18 ಡಿಸೆಂಬರ್ 2017

ನಿರೀಕ್ಷೆ (ಕವನ)


*ನಿರೀಕ್ಷೆ*

ಮುಸ್ಸಂಜೆ ತಂಪಿಗೆ ಹೂಗುಚ್ಚ ಕಳೆಗಟ್ಟಿದೆ
ನನ್ನವಳಿಗರ್ಪಿಸಲು ಮನ ತವಕದಿ ಕಾದಿದೆ
ರವಿಮಾಮ ನಿಲ್ಲು ಅರೆ ಕ್ಷಣ ಚಲಿಸದೇ
ಬೀಳ್ಕೊಡುವೆ ನಿನ್ನ ಅವಳು ಬಂದರೆಕ್ಷಣದೇ ||

ದಿನವೂ ಬರುತಿದ್ದಳು ಸರಿಯಾದ ಸಮಯಕೆ
ಸರಿಯದೀಗ ಸಮಯ ವಿಳಂಬಿಸಿದಳು ಏತಕೆ
ಸವಿದಿದ್ದೆ ಸಿಹಿ ಮುತ್ತು ನಿನ್ನೆ ಇದೇ ತಾಣದಲಿ
ಅದೇ ಕೊನೆಯಾಗುವ ಆತಂಕವೀಗ  ಮನದಲಿ||

ಬಾರೆ ನನ  ಗೆಳತಿ ಹೂ ಬಾಡುವ ಮೊದಲು
ಸೂರ್ಯ ಮುಳುಗಿ ಕತ್ತಲಾಗುವ ಮೊದಲು
ಮಾತಾಡದಿದ್ದರೂ ಬಂದು ಕಣ್ಮುಂದೆ ನಿಲ್ಲು
ನಾ ತಪ್ಪು ಮಾಡಿದ್ದರೆ ನಿನ್ನ  ಕಣ್ಗಳಲೆ  ಕೊಲ್ಲು||

ಮರೆತಿರಬಹುದೆ ನನ್ನನು  ಅವಳು ಇಂದು
ಛೆ ಮರೆಯಲಾಗದ ಸಂಭಂದ ನಮ್ಮದು
ಇಂದೇಕೋ ಕಾರ್ಯನಿಮಿತ್ತ ಬರದಿರಬಹುದು
ನಾಳೆ ತಪ್ಪಿಸಳು ನನ್ನ  ಮನ ಹೇಳುತಿಹುದು||

*ಸಿ. ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಡಿಸೆಂಬರ್ 2017

ಹನಿಗವನ

*ಥಟ್ ಅಂತ ಹನಿಗವನ*

*ನಗುತಿಹಳು ಶರದಿ*

ಚಂದಮಾಮನ ಕರೆದು ಬಸವಳಿದೆ
ಸಳ್ಳು ಹೇಳಿದ  ನಾಳೆ ಬರುವೆನೆಂದೆ
ಪೋರಿ ನಾನೆಂಬ ತಾತ್ಸಾರ ಅವನಿಗೆ
ಹಿಡಿವೆ ಚಂದಿರನೆಂದು ಹೇಳಿದೆ ಗೆಳತಿಗೆ
ತಿಂಗಳಿನಿಂದ ಕಟ್ಟಿರುವೆ ಇವನ ಹಗ್ಗದಿಂದ
ನಗುತಿಹಳು ಶರಧಿ ನೋಡಿ ಕುತೂಹಲದಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸೂತ್ರಧಾರ (ಭಾವಗೀತೆ.ಕನ್ನಡ ಸಾಹಿತ್ಯ ಬಳಗ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕವನ)



*ಭಾವಗೀತೆ*

*ಸೂತ್ರಧಾರ*


ಜೀವನವೆಂಬುದು ಒಂದು ನಾಟಕ
ಇಲ್ಲೇ ಇರುವುದು  ನರಕ ನಾಕ

ಸೂತ್ರದ ಬೊಂಬೆಗಳು ನಾವು
ಸಾಮಾನ್ಯ ಇಲ್ಲಿ ನಲಿವು ನೋವು
ಮೇಲಿರುವ ಸೂತ್ರದಾರ ಅವನು
ಸದಾ ನಮ್ಮ ಪಾಲಿಸುತಿಹನು

ನ್ಯಾಯ ಸಲ್ಲಿಸಬೇಕು ನಮ್ಮ ಪಾತ್ರಕೆ
ಬದ್ದರಾಗಿರಬೇಕು ಅವನ ಸೂತ್ರಕೆ
ನಾವಂದು ಕೊಂಡಂತೆ  ಏನೂ ಆಗದಿಲ್ಲಿ
ಅವನಾಡಿಸಿದಂತೆ ಆಡುವೆವು ನಾವಿಲ್ಲಿ

ನಾವಿರುವೆವು ಇಲ್ಲಿ ನಾಲ್ಕು ದಿನ
ತೀರಿಸಬೇಕು ಈ ನೆಲದ ಋಣ
ಅವನಾಡಿಸಿದಂತೆ ಆಡಬೇಕು
ಕರೆ ಬಂದಾಗ ಹೋಗುತಿರಬೇಕು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೧೩ (ಕೊನೆಯೆಲ್ಲಿ)

ಗಜ಼ಲ್ ೧೩ (ಕೊನೆಯೆಲ್ಲಿ)

ಸ್ವಾರ್ಥವಿರದ ಕೇಡಿರದ ನಮ್ಮ ಸ್ನೇಹಕೆ ಕೊನೆಯೆಲ್ಲಿ
ಚಿರಸ್ಥಾಯಿ ಚಿರನೂತನ ನಿರಂತರ ಗೆಳತನಕೆ ಕೊನಯೆಲ್ಲಿ

ಹಗಲಿನಲಿ ಇಳೆಗೆ ದಿನಕರನ ಗೆಣೆತನ ಇರುಳತಮಕೆ
ಧರಣಿಗೆ ತಿಂಗಳ ಬೆಳಕಿನ ಜೊತೆ ಇರುವ ಬಂಧಕೆ ಕೊನೆಯೆಲ್ಲಿ

ಹನಿ ಹನಿಗಳ ಕೂಡಿ ಹಳ್ಳವಾಗುವ ಹಾಗೆ ನದಿಗೆ ಸಾಗರ
ಸೇರುವ ತವಕ ಇವೆಲ್ಲದರ ಮೂಲ ಮುಗಿಲಿನ ಮೂಲಕೆ ಕೊನೆಯೆಲ್ಲಿ


ಹಸುವಿಗೆ ಕರುವಿನ ಮೇಲೆ ಮಮತೆ ತಾಯಿಗೆ ಮಡಿಲ ಕಂದನ
ಮೇಲೆ ಪ್ರೀತಿಯು ಇವರ ಮುಗಿಯದ  ಬಾಂಧವ್ಯಕೆ ಕೊನೆಯೆಲ್ಲಿ

ಜಗದಿ ಇರುವ ಸಕಲಚರಾಚರ ಜೀವಿಗಳ
ಮೇಲೆ ಸೀಜೀವಿಗಿರುವ ಅನುಬಂಧಕೆ ಕೊನೆಯೆಲ್ಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

16 ಡಿಸೆಂಬರ್ 2017

ಹನಿಗವನಗಳು (ಪಂಜರ ಮತ್ತು ಜೀವನ)

ಹನಿಗವನಗಳು

*೧*

*ಇಳಿ*

ನನ್ನವಳು ಹೇಳಿದಳು
 ನನಗೆ ಸ್ವತಂತ್ರ ಇಲ್ಲ
ನಾನು ಪಂಜರದ ಗಿಳಿ
ನಾನಂದೆ ನೀನು ನನ್ನ
ತಲೆಯ ಮೇಲೆ ಕುಳಿತಿರುವೆ
ಮೊದಲು ಇಳಿ

*೨*

ಮದುವೆ

ಜೀವನದಲ್ಲಿ ನಾನು ಪಂಜರದಲಿ
ಸಿಲುಕಿಲ್ಲ ಎನ್ನುವವರು ಇಲ್ಲ
ಏಕೆಂದರೆ ಬಹುತೇಕರಿಗೆ
ಮದುವೆಯಾಗಿದೆಯಲ್ಲ

*೩*
*ಮಾಲೆ*

ಜೀವನದಲಿ ಇದ್ದಿದ್ದೇ
 ಏಳು ಬೀಳಬೀಳುಗಳ
ಸರಮಾಲೆ
ಅದಕ್ಕೆ ಉದಾಹರಣೆ
ಮದುವೆಯ ದಿನ
ನನ್ನವಳಿಗೆ ಹಾಕಿದ
ಮಾಲೆ

*೪*

*ಅನ್ಯೋನ್ಯತೆ*

ದಾಂಪತ್ಯ ಜೀವನ ಸುಗಮವಾಗಿರಲು
ಅನ್ಯೋನ್ಯತೆ ಇರಬೇಕು ಪರಸ್ಪರ
ಇಲ್ಲದಿದ್ದರೆ ತಪ್ಪಿದ್ದಲ್ಲ
ಕರೆದುಕೊಳ್ಳುವುದು ಪರಪರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*