23 ಮಾರ್ಚ್ 2025

ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು

 


 ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

ರಜತ್ ಪಾಟಿದಾರ್ 16 ಎಸೆತಗಳಲ್ಲಿ 34 ರನ್ ಗಳಿಸಿ ವೈಭವ್ ಅರೋರಾಗೆ ವಿಕೆಟ್ ಒಪ್ಪಿಸಿದರು. ಆದರೆ RCB ಚೇಸಿಂಗ್ ಮೇಲೆ ಸಂಪೂರ್ಣ ನಿಯಂತ್ರಣದಲ್ಲಿ ಮುಂದುವರೆದು. ವಿರಾಟ್ ಕೊಹ್ಲಿ ಉತ್ತಮವಾಗಿ ಆಡಿ  ಅರ್ಧಶತಕದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರವಾಗಿರಿಸುತ್ತಾ ಮುನ್ನಡೆಸಿದರು.

ಫಿಲ್ ಸಾಲ್ಟ್ 31 ಎಸೆತಗಳಲ್ಲಿ 56 ರನ್ ಗಳಿಸಿ ಅಬ್ಬರದ ಬ್ಯಾಟಿಂಗ್ ಮಾಡಿ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಅಜೇಯ ಅರ್ಧಶತಕ ಗಳಿಸಿದ  ವಿರಾಟ್ ಕೊಹ್ಲಿ ಅವರು  175 ರನ್‌ಗಳ ಗುರಿ ಏನೇನೂ ಅಲ್ಲ ಅಂತ ಬೇಗನೆ ಪಂದ್ಯ  ಗೆದ್ದು ನಾವೆಲ್ಲರೂ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಲು ಸಹಕರಿಸಿದರು.

  ಇಷ್ಟೆಲ್ಲಾ ಆದ ಮೇಲೂ ನಮ್ಮನ್ನು ಕಾಡುವ ಪ್ರಶ್ನೆ ಈ ಸಲನಾದ್ರೂ ಕಪ್ ನಮ್ದಾಗುತ್ತಾ?

ಕಾದು ನೋಡೋಣ...

ನಿಮ್ಮ

ಸಿಹಿಜೀವಿ ವೆಂಕಟೇಶ್ವರ


ಹವಾಮಾನ ದಿನ


 



ಇಂದು ಹವಾಮಾನ ದಿನ.ಬಹಳಷ್ಟು ಜನ ಹವಾಮಾನ ಮತ್ತು ವಾಯುಗುಣ ಎರಡನ್ನೂ ಒಂದೇ ಅರ್ಥದಲ್ಲಿ ಬಳಸುತ್ತಾರೆ. ಇದು ತಪ್ಪು ಹವಾಮಾನ ದಿನನಿತ್ಯದ ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ಸೂಚಿಸಿದರೆ ವಾಯುಗುಣ ದೀರ್ಘಕಾಲದ ಹವಾಮಾನದ ಮೊತ್ತವಾಗಿದೆ.

ಹವಾಮಾನವನ್ನು ಕೆಲವರು "ಅವಮಾನ" ಎಂದು ಅವಮಾನ ಮಾಡುವುದೂ ಉಂಟು.

ಹವಾಮಾನದ ದಿನದ  ಮಹತ್ವವನ್ನು ಹೀಗೇ ಹೇಳಬಹುದು.

  ಹವಾಮಾನದ ಅರಿವು ಮೂಡಿಸುವುದು. ಹವಾಮಾನದ ಬದಲಾವಣೆಗಳು, ಅದರ ಪರಿಣಾಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ.

    ವಿಶೇಷವಾಗಿ, ರೈತರು, ಮೀನುಗಾರರು ಮತ್ತು ಇತರ ಹವಾಮಾನ-ಅವಲಂಬಿತ ವೃತ್ತಿಗಳಲ್ಲಿರುವವರಿಗೆ ಇದು ಬಹಳ ಮುಖ್ಯ. ಹವಾಮಾನ ಬದಲಾವಣೆಯು ಪರಿಸರದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸುವುದು.

    ಪರಿಸರವನ್ನು ರಕ್ಷಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುವುದು.

 ಪ್ರಕೃತಿ ವಿಕೋಪಗಳಾದ ಪ್ರವಾಹ, ಬರ, ಬಿರುಗಾಳಿ ಇತ್ಯಾದಿಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಲು ಸಹಾಯ ಮಾಡುವುದು. ಈ ಸಂದರ್ಭಗಳಲ್ಲಿ ಸುರಕ್ಷಿತವಾಗಿರುವುದು ಹೇಗೆ ಎಂದು ಜನರಿಗೆ ತಿಳಿಸುವುದು.

    ಹವಾಮಾನದ ವೈಜ್ಞಾನಿಕ ಅಂಶಗಳ ಬಗ್ಗೆ ಜನರಿಗೆ ತಿಳಿಸುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.

    ಹವಾಮಾನದ ಬಗ್ಗೆ ಸಂಶೋಧನೆ ನಡೆಸಲು ಪ್ರೇರೇಪಿಸುವುದು.

    ಹವಾಮಾನದ ಬಗ್ಗೆ ಚರ್ಚಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಸಮುದಾಯದ ಸಹಭಾಗಿತ್ವವನ್ನು ಪ್ರೋತ್ಸಾಹಿಸುವುದು. ಇದು ಹವಾಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಹವಾಮಾನ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಲ್ಲ, ಬದಲಿಗೆ ಹವಾಮಾನದ ಬಗ್ಗೆ ನಿರಂತರವಾಗಿ ಕಲಿಯಲು ಮತ್ತು ಜಾಗರೂಕರಾಗಿರಲು ಪ್ರೇರೇಪಿಸುವ ಒಂದು ಅವಕಾಶ.


ನಿಮ್ಮ 

ಸಿಹಿಜೀವಿ ವೆಂಕಟೇಶ್ವರ


ಆಸ್ತಿಕರ ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.



 ಆಸ್ತಿಕರ  ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.


ತುಮಕೂರಿನಿಂದ ರಾಮನಗರ ತಲುಪಿ ಅಲ್ಲಿನ ಹೈವೆ ಪಕ್ಕದ ಕಾಮತ್ ಹೋಟೆಲ್ ‌ನಲ್ಲಿ ತಿಂಡಿ ತಿಂದು 

ಮಗಳನ್ನು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ ದಿನ ಅಲ್ಲಿಂದ ಹದಿಮೂರು ಕಿಲೋಮೀಟರ್ ದೂರವಿರುವ ಎಸ್ ಆರ್ ಎಸ್ ಬೆಟ್ಟ ನೋಡಲು ಕಾರ್ ನಲ್ಲಿ ಹೊರಟೆವು.

ಶ್ರೀ ರೇವಣ್ಣ ಸಿದ್ದೇಶ್ವರ ಅಥವಾ  SRS ಬೆಟ್ಟಗಳು ಎಂದು ಕರೆಯಲ್ಪಡುವ  ಸುಂದರವಾದ ಬೆಟ್ಟ ಶ್ರೇಣಿಯು ರಾಮನಗರದಲ್ಲಿರುವ ಅತ್ಯಂತ ಪ್ರಸಿದ್ಧ ಸಾಹಸಮಯ ಸ್ಥಳಗಳಲ್ಲಿ ಒಂದಾಗಿದೆ.ಇದು ಧಾರ್ಮಿಕ ಪ್ರಸಿದ್ಧ ಸ್ಥಳವೂ ಹೌದು.  ವಾರಾಂತ್ಯದ ವಿಹಾರಮಾಡಲು ಚಾರಣಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. 

ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ 12.30 ಆಗಿತ್ತು.ಬಿಸಿಲಲ್ಲಿ ಬೆಟ್ಟ ಹತ್ತಬೇಕೋ ಬೇಡವೋ ಎಂಬ ಗೊಂದಲದಲ್ಲೆ ನಿಧಾನವಾಗಿ ಬೆಟ್ಟ ಏರಲು ತೀರ್ಮಾನಕ್ಕೆ ಬಂದೆವು.

ಬೆಟ್ಟ ಹತ್ತುವಾಗ ನಮಗೆ ಸಿಗುವುದು ಭೀಮೇಶ್ವರ ದೇವಾಲಯ.

ಪಾಂಡವರು ಅಜ್ಞಾತವಾಸದಲ್ಲಿರುವಾಗ ಈ ಬೆಟ್ಟದಲ್ಲಿ ಕೆಲ ಕಾಲ ತಂಗಿದ್ದು ಆ ಸಂದರ್ಭದಲ್ಲಿ ಬೆಟ್ಟದ ಮದ್ಯಭಾಗದಲ್ಲಿ ಭೀಮಸೇನನಿಂದ ಸ್ಥಾಪಿಸಿದ ಶಿವಲಿಂಗವಿದ್ದು ಇಂದು ಅದೇ ಭೀಮೇಶ್ವರ ದೇವಾಲಯವಾಗಿ ಪ್ರಸಿದ್ದಿಯಾಗಿದೆ. ನಾವು ಅಲ್ಲಿಗೆ ಹೋದಾಗ ದೇವಾಲಯ ಮುಚ್ಚಿತ್ತು.ಹೊರಗಿನಿಂದ ಕೈ ಮುಗಿದು ಬೆಟ್ಟ ಏರಲು ಮುಂದೆ ಸಾಗಿದೆವು. ಅಲ್ಲಲ್ಲಿ ವಾನರ ಸೇನೆ ನಮಗೆ ಸ್ವಾಗತ ಕೋರುತ್ತಾ ನಮ್ಮ ಕೈಯಲ್ಲಿರುವ ತಿನಿಸುಗಳ ಕಡೆ ಹೆಚ್ಚು ಗಮನ ಹರಿಸಿ ಮುಲಾಜಿಲ್ಲದೆ ಕಿತ್ತುಕೊಂಡು ಇದು ನಮ್ದೇ  ಎಂದು ನಮ್ಮ ಮುಂದೆಯೇ ತಿನ್ನುತ್ತಿದ್ದವು.


‌ಬೆಟ್ಟ ಏರಲು ಬಿಸಿಲು ಮಳೆಯಿಂದ ಭಕ್ತರ ರಕ್ಷಿಸಲು ಚಾವಣಿಯ ವ್ಯವಸ್ಥೆ ಮಾಡಿದ್ದರಿಂದ ಬೆಟ್ಟ ಏರಲು ಕಷ್ಟ ಆಗಲಿಲ್ಲ. ಅಲ್ಲಲ್ಲಿ ಬಹಳ ಕಡಿದಾದ ಮೆಟ್ಟಿಲು ಹತ್ತುವಾಗ ಸ್ವಲ್ಪ ಬೆವರು ಬಂದು ಏದುಸಿರು ಬಿಡುತ್ತಾ ಹತ್ತಿದೆವು.ಮೇಲೆ ಹೋದಂತೆ ಕೆರೆಗಳು, ತೋಟಗಳು ಸಣ್ಣ ಪುಟ್ಟ ಗುಡ್ಡಗಳು ಬಹಳ ಸುಂದರವಾಗಿ ಕಂಡವು.ದೂರದಲ್ಲಿ ರಾಮನಗರದ ಕೆಲ ಕಟ್ಟಡಗಳು ಸಹ ಕಂಡವು.ಬೆಟ್ಟದ ಮೇಲೇರಿ ಪ್ರಕೃತಿಯ ಸೌಂದರ್ಯವನ್ನು ನಮ್ಮ ಕಣ್ಣುಗಳಲ್ಲಿ ಹಾಗೂ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದೆ.ಮೊಬೈಲ್ ನೆಟ್ವರ್ಕ್ ಚೆನ್ನಾಗಿದ್ದರಿಂದ ನಮ್ಮ ಮುಖಪುಟ  ಬಂಧುಗಳಿಗೆ ಲೈವ್ ನಲ್ಲಿ ಎಸ್ ಆರ್ ಎಸ್ ಸೌಂದರ್ಯ ತೋರಿಸಿದೆ.

ಬೆಟ್ಟದ ತುದಿಯಿಂದ ಬಲಕ್ಕೆ ತಿರುಗಿ ನೂರು ಮೀಟರ್ ಕೆಳಗಿಳಿದರೆ  ರೇವಣ ಸಿದ್ದೇಶ್ವರ ದೇವಾಲಯ ತಲುಪಬಹುದು. ರೇವಣ ಸಿದ್ದೇಶ್ವರ ರವರು   ದಿವ್ಯ ತಪಸ್ಸನ್ನು ಮಾಡಿ ಲಿಂಗದ ರೂಪದಲ್ಲಿ ಇಲ್ಲಿ ನೆಲೆನಿಂತಿದ್ದಾರೆ.   ಅರ್ಧ ಅಡಿ ಎತ್ತರದ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ ಉದ್ಬವ ಶಿವಲಿಂಗ ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯದ ಸಮೀಪ ಮೊರೆ ಬಸವನ ವಿಗ್ರಹ ಹಾಗೂ ಎಂದೂ ಬತ್ತದ ದೊಣೆ ಇದೆ. ಬುಡದಲ್ಲಿ ರೇಣುಕಾಂಬ ಹಾಗೂ ವೀರಭದ್ರೇಶ್ವರ ದೇವಾಲಯಗಳಿವೆ.


ದೇವರ ದರ್ಶನ ಪಡೆದು ಪ್ರಸಾದ ಸೇವಿಸಿ ಬೆಟ್ಟ ಇಳಿಯುವಾಗ ಅಲ್ಲಲ್ಲಿ ವಿಶ್ರಾಂತಿ ಪಡೆದು ಕೊನೆಗೂ ಬೆಟ್ಟ ಇಳಿದು ಕಾರ್ ಹತ್ತುವಾಗ  ಹೊಟ್ಟೆ ತಾಳ ಹಾಕುತ್ತಿತ್ತು.ರಾಮನಗರಕ್ಕೆ ಹಿಂತಿರುಗುವಾಗ ಮಾರ್ಗ ಮಧ್ಯದ ಹೋಟೆಲ್ ನಲ್ಲಿ ಊಟ ಮಾಡಿ ಮನೆಯ ಕಡೆ ಪಯಣ ಬೆಳೆಸಿದೆವು.

ಒಂದು ದಿನದ ಪ್ರವಾಸ, ಚಾರಣ ಮಾಡುವವರಿಗೆ ಎಸ್ ಆರ್ ಎಸ್ ಬೆಟ್ಟ ಬಹಳ ಸುಂದರ ಸ್ಥಳ ನೀವು ಒಮ್ಮೆ ಹೋಗಿ ಬನ್ನಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


.

21 ಮಾರ್ಚ್ 2025

ವಿಶ್ವ ಕವಿತಾ ದಿನದ ಪ್ರಯುಕ್ತ ಒಂದು ಹಾಸ್ಯ ಹನಿಗವ‌ನ


 


ವಿಶ್ವ ಕವಿತಾ ದಿನದ ಪ್ರಯುಕ್ತ ಒಂದು ಹಾಸ್ಯ ಹನಿಗವ‌ನ 


ನೆನಪು.


ಗೆಳೆಯ ಕೇಳಿದ ನೆನಪಿದೆಯಾ

ನಿನಗೆ, ನಾಕನೇ ತರಗತಿಯಲ್ಲಿ

ನಮ್ಮ ಜೊತೆಯಲ್ಲಿ ಓದಿದ ಕೋಮಲ|

ಅವನು ಉತ್ತರಿಸಿದ ಅದೆಲ್ಲಾ

ನೆನಪಿರುವ ನಿನಗೆ ಏಕೆ ನೆನಪಿಲ್ಲ?

ಕಳೆದ ತಿಂಗಳು  ನನ್ನಿಂದ ಪಡೆದ ಐನೂರು ರೂಪಾಯಿ ಸಾಲ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು






20 ಮಾರ್ಚ್ 2025

ಬಾಗ್ಡೋಗ್ರಾ ವಿಮಾನ ನಿಲ್ದಾಣ.

 ಭೂತಾನ್ ಪ್ರವಾಸ 

ಬಾಗ್ಡೋಗ್ರಾ ವಿಮಾನ ನಿಲ್ದಾಣ.




ಬಾಗ್ಡೋಗ್ರಾ ವಿಮಾನ ನಿಲ್ದಾಣ.    ಹೌದು ನನಗೂ ಮೊದಲು ಉಚ್ಚರಿಸಲು ಕಷ್ಟವಾದ ಹೆಸರು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ ಹೊರಟ ನಮ್ಮ ಆಕಾಸ ಏರ್ಲೈನ್ ಪಶ್ಚಿಮ ಬಂಗಾಳದ  ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮುನ್ನ ಸಾವಿರಾರು ಕಿಲೋಮೀಟರ್ ಪಯಣ ಮಾಡಿದ್ದೆವು. ಭೂತಾನ್ ಪ್ರವಾಸ ಕೈಗೊಳ್ಳಲು ನಾವು ಈ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಹಸಿಮರ ಪುಟ್ಶಿಲಾಂಗ್ ಮೂಲಕ ಭೂತಾನ್ ಪ್ರವೇಶ ಮಾಡಲು ಪ್ಲಾನ್ ಮಾಡಿ ಹೊರಟಿದ್ದೆವು. ಬೆಳಗಿನ 8 ಗಂಟೆಗೆ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ನಾವು ಲ್ಯಾಂಡ್ ಆಗುತ್ತೇವೆ.ವಿಮಾನ ನಿಲ್ದಾಣದಲ್ಲಿ ಪೋಟೋ ವೀಡಿಯೋ ಮಾಡಬೇಡಿ ಎಂದು ಗಗನ ಸಖಿ ಹೇಳಿದರು.


ಬಾಗ್ಡೋಗ್ರಾ ವಿಮಾನ ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಗರಕ್ಕೆ ಸೇವೆ ಸಲ್ಲಿಸುವ ಕಸ್ಟಮ್ಸ್ ವಿಮಾನ ನಿಲ್ದಾಣವಾಗಿದೆ. ಇದು  ಭಾರತೀಯ ವಾಯುಪಡೆಯ ಬಾಗ್ಡೋಗ್ರಾ ವಾಯುಪಡೆ ನಿಲ್ದಾಣದಲ್ಲಿ ನಾಗರಿಕ ಎನ್ಕ್ಲೇವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಡಾರ್ಜಿಲಿಂಗ್, ಗ್ಯಾಂಗ್ಟಾಕ್, ಕುರ್ಸಿಯೊಂಗ್, ಕಾಲಿಂಪಾಂಗ್, ಮಿರಿಕ್ ಮತ್ತು ಉತ್ತರ ಬಂಗಾಳ ಪ್ರದೇಶದ ಇತರ ಭಾಗಗಳು ಮತ್ತು ಈಶಾನ್ಯ ಬಿಹಾರದ ಗಿರಿಧಾಮಗಳಿಗೆ ಪ್ರವೇಶ ದ್ವಾರವಾಗಿದೆ. ಭಾರತ ಸರ್ಕಾರವು 2002 ರಲ್ಲಿ ಈ   ವಿಮಾನ ನಿಲ್ದಾಣಕ್ಕೆ ಸೀಮಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನವನ್ನು ನೀಡಿದೆ.  ಬ್ಯಾಂಕಾಕ್-ಸುವರ್ಣಭೂಮಿ ಮತ್ತು ಪಾರೋಗೆ ಸೀಮಿತ ಅಂತರರಾಷ್ಟ್ರೀಯ ಕಾರ್ಯಾಚರಣೆಗಳೊಂದಿಗೆ  ಇದು ಪಶ್ಚಿಮ ಬಂಗಾಳದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.

 ಹಾಗೂ ಭಾರತದ 17 ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ. ಇದು ವಾಯುಯಾನ ಟರ್ಬೈನ್ ಇಂಧನದ ಮೇಲೆ ಶೂನ್ಯ ಮಾರಾಟ ತೆರಿಗೆಯನ್ನು ಹೊಂದಿರುವ ಭಾರತದ ಕೆಲವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.  ಈ ವಿಮಾನ ನಿಲ್ದಾಣವು 13 ವಿಮಾನ ನಿಲ್ದಾಣಗಳಿಗೆ ಮಾರ್ಗಗಳನ್ನು ಹೊಂದಿದೆ ಮತ್ತು 3 ದೇಶಗಳಿಗೆ ಭಾರತ , ಭೂತಾನ್ ಮತ್ತು ಥೈಲ್ಯಾಂಡ್ ಸಂಪರ್ಕ ಕಲ್ಪಿಸುತ್ತದೆ.  

ವಿಮಾನ ನಿಲ್ದಾಣ ತಲುಪಿ ಅಲ್ಲೇ ಪ್ರೇಶ್ ಅಪ್ ಆಗಿ ಹೊರಬಂದ ನಮ್ಮ ತಂಡವನ್ನು ನಮ್ಮ ಟೂರ್ ಮೇನೇಜರ್ ಪ್ರಕಾಶ್ ಸ್ವಾಗತಿಸಿ ತಿನ್ನಲು ಪುರಿ ಮತ್ತು ಸಾಗು ಕೊಟ್ಟರು.ಮುದ್ದೆ ಅನ್ನ ತಿನ್ನುವ ನಮಗೆ ಪುರಿ ಸಾಗು‌ ಅಷ್ಟು ‌ರುಚಿಸಲಿಲ್ಲ. ನಮಗಾಗಿ ಸಿದ್ದವಾಗಿದ್ದ ಎರಡು ಮಿನಿ ಬಸ್ ಏರಿ ಜೈಗಾನ್ ಕಡೆ ಪಯಣ ಮುಂದುವರೆಸಿದೆವು.