05 ಅಕ್ಟೋಬರ್ 2017

ಗಜಲ್( ಬೆಳಕು ನೀಡು ) ಮಾತು ಕತೆ ಪತ್ರಿಕೆಯಲ್ಲಿ ಪ್ರಕಟಿತ ಗಜಲ್

   



ಗಜಲ್*,ಬೆಳಕು ನೀಡು


ಕತ್ತಲಲಿಹುದು ಜಗ ಬೆಳಗಲು  ಬೆಳಕು ನೀಡು
ನಮ್ಮೆದೆಯ ಹೃದಯಗಳು ನಲಿಯಲು ಬೆಳಕು ನೀಡು /

ಲೋಕದಲಿ ಶೋಕ ಹೆಚ್ಚಾಗುತಿದೆ ನೋಡು/
ಶೋಕತಪ್ತ ಮನಗಳು ಕುಣಿಯಲು  ಬೆಳಕು ನೀಡು /

ಜನಮನಗಳಲಿ ಪ್ರೀತಿಯಿಲ್ಲ ನೀತಿ ನಿಯಮಗಳ ಭಯವಿಲ್ಲ
ಸಕಲರೂ   ನೀತಿವಂತರಾಗಲು ಬೆಳಕು‌ ನೀಡು /

ಹಸುಳೆಗಳ ಲೆಕ್ಕಿಸದೇ ಅತ್ಯಾಚಾರ ಮಾಡುತಿಹರು/
ಕೆಟ್ಟವರ, ಕಾಮಾಂಧರ ಮನ ಕರಗಲು  ಬೆಳಕು ನೀಡು/

ಧರ್ಮದ ಹೆಸರಿನಲಿ ಅಧರ್ಮದ ಆಟಗಳು
ದೇಶ ಒಡೆವ ದುಷ್ಟಶಕ್ತಿಅಡಗಲು  ಬೆಳಕು ನೀಡು /

ಭ್ರಷ್ಟಾಚಾರವ ಬೆಳೆಸಿ ರಾಷ್ಟ್ರ ಮಾರುವ ಹಂತಕ್ಕಿಳಿದಿಹರು
ಕೆಟ್ಟ ಶಕ್ತಿಗಳ  ಹುಟ್ಟಡಗಿಸಲು ಬೆಳಕು ನೀಡು /

ಪ್ರಾಣಿ ಪಕ್ಷಿಗಳಿಗೆ ದಯೆಯಿಲ್ಲ ಹಿಂಸೆಗೆ ಕೊನೆಯಿಲ್ಲ/
 ಶ್ರೀ ದೇವಿತನಯನೇ ಅಹಿಂಸೆಪಾಲಿಸಲು  ಬೆಳಕು ನೀಡು/

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

04 ಅಕ್ಟೋಬರ್ 2017

ದುಃಖ ನನಗಿರಲಿ (ಚಿತ್ರ ಕವನ)

           
  *ದುಃಖ ನನಗಿರಲಿ*


ನೀ ನನಗೆ ಭಾರವಲ್ಲ ಮಗಳೆ
ನಾನಿರುವುದು ಇಳೆಯ ಮೇಲೆ

ಬಿಸಿಲು ಮಳೆ ಚಳಿ ಇರಲಿ
ನಿನ್ನ ಕಾಪಾಡದೆ ಹೇಗಿರಲಿ
ನನಗಾವ ಕಷ್ಟಗಳ ಪರಿವಿಲ್ಲ
ನನ್ನೊಡನೆ ನೀನಿರುವೆಯಲ್ಲ

ನಿನ್ನ ಸವಿ ಮಾತೇ ಪ್ರೇರಣೆ
ನೀನಿದ್ದರೆ ಬರುವುದು ಸಹನೆ
ನೀ ನನ್ನ ಬಲವಾದ ಕನಸು
ನಿನ್ನ ಪ್ರತಿ ಮಾತು ಸೊಗಸು

ನನ್ನ ಹಿತ ಬೇಕಿಲ್ಲ
ನಿನ್ನ ಸುಖ ಮರೆತಿಲ್ಲ
ಜಗದ ದುಃಖ ನನಗಿರಲಿ
ಇರುವ ಸುಖವೆಲ್ಲಾ ನಿನಗಿರಲಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

03 ಅಕ್ಟೋಬರ್ 2017

ಗಾಡ್ ಪಾದರ್ (ಹನಿಗವನ)

           *ಗಾಡ್ ಪಾದರ್*

ನಾಯಿಯಂತೆ ನಿಯತ್ತಿನಿಂದ
ಇದ್ದರೆ ನಮಗೆ ಸಿಗಬಹುದು
ಗಾಡ್ ಪಾದರ್
ನಾಯಿಯನ್ನು ನಿಯತ್ತಿನಿಂದ
ಸಾಕಿ ಹಾರೈಕೆ ಮಾಡಿದರೆ ನಾವೇ
ಡಾಗ್ ಪಾದರ್

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಲ್ಲೆ (ಹನಿಗವನ)

                ನಲ್ಲೆ (ಹನಿಗವನ)
                 
*ಎಲ್ಲೆ*

ನಲ್ಲೆ
ಮೊದಲು ನೀನಾಗಿದ್ದೆ
ಮಲ್ಲೆ (ಹೂ)
ನಂತರ ರೂಪಾಂತರ
ಕಬ್ಬಿನ ಜಲ್ಲೆ
ಈಗ ಮಿತಿಮೀರಿದೆ ನಿನ್ನ
ಸುತ್ತಳತೆಯ ಎಲ್ಲೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕನ್ನಡ (ಹನಿಗವನಗಳು)

              *೧*
*ನಮ್ಮಮ್ಮ ಕನ್ನಡ*

ಹೇ ತಮ್ಮ ಇಲ್ನೊಡ
ಮಾತಾಡೊ ನೀ ಕನ್ನಡ
ಯಾಕೋ  ಎನ್ನಡ ಎಕ್ಡಡ
ಹೇಳೋ ನಮ್ಮಮ್ಮ ಕನ್ನಡ

*೨*

*ಕನ್ನಡ ಮಾತಾಡಿ*
ಗಾಂಚಾಲಿ ಬಿಡಿ
ಕನ್ನಡ ಮಾತಾಡಿ
ಮೊದಲು ನಮ್ಮ ಕನ್ನಡಮ್ಮನಿಗೆ
ರೇಷ್ಮೆ ಸೀರೆ
ಕನ್ನಡ ಮಾತಾಡಲು ಕಲಿಯಿರಿ
ಚಿತ್ರ ರಂಗದ ನೀರೆಯರೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*