18 ನವೆಂಬರ್ 2017

ಕರ್ತವ್ಯ (ಕಿರುಗಥೆ)

ಕಿರು ಕಥೆ

*ಕರ್ತವ್ಯ*

ರವಿಗೆ ಮೈ ಸುಟ್ಟು ಹೋಗುವ ಜ್ವರ ಬಂದು ಜ್ವರದ ಬಾದೆಗೆ  ಏನೇನೋ ಮಾತನಾಡಿ ಅವನ ತಾಯಿಯನ್ನು ಮತ್ತು ಕುಟುಂಬ ಸದಸ್ಯರು ಗೊಂದಲಕ್ಕೀಡುಮಾಡಿ ಎಲ್ಲರಿಗೂ ಚಿಂತೆಯಾಯಿತು.ತನ್ನ ತಂದೆಯೇ ದೊಡ್ಡ ಖಾಸಗಿ ನರ್ಸಿಂಗ್ ಹೊಂ ಒಡೆಯನಾದರೂ ಇಂದು ಆಸ್ಪತ್ರೆಗೆ ಬೀಗ ಜಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ದೂರದ ನಗರದಲ್ಲಿ ಮುಷ್ಕರದಲ್ಲಿ ನಿರತರಾಗಿದ್ದಾರೆ. ಸಾಲದೆಂಬಂತೆ ಬೇರೆ ರೋಗಿಗಳು ತೊಂದರೆ ಕೊಡುವರೆಂದು ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾರೆ. ಮನೆ ಮಂದಿ ಪ್ರಯತ್ನ ಪಟ್ಟು ಸರ್ಕಾರಿ ಆಸ್ಪತ್ರೆಗೆ ಹೋದರೆ ಕಾಲಿಡಲು ಜಾಗವಿಲ್ಲ .ಕೊನೆಗೆ ರವಿಯ ತಾಯಿ ೫ ರೂಪಾಯಿ ಪಡೆದು ಚಿಕಿತ್ಸೆ ನೀಡುವ ಸುರೇಶ್ ಡಾಕ್ಟರ್ ಹತ್ತಿರ ಮಗನನ್ನು ಕರೆದುಕೊಂಡು ಹೋಗಲು ನಿರ್ಧರಿಸಿದಳು ಅದರೆ ಮನಸು ಹಿಂಜರಿಕೆ ಮಾಡಿತು ಕಾರಣ ೩ ತಿಂಗಳ ಹಿಂದೆ ತನ್ನ ಪತಿ ಈ ಡಾಕ್ಟರ್ ಮೇಲೆ ರೌಡಿಗಳಿಂದ ಹಲ್ಲೆ ಮಾಡಿಸಿ ಪಟ್ಟಣದಿಂದ ಓಡಿಸಲು ಪ್ರಯತ್ನಿಸಿದರೂ ಜಗ್ಗದೇ ಅವರ ೫ ರೂ ವೈದ್ಯ ಸೇವೆ ಮುಂದುವರೆಸಿದ್ದರು  .ಕೊನೆಗೆ ಧೈರ್ಯ ಮಾಡಿ ಸುರೇಶ್ ಡಾಕ್ಟರ್ ಹತ್ತಿರ ಮಗನನ್ನು ಕರೆದುಕೊಂಡು ಹೋದಾಗ ಡಾಕ್ಟರ್ ಹಿಂದಿನದನ್ನು ಮರೆತು ರವಿಗೆ ಚಿಕಿತ್ಸೆ ನೀಡಿದರು.
ರವಿಯ ತಾಯಿಯ ಕಣ್ಣಲ್ಲಿ ನೀರು ಬಂದು ಡಾಕ್ಟರ್ ಗೆ ಧನ್ಯವಾದಗಳನ್ನು ಅರ್ಪಿಸಿ ನೀವು ನನ್ನ ಮಗನ ಪಾಲಿನ ದೇವರೆಂದರು .ಸುರೇಶ್ ಡಾಕ್ಟರ್ ಶಾಂತವಾಗಿ ನನ್ನ *ಕರ್ತವ್ಯ*ನಾನು ಮಾಡಿದ್ದೇನೆ ಎಂದರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ನವೆಂಬರ್ 2017

ಕವಿತೆ ನನ್ನ ದೃಷ್ಟಿಯಲ್ಲಿ (ಲೇಖನ)

*ಲೇಖನ*

*ಕವಿತೆ ನನ್ನ ದೃಷ್ಟಿಯಲ್ಲಿ*

 ಕವಿಯೊಬ್ಬನ  ಮನಸ್ಸಿನ ಭಾವನೆಗಳ ಕನ್ನಡಿಯೇ ಕವಿತೆ .ತನ್ನ ಮನದ ಭಾವನೆಗಳನ್ನು ಪದಗಳಲಿ ಅಭಿವ್ಯಕ್ತಿಸಿ ಸಹೃದಯನ ಓದಿಗೆ ನೀಡಿ ಓದಗರು ಅದನ್ನು ಆಸ್ವಾದಿಸಿ ಮೆಚ್ಚುಗೆ ಸೂಚಿಸಿದರೆ ಅದೇ ಕವಿಗೆ ನೊಬೆಲ್ ಪ್ರಶಸ್ತಿ.
ಕವಿತೆಯ ಇತಿಹಾಸ ನೋಡಿದರೆ ನಮ್ಮ ಬಹುತೇಕ ಪೂರ್ವಜರು ಕವಿತೆಗಳ ಬರೆವ ಕವಿಗಳೆ ಆಗಿದ್ದರು ಯಾಕಂದರೆ ನಮ್ಮ ಜಾನಪದರು ಅನಕ್ಷರಸ್ಥರಾದರೂ  ಯಾವ ಕವಿಗಳಿಗೆ  ಕಮ್ಮಿಯಿಲ್ಲದಂತೆ  ತಮ್ಮ ಜನಪದ ಕವನಗಳ ಮೂಲಕ ಗಮನ ಸೆಳೆದು ಇಂದಿಗೂ ಅವರ ಪ್ರತಿಭೆಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೇವೆ.
ಕವಿ ಕವಿತೆ ಬರೆಯಲು ವಿಷಯ ಇದೇ ಅಗಬೆಕೆಂದೇನೂ ಇಲ್ಲ ಮಗುವಿನ ನಗು, ಸೂರ್ಯಕಾಂತಿ, ಚಂದ್ರ, ಪರಿಸರ, ಮಡದಿ,ಮಕ್ಕಳು, ಸಮಾಜ, ಶ್ರೀಮಂತ, ಬಡವ,ಜೀವರಾಶಿ, ನದಿ,ಸಮುದ್ರ,ಒಂದೇ ಎರಡೇ
ಸೂರ್ಯನ ಕೆಳಗಿರುವ ಎಲ್ಲಾ ವಸ್ತುಗಳು , ಅಂತರಿಕ್ಷ ದ ಎಲ್ಲಾ ಕಾಯಗಳು  ಮತ್ತು ಪಾತಾಳವೂ ಸೇರಿ ಕೆಲವು ಕಲ್ಪನೆ ವಸ್ತುಗಳೂ ಆದೀತು .
ನನ್ನ ದೃಷ್ಟಿಯಿಂದ ಕವಿತೆ ಮುಖ್ಯವಾಗಿ ಈ ಕಾರ್ಯ ಮಾಡುತ್ತದೆ ಒಂದು ಕವಿ ತಾನು ಸೃಷ್ಟಿ ಮಾಡಿದ ಕವಿತೆ ನೋಡಿ ಮೊದಲು ಕವಿ ಆನಂದಿಸಿ ನಂತರ ಓದುಗನ ಓದಿಗೆ ಪ್ರತಿಕ್ರಿಯೆಯಾಗಿ ಕಾಯುವನು ಅದು ವಿಮರ್ಶೆ ರೂಪದಲ್ಲಿಯೂ ಇರಬಹುದು.
ಇನ್ನು ಕವಿತೆ ಓದಿದ ಸಹೃದಯ ಎರಡು ರೀತಿಯಲ್ಲಿ ಕವಿತೆಯ ಪ್ರಯೋಜನ ಪಡೆಯಬಹುದು ,ವಿರಾಮಕಾಲದ ಸದುಪಯೋಗ, ಮತ್ತು ಕವಿತೆಯ ಆಶಯದೊಂದಿಗೆ ರಸಸ್ವಾದ ಅನುಭವಿಸಬಹುದು. ಕೆಲವು ಸಮಾಜದ ಓರೆ ಕೋರೆ ತಿದ್ದುವಂತಹ ಕವನಗಳನ್ನು ಓದಿ ಮನಪರಿವರ್ತನೆ ಆಗಿರುವ ಜನರೂ ಇದ್ದಾರೆ ಆ ಮಟ್ಟಿಗೆ ಕವಿತೆ ಸಮಾಜಮುಖಿ, ಇಂತಹ ಕವಿತೆಗಳು ಹೆಚ್ಚು ಬರಲಿ ಎಂಬುದು ನನ್ನ ಆಶಯ .ಹಾಗಂತ ನಾನು ಪರಿಸರ, ರೊಮ್ಯಾಂಟಿಕ್ ಕವನಗಳ ವಿರೋಧಿ ಅಲ್ಲ .ಅವುಗಳ ಓದುಗರು ಯಾವಾಗಲೂ ಹೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ .
ಒಟ್ಟಾರೆ ಹೇಳುವುದಾದರೆ ಕವಿತೆಗಳು ಕವಿಗಳ ಹೃದಯದಿಂದ ಕವಿಮನಗಳಿಗೆ ತಲುಪಿಸುವ ಸಂದೇಶಗಳು ಎಂದರೆ ತಪ್ಪಾಗಲಾರದು. ಕವಿತೆಗಳೆಂದರೆ ಕೇವಲ ಪ್ರಾಸ,ನಿಯಮಗಳನ್ನು ಮಾತ್ರ ಪಾಲಿಸಿದರೆ ಸಾಲದು ಅದರ ಜೊತೆಯಲ್ಲಿ ಭಾವ ಮುಖ್ಯ, ಪರಿಸರ ಮುಖಿ ಸಮಾಜಮುಖಿ ಕವಿತೆಗಳು ಹೆಚ್ಚು ಬರಲಿ ಜೊತೆಗೆ ಕನ್ನಡ ಸಾಹಿತ್ಯ ಬೆಳೆಯಲಿ‌ ಎಂಬುದೇ ನನ್ನ ಆಶಯ .

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

16 ನವೆಂಬರ್ 2017

ಹನಿಗವನಗಳು (ಪ್ರತಿಬಿಂಬ)

ಹನಿಗವನಗಳು
*೧*

*ಪ್ರಶ್ನೆ*

ನಿರ್ದೇಶಕರ ಬಳಿ ಹೇಳಿದೆ ನಟನೆಯಲ್ಲಿ
ನನಗೆ ಆಸೆ ತುಂಬಾ
ಅವರು ಕೇಳಿದರು ಕನ್ನಡಿಯಲಿ ನೋಡಿದೆಯಾ
ನಿನ್ನ ಪ್ರತಿಬಿಂಬ ?

*೨*

*ಪರಿಣಾಮ*

ನನ್ನವಳು ನೋಡುತ್ತಿದ್ದರೆ ನೋಡುತ್ತಲೇ
ಇರಬೇಕು ಅವಳ ಬಿಂಬ
ಅದರ ಪರಿಣಾಮ ನಮಗೀಗ ಇಬ್ಬರು
ಮಕ್ಕಳು ನಮ್ಮ ಪ್ರತಿಬಿಂಬ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ನವೆಂಬರ್ 2017

ಗಜ಼ಲ್ ೮(ಅರಿಯದಾದೆ)

*ಗಜಲ್೮*

ಒಲವ ಗೆಳತಿಯ ನಿಜ ಒಲವನು ಅರಿಯದಾದೆ |
ಚೆಲುವ ಪ್ರೇಯಸಿಯ ಮನವನು ಅರಿಯದಾದೆ |

ಸಹಾಯ ಬೇಡುವ ನೆಪದಿ ಬಂದು ಸಹವಾಸ ಬಯಸಿ|
ಸಹಚರ್ಯ ಬೇಡಿದ ನಿನ್ನ ಒಲುಮೆಯನು  ಅರಿಯದಾದೆ |


ನನ್ನ ಬಾಳ ಹಸನಾಗಿಸಲು ಬರುವನೆಂದು ಹೇಳಿದ|
ನಿನ್ನ ಕಣ್ಣುಗಳ ಪ್ರೀತಿಯ ಭಾಷೆಯನು ಅರಿಯದಾದೆ |

ಹಸನ್ಮುಖ ತೋರಿ ಆಂತರ್ಯ ತೋರ್ಪಡಿಸುವ|
ಮುಖಾರವಿಂದದ ಉತ್ಕಟ ಬಯಕೆಯನು ಅರಿಯದಾದೆ|

ಆಂಗಿಕ ಭಾಷೆಯ ಮೂಲಕ ಸೀಜೀವಿಯೊಂದಿಗೆ ಸಂಗಮವಾಗಲು|
ಬಯಸಿದ ನಿನ್ನ ಅಂತರಾತ್ಮವನು ಅರಿಯದಾದೆ |

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಅಲೆಮಾರಿ) ಬಹುಮಾನ ಪಡೆದ ಹನಿಗವನಗಳು

*೧*

*ಚಿನ್ನ*

ನನ್ನ" ಚಿನ್ನ' ಸಿಗುವ ಮುನ್ನ ನಾನು
ಅಲೆಮಾರಿ
ಅವಳು ಸಿಕ್ಕ ಮೇಲೆ ಕೊಡಿಸಲೇಬೇಕು
ಚಿನ್ನ ಮನೆ ಮಠ ಮಾರಿ

*೨*
*ನಿರಂತರ*

ಉದರ ನಿಮಿತ್ತ ಬಹುಕೃತ ವೇಷ 
ಎದುರಿಸಬೇಕು ಹಲ ಸನ್ನಿವೇಶ
ಮುಖದ ಮೇಲೆ ಬಣ್ಣಗಳ ಚಿತ್ತಾರ
ಪ್ರತಿದಿನ ಈ ಬದುಕು ನಿರಂತರ
ಚಾಚಿಹೆನು ನಾಲಿಗೆಯ ಉದ್ದ
ನಾಳೆ ಮತ್ತೊಂದು ವೇಷಕೆ ಸಿದ್ದ



*೩*

*ಮುತ್ತು*

ಅಲೆಮಾರಿಗಳ ಜೀವನವೇ ಉತ್ತಮ
ಇಂದು ಈ ಊರು ನಾಳೆ ಮತ್ತೊಂದು
ನನ್ನದು ಅದೇ ಮನೆ ಅದೇ ಮುತ್ತು
ನನ್ನವಳು ಒಪ್ಪುವುದಿಲ್ಲ ಬೇರೆ
ಊರಗೆಳತಿಯ  ಮುತ್ತೊಂದು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*