23 ಫೆಬ್ರವರಿ 2025

ಶತೃಗಳ ತಲೆ ತೆಗೆಯುವ ಬದಲಿಗೆ ನಮ್ಮ ತಲೆಯಿಂದ ಅವರನ್ನು ತೆಗೆಯೋಣ.


 


ಶತೃಗಳ ತಲೆ ತೆಗೆಯುವ ಬದಲಿಗೆ 

ನಮ್ಮ ತಲೆಯಿಂದ ಅವರನ್ನು ತೆಗೆಯೋಣ.


ಮೊನ್ನೆ ಮಕ್ಕಳಿಗೆ ಶಾಲಾ ಪ್ರಾರ್ಥನೆಯ ಅವಧಿಯಲ್ಲಿ ಪತ್ರಿಕೆಯನ್ನು ಓದಿಸುವಾಗ ಅಂದಿನ ಸುಭಾಷಿತ ನನ್ನನ್ನು ಬಹಳ ಆಕರ್ಷಿಸಿತು ಅದು ಹೀಗಿತ್ತು.

"ನಮ್ಮ ಶತ್ರುವಿನ ಬಗ್ಗೆ ಸೇಡು ತೀರಿಸಿಕೊಳ್ಳಬೇಕು ಎಂದು ನಿಮಗನಿಸಿದರೆ ಶತೃವಿನ   ತಲೆ ತೆಗೆಯ ಬೇಕಿಲ್ಲ.ಅವರನ್ನು ನಮ್ಮ ತಲೆಯಿಂದ ತೆಗೆದರೆ ಸಾಕು" ಹೌದಲ್ಲವಾ? ಇದರ ಬಗ್ಗೆ ಮಕ್ಕಳಿಗೆ ಬಿಡಿಸಿ ಹೇಳಿದೆ.ಇದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಗೆಳೆಯರೊಬ್ಬರು ಕಳಿಸಿದ ಸಂದೇಶ ಪೂರಕವಾಗಿದೆ.

ಜೀವನದಲ್ಲಿ ಕೆಲವರನ್ನು ನಾವೇ ಮೊದಲು ಕ್ಷಮಿಸಿಬಿಡಬೇಕು.

ಅವರು ಕ್ಷಮೆಗೆ ಅರ್ಹರು ಎಂದಾಗಲೀ, ಅವರು ಮಾಡಿದ ತಪ್ಪು ಕ್ಷುಲ್ಲಕ ಎಂದಾಗಲೀ ಅಲ್ಲ.

ಅವರು ಕ್ಷಮೆಗೆ ಅರ್ಹರು ಎಂಬುದಕ್ಕಿಂತ ನಮ್ಮ ಮನಃಶಾಂತಿ, ನೆಮ್ಮದಿ, ಸಮಾಧಾನ ಬಹಳ ಮುಖ್ಯ.

ಒಮ್ಮೆ ಅಂಥವರನ್ನು ಕ್ಷಮಿಸಿಬಿಟ್ಟರೆ ಅವರು ತಮ್ಮ ಪಾಡಿಗೆ ಹೋಗುತ್ತಾರೆ. ನಮ್ಮ ಪಾಡಿಗೆ ನಾವಿರಬಹುದು.

ಒಂದು ವೇಳೆ ಕ್ಷಮಿಸಲಿಲ್ಲ ಎಂದುಕೊಳ್ಳಿ. ಅವರ ವಿರುದ್ಧ ಇನ್ನೂ ಹಗೆ, ವೈರತ್ವ ಮುಂದುವರಿಸಿದರೆ ಏನಾಗುವುದೆಂದರೆ ನಾವು ಅವರ ಬಗ್ಗೆ ಅನಗತ್ಯ ಯೋಚಿಸಬೇಕಾಗುತ್ತದೆ.*

ನಮ್ಮ ಆಲೋಚನೆಯಲ್ಲಿ ಅವರು ನೆಲೆಸುತ್ತಾರೆ. ಅವರ ಬಗ್ಗೆ ಯೋಚಿಸಿದಾಗಲೆಲ್ಲ ನಮ್ಮ ಮೂಡು ಹಾಳಾಗುತ್ತದೆ. ಮನಸ್ಸು ಕದಡಿದ ನೀರಿನಂತಾಗುತ್ತದೆ. ಇದರಿಂದ ನಮ್ಮ ಗುಣಮಟ್ಟದ ಸಮಯವೂ ಇಂಥ ಕ್ಷುಲ್ಲಕ ಸಂಗತಿಗಳಿಗಾಗಿ ಹಾಳಾಗುತ್ತದೆ.

ಹೀಗೆ ಮಾಡುವುದರಿಂದ ಅವರದ್ದೇನೂ ಹೋಗುವುದಿಲ್ಲ. ನಮ್ಮ ಸಮಯ, ನೆಮ್ಮದಿಯೇ ಹಾಳಾಗುತ್ತದೆ.

ಅದರ ಬದಲು ಅಂಥ ವ್ಯಕ್ತಿಗಳನ್ನು ಕ್ಷಮಿಸಿ ಬಿಡಬೇಕು. ಅಷ್ಟರಮಟ್ಟಿಗೆ ನಮ್ಮ ಮನಸ್ಸು ನಿರ್ಮಲವಾಗುತ್ತದೆ, ಹಗುರವಾಗುತ್ತದೆ. ನಾವು ಆ ಹಾಳು ಯೋಚನೆಗಳಿಂದ ದೂರಾಗುತ್ತೇವೆ.

ಅಷ್ಟಕ್ಕೂ ಇಂಥ ಸಂಗತಿಗಳಲ್ಲೇ ಕಾಲ ಕಳೆಯಲು ನಾವೇನು ಸಾವಿರಾರು ವರ್ಷಗಳ ಕಾಲ ಇಲ್ಲಿ ಗೂಟ ಹೊಡೆದುಕೊಂಡು ಇರುತ್ತೇವಾ? ಕೆಲವು ವ್ಯಕ್ತಿ, ಸಂಗತಿ, ಬದುಕು ವಿಷಯಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದಕ್ಕೆ ಹೋಗುತ್ತಿರಬೇಕು. ನಮ್ಮ ನೆಮ್ಮದಿಗೆ ಅದು ಅನಿವಾರ್ಯ.ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

21 ಫೆಬ್ರವರಿ 2025

ಬ್ಯಾಂಕ್ ಗಳು ಗ್ರಾಹಕ ಸ್ನೇಹಿಯಾಗುವುದು ಯಾವಾಗ?

 




 ಕೆಲ  ಬ್ಯಾಂಕುಗಳು ಗ್ರಾಹಕ ಸ್ನೇಹಿಯಲ್ಲ.ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡೇತರ ಸಿಬ್ಬಂದಿಯಿಂದ ಕನ್ನಡ ಮಾತನಾಡದೇ ಅನ್ಯಭಾಷೆ ಮಾತನಾಡುವ ಪರಿಣಾಮ ಅಲ್ಲಲ್ಲಿ ಗ್ರಾಹಕ ಮತ್ತು ಬ್ಯಾಂಕ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದನ್ನು ನೋಡುತ್ತೇವೆ. ಅದರ ಜೊತೆಗೆ  ಸೇವೆಗಳನ್ನು ನೀಡುವಾಗ ಅನವಶ್ಯಕ ವಿಳಂಬ ಮಾಡುವುದು. ಗ್ರಾಹಕರೊಂದಿಗೆ ಸೌಜನ್ಯವಾಗಿ ವರ್ತಿಸದಿರುವುದು ಅಲ್ಲಲ್ಲಿ ಕಂಡು ಬರುತ್ತವೆ. ನಿನ್ನೆ ದಿನ ಕ್ಯಾತ್ಸಂದ್ರ ದ ಕೆನರಾ ಬ್ಯಾಂಕ್ ಶಾಖೆಗೆ ಹಣ ಪಾವತಿ ಮಾಡಲು ಹೋದಾಗ ಹಣ ಪಾವತಿ ಸ್ಲಿಪ್ ಅನ್ಯ ರಾಜ್ಯದ ಭಾಷೆ ಪ್ರಿಂಟ್ ಇರುವುದನ್ನು ನೀಡಿದರು. ಕನ್ನಡ ಮತ್ತು ಇಂಗ್ಲೀಷ್ ಮುದ್ರಣದ ಸ್ಲಿಪ್ ಕೊಡಿ ಎಂದಾಗ ಅಲ್ಲಿಯ ಸಿಬ್ಬಂದಿ ಉಡಾಫೆಯಿಂದ ಉತ್ತರಿಸಿದರು.  ನಾನು ಮ್ಯಾನೇಜರ್ ಭೇಟಿ ಮಾಡಿ ವಿಷಯ ಮುಟ್ಟಿಸಿದಾಗ ಅವರು ಕ್ಷಮೆ ಕೇಳಿ ಕನ್ನಡ ಚಲನ್ ಕೊಟ್ಟರು. ಬೇಕಾಬಿಟ್ಟಿ ಸರ್ವೀಸ್ ಚಾರ್ಜ್ ಹಾಕುವ  ಈ ಬ್ಯಾಂಕ್ ಗಳು ಸೇವೆ ನೀಡುವಲ್ಲಿ ಅಸಡ್ಡೆ ತೋರುವ ತನ್ನ ಸಿಬ್ಬಂದಿಗಳಿಗೆ  ಯಾಕೆ ಬುದ್ದಿ ಕಲಿಸಲ್ಲ. ಕೆಲ ಬ್ಯಾಂಕ್  ಸಿಬ್ಬಂದಿ ಯಾಕೆ ಹೀಗೆ?ಇವರು ಗ್ರಾಹಕ ಸ್ನೇಹಿ ಆಗುವುದು ಯಾವಾಗ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

20 ಫೆಬ್ರವರಿ 2025

ಕಳೆದು ಹೋದ ಪತ್ರಗಳು..

 




ಆ ಪತ್ರಗಳು ಈಗ ಕಳೆದುಹೋಗಿವೆ. ಸ್ಮಾರ್ಟ್ ಪೋನ್, ಲ್ಯಾಪ್‌ಟಾಪ್, ಸಿಸ್ಟಮ್ ಯುಗದಲ್ಲಿ ಬರೆಯುವ ಕಲೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ.  ತೀರ್ಥರೂಪ ತಂದೆಯವರಿಗೆ...ಉ. ಕು .ಸಾಂಪ್ರತ ಎಂಬ  ಯೋಗಕ್ಷೇಮದ ವಾಕ್ಯಗಳ ಮೂಲಕ,ನಲ್ಮೆಯ ಗೆಳಯ/ ಗೆಳತಿಗೆ ಸವಿನೆನಪುಗಳು ಮುಂತಾದ ವಾಕ್ಯಗಳಿಂದ  ಆರಂಭವಾಗುತ್ತಿದ್ದ  ಆ ಪತ್ರಗಳು  ಹಿರಿಯರ ಪಾದಗಳಲ್ಲಿ ಆಶೀರ್ವಾದ ಬೇಡುತ್ತಲೋ ನಲ್ಲನಲ್ಲೆಯರ ಸಿಹಿಮುತ್ತುಗಳ ನಿರೀಕ್ಷೆಯಲ್ಲಿ ಕೊನೆಗೊಳ್ಳುತ್ತಿದ್ದವು.  ನವಜಾತ ಶಿಶುವಿನ ಸುದ್ದಿ, ತಾಯಿಯ ಅನಾರೋಗ್ಯದ ನೋವು, ಹಣವನ್ನು ಕಳುಹಿಸುವ ಮನವಿ, ಮತ್ತು ವಿಫಲವಾದ ಬೆಳೆಗಳಿಗೆ ಕಾರಣಗಳು...! ಆ ಸರಳ "ನೀಲಿ ಮತ್ತು ಹಳದಿ  ಕಾಗದದ ಹಾಳೆ"ಯಲ್ಲಿ ನಮ್ಮ ಮನದ  ಭಾವನೆಗಳನ್ನು ಬೇರೆಡೆ ಇರುವ ನಮ್ಮ ಬಂಧುಗಳ ಜೊತೆಯಲ್ಲಿ ಹಂಚಿಕೊಳ್ಳುತ್ತಿದ್ದೆವು. 

ಯುವ ವಧು  ತನಗೆ ಬಂದ ಪತ್ರವನ್ನು ಎದೆಗಪ್ಪಿಕೊಂಡು ಏಕಾಂತದಲ್ಲಿ ಅದನ್ನು  ಓದಲು ಓಡಿಹೋಗುತ್ತಿದ್ದಳು.ಕಣ್ಣೀರಿನಿಂದ ತುಂಬಿದ ಕಣ್ಣುಗಳು. ಅದು ತಾಯಿಯ ಭರವಸೆ, ತಂದೆಯ ಬೆಂಬಲ, ಮಕ್ಕಳ ಭವಿಷ್ಯ ಮತ್ತು ಹಳ್ಳಿಯ ಹೆಮ್ಮೆ ಹೀಗೆ ಪತ್ರಗಳಲ್ಲಿ ಎಲ್ಲವೂ ಅಡಗಿರುತ್ತಿದ್ದವು.

 "ಪೋಸ್ಟ್‌ಮ್ಯಾನ್ ತಂದ  ಪತ್ರವನ್ನು ಅನಕ್ಷರಸ್ಥರಿಗೆ ಕೊಟ್ಟರೆ   ಯಾ‌‌‌ರಾದರೂ ಅದನ್ನು ಗಟ್ಟಿಯಾಗಿ ಓದುತ್ತಿದ್ದರು. ಅನಕ್ಷರಸ್ಥರು ಸಹ ಆ ಪತ್ರಗಳನ್ನು  ಮತ್ತೆ ಮತ್ತೆ ಸ್ಪರ್ಶಿಸುತ್ತಾ, ಒಳಗೆ ಬರೆದ ಭಾವನೆಗಳನ್ನು ಅನುಭವಿಸಲು ಪ್ರಯತ್ನಪಡುತ್ತಿದ್ದರು!

ಈಗ ಒಂದು ಬೆರಳು ಪರದೆಯ ಮೇಲೆ ಸ್ಕ್ರಾಲ್ ಮಾಡುತ್ತಾ ಬರೆಯುವ ಯಾಂತ್ರಿಕ ಬರಹಗಳಿಗೆ ಹೃದಯ ಬೆಸೆಯುವ ಶಕ್ತಿಗಿಂತ  ಹೃದಯಗಳನ್ನು ಮುರಿಯುತ್ತವೆಯೇನೋ ಎಂಬ ಭಾವನೆ ಬರುತ್ತದೆ. ಪತ್ರಗಳನ್ನು ಹತ್ತಾರು ವರ್ಷ ಕಾಪಿಟ್ಟುಕೊಂಡು ಮತ್ತೆ ನೋಡುತ್ತಾ ಓದುತ್ತಾ ಸಂಭ್ರಮಿಸುವವರು ಬಹಳ ಇದ್ದೇವೆ. ಈ ಆಧುನಿಕ ಯುಗದಲ್ಲಿ ಎಂತಹ ಭಾವನೆಗಳಿರುವ ಬರಹವಾದರೂ  ಫೋನ್‌ನಲ್ಲಿ  ಸ್ಟೋರೇಜ್ ಇಲ್ಲದಿದ್ದರೆ ತಕ್ಷಣವೇ ಡಿಲೀಟ್ ಭಾಗ್ಯ ಲಭಿಸುತ್ತದೆ. ಭಾರತದ ಹೆಮ್ಮೆಯ ಪೋಸ್ಟಲ್ ಡಿಪಾರ್ಟ್‌ಮೆಂಟ್ ‌ನ ಹಳದಿ ಮತ್ತು   ನೀಲಿ ಕಾಗದಗಳ ನಂಟು ನನಗಂತೂ ಪದೇ ಪದೇ ನೆನಪಾಗುತ್ತದೆ. ನಿಮಗೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

ದುಬಾರಿ ಬೆಲೆಯ ರೂಬಿ ರೋಮನ್ ದ್ರಾಕ್ಷಿ!


 


ದುಬಾರಿ ಬೆಲೆಯ   ರೂಬಿ ರೋಮನ್ ದ್ರಾಕ್ಷಿ! 

 ದ್ರಾಕ್ಷಿ ದರ ಕೆ.ಜಿಗೆ 8 ಲಕ್ಷ ರೂ.! ದುಬಾರಿ ದ್ರಾಕ್ಷಿಯನ್ನು ಕೊಪ್ಪಳ  ಭಾಗದ ರೈತರು ಕಣ್ಣುಂಬಿಕೊಳ್ಳುವ  ಸದುದ್ದೇಶದಿಂದ ಜಿಲ್ಲಾ ತೋಟಗಾರಿಕೆ ಇಲಾಖೆ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ.


ಶಿವರಾತ್ರಿ ಅಂಗವಾಗಿ ಫೆ.23ರಿಂದ ನಗರದಲ್ಲಿ ನಡೆಯಲಿರುವ 'ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ' ದುಬಾರಿ ಬೆಲೆಯ ದ್ರಾಕ್ಷಿಗೆ ವೇದಿಕೆ ಒದಗಿಸಲಿದೆ. ಹಣ್ಣುಗಳ ಪ್ರದರ್ಶನ ವೇಳೆ ಸದಾ ಒಂದಲ್ಲ ಒಂದು ಹೊಸತನದ ಮೂಲಕ ಗಮನ ಸೆಳೆಯುತ್ತಿರುವ ಜಿಲ್ಲಾ ತೋಟಗಾರಿಕೆ ಇಲಾಖೆ, ಈ ಬಾರಿ ಜಪಾನ್ ಮೂಲದ ರೂಬಿ ರೋಮನ್ ದ್ರಾಕ್ಷಿಯನ್ನು ಪ್ರದರ್ಶಿಸಲು ಸಿದ್ದತೆ ನಡೆಸಿದೆ. ಪ್ರಸಕ್ತ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕಾಲು ಕೆ.ಜಿ ದ್ರಾಕ್ಷಿ ಮಾತ್ರ ನೋಡಲು ಸಿಗಲಿದೆ.


ರೂಬಿ ರೋಮನ್ ವಿಶೇಷವೆಂದರೆ

ಜಪಾನ್ ದೇಶದಲ್ಲಿ ಸಾಮಾನ್ಯವಾಗಿ ಬೆಳೆಯುವ ವಿಶಿಷ್ಟ ತಳಿಯ ದ್ರಾಕ್ಷಿಯ ಹೆಸರೇ ರೂಬಿ ರೋಮನ್.ಆಕರ್ಷಕ ಕೆಂಪು ಬಣ್ಣದಿಂದ ಕೂಡಿದೆ. ವಿಟೀಸ್ ಲ್ಯಾಬೂನ್ಯನಾ ಬೇಲಿ ಈ ಹಣ್ಣಿನ ವೈಜ್ಞಾನಿಕ ಹೆಸರು. ಜಪಾನ್ ದೇಶದಲ್ಲಿ 2008ರ ವೇಳೆ ಈ ಹಣ್ಣಿನ ಬೆಲೆ 700 ಗ್ರಾಂಗೆ 1 ಲಕ್ಷ ರೂ. ವರೆಗೆ ಇತ್ತು. ವರ್ಷದಿಂದ ವರ್ಷಕ್ಕೆ ಖ್ಯಾತಿ ಪಡೆದು ಬೆಲೆ ಗಗನಮುಖ ಮಾಗಿದೆ. ಸದ್ಯ ಕೆ.ಜಿಗೆ 8 ಲಕ್ಷ ರೂ. ವರೆಗೆ ಬೆಲೆಯಿದೆ.


13 ಫೆಬ್ರವರಿ 2025

ನೀರ್ ಕುಡಿಯೋಣ..


 


ಬೇರೆಯರಿಗೆ ನೀರ್ ಕುಡ್ಸೋದ್ ಬಿಟ್ಟು ನಾವೂ ನೀರ್ ಕುಡಿಯೋಣ!



ಕೆಲವರು ಮಾತನಾಡುತ್ತಾ "ಅವ್ನಿಗೆ  ಚೆನ್ನಾಗಿ ನೀರ್ ಕುಡ್ಸಿದಿನಿ ನೋಡು" ಎಂದು ಜಂಭ ಕೊಚ್ಚಿಕೊಳ್ಳುವದನ್ನು ಕಂಡಿದ್ದೇವೆ.ಬೇರೆಯವರಿಗೆ ನೀರು ಕುಡ್ಸೋ ಮುನ್ನ ನಾವು ನೀರು ಕುಡೀಬೇಕು.

ಯಾಕಂತೀರಾ? ಮುಂದೆ ಓದಿ


 ನಮ್ಮ ಮೆದುಳು ಸರಿಸುಮಾರು 75% ನೀರನ್ನು ಹೊಂದಿರುತ್ತದೆ.  ಸ್ವಲ್ಪ ನಿರ್ಜಲೀಕರಣವು ಅದರ ಕಾರ್ಯವನ್ನು ದುರ್ಬಲಗೊಳಿಸುತ್ತದೆ.

ಸಾಕಷ್ಟು ಜಲಸಂಚಯನದ ಕೊರತೆಯಿಂದ ಗಮನ ಕಡಿಮೆಯಾಗುವುದು.ನಿಧಾನಗತಿಯ ಸಂಸ್ಕರಣಾ ವೇಗ ಮತ್ತು ಸ್ಮರಣಶಕ್ತಿಯ ತೊಂದರೆಗಳಿಗೆ ಕಾರಣವಾಗಬಹುದು.

 ನಮ್ಮ ಶರೀರದ ತೂಕದ 1-2% ರಷ್ಟು ಕಡಿಮೆ ನಿರ್ಜಲೀಕರಣವು ಗಮನ ಮತ್ತು ಅಲ್ಪಾವಧಿಯ ಸ್ಮರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಸರಿಯಾದ ಪ್ರಮಾಣದಲ್ಲಿ ಜಲ ಸೇವನೆಯಿಂದ ಮನಸ್ಥಿತಿಯನ್ನು ನಿಯಂತ್ರಿಸುವ ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ನರಪ್ರೇಕ್ಷಕಗಳ ಉತ್ಪಾದನೆಯನ್ನು ಬೆಂಬಲಿಸುತ್ತದೆ.

ನಿರ್ಜಲೀಕರಣವು ಕಿರಿಕಿರಿ, ಆಯಾಸ ಮತ್ತು ಹೆಚ್ಚಿದ ಆತಂಕಕ್ಕೆ ಕಾರಣವಾಗಬಹುದು.

ನಿರ್ಜಲೀಕರಣವು ಬ್ರೈನ್ ಫಾಗ್  ಕಾರಣವಾಗಬಹುದು.ಇದು ಗೊಂದಲ, ಮಾನಸಿಕ ಸ್ಪಷ್ಟತೆಯ ಕೊರತೆ ಮತ್ತು    ವಸ್ತು ವಿಷಯದ ಬಗ್ಗೆ ಕೇಂದ್ರೀಕರಿಸುವಲ್ಲಿ ತೊಂದರೆಗೆ ಕಾರಣವಾಗುತ್ತದೆ.

ಜಲಸಂಚಯನವನ್ನು ಉಳಿಸಿಕೊಳ್ಳುವುದು ಮಾನಸಿಕ ತೀಕ್ಷ್ಣತೆ ಮತ್ತು ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಮೆದುಳಿನ ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸಲು ನೀರು ಅತ್ಯಗತ್ಯ.

ಸಾಕಷ್ಟು ಜಲಸಂಚಯನವು ಮೆದುಳಿನೊಳಗೆ ಪರಿಣಾಮಕಾರಿ ಶಕ್ತಿ ಉತ್ಪಾದನೆ ಮತ್ತು ಸೆಲ್ಯುಲಾರ್ ಕಾರ್ಯವನ್ನು ಖಚಿತಪಡಿಸುತ್ತದೆ.

ನೀರು ಸೆರೆಬ್ರೊಸ್ಪೈನಲ್ ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೆದುಳನ್ನು ಆಘಾತದಿಂದ ರಕ್ಷಿಸುತ್ತದೆ.ಸರಿಯಾದ ಜಲಸಂಚಯನವು ತಲೆನೋವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಆದ್ದರಿಂದ ಇಂದೇ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯೋಣ ನಮ್ಮ ಮೆದಳು ಮತ್ತು ಇತರ ಭಾಗಗಳನ್ನು ಸಂರಕ್ಷಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ