03 ಜನವರಿ 2025

ಮಾಧುರಿ ಲೇಕ್..ಪ್ರವಾಸ ಕಥನ


 


#ಮಾಧುರಿಲೇಕ್..

ಅರುಣಾಚಲ ಪ್ರದೇಶದ ತವಾಂಗ್ ನಿಂದ ಬುಮ್ಲಾ ಪಾಸ್ ಕಡೆಗೆ ಪಯಣಿಸುವಾಗ ನಮಗೆ ಸಿಗುವ ಪ್ರಾಕೃತಿಕ ತಾಣವೇ ಮಾಧುರಿ ಸರೋವರ!
ಮಾಧುರಿ ದೀಕ್ಷಿತ್ ತನ್ನ ನೃತ್ಯ ಹಾಗೂ ಮಾದಕ ನೋಟದಿಂದ ರಸಿಕರ ಸೆಳೆದಂತೆ ಈ ಸರೋವರದ
ಬಣ್ಣ ಬಣ್ಣದ ನೀರು ನಯನ ಮನೋಹರ ನೋಟವು ಪ್ರವಾಸಿಗರನ್ನು  ಸೆಳೆಯುತ್ತದೆ. ಸರೋವರದ ಹಿನ್ನೆಲೆಯಲ್ಲಿ ಹಸಿರೊದ್ದ ಬೆಟ್ಟದ ಮೇಲೆ ಅಲ್ಲಲ್ಲಿ ಮಂಜಿನ ಹನಿಗಳನ್ನು ಯಾರೋ ಪೋಣಿಸಿದಂತೆ ಕಾಣುವ ಈ ಸರೋವರದ ಸೌಂದರ್ಯ ವರ್ಣಿಸಲಸದಳ. ನಾವು ಅಲ್ಲಿಗೆ ಹೋದಾಗ  ಮೈನಸ್ 6 ಡಿಗ್ರಿ ಸೆಲ್ಸಿಯಸ್ ಚಳಿಯ ವಾತಾವರಣದಲ್ಲಿ ಆ ಸುಂದರ ದೃಶ್ಯಗಳನ್ನು ನೋಡುತ್ತ ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡು ಸಂತಸಪಟ್ಟೆವು.ಹೊರ ರಾಜ್ಯದ ಆ ಸುಂದರ ತಾಣದಲ್ಲಿ ಹಲವಾರು ಅಪರಿಚಿತ ಕನ್ನಡದ ಮನಸುಗಳು ನಮ್ಮ ಜೊತೆಯಲ್ಲಿ ಸೇರಿಕೊಂಡು ಪರಿಚಿತರಾಗಿ ನಮ್ಮ ಆನಂದವನ್ನು ಇಮ್ಮಡಿಗೊಳಿಸಿದರು.
ಸಂಗೆಸ್ಟಾರ್ ತ್ಸೋ , ಹಿಂದೆ ಶೋಂಗಾ-ತ್ಸರ್ ಸರೋವರ ಎಂದು ಕರೆಯಲಾಗುತ್ತಿತ್ತು ಈಗ  ಮಾಧುರಿ ಸರೋವರ ಎಂದು ಜನಪ್ರಿಯವಾಗಿದೆ‌.  ಇದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ತವಾಂಗ್‌ನಿಂದ ಬುಮ್ ಲಾ ಪಾಸ್‌ಗೆ ಹೋಗುವ ದಾರಿಯಲ್ಲಿದೆ , ಸಮುದ್ರದಿಂದ 3,708 ಮೀಟರ್ ಮೇಲಿರುವ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ.
ಉತ್ತರಕ್ಕೆ ತಕ್ಪೋ ಶಿರಿ ಹಿಮನದಿಯ ಕೆಳಗೆ ಹುಟ್ಟುವ ತಕ್ತ್ಸಾಂಗ್ ಚು ನದಿಯು ಈ ಪ್ರದೇಶದ ಮೂಲಕ ಹರಿಯುತ್ತದೆ. ಇದು ಪಶ್ಚಿಮಕ್ಕೆ ಹರಿದು  ನಂತರ ನೈಮ್ಜಂಗ್ ಚು ನದಿಯನ್ನು 8 ಮೈಲುಗಳು  ಕೆಳಗೆ ಸೇರುತ್ತದೆ . ತಕ್ತ್ಸಂಗ್ ಗೊಂಪಾ ಪಶ್ಚಿಮಕ್ಕೆ 1.5 ಮೈಲಿಗಳು  ಪ್ರದೇಶದಲ್ಲಿದೆ.
ಇಲ್ಲಿ ಶಾರುಖ್.ಖಾನ್   ಮಾಧುರಿ ಅಭಿನಯದ ಕೋಯ್ಲಾ ಚಿತ್ರದ "ತನ್ಹಾಯಿ ತನ್ಹಾಯಿ ತನ್ಹಾಯಿ  ದೊನೋ ಕಾ ಪಾಸ್ ಲೇ ಆಯಿ"  ಹಾಡನ್ನು ಚಿತ್ರೀಕರಣ ಮಾಡಿದ ನೆನಪಿಗಾಗಿ ಇಂದು ಮಾಧುರಿ ಲೇಕ್ ಎಂದು ಜನಪ್ರಿಯವಾಗಿದೆ. ಚಲನ ಚಿತ್ರದಲ್ಲಿ ಈ ಹಾಡು ನೋಡಿದ್ದೆ.ಅದೇ ಸ್ಥಳವನ್ನು ನೇರವಾಗಿ ನೋಡಿದಾಗ ಮತ್ತೆ ಮಾಧುರಿ ನೆನಪಾದಳು..
ಸಮಯ ಸಿಕ್ಕರೆ ಮತ್ತೊಮ್ಮೆ ಮಾಧುರಿಯನ್ನು, ಹಾಡನ್ನು ,ಲೇಕನ್ನು ನೋಡುವ ಬಯಕೆ ಇದ್ದೇ ಇದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
#sihijeeviVenkateshwara #ArunachalPradesh #tawang #madhuridixit #madhurilake #tourism

02 ಜನವರಿ 2025

ಸಂಕಲ್ಪ .ಹನಿಗವನ


 

#ಸಂಕಲ್ಪ

ನಮ್ಮ ಹೊಸ ವರ್ಷದ ಸಂಕಲ್ಪಗಳು.
ಮೊದಲ ದಿನ ಜಿಮ್ ||
ಎರಡನೇ ದಿನ ಹೋಮ್||

ಸಿಹಿಜೀವಿ ವೆಂಕಟೇಶ್ವರ
#sihijeeviVenkateshwara #newyear2025 #resolution #jokes #jokesfordays

ಭೂತಾನ್_ವಿಶೇಷ #ಭೂತಾನ್_ನಲ್ಲಿಮದುವೆ_ಇಲ್ಲ!


 


#ಭೂತಾನ್_ವಿಶೇಷ

#ಭೂತಾನ್_ನಲ್ಲಿಮದುವೆ_ಇಲ್ಲ!

ಭೂತಾನ್ ಮದುವೆಗಳು ನಮ್ಮ ದೇಶಕ್ಕಿಂತ ಭಿನ್ನ. ಅಲ್ಲಿ ಯಾವುದೇ ಯಂಗೇಜ್ ಮೆಂಟ್ ಇಲ್ಲ. ಪ್ರೀ ವೆಡ್ಡಿಂಗ್ ಶೂಟ್ ಇಲ್ಲ. ರಿಸೆಪ್ಷನ್ ಅಂತೂ ಇಲ್ಲವೇ ಇಲ್ಲ.ಹಾಗಾದರೆ ಮದುವೆ ಹೇಗೆ? ಸಿಂಪಲ್ ಗಂಡು ಹೆಣ್ಣು ಮೊದಲು ಪ್ರೀತಿಯಲ್ಲಿ ಬಿದ್ದು ನಾಲ್ಕಾರು ತಿಂಗಳು ಮರ ಸುತ್ತಿ ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ನಂತರ ಮದುವೆಯಾಗಲು ಸಿದ್ದವಾಗಿ  ಮನೆಯವರ ಅನುಮತಿಯೊಂದಿಗೆ ಜೊತೆಯಲ್ಲಿ ವಾಸಿಸುತ್ತಾರೆ ಯಾವುದೇ ಸಂಪ್ರದಾಯದ ಸಮಾರಂಭಗಳು ನಡೆಯುವುದಿಲ್ಲ. ಬೀಗರೂಟವೂ ಇಲ್ಲ.
ಅದಕ್ಕೆ ಯಾವುದೇ  ದಾಖಲೆ, ಮ್ಯಾರೇಜ್ ರಿಜಿಸ್ಟ್ರೆಶನ್ ಅಗತ್ಯವಿಲ್ಲ. ಮಕ್ಕಳ ಮದುವೆಗೆ ಅದರಲ್ಲೂ ಹೆಣ್ಣು ಹೆತ್ತವರು ಲಕ್ಷಾಂತರ ಸಾಲ ಮಾಡಿ ಮಾಡುವ ಮದುವೆಗಳು ಎಷ್ಟೋ ತಂದೆ ತಾಯಿಗಳ ನಿದ್ರೆಯಿಲ್ಲದ ರಾತ್ರಿ ಕಳೆಯುವಂತೆ ಮಾಡುವ ನಮ್ಮ ಮದುವೆಗಳನ್ನು ನೋಡಿದಾಗ ಭೂತಾನ್ ಮದುವೆಗಳು ಗಮನ ಸೆಳೆಯುತ್ತವೆ ನಮ್ಮ ಬಸ್ ಡ್ರೈವರ್ "ನಮ್ಗೆ" ಗೆ ಮದುವೆಯಾಗಿ ಮೂರು ಮಕ್ಕಳಿದ್ದರೆ ನಮ್ಮ ಗೈಡ್ "ತೆಂದಿನ್" ಈಗ ಲವ್ ಮಾಡುತ್ತಿದ್ದಾನಂತೆ ನಮ್ಮನ್ನು ಮದುವೆಗೆ ಆಹ್ವಾನಿಸುವೆ  ಎಂದಿದ್ದಾನೆ. ನಾನು ಅವನ ಮದುವೆಗೆ ಮತ್ತೊಮ್ಮೆ ಭೂತಾನ್ ಗೆ ಹೋಗಬೇಕು. ಇಲ್ಲಿ ಮತ್ತೊಂದು ವಿಷಯ ನಿಮಗೆ ಹೇಳಲೇ ಬೇಕು   ಭೂತಾನ್ ನಲ್ಲಿ ಮದುವೆ ಗಂಡುಗಳಿಗೆ ಬೇಡಿಕೆ ಹೆಚ್ಚು. ಕಾರಣ ಅಲ್ಲಿ ಹೆಚ್ಚು ಗಂಡು ಮಕ್ಕಳು ಬೌದ್ಧ ಭಿಕ್ಷುಗಳಾಗಿ ಅವಿವಾಹಿತರಾಗಿ ಉಳಿಯುತ್ತಾರೆ.ಅದರಿಂದಾಗಿ ಮದುವೆಗೆ ಸಿದ್ದವಾದ ಯುವತಿಯರು ಮೂರು ಜನ ಇದ್ದರೆ ಯುವಕರು ಒಬ್ಬರು ಮಾತ್ರ! ಅಂದರೆ ಗಂಡಿಗೆ ಬಹಳ ಡಿಮಾಂಡ್.

ಸಿಹಿಜೀವಿ ವೆಂಕಟೇಶ್ವರ
#sihijeeviVenkateshwara
#Bhutan #bhutantravel #bhutanese #marriage

31 ಡಿಸೆಂಬರ್ 2024

ಅರೆ ಬರೆ ಜ್ಞಾನ ವಿಶಾಕಾರಿ..(ಲೇಖನ)


 


ಅರೆಬರೆ ಜ್ಞಾನ ವಿನಾಶಕಾರಿ


ಏರ್‌ಪ್ಲೇನ್ ಕ್ಲೀನರ್ ಒಬ್ಬ  ಪೈಲಟ್‌ನ ಕಾಕ್‌ಪಿಟ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ, "ಹೌ ಟು ಫ್ಲೈ ಆನ್ ಏರ್‌ಪ್ಲೇನ್ ಫಾರ್ ಬಿಗಿನರ್ಸ್  (ವಾಲ್ಯೂಮ್1)" ಎಂಬ  ಪುಸ್ತಕವನ್ನು ನೋಡಿದ.


  ಮೊದಲ ಪುಟವನ್ನು ತೆರೆದ "ಎಂಜಿನ್ ಅನ್ನು ಪ್ರಾರಂಭಿಸಲು, ಕೆಂಪು ಗುಂಡಿಯನ್ನು ಒತ್ತಿ...".  ಅವನು ಹಾಗೆ ಮಾಡಿದನು ಮತ್ತು ವಿಮಾನದ ಎಂಜಿನ್ ಆನ್ ಆಯ್ತು...


 ಅವನು ಸಂತೋಷದಿಂದ ಮುಂದಿನ ಪುಟವನ್ನು ತೆರೆದ...:

 "ಏರೋಪ್ಲೇನ್ ಚಲಿಸುವಂತೆ ಮಾಡಲು, ನೀಲಿ ಗುಂಡಿಯನ್ನು ಒತ್ತಿ... "ಅವನು ಹಾಗೆ ಮಾಡಿದನು ಮತ್ತು ವಿಮಾನವು ಅದ್ಭುತ ವೇಗದಲ್ಲಿ ಚಲಿಸಲು ಪ್ರಾರಂಭಿಸಿತು ...


  ಹಾರಬೇಕೆಂದು ಬಯಸಿ,  ಮೂರನೇ  ಪುಟವನ್ನು ತೆರೆದ  ವಿಮಾನವನ್ನು ಹಾರಿಸಲು ದಯವಿಟ್ಟು ಹಸಿರು ಬಟನ್ ಒತ್ತಿರಿ...ಎಂದಿತ್ತು "ಅವನು ಹಾಗೆ ಮಾಡಿದ ಮತ್ತು ವಿಮಾನವು ಹಾರಲು ಪ್ರಾರಂಭಿಸಿತು ...


 ಅವನು ಉತ್ಸುಕನಾಗಿದ್ದ...!!


 ಇಪ್ಪತ್ತು  ನಿಮಿಷಗಳ ಹಾರಾಟದ ನಂತರ, ತೃಪ್ತನಾಗಿ ಆಕಾಶದಿಂದ ಭೂಮಿಗೆ ಇಳಿಯಲು ಬಯಸಿದ್ದ. ಆದ್ದರಿಂದ ಅವನು ನಾಲ್ಕನೇ  ಪುಟಕ್ಕೆ ನೋಡಲು ಪುಸ್ತಕ ತಿರುವಿದ. ಅವನಿಗೆ ಅಚ್ಚರಿ ಕಾದಿತ್ತು.

  ನಾಲ್ಕನೇ ಪುಟದಲ್ಲಿ ಹೀಗಿತ್ತು  "ವಿಮಾನವನ್ನು ಹೇಗೆ ಇಳಿಸುವುದು ಎಂದು ತಿಳಿಯಲು, ದಯವಿಟ್ಟು ಹತ್ತಿರದ ಪುಸ್ತಕದಂಗಡಿಯಲ್ಲಿ ವಾಲ್ಯೂಮ್ 2 ಪುಸ್ತಕ  ಖರೀದಿಸಿ!"


ನಾವೂ ಬಹಳ ಜನ ಹೀಗೆಯೇ ಯಾವುದೇ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಯದೇ ಸಾಹಸ ಕಾರ್ಯಗಳಿಗೆ ಕೈ ಹಾಕಿ ಕೈ ಸುಟ್ಟುಕೊಂಡ ಉದಾಹರಣೆಗಳು ಬಹಳ ಇವೆ.half knowledge dangerous ಅಲ್ಲವೆ?


 ಸಿಹಿಜೀವಿ ವೆಂಕಟೇಶ್ವರ


30 ಡಿಸೆಂಬರ್ 2024

ಅಮ್ಮನ ಮುತ್ತಿನ ಶಕ್ತಿ ! (ಲೇಖನ )


 ಅಮ್ಮನ ಮುತ್ತಿನ ಶಕ್ತಿ 


ನಮ್ಮ ಮಕ್ಕಳ ಇಷ್ಟ, ಅವರ ಪ್ರತಿಭೆಯನ್ನು ಗುರುತಿಸುವಲ್ಲಿ ಬಹುತೇಕ ಪೋಷಕರು ಸೋತಿದ್ದೇವೆ.ನಮ್ಮಿಷ್ಟದ ಡಾಕ್ಟರ್ ಇಂಜಿನಿಯರ್ ನಮ್ಮ ಮನೆಯಿಂದ ಬರಲೆಂಬ ಹಪ ಹಪಿ ನಮ್ಮದು. ಅಲ್ಲೊಬ್ಬ ತಾಯಿ ಅಂದು ಬಾಲ್ಯದಲ್ಲೇ ತನ್ನ ಮಗನ ಆಸಕ್ತಿ ಗುರ್ತಿಸಿ ನೀಡಿದ ಒಂದು ಪ್ರೋತ್ಸಾಹದಾಯಕ ಪ್ರೀತಿಯ ಮುತ್ತು ಅವನನ್ನು ಮುಂದೆ ಜಗತ್ತಿನ ಶ್ರೇಷ್ಠ ಚಿತ್ರ ಕಲಾವಿದರ ಸಾಲಿನಲ್ಲಿ ನಿಲ್ಲಿಸಿತು.

ಆ ಶ್ರೇಷ್ಠ ಕಲಾವಿದರನೇ ಬೆಂಜಮಿನ್ ವೆಸ್ಟ್!


 ಎರಡು ಶತಮಾನಗಳ ಹಿಂದೆ ರಚಿಸಲ್ಪಟ್ಟ ಅವನ ಕೃತಿಗಳು ಇಂದು ಲಕ್ಷಾಂತರ ಡಾಲರುಗಳಷ್ಟು ಬೆಲೆಬಾಳುತ್ತವೆ.  ಬೆಂಜಮಿನ್ ವೆಸ್ಟ್  ಇಂಗ್ಲೆಂಡಿನ ರಾಯಲ್ ಅಕ್ಯಾಾಡೆಮಿ ಆಫ್ ಆರ್ಟ್ ಸಂಸ್ಥೆಯ ಅಧ್ಯಕ್ಷರಾಗಿದ್ದವರು. ಆಗಿನ ಇಂಗ್ಲೆಂಡ್ ದೊರೆಗಳ ಆಪ್ತಮಿತ್ರರಾಗಿದ್ದವರು.

 ಬೆಂಜಮಿನ್ನರು ಯಾವುದೇ ಕಲಾಶಾಲೆಯ ವಿದ್ಯಾರ್ಥಿಯಾಗಿ ಕಲೆಯನ್ನು ಕಲಿತವರಲ್ಲ. ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗ ಯಾವುದೇ ಚಿತ್ರಕಲಾ ಶಾಲೆಗೂ ಹೋಗದೆ ಯಾರಿಂದಲೂ ಪಾಠ ಹೇಳಿಸಿಕೊಳ್ಳದೆ ಇಷ್ಟೊಂದು ಪ್ರಖ್ಯಾತ ಚಿತ್ರಕಾರರಾಗಲು ಸ್ಫೂರ್ತಿ ಯಾರೆಂದು ಕೇಳಿದಾಗ ಅವರು ನನ್ನ ಹೆತ್ತ ತಾಯಿ ನನಗೆ ಕೊಟ್ಟ ಒಂದು ಸಿಹಿಮುತ್ತು ನಾನು ಈ ಮಟ್ಟಕ್ಕೇರಲು ಕಾರಣವಾಯಿತು! ಎಂದರಂತೆ. ಅದು ಹೇಗೆಂದು ಕೇಳಿದಾಗ ಅವರು ಹೇಳಿಕೊಂಡ ಘಟನೆ ಹೀಗಿದೆ.


ಬಡ ಕುಟುಂಬದವರಾದ ಅವರ ತಾಯಿ ಸಂಸಾರ ನಿರ್ವಹಣೆಗಾಗಿ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡಬೇಕಾಗಿತ್ತಂತೆ. ಒಮ್ಮೆ ಯಾವುದೋ ಮನೆಯವರು ಆಕೆಗೆ ಬರೆಯಲು ಉಪಯೋಗಿಸುವ ಕಪ್ಪು, ನೀಲಿ, ಕೆಂಪು ಮತ್ತು ಹಸಿರು ಶಾಯಿಯ ಶೀಷೆಗಳನ್ನು ತರಲಿಕ್ಕೆ ಕಳುಹಿಸಿದ್ದರಂತೆ. ಅವನ್ನೆಲ್ಲ ಆಕೆ ಕೊಂಡುಕೊಳ್ಳುವಷ್ಟರಲ್ಲಿ ಕತ್ತಲಾಗಿತ್ತು. ಮರುದಿನ ಅದನ್ನು ಕೊಂಡೊಯ್ದರಾದೀತು ಎಂದುಕೊಂಡು ಆಕೆ ಅವೆಲ್ಲವನ್ನು ಮನೆಗೆ ತಂದಿಟ್ಟರು. ಆಕೆಗೆ ಬೆಂಜಮಿನ್ ವೆಸ್ಟ್ ಒಬ್ಬ ಏಳೆಂಟು ವರ್ಷದ ಮಗ ಮತ್ತು ಎರಡು ವರ್ಷ ವಯಸ್ಸಿನ ಸ್ಯಾಲಿ ಎಂಬ ಹೆಣ್ಣು ಮಗಳು ಇದ್ದರು. ಮರುದಿನ ಮುಂಜಾನೆ ಆಕೆ ಕೆಲಸಕ್ಕೆ ಹೋಗುವಾಗ ಬಣ್ಣಬಣ್ಣದ ಶಾಯಿಯ ಶೀಷೆಗಳನ್ನು ತೆಗೆದುಕೊಂಡು ಹೋಗಲು ಮರೆತುಬಿಟ್ಟರು.


ಆಕೆ ಮಗ ಬೆಂಜಮಿನನಿಗೆ ನಿನ್ನ ತಂಗಿ ಸ್ಯಾಾಲಿಯನ್ನು ನಾನು ಬರುವವರೆಗೂ ನೋಡಿಕೋ ಎಂದು ಹೇಳಿ ಹೋದರು. ತಂಗಿಯನ್ನು ಆಟವಾಡಿಸುತ್ತಿದ್ದ ಬೆಂಜಮಿನ್ನನ ಕಣ್ಣಿಗೆ ಬಣ್ಣಬಣ್ಣದ ಶಾಯಿಯ ಶೀಶೆಗಳು ಕಂಡವು. ಆತ ಅವನ್ನು ತನಗೆತಿಳಿದಂತೆ ಮಿಶ್ರಣ ಮಾಡಿದ. ಅವನ್ನು ಬಳಸಿಕೊಂಡು ತನ್ನ ಮುದ್ದು ತಂಗಿ ಸ್ಯಾಲಿಯ ಚಿತ್ರವನ್ನು ಗೋಡೆಯ ಮೇಲೆ ಬಿಡಿಸತೊಡಗಿದ.  ಹಾಗೆ ಮಾಡುವಾಗ ಮನೆಯ ನೆಲದ ಮೇಲೆ, ಅಲ್ಲಿದ್ದ ಕುರ್ಚಿ-ಮೇಜು-ಮಂಚಗಳ ಮೇಲೆ ಮತ್ತು ಗೋಡೆಯ ಮೇಲೆ ಬಣ್ಣ ಚೆಲ್ಲಾಪಿಲ್ಲಿಯಾಗಿ ಚೆಲ್ಲಿತ್ತು. ನೋಡಲು ಅಲ್ಲೇನೋ  ರಾದ್ಧಾಂತವಾದಂತೆ ಕಾಣುತ್ತಿತ್ತು!


ಬೆಂಜಮಿನರ ತಾಯಿ ಮನೆಗೆ ಬಂದಾಗ, ಮನೆಯ ನೆಲ, ಗೋಡೆಗಳು, ಮೇಜು-ಮಂಚಗಳ ಮೇಲೆ ಬಿದ್ದಿದ್ದ ಬಣ್ಣದೋಕುಳಿಯ ರಾದ್ಧಾಂತವನ್ನು ನೋಡಿದರು. ಬೇರೆ ಯಾರಾದರೂ ತಾಯಿ ಆ ರಾದ್ಧಾಂತವನ್ನು ನೋಡಿ ಏನು ಮಾಡಿತಿದ್ದರೋ ಏನೋ? ಆದರೆ ಆಕೆ ಮಗನ ಮೇಲೆ ಸಿಟ್ಟುಗೊಳ್ಳಲಿಲ್ಲ. ಮಗನಿಗೆ ಪೆಟ್ಟು ಕೊಡಲಿಲ್ಲ. ಗೋಡೆಯ ಮೇಲೆ ಮುಸುಕು ಮುಸುಕಾಗಿ ಬಿಡಿಸಲಾಗಿದ್ದ ಮಗಳು ಸ್ಯಾಲಿಯ ಚಿತ್ರವನ್ನು ನೋಡಿದರು. ಮಗನನ್ನು ಹತ್ತಿರ ಕರೆದು ಈ ಚಿತ್ರವನ್ನು ಬಿಡಿಸಿದ್ದು ನೀನೇನಾ? ಎಂದು ಕೇಳಿದರು. ಆತ ಅಂಜುತ್ತಲೇ ಹೌದೆಂದ. ತಕ್ಷಣ ತಾಯಿ ಮಗನನ್ನು ತಬ್ಬಿಕೊಂಡರು. ಕೆನ್ನೆಗೆ ಮುತ್ತು ಕೊಟ್ಟರು. ಎಷ್ಟು ಅದ್ಭುತವಾಗಿ ನಿನ್ನ ತಂಗಿಯ ಚಿತ್ರವನ್ನು ಬಿಡಿಸಿದ್ದೀಯ ಎಂದು ಉದ್ಘಾರ ತೆಗೆದರು!


ಮುಂದೊಂದು ದಿನ ಹೆಸರಾಂತ ಚಿತ್ರಕಾರನಾದ ಬೆಂಜಮಿನ್ ವೆಸ್ಟ್ ಅಂದು ಹುಟ್ಟಿಕೊಂಡ! ಆ ಮುತ್ತು ಮತ್ತು ಪ್ರೋತ್ಸಾಹದ ಮಾತುಗಳೇ ಆತನಿಗೆ ಸ್ಫೂರ್ತಿ ಎಂದು ಬೆಂಜಮಿನ್ನರು ಹೇಳಿಕೊಂಡರಂತೆ! ಅಂದಿನ ಪರಿಸ್ಥಿತಿಯಲ್ಲಿ ಬೆಂಜಮಿನರ ತಾಯಿಯ ಸ್ಥಳದಲ್ಲಿ ನಾವಿದ್ದಿದ್ದರೆ ನಾವೇನು ಮಾಡುತ್ತಿದ್ದೆವು? 

ಒಮ್ಮೆ ಯೋಚಿಸೋಣ.ನಮ್ಮ ಮಕ್ಕಳ ಆಸಕ್ತಿ ಅಭಿರುಚಿಗಳನ್ನು ಗೌರವಿಸೋಣ.ಬೆಂಬಲಿಸೋಣ.

ಯಾರಿಗೆ ಗೊತ್ತು

ಮುಂದೊಂದು ದಿನ ನಮ್ಮ ಮಕ್ಕಳು ಅವರಿಷ್ಟದ ಕ್ಷೇತ್ರದಲ್ಲಿ ಅದ್ಭುತ  ಸೃಷ್ಟಿಸಬಹುದು.


ಸಿಹಿಜೀವಿ ವೆಂಕಟೇಶ್ವರ