25 ಅಕ್ಟೋಬರ್ 2017

ಓ ಬಾಲ್ಯವೇ ಮತ್ತೆ ಬರಬಾರದೆ (ಲೇಖನ)

ಲೇಖನ*
*ಓ ಬಾಲ್ಯವೇ ಮತ್ತೆ ಬರಬಾರದೆ ?*

ಈ ಸಂಜೆ ಯಾಕಾಗಿದೆ ನೀನಿಲ್ಲದೆ ....ಎಂಬ ಹಾಡು ಕೇಳಿದ ಕೂಡಲೆ ಮನವು ನನ್ನ ಬಾಲ್ಯ ಕ್ಕೆ ಜಾರಿತು
ನಮ್ಮ ಹಳ್ಳಿಯಲ್ಲಿ ಸಂಜೆಯನ್ನು ಸಂಭ್ರಮಿಸುತ್ತಿದ್ದೆವು .ದನ ಕರುಗಳ ಆಗಮನ .ಕುರಿಮರಿಗಳ ಬ್ಯಾ..ಸದ್ದು, ಹಸು ಎಮ್ಮೆಗಳ ಹಾಲು ಕರೆವುದು.ಮನೆಯಂಗಳ ಗುಡಿಸಿ ಸ್ವಚ್ಛ ಮಾಡುವುದು, ನೀರು ತರುವುದು ಈಗೆ ಸಂಜೆಯ ನಮ್ಮ ಸಂಭ್ರಮ ವರ್ಣಿಸಲಸದಳ .
ಸೂರ್ಯ ನೆತ್ತಿಯಿಂದ ಕೊಂಚ ಓರೆಯಾದರೆ ನಮ್ಮ ಕೆಲಸಗಳ ಕಾರ್ಯ ಆರಂಭ ಬೀದಿಯಲ್ಲಿ ಬಿದ್ದ ದನಕರುಗಳ ಸಗಣಿ ತಂದು ನಮ್ಮ ತಿಪ್ಪೆಗಳಿಗೆ ಹಾಕಲು ಗೆಳೆಯರ ಜೊತೆ ಸ್ವಲ್ಪ ದೂರ ಸಾಗಿ ಬರುವಾಗ ತೀಟೇ ಸೊಪ್ಪು ಪರಸ್ಪರ ತೀಡಿ ಪ್ರತಿಯೊಬ್ಬರೂ ಸರ್ವಾಂಗ ಕೆರೆದುಕೊಂಡು ಬರುವ ಪಾಡು ನೋಡಿ ಊರವರು ಬಿದ್ದು ಬಿದ್ದು ನಗುತ್ತಿದ್ದರು  .
ಮನೆಗೆ ತಲುಪಿ  ಬಂದ್ರೆ ಗಿಡದಿಂದ.ಮತ್ತು ಅಡಿಕೆ ಎಲೆಗಳಿಂದ ಮಾಡಿದ ಪರಕೆಗಳಿಂದ ನಮ್ಮ ಮನೆಯಂಗಳ ಸ್ವಚ್ಛ ಮಾಡಿ  ನೀರು ತರಲು ಒಂದು ಕಿಲೋಮೀಟರ್ ದೂರದ ಗೌಡರ ತೋಟದ ಬಾವಿಗೆ ಹೋಗಿ ಬಾವಿಗಿಳಿದು ಪೈಪೋಟಿ ಮೇಲೆ  ಅಡ್ಡೆಗಳನ್ನು ಬಳಸಿ ನೀರು ತಂದು ನಮ್ಮ ಗುಡಾಣಗಳನ್ನು ತುಂಬಿಸಿ ಅವ್ಯಕ್ತ ಆನಂದ ಅನುಭವಿಸುತ್ತಿದ್ದೆವು .ಈ ವೇಳೆಗಾಗಲೇ ಗುಡ್ಡಕ್ಕೆ ಮೇಯಲು ಹೋದ ದನಕರು. ಕುರಿ ಮೇಕೆ .ಸಾಲುಗಟ್ಟಿ ಊರಕಡೆ ಗೋಧೂಳಿ ಸಮಯದಲ್ಲಿ ದೂಳೆಬ್ಬಿಸಿ ಬರುವ ದೃಶ್ಯ ನಯನಮನೋಹರ .ಕುರಿಕಾಯುವವರು ಅವರ ಕೈಯಲ್ಲಿ ತಲೆ ಕೆಳೆಗಾಗಿಹಿಡಿದ ಆಗ ತಾನೆ ಜನಿಸಿದ ಕುರಿಮರಿ ನೋಡಿ ಖುಷಿ ಪಡುತ್ತಿದ್ದೆವು.
ಈ ವೇಳೆಗಾಗಾಲೇ ಅಮ್ಮ ಹೊಲದಿಂದ ಬಂದು  ದೀಪ ಬೆಳಗಿಸಿ   ಅಡುಗೆ ತಯಾರಿಸಿ ನಮಗೆ ಸಂಜೆ ಆರುವರೆ ಏಳು ಗಂಟೆಗೆ ಊಟ ಬಡಿಸಿದರೆ ನಮಗೆ ಹಾಸಿಗೆ ಹಾಸಿ ಮಲಗುವ ಸಿದ್ದತೆ ಆಗ ಕರೆಂಟ್ ಇಲ್ಲ ಸೀರಿಯಲ್ ಇಲ್ಲ ಬೇಗ ಮಲಗಿ ಬೇಗ ಏಳುವ ತತ್ವ ಪಾಲನೆ .
ಈಗಿನ ಯಾಂತ್ರಿಕ ವಾಕ್, ಜಾಗ್ ಆರೋಗ್ಯ ಕಾಳಜಿಯನ್ನು ಅಂದು ನಮಗರಿವಿಲ್ಲದೆ ಪಾಲಿಸಿದ್ದೆವು ಅದಕ್ಕೆ ಹೇಳುವೆ ಓ ಬಾಲ್ಯವೇ ಮತ್ತೊಮ್ಮೆ ಬರಬಾರದೆ ನಾನು ಕಳೆದ ಸಂಜೆಯ ಕೊಡಬಾರದೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜಲ್ (ಕಲಿಗಾಲ)



*ಗಜಲ್*


ಡೋಂಗಿಗಳ ಬಾಬಾ, ದೇವರೆಂಬರು ಇದು ಕಲಿಗಾಲ/
ದೇವರ ಹೆಸರಲ್ಲಿ ಕಚ್ಚಾಡಿ ಕೊನೆಗೆ ದೇವರಿಲ್ಲವೆನ್ನುವರು ಇದು ಕಲಿಗಾಲ/


ಅಮ್ಮನಾಗುವ ಅಮಿತ ಆನಂದ ಅನುಭವಿಸದೇ/ ಬಾಡಿಗೆ ತಾಯ್ತನಕ್ಕೆ ಶರಣಾದ ಮಾತೆಯರು ಹೇಳುವರು  ಇದು ಕಲಿಗಾಲ /


ಮಕ್ಕಳನು ಬಾಲ್ಯದಲ್ಲೇ ಮನೆಬಿಟ್ಟು ಓದಿಸಿದ್ದಕ್ಜೆ
ಸೇಡೇನೋ ಎಂಬಂತೆ /ಪೋಷಕರ ಇಳಿಗಾಲದಲ್ಲಿ
ಅನಾಥಾಶ್ರಮ ಸೇರಿಸಿ ಹೇಳುವರು  ಇದು ಕಲಿಗಾಲ /


ಒಬ್ಬರ ತುಳಿದು ಮತ್ತೊಬ್ಬ ಮೇಲೇರಿ ಅನ್ಯಾಯದಿ
ಅಕ್ರಮವೆಸಗಿ  /ಮೆರೆವ ನಾಯಕರು  ದರ್ಪದಿಂದ ಹೇಳುವರು ಇದು ಕಲಿಗಾಲ


ನರರು ಹಾದಿಯೊಳಗೆ ಕಚ್ಚಾಡಿ ಕೊಚ್ಚಿಹಾಕುತಿಹರು/
ಅಧರ್ಮದಿ ನಡೆದು ಧರ್ಮದ ಬುಡಮೇಲುಮಾಡಿ  ಹೇಳುವರು ಇದು ಕಲಿಗಾಲ /


ಪ್ರಕೃತಿಯ ಮೇಲೆ ವಿಕೃತಿ ತೋರಿ ವಿಚಿತ್ರವಾಗಿ ವರ್ತಿಸಿ/
ಅನಿಷ್ಟಕ್ಕೆಲ್ಲಾ ವೆಂಕಟೇಶ್ವರನೇ ಕಾರಣವೆಂದು ಹೇಳುವರು ಇದು ಕಲಿಗಾಲ /

ಸಿ ಜಿ ವೆಂಕಟೇಶ್ವರ
ಗೌರಿಬಿದನೂರು

23 ಅಕ್ಟೋಬರ್ 2017

ಮೋಡಿ (ಹನಿಗವನಗಳು)

ಹನಿಗಳ ವಿಮರ್ಶೆ

*೧*
*ಮೋಡಿ*

ನಾನೂ ನೀನೂ ಜೋಡಿ
ಮುಗಿಯದು ನಮ್ಮ ಮೋಡಿ
ಹಿಡಿದೆವು ಕೈ ಅಂದು
ಬಿಡುವುದಿಲ್ಲ ಎಂದು
ವಯಸ್ಸಾಗಿದೆ ನಮ್ಮ ದೇಹಕ್ಕೆ
ವಯಸ್ಸಾಗೋಲ್ಲ ಆತ್ಮಗಳಿಗೆ


*೨*

ಬಿಲ್ಲು

ನನ್ನವಳು ನಡೆದಾಡುವ
ಕಾಮನಬಿಲ್ಲು
ಶಾಪಿಂಗ್ ಹೋದರೆ
ಕಟ್ಟಲಾಗದು  ಬಿಲ್ಲು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಭರವಸೆ (ಕವನ ೧೦೦ರ ಸಂಭ್ರಮ)

*ಭರವಸೆ*

ಮೋಡವಿಲ್ಲದಿದ್ದರೂ ಉತ್ತು ಬಿತ್ತಿ
ಭರ್ಜರಿ ಬೆಳೆ ತೆಗೆವೆನೆಂಬ ರೈತನಿಗೆ
ಮಳೆ ಬಂದೇ ಬರುವುದೆಂಬ ಭರವಸೆ

ಆಗಸದಲ್ಲಿ ತೂರಿದ ಮಗುವು ಕಿಲ
ಕಿಲ ನಗುವುದು ನನ್ನ ತಾಯಿ ನನ್ನ
ಕೈಬಿಡಲಾರಳೆಂಬ ಭರವಸೆ

ಕಲಿಕೆಯಲ್ಲಿ ಹಿಂದಿದ್ದರೂ ಕಲಿಯಲು
ಆಸಕ್ತಿ ಇಲ್ಲದಿದ್ದರೂ ನನ್ನ ಮಕ್ಕಳು
ಸಾಧಿಸುವರೆಂಬುದು ತಾಯಿ ಭರವಸೆ

ಸಾಕಿ ಸಲುಹಿದ ಮಕ್ಕಳು ನಮ್ಮ
ಇಳಿಗಾಲಗಲಿ ಊರುಗೋಲಾಗುವರು
ಎಂಬುದು ಪೋಷಕರ ಭರವಸೆ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

22 ಅಕ್ಟೋಬರ್ 2017

ಸುಂದರ (ಚಿತ್ರ ಕವನ)

*ಸುಂದರ*

ನನ್ನ ನಗುವಿನ ಗುಟ್ಟು
ಈ ನನ್ನ ಪುಟ್ಟು
ನೀ ನನ್ನ ಉಸಿರು
ನೀನಿದ್ದರೆ ಹಸಿರು
ನೀನು ನಗಲು
ನನ್ನ ನಗು ಜಗದಗಲ
ನೀನೀಗ ಬರಿ ಮೈ ಪೋರ
ಆದರೂ ನೋಡಲು ಸುಂದರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*