11 ಅಕ್ಟೋಬರ್ 2017

ಮೋಡಬಿತ್ತನೆ (ಹನಿ)

            *ಸಮಯಸಾಧಕತನ*

ಕರ್ನಾಟಕದ ಮಳೆಗೆ ಕಾರಣ
ನಮ್ಮ ಮೋಡ ಬಿತ್ತನೆ!
ನಾವಂತೂ ಕಾರಣವಲ್ಲ ರಸ್ತೆ
ಗುಂಡಿ ಬಿತ್ತನೆಗೆ !

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜಲ್

             

         *ಗಜಲ್*


ಪ್ರೀತಿ ಪ್ರೇಮದ ನಾಟಕವನ್ನು ನಂಬಿದ್ದು ನನ್ನ ತಪ್ಪೆ?
ಗೋಮುಖವ್ಯಾಘ್ರತನವನ್ನು ಗುರುತಿಸದಿದ್ದು ನನ್ನ ತಪ್ಪೆ?


ನಿನ್ನ ಕಷ್ಟಗಳಲಿ ಹೆಗಲು ಕೊಟ್ಟು ಇಷ್ಟ ಪಟ್ಟ ನಿನ್ನ
ಕಷ್ಟಸುಖದಲಿ ಜೊತೆಗಿರಲು ಆಣೆ ಮಾಡಿದ್ದು ನನ್ನ ತಪ್ಪೆ?


ಜೀವನವೆಲ್ಲಾ ಪ್ರೀತಿಸಿ ಒಲವ ಧಾರೆಯೆರೆದು
ಸಂಸಾರ ಸಾಗಿಸಲು ಕನಸ ಕಂಡಿದ್ದು ನನ್ನ ತಪ್ಪೆ?


ಸೋಲರಿಯದ ನನಗೆ ಸೋಲ ರುಚಿ ತೋರಿಸಿದೆ
ಜಾಲಿಯ ಮರದ ನೆರಳನ್ನು ನಂಬಿದ್ದು ನನ್ನ ತಪ್ಪೆ?


ವಂಚಕಿಯೆಂದು ತಿಳಿದು ನನ್ನ ಬಳಿ ಸಾರಲು ನಿನ್ನ ಕಳುಹಿಸಿ ಕೊಟ್ಟ ವೆಂಕಣ್ಣನು ಮಾಡಿದ್ದು ನನ್ನ ತಪ್ಪೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ಅಕ್ಟೋಬರ್ 2017

ನಗು(ಚುಟುಕು ಗಳು)

              *೧*

*ಮಗು*

ಮರೆತು ಬಿಡಿ  ಕೆಟ್ಟಹಗೆ
ಬೀರಿ ಒಂದು ಪುಟ್ಟನಗೆ
ಮೂಡಲಿ ಮುಖದಲಿ ನಗು
ನಾವಾಗೋಣ ಮಗು

*೨*

*ನಗುತಿರಬೇಕು*

ಬಿಟ್ಟು ಬಿಡಿ ಮನದ ಬೇಗುದಿ
ಕೊಡಿ ನಗುವಿನ ಔಷಧಿ
ಆತಂಕ ನಮಗೆ ಏಕೆ ಬೇಕು?
ಸದಾಕಾಲವೂ ನಗುತಿರಬೇಕು

*೩*

*ನೊಗ ಮತ್ತು ನಗು*

ಸಂಸಾರದ  ಬಂಡಿಯ ನಾವಿಬ್ಬರು
ಎಳೆಯಲು ನೊಗವಿರಬೇಕು
ಸಂಸ್ಕಾರದ ಜೀವನದಿ ನಮ್ಮೆಲ್ಲರ
ಸೆಳೆಯಲು ನಗುವಿರಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ವಿಧುರಾಶ್ವತ್ಥ (ಲೇಖನ)ವಿಶ್ವವಾಣಿ ದೀಪಾವಳಿ ವಿಶೇಷಾಂಕ 2017 ರಲ್ಲಿ ಪ್ರಕಟಿತ ಲೇಖನ


                 





            ನೋಡಲೇ ಬೇಕಾದ ಕರ್ನಾಟಕದ ಪ್ರವಾಸಿ ತಾಣ
ಗೌರಿಬಿದನೂರು ಬಳಿಯ  ವಿಧುರಾಶ್ವತ್ಥ.
ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯುವ ವಿದುರಾಶ್ವತ್ಥ ಒಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದೆ.
ಬೆಂಗಳೂರಿನಿಂದ 80 ಕಿಮೀ ದೂರವಿರುವ ಈ ಪ್ರದೇಶ ಭಾರತದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
*ಸ್ಥಳ ಮಹಿಮೆ*
ಆಸ್ಥಿಕರ ಪಾಲಿಗೆ ವಿದುರಾಶ್ವತ್ಥ ಒಂದು ಪ್ರಮುಖವಾದ ಯಾತ್ರಾ ಸ್ಥಳವಾಗಿದೆ. ಪ್ರತೀತಿಯ ಪ್ರಕಾರ ಹಿಂದೆ ಮಹಾಭಾರತದ ಕಾಲದಲ್ಲಿ *ವಿಧುರ* ಬಂದು ಇಲ್ಲಿ ಅಶ್ವಥ ಮರ ನೆಟ್ಟ ಪರಿಣಾಮ ಅದರ ಕೆಳಗೆ ಅಶ್ವತ್ಥ ನಾರಾಯಣ ಸ್ವಾಮಿ ವಿಗ್ರಹ ಪ್ರತಿಷ್ಟಾಪಿಸಿ ಇಂದಿಗೂ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ವರ್ಷಕ್ಕೊಮ್ಮೆ  ಏಪ್ರಿಲ್ ನಲ್ಲಿ ನಡೆಯುವ ಜಾತ್ರೆಗೆ
ಹೊರರಾಜ್ಯಗಳ ಭಕ್ತರು ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಇಲ್ಲಿನ ಮತ್ತೊಂದು ಆಕರ್ಷಣೆ ಸಾವಿರಾರು ನಾಗರ ವಿಗ್ರಹ ಗಳು ರಾಹು ಕೇತು ಶಾಂತಿಗಾಗಿ ರಾಜ್ಯದ ಮತ್ತು ಹೊರರಾಜ್ಯ ಭಕ್ತಾದಿಗಳು ಬಂದು ತಮ್ಮ ಶಕ್ತಾನುಸಾರ ನಾಗರ ವಿಗ್ರಹ ಪ್ರತಿಷ್ಟಾಪನೆ ಮಾಡುತ್ತಿದ್ದಾರೆ .ಇಲ್ಲಿ ಹಲವಾರು ಚಲನಚಿತ್ರದ ಚಿತ್ರೀಕರಣ ನಡೆದಿದೆ
*ಐತಿಹಾಸಿಕ ಹಿನ್ನೆಲೆ*
ದೇಶಾದ್ಯಂತ ಬ್ರಿಟೀಷರ ವಿರುದ್ಧ ನಡೆದ ಸ್ವಾತಂತ್ರ್ಯ ಸಮರದ ಕಾಲದಲ್ಲಿ 1938 ರಲ್ಲಿ ಕರ್ನಾಟಕದ ಶಿವಪುರ ಧ್ವಜಸತ್ಯಾಗ್ರಹ ಯಶಸ್ವಿಯಾಗಿ ನಡೆಯಿತು. ಇದರಿಂದಾಗಿ ಪ್ರೇರೇಪಣೆ ಪಡೆದು ಗೌರಿಬಿದನೂರು ಸಮೀಪದ ವಿದುರಾಶ್ವತ್ಥದಲ್ಲಿ ಏಪ್ರಿಲ್25 1938 ರಂದು ಧ್ವಜದ ಸತ್ಯಾಗ್ರಹ ಹಮ್ಮಿಕೊಂಡು ಬ್ರಿಟಿಷ್ ವಿರುದ್ಧದ ಹೋರಾಟ ಬಿರುಸುಗೊಳಿಸಿದರು ಇದರಿಂದ ಕೋಪಗೊಂಡ ಬ್ರಿಟಿಷ್ ಅಧಿಕಾರಿಗಳು ಗೋಲಿಬಾರ್ ಮಾಡಿದ ಪರಿಣಾಮ ಕೆ.ಸಿ.ನಾಗಯ್ಯರೆಡ್ಡಿ.ಎನ್.ಸಿ‌.ತಿಮ್ಮಾರೆಡ್ಡಿ ಸೇರಿ ಹಲವರು ಹುತಾತ್ಮರಾದರು ಅವರ ಸ್ಮರಣಾರ್ಥ ಸತ್ಯಾಗ್ರಹ ಸ್ಮಾರಕ ನಿರ್ಮಿಸಿದ್ದಾರೆ .
ಅದೇ ಸ್ಥಳಗಳಲ್ಲಿ ಒಂದು ಉದ್ಯಾನವನ ನಿರ್ಮಿಸಿ ಅಲ್ಲಿ ಭಾರತದ ಸ್ವಾತಂತ್ರ್ಯ ಸಮರ ಸಾರುವ ಚಿತ್ರ ಕಲಾ ಪ್ರದರ್ಶನ ಗ್ಯಾಲರಿ ಎಲ್ಲರೂ ನೋಡಲೆ ಬೇಕು.
ಇದೇ ಪ್ರಾಂಗಣದಲ್ಲಿ ವಿದುರಾಶ್ವತ್ತ ಸ್ವತಂತ್ರ ಸಂಗ್ರಾಮ ಬಿಂಬಿಸುವ ದೃಕ್ ಶ್ರವಣ ಭವನ ನಿರ್ಮಿಸಿ ಅಲ್ಲಿ ಪ್ರತಿ ದಿನ ಪ್ರದರ್ಶನ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಧಾರ್ಮಿಕ ಆಸಕ್ತಿ ಇರುವವರು ವಿದುರಾಶ್ವತ್ಥಸ್ವಾಮಿ ದರ್ಶನ ಪಡೆಯಬಹುದು. ಹಾಗೂ ದೇಶ ಭಕ್ತಿ ಮತ್ತು ನಮ್ಮ ಪರಂಪರೆಯ ಬಗ್ಗೆ ತಿಳಿಯುವ ವರಿಗೆ ಸ್ವಾತಂತ್ರ್ಯ ಸ್ವಾರಕ ಕೈ ಬೀಸಿ ಕರೆಯುತ್ತದೆ .ಇನ್ನೇಕೆ ತಡ ಇಂದೇ ವಿಧುರಾಶ್ವತ್ತ ನೋಡಲು ಪ್ಲಾನ್ ಮಾಡಿ
ತಲುಪಲು ಮಾರ್ಗ:
ಬೆಂಗಳೂರಿನಿಂದ ಬಸ್ ಸೌಲಭ್ಯವಿದೆ. ಬೆಂಗಳೂರು ಹಿಂದೂಪುರ ಮಾರ್ಗದ ಎಲ್ಲಾ ಬಸ್ ಇಲ್ಲಿ ನಿಲಗಡೆ ಇದೆ ದೂರ 76 ಕಿಮಿ
ರೈಲು ಪ್ರಯಾಣ ಮಾಡುವವರು ಬೆಂಗಳೂರು. ಹಿಂದೂಪುರ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿ ವಿಧುರಾಶ್ವತ್ಥ ಬಳಿ ಇಳಿದು ಒಂದು ಕಿ.ಮಿ ಆಟೋದಲ್ಲಿ ತೆರಳಬಹುದು
ಸಿ.ಜಿ.ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಎಸ್ ಎಸ್. ಇ.ಎ.ಸರ್ಕಾರಿ ಪ್ರೌಢಶಾಲೆ
ಗೌರಿಬಿದನೂರು.
ಚಿಕ್ಕಬಳ್ಳಾಪುರ ಜಿಲ್ಲಾ

09 ಅಕ್ಟೋಬರ್ 2017

ಸರಿಯೇ? (ಕವನ)

           

*ಸರಿಯೇ?*

ನಿನಗಾಗಿ
ಎಲ್ಲೆಲ್ಲೋ ಹುಡುಕಾಡಿದೆ
ತಡಕಾಡಿದೆ
ಮನಚಡಪಡಿಸಿದೆ ./


ನೀನು ನನ್ನ ಭಾವನೆಗಳಿಗೆ
ಅಕ್ಷರವಾಗಲು ನೆರವಾದವಳು
ನೀನು ನನ್ನ ಜೀವನದ ಎಲ್ಲಾ
ಪರೀಕ್ಷೆಯಲ್ಲಿ ಕೈ ಹಿಡಿದವಳು /


ಸದಾ ಕಾಲ ನನ್ನ ಎದೆ ಏರಿದವಳು
ಕೈ ಕೈ ಹಿಡಿದು ನಡೆದವಳು
ನನ್ನ ಸಂಬಂಧಗಳನ್ನು ಬೆಸೆದವಳು
ನನ್ನ ಚಿಂತನೆಗೆ  ಮಾದ್ಯಮವಾದವಳು /


ಹೇಗಿರುವೆಯೋ?  ನಾನರಿಯೇ
ನನ್ನ ನೀ ಬಿಟ್ಟಿರುವುದು ಸರಿಯೇ?
ಪ್ರತೀ ಕ್ಷಣ ಹುಡುಕುತ್ತಿರುವೆ ನಿನ್ನೇ
ಓ ನನ್ನ ಆತ್ಮೀಯ ಪೆನ್ನೇ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*