25 ಫೆಬ್ರವರಿ 2024

ಆರ್ಟಿಕಲ್ 370 #article370


 


ಆರ್ಟಿಕಲ್ 370 ...


ಪ್ರಕಾಶಕ ಮತ್ತು ಲೇಖಕರಾದ ಗೆಳೆಯ ಶಂಕರಾನಂದ್ ರವರ ಜೊತೆಯಲ್ಲಿ ಇತ್ತೀಚೆಗೆ ಐನಾಕ್ಸ್ ಥಿಯೇಟರ್ ನಲ್ಲಿ ಆರ್ಟಿಕಲ್ 370 ಚಿತ್ರ ವೀಕ್ಷಿಸಿದೆ.

ತುಮಕೂರಿನಲ್ಲಿ ಐನಾಕ್ಸ್ ಆರಂಭವಾದ ತರುವಾಯ ಕನ್ನಡ ಸೇರಿ ಹಿಂದಿ, ತೆಲುಗು,ಇಂಗ್ಲಿಷ್, ತಮಿಳು ಹೀಗೆ ವಿವಿಧ ಭಾಷೆಯ ಎಲ್ಲಾ ಜಾನರ್ ಸಿನಿಮಾ ನೋಡಿದ್ದರೂ ರಾಜಕೀಯ ಜ್ಞಾನ ನೀಡುವ ,ದೇಶದ ಭದ್ರತಾ ವಿಷಯ ಮತ್ತು ಏಕತೆಯ ಸಂದೇಶ ಸಾರುವ ಈ ಚಿತ್ರ ಗಮನಾರ್ಹವಾದದು ಎಂದು ನನಗನಿಸಿತು.


 2016 ರಿಂದ 2019 ರವರೆಗೆ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಹಿನ್ನೆಲೆಯಲ್ಲಿ ನಡೆದ ಅನೇಕ ಘಟನೆಗಳನ್ನು ಒಟ್ಟುಗೂಡಿಸಿ. ಉತ್ತಮ ಸ್ಕ್ರೀನ್ ಪ್ಲೇ ಮೂಲಕ ನಮಗೆ ಚಿತ್ರವನ್ನು ಸಮರ್ಪಕವಾಗಿ ತಲುಪಿಸಿದ ಚಿತ್ರತಂಡಕ್ಕೆ ಒಂದು ಮೆಚ್ಚುಗೆ ಹೇಳಲೇಬೇಕು.  

ಜೋನಿ ಹಕ್ಸರ್ ಎಂಬ ಗುಪ್ತಚರ ಅಧಿಕಾರಿಯ ಡಿ ಗ್ಲಾಮ್ ಪಾತ್ರದಲ್ಲಿ ಯಾಮಿ ಗೌತಮಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ತನ್ನ ತಂದೆಯ ಅಸಹಜ ಸಾವು ನೆನೆದು ಹಾಗೂ ಜೀವದ ಗೆಳೆಯ ಅಸುನೀಗಿದ ಸಮಯದಲ್ಲಿ ನೋವಿನಿಂದ ಬಳಲುವ ಅಭಿನಯ ಗಮನ ಸೆಳೆಯುತ್ತದೆ.  ತಮಿಳುನಾಡು ಮೂಲದ  ಗೃಹ ಕಾರ್ಯದರ್ಶಿಯಾಗಿ  ಪ್ರಿಯ ಮಣಿಯವರದು ಪ್ರಬುದ್ದ ಅಭಿನಯ.370ನೇ ವಿಧಿಯ  ರದ್ದತಿಗೆ ಕಾರಣವಾಗುವ ಘಟನೆಗಳನ್ನು ಬಹಳ ಚಾಕಚಕ್ಯತೆಯಿಂದ ನಿರ್ವಹಿಸುವಲ್ಲಿ ನಿರ್ದೇಶಕರಾದ 

ಆದಿತ್ಯ ಸುಹಾಸ್ ಜಂಬಳೆರವರು ಪ್ರಿಯಾಮಣಿ 

ಅವರಿಂದ ಉತ್ತಮ ಅಭಿನಯ ತೆಗೆದಿದ್ದಾರೆ. 

 ಒಂದೆಡೆ ಬಿಲ್ ಮಂಡನೆಯ  ಹಿನ್ನೆಲೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು, ಕಣಿವೆಯಲ್ಲಿ ನಡೆವ ಉಗ್ರ ಚಟುವಟಿಕೆಗಳು,  ಅವುಗಳನ್ನು ನಿಭಾಯಿಸಲು ಪಿ ಎಂ ಓ ಕಛೇರಿಯ ಕಾರ್ಯಾಚರಣೆ  ಇವುಗಳು ಕೆಲವೊಮ್ಮೆ ನಮಗೆ ಜ್ಞಾನದ ಜೊತೆಯಲ್ಲಿ ಆಕ್ಷನ್ ಥ್ರಿಲ್ಲರ್ ರೀತಿಯಲ್ಲಿ  ನಮ್ಮನ್ನು ನಮ್ಮ ಆಸನದ ತುದಿಯಲ್ಲಿ ಇರಿಸುತ್ತದೆ.


ಇನ್ನೂ ಚಿತ್ರದ ಸಂಕಲನ ಬಹಳ ಚುರುಕಾಗಿರುವುದರಿಂದ ಸಿನಿಮಾ ನಿಮೆಗೆಲ್ಲಿಯೂ ಬೋರ್ ಆಗುವುದಿಲ್ಲ 

ವಿಶೇಷವಾಗಿ 370 ನೇ ವಿಧಿಯ ಕಾನೂನು ಅಂಶಗಳ ಚರ್ಚೆಯ ಸಮಯದಲ್ಲಿ  ಕ್ಯಾಮರಾ ಕೆಲಸ ಮತ್ತು  ಹಿನ್ನೆಲೆಯ  ಸಂಗೀತವು ಶ್ಲಾಘನೀಯವಾಗಿದೆ. 


ಚಿತ್ರ ನೋಡಿ ಥಿಯೇಟರ್ ನಿಂದ   ಹೊರ ಬರುವಾಗ ಕಾಲೇಜು ವಿದ್ಯಾರ್ಥಿಗಳು ಬಿಲ್ ಅನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ ರೀತಿ, ಅಲ್ಲಿ ನಡೆದ ಚರ್ಚೆಯ ಪ್ರಮುಖಾಂಶಗಳ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡ ನನಗೆ ನಿಜಕ್ಕೂ ಇದೊಂದು ಕಾಡುವ ಸಿನಿಮಾ ಎಂದನಿಸಿತು. ಬಿಲ್ ಮಂಡನೆಯ ಹಿನ್ನೆಲೆ, ಕಾನೂನಿನ ಜ್ಞಾನ, ಭದ್ರತೆ ,ಮುಂತಾದ ವಿಷಯಗಳು ಎಷ್ಟು ಮುಖ್ಯ ಎಂಬುದನ್ನು ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮತ್ತು ರಾಜಕೀಯ ಆಸಕ್ತರು ಈ ಸಿನಿಮಾ ನೋಡಿದರೆ ಒಂದು ನಿರ್ದಿಷ್ಟ ಜ್ಞಾನ ಲಭಿಸುತ್ತದೆ.ಒಟ್ಟಾರೆ ಹೇಳುವುದಾದರೆ ನಮ್ಮ ದೇಶದ ಎಲ್ಲ ನಾಗರಿಕರು  ನೋಡಲೇಬೇಕಾದ ಚಿತ್ರ ಇದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಪ್ರೇಮ ಗೀತೆ

 ಬಾ

ನಲ್ಲೆ

ಸೇರೋಣ

ಸಂತಸದಿ 

ನಲಿದಾಡೋಣ

ಸಂಭ್ರಮಿಸುತಲಿ

ನಮ್ಮ ಪ್ರೀತಿಯನು 

ಜಗತ್ತಿಗೆ ತೋರಿಸೋಣ

ಪ್ರೇಮೋತ್ಸವ ಇದು

ನನ್ನ ನಿನ್ನ ಗೀತೆ

ಹಾಡೋಣ ಇಂದು

ಪ್ರೇಮಗೀತೆ

ಒಟ್ಟಾಗಿ 

ನಾನು

ನೀ


ಸಿಹಿಜೀವಿ ವೆಂಕಟೇಶ್ವರ






ಉತ್ಸವ

ಇದು 


22 ಫೆಬ್ರವರಿ 2024

ಮತ್ತೆ ಏರಿಸುವುದು.(ಹನಿಗವನ)

 


ಮತ್ತೆ ಏರಿಸುವುದು.


ಎಣ್ಣೆ ಬೆಲೆಯನ್ನು 

ಯಾಕೆ ಮತ್ತೆ ಏರಿಸುವುದು|

ಸಿಟ್ಟಿನಿಂದ ಕೇಳಿದ ಗುಂಡ

ಎಕೆಂದರೆ ಅದು "ಮತ್ತೇ" ಏರಿಸುವುದು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 ಫೆಬ್ರವರಿ 2024

ಮಕ್ಕಳಲ್ಲಿ ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ

 



ಮಕ್ಕಳಲ್ಲಿ  ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ.



ಇಂದಿನ ಪೋಷಕರು ಮಕ್ಕಳಿಗೆ ಹೇಳುವ ಒಂದೇ ಮಾತು ಜಾಸ್ತಿ ಪರ್ಸೆಂಟೇಜ್ ತೆಗಿ, ಟೈಮ್ ವೇಸ್ಟ್ ಮಾಡಬೇಡ, ಕಲ್ಚರಲ್ ಆಕ್ಟಿವಿಟೀಸ್ ಏನೂ ಬೇಡ  ಬರೀ ಓದು ಸಾಕು.

ಹೀಗೆ ಬೆಳೆದ ಮಕ್ಕಳಿಗೆ 

ಪ್ರಜಾಪ್ರಭುತ್ವ, ಸರ್ಕಾರ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಬಹುತ್ವ ಇವೆಲ್ಲವೂ ಹೇಗೆ ತಾನೆ ಅರ್ಥವಾಗಬೇಕು?  

ಕೆಲ ಶಾಲಾ ಕಾಲೇಜುಗಳಲ್ಲಿ ಈ ಕುರಿತಾದ ಪ್ರಯತ್ನಗಳಾಗಿರುವುದು ಸ್ವಾಗತಾರ್ಹ ಆದರೆ ಅಷ್ಟೊಂದು ವ್ಯಾಪಕವಾಗಿ ಆಗಿಲ್ಲದಿರುವುದು ಅಷ್ಟೇ ಸತ್ಯ. ಈ ನಿಟ್ಟಿನಲ್ಲಿ

ಬೆಂಗಳೂರಿನ ಚಿಲ್ಡ್ರನ್  ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್‌ ಸಂಸ್ಥೆಯು (ಸಿಎಂಸಿಎ) ಎರಡು ದಶಕಕ್ಕೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿದೆ.

ಐದು ವರ್ಷಗಳ ಹಿಂದೆ ನಾನು ಈ ಸಂಸ್ಥೆಗೆ ಭೇಟಿ ನೀಡಿದ್ದೆ  ಆ ಸಂಸ್ಥೆಯಲ್ಲಿ  ಸಹಾಯಕ ನಿರ್ದೇಶಕರಾಗಿ  ಕಾರ್ಯನಿರ್ವಹಿಸುವ ಮರಳಪ್ಪ ರವರು ಸಂಸ್ಥೆಯ ಕಾರ್ಯ ವಿಧಾನವನ್ನು ವಿವರಿಸಿದ್ದರು.


'ಪಬ್ಲಿಕ್ ಅಫೇರ್ಸ್ ಸೆಂಟರ್' ಸಂಸ್ಥೆಯ ಯೋಜನೆಯಾಗಿ 'ಚಿಲ್ಡ್ರನ್    ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನಸ್‌' ಹುಟ್ಟು ಪಡೆಯಿತು. ನಂತರದ ದಿನಗಳಲ್ಲಿ ಈ ಯೋಜನೆಯೇ ಸಂಸ್ಥೆಯ ರೂಪ ಪಡೆದುಕೊಂಡಿತು. ಮಂಜುನಾಥ ಸದಾಶಿವ, ವೃಂದಾ ಭಾಸ್ಕರ್ ಹಾಗೂ ಪ್ರಿಯಾ ಕೃಷ್ಣಮೂರ್ತಿ ಅವರು ಸೇರಿ ಈ ಸಂಸ್ಥೆಯನ್ನು 2000ನೇ ಇಸ್ವಿಯಲ್ಲಿ ಹುಟ್ಟುಹಾಕಿದರು.


ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಯಾಗಿಸಲು, ಅವರಲ್ಲಿ ಜೀವನ ಕೌಶಲಗಳನ್ನು ತುಂಬಲು ಈ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಂಸ್ಥೆಯ ಕಾರ್ಯಕರ್ತರು ಶಾಲೆ ಶಾಲೆಗಳಿಗೆ ತೆರಳಿ ಸಂಸ್ಥೆಯ ಕುರಿತು, ಅವರ ಯೋಜನೆಯ ಕುರಿತು ವಿವರಿಸುತ್ತಾರೆ. ಅದು, ಸರ್ಕಾರಿ ಶಾಲೆ ಇರಬಹುದು, ಖಾಸಗಿ ಶಾಲೆ ಇರಬಹುದು. ಶಾಲೆಯು ಒಪ್ಪಿಗೆ ನೀಡಿದರೆ, ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸುತ್ತದೆ. ಶಾಲೆಗಳೂ ಖುದ್ದಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.


6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳನ್ನು ಸಂಸ್ಥೆಯು ಮುಖ್ಯ ಗುರಿಯನ್ನಾಗಿಸಿಕೊಂಡಿದೆ. 6ನೇ ತರಗತಿಯ ಒಬ್ಬ ಮಗುವು ಈ ಯೋಜನೆಯ ಭಾಗವಾದರೆ, ಆ ಮಗುವು 10ನೇ ತರಗತಿಗೆ ಬರುವವರೆಗೂ ಸಂಸ್ಥೆಯ ಯೋಜನೆಗಳ ಭಾಗವಾಗಿಯೇ ಇರುತ್ತದೆ. ಶಾಲೆಯೊಂದರಲ್ಲಿ ವಾರಕ್ಕೆ ಒಂದು ತರಗತಿಯನ್ನು ಪ್ರತಿ ತರಗತಿಯ ಮಕ್ಕಳಿಗೆ ಸಂಸ್ಥೆಯು ನಡೆಸುತ್ತದೆ. ತಜ್ಞರ ಮೂಲಕ ಸಂಸ್ಥೆಯು ತನ್ನದೇ ಪಠ್ಯಕ್ರಮವನ್ನೂ ರೂಪಿಸಿಕೊಂಡಿದೆ. ಸಹಾನುಭೂತಿ, ಒಂದು ವಿಷಯದ ಕುರಿತು ವಿಮರ್ಶೆ ಮಾಡುವುದು, ಕ್ರಿಯಾಶೀಲ ವಿಚಾರವಂತಿಕೆಯನ್ನು ಬೆಳೆಸಿಕೊಳ್ಳುವುದು, ಉತ್ತಮ ಸಂವಹನ ಹೀಗೆ ಅನೇಕ ಜೀವನ ಕೌಶಲಗಳನ್ನೂ ಸಂಸ್ಥೆ ಕಲಿಸಿಕೊಡುತ್ತದೆ.


ಪ್ರಾಯೋಗಿಕ ಚಟುವಟಿಕೆಗಳೇ ಸಂಸ್ಥೆಯ ಪಠ್ಯಕ್ರಮ. ಕರ್ನಾಟಕವಲ್ಲದೆ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿಯೂ ತನ್ನ ಕಾರ್ಯ ಚಟುವಟಿಕೆಗಳನ್ನು ಸಂಸ್ಥೆ ವಿಸ್ತರಿಸಿ ಕೊಂಡಿದೆ. ತನ್ನೆಲ್ಲಾ ಕಾರ್ಯಚಟು ವಟಿಕೆಗಳನ್ನು ಸಂಸ್ಥೆ ಉಚಿತವಾಗಿ ಮಾಡುತ್ತದೆ. ದಾನಿಗಳ ದೇಣಿಗೆಯೇ ಸಂಸ್ಥೆಯ ಆರ್ಥಿಕ ಬೆನ್ನೆಲುಬು. 


ಹಾಗೂ ನಾಗರಿಕ ಸಮಸ್ಯೆಗಳ ಕುರಿತು ತಿಳಿಸಿಕೊಡಲು 'ಸಿಎಂಸಿಎ ಕ್ಲಬ್' ಯೋಜನೆಯನ್ನು ಸಂಸ್ಥೆ ರೂಪಿಸಿದೆ. ಜೊತೆಗೆ, ಸರ್ಕಾರದೊಂದಿಗೆ ಕೈಜೋಡಿಸಿ, ಮಕ್ಕಳ ಗ್ರಾಮ ಸಭೆಗಳನ್ನೂ ಸಂಸ್ಥೆ ಆಯೋಜಿಸುತ್ತದೆ. 'ನನ್ನ ಒಳಿತಿಗಾಗಿ ಗ್ರಂಥಾಲಯ' ಎನ್ನುವ ಯೋಜನೆಯಡಿ, ಗ್ರಾಮದಲ್ಲಿನ ಗ್ರಂಥಾಲಯಕ್ಕೆ ಬರುವಂತೆ ಮಕ್ಕಳನ್ನು ಹುರಿದುಂಬಿಸುತ್ತದೆ. ನಾಗರಿಕ ವಿಷಯಗಳ ಕುರಿತು ಜಾಗೃತಿ ಮೂಡಿಸಲು, ಮಕ್ಕಳಿಂದ ಹಲವು ಚಟುವಟಿಕೆಗಳನ್ನು ಮಾಡಿಸುತ್ತದೆ. ಕಾರ್ಯಚಟುವಟಿಕೆ: ಶಾಲೆಯಲ್ಲಿ ಶೌಚಾಲಯ ಇಲ್ಲದಿದ್ದರೆ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದಿದ್ದರೆ, ತಮ್ಮ ಮನೆಯ ಎದುರು ಕಸ ಸುರಿಯುತ್ತಿದ್ದರೆ, ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿದ್ದರೆ... ಹೀಗೆ ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತು, ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 

ಹೀಗೆ ಸಿ ಎಮ್ ಸಿ‌ಎ  ಭವಿಷ್ಯದ ಜವಾಬ್ದಾರಿಯುತ ನಾಗರಿಕರ ನಿರ್ಮಾಣಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತವಾಗಿದೆ.ಇವರೊಂದಿಗೆ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರು ಸಹಕಾರ ನೀಡಿದರೆ ಜವಾಬ್ದಾರಿಯುತ ಸಮಾಜ ನಮ್ಮದಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

17 ಫೆಬ್ರವರಿ 2024

ಜ್ಞಾನಪೀಠವೇರಿದ ಗುಲ್ಜಾರ್ ಗೆ ಜೈ... ಹೋ.


 ಜ್ಞಾನಪೀಠವೇರಿದ ಗುಲ್ಜಾರ್ ಗೆ ಜೈ... ಹೋ...



ಸಂಪೂರಣ್ ಸಿಂಗ್ ಕಾಲ್ರಾ ಎಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗದಿರಬಹುದು. ಜೈ ಹೋ ಹಾಡಿನ ಗೀತ ರಚನೆಕಾರ ಯಾರೆಂದರೆ ತಟ್ಟನೆ ನೆನಪಾಗುವೆ ಹೆಸರೇ ಗುಲ್ಜಾರ್.

ಕವಿಯಾಗಿ, ಚಿತ್ರ ನಿರ್ದೇಶಕರಾಗಿ, ಗೀತ ರಚನಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.  ಹಿಂದಿ-ಉರ್ದು, ಪಂಜಾಬಿ, ಮತ್ತು ಹಲವು ಉಪಭಾಷೆಗಳಾದ ಬ್ರಜ್, ಖಾರಿಬೋಲಿ, ಹರ್ಯಾಣ್ವಿ, ಮರ್ವಾರಿ ಭಾಷೆಗಳಲ್ಲಿ ಅವರದ್ದು ಅಪ್ರತಿಮ ಪ್ರಭುತ್ವ. 

ಇವರಿಗೆ ಈ ವರ್ಷದ ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪುರಸ್ಕಾರ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ.


ಗುಲ್ಜಾರರು ಈಗಿನ ಪಾಕಿಸ್ಥಾನದ ಭಾಗವಾಗಿರುವ ‘ದಿನಾ ಝೇಲಂ’ ಎಂಬ ಊರಿನಲ್ಲಿ ಸಿಖ್  ಮನೆತನವೊಂದರಲ್ಲಿ ಆಗಸ್ಟ್ 18. 1936ರಲ್ಲಿ ಜನಿಸಿದರು.  ಗುಲ್ಜಾರರು ಕವಿಯಾಗುವುದಕ್ಕೆ ಮುಂಚೆ ದೆಹಲಿಯ ಗ್ಯಾರೇಜ್ ಒಂದರಲ್ಲಿ ಕಾರ್ ಮೆಕಾನಿಕ್ ಆಗಿದ್ದರು.  ಸಿನಿಮಾ ಸಾಹಿತಿಯಾಗಿ ಗುಲ್ಜಾರರು ಮೊದಲಿಗೆ ಬಿಮಲ್ ರಾಯ್ ಮತ್ತು ಹೃಷಿಕೇಶ್ ಮುಖರ್ಜಿ ಅವರೊಂದಿಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು.  


ಗೀತರಚನಕಾರರಾಗಿ ಗುಲ್ಜಾರರು ಪ್ರವೇಶ ಪಡೆದದ್ದು  1963ರಲ್ಲಿ    ಸಚಿನ್ ದೇವ್ ಬರ್ಮನ್ ಸಂಗೀತ ನೀಡಿದ ‘ಬಂಧಿನಿ’ ಚಿತ್ರದ ಮೂಲಕ.  ಆ ಚಿತ್ರದ ಎಲ್ಲ ಹಾಡುಗಳನ್ನು ಬರೆದ ಶೈಲೇಂದ್ರರು ಗುಲ್ಜಾರರಿಗೆ ‘ಮೋರಾ ಗೋರ ಆಂಗ್ ಲಾಯ್ಲೆ’ ಗೀತೆಯನ್ನು ಬರೆಯುವ ಅವಕಾಶವನ್ನು ಕಲ್ಪಿಸಿಕೊಟ್ಟರು.  ಈ ಹಾಡಿಗೆ ಅಭಿನಯ ನೀಡಿದವರು ನೂತನ್.  ಗುಲ್ಜಾರರ  ಚಿತ್ರಗೀತೆಗಳು ಸಚಿನ್ ದೇವ್ ಬರ್ಮನ್ ಮತ್ತು ರಾಹುಲ್ ದೇವ್ ಬರ್ಮನ್ ಸಂಗೀತ ನಿರ್ದೇಶನದಲ್ಲಿ  ಹೆಚ್ಚು ಪ್ರಸಿದ್ಧಿ ಪಡೆದವು.  ಹೀಗಾಗಿ ಬರ್ಮನ್ ಅವರನ್ನು ತಮ್ಮ ಚಿತ್ರ ಜೀವನಕ್ಕೆ ಇಂಬುಕೊಟ್ಟವರು ಎಂದು ಗುಲ್ಜಾರ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ.  ಸಲೀಲ್ ಚೌಧುರಿ ಸಂಗೀತ ನಿರ್ದೇಶನದ ಆನಂದ್, ಮೇರೆ ಅಪ್ನೆ ಮುಂತಾದ ಚಿತ್ರಗಳಲ್ಲಿ ಗುಲ್ಜಾರರ ಗೀತೆಗಳು ಪ್ರಶಸ್ತಿ ಪಡೆದವು.  ಮೌಸಂ ಚಿತ್ರದ ಮದನ್ ಮೋಹನ್; ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನದ  ‘ಮ್ಯಾಚಿಸ್’, ಓಂಕಾರ, ಕಾಮಿನಯ್; ಎ ಆರ್ ರೆಹಮಾನ್ ಅವರ ದಿಲ್ ಸೆ, ಗುರು, ಸ್ಲಂ ಡಾಗ್ ಮಿಲಿಯನೇರ್, ರಾವಣ್; ಶಂಕರ್ ಎಹಸಾನ್ ಲಾಯ್ ಅವರ ಬಂಟಿ ಔರ್ ಬಬ್ಲಿ ಹೀಗೆ ಎಲ್ಲ ತಲೆಮಾರುಗಳ ಸಂಗೀತ ನಿರ್ದೇಶಕರ ಜೊತೆಯಲ್ಲಿ ಸಾಹಿತ್ಯ ರಚಿಸಿದ ಕೀರ್ತಿ ಗುಲ್ಜಾರರಿಗೆ ಸೇರಿದೆ.


ಗೀತ ರಚನಾಕಾರರಾಗಿ ಗುಲ್ಜಾರರು ಸಚಿನ್ ದೇವ್ ಬರ್ಮನ್, ಸಲಿಲ್ ಚೌದುರಿ, ಶಂಕರ ಜೈ ಕಿಶನ್. ಹೇಮಂತ್ ಕುಮಾರ್, ರಾಹುಲ್ ದೇವ್ ಬರ್ಮನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್, ಮದನ್ ಮೋಹನ್, ಎ ಆರ್ ರಹಮಾನ್,   ರಾಜೇಶ್ ರೋಶನ್, ಅನು ಮಲಿಕ್, ಶಂಕರ್- ಎಹಸಾನ್ -ಲಾಯ್,  ವಿಶಾಲ್ ಭಾರದ್ವಾಜ್ ಮುಂತಾದ ಸಂಗೀತ ನಿರ್ದೇಶಕರೊಂದಿಗಿನ ಜೊತೆಗಾರಿಕೆಯಲ್ಲಿ ಎದ್ದು ಕಾಣುತ್ತಾರೆ.


ಕೇವಲ ಗೀತ ರಚನೆ ಮಾತ್ರವಲ್ಲದೆ ಅವರು ಹಲವಾರು ಚಿತ್ರಗಳಿಗೆ ಸಾಹಿತ್ಯ, ಚಿತ್ರಕತೆ ಮತ್ತು ಸಂಭಾಷಣೆಗಳನ್ನೂ ಒದಗಿಸಿದ್ದಾರೆ.  ಗುಲ್ಜಾರರು ನಿರ್ದೇಶಿಸಿದ ಚಿತ್ರಗಳು ಹಲವಾರು ಪ್ರಶಸ್ತಿಗಳನ್ನು ಗಳಿಸಿ ವಿದ್ವಜ್ಜನರಿಂದ ಮೊದಲ್ಗೊಂಡು ಸಾಮಾನ್ಯರವರೆಗೆ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿವೆ.  ದೂರದರ್ಶನದಲ್ಲಿ ಅವರು  ಮಿರ್ಜಾ ಗಾಲಿಬ್, ತಹರೀರ್ ಮುನ್ಷಿ ಪ್ರೇಮಚಂದ್ ಕಿ ಕಹಾನಿ ಮುಂತಾದ ಧಾರಾವಾಹಿಗಳನ್ನು ಸಹಾ ಸೃಷ್ಟಿಸಿದ್ದಾರೆ.  ಹೆಲೋ ಜಿಂದಗಿ, ಪೊಟ್ಲಿ ಬಾಬಾ ಕಿ, ಜಂಗಲ್ ಬುಕ್ ಮುಂತಾದ ದೂರದರ್ಶನ ದೃಶ್ಯಾವಳಿಗಳಿಗೆ  ಗೀತೆ ರಚನೆ ಸಹಾ ಮಾಡಿದ್ದಾರೆ.


ಆಶೀರ್ವಾದ್, ಆನಂದ್, ಖಾಮೋಷಿ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆದ ನಂತರದಲ್ಲಿ ಗುಲ್ಜಾರರು  1971ರಲ್ಲಿ ‘ಮೇರೆ ಅಪ್ನೆ’ ಎಂಬ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು.  ತಪನ್ ಸಿನ್ಹಾ ಅವರ ಬೆಂಗಾಲಿ ಚಿತ್ರ ‘ಅಪರಿಜನ್’ ಅವರ ಹಿಂದಿ ಅವತರಣಿಕೆಯಾದ ಈ ಚಿತ್ರದಲ್ಲಿ ಮೀನಾ ಕುಮಾರಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.  ಈ ಚಿತ್ರದ ಸಾಧಾರಣ ಯಶಸ್ಸಿನ ನಂತರದಲ್ಲಿ ಗುಲ್ಜಾರರು ‘ಪರಿಚಯ್’ ಮತ್ತು ‘ಕೋಶಿಶ್’ ಚಿತ್ರಗಳನ್ನೂ ನಿರ್ದೇಶಿಸಿದರು.  ಪರಿಚಯ್ ಚಿತ್ರ ಬೆಂಗಾಲಿ ಬಾಷೆಯ ‘ರಂಗೀನ್ ಉತ್ತರೈನ್’ ಕಥೆಯನ್ನು ಆಧರಿಸಿ  ಇಂಗ್ಲಿಷ್ ಭಾಷೆಯ ‘ದಿ ಸೌಂಡ್ ಆಫ್ ಮ್ಯೂಸಿಕ್’ ಪ್ರೇರಣೆ ಪಡೆದು  ಜನ ಮೆಚ್ಚುಗೆ ಗಳಿಸಿತು.  ‘ಕೋಶಿಶ್’ ಚಿತ್ರ ಕಿವುಡು ಮೂಖ ದಂಪತಿಗಳ ಕಥಾಹಂದರವನ್ನೂ ಒಳಗೊಂಡು ಜಯಾಬಾಧುರಿ ಮತ್ತು ಸಂಜೀವ್ ಕುಮಾರ್ ಅವರ ಅಪ್ರತಿಮ ಅಭಿನಯವನ್ನು ಹೊರತಂದಿತ್ತು.  ಸಂಜೀವ್ ಕುಮಾರ್ ಈ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದರು.   1973ರಲ್ಲಿ ತೆರೆಕಂಡ ‘ಅಚಾನಕ್’ ಗುಲ್ಜಾರರ ಮತ್ತೊಂದು ಶ್ರೇಷ್ಠ ಚಿತ್ರವಾಗಿ ಅಪಾರ ಜನಪ್ರಿಯತೆಯ ಜೊತೆಗೆ ಪ್ರಶಸ್ತಿಗಳನ್ನೂ ಗಳಿಸಿಕೊಂಡಿತು.  ಗುಲ್ಜಾರರ ‘ಅಂಧಿ’ ಮತ್ತೊಂದು ಶ್ರೇಷ್ಠ ಚಿತ್ರ.  ‘ಕಾಲಿ ಆಂಧಿ’ ಎಂಬ ಕಮಲೇಶ್ವರ್ ಅವರ ಕಥೆಯನ್ನು ಆಧರಿಸಿದ ಈ ಚಿತ್ರ ಅಪಾರ ಜನಪ್ರಿಯತೆ ಮತ್ತು ಪ್ರಶಸ್ತಿಗಳನ್ನು ಗಳಿಸಿತ್ತು.  ಈ ಚಿತ್ರಕತೆ ತಾರಕೇಶ್ವರ ಸಿನ್ಹ ಅವರ ಜೀವನವನ್ನು ಆಧರಿಸಿತ್ತು.  .ಅವರ ಮುಂದಿನ ಚಿತ್ರ ಖುಷ್ಬೂ.  ಅವರ ‘ಮೌಸಂ’ ಚಿತ್ರ ಮತ್ತೊಂದು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು.  ಶರ್ಮಿಳಾ ಠಾಗೂರ್ ಈ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದರು.  ಸಂಜೀವ್ ಕುಮಾರರ ಅಭಿನಯ ಕೂಡಾ ಅಷ್ಟೇ ಶ್ರೇಷ್ಠ ಮಟ್ಟದ್ದಾಗಿತ್ತು.  ಅವರ ‘ಅಂಗೂರ್’ ಚಿತ್ರ ಅತ್ಯುತ್ತಮ ಹಾಸ್ಯ ಚಿತ್ರಗಳ ಪರಂಪರೆಯಲ್ಲಿ ನಿಲ್ಲುವಂತದ್ದು.  ಅವರ ಇನ್ನಿತರ ಚಿತ್ರಗಳಾದ ಇಜಾಸತ್, ಮಾಚಿಸ್, ಹು ತು ತು ಮುಂತಾದವು ಕೂಡ ಚಿತ್ರ ವಿದ್ವಾಂಸರ ಮೆಚ್ಚುಗೆ ಪಡೆದಂತಹವು.  ಗುಲ್ಜಾರರ ನಿರ್ದೇಶನದಲ್ಲಿ ಸಂಜೀವ್ ಕುಮಾರ್, ಜಯಾ ಬಾಧುರಿ, ಜಿತೇಂದ್ರ, ವಿನೋದ್ ಖನ್ನ, ಹೇಮಾಮಾಲಿನಿ ಮುಂತಾದವರ ಶ್ರೇಷ್ಠ ಅಭಿನಯ ಬೆಳಕಿಗೆ ಬಂತು.  ದೂರದರ್ಶನದಲ್ಲಿ ಮೂಡಿ ಬಂದ ಮಿರ್ಜಾ ಗಾಲಿಬ್ ಸರಣಿಯಲ್ಲಿ ನಸೀರುದ್ದೀನ್ ಷಾ  ಅಭಿನಯಿಸಿದ್ದರು.  ಇನ್ನು ಅವರ ಚಿತ್ರಗಳ ಹಾಡುಗಳಲ್ಲಿ ಪರಿಚಯ್ ಚಿತ್ರದ ‘ಮುಸಾಫಿರ್ ಹೂ ಯಾರೋ’, ಆಂಧಿಯ ‘ತೆರೆ ಬಿನಾ ಜಿಂದಗಿ ಸೆ ಕೊಯಿ’,’ಇಜಾಸತ್ ಚಿತ್ರದ ‘ಮೇರಾ ಕುಚ್ ಸಮಾನ್’, ಮಾಸೂಮ್ ಚಿತ್ರದ ‘ತುಜ್ಸೆ ನಾರಾಜ್ ನಹಿ ಜಿಂದಗಿ’ ಮುಂತಾದವು ಚಿರಸ್ಮರಣೀಯವಾಗಿವೆ.  ಅವರ ನಿರ್ದೇಶನದ ಹೊರತಾಗಿ ಕೂಡಾ ಇತರ ಚಿತ್ರಗಳಲ್ಲಿ ಇಂದೂ ಮೂಡಿ ಬರುತ್ತಿರುವ ಅವರ ಗೀತ ಸಾಹಿತ್ಯ ಜನಮನವನ್ನು ನಿರಂತರ ಬೆಳಗುತ್ತಾ ಸಾಗಿದೆ.


ಕವಿಯಾಗಿ ಗುಲ್ಜಾರ್ ಅವರ ಕಾವ್ಯಗಳು ಚಾಂದ್ ಪುಕರಾಜ್ ಕಾ, ರಾತ್ ಪಷ್ಮಿನೇ ಕಿ, ಪಂದ್ರಾಹ್ ಪಾಂಚ್ ಪಚ್ಹತ್ತರ್ ಮುಂತಾದ ಕಾವ್ಯ ಸಂಕಲನಗಳಲ್ಲಿ ದಾಖಲಾಗಿವೆ.  


 ಗುಲ್ಜಾರ್ ರವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ 

  2008ರಲ್ಲಿ   ಪದ್ಮಭೂಷಣ,

2002ರಲ್ಲಿ   ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ,

ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ’ ಗೀತೆಗಾಗಿ ಸಂದ ಅಕಾಡೆಮಿ ಪ್ರಶಸ್ತಿ,

ಗ್ರಾಮಿ ಪ್ರಶಸ್ತಿ ಮುಂತಾದವು ಗುಲ್ಜಾರ್ ಅವರ ವಿದ್ವತ್ಪೂರ್ಣ ಹಾಗೂ ಜನಪ್ರಿಯ ಅಭಿವ್ಯಕ್ತಿಗಳೆರಡೂ ಕ್ಷೇತ್ರಗಳಲ್ಲಿನ ಅಪ್ರತಿಮ ಸಾಧನೆಗಳ ದ್ಯೋತಕವಾಗಿವೆ.

2014ರಲ್ಲಿ ಪ್ರತಿಷ್ಠಿತ ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ ಅವರ ಮುಡಿಗೇರಿದೆ. ಪ್ರಸ್ತುತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಅಭಿನಂದನೆಗಳು ಗುಲ್ಜಾರ್ ಜಿ..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529