02 ಏಪ್ರಿಲ್ 2025

ಆಂತರಿಕ ಶಾಂತಿ ಹೊಂದುವುದು ಹೇಗೆ?


 


ಆಂತರಿಕ ಶಾಂತಿ ಹೊಂದುವುದು ಹೇಗೆ?


ಹೊರಗೆ ಅಶಾಂತಿಯ ವಾತಾವರಣವಿದ್ದರೂ ಸಾಧಕರು ತಮ್ಮ ಆಂತರಿಕ ಶಾಂತಿಯನ್ನು ಕಾಯ್ದುಕೊಂಡು ಸಂತಸದಿಂದ ಇರುವುದನ್ನು ಗಮನಿಸಿದ್ದೇವೆ.

ನಾವೂ  ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಲು  ಸಾಧ್ಯವಿದೆ. ಅದಕ್ಕೆ ನಮ್ಮ ಜೀವನದಲ್ಲಿ  ಅಲ್ಪ ಸ್ವಲ್ಪ  ಬದಲಾವಣೆ ಮಾಡಿಕೊಂಡರೆ ಸಾಕು.

 ನಮ್ಮ ಜೀವನದಲ್ಲಿ ಕೆಲ ವಿಷಕಾರಿ ಜನರಿರುತ್ತಾರೆ ಅವರು ಸರ್ವರಿಗೂ ವಿಷ ಕಕ್ಕುವುದೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿರುತ್ತಾರೆ ಅಂತವರಿಂದ ಆದಷ್ಟೂ ದೂರವಿರೋಣ.


ಕೆಲವೊಮ್ಮೆ ನಮ್ಮಲ್ಲಿ ನಕಾರಾತ್ಮಕ ಆಲೋಚನೆಗಳು ಮೂಡುವುದು ಸಹಜ ಇದರ ಜೊತೆಯಲ್ಲಿ ನಕಾರಾತ್ಮಕ ಆಲೋಚನೆ ಮಾಡುವರು ನಮ್ಮ ಸುತ್ತುವರೆದರೆ ಮುಗಿಯಿತು. ಇವರು ನಮ್ಮನ್ನು   ಎಂದಿಗೂ ಬೆಳೆಯಲು ಸಹಾಯ ಮಾಡುವುದಿಲ್ಲ. ಇಂಥವರಿಂದ ದೂರವಿರೋಣ.

ಜೀವನದಲ್ಲಿ ಕೆಲವೊಮ್ಮೆ ಸಂಘರ್ಷ ಮಾತಿನ ಚಕಮಕಿ ನಡೆಯುತ್ತದೆ. ನಮ್ಮ ಶಾಂತಿಗಾಗಿ  ಎಲ್ಲರೊಂದಿಗೆ  ಯುದ್ಧಕ್ಕೆ ಇಳಿಯುವುದನ್ನು ಕಡಿಮೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ.   ಪ್ರತಿಯೊಂದಕ್ಕೂ ಅನಗತ್ಯವಾಗಿ ನಮ್ಮ ಶಕ್ತಿ ವ್ಯಯಮಾಡುತ್ತಾ  ಪ್ರತಿಕ್ರಿಯೆಯನ್ನು ನೀಡುವ  ಅಗತ್ಯವಿಲ್ಲ.

ನಾವೇನು ರೋಬೋ ಅಥವಾ ಯಂತ್ರಗಳಲ್ಲ ನಮಗೂ ದಣಿವು ಸಹಜ ಅಂತಹ ಸಂದರ್ಭದಲ್ಲಿ ವಿಶ್ರಾಂತಿ ಪಡೆಯೋಣ. ಬಹಳ ದಣಿದಂತೆ ಅನಿಸಲು ಪ್ರಾರಂಭಿಸಿದಾಗ ರಜೆಯ ತೆಗದುಕೊಂಡು ರಿಪ್ರೆಶ್ ಆಗೋಣ. 

  ನಮಗಾಗಿ ಸಮಯವನ್ನು ಮಾಡಿಕೊಳ್ಳೋಣ. ಜನಜಂಗುಳಿಯಿಂದ ಮನಸ್ಸಿಗೆ ಕಿರಿಕಿರಿಯಾಗಿ ಅಶಾಂತಿಯೆನಿಸಿದರೆ ಒಂಟಿಯಾಗಿರುವುದು ಕೆಲವೊಮ್ಮೆ ಚಿಕಿತ್ಸೆಯೆಂದು ಭಾವಿಸಿ  ಒಂಟಿಯಾಗಿರಲು ಪ್ರಯತ್ನಿಸೋಣ  


ಅತಿಯಾದ ಸಾಮಾಜಿಕ ಮಾಧ್ಯಮಗಳ ಬಳಕೆ  ನಮ್ಮ ಶಾಂತಿಯುತ ಮನಸ್ಸನ್ನು ಕದಡಬಹುದು ಆದ್ದರಿಂದ ಅಗತ್ಯವಿರುವಾಗ ಮಾತ್ರ ಕಡಿಮೆ ಸಮಯ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಕಡಿವಾಣ ಹಾಕಿಕೊಳ್ಳೋಣ.ಮತ್ತು ಹೊಸ ಹವ್ಯಾಸಗಳು ಒತ್ತಡ ಕಡಿಮೆ ಮಾಡಿ ನಾವು ಸಂತಸದಿಂದ ಇರಲು ಪೂರಕವಾಗಿವೆ ಇಂತಹ ಉತ್ಪಾದಕ ಹವ್ಯಾಸಗಳನ್ನು ಹೆಚ್ಚು ರೂಪಿಸಿಕೊಳ್ಳೋಣ.

ಕೆಲವೊಮ್ಮೆ ಸಮಯ ಸಂದರ್ಭಕ್ಕೆ ಅನುಗುಣವಾಗಿ

ಬದಲಾವಣೆಗೆ ಹೊಂದಿಕೊಳ್ಳುವ ಗುಣವೂ ನಮ್ಮದಾಗಬೇಕು. 


ಹೀಗೆ ನಮ್ಮ ಸಂತಸ ಆಂತರಿಕ ಶಾಂತಿಗೆ ಬಹುತೇಕ ನಾವೇ ಕಾರಣರಾಗಿರುವುದರಿಂದ ಸಂತಸದಿಂದ ಬಾಳೋಣ ಆಂತರಿಕ ಶಾಂತಿ ಅನುಭವಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


27 ಮಾರ್ಚ್ 2025

ಅನುಭವಿ ಮಾರಾಟಗಾರ .ಹನಿಗವನ



 

ಅನುಭವಿ ಮಾರಾಟಗಾರ 

ಮಾರಾಟ ಪ್ರತಿನಿಧಿ ಹುದ್ದೆಯ
ಸಂದರ್ಶನದಲ್ಲಿ ಪ್ರಶ್ನೆ ಕೇಳಿದರು
ನಿನಗೆ ಮಾರಾಟದಲ್ಲಿ ಇರುವ 
ಅನುಭವವೇನು|
ಅವನು ಆತ್ಮವಿಶ್ವಾಸದಿಂದ  ಉತ್ತರಿಸಿದ
ನಾನೀಗಾಗಲೆ ನಮ್ಮ ಮನೆ, ಕಾರು, ಬೈಕ್ ಹಾಗೂ ಹೆಂಡತಿಯ ಒಡವೆ ಮಾರಿರುವೆನು||

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ರಂಗಪರಂಪರೆ ಬೆಂಬಲಿಸೋಣ. (ಇಂದು ವಿಶ್ವ ರಂಗ ಭೂಮಿ ದಿನ)


 


ರಂಗಪರಂಪರೆ ಬೆಂಬಲಿಸೋಣ.

(ಇಂದು ವಿಶ್ವ ರಂಗ ಭೂಮಿ ದಿನ)

ಇಂದಿನ ಮನರಂಜನೆ ಎಂದರೆ  ಸಿನಿಮಾ  ಮತ್ತು ಸಾಮಾಜಿಕ ಮಾಧ್ಯಮಗಳು ಎಂಬುದು ಸತ್ಯವಾದರೂ ನಾಟಕಗಳು ಅನಾದಿ ಕಾಲದಿಂದಲೂ ಮನರಂಜನೆ ನೀಡುತ್ತಾ ಬಂದಿವೆ. ರಂಗಭೂಮಿ ಇಂದಿಗೂ ಪ್ರಸ್ತುತ ಎಂಬುದನ್ನು ಈಗಲೂ ಹಮ್ಮಿಕೊಳ್ಳುತ್ತಿರುವ ಹಲವಾರು ನಾಟಕ ಪ್ರದರ್ಶನಗಳು ನಿರೂಪಿಸುತ್ತಿವೆ.

ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27 ರಂದು ಆಚರಿಸಲಾಗುತ್ತದೆ. ಪ್ರದರ್ಶನ ಕಲೆಗಳನ್ನು ಆಚರಿಸಲು ಮತ್ತು ಸಮಾಜದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಗಮನ ಸೆಳೆಯಲು ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ  1962ರಿಂದ  ಈ ದಿನವನ್ನು  ಆಚರಿಸಿಕೊಂಡು ಬರುತ್ತಿದೆ. 

ಪ್ರದರ್ಶನ ಕಲೆಗಳನ್ನು ಉತ್ತೇಜಿಸುವುದು. ಈ ದಿನಾಚರಣೆಯ  ಪ್ರಮುಖವಾದ ಉದ್ದೇಶ. ಇದರ ಜೊತೆಯಲ್ಲಿ ರಂಗಭೂಮಿಯು ಒಂದು ಕಲಾ ಪ್ರಕಾರವಾಗಿ ಮತ್ತು ಸಂಸ್ಕೃತಿ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ.ರಂಗಭೂಮಿ ಕಾರ್ಮಿಕರನ್ನು ಬೆಂಬಲಿಸುತ್ತಾ  ಪೋಷಕ ನಟರು, ನಿರ್ದೇಶಕರು, ಬರಹಗಾರರು ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡುವ ಇತರರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ದಿನವು ಪ್ರಪಂಚದಾದ್ಯಂತದ ರಂಗಭೂಮಿಗಳ ನಡುವೆ ವಿಚಾರಗಳು ಮತ್ತು ಅನುಭವಗಳ ವಿನಿಮಯವನ್ನು ಉತ್ತೇಜಿಸುತ್ತದೆ. ಜೊತೆಗೆ ವಿವಿಧ ನಾಟಕ ಸಂಪ್ರದಾಯಗಳು ಮತ್ತು ಶೈಲಿಗಳತ್ತ ಗಮನ ಸೆಳೆಯುತ್ತದೆ.

 ವಿಶ್ವ ರಂಗಭೂಮಿ ದಿನವು ರಂಗಭೂಮಿ ಪ್ರದರ್ಶನಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಜನರು ನಾಟಕಗಳಿಗೆ  ಭೇಟಿ ನೀಡಲು ಪ್ರೇರೇಪಿಸುತ್ತದೆ.

ಈ ದಿನದಂದು

 ಅನೇಕ ದೇಶಗಳು ರಂಗಭೂಮಿಗೆ ಮೀಸಲಾಗಿರುವ ವಿಶೇಷ ಪ್ರದರ್ಶನಗಳು, ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇವು ಸಾಮಾನ್ಯವಾಗಿ ಕಲೆಯ ಮಹತ್ವ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಎತ್ತಿ ತೋರಿಸುವ ಪ್ರದರ್ಶನಗಳಾಗಿವೆ.ಕಾರ್ಯಕ್ರಮಗಳು ಮತ್ತು ಉಪನ್ಯಾಸಗಳು. ರಂಗಭೂಮಿಗಳು ಮತ್ತು ಶಿಕ್ಷಣ ಸಂಸ್ಥೆಗಳು ರಂಗಭೂಮಿಯ ಕಲೆ ಮತ್ತು ಸಮಾಜದಲ್ಲಿ ಅದರ ಪಾತ್ರಕ್ಕೆ ಮೀಸಲಾದ ಉಪನ್ಯಾಸಗಳು, ಕಾರ್ಯಾಗಾರಗಳು ಮತ್ತು ಚರ್ಚೆಗಳನ್ನು ಆಯೋಜಿಸುತ್ತವೆ.ಪ್ರತಿ ವರ್ಷ, ರಂಗಭೂಮಿಯ ದಿನದಂದು ಜಗತ್ತಿನ ಪ್ರಸಿದ್ಧ ವ್ಯಕ್ತಿಯನ್ನು ಈ ದಿನಕ್ಕೆ ವಿಶೇಷ ಸಂದೇಶವನ್ನು ಬರೆಯಲು ಆಯ್ಕೆ ಮಾಡಲಾಗುತ್ತದೆ.ನಂತರ ಅದನ್ನು ಪ್ರಪಂಚದಾದ್ಯಂತ ವಿತರಿಸಲಾಗುತ್ತದೆ. ಈ ಸಂದೇಶಗಳು ಜನರನ್ನು ಪ್ರೇರೇಪಿಸುತ್ತವೆ ಮತ್ತು ರಂಗಭೂಮಿಯ ಮಹತ್ವವನ್ನು ಎತ್ತಿ ತೋರಿಸುತ್ತವೆ. 


  ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ವಿಶ್ವರಂಗಭೂಮಿ ದಿನದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು. ಕಾರ್ನಾಡರು ಆಗ  ಅಂತರರಾಷ್ಟ್ರೀಯ ಸಂಸ್ಥೆಯ ರಾಯಭಾರಿಯೂ ಆಗಿದ್ದರು. ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಅಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವಗಳನ್ನು ಆಚರಿಸಿದ್ದರು. 


2023ರ ವರ್ಷದ ರಂಗಭೂಮಿ ದಿನಕ್ಕೆ ಪ್ರಸಿದ್ಧ ನಾಟಕ ರಚನಕಾರ ನೊಬೆಲ್ ಪ್ರಶಸ್ತಿ ವಿಜೇತ ದರಿಯ ಫೋ ಅವರು ಸಂದೇಶ ನೀಡಿದ್ದರು.   ಅವರು ತಮ್ಮ  ಸಂದೇಶದಲ್ಲಿ “ಹೆಚ್ಚು ಹೆಚ್ಚು ಯುವಜನತೆ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೊಸ ಚಿಂತನೆಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಪೂರಕರಾಗಬೇಕಾಗಿದೆ” ಎಂದು ಕರೆ ನೀಡಿದ್ದರು.

2024 ರಲ್ಲಿ  'ಕಲೆಯೇ ಶಾಂತಿ' ಎಂಬ ಶೀರ್ಷಿಕೆಯ ಸಂದೇಶವನ್ನು ನಾರ್ವೇಜಿಯನ್ ಬರಹಗಾರ ಮತ್ತು ನಾಟಕಕಾರ ಜಾನ್ ಫೋಸ್ಸೆ ನೀಡಿದ್ದರು.

ಈ ವರ್ಷ ಗ್ರೀಸ್ ನ ಲೇಖಕ ,ನಾಟಕಕಾರ, ನಿರ್ದೇಶಕ

ಥಿಯೋಡೋರೋಸ್ ಟೆರ್ಜೊಪೌಲೋಸ್ ವಿಶ್ವ ರಂಗಭೂಮಿ ದಿನದ ಸಂದೇಶ ನೀಡಿದ್ದಾರೆ.

ವೃತ್ತಿ ರಂಗಭೂಮಿಯ ಕಲಾವಿದರು ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ.ಇದಕ್ಕೆ ಪೂರಕವಾಗಿ ಹವ್ಯಾಸಿ ರಂಗ ಕಲಾವಿದರು ಸಹ ರಂಗಭೂಮಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ.ಜಗದ ಎಲ್ಲಾ ಕಡೆ ನಾಟಕ ಚಟುವಟಿಕೆಗಳು ಇನ್ನೂ ಹೆಚ್ಚು ಸಕ್ರಿಯವಾಗಲಿ ನಮ್ಮ ಸಾಂಸ್ಕೃತಿಕ ಪರಂಪರೆ  ಅಭಿವೃದ್ಧಿಯಾಗಲಿ ಎಂದು ಆಶಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು







24 ಮಾರ್ಚ್ 2025

ಹಾಲಲ್ಲಾದರು ಹಾಕು....


 


ಯಂಗ್ಟಿ ೨ 

ಅದು ಕಳೆದ ಶತಮಾನದ ತೊಂಬತ್ತರ ದಶಕ ನಾನಾಗ ಹಿರಿಯೂರಿನ ಡಾ ರಾಧಾಕೃಷ್ಣನ್ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ ಸಿ ಎಚ್ ತರಬೇತಿ ಪಡೆಯುತ್ತಿದ್ದೆ.ಒಂದು ದಿನ ನಮ್ಮ ಕಾಲೇಜಿನ  ಕಾರ್ಯದರ್ಶಿಗಳಾದ  ವೀರಕರಿಯಪ್ಪನವರು ನಾನು ಮತ್ತು ನನ್ನ ಟಿ ಸಿ ಹೆಚ್ ಸಹಪಾಠಿಗಳನ್ನು ಕಾರ್ಯಕ್ರಮವೊಂದಕ್ಮೆ ಕರೆದುಕೊಂಡು ಹೋದರು.ಆಗ ಸಚಿವರಾಗಿದ್ಸ ಕೆ ಎಚ್ ರಂಗನಾಥ ರವರ ಅಧ್ಯಕ್ಷತೆಯ ಕಾರ್ಯಕ್ರಮ ಅದು ಮೊದಲ ಬಾರಿಗೆ ಸಚಿವರೊಬ್ವರನ್ನು ಹತ್ತಿರದಿಂದ ನೋಡಿದ್ದೆ.ಕಾರ್ಯಕ್ರಮ ಆರಂಭದ ಮೂರು ನಿಮಿಷ ಮೊದಲು ವೆಂಕಟೇಶ್ ನೀನು ಪ್ರಾರ್ಥನೆ ಮಾಡಬೇಕು ಅಂದು ಬಿಟ್ಟರು ನಮ್ಮ ಕಾರ್ಯದರ್ಶಿ. ಸರ್ ನಾನು ಪ್ರಿಪೇರ್ ಆಗಿಲ್ಲ ಎಂದರೂ "ಹಾಡ ನೀನ್  ಹಾಡ್ತೀಯ " ಅಂತ ಧೈರ್ಯ ತುಂಬಿದರು.ಅಂದು ನಾನು ಹಾಡಿದ ಹಾಡು" ಹಾಲಲ್ಲಾದರು ಹಾಕು...ನೀರಲ್ಲಾದರು ಹಾಕು ರಾಘವೇಂದ್ರ..." ಗೀತೆ ಕಾರ್ಯಕ್ರಮದ ಕೊನೆಯಲ್ಲಿ ಮಾನ್ಯ ಮಂತ್ರಿಗಳು ಹತ್ತಿರ ಕರೆದು ಚೆನ್ನಾಗಿ ಹಾಡಿದೆ ಕಣೋ ಅಂದರು. ಮಂತ್ರಿಗಳಾದ ರಂಗನಾಥ್ ಸರ್ ಈಗ ನಮ್ಮಂದಿಗಿಲ್ಲ  ಆ ಸವಿನೆನಪುಗಳು ಸದಾ ನನ್ನೊಂದಿವೆ. ನಿನ್ನೆ ಸರಿಗಮಪ ಕಾರ್ಯಕ್ರಮದಲ್ಲಿ ಸಹೋದರಿಯರಿಬ್ಬರು ಅದೇ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಅಣ್ಣಾವ್ರಿಗೆ ಡೆಡಿಕೇಟ್ ಮಾಡಿದಾಗ ನನ್ನ ಸವಿನೆನಪು  ಮತ್ತೆ ಮರುಕಳಿಸಿತು.


#sihijeeviVenkateshwara 

Hit Songs #kannadasongs #songs #songstrending Saregama Zee Kannada #rajkukumar

23 ಮಾರ್ಚ್ 2025

ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು

 


 ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

ರಜತ್ ಪಾಟಿದಾರ್ 16 ಎಸೆತಗಳಲ್ಲಿ 34 ರನ್ ಗಳಿಸಿ ವೈಭವ್ ಅರೋರಾಗೆ ವಿಕೆಟ್ ಒಪ್ಪಿಸಿದರು. ಆದರೆ RCB ಚೇಸಿಂಗ್ ಮೇಲೆ ಸಂಪೂರ್ಣ ನಿಯಂತ್ರಣದಲ್ಲಿ ಮುಂದುವರೆದು. ವಿರಾಟ್ ಕೊಹ್ಲಿ ಉತ್ತಮವಾಗಿ ಆಡಿ  ಅರ್ಧಶತಕದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರವಾಗಿರಿಸುತ್ತಾ ಮುನ್ನಡೆಸಿದರು.

ಫಿಲ್ ಸಾಲ್ಟ್ 31 ಎಸೆತಗಳಲ್ಲಿ 56 ರನ್ ಗಳಿಸಿ ಅಬ್ಬರದ ಬ್ಯಾಟಿಂಗ್ ಮಾಡಿ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಅಜೇಯ ಅರ್ಧಶತಕ ಗಳಿಸಿದ  ವಿರಾಟ್ ಕೊಹ್ಲಿ ಅವರು  175 ರನ್‌ಗಳ ಗುರಿ ಏನೇನೂ ಅಲ್ಲ ಅಂತ ಬೇಗನೆ ಪಂದ್ಯ  ಗೆದ್ದು ನಾವೆಲ್ಲರೂ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಲು ಸಹಕರಿಸಿದರು.

  ಇಷ್ಟೆಲ್ಲಾ ಆದ ಮೇಲೂ ನಮ್ಮನ್ನು ಕಾಡುವ ಪ್ರಶ್ನೆ ಈ ಸಲನಾದ್ರೂ ಕಪ್ ನಮ್ದಾಗುತ್ತಾ?

ಕಾದು ನೋಡೋಣ...

ನಿಮ್ಮ

ಸಿಹಿಜೀವಿ ವೆಂಕಟೇಶ್ವರ