09 ಸೆಪ್ಟೆಂಬರ್ 2025

ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.


 




ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.

ಸರ್ವಾಂಗಗಳೂ ಸುಸ್ಥಿತಿಯಲ್ಲಿದ್ದರೂ ಸೋಮಾರಿಗಳಾಗಿ ಕಾಲ ಹರಣ ಮಾಡುವ ಹಲವಾರು ಜನರ ನಡುವೆ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿಕೊಂಡು ಜೀವನ ಸಾಗಿಸುವ ವಿಶೇಷ ಚೇತನಗಳು ನಮ್ಮ ಮಧ್ಯ ಇರುವುದನ್ನು ಕಾಣುತ್ತೇವೆ.ಅಂತಹ ವಿಶೇಷ ಚೇತನ ಸಾಧಕರೊಬ್ಬರನ್ನು ಇಂದು ನಾನು ನಿಮಗೆ ಪರಿಚಯ ಮಾಡಿಕೊಡುವೆ.

ಹೆಸರು  ಪ್ರಕಾಶ್ ಆರ್ ಸಾಹಿತ್ಯ ವಲಯದಲ್ಲಿ ಅಮೃತ ಹಸ್ತ ಪ್ರಕಾಶ್ ಎಂದು ಗುರ್ತಿಸಿಕೊಂಡ ಇವರು ಕ್ರೀಡಾ ಕ್ಷೇತ್ರದಲ್ಲಿ ದಿವ್ಯಾಂಗ  ಸ್ಪೋರ್ಟ್ಸ್ ಪ್ರಕಾಶ್ ಎಂದು ಹೆಸರು ಮಾಡಿದ್ದಾರೆ.
ಬಾಲ್ಯದಲ್ಲಿ ಸಾಮಾನ್ಯ ಬಾಲಕನಾಗಿದ್ದ ಪ್ರಕಾಶ್ ಚುರುಕಿನ ಚಟುವಟಿಕೆಗಳಿಂದ ನೆರೆಹೊರೆಯವರ ಗಮನ ಸೆಳೆದಿದ್ದರು.ವಿಧಿಯ ಕ್ರೂರತೆಯು ಕೆಲವೊಮ್ಮೆ ನಮ್ಮ ಜೀವನದಲ್ಲಿ ಕೆಟ್ಟ ಘಳಿಗೆ ತಂದು ನಮ್ಮ ಆತ್ಮ ಶಕ್ತಿಗೆ ಸವಾಲಾಗಿ ನಿಲ್ಲುತ್ತದೆ. ಅಂತದೇ ಘಟನೆ ನಮ್ಮ ಪ್ರಕಾಶ್ ರವರ ಜೀವನದಲ್ಲೂ ಆಯಿತು. ಇದ್ದಕ್ಕಿದ್ದಂತೆ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡವು. ಪೋಷಕರು ಆಘಾತದಿಂದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದರೂ ಉಪಯೋಗವಾಗಲಿಲ್ಲ.ವೀಲ್ ಚೇರ್ ಏರಿ ಶಾಲೆಯಲ್ಲಿ ಕಲಿತ ಪ್ರಕಾಶ್ ರವರಿಗೆ ಮತ್ತೊಂದು ಆಘಾತ ಕಾದಿತ್ತು. ಕ್ರಮೇಣವಾಗಿ ಅವರ  ಕಿವಿಗಳು ತಮ್ಮ ಗ್ರಹಣ ಶಕ್ತಿಯನ್ನು ಕಳೆದುಕೊಂಡವು.ಎದೆಗುಂದದ ಅವರು ತಮ್ಮ ಪೋಷಕರ ಬೆಂಬಲದಿಂದ ವಿದ್ಯಾಭ್ಯಾಸ ಮುಂದುವರೆಸಿ ಗೌರಿಬಿದನೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯ ಮಾಡಲು ಶುರುಮಾಡುತ್ತಾರೆ.ಆಗಲೇ ಅವರು ನನಗೆ ಪರಿಚಯವಾಗಿದ್ದು.ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಿಂದ ನಮ್ಮ ಪರಿಚಯ ಸ್ನೇಹವಾಗಿ ಮಾರ್ಪಾಡಾಗಿ ಇಂದಿಗೂ ಮುಂದುವರೆದಿದೆ.





ಗೌರಿಬಿದನೂರಿನಿಂದ ಪ್ರಕಾಶ್ ತುಮಕೂರಿಗೆ ಬಂದರು.ನಾನೂ ಬಂದೆ.ಗೌರಿಬಿದನೂರಿನಲ್ಲಿ ವಿಶೇಷ ಚೇತನ ಪ್ರಕಾಶ್ ಶಿಕ್ಷಕ ಹಾಗೂ ಕವಿಯಾಗಿ ಗುರ್ತಿಸಿಕೊಂಡಿದ್ದರೆ ತುಮಕೂರಿಗೆ ಬಂದು ಓರ್ವ ದಿವ್ಯಾಂಗ ಕ್ರೀಡಾಪಟುವಾಗಿ,ಸಮಾಜ ಸೇವಕನಾಗಿ ಸಂಘಟಕನಾಗಿ ಹೊರಹೊಮ್ಮಿದ್ದಾರೆ.ಅವರ ಸಾಧನೆಗಳು ಇತರ ದಿವ್ಯಾಂಗರಿಗೆ ಪ್ರೇರಣೆಯಾಗಿವೆ.



ತುಮಕೂರು ಡಿಸ್ಟ್ರಿಕ್ಟ್  ದಿವ್ಯಾಂಗ ಸ್ಪೋರ್ಟ್ಸ್ ಅಸೋಸಿಯೇಷನ್
ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ 
ವಿದ್ಮಹಿ ವಿಕಲಚೇತನರ ಸೇವಾ ಟ್ರಸ್ಟ್  ಸಂಸ್ಥಾಪಕ  ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ವಿಶೇಷ ಚೇತನರಿಗೆ ಚೇತನರಾಗಿ ನಿಂತಿದ್ದಾರೆ.ತುಮಕುರು  ಜಿಲ್ಲೆಯಲ್ಲೇ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಆಡಿದ ಮೊದಲಿಗರಾಗಿ ಗುರ್ತಿಸಿಕೊಂಡ ಪ್ರಕಾಶ್
ಜಿಲ್ಲೆಯಲ್ಲಿ ದಿವ್ಯಾಂಗರ ಕ್ರೀಡೆಯನ್ನು ಪರಿಚಯಿಸಿ ಕತ್ತಲಲ್ಲಿರುವ ದಿವ್ಯಾಂಗರನ್ನು ಬೆಳಕಿಗೆ ತರಲು ತುಮಕೂರು ಜಿಲ್ಲಾ ದಿವ್ಯಾಂಗ  ಸ್ಪೋರ್ಟ್ಸ್ ಅಕಾಡೆಮಿಯನ್ನು  ತೆರೆದು 30 ಕ್ಕೂ ಹೆಚ್ಚು ದಿವ್ಯಾಂಗರಿಗೆ ಕ್ರೀಡಾ ತರಬೇತಿ ನೀಡಿ ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುವಂತೆ ಮಾರ್ಗದರ್ಶನ ನೀಡಿದ್ದಾರೆ. ಇವರ ನೇತೃತ್ವದಲ್ಲಿ
ಬೆಳಗಾವಿಯಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್  ವೀಲ್ ಚೇರ್ ಕ್ರಿಕೆಟ್ ಹಾಗೂ
ಭದ್ರಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್‌ ಟೂರ್ನಮೆಂಟ್ಗಳಲ್ಲಿ
ತುಮಕೂರು ಜಿಲ್ಲೆಗೆ  ದ್ವಿತೀಯ ಸ್ಥಾನ ಲಭಿಸಿದೆ






ಇದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಿವ್ಯಾಂಗರ ವೀಲ್ ಚೇರ್ ಪ್ಯಾರ ಬ್ಯಾಡ್ಮಿಟನ್ ನಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಮಟ್ಟದ ದಿವ್ಯಾಂಗರ ಕ್ರೀಡೆಗಳನ್ನು ನಡೆಸುವ ಮೂಲಕ ದಿವ್ಯಾಂಗರಲ್ಲಿ ಆತ್ಮಸ್ಪೈರ್ಯ ತುಂಬುತ್ತಿದ್ದಾರೆ ಇವರ ಪರಿಶ್ರಮದಿಂದ
ತುಮಕುರು ಜಿಲ್ಲೆಯಿಂದ  ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ  8 ಜನ ಆಯ್ಕೆ ಆಯ್ಕೆಯಾಗಿದ್ದಾರೆ.
ದಿವ್ಯಾಂಗರ ಕ್ರೀಡಾ ಪಟುಗಳಿಗೆ ಅಗತ್ಯವಾದ  ಶೂಸ್ ಮತ್ತು ಟೀ ಶರ್ಟ್ ಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ ಮುಂಬೈನಲ್ಲಿ ನಡೆದ ನ್ಯಾಷನಲ್ ವೀಲ್ ಚೆರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು   ಪ್ರತಿನಿಧಿಸಿದ್ದಾರೆ.ತುಮಕೂರು ಡಿಸ್ಟ್ರಿಕ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯ ಮೂಲಕ ವಿಕಲಚೇತನರ ಕ್ರೀಡಾ ಕಾರ್ಯಕ್ರಮಗಳನ್ನು ಅಯೋಜಿಸಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಮಟ್ಟದ ವೀಲ್ ಚೇರ್ ವಾಲಿಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ರಾಜ್ಯಕ್ಕೆ  ಮಾದರಿಯಾಗಿದ್ದಾರೆ.

ನ್ಯಾಷನಲ್  ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ನಲ್ಲಿ  ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 
ನ್ಯಾಷನಲ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ  ಕರ್ನಾಟಕ ತಂಡಕ್ಕೆ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ.
2025 ರ ಅಗಸ್ಟ್ 15ನೇ ತಾರೀಕು  ರಾಜ್ಯ ಮಟ್ಟದ  ವೀಲ್ ಚೇರ್ ಬ್ಯಾಸ್ಕೆಟ್ಬಾಲ್  ತರಬೇತಿ ಶಿಬಿರವನ್ನು ಆಯೋಜಿಸಿದರು.ಇದೇ ವರ್ಷ ಪ್ಯಾರಾಸಿಟ್ಟಿಂಗ್ ಥ್ರೋ ಬಾಲ್ ನಲ್ಲಿ ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಶ್ರೀ ಲಂಕಾ ದಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ಯಾರಾಸಿಟ್ಟಿಂಗ್ ತ್ರೋ ಬಾಲ್ ಗೆ ಆಯ್ಕೆ ಆಗುವ ಮೂಲಕ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಆಗಿ ಹೊರ ಹೊಮ್ಮಿದ್ದಾರೆ.





ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿಯೂ ಪ್ರಕಾಶ್ ರವರ ಸಾಧನೆಯೇನು ಕಡಿಮೆಯಿಲ್ಲ.  ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ 100  ಕ್ಕೂ ಹೆಚ್ಚು ಕವಿಗೋಷ್ಠಿಗಳಿಗೆ ಆಯ್ಕೆ ಆಗಿ ಕವನ ವಾಚಿಸಿದ್ದಾರೆ.ನಾನೂ ಇವರೊಂದಿಗೆ ಹಲವಾರು ವೇದಿಕೆಗಳಲ್ಲಿ ಕವಿತೆ ವಾಚಿಸಿದ್ದೇನೆ. ಇವರ ಕವನಗಳು
ಹಲವಾರು ಪತ್ರಿಕೆಗಳಲ್ಲಿ ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ.ತುಮಕೂರಿನ ಕನ್ನಡ ಭವನದಲ್ಲಿ ಇವರ ಚೊಚ್ಚಲ ಕೃತಿ
ಅಮೃತಹಸ್ತ 2019 ರಲ್ಲಿ ಬಿಡುಗಡೆಯಾಗಿ ಓದುಗರ ಮೆಚ್ಚುಗೆಯನ್ನು ಗಳಿಸಿದೆ.
ಅಮೃತಹಸ್ತ ಪುಸ್ತಕದ ಮಾರಾಟದಿಂದ ಬಂದ ಹಣದಿಂದ ಅಂಧ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ಪ್ರೇಮ ಕಾದಂಬರಿ ಮತ್ತು ದಿವ್ಯಾಂಗರ ಕ್ರೀಡಾ ಲೋಕದ ಕುರಿತು ಕಾದಂಬರಿ ಪ್ರಕಟಣೆ ಗೆ ಸಿದ್ಧವಾಗಿವೆ.

ಪ್ರಕಾಶ್ ರವರ ಸಾಧನೆ ಇಲ್ಲಿಗೇ ನಿಂತಿಲ್ಲ.ಸಮಾಜ ಸೇವೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ
ಅಮೃತಹಸ್ತ ಸಂಸ್ಥೆಯ ಮೂಲಕ
  ಬಡತನದಲ್ಲಿರುವ ದಿವ್ಯಾಂಗರಿಗೆ  ವೀಲ್ ಚೇರ್ ಕೊಡಿಸುವ   ಶೂಸ್ ಮತ್ತು ಟೀ ಶರ್ಟ್ ಗಳನ್ನು ಕೊಡಿಸುವ, ಅನಾಥ ಮಕ್ಕಳಿಗೆ ಸಹಾಯ ಮಾಡುವ ಕಾಯಕ ಮಾಡುತ್ತಿದ್ದಾರೆ.ಅಮೃತಸಿಂಚನ ಸಂಸ್ಥೆ ಜೊತೆ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ವಿಕಲ ಚೇತನ ಮಕ್ಕಳಿಗೆ  ನೋಟ್ ಪುಸ್ತಕ ಬ್ಯಾಗ್ ಗಳನ್ನು ಕೊಡಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ದಾನಿಗಳ ಸಹಕಾರದಿಂದ  "ಒಂದು ಜೊತೆ ಬಟ್ಟೆ" ಅಭಿಯಾನದಲ್ಲಿ ಭಾಗವಹಿಸಿ ಬಡವರಿಗೆ ಬಟ್ಟೆ ವಿತರಿಸಿದ್ದಾರೆ.ಅಂಧ ಮಕ್ಕಳಿಗೆ ಪ್ರತಿ ವರ್ಷ ಊಟ ಮತ್ತು ಸಿಹಿ ಹಂಚುತ್ತ ಬರುತ್ತಿದ್ದಾರೆ.
ಇವರು ಕ್ರೀಡೆ, ಸಾಹಿತ್ಯ ಮತ್ತು ಸಮಾಜ ಸೇವೆ ಗುರ್ತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಪುರಸ್ಕಾರ ನೀಡಿ ಗೌರವಿಸಿದ್ದಾರೆ‌
ಕಸ್ತೂರಿ ಸಿರಿಗನ್ನಡ ವೇದಿಕೆಯು ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ  ಬೆಂಗಳೂರಿನ ಕವಿವೃಕ್ಷ ವೇದಿಕೆಯು ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಕರ್ನಾಟಕ ಚಲನಚಿತ್ರ ಮಂಡಳಿ ಯುವರತ್ನ ಪ್ರಶಸ್ತಿ ನೀಡಿದೆ.ಧಾರವಾಡದ ಚೇತನ ಫೌಂಡೇಶನ್  ರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.
ಚಿತ್ರೋದ್ಯಮ ತಂಡವು  75 ಸೈನಿಕರೊಂದಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ದಾವಣಗೆರೆಯ ಸಾಧನ ಚಾರಿಟೇಬಲ್ ಟ್ರಸ್ಟ್  ನವರು ಸಾಧನ ರತ್ನ ಪ್ರಶಸ್ತಿ ನೀಡಿದ್ದಾರೆ.
ಬೆಂಗಳೂರಿನ  ಸ್ನೇಹಜೀವಿ ಗೆಳೆಯರ   ಬಳಗವು  ಸ್ನೇಹಜೀವಿ ದಿವ್ಯಾಂಗ ಕ್ರೀಡೆ ರತ್ನ ಪ್ರಶಸ್ತಿ  ನೀಡಿದರೆ
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನವರು ಕಾಯಕ ಶ್ರೀ ಹಾಗೂ ಪ್ರಶಸ್ತಿ ನೀಡಿದ್ದಾರೆ.
ಕಾವ್ಯ ಶ್ರೀ ಚಾರಿಟೇಬಲ್  ಟ್ರಸ್ಟ್  ನವರು ಸುವರ್ಣ ಕನ್ನಡಿಗ ಪ್ರಶಸ್ತಿ  ನೀಡಿ ಗೌರವಿಸಿದ್ದಾರೆ.
ಚಂದನ ಸಾಹಿತ್ಯ ವೇದಿಕೆಯಿಂದ ಚಂದನ ಕ್ರೀಡಾ ರತ್ನ ಪ್ರಶಸ್ತಿ ,
ಚೇತನ ಸೋಶಿಯಲ್ ಕ್ಲಬ್ ನವರು  ಬಾರತ ಭೂಷಣ ನ್ಯಾಷನಲ್ ಅವಾರ್ಡ್ ನೀಡಿ ಪುರಸ್ಕಾರಿಸಿದ್ದಾರೆ.

ಇಂತಹ ಅಸಮಾನ್ಯ ಸಾಧನೆ ಮಾಡಿರುವ ವಿಶೇಷ ಚೇತನ ಪ್ರಕಾಶ್ ರವರ ಸಾಧನೆ ಶ್ಲಾಘನೀಯ. ಅವರ ಸಾಧನೆಗೆ ಮೆಚ್ಚುಗೆ ಸೂಚಿಸಲು ಮತ್ತು ಅವರ ಸಮಾಜಮುಖಿ ಕಾರ್ಯಗಳಿಗೆ ಜೊತೆಗೂಡಲು ಅವರ ಈ  8861443413 ನಂಬರ್ ಗೆ ಸಂಪರ್ಕಿಸಬಹುದು.


ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529