16 ಸೆಪ್ಟೆಂಬರ್ 2025

ಇಂದು ಓಜೋನ್ ದಿನ .


 ಪ್ರತಿವರ್ಷ ಸೆಪ್ಟೆಂಬರ್ 16ರಂದು ವಿಶ್ವ ಓಜೋನ್ ದಿನವನ್ನು ಆಚರಿಸಲಾಗುತ್ತದೆ.

ಓಜೋನ್ ಒಂದು ಅನಿಲ (Gas). ಇದರ ರಾಸಾಯನಿಕ ಸೂತ್ರ O₃ ಅಂದರೆ    ಮೂರು ಆಮ್ಲಜನಕ ಅಣುಗಳು!

ಬಣ್ಣವಿಲ್ಲದ, ಆದರೆ ಸ್ವಲ್ಪ “ಹುರಿ” ವಾಸನೆಯಿರುವ ಅನಿಲ.

ಇದು ವಾತಾವರಣದಲ್ಲಿ ಸಹಜವಾಗಿ ಉಂಟಾಗುತ್ತದೆ.


ಭೂಮಿಯ ವಾತಾವರಣದ ಸ್ಟ್ರಾಟೋಸ್ಫಿಯರ್ (Stratosphere) ಭಾಗದಲ್ಲಿ (ಸುಮಾರು 10–50 ಕಿಮೀ ಎತ್ತರದಲ್ಲಿ) ಓಜೋನ್ ಹೆಚ್ಚು ಸಾಂದ್ರತೆಯಲ್ಲಿ ಇರುತ್ತದೆ.

ಈ ಪದರವನ್ನು ಓಜೋನ್ ಪದರ (Ozone Layer) ಎಂದು ಕರೆಯಲಾಗುತ್ತದೆ.

ಇದು ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ (UV) ಕಿರಣಗಳನ್ನು ಶೋಷಿಸುತ್ತದೆ, ಭೂಮಿಯ ಜೀವಿಗಳಿಗೆ ರಕ್ಷಣೆ ನೀಡುತ್ತದೆ  ಕುಡಿಯುವ ನೀರಿನ ಸ್ವಚ್ಛತೆಗೆ ಓಜೋನ್ ಬಳಸಲಾಗುತ್ತದೆ. ಗಾಳಿ ಮತ್ತು ವಸ್ತುಗಳನ್ನು ಹಾನಿಕಾರಕ ಜೀವಾಣುಗಳಿಂದ ಮುಕ್ತಗೊಳಿಸಲು ಸಹ ಓಜೋನ್ ಉಪಯುಕ್ತ.


ಕೈಗಾರಿಕೆಯಲ್ಲಿ ಬಳಸುವ CFCs (Chlorofluorocarbons), ಏರ್‌ಕಂಡಿಷನರ್, ಫ್ರಿಜ್ ಗ್ಯಾಸ್‌ಗಳು, ಸ್ಪ್ರೆಗಳಲ್ಲಿ ಬಳಸುವ ರಾಸಾಯನಿಕಗಳು ಓಜೋನ್ ಪದರವನ್ನು ಹಾನಿಗೊಳಿಸುತ್ತವೆ.


ನಮ್ಮ ಓಜೋನ್ ಪದರ ರಕ್ಷಿಸೋಣ ತನ್ಮೂಲಕ ನಮ್ಮ ರಕ್ಷಣೆ ಮಾಡಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

11 ಸೆಪ್ಟೆಂಬರ್ 2025

ಕುಲದೀಪ.


 


ಕುಲದೀಪ..

ಭಾರತದ ವಿರುದ್ಧ ಯು ಎ ಇ
ಹೀನಾಯವಾಗಿ ಸೋತರು ಪಾಪ!
ಇದಕ್ಕೆ ಪ್ರಮುಖ ಕಾರಣ
ನಮ್ಮ ಸ್ಪಿನ್ ಬೌಲರ್  ಕುಲದೀಪ!!

ಸಿಹಿಜೀವಿ ವೆಂಕಟೇಶ್ವರ
ತುಮಕೂರು
KuldeepYadav #AsiaCupCricket #TeamIndia #ICC #BCCI #CricketHighlights #CricketLovers #IndiaWins #SpinMaster #CricketFans #Cupphaven #CrickerLife #IndianCricket #SportingMoments #BCCI2023 #AsiaCup2023 #FoundationOfWinners #CricketPassion #KuldeepMagic #Champions

09 ಸೆಪ್ಟೆಂಬರ್ 2025

ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.


 




ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.

ಸರ್ವಾಂಗಗಳೂ ಸುಸ್ಥಿತಿಯಲ್ಲಿದ್ದರೂ ಸೋಮಾರಿಗಳಾಗಿ ಕಾಲ ಹರಣ ಮಾಡುವ ಹಲವಾರು ಜನರ ನಡುವೆ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿಕೊಂಡು ಜೀವನ ಸಾಗಿಸುವ ವಿಶೇಷ ಚೇತನಗಳು ನಮ್ಮ ಮಧ್ಯ ಇರುವುದನ್ನು ಕಾಣುತ್ತೇವೆ.ಅಂತಹ ವಿಶೇಷ ಚೇತನ ಸಾಧಕರೊಬ್ಬರನ್ನು ಇಂದು ನಾನು ನಿಮಗೆ ಪರಿಚಯ ಮಾಡಿಕೊಡುವೆ.

ಹೆಸರು  ಪ್ರಕಾಶ್ ಆರ್ ಸಾಹಿತ್ಯ ವಲಯದಲ್ಲಿ ಅಮೃತ ಹಸ್ತ ಪ್ರಕಾಶ್ ಎಂದು ಗುರ್ತಿಸಿಕೊಂಡ ಇವರು ಕ್ರೀಡಾ ಕ್ಷೇತ್ರದಲ್ಲಿ ದಿವ್ಯಾಂಗ  ಸ್ಪೋರ್ಟ್ಸ್ ಪ್ರಕಾಶ್ ಎಂದು ಹೆಸರು ಮಾಡಿದ್ದಾರೆ.
ಬಾಲ್ಯದಲ್ಲಿ ಸಾಮಾನ್ಯ ಬಾಲಕನಾಗಿದ್ದ ಪ್ರಕಾಶ್ ಚುರುಕಿನ ಚಟುವಟಿಕೆಗಳಿಂದ ನೆರೆಹೊರೆಯವರ ಗಮನ ಸೆಳೆದಿದ್ದರು.ವಿಧಿಯ ಕ್ರೂರತೆಯು ಕೆಲವೊಮ್ಮೆ ನಮ್ಮ ಜೀವನದಲ್ಲಿ ಕೆಟ್ಟ ಘಳಿಗೆ ತಂದು ನಮ್ಮ ಆತ್ಮ ಶಕ್ತಿಗೆ ಸವಾಲಾಗಿ ನಿಲ್ಲುತ್ತದೆ. ಅಂತದೇ ಘಟನೆ ನಮ್ಮ ಪ್ರಕಾಶ್ ರವರ ಜೀವನದಲ್ಲೂ ಆಯಿತು. ಇದ್ದಕ್ಕಿದ್ದಂತೆ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡವು. ಪೋಷಕರು ಆಘಾತದಿಂದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದರೂ ಉಪಯೋಗವಾಗಲಿಲ್ಲ.ವೀಲ್ ಚೇರ್ ಏರಿ ಶಾಲೆಯಲ್ಲಿ ಕಲಿತ ಪ್ರಕಾಶ್ ರವರಿಗೆ ಮತ್ತೊಂದು ಆಘಾತ ಕಾದಿತ್ತು. ಕ್ರಮೇಣವಾಗಿ ಅವರ  ಕಿವಿಗಳು ತಮ್ಮ ಗ್ರಹಣ ಶಕ್ತಿಯನ್ನು ಕಳೆದುಕೊಂಡವು.ಎದೆಗುಂದದ ಅವರು ತಮ್ಮ ಪೋಷಕರ ಬೆಂಬಲದಿಂದ ವಿದ್ಯಾಭ್ಯಾಸ ಮುಂದುವರೆಸಿ ಗೌರಿಬಿದನೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯ ಮಾಡಲು ಶುರುಮಾಡುತ್ತಾರೆ.ಆಗಲೇ ಅವರು ನನಗೆ ಪರಿಚಯವಾಗಿದ್ದು.ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಿಂದ ನಮ್ಮ ಪರಿಚಯ ಸ್ನೇಹವಾಗಿ ಮಾರ್ಪಾಡಾಗಿ ಇಂದಿಗೂ ಮುಂದುವರೆದಿದೆ.





ಗೌರಿಬಿದನೂರಿನಿಂದ ಪ್ರಕಾಶ್ ತುಮಕೂರಿಗೆ ಬಂದರು.ನಾನೂ ಬಂದೆ.ಗೌರಿಬಿದನೂರಿನಲ್ಲಿ ವಿಶೇಷ ಚೇತನ ಪ್ರಕಾಶ್ ಶಿಕ್ಷಕ ಹಾಗೂ ಕವಿಯಾಗಿ ಗುರ್ತಿಸಿಕೊಂಡಿದ್ದರೆ ತುಮಕೂರಿಗೆ ಬಂದು ಓರ್ವ ದಿವ್ಯಾಂಗ ಕ್ರೀಡಾಪಟುವಾಗಿ,ಸಮಾಜ ಸೇವಕನಾಗಿ ಸಂಘಟಕನಾಗಿ ಹೊರಹೊಮ್ಮಿದ್ದಾರೆ.ಅವರ ಸಾಧನೆಗಳು ಇತರ ದಿವ್ಯಾಂಗರಿಗೆ ಪ್ರೇರಣೆಯಾಗಿವೆ.



ತುಮಕೂರು ಡಿಸ್ಟ್ರಿಕ್ಟ್  ದಿವ್ಯಾಂಗ ಸ್ಪೋರ್ಟ್ಸ್ ಅಸೋಸಿಯೇಷನ್
ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ 
ವಿದ್ಮಹಿ ವಿಕಲಚೇತನರ ಸೇವಾ ಟ್ರಸ್ಟ್  ಸಂಸ್ಥಾಪಕ  ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ವಿಶೇಷ ಚೇತನರಿಗೆ ಚೇತನರಾಗಿ ನಿಂತಿದ್ದಾರೆ.ತುಮಕುರು  ಜಿಲ್ಲೆಯಲ್ಲೇ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಆಡಿದ ಮೊದಲಿಗರಾಗಿ ಗುರ್ತಿಸಿಕೊಂಡ ಪ್ರಕಾಶ್
ಜಿಲ್ಲೆಯಲ್ಲಿ ದಿವ್ಯಾಂಗರ ಕ್ರೀಡೆಯನ್ನು ಪರಿಚಯಿಸಿ ಕತ್ತಲಲ್ಲಿರುವ ದಿವ್ಯಾಂಗರನ್ನು ಬೆಳಕಿಗೆ ತರಲು ತುಮಕೂರು ಜಿಲ್ಲಾ ದಿವ್ಯಾಂಗ  ಸ್ಪೋರ್ಟ್ಸ್ ಅಕಾಡೆಮಿಯನ್ನು  ತೆರೆದು 30 ಕ್ಕೂ ಹೆಚ್ಚು ದಿವ್ಯಾಂಗರಿಗೆ ಕ್ರೀಡಾ ತರಬೇತಿ ನೀಡಿ ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುವಂತೆ ಮಾರ್ಗದರ್ಶನ ನೀಡಿದ್ದಾರೆ. ಇವರ ನೇತೃತ್ವದಲ್ಲಿ
ಬೆಳಗಾವಿಯಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್  ವೀಲ್ ಚೇರ್ ಕ್ರಿಕೆಟ್ ಹಾಗೂ
ಭದ್ರಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್‌ ಟೂರ್ನಮೆಂಟ್ಗಳಲ್ಲಿ
ತುಮಕೂರು ಜಿಲ್ಲೆಗೆ  ದ್ವಿತೀಯ ಸ್ಥಾನ ಲಭಿಸಿದೆ






ಇದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಿವ್ಯಾಂಗರ ವೀಲ್ ಚೇರ್ ಪ್ಯಾರ ಬ್ಯಾಡ್ಮಿಟನ್ ನಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಮಟ್ಟದ ದಿವ್ಯಾಂಗರ ಕ್ರೀಡೆಗಳನ್ನು ನಡೆಸುವ ಮೂಲಕ ದಿವ್ಯಾಂಗರಲ್ಲಿ ಆತ್ಮಸ್ಪೈರ್ಯ ತುಂಬುತ್ತಿದ್ದಾರೆ ಇವರ ಪರಿಶ್ರಮದಿಂದ
ತುಮಕುರು ಜಿಲ್ಲೆಯಿಂದ  ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ  8 ಜನ ಆಯ್ಕೆ ಆಯ್ಕೆಯಾಗಿದ್ದಾರೆ.
ದಿವ್ಯಾಂಗರ ಕ್ರೀಡಾ ಪಟುಗಳಿಗೆ ಅಗತ್ಯವಾದ  ಶೂಸ್ ಮತ್ತು ಟೀ ಶರ್ಟ್ ಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ ಮುಂಬೈನಲ್ಲಿ ನಡೆದ ನ್ಯಾಷನಲ್ ವೀಲ್ ಚೆರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು   ಪ್ರತಿನಿಧಿಸಿದ್ದಾರೆ.ತುಮಕೂರು ಡಿಸ್ಟ್ರಿಕ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯ ಮೂಲಕ ವಿಕಲಚೇತನರ ಕ್ರೀಡಾ ಕಾರ್ಯಕ್ರಮಗಳನ್ನು ಅಯೋಜಿಸಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಮಟ್ಟದ ವೀಲ್ ಚೇರ್ ವಾಲಿಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ರಾಜ್ಯಕ್ಕೆ  ಮಾದರಿಯಾಗಿದ್ದಾರೆ.

ನ್ಯಾಷನಲ್  ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ನಲ್ಲಿ  ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 
ನ್ಯಾಷನಲ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ  ಕರ್ನಾಟಕ ತಂಡಕ್ಕೆ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ.
2025 ರ ಅಗಸ್ಟ್ 15ನೇ ತಾರೀಕು  ರಾಜ್ಯ ಮಟ್ಟದ  ವೀಲ್ ಚೇರ್ ಬ್ಯಾಸ್ಕೆಟ್ಬಾಲ್  ತರಬೇತಿ ಶಿಬಿರವನ್ನು ಆಯೋಜಿಸಿದರು.ಇದೇ ವರ್ಷ ಪ್ಯಾರಾಸಿಟ್ಟಿಂಗ್ ಥ್ರೋ ಬಾಲ್ ನಲ್ಲಿ ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಶ್ರೀ ಲಂಕಾ ದಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ಯಾರಾಸಿಟ್ಟಿಂಗ್ ತ್ರೋ ಬಾಲ್ ಗೆ ಆಯ್ಕೆ ಆಗುವ ಮೂಲಕ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಆಗಿ ಹೊರ ಹೊಮ್ಮಿದ್ದಾರೆ.





ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿಯೂ ಪ್ರಕಾಶ್ ರವರ ಸಾಧನೆಯೇನು ಕಡಿಮೆಯಿಲ್ಲ.  ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ 100  ಕ್ಕೂ ಹೆಚ್ಚು ಕವಿಗೋಷ್ಠಿಗಳಿಗೆ ಆಯ್ಕೆ ಆಗಿ ಕವನ ವಾಚಿಸಿದ್ದಾರೆ.ನಾನೂ ಇವರೊಂದಿಗೆ ಹಲವಾರು ವೇದಿಕೆಗಳಲ್ಲಿ ಕವಿತೆ ವಾಚಿಸಿದ್ದೇನೆ. ಇವರ ಕವನಗಳು
ಹಲವಾರು ಪತ್ರಿಕೆಗಳಲ್ಲಿ ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ.ತುಮಕೂರಿನ ಕನ್ನಡ ಭವನದಲ್ಲಿ ಇವರ ಚೊಚ್ಚಲ ಕೃತಿ
ಅಮೃತಹಸ್ತ 2019 ರಲ್ಲಿ ಬಿಡುಗಡೆಯಾಗಿ ಓದುಗರ ಮೆಚ್ಚುಗೆಯನ್ನು ಗಳಿಸಿದೆ.
ಅಮೃತಹಸ್ತ ಪುಸ್ತಕದ ಮಾರಾಟದಿಂದ ಬಂದ ಹಣದಿಂದ ಅಂಧ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ಪ್ರೇಮ ಕಾದಂಬರಿ ಮತ್ತು ದಿವ್ಯಾಂಗರ ಕ್ರೀಡಾ ಲೋಕದ ಕುರಿತು ಕಾದಂಬರಿ ಪ್ರಕಟಣೆ ಗೆ ಸಿದ್ಧವಾಗಿವೆ.

ಪ್ರಕಾಶ್ ರವರ ಸಾಧನೆ ಇಲ್ಲಿಗೇ ನಿಂತಿಲ್ಲ.ಸಮಾಜ ಸೇವೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ
ಅಮೃತಹಸ್ತ ಸಂಸ್ಥೆಯ ಮೂಲಕ
  ಬಡತನದಲ್ಲಿರುವ ದಿವ್ಯಾಂಗರಿಗೆ  ವೀಲ್ ಚೇರ್ ಕೊಡಿಸುವ   ಶೂಸ್ ಮತ್ತು ಟೀ ಶರ್ಟ್ ಗಳನ್ನು ಕೊಡಿಸುವ, ಅನಾಥ ಮಕ್ಕಳಿಗೆ ಸಹಾಯ ಮಾಡುವ ಕಾಯಕ ಮಾಡುತ್ತಿದ್ದಾರೆ.ಅಮೃತಸಿಂಚನ ಸಂಸ್ಥೆ ಜೊತೆ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ವಿಕಲ ಚೇತನ ಮಕ್ಕಳಿಗೆ  ನೋಟ್ ಪುಸ್ತಕ ಬ್ಯಾಗ್ ಗಳನ್ನು ಕೊಡಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ದಾನಿಗಳ ಸಹಕಾರದಿಂದ  "ಒಂದು ಜೊತೆ ಬಟ್ಟೆ" ಅಭಿಯಾನದಲ್ಲಿ ಭಾಗವಹಿಸಿ ಬಡವರಿಗೆ ಬಟ್ಟೆ ವಿತರಿಸಿದ್ದಾರೆ.ಅಂಧ ಮಕ್ಕಳಿಗೆ ಪ್ರತಿ ವರ್ಷ ಊಟ ಮತ್ತು ಸಿಹಿ ಹಂಚುತ್ತ ಬರುತ್ತಿದ್ದಾರೆ.
ಇವರು ಕ್ರೀಡೆ, ಸಾಹಿತ್ಯ ಮತ್ತು ಸಮಾಜ ಸೇವೆ ಗುರ್ತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಪುರಸ್ಕಾರ ನೀಡಿ ಗೌರವಿಸಿದ್ದಾರೆ‌
ಕಸ್ತೂರಿ ಸಿರಿಗನ್ನಡ ವೇದಿಕೆಯು ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ  ಬೆಂಗಳೂರಿನ ಕವಿವೃಕ್ಷ ವೇದಿಕೆಯು ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಕರ್ನಾಟಕ ಚಲನಚಿತ್ರ ಮಂಡಳಿ ಯುವರತ್ನ ಪ್ರಶಸ್ತಿ ನೀಡಿದೆ.ಧಾರವಾಡದ ಚೇತನ ಫೌಂಡೇಶನ್  ರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.
ಚಿತ್ರೋದ್ಯಮ ತಂಡವು  75 ಸೈನಿಕರೊಂದಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ದಾವಣಗೆರೆಯ ಸಾಧನ ಚಾರಿಟೇಬಲ್ ಟ್ರಸ್ಟ್  ನವರು ಸಾಧನ ರತ್ನ ಪ್ರಶಸ್ತಿ ನೀಡಿದ್ದಾರೆ.
ಬೆಂಗಳೂರಿನ  ಸ್ನೇಹಜೀವಿ ಗೆಳೆಯರ   ಬಳಗವು  ಸ್ನೇಹಜೀವಿ ದಿವ್ಯಾಂಗ ಕ್ರೀಡೆ ರತ್ನ ಪ್ರಶಸ್ತಿ  ನೀಡಿದರೆ
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನವರು ಕಾಯಕ ಶ್ರೀ ಹಾಗೂ ಪ್ರಶಸ್ತಿ ನೀಡಿದ್ದಾರೆ.
ಕಾವ್ಯ ಶ್ರೀ ಚಾರಿಟೇಬಲ್  ಟ್ರಸ್ಟ್  ನವರು ಸುವರ್ಣ ಕನ್ನಡಿಗ ಪ್ರಶಸ್ತಿ  ನೀಡಿ ಗೌರವಿಸಿದ್ದಾರೆ.
ಚಂದನ ಸಾಹಿತ್ಯ ವೇದಿಕೆಯಿಂದ ಚಂದನ ಕ್ರೀಡಾ ರತ್ನ ಪ್ರಶಸ್ತಿ ,
ಚೇತನ ಸೋಶಿಯಲ್ ಕ್ಲಬ್ ನವರು  ಬಾರತ ಭೂಷಣ ನ್ಯಾಷನಲ್ ಅವಾರ್ಡ್ ನೀಡಿ ಪುರಸ್ಕಾರಿಸಿದ್ದಾರೆ.

ಇಂತಹ ಅಸಮಾನ್ಯ ಸಾಧನೆ ಮಾಡಿರುವ ವಿಶೇಷ ಚೇತನ ಪ್ರಕಾಶ್ ರವರ ಸಾಧನೆ ಶ್ಲಾಘನೀಯ. ಅವರ ಸಾಧನೆಗೆ ಮೆಚ್ಚುಗೆ ಸೂಚಿಸಲು ಮತ್ತು ಅವರ ಸಮಾಜಮುಖಿ ಕಾರ್ಯಗಳಿಗೆ ಜೊತೆಗೂಡಲು ಅವರ ಈ  8861443413 ನಂಬರ್ ಗೆ ಸಂಪರ್ಕಿಸಬಹುದು.


ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

17 ಆಗಸ್ಟ್ 2025

ಕೋಟಿ ಜನರ ಹೃದಯ ಗೆದ್ದು ಕೋಟಿ ಸಂಪಾದಿಸಿದ ಡ್ರೈವರ್..


ಅವರೊಬ್ಬ ಸಾಮಾನ್ಯ ಲಾರಿ ಚಾಲಕ   ದಿನಕ್ಕೆ ₹150 ಮಾತ್ರ ಸಂಪಾದಿಸುತ್ತಿದ್ದ ‌ಅವರ ಬ್ರಾಂಡ್ ಮೌಲ್ಯ ಈಗ 5 ಕೋಟಿ ಇದೊಂತರ ನಮ್ಮ ವಿ ಅರ್ ಎಲ್ ಓನರ್ ವಿಜಯ್ ಸಂಕೇಶ್ವರ ಕಥೆಯಂತಿದ್ದರೂ ಸ್ವಲ್ಪ ವಿಭಿನ್ನ. ನಾನೀಗ ನಿಮಗೆ ಪರಿಚಯ ಮಾಡುವ ವ್ಯಕ್ತಿಯ ಹೆಸರು ರಾಜೇಶ್!  ಜಾರ್ಖಂಡ್ ಮೂಲದ ರಾಜೇಶ್ ರವರ ಪೂರ್ಣ ಹೆಸರು ರಾಜೇಶ್ ರವಾನಿ.  ಈಗಲೂ ಲಾರಿ ಚಾಲಕನಾಗಿ ಕೆಲಸ ಮಾಡುತ್ತಾರೆ. ಬರೀ ಲಾರಿ ಡ್ರೈವರ್ ಆಗಿದ್ರೆ ಅವರು ಲಕ್ಷದಲ್ಲಿ ಒಬ್ಬ ಸಾಮಾನ್ಯ ಡ್ರೈವರ್ ಆಗಿರುತ್ತಿದ್ದರು ಆದರೆ ಯೂಟ್ಯೂಬ್ ಅವರನ್ನು ಸ್ಟಾರ್ ಆಗಿ ಪರಿವರ್ತಿಸುವ ಮೂಲಕ ಕೋಟಿ ಸಂಪಾದಿಸುವ ಡಿಜಿಟಲ್ ಕ್ರಿಯೇಟರ್,ಹಾಗೂ ಯೂಟ್ಯೂಬರ್ ಆಗಿ ಪರಿವರ್ತಿಸಿದೆ.

ಬಿಸಿಲು, ಮಳೆ,ಚಳಿ,ಹಗಲು,ರಾತ್ರಿಗಳ ಪರಿವೆ ಇಲ್ಲದೆ ಸಂಸಾರದಿಂದ ವಾರ, ಮಾಸಗಳ ಕಾಲ ದೂರವಿರುವ ಲಾರಿ ಡ್ರೈವರ್ ಗಳ ಲೋಕವೇ ವಿಶಿಷ್ಟ. ಅಂತಹ ಕಾಯಕ ಮಾಡುವ ರಾಜೇಶ್ ಒಮ್ಮೆ ಕುತೂಹಲಕ್ಕೆ ತನ್ನ ಲಾರಿ ಡ್ರೈವಿಂಗ್ ಅನುಭವಗಳನ್ನು ಪುಟ್ಟ ವೀಡಿಯೋ ಮಾಡಿ ಹರಿಬಿಟ್ಟರು. ಜನರು ಅವರ ವೀಡಿಯೋ ನೋಡಿ ಖುಷಿ ಪಟ್ಟು ಸಬ್ಸ್ಕ್ರೈಬ್ ಲೈಕ್ ಶೇರ್ ಮಾಡಿ ಬೆಂಬಲಿಸಿದರು.ಅಲ್ಲೊಂದು ಪವಾಡವೇ ಜರುಗಿತು.ಈಗ ಅವರ "ಆರ್ ರಾಜೇಶ್ ವ್ಲಾಗ್" ಹೆಸರಿನ ಯೂಟ್ಯೂಬ್ ಚಾನೆಲ್ ಗೆ ಬರೋಬ್ಬರಿ ಕಾಲು ಕೋಟಿ ಚಂದಾದಾರರರು.ಎಂಬತ್ತು ಕೋಟಿಗಿಂತ ಹೆಚ್ಚು ವೀಕ್ಷಣೆ ಕಂಡ ಅವರ ಸಂಪಾದನೆ ತಿಂಗಳಿಗೆ ಐದರಿಂದ ಹತ್ತು ಲಕ್ಷಗಳು!


ರಾಜೇಶ್ ತಮ್ಮ ವ್ಲಾಗ್ ಗಳಲ್ಲಿ  ಚಾಲಕರ ದಿನನಿತ್ಯದ ಸಂಕಷ್ಟಗಳು, ರಸ್ತೆಗಳಲ್ಲಿ ಕಂಡುಬರುವ ಅದ್ಭುತ ದೃಶ್ಯಗಳು, ವಾಹನ ಸಂಬಂಧವಾದ ಸಲಹೆಗಳು, ರಸ್ತೆ ಸುರಕ್ಷತಾ ಮಾಹಿತಿಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಮೊದಲಿಗೆ ಕೆಲವರು ಮಾತ್ರ ನೋಡುತ್ತಿದ್ದರು, ಆದರೆ ನಿಧಾನವಾಗಿ ಸಾವಿರಾರು ಜನರು ಅವರ ವಿಡಿಯೋಗಳನ್ನು ನೋಡಲು ಪ್ರಾರಂಭಿಸಿದರು.


ರಾಜೇಶ್ ಅವರ ಸರಳತೆ, ನಿಜವಾದ ಅನುಭವ ಮತ್ತು ಮನಸಾರೆ ಆಡುವ  ಮಾತುಗಳು ಜನರನ್ನು ಆಕರ್ಷಿಸಿದವು. ಅತಿರೇಕವಿಲ್ಲದೆ ತಾನು ಬದುಕುತ್ತಿದ್ದ ಜೀವನವನ್ನೇ ಜನರಿಗೆ ತೋರಿಸುತ್ತಿದ್ದುದರಿಂದ ಎಲ್ಲರೂ ಅವರಿಗೆ ಹತ್ತಿರವಾದರು.


ಕಾಲಕಳೆದಂತೆ ಅವರ ಯೂಟ್ಯೂಬ್ ಚಾನೆಲ್ ಬೆಳೆಯಿತು. ಹವ್ಯಾಸವಾಗಿ ಪ್ರಾರಂಭಿಸಿದ ಕೆಲಸವೇ ಅವರಿಗೆ ಎರಡನೇ ಉದ್ಯೋಗವಾಯಿತು. ಈಗ ಬ್ರಾಂಡ್‌ಗಳು ಅವರನ್ನು ಸಂಪರ್ಕ ಮಾಡಿ  ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತವೆ.ಯಾಕೆಂದರೆ ಈಗ ಅವರೇ ಒಂದು ಬ್ರಾಂಡ್!

ದುಡ್ಡು ಬಂತು ಎಂದು ರಾಜೇಶ್ ಅರ್ಧ ರಾತ್ರಿಯಲ್ಲಿ ಛತ್ರಿ ಹಿಡಿಯಲಿಲ್ಲ ಬದಲಿಗೆ 

ಇಂದಿಗೂ ರಾಜೇಶ್ ತಮ್ಮ ಲಾರಿಯನ್ನು ಓಡಿಸುತ್ತಲೇ ಇದ್ದಾರೆ. ಜೊತೆಗೆ ಸಾವಿರಾರು ಜನರಿಗೆ ಪ್ರೇರಣೆಯೂ ಆಗಿದ್ದಾರೆ. ಮೋಟಾರು ವಾಹನ ತಯಾರಿಕಾ ದೈತ್ಯ ಕಂಪನಿಯ ಮಾಲಿಕರಲ್ಲಿ ಒಬ್ಬರಾದ ಆನಂದ್ ಮಹಿಂದ್ರ ರಾಜೇಶ್ ರವರನ್ನು ಮನಸಾರೆ ಹೊಗಳಿದ್ದಾರೆ.ಪ್ರಸ್ತುತ ಅವರು ಒಂದು ಕೋಟಿ ಬೆಲೆ ಬಾಳುವ ಮನೆಯನ್ನು ಕಟ್ಟಿಸಿದ್ದಾರೆ.ಅವರ ಮೂವರು ಮಕ್ಕಳು ಅವರ ಯೂಟ್ಯೂಬ್ ವೀಡಿಯೋಗಳನ್ನು ಎಡಿಟ್ ಮಾಡುವ ಪ್ರಮೋಟ್ ಮಾಡುವಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಾರೆ.

ಯಾವುದೇ ಕೆಲಸವನ್ನು ಶ್ರದ್ಧೆ, ಮತ್ತು ಅಚ್ಚುಕಟ್ಟಾಗಿ ಮಾಡಿದರೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯೂಟ್ಯೂಬ್ ನಂತಹ ವೇದಿಕೆಗಳು ಹೇಗೆ ನಮ್ಮ ಜೀವನವನ್ನು ಧನಾತ್ಮಕವಾಗಿ ಬದಲಾಯಿಸುತ್ತವೆ ಎಂಬುದಕ್ಕೆ ರಾಜೇಶ್ ರವರ ಬದುಕೇ ಉದಾಹರಣೆ. ಇಂದಿನ ಯುವ ಜನರಿಗೆ ರಾಜೇಶ್ ಬಹುದೊಡ್ಡ ಪ್ರೇರಣೆ. ನಮ್ಮ ಹಿನ್ನಲೆ ಏನೇ ಇರಲಿ ಕೆಲಸದೆಡೆಗಿನ  ಒಲವು ಮತ್ತು ನಿರಂತರ ಪರಿಶ್ರಮ ಇದ್ದರೆ ಜೀವನವನ್ನು ಬದಲಾಯಿಸಬಹುದು ಎಂಬುದನ್ನು ರಾಜೇಶ್ ಸಾಬೀತು ಮಾಡಿದ್ದಾರೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು






 

30 ಜುಲೈ 2025

ಸರ್ಕಾರಿ ಕೆಲಸ ಪಡೆದ ರೈತನ ಮೂರೂ ಮಕ್ಕಳು.


 



 ಕೆಲಸ ಸಿಗಲಿಲ್ಲ  ಎಂದು ಪರಿತಪಿಸುತ್ತಾ  ಸರ್ಕಾರಿ ಉದ್ಯೋಗ ಪಡೆಯಲು  ಪರದಾಡುತ್ತಿರುವ ಮಧ್ಯೆಸಾಮಾನ್ಯ ರೈತ ಕುಟುಂಬದ ಮೂವರು ಒಡಹುಟ್ಟಿದವರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಮೂಲಕ ತಂದೆಯ ಕನಸನ್ನು ಈ  ಮೂವರು ಮಕ್ಕಳು ಈಡೇರಿಸಿದ್ದಾರೆ.


ಕರೀಂನಗರ ಜಿಲ್ಲೆಯ ವೀನವಂಕ ಬಳಿಯ ರೆಡ್ಡಿಪಲ್ಲಿ ಗ್ರಾಮದ ಪೊತುಲು ಇಂದಿರಾ ಮತ್ತು ಚಂದ್ರೈ ದಂಪತಿಯ ಮೂವರೂ ಮಕ್ಕಳು ಸರ್ಕಾರಿ  ಹುದ್ದೆ ಪಡೆದಿದ್ದಾರೆ. 2 ಎಕರೆಯಲ್ಲಿ ದಂಪತಿ ಕೃಷಿ ಜೊತೆಗೆ ಕೂಲಿ ಕೆಲಸ ಮಾಡುತ್ತಾ ಕಷ್ಟಪಟ್ಟು ಮಕ್ಕಳನ್ನು ಓದಿಸಿದ್ದರು. ಎಲ್ಲ ಪೋಷಕರು ಬಯಸುವಂತೆ  ತಮ್ಮ ಮಕ್ಕಳನ್ನು ಸರ್ಕಾರಿ ಕೆಲಸಕ್ಕೆ ಸೇರಿಸಬೇಕು ಎಂದು ತಂದೆ ಕನಸು ಕಂಡಿದ್ದರು.


ಸರ್ಕಾರಿ ಶಾಲೆಯಲ್ಲೇ ಕಲಿತು ಸರ್ಕಾರಿ ಉದ್ಯೋಗ ಪಡೆದ ಮಕ್ಕಳ ಸಾಧನೆ ಕಂಡ ಪೋಷಕರು ಆನಂದ ಭಾಷ್ಪ ಸುರಿಸಿದ್ದಾರೆ.

 ಓರ್ವ ಮಗ ಸಿಆರ್​ಪಿಎಫ್ ಅಸಿಸ್ಟಂಟ್ ಕಮಾಂಡರ್, ಇನ್ನೊಬ್ಬ ಸಿಐಎಸ್​ಪಿ ಕಾನ್ಸ್​ಟೇಬಲ್ ಮತ್ತು ಪುತ್ರಿ ಅಬಕಾರಿ ಕಾನ್ಸ್​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ಈ ರೈತನ ಹಿರಿಯ ಮಗ ಎಂ ಬಿ ಬಿ ಎಸ್ ಓದಿದದರೂ ಸರ್ಕಾರಿ ಹುದ್ದೆ ಸಿಗದ ಕಾರಣದಿಂದ ಡಾಕ್ಟರ್ ಹುದ್ದೆ ತೊರೆದು ತಂದೆಯ ಆಸೆಯಂತೆ ಸರ್ಕಾರಿ ಕೆಲಸ ಪಡೆದಿದ್ದಾರೆ.

 ಅಜಯ್ ಕರೀಂ ನಗರದ ಪ್ರತಿಮಾ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಇವರು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯದೇ ಅಪ್ಪನ ಆಸೆಯಂತೆ ಪೊಲೀಸ್ ಸಮವಸ್ತ್ರ ಧರಿಸಬೇಕೆಂದು ನಿರ್ಧರಿಸಿದ್ದರು. ಅಂತೆಯೇ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸಿಆರ್​ಪಿಎಫ್ ಅಸಿಸ್ಟಂಟ್ ಕಮಾಂಡರ್ ಆಗಿ ಆಯ್ಕೆ ಆಗಿದ್ದಾರೆ.


"ಚೆನ್ನಾಗಿ ಓದಿ ಪೊಲೀಸ್ ಅಧಿಕಾರಿಯಾಗುವಂತೆ ನಮ್ಮ ತಂದೆ ನನಗೆ ಬಾಲ್ಯದಿಂದಲೂ ಹೇಳುತ್ತಿದ್ದರು. ಆದರೆ ಡಾಕ್ಟರ್ ಆಗಬೇಕೆಂಬ ನನ್ನ ಕನಸು ಪೂರೈಸಿಕೊಳ್ಳಲು ಎಂಬಿಬಿಎಸ್ ಮಾಡಿದೆ.  ತಂದೆಯ ಮಾತು ನನ್ನನ್ನು ಕಾಡುತ್ತಿತ್ತು. ಆದ್ದರಿಂದ ಸ್ಫರ್ಧಾತ್ಮಕ ಪರೀಕ್ಷೆ ಪಡೆದು ಕಮಾಂಡರ್ ಆಗಿ ತಂದೆಯ ಕನಸು ನನಸು ಮಾಡಿರುವೆ" ಎಂದು ಅಜಯ್ ತಿಳಿಸಿದ್ದಾರೆ.


 ಅಜಯ್ ಅವರ ತಂಗಿ ನವಥಾ ಸರ್ಕಾರಿ ಶಾಲೆಯಲ್ಲಿ ಕಲಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಕೂಡ ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗಿ ಅಬಕಾರಿ ಇಲಾಖೆಯಲ್ಲಿ ಕಾನ್ಸ್​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಇವರ ಸಹೋದರ ಶ್ರವಣ ಕೂಡ ಉತ್ತರ ಪ್ರದೇಶದ ಲಖನೌದಲ್ಲಿ ಸಿಐಎಸ್​ಎಫ್ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.



ತಂದೆ ತಾಯಿಗಳು ಕಷ್ಟ ಪಟ್ಟು ಶಿಕ್ಷಣ ನೀಡಿದರು. ಅದಕ್ಕೆ ತಕ್ಕಂತೆ ಮಕ್ಕಳು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ  ಸರ್ಕಾರಿ ಉದ್ಯೋಗ ಪಡೆದರು.

ಮಧ್ಯಮ ವರ್ಗದ ಕುಟುಂಬದ ಗ್ರಾಮೀಣ ಹಿನ್ನೆಲೆಯಿಂದ ಬಂದ ಈ  ಮೂವರ ಸಾಧನೆ ಇತರರಿಗೆ ಪ್ರೇರಣೆಯಾಗಿದೆ.


ಸಿಹಿಜೀವಿ ವೆಂಕಟೇಶ್ವರ