19 ಸೆಪ್ಟೆಂಬರ್ 2018

ಪ್ರಕೃತಿ ನ್ಯಾಯಾಲಯ (ಕವನ)

                *ಪ್ರಕೃತಿ ನ್ಯಾಯಾಲಯ*

ಬೀದಿಯಲಿದ್ದವನು
ಬಿಡಿಗಾಸು ಕಾಣದವನು
ಒಮ್ಮಿದೊಮ್ಮೆಲೆ ರಾಜಕಾರಣ
ಉದ್ಯಮ ಸೇರಿದನು

ಉದ್ಯಮಕ್ಕೆ ಬೇಕಾದ
ಅಕ್ರಮ ಅನ್ಯಾಯ ಅನೈತಿಕತೆ
ಭ್ರಷ್ಟಾಚಾರಗಳನ್ನು ಬೇಗನೆ
ಕರಗತಮಾಡಿಕೊಂಡನು

ಸಾವಿರ ಲಕ್ಷ ಗಳೆಲ್ಲಾ  ಅಲಕ್ಷ್ಯ
ಕೋಟಿಗಳ ಲೆಕ್ಕಾಚಾರ
ನೂರಾರು ಎಕರೆಗಳಷ್ಟು
ಜಮೀನು ಖರೀದಿಸಿದ್ದಾಯ್ತು
ಅಕ್ರಮಗಳ ಬೆನ್ನಟ್ಟಿ ಬಂದ
ನ್ಯಾಯಾಲಯದ ಜಾಮೀನು
ಪಡೆದಾಯ್ತು

ಪ್ರಕೃತಿಯ ವಿಕೋಪಕ್ಕೆ ಬಂಗಲೆ
ನೂರಾರು ಎಕರೆ ಜಮೀನು
ಕೊಚ್ಚಿ ಹೋಗಿತ್ತು ಭಯ ಆವರಿಸಿತ್ತು
ಸರಿ ತಪ್ಪುಗಳ ಮಾಡಿದ ಅಕ್ರಮಗಳ
ನೆನಪಾಗಿತ್ತು ಆದರೆ ಕಾಲ ಮಿಂಚಿತ್ತು
ಪ್ರಕೃತಿ ನ್ಯಾಯಾಲಯದಲ್ಲಿ ಜಾಮೀನು
ಸಿಗಲೇ ಇಲ್ಲ

ಎರಡು ದಿನ ಅನ್ನ ಆಹಾರವಿಲ್ಲದೆ
ಬಳಲಿದವನು ಮೂರನೇ ದಿನ
ಸಾಮಾನ್ಯ ನಿರಾಶ್ರಿತರ ಜೊತೆಗೆ
ತಟ್ಟೆ ಹಿಡಿದು ಕೈಯೊಡ್ಡಿದ್ದ


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

15 ಸೆಪ್ಟೆಂಬರ್ 2018

ಗಜ಼ಲ್46(ವಿದ್ಯೆಯೆ?)



                 *ಗಜ಼ಲ್46*

ತರಗತಿ‌ ಕೋಣೆ ಶಾಲೆಗಳು ಬದಲಾದರೆ ಅದು ವಿದ್ಯೆಯೆ
ಅಂಕದ ಆಟದಿ ಅಂಕಿ ಸಂಖ್ಯೆಗಳು   ಮೇಲಾದರೆ ಅದು ವಿದ್ಯೆಯೆ

ಎಲ್ಲೆಡೆ ಮೇಲೇಳುತಿಹವು ನಾಯಿಕೊಡೆಗಳು ಅರಿವಿನ ಹೆಸರಲಿ
ಪದವಿ ಪದಕ ಬಿರುದುಗಳನು  ಪಡೆದರೆ ಅದು ವಿದ್ಯೆಯೆ


ಸಂಸ್ಕಾರ ಸಂಸ್ಕೃತಿ ಮೌಲ್ಯಗಳು ಯಾರಿಗೂ ಬೇಕಿಲ್ಲ
ದಿವಿನಾದ ಬಟ್ಟೆ ಟೈ ಬೆಲ್ಟ್ ಶಾಲಾವಾಹನಗಳಿದ್ದರೆ ಅದು ವಿದ್ಯೆಯೆ

ಮಾತೃ ಪಿತೃ ಗುರುದೇವೋಭವ ಕೇವಲ ಹೇಳಲು ಕೇಳಲು
ವಯಸ್ಸಾದ ಅಪ್ಪ ಅಮ್ಮಂದಿರ ವೃದ್ದಾಶ್ರಮಕೆ ಸೇರಿಸಿದರೆ ಅದು ವಿದ್ದೆಯೆ

ಹಿಂದೊಮ್ಮೆ ಅನ್ನ ವೈದ್ಯೂಪಚಾರ ವಿದ್ಯೆ ಮಾರಾಟಕ್ಕಿರಲಿಲ್ಲ
ಲಕ್ಷ ಕೋಟಿ ಕೊಟ್ಟು ವಾಮಮಾರ್ಗದಿ ಪದವಿ ಪಡೆದರೆ ಅದು ವಿದ್ಯೆಯೆ

*ಸಿ. ಜಿ ವೆಂಕಟೇಶ್ವರ*
*ಗೌರಿಬಿದನೂರು*



14 ಸೆಪ್ಟೆಂಬರ್ 2018

ಹೈದರಾಬಾದ್ ಪ್ರವಾಸದ ನೆನಪು (ಲೇಖನ)

         

                 
ಏಕಾಂಗಿ ಪ್ರವಾಸ
2001 ನೇ ಇಸವಿ ನನ್ನ ಜೀವನದಲ್ಲಿ ಪ್ರಮುಖವಾದ ವರ್ಷ ಮದುವೆಯಾಗಿ ಆರು ತಿಂಗಳ ನಂತರ ಏಕಾಂಗಿಯಾಗಿ ಒಂದು ಪ್ರವಾಸ ಕೈಗೊಳ್ಳಲು  ಮನಸಾಗಿ ಆಂದ್ರಪ್ರದೇಶದ ಹೈದರಾಬಾದ್ ಕಡೆ ಪ್ರವಾಸ ಹೊರಟೆ
ಮನೆಯವರ ವಿರೋಧದ ನಡುವೆಯೇ ಬಸ್ ಹತ್ತಿ‌ ಕುಳಿತು ರಾತ್ರಿಯೆಲ್ಲಾ ಪ್ರಯಾಣದ ಬಳಿಕ ಹೈದರಾಬಾದ್ ತಲುಪಿದಾಗ ಮೊದಲಿಗೆ ನಾನು ಬೇರೆ ಜಾಗಕ್ಕೆ ಬಂದ ಅನುಭವ ಎಲ್ಲಿ ನೋಡಿದರೂ ತೆಲುಗು ಹಿಂದಿ ಭಾಷೆ ಕನ್ನಡ ಕಣ್ಮರೆಯಾಗಿ ಒಂದು ರೀತಿಯಲ್ಲಿ ನಾನು‌ಪರಕೀಯ ಆಗಿದ್ದೆ.
ಅಂತೂ ಹರುಕು ಮುರುಕು ಹಿಂದಿ ಮತ್ತು ಇಂಗ್ಲಿಷ್ ಮಾತನಾಡಿ ಸಿಟಿ‌ಬಸ್ ಹಿಡಿದು ಗೋಲ್ಕೊಂಡ ಪೊರ್ಟ್, ಅದಿಲ್ ಷಾಯಿ ಸಮಾದಿಗಳನ್ನು ನೋಡಿ‌ಅಲ್ಲಿನ ವಾಸ್ತುಶಿಲ್ಲ ಮತ್ತು ಕಲೆಯನ್ನು ಆಸ್ವಾದಿಸಿದೆನು ನನ್ನ ಸ್ನೇಹಿತ ಅಂಜಿನಪ್ಪ ನನಗೆ ಉಡುಗೊರೆಯಾಗಿ ಕೊಟ್ಟ ಕೊಡಾಕ್ ಕೆ 10 ರೋಲ್ ಕ್ಯಾಮರಾ ದಲ್ಲಿ ಅಲ್ಲಿನ ವಿವಿಧ ಚಿತ್ರಗಳನ್ನೂ ಸೆರೆಹಿಡಿದೆನು  .ಆ ವೇಳೆಗಾಗಲೇ ಹೊಟ್ಟೆ ಚುರುಗುಟ್ಟುವುದು‌ ತಿಳಿದು ಹೈದರಾಬಾದ್ ದಂ ಬಿರಿಯಾನಿ‌ ತಿಂದು .ಸಾಲಾರ್ ಜಂಗ್ ಮ್ಯೂಸಿಯಂ ಕಡೆ ಪ್ರಯಾಣ ಬೆಳೆಸಿದೆ  ಹೊರಗೆ .ಬಿಸಿಲಿನ ಧಗೆಯಿದ್ದರೂ ವಸ್ತು ಸಂಗ್ರಹಾಲಯದಲ್ಲಿ ತಂಪಾದ ವಾತಾವರಣದಲ್ಲಿ ಕಣ್ಣಿಗೂ  ಮನಸಿಗೂ ತಂಪಾಗುವ ಪುರಾತನ ಕಾಲದ ವಸ್ತುಗಳು .ವರ್ಣ ಚಿತ್ರ ಗಳು ಒಂದಕ್ಕೊಂದು ವಿಭಿನ್ನ ಪ್ರಪಂಚದಲ್ಲಿ ತೇಲಾಡಿಸಿದವು ಅದರಲ್ಲೂ ನನ್ನನು ಕಾಡಿದ ರಚನೆ ಎಂದರೆ "ಮುಸುಕುದಾರಿ ಮಹಿಳೆ  " ಅಮೃತ ಶಿಲೆಯ ಕೆತ್ತನೆ ಒಂದು ಹೆಣ್ಣು ತನ್ನ ಮೈಮೇಲೆ ತೆಳುವಾದ ಬಟ್ಟೆ ಹಾಕಿಕೊಂಡಿರುವಂತೆ ಕೆತ್ತನೆ ಮಾಡಿರುವುದು ನಿಜಕ್ಕೂ ಸುಂದರ ಮತ್ತು ಸೂಕ್ಷ ಕೆತ್ತನೆ .
ಅಂದು ಸಂಜೆಯಾಗುತ್ತಲೇ ನನಗೆ ತಿಳಿಯದ ಊರಿನಲ್ಲಿ ಎಲ್ಲಿ ತಂಗಬೇಕು ಎಂಬ  ಆತಂಕ ಉಂಟಾಯಿತು. ಲಾಡ್ಜ್ ಗಳಲ್ಲಿ ಎಂದೂ ಮಲಗಿದವನಲ್ಲ ಭಯದಿಂದಲೇ ಬಸ್ ಸ್ಟ್ಯಾಂಡ್ ನ ಡಾರ್ಮೆಂಟರಿಯಲ್ಲಿ ಉಳಿದುಕೊಂಡೆ ಹಗಲೆಲ್ಲಾ ಸುತ್ತಾಡಿ ಧಣಿದದ್ದರಿಂದ ಬೆಳಗಾಗಿದ್ದೇ ಗೊತ್ತಾಗಲಿಲ್ಲ .
ಎದ್ದು  ಪ್ರೆಶ್ಅಪ್ ಆಗಿ ತಿಂಡಿ ತಿಂದು ಸಿಟಿ ಬಸ್ ಹಿಡಿದು ಬಿರ್ಲಾ ಮಂದಿರಕ್ಕೆ ಹೋಗಿ ಶ್ರೀ ವೆಂಕಟೇಶ್ವರ ನ ದರ್ಶನ ಪಡೆದು ಅಲ್ಲೇ ಹತ್ತಿರವಿದ್ದ ಹುಸೇನ್ ಸಾಗರ್ ಲೇಕ್ ನೋಡಿ ಪೋಟೋ ಕ್ಲಿಕ್ ಮಾಡಿಕೊಂಡು .ಅಲ್ಲಿಂದ ರಾಮೋಜಿ ಫಿಲ್ಮ್ ಸಿಟಿಗೆ ಹೋದೆ
ಆ ಪಿಲ್ಮ್ ಸಿಟಿ ಒಳಗೆ ಹೋದ ನನಗೆ ಹೊಸ ಜಗತ್ತಿನಲ್ಲಿ ತೇಲಾಡಿದ ಅನುಭವ ಏನಿದೆ ಏನಿಲ್ಲ ಒಳ ಹೋಗುವಾಗ ಆ ಪ್ರದೇಶದಲ್ಲಿ ಆಗಿನ ಕಾಲಕ್ಕೆ 450 ದುಬಾರಿ ಪ್ರವೇಶ ಶುಲ್ಕ ಎನಿಸಿದರೂ  ಒಳಹೋದಂತೆ ಕೊಟ್ಟ ಹಣಕ್ಕೆ ಪೈಸಾವಸೂಲ್ ಸ್ಥಳ ಎಂದು ಮನದಲ್ಲಿ ಸಂತಸಗೊಂಡೆ .ಜಯಪುರದ ಹವಾ ಮಹಲ್ ನಿಂದ ಹಿಡಿದು ಕೃತಕ ಹಳ್ಳಿ, ಕೃತಕ ರೈಲ್ವೆ ನಿಲ್ದಾಣ, ಉದ್ಯಾನವನಗಳು ಅಲ್ಲಲ್ಲಿ ನಡೆಯುವ ವಿವಿಧ ಭಾಷೆಯ   ಪಿಲ್ಮ್ ಶೂಟಿಂಗ್ ರಿಯಲ್ ಸ್ಸಂಟ್ ಶೋ .ಒಂದಾ ಎರಡಾ ನಾನು ನನ್ನ ನೆ ಮರೆತು ಸಂತೋಷ ಅನುಭವಿಸುವಾಗ ಅವರ ಬಸ್ಸುಗಳು ನನ್ನ ಪುನಃ ಮುಖ್ಯ ದ್ವಾರದ ಕಡೆ ಕರೆದುಕೊಂಡು ಬಂದರು ಒಲ್ಲದ ಮನಸ್ಸಿನಿಂದ ರಾಮೋಜಿಗೆ ವಿದಾಯ ಹೇಳಿ ಸಿ‌ ಯು ಎಂದು ಬಂದೆ ಅದ್ಯಾವ ಗಳಿಗೆಯಲ್ಲಿ ಸಿ ಯು ಅಂದೆನೋ ದೇವರು ತಥಾಸ್ತು ಅಂದಿರಬೇಕು  ಅದರಂತೆ ರಾಮೋಜಿ ಪಿಲ್ಮ್ ಸಿಟಿ  ನೋಡಲು ಕುಟುಂಬ ,ಸ್ನೇಹಿತರು, ಶಾಲಾಮಕ್ಕಳ ಜೊತೆ  ನಾಲ್ಕು ಬಾರಿ ಹೋಗಿದ್ದೇನೆ ಆದರೆ ಮೊದಲ‌ ಸಲದ ಅನುಭವ ಅದ್ಬುತ ಎಷ್ಟು ಸಾರಿ ನೋಡಿದರೂ ಬೇಸರವಾಗದ ವಿಶ್ವ ಮಟ್ಟದ ಮನರಂಜನಾ ಪಾರ್ಕ್ ಮಾಡಿರುವ ರಾಮೋಜಿ ರಾವ್ ಬಗ್ಗೆ ಮನದಲ್ಲಿ ಗೌರವ ಭಾವನೆ ಮೂಡದಿರದು .
ಹೈದರಾಬಾದ್ ಬಿಟ್ಟು ಮಂತ್ರಾಲಯದ ಕಡೆಗೆ ಪ್ರಯಾಣ ಬೆಳೆಸಿ ಅಲ್ಲಿ ರಾತ್ರಿ ತಂಗಿ  ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು .ಬಸ್ಸಿನಲ್ಲಿ ಕುಳಿತು ಫಿಲಿಪ್ಸ್ ವಾಕ್ ಮನ್ ನಲ್ಲಿ ಪವನ್ ಕಲ್ಯಾಣ್ ಅಭಿನಯದ ಖುಷಿ ತೆಲುಗು ಚಿತ್ರದ ಹಾಡುಗಳನ್ನು ಪದೇ ಪದೇ ಕೇಳುತ್ತಾ  ಮನೆ ತಲುಪಿದೆ. ಮೊಬೈಲ್ ಇಲ್ಲದ ಆ ದಿನಗಳಲ್ಲಿ ಮೂರು ದಿನ ಮನೆಯವರ ಸಂಪರ್ಕ ಇರಲಿಲ್ಲ,  ನಾನು ಮನೆಗೆ ಬಂದಾಗ ಮನೆಯವರೆಲ್ಲರೂ ನಿಟ್ಟುಸಿರು ಬಿಟ್ಟು ಅಂತೂ ಮನೆಗೆ ಬಂದನೆಲ್ಲ ಎಂದು ಸಂತಸಪಟ್ಟರು .
"ಅಮ್ಮ ಮುಂದಿನ ವರ್ಷ ಒಬ್ಬನೆ ತಮಿಳುನಾಡಿಗೆ ಏಕಾಂಗಿ ಪ್ರವಾಸ ಮಾಡುವೆ" ಎಂದಾಗ " ಇವೆಲ್ಲ ಹುಚ್ಚಾಟ ಬೇಡ ಸುಮ್ನಿರಪ್ಪ " ಎಂಬ ಮಾತೃ ವಾಕ್ಯ ಪರಿಪಾಲಕನಾಗಿ ಇಂದಿಗೂ ಏಕಾಂಗಿ ಪ್ರವಾಸ ಮಾಡಿಲ್ಲ .ಅಮ್ಮ ಮತ್ತು ಮನೆಯವರು ಅನುಮತಿಸಿದರೆ ನಾಳೆಯೇ ಏಕಾಂಗಿ ಪ್ರವಾಸಕ್ಕೆ ಸಿದ್ದ.
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಸೆಪ್ಟೆಂಬರ್ 2018

ವಿನಾಯಕ ನಮ್ಮ ಕಾಪಾಡು( ಕವನ) ನನ್ನ ಬ್ಲಾಗ್ ನ 400 ನೇ ಪೋಸ್ಟ್ ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು


                           

                *ವಿನಾಯಕ ನಮ್ಮ ಕಾಪಾಡು*

*ವಿ* ಘ್ನ ವಿನಾಯಕ ಕಾಪಾಡು ನಮ್ಮನು
*ವಿ* ನಯದಿ ಬಾಗುವೆವು  ನಮ್ಮನರಸು
*ವಿ* ಧ ವಿಧ ಪೂಜೆ ಮಾಡುವೆವು
*ವಿ* ಜಯವ ನೀಡುತ  ರಕ್ಷಿಸು


*ನಾ* ನಾ ಹೆಸರಿನ ದೇವನು ನೀನು
*ನಾ* ಮವ ಭಜಿಸುವೆವು  ಕಾಪಾಡು
*ನಾ* ವಿಕ ನಾಗು ನಮ್ಮ ಬಾಳಿಗೆ
*ನಾ* ಡಿಗೆ ಒಳಿತು ನೀ ಮಾಡು


*ಯ* ತಿಗಳ ಪ್ರೀತಿಯ ಸ್ವಾಮಿಯೆ
*ಯ* ಶಸ್ಸನ್ನು ನೀಡಿ ಹಾರೈಸು
*ಯ* ಜಮಾನ ನಮಗೆ ನೀನಾಗು
*ಯ* ತ್ನ ಮಾಡುವೆವು ಆಶೀರ್ವದಿಸು


*ಕ* ವಿಜನ ವಂದಿತ  ಗಜವದನ
*ಕ* ಷ್ಟಗಳನ್ನು ನೀ ದೂಡು
*ಕ* ತ್ತಲು ನೀಗಿ ಬೆಳಕನು ನೀಡಿ
*ಕ* ರಿಮುಖ ನಮ್ಮನು  ಕಾಪಾಡು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಸರ್ವರಿಗೂ  ಗಣೇಶ ಚತುರ್ಥಿಯ ಶುಭಾಶಯಗಳು🙏🙏🙏*

12 ಸೆಪ್ಟೆಂಬರ್ 2018

ಗಜ಼ಲ್45 (ಯಾರಿಗೂ ಬೇಕಿಲ್ಲ)

             *ಗಜ಼ಲ್45*


ಪರಹಿತ ಚಿಂತನೆ ಮಾಡುವುದು  ಯಾರಿಗೂ ಬೇಕಿಲ್ಲ
ಆತ್ಮಸಾಕ್ಷಾತ್ಕಾರವೆಂಬ ವಿಸ್ಮಯ ಕಾಣುವುದು ಯಾರಿಗೂ ಬೇಕಿಲ್ಲ

ಕತ್ತಲಲಿ ನಮ್ಮ ನೆರಳು‌ ಕೂಡ ಕಾಣದು ಗಾಡಂಧಕಾರದಲಿರುವರು
ಬೆಳಕ ಕಾಣುವ ದಾರಿ ಹುಡುಕುವುದು   ಯಾರಿಗೂ ಬೇಕಿಲ್ಲ

ಅರಿಷಡ್ವರ್ಗದ ಬಂಧನದಲಿಹೆವು  ನಾವು
ಜ್ಞಾನ. ಕರ್ಮ ಭಕ್ತಿ ಮಾರ್ಗದಿ ನಡೆಯುವುದು  ಯಾರಿಗೂ ಬೇಕಿಲ್ಲ

ಸಾಲ ಮಾಡಿಯಾದರೂ ತುಪ್ಪ ತಿನ್ನಲು ಸಿದ್ದ
ಹಿಂದೆ ಮಾಡಿದ ಕರ್ಮಗಳ ಲೆಕ್ಕಹಾಕುವುದು  ಯಾರಿಗೂ ಬೇಕಿಲ್ಲ

ಪರರು ಅಧಮರು ಅನೀತಿವಂತರು ಕೆಟ್ಟವರು
ತನ್ನ ತಟ್ಟೆಯಲಿ ಸತ್ತು‌ ಬಿದ್ದಿಹ ಹೆಗ್ಗಣ ಎತ್ತಿಹಾಕುವುದು ಯಾರಿಗೂ ಬೇಕಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*