12 ಜನವರಿ 2025

ನಮ್ಮ ಕೈಲಿ ಏನೂ ಇಲ್ಲ..

 ಕಾರಿಂದ ಪ್ರಜ್ಞಾಹೀನ ಮಹಿಳೆಯನ್ನು ಇಳಿಸಿ ಲಗುಬಗೆಯಿಂದ ಎಮರ್ಜೆನ್ಸಿ ಗೆ ಸೇರಿಸಿ ಐದು ನಿಮಿಷದಲ್ಲಿ  ಡಾಕ್ಟರ್ ಹೊರ ಬಂದು ಪೇಶೆಂಟ್ ಇನ್ನಿಲ್ಲ ಅಂದರು. ಗಂಡನ ದುಃಖ ನೋಡಲಾಗಲಿಲ್ಲ.ಮೂರು ಮಕ್ಕಳ ತಾಯಿ ಕುಟುಂಬ ಅಗಲಿದ್ದಾರೆ.ಆ ಮಕ್ಕಳ ನೋಡುವವರಾರು?  ಬಳ್ಳಾರಿ ಮೂಲದ ದಂಪತಿಗಳು ಬೆಂಗಳೂರಿನ ನಿಮ್ಹಾನ್ಸ್ ಗೆ ಚಿಕಿತ್ಸೆಗೆ  ಹೊರಟಿದ್ದರು.ಉಸಿರಾಟದ ತೊಂದರೆಯಿಂದ ತುಮಕೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.

ಉಸಿರಿಲ್ಲದ ಮಹಿಳೆಯನ್ನು ಕಣ್ಣ ಮುಂದೆ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದನ್ನು ನೋಡಿ ಮನಸ್ಸು ಭಾರವೆನಿಸಿತು.

08 ಜನವರಿ 2025

ಗುಡ್ಲು ಹೋಟೆಲ್ .ಹಿರಿಯೂರು.


 ಇಂದು  ತುಮಕೂರಿನಿಂದ  ಚಿತ್ರದುರ್ಗಕ್ಕೆ ಹೋಗುವಾಗ ಹಿರಿಯೂರಿನಲ್ಲಿ ಗುಡ್ಲು ಹೋಟೆಲ್ ಅಥವಾ ಸುಂದ್ರಣ್ಣ ಹೋಟೆಲ್ ನಲ್ಲಿ ಇಡ್ಲಿ ,ವಡೆ ಪಲಾವ್ ತಿಂದೆ.  ಟಿ ಬಿ ಸರ್ಕಲ್ ನ ಚಾನಲ್ ದಡದಲ್ಲಿ ಇರುವ  ಈ ಹೋಟೆಲ್‌ ಗೆ ಬೋರ್ಡ್ ಇಲ್ಲ.ದಿನಕ್ಕೆ 5000 ಇಡ್ಲಿಗಳು  ಖರ್ಚಾಗುವ ಈ ಹೋಟೆಲ್ ಹಿರಿಯೂರು ನಗರದಲ್ಲಿ ಹಾಗೂ ನಾಡಿನಲ್ಲಿ ಮನೆಮಾತಾಗಿದೆ. ಶುಚಿ ,ರುಚಿ ಮತ್ತು ಕೈಗೆಟುಕುವ ಬೆಲೆ ಈ ಹೋಟೆಲ್ ವಿಶೇಷ. ನಾನು ಮೊದಲು ಶಿಕ್ಷಕನಾಗಿ ಕೆಲಸ ಮಾಡಿದ ಹುಚ್ಚವ್ವನಹಳ್ಳಿಯ ಇಬ್ಬರು ಈ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಹಳ ಆತ್ಮೀಯತೆಯಿಂದ ಮಾತನಾಡಿಸಿದರು.

ನೀವು ಈ ಹೋಟೆಲ್ ನಲ್ಲಿ ಟಿಫನ್ ಮಾಡಿದ್ದರೆ ಮಾಹಿತಿ ಹಂಚಿಕೊಳ್ಳಬಹುದು.

#sihijeeviVenkateshwara #hotel #hiriyur

03 ಜನವರಿ 2025

ಮಾಧುರಿ ಲೇಕ್..ಪ್ರವಾಸ ಕಥನ


 


#ಮಾಧುರಿಲೇಕ್..

ಅರುಣಾಚಲ ಪ್ರದೇಶದ ತವಾಂಗ್ ನಿಂದ ಬುಮ್ಲಾ ಪಾಸ್ ಕಡೆಗೆ ಪಯಣಿಸುವಾಗ ನಮಗೆ ಸಿಗುವ ಪ್ರಾಕೃತಿಕ ತಾಣವೇ ಮಾಧುರಿ ಸರೋವರ!
ಮಾಧುರಿ ದೀಕ್ಷಿತ್ ತನ್ನ ನೃತ್ಯ ಹಾಗೂ ಮಾದಕ ನೋಟದಿಂದ ರಸಿಕರ ಸೆಳೆದಂತೆ ಈ ಸರೋವರದ
ಬಣ್ಣ ಬಣ್ಣದ ನೀರು ನಯನ ಮನೋಹರ ನೋಟವು ಪ್ರವಾಸಿಗರನ್ನು  ಸೆಳೆಯುತ್ತದೆ. ಸರೋವರದ ಹಿನ್ನೆಲೆಯಲ್ಲಿ ಹಸಿರೊದ್ದ ಬೆಟ್ಟದ ಮೇಲೆ ಅಲ್ಲಲ್ಲಿ ಮಂಜಿನ ಹನಿಗಳನ್ನು ಯಾರೋ ಪೋಣಿಸಿದಂತೆ ಕಾಣುವ ಈ ಸರೋವರದ ಸೌಂದರ್ಯ ವರ್ಣಿಸಲಸದಳ. ನಾವು ಅಲ್ಲಿಗೆ ಹೋದಾಗ  ಮೈನಸ್ 6 ಡಿಗ್ರಿ ಸೆಲ್ಸಿಯಸ್ ಚಳಿಯ ವಾತಾವರಣದಲ್ಲಿ ಆ ಸುಂದರ ದೃಶ್ಯಗಳನ್ನು ನೋಡುತ್ತ ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡು ಸಂತಸಪಟ್ಟೆವು.ಹೊರ ರಾಜ್ಯದ ಆ ಸುಂದರ ತಾಣದಲ್ಲಿ ಹಲವಾರು ಅಪರಿಚಿತ ಕನ್ನಡದ ಮನಸುಗಳು ನಮ್ಮ ಜೊತೆಯಲ್ಲಿ ಸೇರಿಕೊಂಡು ಪರಿಚಿತರಾಗಿ ನಮ್ಮ ಆನಂದವನ್ನು ಇಮ್ಮಡಿಗೊಳಿಸಿದರು.
ಸಂಗೆಸ್ಟಾರ್ ತ್ಸೋ , ಹಿಂದೆ ಶೋಂಗಾ-ತ್ಸರ್ ಸರೋವರ ಎಂದು ಕರೆಯಲಾಗುತ್ತಿತ್ತು ಈಗ  ಮಾಧುರಿ ಸರೋವರ ಎಂದು ಜನಪ್ರಿಯವಾಗಿದೆ‌.  ಇದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ತವಾಂಗ್‌ನಿಂದ ಬುಮ್ ಲಾ ಪಾಸ್‌ಗೆ ಹೋಗುವ ದಾರಿಯಲ್ಲಿದೆ , ಸಮುದ್ರದಿಂದ 3,708 ಮೀಟರ್ ಮೇಲಿರುವ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ.
ಉತ್ತರಕ್ಕೆ ತಕ್ಪೋ ಶಿರಿ ಹಿಮನದಿಯ ಕೆಳಗೆ ಹುಟ್ಟುವ ತಕ್ತ್ಸಾಂಗ್ ಚು ನದಿಯು ಈ ಪ್ರದೇಶದ ಮೂಲಕ ಹರಿಯುತ್ತದೆ. ಇದು ಪಶ್ಚಿಮಕ್ಕೆ ಹರಿದು  ನಂತರ ನೈಮ್ಜಂಗ್ ಚು ನದಿಯನ್ನು 8 ಮೈಲುಗಳು  ಕೆಳಗೆ ಸೇರುತ್ತದೆ . ತಕ್ತ್ಸಂಗ್ ಗೊಂಪಾ ಪಶ್ಚಿಮಕ್ಕೆ 1.5 ಮೈಲಿಗಳು  ಪ್ರದೇಶದಲ್ಲಿದೆ.
ಇಲ್ಲಿ ಶಾರುಖ್.ಖಾನ್   ಮಾಧುರಿ ಅಭಿನಯದ ಕೋಯ್ಲಾ ಚಿತ್ರದ "ತನ್ಹಾಯಿ ತನ್ಹಾಯಿ ತನ್ಹಾಯಿ  ದೊನೋ ಕಾ ಪಾಸ್ ಲೇ ಆಯಿ"  ಹಾಡನ್ನು ಚಿತ್ರೀಕರಣ ಮಾಡಿದ ನೆನಪಿಗಾಗಿ ಇಂದು ಮಾಧುರಿ ಲೇಕ್ ಎಂದು ಜನಪ್ರಿಯವಾಗಿದೆ. ಚಲನ ಚಿತ್ರದಲ್ಲಿ ಈ ಹಾಡು ನೋಡಿದ್ದೆ.ಅದೇ ಸ್ಥಳವನ್ನು ನೇರವಾಗಿ ನೋಡಿದಾಗ ಮತ್ತೆ ಮಾಧುರಿ ನೆನಪಾದಳು..
ಸಮಯ ಸಿಕ್ಕರೆ ಮತ್ತೊಮ್ಮೆ ಮಾಧುರಿಯನ್ನು, ಹಾಡನ್ನು ,ಲೇಕನ್ನು ನೋಡುವ ಬಯಕೆ ಇದ್ದೇ ಇದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
#sihijeeviVenkateshwara #ArunachalPradesh #tawang #madhuridixit #madhurilake #tourism

02 ಜನವರಿ 2025

ಸಂಕಲ್ಪ .ಹನಿಗವನ


 

#ಸಂಕಲ್ಪ

ನಮ್ಮ ಹೊಸ ವರ್ಷದ ಸಂಕಲ್ಪಗಳು.
ಮೊದಲ ದಿನ ಜಿಮ್ ||
ಎರಡನೇ ದಿನ ಹೋಮ್||

ಸಿಹಿಜೀವಿ ವೆಂಕಟೇಶ್ವರ
#sihijeeviVenkateshwara #newyear2025 #resolution #jokes #jokesfordays

ಭೂತಾನ್_ವಿಶೇಷ #ಭೂತಾನ್_ನಲ್ಲಿಮದುವೆ_ಇಲ್ಲ!


 


#ಭೂತಾನ್_ವಿಶೇಷ

#ಭೂತಾನ್_ನಲ್ಲಿಮದುವೆ_ಇಲ್ಲ!

ಭೂತಾನ್ ಮದುವೆಗಳು ನಮ್ಮ ದೇಶಕ್ಕಿಂತ ಭಿನ್ನ. ಅಲ್ಲಿ ಯಾವುದೇ ಯಂಗೇಜ್ ಮೆಂಟ್ ಇಲ್ಲ. ಪ್ರೀ ವೆಡ್ಡಿಂಗ್ ಶೂಟ್ ಇಲ್ಲ. ರಿಸೆಪ್ಷನ್ ಅಂತೂ ಇಲ್ಲವೇ ಇಲ್ಲ.ಹಾಗಾದರೆ ಮದುವೆ ಹೇಗೆ? ಸಿಂಪಲ್ ಗಂಡು ಹೆಣ್ಣು ಮೊದಲು ಪ್ರೀತಿಯಲ್ಲಿ ಬಿದ್ದು ನಾಲ್ಕಾರು ತಿಂಗಳು ಮರ ಸುತ್ತಿ ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ನಂತರ ಮದುವೆಯಾಗಲು ಸಿದ್ದವಾಗಿ  ಮನೆಯವರ ಅನುಮತಿಯೊಂದಿಗೆ ಜೊತೆಯಲ್ಲಿ ವಾಸಿಸುತ್ತಾರೆ ಯಾವುದೇ ಸಂಪ್ರದಾಯದ ಸಮಾರಂಭಗಳು ನಡೆಯುವುದಿಲ್ಲ. ಬೀಗರೂಟವೂ ಇಲ್ಲ.
ಅದಕ್ಕೆ ಯಾವುದೇ  ದಾಖಲೆ, ಮ್ಯಾರೇಜ್ ರಿಜಿಸ್ಟ್ರೆಶನ್ ಅಗತ್ಯವಿಲ್ಲ. ಮಕ್ಕಳ ಮದುವೆಗೆ ಅದರಲ್ಲೂ ಹೆಣ್ಣು ಹೆತ್ತವರು ಲಕ್ಷಾಂತರ ಸಾಲ ಮಾಡಿ ಮಾಡುವ ಮದುವೆಗಳು ಎಷ್ಟೋ ತಂದೆ ತಾಯಿಗಳ ನಿದ್ರೆಯಿಲ್ಲದ ರಾತ್ರಿ ಕಳೆಯುವಂತೆ ಮಾಡುವ ನಮ್ಮ ಮದುವೆಗಳನ್ನು ನೋಡಿದಾಗ ಭೂತಾನ್ ಮದುವೆಗಳು ಗಮನ ಸೆಳೆಯುತ್ತವೆ ನಮ್ಮ ಬಸ್ ಡ್ರೈವರ್ "ನಮ್ಗೆ" ಗೆ ಮದುವೆಯಾಗಿ ಮೂರು ಮಕ್ಕಳಿದ್ದರೆ ನಮ್ಮ ಗೈಡ್ "ತೆಂದಿನ್" ಈಗ ಲವ್ ಮಾಡುತ್ತಿದ್ದಾನಂತೆ ನಮ್ಮನ್ನು ಮದುವೆಗೆ ಆಹ್ವಾನಿಸುವೆ  ಎಂದಿದ್ದಾನೆ. ನಾನು ಅವನ ಮದುವೆಗೆ ಮತ್ತೊಮ್ಮೆ ಭೂತಾನ್ ಗೆ ಹೋಗಬೇಕು. ಇಲ್ಲಿ ಮತ್ತೊಂದು ವಿಷಯ ನಿಮಗೆ ಹೇಳಲೇ ಬೇಕು   ಭೂತಾನ್ ನಲ್ಲಿ ಮದುವೆ ಗಂಡುಗಳಿಗೆ ಬೇಡಿಕೆ ಹೆಚ್ಚು. ಕಾರಣ ಅಲ್ಲಿ ಹೆಚ್ಚು ಗಂಡು ಮಕ್ಕಳು ಬೌದ್ಧ ಭಿಕ್ಷುಗಳಾಗಿ ಅವಿವಾಹಿತರಾಗಿ ಉಳಿಯುತ್ತಾರೆ.ಅದರಿಂದಾಗಿ ಮದುವೆಗೆ ಸಿದ್ದವಾದ ಯುವತಿಯರು ಮೂರು ಜನ ಇದ್ದರೆ ಯುವಕರು ಒಬ್ಬರು ಮಾತ್ರ! ಅಂದರೆ ಗಂಡಿಗೆ ಬಹಳ ಡಿಮಾಂಡ್.

ಸಿಹಿಜೀವಿ ವೆಂಕಟೇಶ್ವರ
#sihijeeviVenkateshwara
#Bhutan #bhutantravel #bhutanese #marriage