28 ಫೆಬ್ರವರಿ 2024

ಮಕ್ಕಳಿಗೆ ಡಿಜಿಟಲ್ ಪೌರತ್ವದ ಅರಿವು


 


 ಮಕ್ಕಳಿಗೆ  ಡಿಜಿಟಲ್ ಪೌರತ್ವದ ಅರಿವು 


ಪ್ರತಿಯೊಬ್ಬ ನಾಗರೀಕರು ಯಾವುದಾದರೊಂದು ದೇಶದ ಪೌರತ್ವ ಹೊಂದಿಯೇ ಹೊಂದಿರುತ್ತಾರೆ ಇದರ ಜೊತೆಯಲ್ಲಿ ಇಂದಿನಎಲೆಕ್ಟ್ರಾನಿಕ್ ಯುಗ, ಇಂಟರ್ನೆಟ್ ಯುಗ ಮತ್ತು ಕಂಪ್ಯೂಟರ್ ಯುಗದಲ್ಲಿ ಡಿಜಿಟಲ್ ಪೌರತ್ವವೂ ಮಹತ್ವವನ್ನು ಹೊಂದಿದೆ. ಎಲ್ಲರಿಗೂ ಈ ವಿಷಯದಲ್ಲಿ ತಿಳುವಳಿಕೆ ನೀಡುವುದು ಅಗತ್ಯ ಅದರಲ್ಲೂ ಶಾಲಾ ಮಕ್ಕಳಿಗೆ ಡಿಜಿಟಲ್ ಪೌರತ್ವ ದ ಬಗ್ಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ.


ಡಿಜಿಟಲ್ ಪೌರತ್ವ ಎಂದರೇನು?


ನಮ್ಮ ದೈನಂದಿನ ಜೀವನದಲ್ಲಿ ನಮಗೆ ನಿಯಮಗಳು ಮತ್ತು ಜವಾಬ್ದಾರಿಗಳಿರುವಂತೆಯೇ, ನಾವು ತಂತ್ರಜ್ಞಾನ ಮತ್ತು ಇಂಟರ್ನೆಟ್ ಬಳಸುವಾಗ ಅವುಗಳನ್ನು ಹೊಂದಿದ್ದೇವೆ. ಉತ್ತಮ ಡಿಜಿಟಲ್ ನಾಗರಿಕರಾಗಿರುವುದು ಎಂದರೆ ತಂತ್ರಜ್ಞಾನವನ್ನು ಗೌರವಯುತವಾಗಿ, ಜವಾಬ್ದಾರಿಯುತವಾಗಿ ಮತ್ತು ಸುರಕ್ಷಿತವಾಗಿ ಬಳಸುವುದು ಎಂದರ್ಥ.


ಉತ್ತಮ ಡಿಜಿಟಲ್ ಪ್ರಜೆಯಾಗುವುದು ಹೇಗೆ?


1. ಇತರರೊಂದಿಗೆ ಸೌಜನ್ಯದಿಂದ ವರ್ತಿಸುವುದು.


ನಾವು ಒಬ್ಬರನ್ನು ಮುಖತಃ ಭಟಿಮಾಡಿದಾಗ ಹೇಗೆ ವರ್ತಿಸುತ್ತೇವೆಯೋ, ಆನ್ ಲೈನ್ ನಲ್ಲಿರುವಾಗ ಕೂಡಾ ಜನರೊಂದಿಗೆ ಹಾಗೆಯೇ ವರ್ತಿಸಬೇಕು. ನಾವು ಸಭ್ಯ ಪದಗಳನ್ನು ಬಳಸಬೇಕು. ಯಾರನ್ನೂ ಹೀಯಾಳಿಸಬಾರದು ಮತ್ತು ನೋಯಿಸಬಾರದು.

ಇತರರು ಸಹಾಯ ಬೇಡಿದರೆ ನಾವು ನಮಗೆ ತಿಳಿದಿರುವುದನ್ನು ಹೇಳಿ ಅವರಿಗೆ ಸಹಾಯ ಮಾಡಬಹುದು. ನಾವು ಉತ್ತಮ ಆನ್ ಲೈನ್ ಸಂಬಂಧಗಳನ್ನು ಹೊಂದಿರಬೇಕು.


2. ಇತರರ ಗೌಪ್ಯತೆಯನ್ನು ಗೌರವಿಸುವುದು.


ಇತರರ ಅನುಮತಿಯಿಲ್ಲದೆ ನಾವು ಅವರ ವೈಯಕ್ತಿಕ ಮಾಹಿತಿ ಅಥವಾ ಚಿತ್ರಗಳನ್ನು ಹಂಚಿಕೊಳ್ಳಬಾರದು.

ನಾವು ಆನ್ ಲೈನ್ ನಲ್ಲಿ ಮಾಡುವ ಕೆಲಸವು ಇತರರ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಆದ್ದರಿಂದ ಇನ್ನೊಬ್ಬರ ಬಗ್ಗೆ, ಏನನ್ನಾದರೂ ಪೋಸ್ಟ್ ಮಾಡುವ ಅಥವಾ ಹಂಚಿಕೊಳ್ಳುವ ಮೊದಲು ನಾವು ಯಾವಾಗಲೂ ಯೋಚಿಸಬೇಕು.

ನಾವು ಆನ್ ಲೈನ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು ಅಥವಾ ಇತರರ ರಹಸ್ಯಗಳನ್ನು ಹಂಚಿಕೊಳ್ಳಬಾರದು.


3. ತಂತ್ರಜ್ಞಾನವನ್ನು ಜಾಗರೂಕತೆಯಿಂದ ಬಳಸುವುದು.


ತಂತ್ರಜ್ಞಾನವು ಅದ್ಭುತವಾಗಿದೆ ಮತ್ತು ವಿಸ್ಮಯಕಾರಿಯಾಗಿದೆ. ಆದರೆ ನಾವು ಅದನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಆನ್ ಲೈನ್ ನಲ್ಲಿ ಸಮಯ ಕಳೆಯುವುದು ಮತ್ತು ಹೊರಗೆ ಆಟವಾಡುವುದು, ಪುಸ್ತಕಗಳನ್ನು ಓದುವುದು ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಮುಂತಾದ ಇತರ ಚಟುವಟಿಕೆಗಳನ್ನು ಮಾಡುವುದರ ನಡುವೆ ನಾವು ಸಮತೋಲನವನ್ನು ಕಂಡುಕೊಳ್ಳಬೇಕು.

ನಾವು ಕಲಿಯಲು ಮತ್ತು ಬೆಳೆಯಲು ಸಹಾಯ ಮಾಡುವ ರೀತಿಯಲ್ಲಿ ನಾವು ತಂತ್ರಜ್ಞಾನವನ್ನು ಬಳಸಬೇಕು. ನಮ್ಮ ಜ್ಞಾನ ಮತ್ತು ಸೃಜನಶೀಲತೆಯನ್ನು ವಿಸ್ತರಿಸುವ ಅನೇಕ ಶೈಕ್ಷಣಿಕ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕು.


4. ನಿಯಮಗಳನ್ನು ಪಾಲಿಸುವುದು.


ನಮ್ಮ ಪೋಷಕರು, ಶಿಕ್ಷಕರು ಮತ್ತು ನಾವು ಭೇಟಿ ನೀಡುವ ವೆಬ್ ಸೈಟ್ ಗಳು ನಿಗದಿಪಡಿಸಿದ ನಿಯಮಗಳನ್ನು ಮತ್ತು ಮಾರ್ಗಸೂಚಿಗಳನ್ನು ನಾವು ಯಾವಾಗಲೂ ಅನುಸರಿಸಬೇಕು. ನಮ್ಮನ್ನು ಸುರಕ್ಷಿತವಾಗಿಡಲು ಈ ನಿಯಮಗಳಿವೆ.

ನಾವು ಆನ್ ಲೈನ್ ನಲ್ಲಿ ತಪ್ಪು ಮಾಡಿದರೆ, ಆಕಸ್ಮಿಕವಾಗಿ ಬೇಡದ ಯಾವುದನ್ನಾದರೂ ಕ್ಲಿಕ್ ಮಾಡಿದರೆ, ದೊಡ್ಡವರಿಗೆ ಹೇಳುವುದು ಮುಖ್ಯ ಸಮಸ್ಯೆಯನ್ನು ಪರಿಹರಿಸಲು ಅವರು ನಮಗೆ ಸಹಾಯ ಮಾಡಬಹುದು ಮತ್ತು ನಾವು ಅದರಿಂದ ಕಲಿಯಬಹುದು.


5. ಆನ್ ಲೈನ್ ಸುರಕ್ಷತೆಯ ಬಗ್ಗೆ, ತಿಳುವಳಿಕೆ


ಅನುಮಾನಾಸ್ಪದವಾಗಿ ಕಾಣುವ ವೆಬ್ ಸೈಟ್ ಗಳು, ಜಾಹೀರಾತುಗಳು, ಫೋನ್ ಸಂಖ್ಯೆಗಳು, ಸಂದೇಶಗಳು, ಲಿಂಕ್ ಗಳನ್ನು ಹೇಗೆ ಗುರುತಿಸುವುದು ಮತ್ತು ತಪ್ಪಿಸುವುದು ಎಂಬುದನ್ನು ನಾವು ತಿಳಿದಿರಬೇಕು. ಏನಾದರೂ ಸರಿ ಎನಿಸದಿದ್ದರೆ, ಸಹಾಯಕ್ಕಾಗಿ ದೊಡ್ಡವರನ್ನು 

ನಮ್ಮ ಸಾಧನಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸುರಕ್ಷಿತವಾಗಿಡಲು ನಾವು ಬಲವಾದ ಪಾಸ್ ವರ್ಡ್ ಗಳನ್ನು ಬಳಸಬೇಕು.

ನಾವು ನಮ್ಮ ಪಾಸ್ ವರ್ಡ್ ಅಥವಾ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


25 ಫೆಬ್ರವರಿ 2024

ಯಾರು ಶ್ರೇಷ್ಠ?

 


ಯಾರು ಶ್ರೇಷ್ಠ?



ಜಗದ ಎಲ್ಲಾ  ವಸ್ತುಗಳು ಮತ್ತು  ಜೀವಿಗಳು ತಮ್ಮದೇ ಆದ ಮಹತ್ವ ಹೊಂದಿವೆ. ನೀರು ಗಾಳಿ ಬೆಂಕಿ, ಭೂಮಿ ಹೀಗೆ ಎಲ್ಲವೂ ಮುಖ್ಯ. ಮಾನವರ ವಿಷಯಕ್ಕೆ ಬಂದರೆ ಪ್ರತಿಯೊಬ್ಬರೂ ಒಂದೊಂದು ವಿಷಯಗಳಲ್ಲಿ ಪರಿಣತಿ ಹೊಂದಿ ತಮ್ಮದೇ ಆದ ಉಪಯುಕ್ತತೆ ಹೊಂದಿರುತ್ತಾರೆ. ಆದರೆ ಪೂರ್ವಾಗ್ರಹದಿಂದ ಕೆಲವರನ್ನು ಅನವಶ್ಯಕವಾಗಿ ಅವಮಾನಿಸಿ ಅವರನ್ನು ಜರೆದು ಕೆಲಸಕ್ಕೆ ಬಾರದವರೆಂದು ಹಣೆಪಟ್ಟಿ ಕಟ್ಟಿಬಿಡುತ್ತೇವೆ.

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನಿಗೆ 3 ಜನ ಮಕ್ಕಳು. ಹಿರಿಯ ರಾಜಕುಮಾರನ ಹೆಸರು ರಾಜೇಂದ್ರ. ಎರಡನೇ ರಾಜಕುಮಾರ ಸೋಮೆಂದ್ರ. ಹಾಗೂ ಮೂರನೇ ರಾಜಕುಮಾರ ದೇವೇಂದ್ರ. ಮೂವರೂ ರಾಜಕುಮಾರರೂ ವಿದ್ಯಾರ್ಜನೆ ಮುಗಿಸಿ ರಾಜಧಾನಿಗೆ ಹಿಂದಿರುಗಿದ ಮೇಲೆ ರಾಜನಿಗೆ ಒಂದು ಯೋಚನೆ ಬಂತು. ಮೂರು ಜನ ರಾಜಕುಮಾರರಲ್ಲಿ ಯಾರು ತನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಪರೀಕ್ಷಿಸಲು ನಿರ್ಧರಿಸಿದ. ಆ ಯೋಚನೆ ಬಂದ ಕೂಡಲೇ ರಾಜ ಮೂವರೂ ರಾಜಕುಮಾರರನ್ನು ಕರೆಸಿದ. ಅವರೆಲ್ಲರಿಗೆ ಒಂದು ಪ್ರಶ್ನೆ ಹಾಕಿದ. ಅದೇನೆಂದರೆ ರಾಜನನ್ನು ಅವರು ಎಷ್ಟು ಪ್ರೀತಿಸುತ್ತಾರೆ ಎಂಬ ಪ್ರಶ್ನೆ ಹಾಕಿ ಮಾರನೇ ದಿನ ಉತ್ತರಿಸಲು ಹೇಳಿದ. ಮರುದಿನ ಹಿರಿಯ ರಾಜಕುಮಾರ ರಾಜೇಂದ್ರ ಬಂದು ತಾನು ರಾಜನನ್ನು ನಗ, ನಾಣ್ಯ, ಸಂಪತ್ತು ಎಲ್ಲವುಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ಸಂತೋಷವಾಯಿತು. ಎರಡನೇ ರಾಜಕುಮಾರ ಸೋಮೆಂದ್ರ ಬಂದು ತಾನು ರಾಜನನ್ನು ಎಲ್ಲಾ ಸಿಹಿತಿಂಡಿಗಳು ಕಜ್ಜಾಯಗಳಿಗಿಂತ ತುಂಬಾ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ಖುಶಿಯಾಯ್ತು. ಮೂರನೇ ರಾಜಕುಮಾರ ದೇವೇಂದ್ರ ಬಂದು ತಾನು ರಾಜನನ್ನು ಉಪ್ಪಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ತುಂಬಾ ಕೋಪ ಬಂತು. ತನ್ನನ್ನು ಆ ಕನಿಷ್ಠ ಉಪ್ಪಿಗಿಂತ ಪ್ರೀತಿಸುತ್ತಾನೆಂದು ಹೇಳುತ್ತಾನಲ್ಲ ದೇವೇಂದ್ರ ಎಂದು. ರಾಜ ಕೋಪದಿಂದ ದೇವೇಂದ್ರನಿಗೆ ಬೈದು ತನ್ನನ್ನು ಪ್ರೀತಿಸದ ಮೇಲೆ ತನ್ನ ರಾಜ್ಯ ಸಂಪತ್ತು ಯಾವುದರಲ್ಲೂ ನಿನಗೆ ಹಕ್ಕಿಲ್ಲ ಎಂದು ಹೇಳಿ ದೇವೇಂದ್ರನನ್ನು ರಾಜ್ಯದಿಂದ ಹೊರಕ್ಕೆ ಹಾಕಿಬಿಟ್ಟ.


ತಂದೆಯು ತನ್ನನ್ನು ಮನೆಯಿಂದ ಹೊರಹಾಕಿದ್ದಕ್ಕೆ ದೇವೇಂದ್ರ ತುಂಬಾ ನೊಂದುಕೊಂಡ. ಹೀಗೆ ದು:ಖಿಸುತ್ತಾ ಒಂದು ದಿನ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಒಬ್ಬಳು ತುಂಬಾ ವಯಸ್ಸಾದ ಅಜ್ಜಿ ನಡೆಯಲಾರದೇ ಕಷ್ಟ ಪಡುತ್ತಿರುವುದನ್ನು ನೋಡಿದ ದೇವೇಂದ್ರ ಆ ಅಜ್ಜಿಯನ್ನು ಕೈ ಹಿಡಿದು ಆಕೆಯ ಮನೆಯವರೆಗೂ ಆಕೆಗೆ ನಡೆಯಲು ಸಹಾಯ ಮಾಡಿದ. ದೇವೇಂದ್ರನ ಈ ಸಹಾಯದಿಂದ ತುಂಬಾ ಸಂತೋಷಗೊಂಡ ಆ ಅಜ್ಜಿ ದೇವೇಂದ್ರ ನ ಪೂರ್ವಾಪರಗಳನ್ನು ವಿಚಾರಿಸಿದಳು. ದೇವೇಂದ್ರ ನಡೆದ ಕತೆಯನ್ನೆಲ್ಲ ಅಜ್ಜಿಗೆ ವಿವರಿಸಿದ. ಕಥೆಯನ್ನು ಕೇಳಿದ ಅಜ್ಜಿ ದೇವೇಂದ್ರನಿಗೆ ಸಹಾಯ ಮಾಡಲು ನಿರ್ಧರಿಸಿದಳು. ದೇವೇಂದ್ರನನ್ನು ಕರೆದು ಹೀಗೆ ಹೇಳಿದಳು. “ನನಗೆ ಮಾಯಾವಿ ಶಕ್ತಿಯಿದೆ, ಆ ಶಕ್ತಿಯನ್ನು ಬಳಸಿ ನಿನಗೆ ಒಂದು ರಾಜ್ಯ ನಿರ್ಮಿಸಿ ಕೊಡುತ್ತೇನೆ. ನೀನು ಇದೆ ರೀತಿ ಒಳ್ಳೆಯತನದಿಂದ ಆ ರಾಜ್ಯವನ್ನು ಆಳಬೇಕು” ಎಂದು ಆದೇಶಿಸಿದಳು. ಇದರಿಂದ ಸಂತೋಷಗೊಂಡ ದೇವೇಂದ್ರ ಆದೇಶವನ್ನು ಶಿರಸಾ ಪಾಲಿಸುತ್ತೇನೆ ಎಂದು ಮಾತು ಕೊಟ್ಟ. ಮಾತಿನಂತೆ ಅಜ್ಜಿ ದೇವೇಂದ್ರನಿಗೆ ಒಂದು ಸುಂದರ ಸಂಪದ್ಭರಿತ ರಾಜ್ಯ ಕಟ್ಟಿ ಕೊಟ್ಟಳು. ಸಂತೋಷಗೊಂಡ ದೇವೇಂದ್ರ ಅಜ್ಜಿಗೆ ಧನ್ಯವಾದ ಹೇಳಿ ತನ್ನ ರಾಜ್ಯಕ್ಕೆ ಹೋಗಿ ದಕ್ಷತೆಯಿಂದ ರಾಜ್ಯಭಾರ ಮಾಡತೊಡಗಿದ.


ಕೆಲ ಕಾಲದ ನಂತರ ದೇವೇಂದ್ರನಿಗೆ ತನ್ನ ತಂದೆ ತಾಯಿ ಸಹೋದರರನ್ನು ಭೇಟಿಯಾಗುವ ಆಸೆಯಾಯ್ತು. ಆದರೆ ತಂದೆಗೆ ತನ್ನ ಮೇಲಿರುವ ಕೋಪ ಇನ್ನೂ ಕಡಿಮೆಯಾಗಿದೆಯೋ ಇಲ್ಲವೋ ಎನ್ನುವ ಆತಂಕ. ಅದಕ್ಕೆ ಅವನು ಒಂದು ಉಪಾಯ ಯೋಚಿಸಿದ. ತನ್ನ ಸುತ್ತ ಮುತ್ತಲಿನ ಎಲ್ಲಾ ರಾಜ್ಯದ ರಾಜರಿಗೆ ಒಂದು ಔತಣಕೂಟ ಏರ್ಪಡಿಸಿದ. ಆ ಔತಣಕೂಟಕ್ಕೆ ದೇವೇಂದ್ರನ ತಂದೆ ತಾಯಿ ಸಹೋದರರನ್ನೂ ಆಮಂತ್ರಿಸಿದ.


ಔತಣ ಕೂಟಕ್ಕೆ ಆಮಂತ್ರಣ ನೀಡಿದ ರಾಜ ಯಾರೆಂದು ತಿಳಿದಿಲ್ಲವಾದರೂ ದೇವೇಂದ್ರನ ತಂದ ಪರಿವಾರ ಸಮೇತ ಆಗಮಿಸಿದ. ಎಲ್ಲಾ ರಾಜರೂ ಆಗಮಿಸಿದ ಮೇಲೆ ರಾಜ ಅಂದರೆ ದೇವೇಂದ್ರ ಸಭೆಗೆ ಆಗಮಿಸದೆ ತನ್ನ ಮಂತ್ರಿಯನ್ನು ಕಳುಹಿಸಿ ಔತಣದ ನಂತರ ರಾಜ ಆಗಮಿಸುತ್ತಾರೆ ಎಂಬ ಸಂದೇಶವನ್ನು ಸಭೆಯಲ್ಲಿ ಘೋಷಿಸಿದ. ಔತಣಕೂಟಕ್ಕೆ ಸಿದ್ದಪಡಿಸಿದ ಎಲ್ಲಾ ತಿನಿಸುಗಳನ್ನು ತಂದು ಸಭೆಯಲ್ಲಿ ಇಟ್ಟರು ವಿಧ ವಿಧ ಕಜ್ಜಾಯಗಳು ತಿಂಡಿ ತಿನಿಸುಗಳು ನೋಡಿದ ತಕ್ಷಣ  ಬಾಯಲ್ಲಿ ನೀರೂರುವಂತಿತ್ತು. ಸಭೆಯಲ್ಲಿ ಕುಳಿತಿದ್ದ ರಾಜರುಗಳಿಗೆಲ್ಲಾ ಊಟ ಬಡಿಸಲಾಯ್ತು. ಒಂದೆರಡು ತುತ್ತು ಊಟ ಮಾಡಿ ಎಲ್ಲರೂ ಮುಖ ಮುಖ ನೋಡಿಕೊಳ್ಳಲಾರಂಭಿಸಿದರು. ಯಾಕೆಂದರೆ ಯಾವ ಅಡುಗೆಗೂ ಉಪ್ಪೇ ಹಾಕಿರಲಿಲ್ಲ. ನೋಡಲು ತುಂಬಾ ಸುಂದರವಾಗಿ ಕಂಡ ಆ ಎಲ್ಲಾ ತಿಂಡಿ ತಿನಿಸುಗಳೂ ಸಪ್ಪೆ ಸಪ್ಪೆ. ಉಪ್ಪಿಲ್ಲದ ಆ ಅಡುಗೆ ಸ್ವಲ್ಪವೂ ರುಚಿಕರವಾಗಿರಲಿಲ್ಲ. ಎಲ್ಲರೂ ಉಪ್ಪಿಲ್ಲದ ಆ ಸಪ್ಪೆ ಊಟವನ್ನು ತೆಗಳಲು ಶುರು ಮಾಡಿದರು. ದೇವೇಂದ್ರನ ತಂದೆ ಸಹ ಇದೆಂತ ಕೆಟ್ಟ ಊಟ ಎಂದು ಬಯ್ದ. ಆಗ ಸಭೆಗೆ ದೇವೇಂದ್ರ ಆಗಮಿಸಿದ. ಉಪ್ಪಿಲ್ಲದೆ ಊಟ ತಯಾರಿಸಿದುದರ ಕಾರಣ ಘೋಷಿಸಿದ. ತಾನು ತನ್ನ ತಂದೆಯನ್ನು ಉಪ್ಪಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದಾಗ ತನ್ನ ತಂದೆ ಉಪ್ಪನ್ನು ತುಂಬಾ ಕನಿಷ್ಠ ವಸ್ತುವೆಂದು ಪರಿಗಣಿಸಿ ತನ್ನನ್ನು ಮನೆಯಿಂದ ಹೊರಗೆ ಹಾಕಿದ ವಿಷಯ ತಿಳಿಸಿದ. ಅದಕ್ಕಾಗಿಯೇ ಉಪ್ಪಿನ ಬೆಲೆಯನ್ನು ಎಲ್ಲರಿಗೂ ಮನವರಿಕೆ ಮಾಡಲೆಂದೆ ಉಪ್ಪಿಲ್ಲದ ಅಡುಗೆಯನ್ನು ಎಲ್ಲರಿಗೂ ತಿನಿಸಿದ್ದಾಗಿ ಹೇಳಿದ. ಆಗ ದೇವೇಂದ್ರನ ತಂದೆಗೆ ತಾನು ಮಾಡಿದ ತಪ್ಪಿನ ಅರಿವಾಯ್ತು. ದೇವೇಂದ್ರನಲ್ಲಿ ಕ್ಷಮೆ ಕೇಳಿದ. ದೇವೇಂದ್ರ ಮತ್ತೆ ತನ್ನ ತಂದೆ ತಾಯಿ ಪರಿವಾರದೊಡಗೂಡಿ ಸಂತೋಷವಾಗಿ ಒಳ್ಳೆಯತನದಿಂದ ರಾಜ್ಯಭಾರ ಮಾಡಿದ.

ಈ ಜಗದಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರಿಗೂ ತಮ್ಮದೇ ಆದ ಮಹತ್ವವಿದೆ.


 ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

ಆತ್ಮೀಯ ಶಿಕ್ಷಕ, ಶಿಕ್ಷಕಿಯರೆ ದಯವಿಟ್ಟು ಗಮನಿಸಿ...

 


ಆತ್ಮೀಯ ಶಿಕ್ಷಕ, ಶಿಕ್ಷಕಿಯರೆ ದಯವಿಟ್ಟು ಗಮನಿಸಿ...


ಜಾಗತೀಕರಣ, ಆಧುನೀಕರಣ, ಕೈಗಾರಿಕೀಕರಣ, ನಗರೀಕರಣದ ಈ ಕಾಲಘಟ್ಟದಲ್ಲಿ ಮೊಬೈಲ್,ಎ ಐ ,ಟಿ ವಿ ಗಳು ಮತ್ತು ಸಾಮಾಜಿಕ ಮಾದ್ಯಮಗಳ ಅತಿಯಾದ ಬಳಕೆಯ ಈ ಸಂಧಿಕಾಲದಲ್ಲಿ ಶಿಕ್ಷಕರ ಕೆಲಸ ಸವಾಲಿನದು ಎಂದರೆ ತಪ್ಪಾಗಲಾರದು. ಪ್ರಭುತ್ವದ ಕೆಲ ನಿಯಮಗಳು, ಮಕ್ಕಳ ಅತಿಯಾದ ನಕಾರಾತ್ಮಕ ಚಟುವಟಿಕೆಗಳು, ಪೋಷಕರ ಅತಿಯಾದ ಮುದ್ದು ಇವುಗಳ ಪರಿಣಾಮವಾಗಿ ಶಾಲೆಗೆ ಬರುವ ಕೆಲ ಮಕ್ಕಳ ವರ್ತನೆ ಸಾಮಾನ್ಯ ವಿದ್ಯಾರ್ಥಿಗಳ ವರ್ತನೆಯಂತಿರದೆ ಯಾವುದೋ ಬಾಹ್ಯ ಪ್ರಪಂಚದಿಂದ ಪ್ರೇರಣೆಗೊಂಡು ನಿರ್ದೇಶಿತವಾದಂತೆ ಭಾಸವಾಗುತ್ತದೆ. ಇಂತಹ ಸಂಕೀರ್ಣವಾದ ಸಮಯದಲ್ಲಿ ಶಿಕ್ಷಕರಾದ ನಾವು ಇನ್ನೂ ಹೆಚ್ಚಿನ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

 ಮೊನ್ನೆ ಈ ವಿಷಯಕ್ಕೆ ಸಂಬಂಧಿಸಿದಂತೆ ಗೆಳೆಯನೋರ್ವ ಒಂದು ಸಂದೇಶ ಕಳಿಸಿದ್ದ ಅದಕ್ಕೆ ಕೆಲ ನನ್ನ ಮಾತುಗಳನ್ನು ಸೇರಿಸಿರುವೆ.

ಇಂದಿನ ಶಿಕ್ಷಕರಾದ ನಾವು ಅಗತ್ಯವಾಗಿ ಕೆಲ ಅಂಶಗಳನ್ನು ತಿಳಿದಿರಬೇಕು ಹಾಗೂ ನಮ್ಮ ಬೋಧನಾ ಜೀವನದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಪ್ರಯತ್ನ ಮಾಡೋಣ.

ತೀರಾ ಇತ್ತೀಚಿನವರೆಗೆ ಶಿಕ್ಷಕರು ಪ್ರಶ್ನಾತೀತರಾಗಿದ್ದರು. ಆದರೆ ಇಂದು ಅವರನ್ನು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರೂ ಪ್ರಶ್ನಿಸಬಹುದು ಎಂದು ತಿಳಿದಿರಲಿ.ಮೊದಲು ಟೀಚಿಂಗ್ ಪ್ರೊಫೆಷನ್ ಈಸ್ ನೋಬಲ್ ಪ್ರೊಫೆಷನ್ ಎಂಬ ಗೌರವವಿತ್ತು.ಆದರೆ  ಶಿಕ್ಷಕ ವೃತ್ತಿ ಇಂದು ಇತರ ವೃತ್ತಿಗಳಂತೆ ಒಂದು ವೃತ್ತಿ ಎಂದು ಕೆಲವರು ಭಾವಿಸಿದ್ದಾರೆ ಎಂಬುದು ನಿಮಗೆ  ಗೊತ್ತಿರಲಿ.ಧರ್ಮ, ಜಾತಿ, ರಾಜಕೀಯ ದಂತಹ ವಿಚಾರಗಳು ಈ ದಿನಗಳಲ್ಲಿ ತೀರಾ ಸೂಕ್ಷ್ಮ ವಿಚಾರಗಳು. ಇಲ್ಲಿ ಹಗ್ಗದ ಮೇಲಿನ ನಡಿಗೆಯಂತಹ ಎಚ್ಚರ ಅಗತ್ಯ ಎಂಬ ಅರಿವಿರಲಿ.

ಈ ಮೇಲಿನ ಎಲ್ಲಾ ಕ್ಷೇತ್ರಗಳಲ್ಲೂ ನಿಮ್ಮ ನಿಲುವು ತಟಸ್ಥವಾಗಿಯೇ ಇರಲಿ.ನಮಗೂ ಖಾಸಗಿ ಬದುಕಿದೆ. ನಮ್ಮ ಖಾಸಗಿ ಬದುಕಿನ ಖಾಸಗಿ ವಿಚಾರಗಳು ಕೂಡಾ ನಮ್ಮ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬ ಸತ್ಯದ ಅರಿವಿರಲಿ.

ನಮ್ಮ ನಿಯಂತ್ರಣದಲ್ಲಿ  ವಿದ್ಯಾರ್ಥಿ ಸಮುದಾಯ ಇದೆ ಎಂಬ ಭಾವನೆ ಪೂರ್ತಿ ನಿಜವಲ್ಲ. ಅವರನ್ನು ಶಾಲೆಯ ಹೊರಗಿನ ವಿವಿಧ ಶಕ್ತಿಗಳು ವಿವಿಧ ಪರಿಸರ ಕೂಡಾ ನಿಯಂತ್ರಿಸುತ್ತಿರಬಹುದು ಎಂಬ ಅರಿವಿರಲಿ.ನೀವೆಷ್ಟೇ ಸರಿ ಇದ್ದರೂ, ನಿಮ್ಮನ್ನು ವಿರೋಧಿಸುವ ಶಕ್ತಿಯೊಂದು ನಿಮ್ಮ ಪಕ್ಕದಲ್ಲೇ ಇದೆ ಎಂದು ಎಚ್ಚರವಹಿಸಿ. ಯಾಕೆಂದರೆ ನಿಮಗೆ ಸರಿಯೆನಿಸಿದ್ದು ಇತರರ ದೃಷ್ಟಿಯಿಂದ ತಪ್ಪಾಗಿ ಕಾಣಬಹುದು.ಸಂಘರ್ಷ ಮತ್ತು ಸಮನ್ವಯ, ಇವೆರಡರ  ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲ ಎದುರಾದಾಗ ಸಮನ್ವಯವನ್ನು ಆಯ್ದುಕೊಳ್ಳಿ. ಸಂಘರ್ಷದಿಂದ ಯುದ್ದ ಗೆದ್ದು ನಾವೇನು ಸಾಮ್ರಾಟರಾಗಬೇಕಿಲ್ಲ. ನಮ್ಮ ಭಾವೀ ಸಮಾಜವೂ ಸಮನ್ವಯದ ಜೀವನ ಪದ್ಧತಿಯನ್ನೇ ಕಲಿಯಬೇಕಿದೆ. ಸಮನ್ವಯ ಎಂದರೆ ಶರಣಾಗತಿ ಅಥವಾ ವೀಕ್ನೆಸ್  ಎಂದು ಅರ್ಥವಲ್ಲ. ಇದಕ್ಕಾಗಿ ಮನವೊಲಿಸುವ ಕಲೆ ಯಲ್ಲಿ ಪರಿಣತಿ ಸಾಧಿಸಿ.

ನೀವು ಬೋಧಿಸುವ ವಿಷಯ ಮತ್ತು  ಬೋಧನಾ ವಿಧಾನದ ಬಗ್ಗೆ ಸಾಧ್ಯವಾದಷ್ಟು ಪಾಂಡಿತ್ಯ ಗಳಿಸಿ. ಅಪ್ಡೇಟ್ ಆಗಿ. ಎಷ್ಟೇ ಜ್ಞಾನಿಯಾಗಿದ್ದರೂ ಇನ್ನಷ್ಟು ಕಲಿಯುವ ವಿದ್ಯಾರ್ಥಿಯಾಗಿಯೇ ಮುಂದುವರಿಯಿರಿ.ಕಲಿಕೆ ಗರ್ಭದಿಂದ ಗೋರಿಯವರೆಗೆ ನಿರಂತರ ಎಂಬುದನ್ನು ಮತ್ತೊಂದು ಬಾರಿ ನೆನಪಿಸಿಕೊಳ್ಳಿ.

ನಿಮ್ಮ ಎದುರು ಇರುವ ಮಕ್ಕಳನ್ನು ಅವರು ಸೂಕ್ಷ್ಮ ಸಂವೇದನಾಶೀಲರು ಎಂದೇ ಭಾವಿಸಿ ಭೋಧನೆ ಮಾಡಿ. ಅವರು ವಯಸ್ಸಿನಲ್ಲಿ ನಿಮಗಿಂತ ಚಿಕ್ಕವರಿರಬಹುದು. ಆದರೂ ಇಂದಿನ ಇಂಟರ್ನೆಟ್ ಯುಗದಲ್ಲಿ ಕೆಲವು ವಿಷಯಗಳಲ್ಲಿ ಅವರು ಕಿರಿಯ ಶರೀರ ಧರಿಸಿರುವ ಹಿರಿಯ ಜೀವ  ಆಗಿರುತ್ತಾರೆ ಎಂದು ನೆನಪಿಡಿ.ಮಕ್ಕಳಿಗೆ ನಿಮ್ಮಷ್ಟು ತಿಳಿಯದೇ ಇರಬಹುದು. ಆದರೆ ಅವರು ನಿಮ್ಮನ್ನು ತಿಳಿದಿರುತ್ತಾರೆ ಎಂದು ಅರಿವು ಇರಲಿ.

ವಿದ್ಯಾರ್ಥಿಗಳು ನೀವು ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೇ ಹೋದರೂ, ನೀವು ಹೇಳದೇ ಇದ್ದುದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಪ್ರಯತ್ನಿಸುತ್ತಾ ಇರುತ್ತಾರೆ ಎಂಬ ರಹಸ್ಯ ನಿಮಗೆ ಗೊತ್ತಿರಲಿ. ಈಗ ಚಾಟ್ ಜಿ ಪಿ ಟಿ, ಮತ್ತು ಎ ಐ ನಂತಹ ಸಹಾಯಕರು  ಅವರ ಮನೆಯಲ್ಲಿದ್ದಾರೆ.ವಿಷಯ ಜ್ಞಾನ ದೊಂದಿಗೆ ಸಂವಹನ ಕೌಶಲ, ಔದ್ಯೋಗಿಕ ಮಾರ್ಗದರ್ಶನ, ಸಮಸ್ಯೆಗಳ ಪರಿಹಾರದಂತಹ ಜೀವನ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ. ಮತ್ತು ಮೊದಲು ಇವುಗಳನ್ನು ನೀವು ಕಲಿಯಿರಿ.ನೀವು ಕಲಿಸಿದ್ದೆಲ್ಲವನ್ನೂ ಮರೆತರೂ, ಮಕ್ಕಳು ಸದಾ ನಿಮ್ಮನ್ನು ಮರೆಯದೆ ಇರುವಂತಹ ಶಿಕ್ಷಕರಾಗಲು ಪ್ರಯತ್ನಿಸಿ.ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗ‌ವಿಲ್ಲ. ಎಂಬ ಗಾದೆ ಮಾತನ್ನು ಮೌನ ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಕೊಂಚ ವಿಸ್ತರಿಸಿಕೊಳ್ಳಿ.ನಿಮ್ಮ ಮೌನವೂ ಎಷ್ಟು ಪ್ರಭಾವಶಾಲಿ ಆಗಿರುತ್ತದೆ  ಎಂಬುದನ್ನು ಅನುಭವದಿಂದ ಕಲಿಯಿರಿ.ಪಾಠಕ್ಕೆ ಪೂರಕವಾದ ವಿಷಯಗಳನ್ನು ಪ್ರಸ್ತುತ ಪಡಿಸುವ ಅಗತ್ಯ ಎದುರಾದಾಗ ಇದನ್ನು ಹೇಳದೇ ಇರುವುದು, ಅದನ್ನು ಹೇಳುವುದಕ್ಕಿಂತ ಹೆಚ್ಚು ಪ್ರಯೋಜನಕರ ಎಂದು ಅನಿಸಿದರೆ ಅದನ್ನು ಹೇಳದೇ ಇರುವುದೇ ಉತ್ತಮ ಎಂದು ನೆನಪಿಡಿ.ನಿಮ್ಮ ಸಹೋದ್ಯೋಗಿಗಳು ಮತ್ತು ಮುಖ್ಯಸ್ಥ ರೊಂದಿಗೆ ನಿಮಗೆದುರಾಗುವ ಸಮಸ್ಯೆ ಗಳ ಮತ್ತು ಗೊಂದಲಗಳ ಬಗ್ಗೆ ಚರ್ಚಿಸಿ. ಅವರ ಸಲಹೆ, ಮಾರ್ಗದರ್ಶನ ಪಡೆಯಲು ಹಿಂಜರಿಯಬೇಡಿ.ಎಷ್ಟೇ ಪರಿಣಿತರಿದ್ದರೂ ನಮ್ಮಿಂದ ತಪ್ಪುಗಳು ನಡೆದು ಹೋಗಬಹುದು. ತಪ್ಪುಗಳು ನಡೆದುಹೋದರೆ ಪ್ರಾಂಜಲ ಮನಸ್ಸಿನಿಂದ ಅದನ್ನು ಒಪ್ಪಿಕೊಂಡು ಮುಂದುವರಿಯಿರಿ.

ನಮ್ಮನ್ನು ಟೀಕಿಸುವವರನ್ನು ಹತ್ತಿರ ಇರಿಸಿಕೊಳ್ಳಿ. ಅದರಿಂದ ನಿಮಗೆ ಒಳಿತು ಜಾಸ್ತಿ ಎಂದು ಗೊತ್ತಿರಲಿ.

ಸಮಾಜ ಮತ್ತು ವಿದ್ಯಾರ್ಥಿಗಳು ನಿಮ್ಮ ಯಾವುದೇ ಶಕ್ತಿಗೆ ತಲೆ ಬಾಗದೆ ಹೋದರೂ ನಹಿ ಜ್ಞಾನೇನ ಸದೃಶಂ ಎಂಬಂತೆ ಜ್ಞಾನ ಸಂಪತ್ತಿಗೆ ತಲೆಬಾಗುತ್ತಾರೆ ಎಂಬ ವಿಶ್ವಾಸ ನಿಮ್ಮಲ್ಲಿರಲಿ. ಜ್ಞಾನ ಸಂಪತ್ತಿನ ನೆರವಿನಿಂದ ನೀವು ಎಲ್ಲರ ಗೌರವಾದರಗಳನ್ನು ಖಂಡಿತಾ ಪಡೆಯುತ್ತೀರಿ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗೋಣ.

ಶಿಕ್ಷಕ ವೃತ್ತಿ ಹಿಂದೆಯೂ, ಇಂದಿಗೂ ಮುಂದೆ ಹಾಗೂ ಎಂದೆಂದಿಗೂ ಪವಿತ್ರ ವೃತ್ತಿ ಎಂಬುದನ್ನು ಸಾಬೀತುಪಡಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529.


ಗುರುವೇ ನಮಃ

 ಗುರುವೇ ನಮಃ 


ಗುರು ಬ್ರಹ್ಮ ಗುರು ವಿಷ್ಣು ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಉಕ್ತಿಯಂತೆ ಶಿಕ್ಷಕರಿಗೆ ದೇವರ ಸ್ಥಾನ ನೀಡಲಾಗಿದೆ. ಆಧುನೀಕರಣ ಹಾಗೂ ಇತರ ಕಾರಣದಿಂದಾಗಿ ಅಲ್ಲಲ್ಲಿ ಶಿಕ್ಷಕರ ಬಗ್ಗೆ ಕೆಲ ನಕಾರಾತ್ಮಕ ಸುದ್ದಿಗಳು ಬಿತ್ತರವಾಗುತ್ತಿದ್ದರೂ  ಇಂದಿಗೂ ಗುರುಗಳಿಗೆ ತನ್ನದೇ ಆದ ಸ್ಥಾನವಿದೆ.ಈ ಕೆಳಗಿನ ಘಟನೆ ಗುರುವಿನ ಮಹತ್ವ ಸಾರುತ್ತದೆ. 


ಒಮ್ಮೆ ಡಾ.ವಿ ಕೃ   ಗೋಕಾಕರು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು.

ರಾತ್ರಿ ಪ್ರವಾಸ­ವಾದ್ದರಿಂದ ಪೈಜಾಮಾ, ಶರ್ಟು ಹಾಕಿಕೊಂಡಿದ್ದರು. ಮಲಗುವ ಮುನ್ನ ಶರ್ಟು ತೆಗೆದಿಟ್ಟು ಬನಿಯನ್ ನೊಂದಿಗೆ ಮಲಗಿದ್ದರು. ಬೆಳಿಗ್ಗೆ ಎಚ್ಚರವಾದಾಗ ರೈಲು ಒಂದು ನಿಲ್ದಾಣದಲ್ಲಿ ನಿಂತಿತ್ತು. ಗೋಕಾಕರು ಕಿಟಕಿಯಿಂದ ಆಚೆ ನೋಡಿ ಹತ್ತಿರದಲ್ಲೇ ಚಹಾದ ಅಂಗಡಿ ಇರುವು­ದನ್ನು ಕಂಡರು. ಚಹಾ ಕುಡಿಯ­ಬೇಕೆಂದು ಅವಸರದಿಂದ ಪೈಜಾಮಾದ ಜೇಬಿನಲ್ಲಿ ಎರಡು ರೂಪಾಯಿ ಹಾಕಿ­ಕೊಂಡು ಕೆಳಗಿಳಿದರು. ನೇರವಾಗಿ ಚಹಾದ ಅಂಗಡಿಗೆ ನಡೆದು ಚಹಾ ಆರ್ಡರ್ ಮಾಡಿದರು.


ಚಹಾ ಕುಡಿಯುತ್ತಿದ್ದಂತೆ ರೈಲು ಹೊರಡ­ತೊಡಗಿತು. ಇವರು ಗಾಬರಿಯಿಂದ ಚಹಾ ಕುಡಿಯುವುದನ್ನು ಬಿಟ್ಟು ರೈಲಿನ ಕಡೆಗೆ ಓಡಿದರು. ಆದರೆ ರೈಲು ಹೊರಡುತ್ತ ವೇಗವನ್ನು ಪಡೆದುಕೊಳ್ಳ­ತೊಡಗಿತು. ಇವರು ಎಷ್ಟೇ ಧಾವಂತ­ದಿಂದ ಓಡಿದರೂ ರೈಲು ಮುಂದೆ ಹೋಗಿಯೇ ಬಿಟ್ಟಿತು! ಡಾ. ಗೋಕಾಕ­ರಿಗೆ ಈಗ ಫಜೀತಿ. ಹಾಕಿಕೊಳ್ಳಲು ಬಟ್ಟೆಯಿಲ್ಲ, ಹಣವೂ ಇಲ್ಲ. ಇದ­ರೊಂದಿಗೆ ತಾವು ಹೊರಟಿದ್ದ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಲಾಗುವುದಿಲ್ಲ.


ಇನ್ನೇನು ಮಾಡು­ವುದು ಎಂದು ಚಿಂತಿಸುವಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ ದಾಟಿಯಾಗಿತ್ತು. ಇವರು ಹತಾಶರಾಗಿ ನಿಂತಿದ್ದಾಗ ಒಂದು ಆಶ್ಚರ್ಯಕರ ಸಂಗತಿ ಘಟಿಸಿತು! ಹೊರಟಿದ್ದ ರೈಲು ನಿಂತಿತು. ಇವರು ನೋಡುತ್ತಿದ್ದಂತೆ ಹಿಂದೆ ಹಿಂದೆ ಬರತೊಡಗಿತು! ರೈಲಿನ ಗಾರ್ಡ್ ಇದ್ದ ಬೋಗಿ ಪ್ಲಾಟ್ ಫಾರ್ಮ್  ಮೇಲೆ ಬಂದೊಡನೆ ಅದರಲ್ಲಿದ್ದ ಗಾರ್ಡ್ ಹೊರಗೆ ಹಾರಿಕೊಂಡ. ಗೋಕಾಕರು ನೋಡುತ್ತಿರುವಂತೆ ಆತ ಓಡಿಬಂದು ಅವರ ಕಾಲು ಮುಟ್ಟಿ ನಮಸ್ಕರಿಸಿದ!


ಇವರು ಬೆರಗಿನಲ್ಲಿದ್ದಂತೆಯೇ ಅತ ಹೇಳಿದ  ‘ಸರ್, ನಾನು ಕರ್ನಾಟಕ ಕಾಲೇಜಿನಲ್ಲಿ ನಿಮ್ಮ ವಿದ್ಯಾರ್ಥಿ­ಯಾಗಿದ್ದೆ. ನಾನು ಬಿ.ಎ. ಓದುತ್ತಿರು­ವಾಗ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿ­ದ್ದೆನೆಂದು ನೀವು ಮೂರು ವರ್ಷ ಡಿಬಾರ್ ಮಾಡಿಸಿದ್ದಿರಿ’. ‘ಹೌದಲ್ಲ, ನೀನು ಮೆನೆಜಿಸ್ ಅಲ್ಲವೇ?’ ಕೇಳಿದರು ಗೋಕಾಕ. ‘ಹೌದು ಸರ್, ಡಿಬಾರ್ ಮಾಡಿದ್ದು ನಿಮ್ಮ ತಪ್ಪಲ್ಲ ಸರ್, ಅದು ನನ್ನ ತಪ್ಪಿಗೆ ಶಿಕ್ಷೆ. ಆದರೆ ಆಮೇಲೆ ನಾನು ತಮ್ಮನ್ನು ಕಂಡು ಕ್ಷಮೆ ಕೇಳಿ ಪರಿಶ್ರಮ­ದಿಂದ ಓದಿದೆ. ನಂತರ ನೀವು ನನ್ನ ಡಿಬಾರ್ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದಿರಿ. ಮರುವರ್ಷ ನಾನು ಪರೀಕ್ಷೆಗೆ ಕುಳಿತು ಪಾಸಾದೆ. ನನಗೆ ಈ ಗಾರ್ಡ್‌ ಕೆಲಸ ದೊರಕಿತು. ಸರ್, ಇಂದಿಗೂ ನಾನು ತಮ್ಮ ಇಂಗ್ಲೀಷ್ ತರಗತಿಗಳನ್ನು ಮರೆತಿಲ್ಲ’ ಎಂದ ಗಾರ್ಡ್‌ ಮೆನೆಜಿಸ್.


ಗೋಕಾಕರು ನಿರಾಳವಾಗಿ ರೈಲನ್ನೇರಿ ಪ್ರವಾಸ ಮುಂದುವರೆಸಿದರು. ಆದರ್ಶ ಶಿಕ್ಷಕರು ಏನೆಲ್ಲ ಮಾಡಬಹುದು. ವಿದ್ಯಾರ್ಥಿ­ಗಳನ್ನು ವಿಷಯದಲ್ಲಿ ಹೇಗೆ ಪ್ರೋತ್ಸಾ­­ಹಿಸಬಹುದು, ಅವರ ಬದುಕಿಗೆ ಮಾರ್ಗದರ್ಶನ ನೀಡಬಹುದು, ಸಮಾಜದಲ್ಲಿ ಪರಿವರ್ತನೆ ತರಬ­ಹುದು. ಇದೆಲ್ಲದರ ಜೊತೆಗೆ ಮುಂದೆ ಹೋದ ರೈಲನ್ನು ಕೂಡ ಮರಳಿ ಪ್ಲಾಟಫಾರ್ಮ್‌ಗೆ ತರಬಹುದು.

 ಒಬ್ಬ ಆದರ್ಶ ಶಿಕ್ಷಕ  ಮಕ್ಕಳಿಗೆ ಸ್ಪೂರ್ತಿ ಚೈತನ್ಯ ವನ್ನು ತುಂಬ್ತಾನೆ. ಮಕ್ಕಳ ಮನಸ್ಸನ್ನು ಅರಿತು ಅವರೊಡನೆ ಬೆರೆತು ನಿರಂತರ ವಿದ್ಯಾರ್ಥಿಯಾಗಿರುತ್ತಾನೆ.

ಉತ್ತಮ ಸಮಾಜದ ರೂವಾರಿಯಾಗಿರುತ್ತಾನೆ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ತನ್ನಂತೆ ಪರರ ಬಗೆದೊಡೆ ಕೈಲಾಸ.

 


ತನ್ನಂತೆ ಪರರ ಬಗೆದೊಡೆ ಕೈಲಾಸ.


ಮಾನವ ಸಂಘಜೀವಿ. ನಮ್ಮ ನೆಮ್ಮದಿಗೆ  ಸಹಜೀವನ,ಸಹಕಾರ ಅಪೇಕ್ಷಣೀಯವಾದರೂ ಮಾನವ ಸಹಜ ಗುಣಗಳಾದ ಮತ್ಸರ, ಸ್ವಾರ್ಥ ಸದಾ ಇಣುಕಿ  ನಮ್ಮ ಮತ್ತು ಸಮಾಜದ ನೆಮ್ಮದಿ ಹಾಳು ಮಾಡಿಬಿಡುತ್ತವೆ.

ಒಂದು ದಿನ ಯಮಧರ್ಮರಾಯ ಒಂದು ವ್ಯಕ್ತಿಯ ಪ್ರಾಣವನ್ನು ಕೊಂಡೊಯ್ಯಲು ಭೂಮಿಗೆ ಬಂದ. ಆದರೆ ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿಯೇ ಯಮಧರ್ಮನಿಗೆ ಎದುರಾದ. ಯಮನಿಗೆ ಭೂಲೋಕ ಸುತ್ತಿ ಸುತ್ತಿ ದಾಹವಾಗಿತ್ತು. ಅವನಿಗೆ ಕುಡಿಯಲು ನೀರು ಕೇಳುತ್ತಾನೆ. ಸಾಯಬೇಕಾಗಿರುವ ವ್ಯಕ್ತಿಯೇ ನೀರು ಕೊಟ್ಟು ದಾಹ ತೀರಿಸುತ್ತಾನೆ.


           ಆದರೆ ಯಮ ಕೊಂಡೊಯ್ಯಬೇಕಾದ  ವ್ಯಕ್ತಿ ಅವನೇ ಎಂದು ತಿಳಿದು ಒಂದು ವರ ಕೊಡುತ್ತಾನೆ. ಏನೆಂದರೆ ಒಂದು ಹಣೆಬರಹದ ಪುಸ್ತಕ ಕೊಟ್ಟು ಇದರಲ್ಲಿ ನಿನಗೆ ಅಂತ ಒಂದು ಹಾಳೆ ಇದೆ. ನಿನಗೆ ಏನು ಬೇಕೋ ಅದನ್ನು ಬರೆದುಕೊ. ನೀನು ಏನು ಬರೆದುಕೊಂಡರೂ ನೆರವೇರುವುದು. ಇದರಲ್ಲಿ ಸಂಶಯವಿಲ್ಲ. ಆದರೆ ನೀನು ಬರೆದುಕೊಳ್ಳಲು ನಿನಗೆ ಐದು ನಿಮಿಷ ಮಾತ್ರ ಸಮಯ, ಆ ಐದು ನಿಮಿಷವೇ ನಿನಗೇ ಅತ್ಯಮೂಲ್ಯ. ಆ ಐದು ನಿಮಿಷ ದಾಟಿದ ನಂತರ ನಿನ್ನ ಹಣೆಬರಹ ಹೇಗಿರುತ್ತೋ ಹಾಗಾಗುವುದು ಎಂದು ಹೇಳಿ ಒಂದು ಪುಸ್ತಕ ಕೊಡುತ್ತಾನೆ. 


     ಆ ವ್ಯಕ್ತಿ ಪುಸ್ತಕ ತೆಗೆದ ತಕ್ಷಣ ಮೊದಲ ಪುಟ ಓದುತ್ತಾನೆ.ಅದರಲ್ಲಿ ನಿನ್ನ ಸ್ನೇಹಿತ ವಿದೇಶಕ್ಕೆ ಹೋಗುತ್ತಾನೆ ಎಂದಿರುತ್ತದೆ. ಅದಕ್ಕೆ ಅವನು ವಿದೇಶಕ್ಕೆ ಹೋಗಬಾರದೆಂದು ಬರೆದು ತಡೆಯುತ್ತಾನೆ.ಮತ್ತೊಂದು ಪುಟ ತೆರೆಯುತ್ತಾನೆ ಅದರಲ್ಲಿ ಮತ್ತೊಬ್ಬ ಸ್ನೇಹಿತ ಲಕ್ಷಗಟ್ಟಲೆ ಲಾಟರಿ ಗೆಲ್ಲುತ್ತಾನೆಂದಿರುತ್ತದೆ. ಅವನಿಗೆ ಲಾಟರಿ ಸಿಗಬಾರದು ಎಂದು ಬರೆಯುತ್ತಾನೆ. 

ಮತ್ತೊಂದು ಪುಟ ತೆರೆಯುತ್ತಾನೆ. ಅದರಲ್ಲಿ ಅವನ ಆಪ್ತ ಗೆಳತಿ ಆಗರ್ಭ ಶ್ರೀಮಂತನನ್ನು ಮದುವೆಯಾಗುತ್ತಾಳೆ ಎಂದಿರುತ್ತದೆ.ಆಪ್ತ ಗೆಳತಿ ಆಗರ್ಭ ಶ್ರೀಮಂತ ವ್ಯಕ್ತಿಯನ್ನು  ಮದುವೆಯಾಗಬಾರದೆಂದು ಬರೆಯುತ್ತಾನೆ. 

ಮತ್ತೊಂದು ಪುಟ ತೆರೆಯುತ್ತಾನೆ. ಪಕ್ಕದ ಮನೆಯ ರೈತ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿ ಸಿರಿವಂತನಾಗುತ್ತಾನೆಂದು ಇರುತ್ತದೆ. ಅವನು ಸಿರಿವಂತ ನಾಗಬಾರದು ಎಂದು ಬರೆಯುತ್ತಾನೆ. ಕೊನೆಯ ಹಾಳೆ ತೆರೆಯುತ್ತಾನೆ. ಅದು ಖಾಲಿ ಹಾಳೆಯಾಗಿರುತ್ತದೆ. ಅದರಲ್ಲಿ ಬರೆಯಬೇಕೆನ್ನುವಷ್ಟರಲ್ಲಿ  ಯಮ ಆ ಪುಸ್ತಕವನ್ನು ಕಸಿದುಕೊಳ್ಳುತ್ತಾನೆ. ಏಕೆಂದರೆ ಅವನಿಗೆ ಕೊಟ್ಟ ಐದು ನಿಮಿಷದ ಗಡುವು  ಮುಗಿದು ಹೋಗಿರುತ್ತದೆ. ಆಗ ಯಮ ಹೇಳುತ್ತಾನೆ, "ನಿನ್ನ ಆಯಸ್ಸು ಮುಗಿದಿದೆ ನಡೆ" ಎಂದು. ಆಗ ಆ ವ್ಯಕ್ತಿ ಹೇಳುತ್ತಾನೆ ನನಗೆ ಅಂತ ನಾ ಏನು ಬರೆದುಕೊಳ್ಳಲಿಲ್ಲ ಎಂದು. ಆಗ ಯಮ ಹೇಳುತ್ತಾನೆ ನಿಮಗೆ ಅಂತ ಒಂದಷ್ಟು ವರ್ಷ ಆಯಸ್ಸು ಕೊಟ್ಟಿರುತ್ತೇವೆ. ಅದರಲ್ಲೂ ವರವೆಂದು ಒಂದೈದು ನಿಮಿಷ ಆಯಸ್ಸು ಕೊಟ್ಟರೂ ನಿಮ್ಮಬಗ್ಗೆ ಯೋಚಿಸದೆ ಪರರ ಅವನತಿಯ ಬಗ್ಗೆ ಯೋಚಿಸುತ್ತೀರಾ ಎಂದರೆ  ಏನು ಹೇಳೋಣ? 

ಜೀವನವಿಡೀ ಕೊಟ್ಟರು ನೀವೇನೆಂದು ತಿಳಿಯದೆ ಪರರ ಬಗ್ಗೆ ಆಲೋಚಿಸುವವರಿಗೆ ಇಲ್ಲಿಬದುಕುವ ಹಕ್ಕಿಲ್ಲವೆಂದು ಕರೆದೊಯ್ದುಬಿಡುತ್ತಾನೆ.

ನಮಗೆ ಅಂತ ಒಂದಷ್ಟು ಹಾಳೆಗಳಿವೆ.ನಮಗೆ ಅಂತ ಒಂದಷ್ಟು ದಿನಗಳಿವೆ.

ನಮಗೆ ಅಂತ ಒಂದು ಬದುಕಿದೆ.

ನಮಗೆ ಅಂತ ಒಂದು ದಾರಿಯಿದೆ.

ನಮಗೆ ಅಂತ ಏನಿದಿಯೋ ಅದು ಸನ್ಮಾರ್ಗದಲ್ಲಿರಲಿ ಅದು ಬಿಟ್ಟು  ಪರರ ಬಗ್ಗೆ ಅಸೂಯೆ ಪಡುವುದು ತರವಲ್ಲ. ಸರ್ವೇ ಜನಾಃ ಸುಖಿನೋಭವಂತು ಎಂಬ ಭಾವನೆ ನಮ್ಮದಾಗಲಿ.ತನ್ನಂತೆ ಪರರ ಬಗೆದೊಡೆ ಕೈಲಾಸ  ಬಿನ್ನಾಣವಕ್ಕು ಸರ್ವಜ್ಞ .ಅಲ್ಲವೇ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529