20 ಫೆಬ್ರವರಿ 2025

ಕಳೆದು ಹೋದ ಪತ್ರಗಳು..

 




ಆ ಪತ್ರಗಳು ಈಗ ಕಳೆದುಹೋಗಿವೆ. ಸ್ಮಾರ್ಟ್ ಪೋನ್, ಲ್ಯಾಪ್‌ಟಾಪ್, ಸಿಸ್ಟಮ್ ಯುಗದಲ್ಲಿ ಬರೆಯುವ ಕಲೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ.  ತೀರ್ಥರೂಪ ತಂದೆಯವರಿಗೆ...ಉ. ಕು .ಸಾಂಪ್ರತ ಎಂಬ  ಯೋಗಕ್ಷೇಮದ ವಾಕ್ಯಗಳ ಮೂಲಕ,ನಲ್ಮೆಯ ಗೆಳಯ/ ಗೆಳತಿಗೆ ಸವಿನೆನಪುಗಳು ಮುಂತಾದ ವಾಕ್ಯಗಳಿಂದ  ಆರಂಭವಾಗುತ್ತಿದ್ದ  ಆ ಪತ್ರಗಳು  ಹಿರಿಯರ ಪಾದಗಳಲ್ಲಿ ಆಶೀರ್ವಾದ ಬೇಡುತ್ತಲೋ ನಲ್ಲನಲ್ಲೆಯರ ಸಿಹಿಮುತ್ತುಗಳ ನಿರೀಕ್ಷೆಯಲ್ಲಿ ಕೊನೆಗೊಳ್ಳುತ್ತಿದ್ದವು.  ನವಜಾತ ಶಿಶುವಿನ ಸುದ್ದಿ, ತಾಯಿಯ ಅನಾರೋಗ್ಯದ ನೋವು, ಹಣವನ್ನು ಕಳುಹಿಸುವ ಮನವಿ, ಮತ್ತು ವಿಫಲವಾದ ಬೆಳೆಗಳಿಗೆ ಕಾರಣಗಳು...! ಆ ಸರಳ "ನೀಲಿ ಮತ್ತು ಹಳದಿ  ಕಾಗದದ ಹಾಳೆ"ಯಲ್ಲಿ ನಮ್ಮ ಮನದ  ಭಾವನೆಗಳನ್ನು ಬೇರೆಡೆ ಇರುವ ನಮ್ಮ ಬಂಧುಗಳ ಜೊತೆಯಲ್ಲಿ ಹಂಚಿಕೊಳ್ಳುತ್ತಿದ್ದೆವು. 

ಯುವ ವಧು  ತನಗೆ ಬಂದ ಪತ್ರವನ್ನು ಎದೆಗಪ್ಪಿಕೊಂಡು ಏಕಾಂತದಲ್ಲಿ ಅದನ್ನು  ಓದಲು ಓಡಿಹೋಗುತ್ತಿದ್ದಳು.ಕಣ್ಣೀರಿನಿಂದ ತುಂಬಿದ ಕಣ್ಣುಗಳು. ಅದು ತಾಯಿಯ ಭರವಸೆ, ತಂದೆಯ ಬೆಂಬಲ, ಮಕ್ಕಳ ಭವಿಷ್ಯ ಮತ್ತು ಹಳ್ಳಿಯ ಹೆಮ್ಮೆ ಹೀಗೆ ಪತ್ರಗಳಲ್ಲಿ ಎಲ್ಲವೂ ಅಡಗಿರುತ್ತಿದ್ದವು.

 "ಪೋಸ್ಟ್‌ಮ್ಯಾನ್ ತಂದ  ಪತ್ರವನ್ನು ಅನಕ್ಷರಸ್ಥರಿಗೆ ಕೊಟ್ಟರೆ   ಯಾ‌‌‌ರಾದರೂ ಅದನ್ನು ಗಟ್ಟಿಯಾಗಿ ಓದುತ್ತಿದ್ದರು. ಅನಕ್ಷರಸ್ಥರು ಸಹ ಆ ಪತ್ರಗಳನ್ನು  ಮತ್ತೆ ಮತ್ತೆ ಸ್ಪರ್ಶಿಸುತ್ತಾ, ಒಳಗೆ ಬರೆದ ಭಾವನೆಗಳನ್ನು ಅನುಭವಿಸಲು ಪ್ರಯತ್ನಪಡುತ್ತಿದ್ದರು!

ಈಗ ಒಂದು ಬೆರಳು ಪರದೆಯ ಮೇಲೆ ಸ್ಕ್ರಾಲ್ ಮಾಡುತ್ತಾ ಬರೆಯುವ ಯಾಂತ್ರಿಕ ಬರಹಗಳಿಗೆ ಹೃದಯ ಬೆಸೆಯುವ ಶಕ್ತಿಗಿಂತ  ಹೃದಯಗಳನ್ನು ಮುರಿಯುತ್ತವೆಯೇನೋ ಎಂಬ ಭಾವನೆ ಬರುತ್ತದೆ. ಪತ್ರಗಳನ್ನು ಹತ್ತಾರು ವರ್ಷ ಕಾಪಿಟ್ಟುಕೊಂಡು ಮತ್ತೆ ನೋಡುತ್ತಾ ಓದುತ್ತಾ ಸಂಭ್ರಮಿಸುವವರು ಬಹಳ ಇದ್ದೇವೆ. ಈ ಆಧುನಿಕ ಯುಗದಲ್ಲಿ ಎಂತಹ ಭಾವನೆಗಳಿರುವ ಬರಹವಾದರೂ  ಫೋನ್‌ನಲ್ಲಿ  ಸ್ಟೋರೇಜ್ ಇಲ್ಲದಿದ್ದರೆ ತಕ್ಷಣವೇ ಡಿಲೀಟ್ ಭಾಗ್ಯ ಲಭಿಸುತ್ತದೆ. ಭಾರತದ ಹೆಮ್ಮೆಯ ಪೋಸ್ಟಲ್ ಡಿಪಾರ್ಟ್‌ಮೆಂಟ್ ‌ನ ಹಳದಿ ಮತ್ತು   ನೀಲಿ ಕಾಗದಗಳ ನಂಟು ನನಗಂತೂ ಪದೇ ಪದೇ ನೆನಪಾಗುತ್ತದೆ. ನಿಮಗೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

ದುಬಾರಿ ಬೆಲೆಯ ರೂಬಿ ರೋಮನ್ ದ್ರಾಕ್ಷಿ!


 


ದುಬಾರಿ ಬೆಲೆಯ   ರೂಬಿ ರೋಮನ್ ದ್ರಾಕ್ಷಿ! 

 ದ್ರಾಕ್ಷಿ ದರ ಕೆ.ಜಿಗೆ 8 ಲಕ್ಷ ರೂ.! ದುಬಾರಿ ದ್ರಾಕ್ಷಿಯನ್ನು ಕೊಪ್ಪಳ  ಭಾಗದ ರೈತರು ಕಣ್ಣುಂಬಿಕೊಳ್ಳುವ  ಸದುದ್ದೇಶದಿಂದ ಜಿಲ್ಲಾ ತೋಟಗಾರಿಕೆ ಇಲಾಖೆ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ.


ಶಿವರಾತ್ರಿ ಅಂಗವಾಗಿ ಫೆ.23ರಿಂದ ನಗರದಲ್ಲಿ ನಡೆಯಲಿರುವ 'ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ' ದುಬಾರಿ ಬೆಲೆಯ ದ್ರಾಕ್ಷಿಗೆ ವೇದಿಕೆ ಒದಗಿಸಲಿದೆ. ಹಣ್ಣುಗಳ ಪ್ರದರ್ಶನ ವೇಳೆ ಸದಾ ಒಂದಲ್ಲ ಒಂದು ಹೊಸತನದ ಮೂಲಕ ಗಮನ ಸೆಳೆಯುತ್ತಿರುವ ಜಿಲ್ಲಾ ತೋಟಗಾರಿಕೆ ಇಲಾಖೆ, ಈ ಬಾರಿ ಜಪಾನ್ ಮೂಲದ ರೂಬಿ ರೋಮನ್ ದ್ರಾಕ್ಷಿಯನ್ನು ಪ್ರದರ್ಶಿಸಲು ಸಿದ್ದತೆ ನಡೆಸಿದೆ. ಪ್ರಸಕ್ತ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕಾಲು ಕೆ.ಜಿ ದ್ರಾಕ್ಷಿ ಮಾತ್ರ ನೋಡಲು ಸಿಗಲಿದೆ.


ರೂಬಿ ರೋಮನ್ ವಿಶೇಷವೆಂದರೆ

ಜಪಾನ್ ದೇಶದಲ್ಲಿ ಸಾಮಾನ್ಯವಾಗಿ ಬೆಳೆಯುವ ವಿಶಿಷ್ಟ ತಳಿಯ ದ್ರಾಕ್ಷಿಯ ಹೆಸರೇ ರೂಬಿ ರೋಮನ್.ಆಕರ್ಷಕ ಕೆಂಪು ಬಣ್ಣದಿಂದ ಕೂಡಿದೆ. ವಿಟೀಸ್ ಲ್ಯಾಬೂನ್ಯನಾ ಬೇಲಿ ಈ ಹಣ್ಣಿನ ವೈಜ್ಞಾನಿಕ ಹೆಸರು. ಜಪಾನ್ ದೇಶದಲ್ಲಿ 2008ರ ವೇಳೆ ಈ ಹಣ್ಣಿನ ಬೆಲೆ 700 ಗ್ರಾಂಗೆ 1 ಲಕ್ಷ ರೂ. ವರೆಗೆ ಇತ್ತು. ವರ್ಷದಿಂದ ವರ್ಷಕ್ಕೆ ಖ್ಯಾತಿ ಪಡೆದು ಬೆಲೆ ಗಗನಮುಖ ಮಾಗಿದೆ. ಸದ್ಯ ಕೆ.ಜಿಗೆ 8 ಲಕ್ಷ ರೂ. ವರೆಗೆ ಬೆಲೆಯಿದೆ.


13 ಫೆಬ್ರವರಿ 2025

ನೀರ್ ಕುಡಿಯೋಣ..


 


ಬೇರೆಯರಿಗೆ ನೀರ್ ಕುಡ್ಸೋದ್ ಬಿಟ್ಟು ನಾವೂ ನೀರ್ ಕುಡಿಯೋಣ!



ಕೆಲವರು ಮಾತನಾಡುತ್ತಾ "ಅವ್ನಿಗೆ  ಚೆನ್ನಾಗಿ ನೀರ್ ಕುಡ್ಸಿದಿನಿ ನೋಡು" ಎಂದು ಜಂಭ ಕೊಚ್ಚಿಕೊಳ್ಳುವದನ್ನು ಕಂಡಿದ್ದೇವೆ.ಬೇರೆಯವರಿಗೆ ನೀರು ಕುಡ್ಸೋ ಮುನ್ನ ನಾವು ನೀರು ಕುಡೀಬೇಕು.

ಯಾಕಂತೀರಾ? ಮುಂದೆ ಓದಿ


 ನಮ್ಮ ಮೆದುಳು ಸರಿಸುಮಾರು 75% ನೀರನ್ನು ಹೊಂದಿರುತ್ತದೆ.  ಸ್ವಲ್ಪ ನಿರ್ಜಲೀಕರಣವು ಅದರ ಕಾರ್ಯವನ್ನು ದುರ್ಬಲಗೊಳಿಸುತ್ತದೆ.

ಸಾಕಷ್ಟು ಜಲಸಂಚಯನದ ಕೊರತೆಯಿಂದ ಗಮನ ಕಡಿಮೆಯಾಗುವುದು.ನಿಧಾನಗತಿಯ ಸಂಸ್ಕರಣಾ ವೇಗ ಮತ್ತು ಸ್ಮರಣಶಕ್ತಿಯ ತೊಂದರೆಗಳಿಗೆ ಕಾರಣವಾಗಬಹುದು.

 ನಮ್ಮ ಶರೀರದ ತೂಕದ 1-2% ರಷ್ಟು ಕಡಿಮೆ ನಿರ್ಜಲೀಕರಣವು ಗಮನ ಮತ್ತು ಅಲ್ಪಾವಧಿಯ ಸ್ಮರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಸರಿಯಾದ ಪ್ರಮಾಣದಲ್ಲಿ ಜಲ ಸೇವನೆಯಿಂದ ಮನಸ್ಥಿತಿಯನ್ನು ನಿಯಂತ್ರಿಸುವ ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ನರಪ್ರೇಕ್ಷಕಗಳ ಉತ್ಪಾದನೆಯನ್ನು ಬೆಂಬಲಿಸುತ್ತದೆ.

ನಿರ್ಜಲೀಕರಣವು ಕಿರಿಕಿರಿ, ಆಯಾಸ ಮತ್ತು ಹೆಚ್ಚಿದ ಆತಂಕಕ್ಕೆ ಕಾರಣವಾಗಬಹುದು.

ನಿರ್ಜಲೀಕರಣವು ಬ್ರೈನ್ ಫಾಗ್  ಕಾರಣವಾಗಬಹುದು.ಇದು ಗೊಂದಲ, ಮಾನಸಿಕ ಸ್ಪಷ್ಟತೆಯ ಕೊರತೆ ಮತ್ತು    ವಸ್ತು ವಿಷಯದ ಬಗ್ಗೆ ಕೇಂದ್ರೀಕರಿಸುವಲ್ಲಿ ತೊಂದರೆಗೆ ಕಾರಣವಾಗುತ್ತದೆ.

ಜಲಸಂಚಯನವನ್ನು ಉಳಿಸಿಕೊಳ್ಳುವುದು ಮಾನಸಿಕ ತೀಕ್ಷ್ಣತೆ ಮತ್ತು ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಮೆದುಳಿನ ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸಲು ನೀರು ಅತ್ಯಗತ್ಯ.

ಸಾಕಷ್ಟು ಜಲಸಂಚಯನವು ಮೆದುಳಿನೊಳಗೆ ಪರಿಣಾಮಕಾರಿ ಶಕ್ತಿ ಉತ್ಪಾದನೆ ಮತ್ತು ಸೆಲ್ಯುಲಾರ್ ಕಾರ್ಯವನ್ನು ಖಚಿತಪಡಿಸುತ್ತದೆ.

ನೀರು ಸೆರೆಬ್ರೊಸ್ಪೈನಲ್ ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೆದುಳನ್ನು ಆಘಾತದಿಂದ ರಕ್ಷಿಸುತ್ತದೆ.ಸರಿಯಾದ ಜಲಸಂಚಯನವು ತಲೆನೋವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಆದ್ದರಿಂದ ಇಂದೇ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯೋಣ ನಮ್ಮ ಮೆದಳು ಮತ್ತು ಇತರ ಭಾಗಗಳನ್ನು ಸಂರಕ್ಷಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ


ಸಿಹಿಜೀವಿಯಿಂದ ನಿತ್ಯ ಸತ್ಯ.


ಸಿಹಿಜೀವಿಯಿಂದ   ನಿತ್ಯ ಸತ್ಯ.


ನಾನು  ಎಷ್ಟೇ ಬಾರಿ ಮಾಡಿದ್ದರೂ

ಪರರಿಗೆ, ಬಂಧುಗಳಿಗೆ ಸಹಾಯ|

ಒಮ್ಮೆ ನಿರಾಕರಿಸಿದರೆ ಬೈಯ್ದೇ

ಬಿಡುತ್ತಾರೆ ಅಯ್ಯೋ ಇವ್ನ ಮನೆಕಾಯ||


ಸಿಹಿಜೀವಿ ವೆಂಕಟೇಶ್ವರ

 

11 ಫೆಬ್ರವರಿ 2025

ಹನಿಗವನ


 ನಿಯಂತ್ರಣದಲ್ಲಿಟ್ಟುಕೊಂಡರೆ ನಿನ್ನ ಮನಸ್ಸು ಮುಂದೊಂದು ದಿನ ನನಸಾಗುವುದು ಕನಸು


ಸಿಹಿಜೀವಿ ವೆಂಕಟೇಶ್ವರ