನಾನು
ಮಧುರ ಮನಸಿನ ಸೀಜೀವಿಯ ಬಿಟ್ಟು ಕೆಟ್ಟೆ ಏಕೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಿರೀಕ್ಷೆ (ಕವನ)


*ನಿರೀಕ್ಷೆ*

ಮುಸ್ಸಂಜೆ ತಂಪಿಗೆ ಹೂಗುಚ್ಚ ಕಳೆಗಟ್ಟಿದೆ
ನನ್ನವಳಿಗರ್ಪಿಸಲು ಮನ ತವಕದಿ ಕಾದಿದೆ
ರವಿಮಾಮ ನಿಲ್ಲು ಅರೆ ಕ್ಷಣ ಚಲಿಸದೇ
ಬೀಳ್ಕೊಡುವೆ ನಿನ್ನ ಅವಳು ಬಂದರೆಕ್ಷಣದೇ ||

ದಿನವೂ ಬರುತಿದ್ದಳು ಸರಿಯಾದ ಸಮಯಕೆ
ಸರಿಯದೀಗ ಸಮಯ ವಿಳಂಬಿಸಿದಳು ಏತಕೆ
ಸವಿದಿದ್ದೆ ಸಿಹಿ ಮುತ್ತು ನಿನ್ನೆ ಇದೇ ತಾಣದಲಿ
ಅದೇ ಕೊನೆಯಾಗುವ ಆತಂಕವೀಗ  ಮನದಲಿ||

ಬಾರೆ ನನ  ಗೆಳತಿ ಹೂ ಬಾಡುವ ಮೊದಲು
ಸೂರ್ಯ ಮುಳುಗಿ ಕತ್ತಲಾಗುವ ಮೊದಲು
ಮಾತಾಡದಿದ್ದರೂ ಬಂದು ಕಣ್ಮುಂದೆ ನಿಲ್ಲು
ನಾ ತಪ್ಪು ಮಾಡಿದ್ದರೆ ನಿನ್ನ  ಕಣ್ಗಳಲೆ  ಕೊಲ್ಲು||

ಮರೆತಿರಬಹುದೆ ನನ್ನನು  ಅವಳು ಇಂದು
ಛೆ ಮರೆಯಲಾಗದ ಸಂಭಂದ ನಮ್ಮದು
ಇಂದೇಕೋ ಕಾರ್ಯನಿಮಿತ್ತ ಬರದಿರಬಹುದು
ನಾಳೆ ತಪ್ಪಿಸಳು ನನ್ನ  ಮನ ಹೇಳುತಿಹುದು||

*ಸಿ. ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಡಿಸೆಂಬರ್ 2017

ಹನಿಗವನ

*ಥಟ್ ಅಂತ ಹನಿಗವನ*

*ನಗುತಿಹಳು ಶರದಿ*

ಚಂದಮಾಮನ ಕರೆದು ಬಸವಳಿದೆ
ಸಳ್ಳು ಹೇಳಿದ  ನಾಳೆ ಬರುವೆನೆಂದೆ
ಪೋರಿ ನಾನೆಂಬ ತಾತ್ಸಾರ ಅವನಿಗೆ
ಹಿಡಿವೆ ಚಂದಿರನೆಂದು ಹೇಳಿದೆ ಗೆಳತಿಗೆ
ತಿಂಗಳಿನಿಂದ ಕಟ್ಟಿರುವೆ ಇವನ ಹಗ್ಗದಿಂದ
ನಗುತಿಹಳು ಶರಧಿ ನೋಡಿ ಕುತೂಹಲದಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*