29 ಜನವರಿ 2024

ಪರೀಕ್ಷಾ ಪೇ ಚರ್ಚಾ..ಮತ್ತು ಸಲಹೆಗಳು


ಪರೀಕ್ಷಾ ಪೇ ಚರ್ಚಾ..ಮತ್ತು ಸಲಹೆಗಳು 


ನೆಹರೂ ರವರು ಮಕ್ಕಳ ಪ್ರೀತಿಯ ಚಾಚಾ ನೆಹರೂ ಆಗಿದ್ದರು.ಡಾ ಅಬ್ದುಲ್ ಕಲಾಂ ಜಿ ರವರು ಮಕ್ಕಳಿಗೆ ಅಮೂಲ್ಯವಾದ ಸಲಹೆ ಮಾರ್ಗದರ್ಶನ ನೀಡಿ ಪುಸ್ತಕಗಳನ್ನು ಸಹ ಬರೆದು ಹುರಿದುಂಬಿಸಿದರು.ಅದೇ ಹಾದಿಯಲ್ಲಿ ನಮ್ಮ ಪ್ರಧಾನಿಯವರು ಸಾಗುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮಾನ್ಯ ಪ್ರಧಾನ ಮಂತ್ರಿಗಳು ಪರೀಕ್ಷಾ ಪೆ ಚರ್ಚಾ 2024 ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನೇರ ಸಂವಾದ ನಡೆಸಿದರು. ಈ ಕಾರ್ಯಕ್ರಮವು ದೆಹಲಿಯ  ಭಾರತ್‌ ಮಂಟಪದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ  ನಡೆಯಿತು  ಈ ಬಾರಿ  ಒಟ್ಟು 205.62 ಲಕ್ಷ ವಿದ್ಯಾರ್ಥಿಗಳು, 14.93 ಲಕ್ಷ ಶಿಕ್ಷಕರು ಮತ್ತು 5.69 ಲಕ್ಷ ಪೋಷಕರು ಪರೀಕ್ಷಾ ಪೇ ಚರ್ಚಾ 2024 ನೋಂದಾಯಿಸಿಕೊಂಡಿದ್ದರು. 


ಮಾನ್ಯ ಪ್ರಧಾನ ಮಂತ್ರಿಗಳು  ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಸಾಮೂಹಿಕವಾಗಿ ಕಾರ್ಯತಂತ್ರ ರೂಪಿಸಲು ಅತ್ಯಂತ ಸ್ಮರಣೀಯ ಸಭೆ ಇದಾಗಿದೆ ಎಂದರು.

ಜೊತೆಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು. ಅದರಲ್ಲೂ, ಪರೀಕ್ಷೆಯ ಕುರಿತು ವಿದ್ಯಾರ್ಥಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿಯವರು  ಹಲವು ಸಲಹೆಗಳನ್ನು ನೀಡಿದ್ದಾರೆ. ಉದಾಹರಣೆ, ನಿದರ್ಶನಗಳ ಮೂಲಕ ಪರೀಕ್ಷಾ ಭಯ ಹೋಗಲಾಡಿಸಲು ಯತ್ನಿಸಿದ್ದಾರೆ. ಅವುಗಳಲ್ಲಿ ಪ್ರಮುಖ 10 ಸಲಹೆಗಳು ಇಲ್ಲಿವೆ.


ರೈಲು ಬರುತ್ತಲೇ ಯಾರೂ ಸ್ಟೇಷನ್‌ ತಲುಪುವುದಿಲ್ಲ. ರೈಲು ಬರುವ 10 ನಿಮಿಷ ಮೊದಲೇ ತೆರಳುತ್ತೇವೆ. ಹಾಗೆಯೇ, ಪರೀಕ್ಷೆಯ ಕೊಠಡಿಗೂ ಮೊದಲೇ ತೆರಳಬೇಕು. ಕೊಠಡಿಯ ಬಾಗಿಲಿನವರೆಗೆ ಪುಸ್ತಕ ಹಿಡಿದುಕೊಂಡು ಹೋಗಬಾರದು. 10 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಗೆಳೆಯರೊಂದಿಗೆ ಮಾತನಾಡಿ, ಒಂದು ಜೋಕ್‌ ಹೇಳಿ, ಮೊದಲು ನಿರಾತಂಕವಾಗಿ ಉಸಿರಾಡಿ.

ಪ್ರಶ್ನೆಪತ್ರಿಕೆ ಕೈಗೆ ನೀಡುತ್ತಲೇ ಗಾಬರಿಯಾಗದಿರಿ. ಪ್ರಶ್ನೆ ಪತ್ರಿಕೆ ಸಿಗುತ್ತಲೇ ಎಲ್ಲ ಪ್ರಶ್ನೆಗಳನ್ನು ಓದಿಕೊಳ್ಳಿ. ಯಾವ ಪ್ರಶ್ನೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬುದನ್ನು ಯೋಚಿಸಿ. ಊಟ ಮಾಡುವಾಗ ಯಾರೂ ಗಡಿಯಾರ ನೋಡುವುದಿಲ್ಲ. ಹಾಗೆಯೇ, ಪರೀಕ್ಷೆ ಬರೆಯುವಾಗ ಅನಗತ್ಯವಾಗಿ ಗಡಿಯಾರ ನೋಡಿಕೊಳ್ಳದಿರಿ. ಅವಸರಕ್ಕೆ ಬಿದ್ದು ಬರೆಯಲು ಮುಂದಾಗದಿರಿ.

ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಓದಿಕೊಂಡು ಹೋಗುತ್ತಾರೆಯೇ ಹೊರತು, ಮೊದಲು ಬರೆದು ಬರೆದು ಅಭ್ಯಾಸ ಮಾಡಿಕೊಂಡಿರುವುದಿಲ್ಲ. ಹಾಗಾಗಿ, ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಹಾಗಾಗಿ, ಪರೀಕ್ಷೆಗೂ ಮೊದಲು ಪ್ರಶ್ನೆಗಳಿಗೆ ಉತ್ತರ ಬರೆದು ಬರೆದು ಅಭ್ಯಾಸ ಮಾಡಿಕೊಳ್ಳಿ. ಆಗ ಮನನವೂ ಆಗುತ್ತದೆ, ಪರೀಕ್ಷೆಯಲ್ಲಿ ಸುಲಭವಾಗಿ ಬರೆಯುವುದೂ ಸಾಧ್ಯವಾಗುತ್ತದೆ.

ಯಾರೇ ಆಗಲಿ, ನೀರಿಗೆ ಇಳಿಯದ ಹೊರತು ಈಜು ಕಲಿಯಲು ಸಾಧ್ಯವಿಲ್ಲ. ಹಾಗೆಯೇ, ಹಳೆಯ ಪ್ರಶ್ನೆಪತ್ರಿಕೆಗಳಿಗೆ, ಪ್ರಶ್ನೆಗಳಿಗೆ ಬರೆದು, ನೋಟ್ಸ್‌ಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ. ಬರೆದು ಅಭ್ಯಾಸ ಮಾಡಿಕೊಂಡರೆ, ಮನನ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಬಹುದು.

ವಿದ್ಯಾರ್ಥಿಗಳು ಓದಿಕೊಂಡು, ಬರೆದುಕೊಂಡು ಪರೀಕ್ಷೆಗೆ ಹೋಗುವುದರ ಜತೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗಲೇ ಶಿಕ್ಷಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಓದುವಾಗ ಗೊಂದಲ ಬಂದರೆ ಶಿಕ್ಷಕರಿಗೆ ಪ್ರಶ್ನೆ ಕೇಳಬೇಕು, ಮನೆಯಲ್ಲಿದ್ದರೆ ಮೊಬೈಲ್‌ ಕರೆ ಮಾಡಬೇಕು. ಆಗ ತಕ್ಷಣವೇ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

ಎಲ್ಲ ವಿದ್ಯಾರ್ಥಿಗಳ ಬಳಿಯೂ, ಮನೆಗಳಲ್ಲೂ ಮೊಬೈಲ್‌ ಇದೆ. ಆ ಮೊಬೈಲ್‌ಅನ್ನು ನಿತ್ಯ ಚಾರ್ಜ್‌ ಮಾಡದಿದ್ದರೆ ಅದು ಸ್ವಿಚ್‌ಆಫ್‌ ಆಗುತ್ತದೆ. ಹಾಗೆಯೇ ಮನುಷ್ಯನ ದೇಹವನ್ನೂ ರಿಚಾರ್ಜ್‌ ಮಾಡಬೇಕಾಗುತ್ತದೆ. ಅದರಲ್ಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೆದುಳು, ಮನಸ್ಸಿನ ಜತೆಗೆ ದೇಹವನ್ನೂ ಉಲ್ಲಸಿತಗೊಳಿಸಬೇಕು.

ವಿದ್ಯಾರ್ಥಿಗಳು ಒಂದೇ ಕಡೆ ಓದುವ ಬದಲು ಎಳೆ ಬಿಸಿಲಿನಲ್ಲಿ ಕುಳಿತು ಓದಬೇಕು. ಶಾಂತಿಯುತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು. ಸರಿಯಾಗಿ ನಿದ್ದೆ ಮಾಡಬೇಕು. ಮೊಬೈಲ್‌ನಲ್ಲಿ ಒಂದರ ಹಿಂದೆ ಒಂದು ರೀಲ್ಸ್‌ಗಳನ್ನು ನೋಡಿದರೆ ಮೊದಲು ನೋಡಿದ ರೀಲ್‌ ನೆನಪಿರುವುದಿಲ್ಲ. ಹಾಗಾಗಿ, ಎಡೆಬಿಡದೆ ಓದುವ ಬದಲು ದೇಹಕ್ಕೆ ಬೇಕಾಗುವಷ್ಟು ನಿದ್ದೆ ಮಾಡಬೇಕು. ಇದು ಮೆದುಳು, ಮನಸ್ಸು ಹಾಗೂ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಂತ ಮೋದಿ ಹೇಳಿದರು ಎಂದು ಬರೀ ನಿದ್ದೆಯನ್ನೇ ಮಾಡಬೇಡಿ ಎಂದು ಚಟಾಕಿ ಹಾರಿಸಿದರು.

ಮಕ್ಕಳು ಓದುವುದು, ಬರೆಯುವುದು, ಮನನ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಮುಖ್ಯ. ಪರೀಕ್ಷೆಯ ದಿನಗಳಲ್ಲಿ ನಿಯಮಿತ ಆಹಾರ ಸೇವಿಸಿ. ಬಡತನ ಇರಲಿ ಸಿರಿತನ ಇರಲಿ ಇರುವ ಆಹಾರ ಸೇವಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ.

ವ್ಯಾಯಾಮವು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ. ನಿತ್ಯವೂ ಬೆಳಗ್ಗೆ ಎದ್ದು ಹಲ್ಲುಜ್ಜುವ ರೀತಿ, ಬೆಳಗ್ಗೆ ಎದ್ದ ತಕ್ಷಣ 10 ನಿಮಿಷವಾದರೂ ವ್ಯಾಯಾಮ ಮಾಡಿ. ಇದರಿಂದ ದೇಹವು ಉಲ್ಲಾಸಗೊಳ್ಳುತ್ತದೆ. ದೈಹಿಕ ಚಟುವಟಿಕೆಯು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ.

ನಾವು ಚಳಿಯೊಂದಿಗೆ ಜೀವನ ಸಾಗಿಸುವ ಮನಸ್ಥಿತಿ ರೂಢಿಸಿಕೊಂಡರೆ, ಹೆಚ್ಚು ಚಳಿ ಎನಿಸುವುದಿಲ್ಲ. ಪರೀಕ್ಷೆಯೂ ಹಾಗೆಯೇ ನಾವು ಮೊದಲು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ನಾವು ಮೊದಲು ಮೆದುಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಮನಸ್ಸನ್ನೂ ಹುರಿಗೊಳಿಸಬೇಕು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಪಡೆಯುತ್ತೇನೆ ಎಂದು ನಿಶ್ಚಯ ಮಾಡಿಕೊಳ್ಳಬೇಕು. ಎಂದು ತಿಳಿಸಿದ್ದಾರೆ.


ಮಾನ್ಯ ಪ್ರಧಾನ ಮಂತ್ರಿಗಳು ಈ ಪರೀಕ್ಷ ಪೆ ಚರ್ಚಾ ಕಾರ್ಯಕ್ರಮದಲ್ಲಿ ಕೇವಲ ಮಕ್ಕಳಿಗೆ ಮಾತ್ರ ಸಲಹೆ ನೀಡದೆ ಪೋಷಕರು ಮತ್ತು ಶಿಕ್ಷಕರಿಗೂ ಕೆಲ ಕಿವಿ ಮಾತುಗಳನ್ನು ಹೇಳಿದರು.

 ಕೆಲವು ಪೋಷಕರು ಮಗುವಿನ ರಿಪೋರ್ಟ್ ಕಾರ್ಡನ್ನು ತಮ್ಮ ವಿಸಿಟಿಂಗ್ ಕಾರ್ಡ್ ಆಗಿ ಪರಿವರ್ತಿಸುತ್ತಾರೆ.

ಸ್ವತಃ ಯಶಸ್ವಿಯಾಗದಂತಹ ಪೋಷಕರು ತಮ್ಮ ಮಕ್ಕಳ ರಿಪೋರ್ಟ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಅವರು ಎಲ್ಲಿಗೆ ಹೋದರೂ, ಅವರು ತಮ್ಮ ಮಕ್ಕಳ ಬಗ್ಗೆ ಕಥೆಗಳನ್ನು ಹೇಳುತ್ತಾ, ತಮ್ಮ ಯಶಸ್ಸೆನ್ನುವಂತೆ ಬಿಂಬಿಸುತ್ತಾರೆ.

 ಪೋಷಕರು ತಮ್ಮ ಮಕ್ಕಳನ್ನು ಯಾವಾಗಲೂ ಶಪಿಸುತ್ತಾರೆ, ಆದ್ದರಿಂದ ಇದು ನಿಮ್ಮ ಮನಸ್ಸಿನಲ್ಲಿ ರೂಢಿಯಾಗುತ್ತದೆ.ಇದು ತಪ್ಪಬೇಕು ಎಂದರು 

ಪೋಷಕರು-ಮಕ್ಕಳ ಸಂವಹನ ಹೆಚ್ಚಬೇಕು.

ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡುವಲ್ಲಿ ಶಿಕ್ಷಕರು ಸಹ ಪ್ರಮುಖವಾದ ಪಾತ್ರ ವಹಿಸುತ್ತಾರೆ ಹಾಗೂ ವಹಿಸಬೇಕು.

 ಆದ್ದರಿಂದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಯಾವಾಗಲೂ ಸಕಾರಾತ್ಮಕ ಸಂಬಂಧ ಇರಬೇಕು.

 ಶಿಕ್ಷಕರ ಕೆಲಸ ಕೇವಲ ಕೆಲಸ ಮಾಡುವುದು ಮಾತ್ರವಲ್ಲ, ಜೀವನವನ್ನು ರೂಪಿಸುವುದು, ಜೀವನಕ್ಕೆ ಶಕ್ತಿ ನೀಡುವುದು,

ಪರೀಕ್ಷೆಯ ಒತ್ತಡವನ್ನು ವಿದ್ಯಾರ್ಥಿಗಳು ಮತ್ತು ಇಡೀ ಕುಟುಂಬ ಮತ್ತು ಶಿಕ್ಷಕರು ಒಟ್ಟಾಗಿ ಪರಿಹರಿಸಬೇಕು.

 ನಾವು ಯಾವುದೇ ಒತ್ತಡವನ್ನು ತಡೆದುಕೊಳ್ಳಲು ಸಮರ್ಥರಾಗಿ, ನಮ್ಮ ಮಾನಸಿಕ ಸ್ಥಿತಿಯಿಂದ ಒತ್ತಡವನ್ನು ನಿವಾರಿಸಬೇಕು.

 ಏನೇ ತೊಂದರೆಗಳಿರಲಿ, ನಾವು ಅದನ್ನು ಕುಟುಂಬದಲ್ಲಿಯೂ ಚರ್ಚಿಸಬೇಕು.

ಜೀವನದಲ್ಲಿ ಯಾವುದೇ ಸವಾಲು ಮತ್ತು ಸ್ಪರ್ಧೆ ಇಲ್ಲದಿದ್ದರೆ, ಜೀವನವು ಸ್ಫೂರ್ತಿದಾಯಕ ಮತ್ತು ಬುದ್ಧಿಹೀನವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು 


ಈ ಸಲಹೆಗಳು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಈ ವರ್ಷ ಪರೀಕ್ಷೆ ಬರೆಯುವ ಎಲ್ಲಾ ಪರೀಕ್ಷಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ  ನೀಡಿದ ಸಲಹೆಯಂತೆ ತೋರುತ್ತದೆ. ಇವುಗಳನ್ನು ಪಾಲಿಸಿ,ಹಾಗೂ ಗೆಲ್ಲವ ಪಾಲಿಸಿ ನಿಮ್ಮದಾಗಲಿ ಪರೀಕ್ಷೆ ಬರೆಯುವ ಸರ್ವರಿಗೂ ಶುಭವಾಗಲಿ..


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


27 ಜನವರಿ 2024

ಮಾನವರಾಗೋಣ..ಭಾಗ ೮

 


ಮಾನವರಾಗೋಣ 


 ಅಮೇರಿಕದಲ್ಲಿ ಒಬ್ಬ   ಖೈದಿಗೆ ಮರಣದಂಡನೆ ವಿಧಿಸಿದಾಗ, ಕೆಲವು ವಿಜ್ಞಾನಿಗಳು ಈ ಖೈದಿಯ ಮೇಲೆ ಕೆಲವು ಪ್ರಯೋಗಗಳನ್ನು ಮಾಡಬೇಕೆಂದು ಸೂಚಿಸಿದ್ದರಿಂದ ಖೈದಿಯನ್ನು ನೇಣು ಹಾಕುವ ಬದಲು ವಿಷಕಾರಿ ಹಾವಿನ  ದಾಳಿಯಿಂದ ಕೊಲ್ಲಲಾಗುವುದು ಎಂದು ತಿಳಿಸಲಾಯಿತು.


ಒಂದು ದೊಡ್ಡ ವಿಷಪೂರಿತ ಹಾವನ್ನು ಕೈದಿಯ ಮುಂದೆ ತರಲಾಯಿತು. ನಂತರ ಖೈದಿಯ ಕಣ್ಣುಗಳನ್ನು ಮುಚ್ಚಿ ಅವನನ್ನು ಕುರ್ಚಿಗೆ ಕಟ್ಟಲಾಯಿತು.  ಅವನಿಗೆ ಹಾವಿನಿಂದ ಕಚ್ಚಿಸಲಿಲ್ಲ, ಆದರೆ ಎರಡು ಪಿನ್ ಗಳಿಂದ ಚುಚ್ಚಲಾಯಿತು. ಆ ಖೈದಿ ಎರಡೇ ಸೆಕೆಂಡುಗಳಲ್ಲಿ ಸತ್ತುಹೋದ.

ಮರಣೋತ್ತರ ಪರೀಕ್ಷೆಯಲ್ಲಿ ಖೈದಿಯ ದೇಹದಲ್ಲಿ ಹಾವಿನ ವಿಷವನ್ನು ಹೋಲುವ ವಿಷವಿದೆ ಎಂದು ತಿಳಿದುಬಂತು.

ಎಲ್ಲರಿಗೂ ಅಚ್ಚರಿ!  ಈ ವಿಷ ಆ ಮೃತ ಖೈದಿಯ ದೇಹದಲ್ಲಿ ಎಲ್ಲಿಂದ ಬಂತು!!? ಅಥವಾ ಖೈದಿಯ ಸಾವಿಗೆ ಕಾರಣವೇನು!? 

ಇದಕ್ಕೆ ಸಿಕ್ಕ ಉತ್ತರವೇನೆಂದರೆ..  "ಮಾನಸಿಕ ಆಘಾತದಿಂದಾಗಿ ಆ ವಿಷವನ್ನು ಅವನ ದೇಹದಿಂದಲೇ ಉತ್ಪಾದಿಸಲಾಯಿತು!!!"


ಆದ್ದರಿಂದ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ದೇಹವು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

90% ಕಾಯಿಲೆಗಳಿಗೆ ಮೂಲ ಕಾರಣ ನಕಾರಾತ್ಮಕ ಆಲೋಚನೆಗಳಿಂದ ಉತ್ಪತ್ತಿಯಾಗುವ ಶಕ್ತಿ. 

ನಾವು ಮಾನಸಿಕವಾಗಿ ಆರೋಗ್ಯವಾಗಿದ್ದರೆ ದೈಹಿಕವಾಗಿ ಆರೋಗ್ಯವಿದ್ದಂತೆ ಸರಿ .ಕಷ್ಟ ಕಾಲದಲ್ಲಿ ನಮ್ಮ ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯಕ. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಯಾವುದೇ ಕಾರಣಕ್ಕೂ ಧೃತಿಗೆಡದೆ ಮುನ್ನೆಡೆಯಬೇಕು. ಕೆಲವರಂತೂ ಮಂಬರುವ ಕಲ್ಪಿತ ತೊಂದರೆಗಳನ್ನು ಊಹಿಸಿಕೊಂಡು ಹಿಂಸೆಪಡುವುದನ್ನು ನೋಡಲಾಗದು. ಬಾರದು ಬಪ್ಪುದು,ಬಪ್ಪುದು ತಪ್ಪುದು ಎಂಬ ಅಣ್ಣನ ವಚನವನ್ನು ನೆನಯುತ್ತಾ ಬಂದದ್ದೆಲ್ಲಾ ಬರಲಿ ರಾಘವೇಂದ್ರನ ದಯೆವೊಂದಿರಲಿ ಎಂದು ನಮ್ಮ ನಮ್ಮ  ಕಾಯಕ ಮಾಡಿದರೆ ಧರೆಯೇ  ಕೈಲಾಸವಾಗುವುದು ಅಲ್ಲವೇ?


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು


 


22 ಜನವರಿ 2024

ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳೋಣ: ಡಾ.ಗುರುರಾಜ್ ಕರ್ಜಗಿ.





 


ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳೋಣ: ಡಾ.ಗುರುರಾಜ್ ಕರ್ಜಗಿ.


ಜೀವರಾಶಿಗಳಲ್ಲಿ ಶ್ರೇಷ್ಠವಾದ ಮಾನವ ಜನ್ಮವನ್ನು ಡಿ ವಿ ಜಿ ಯಂತವರ ಸಾಹಿತ್ಯದ ಬೆಳಕಿನಲ್ಲಿ  ಪಾವನ ಮಾಡಿಕೊಳ್ಳೋಣ ಎಂದು ಶಿಕ್ಷಣ ತಜ್ಞರು ಹಾಗೂ ವಾಗ್ಮಿಗಳಾದ ಡಾ ಗುರುರಾಜ್ ಕರ್ಜಗಿರವರು ಕರೆ ನೀಡಿದರು.

ತುಮಕೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಡಿ ವಿ ಜಿ ಯವರ ಜೀವನಧರ್ಮ  ದರ್ಶನ ಉಪನ್ಯಾಸ ಮಾಲಿಕೆಯ 100 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಡಿ ವಿ ಜಿಯವರು ಸಲ್ಲಿಸಿದ ಕೊಡುಗೆ ಅಪಾರ, ತುಮಕೂರಿಗೂ ಡಿ ವಿ ಜಿ ರವರಿಗೂ ಅವಿನಾಭಾವ ಸಂಬಂಧವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿರವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿ ವಿ ಜಿ ರವರ ಸಹೋದರ ಸಂಬಂಧಿ ಆರ್ ಚಂದ್ರಮೌಳಿ ರವರು ಡಿ ವಿ ಗುಂಡಪ್ಪನವರ ಸಮಾಜ ಮುಖಿ ಚಿಂತನೆಗಳನ್ನು ಉದಾಹರಣೆ ಸಮೇತ ವಿವರಿಸಿದರು. 

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜಪಾನಂದ್ ಜೀ ಮಹಾರಾಜ್ ರವರು ಡಿ ವಿ ಜಿ ಯವರ ಗೀತೆಯನ್ನು ಹಾಡಿ ಕಗ್ಗಗಳ ಮಹತ್ವ ಮತ್ತು ಕನ್ನಡ ಭಾಷೆಯ ಬಳಕೆಯ ಬಗ್ಗೆ ಯುವ ಜನತೆಗೆ ಮಾರ್ಗದರ್ಶನ ನೀಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತುಮಕೂರು ಘಟಕದ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ ರವರು ಡಿ ವಿ ಜಿ ರವರ ಜೀವನ ಧರ್ಮದರ್ಶನ  ದ ನೂರು ಕಾರ್ಯಕ್ರಮ ಮಾಡಲು ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದಗಳನ್ನು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಡಿ ವಿ ಜಿ ರವರ ಕಗ್ಗ ವಾಚನ ಮತ್ತು ಗಮಕ ಕಲಾಶ್ರೀ ವಿದ್ವಾನ್ ಎಂ ಜಿ ಸಿದ್ದರಾಮಯ್ಯ ರವರು ವ್ಯಾಖ್ಯಾನ ಮಾಡಿದರು. 

ತುಮಕೂರು ವಿಶ್ವ ವಿದ್ಯಾನಿಲಯದದ ಉಪಕುಲಪತಿಗಳಾದ ಪ್ರೊ ಎಂ ವೆಂಕಟೇಶ್ವರಲು ಸ್ವಾಗತಿಸಿದರು.

ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ಎಸ್ ನಾಗಣ್ಣ ರವರು ವಂದಿಸಿದರು.

ತುಮಕೂರು ಜಿಲ್ಲಾ ಕ ಸಾ ಪ ಮಹಿಳಾ ಪ್ರತಿನಿಧಿ ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ವಾಸವಿ ಸಂಘದ ಅಧ್ಯಕ್ಷರಾದ ಡಾ ಆರ್.ಎಲ್ ರಮೇಶ್ ಬಾಬು, 

ಜಿಲ್ಲಾ ಕ ಸಾ ಪ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಕಿರಣ್,

ತಾಲ್ಲೂಕು ಕ ಸಾ ಪ ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್,  ನಗರ ಕ ಸಾ ಪ ಅಧ್ಯಕ್ಷರಾದ ಗೀತಾ ನಾಗೇಶ್ ,ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್ವರ, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. 


19 ಜನವರಿ 2024

ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


 


ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


ನಾನು ಇತ್ತೀಚೆಗೆ   ಜಯ್  ಶೆಟ್ಟಿಯವರ "ಥಿಂಕ್ ಲೈಕ್ ಎ  ಮಾಂಕ್" ಪುಸ್ತಕ ಓದಿದೆ. ಅದನ್ನು ಓದಿದ  ಮೇಲೆ ಎಲ್ಲಾ ವಯೋಮಾನದವರು ಪದೇ ಪದೇ ಓದಬೇಕಾದ ಮತ್ತು ಆ ಪುಸ್ತಕದ ಕೆಲ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲೇಬೇಕಾದ ಅಗತ್ಯವಿದೆ ಎನಿಸಿತು. ಮೂಲ ಇಂಗ್ಲಿಷ್ ಆದರೂ ನಾನು ಕನ್ನಡದ ಆವೃತ್ತಿಯನ್ನು ಓದಿದೆ.

ಇಡೀ ಪುಸ್ತಕ ಓದಿದ ಬಳಿಕ ಆ ಪುಸ್ತಕದ ಸಾರಾಂಶವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಮನಸಾಗಿದೆ. ಆ ಪುಸ್ತಕದ ಸಾರಾಂಶವನ್ನು  ನಿಮಗೆ ಸಲಹೆ ರೂಪದಲ್ಲಿ ಈ ಕೆಳಗಿನ ಅಂಶಗಳ ರೂಪದಲ್ಲಿ ಸಲಹಾತ್ಮಕವಾಗಿ ಹೇಳಬಯಸುವೆ.


  ಗತದ ಗೊಡವೆಯ ಬಿಡಿ.  ಮತ್ತು ಭವಿಷ್ಯವನ್ನು ಅತಿಯಾಗಿ ಕಲ್ಪಿಸಿಕೊಂಡು ಹಗಲುಗನಸು ಕಾಣಬೇಡಿ. ಪ್ರಸ್ತುತ ಕ್ಷಣದಲ್ಲಿ ವಾಸಿಸಿ ಮತ್ತು ನೀವು ಏನು ಸಾಧಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸಿ.ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ.  ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಗುರಿಗಳನ್ನು ಹೊಂದಿ ಅದನ್ನು ತಲುಪಲು ಪ್ರಯಾಣದಲ್ಲಿದ್ದಾರೆ.  ನಿಮ್ಮ ಸ್ವಂತ ಗುರಿ ಮತ್ತು ಪ್ರಗತಿಯತ್ತ ಗಮನಹರಿಸಿ.ನಿಮ್ಮಲ್ಲಿರುವದಕ್ಕೆ ಕೃತಜ್ಞರಾಗಿರಿ.  ನಿಮ್ಮ ಜೀವನದಲ್ಲಿ ದೊಡ್ಡ ಅಥವಾ ಚಿಕ್ಕದಾದ ಯಶಸ್ಸನ್ನು ಸಂಭ್ರಮಿಸಿ  ಮತ್ತು  ಒಳ್ಳೆಯ ವಿಷಯಗಳನ್ನು ಪ್ರಶಂಸಿಸಲು ಸಮಯ ತೆಗೆದುಕೊಳ್ಳಿ.


 ಮೊದಲು ನಿಮ್ಮ ಬಗ್ಗೆ ನಿಮಗೆ ಹೆಮ್ಮೆಯಿರಲಿ. ಮತ್ತು ಇತರರಿಗೆ ದಯೆಯಿಂದಿರಿ.  ನಿಮ್ಮನ್ನು ಮತ್ತು ಇತರರನ್ನು ಸಹಾನುಭೂತಿ ಮತ್ತು ಕಾಳಜಿಯಿಂದ ನೋಡಿಕೊಳ್ಳಿ.

ನಿಯಮಿತವಾಗಿ ಧ್ಯಾನ ಮಾಡಿ.  ಧ್ಯಾನವು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರಬಲವಾದ ಸಾಧನವಾಗಿದೆ.


  ಸಾವಧಾನತೆಯನ್ನು ಅಭ್ಯಾಸ ಮಾಡಿ.  ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು   ಪ್ರಸ್ತುತ ಕ್ಷಣಕ್ಕೆ ಗಮನ ಕೊಡುವ ಅಭ್ಯಾಸ ರೂಢಿಸಿಕೊಳ್ಳಿ.

ಅತಿಯಾದ ಅಟ್ಯಾಚ್ ಮೆಂಟ್ ಬೇಕಿಲ್ಲ.ಕೆಲ ಜನರ, ಸ್ಥಳಗಳ,ಮತ್ತು ವಸ್ತುಗಳ ಮೇಲೆ ಅತಿಯಾದ ಅಟ್ಯಾಚ್ ಮೆಂಟ್  ದುಃಖಕ್ಕೆ ಕಾರಣವಾಗಬಹುದು.  ಅಟ್ಯಾಚ್ ಮೆಂಟ್  ಬಿಡಲು ಮತ್ತು ಹೆಚ್ಚು ನಿರಾತಂಕದ ಜೀವನವನ್ನು ನಡೆಸಲು ಕಲಿಯಿರಿ.

 ಗಾಂಧೀಜಿಯಿಂದ ಹಿಡಿದು ಹಲವು  ಮಹಾನ್ ವ್ಯಕ್ತಿಗಳು  ಸರಳವಾಗಿ ಬದುಕುವ ಮಾದರಿಯ ತೋರಿಸಿದ್ದಾರೆ.  ಸರಳತೆ ರೂಢಿಸಿಕೊಳ್ಳಿ  ವಸ್ತು ಆಸ್ತಿ ಮತ್ತು ಬಾಹ್ಯ ಸಂಪತ್ತನ್ನು ಬೆನ್ನಟ್ಟಬೇಡಿ.  ನಿಮಗೆ ನಿಜವಾಗಿಯೂ ಮುಖ್ಯವಾದುದನ್ನು ಮತ್ತು ಅವಶ್ಯಕತೆ ಇರುವುದನ್ನು  ಪಡೆಯಲು ಮಾತ್ರ ಗಮನ  ಕೇಂದ್ರೀಕರಿಸಿ ಮತ್ತು ಸರಳ ಜೀವನವನ್ನು ನಡೆಸಿ.


ಕೆಲವೊಮ್ಮೆ ನೀವು ಮಾಡಿದ ತಪ್ಪಿಗೆ  ನಿಮ್ಮನ್ನೇ ಕ್ಷಮಿಸಿಕೊಳ್ಳಿ ಅದೇ ರೀತಿಯಲ್ಲಿ  ಇತರರನ್ನು ಕ್ಷಮಿಸಿ ತನ್ಮೂಲಕ ನೀವು ದೊಡ್ಡವರಾಗಿ.

ಹೀಗೆ ಥಿಂಕ್ ಲೈಕ್ ಎ ಮಾಂಕ್ ಪುಸ್ತಕದ ಪ್ರಮುಖಾಂಶಗಳ ಆಧಾರದ ಸಲಹೆಗಳ   ಪಟ್ಟಿಯು ಬೆಳೆಯುತ್ತಾ ಸಾಗುತ್ತದೆ. 

ಜಯ್  ಶೆಟ್ಟಿಯವರ ಈ  ಪುಸ್ತಕವು ಹೆಚ್ಚು ಶಾಂತಿಯುತ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಪ್ರಾಯೋಗಿಕ ಮಾರ್ಗದರ್ಶಿಯಾಗಿದೆ.  ಅವರ ಪುಸ್ತಕದಲ್ಲಿನ ಪಾಠಗಳನ್ನು ಅನುಸರಿಸುವ ಮೂಲಕ ನಿಮ್ಮ ಮನಸ್ಸನ್ನು ಹೆಚ್ಚು ಶಾಂತವಾಗಿಸಿಕೊಳ್ಳಲು ಮತ್ತು  ಸಹಾನುಭೂತಿಯಿಂದ ವರ್ತಿಸುವ ತರಬೇತಿ ನೀಡಬಹುದು. ಇಂತಹ ಅನುಭವ ನಿಮ್ಮದಾಗಬೇಕಾದರೆ ನೀವು ಥಿಂಕ್ ಲೈಕ್ ಎ ಮಾಂಕ್ ಓದಿ ಬಿಡಿ. ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


 

18 ಜನವರಿ 2024

ಸೈಬರ್ ಕಳ್ಳರಿಂದ ರಕ್ಷಿಸಿಕೊಳ್ಳೋಣ.


 


ಸೈಬರ್ ಕಳ್ಳರಿಂದ ರಕ್ಷಿಸಿಕೊಳ್ಳೋಣ.


ಮೊನ್ನೆ ರಾತ್ರಿ ಎಂಟು ಮೂವತ್ತರ ಸುಮಾರಿಗೆ ಪೋಷಕರೊಬ್ಬರು ಕರೆ ಮಾಡಿ " ಯಾರೋ ಪೋನ್ ಮಾಡಿ ನಿಮ್ ಮಗಳಿಗೆ ಸ್ಕಾಲರ್ಶಿಪ್ ಕೊಡ್ತೀವಿ, ಒಂದೂವರೆ ಸಾವ್ರ ನಿಮ್ ಅಕೌಂಟ್ ನಿಂದ ಟ್ರಾನ್ಸ್ಪರ್ ಮಾಡಿ ಅಂತಾರೆ ,ಏನ್ ಮಾಡ್ಲಿ ಸರ್ " ಅಂತ ಕೇಳಿದರು. ನನಗೆ ಒಂದೆಡೆ ಖುಷಿ ಮತ್ತೊಂದು ಕಡೆ ಬೇಸರವಾಯಿತು.ಖುಷಿ ಯಾಕೆಂದರೆ ನಮ್ಮ ಶಾಲೆಯ ಮಕ್ಕಳಿಗೆ ಆರ್ಥಿಕ ಸಾಕ್ಷರತೆ ಬಗ್ಗೆ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಹಾಗೂ ಪಾಠದ ಮಧ್ಯ ಆಗಾಗ್ಗೆ ಮಾಹಿತಿ ನೀಡುವಾಗ ಇಂತಹ ಸೈಬರ್ ಕ್ರೈಮ್ ಬಗ್ಗೆ  ಉದಾಹರಣೆ ಸಮೇತ  ಮಾಹಿತಿ ನೀಡಿ  ಜಾಗೃತರಾಗುವಂತೆ ತಿಳಿಸಿದ್ದೆವು.ಆ ವಿದ್ಯಾರ್ಥಿನಿ ಇಂತಹ ಕರೆ ಬಂದಾಗ ತನ್ನ ಪೋಷಕರಿಗೆ ನನಗೆ ಕರೆ ಮಾಡಲು ತಿಳಿಸಿದ್ದಳು ಇದರಿಂದ ಆನ್ಲೈನ್  ಆರ್ಥಿಕ ವ್ಯವಹಾರದ   ವಂಚನೆಯಿಂದ ಪಾರಾಗಿದ್ದರು.

ಬೇಸರದ ಸಂಗತಿಯೇನೆಂದರೆ,ಇಷ್ಟು ದಿನ ಸಂಪಾದನೆ ಮಾಡುವ ಟೆಕ್ಕಿಗಳು,ಗೃಹಿಣಿಯರು ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಆಧಾರ್ ,ಓಟಿಪಿ, ಫಿಷಿಂಗ್, ವಿಷಿಂಗ್ , ಮುಂತಾದ ಮಾರ್ಗಗಳಲ್ಲಿ ಜನರ ಹಣಕ್ಕೆ ಕನ್ನ ಹಾಕಿದ್ದ ಖದೀಮರು ಈಗ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳಿಗೆ ಕರೆ ಮಾಡಿ ಸ್ಕಾಲರ್ಶಿಪ್ ಹಣದ ಆಮಿಷ ನೀಡಿ ವಂಚಿಸುವ ಕಾಯಕಕ್ಕೆ ಇಳಿದಿದ್ದಾರೆ.

ಪೋಷಕರ ಜೊತೆಗೆ ಮಾತಾನಾಡಿದ ಸೈಬರ್ ಕಳ್ಳರ ಸಂಭಾಷಣೆಯ ರೆಕಾರ್ಡಿಂಗ್ ಅನ್ನು ಪೋಷಕರು ನನಗೆ ಕಳಿಸಿದರು. ಅದನ್ನು ಕೇಳಿದಾಗ ಅವರ ಮಾತುಗಾರಿಕೆ, ಸುಳ್ಳು ಹೇಳುವ ಕೌಶಲ್ಯ, ಕಂಡು ನಾನೇ ದಂಗಾದೆ. ಆ ಕಡೆಯಿಂದ ಮಾತನಾಡಿದ ಸೈಬರ್ ವಂಚಕಿಯ ಮಾತುಗಳ ಪ್ರಕಾರ ಸರ್ಕಾರ ಹೊಸದಾಗಿ ಮಕ್ಕಳಿಗೆ ನೇರವಾಗಿ ಗೂಗಲ್ ಪೇ ಅಥವಾ ಪೋನ್ ಪೇ ನಲ್ಲಿ ಮಾತ್ರ ಸ್ಕಾಲರ್ಶಿಪ್ ಹಣ ಹಾಕುತ್ತಾರಂತೆ. ಮಕ್ಕಳು 1500  ಹಣ ಹಾಕಿದರೆ ಅದೂ ಗೂಗಲ್ ಪೇ ನಲ್ಲಿ ಹಾಕಿದರೆ ಮಾತ್ರ ಆ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಲಿಂಕ್ ಓಪನ್ ಆಗುತ್ತಂತೆ. ವಿದ್ಯಾರ್ಥಿಗಳು ಈ ಆಫರ್ ತಿರಸ್ಕರಿಸಿದರೆ ಅಂತಹ ವಿದ್ಯಾರ್ಥಿಗಳನ್ನು ರೆಡ್ ಲಿಸ್ಟ್ ಗೆ ಸೇರಿಸುತ್ತಾರಂತೆ.ಅವರಿಗೆ ಲೈಪ್ ನಲ್ಲಿ ಸ್ಕಾಲರ್ಶಿಪ್ ಬರೋದೆ ಇಲ್ವಂತೆ.ಹೀಗೆ ರೈಲು ಬಿಡುತ್ತಾ ಮಕ್ಕಳ ಮತ್ತು ಪೋಷಕರನ್ನು ಭಾವನಾತ್ಮಕ ಬ್ಲಾಕ್ ಮೇಲೆ ಮಾಡಿದ್ದಳು ಸೈಬರ್ ಅಮ್ಮಣ್ಣಿ.

ನಾನು ಆ ಪೋಷಕರಿಗೆ ಯಾವುದೇ ಕಾರಣಕ್ಕೆ ಹಣ ಕೊಡಬೇಡಿ ಎಂದು ಸಲಹೆ ನೀಡಿದೆ.ಜೊತೆಯಲ್ಲಿ ಎಲ್ಲಾ ಸ್ಕಾಲರ್ಶಿಪ್ ಡಿ ಬಿ ಟಿ ಅಂದರೆ ನೇರವಾಗಿ ನಿಮ್ಮ ಮಕ್ಕಳ ಖಾತೆಗೆ ಹಣ ಬರುತ್ತದೆ. ಗೂಗಲ್ ಪೇ ನಲ್ಲಿ ಅಲ್ಲ ಎಂದು ಮನವರಿಕೆ ಮಾಡಿದೆ.

ಆ ಪೋಷಕರು ಹಣ ನೀಡದಿದ್ದಾಗ ಮತ್ತೊಮ್ಮೆ ಕರೆ ಮಾಡಿದ ವಂಚಕರು ಪೋಷಕರು ಮತ್ತು ಸಲಹೆ ನೀಡಿದ ಶಿಕ್ಷಕರನ್ನೇ ಬೈಯ್ದಿದ್ದಾರೆ.

ಈ  ಪ್ರಕರಣದ ತರುವಾಯ ನಮ್ಮ ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರು ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ. ಶಾಲಾ ಪ್ರಾರ್ಥನಾ ಅವಧಿಯಲ್ಲಿ ಸುರಕ್ಷಿತ ಬ್ಯಾಕಿಂಗ್, ಸುರಕ್ಷಿತ ಮೊಬೈಲ್ ಬಳಕೆ ಮತ್ತು ಆರ್ಥಿಕ ಸಾಕ್ಷರತೆ ಬಗ್ಗೆ ಮಾಹಿತಿ ನೀಡಿದ್ದೇವೆ.ಪೋಷಕರಿಗೂ ಶಾಲಾ ವಾಟ್ಸಪ್ ಗುಂಪಿನ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಜಾರಿಯಲ್ಲಿದೆ.


ಸ್ಕಾಲರ್ಶಿಪ್ ಕೊಡುವುದಾಗಿ, ಹಣದ ಸಹಾಯ ಮಾಡುವುದಾಗಿ ನಿಮ್ಮ ನಂಬಿಸಿ, ನಿಮ್ಮಿಂದ ನಿಮ್ಮ ಅಕೌಂಟ್ ನಿಂದ ಹಣ ದೋಚುವ ಸೈಬರ್ ಕಳ್ಳರ ಬಗ್ಗೆ ಸದಾ ಜಾಗೃತರಾಗಿ   ಎಚ್ಚರಿಕೆ ವಹಿಸಿ.ಕಷ್ಟಪಟ್ಟು ಗಳಿಸಿದ ಹಣ ಖದೀಮರ ಪಾಲಾಗಲು ಬಿಡಬೇಡಿ.

ಜಾಗೃತರಾಗಿ..

ಇಂತಹ ಮೋಸದ ಕರೆಗಳು ಬಂದಾಗ

ಸೈಬರ್ ಕ್ರೈಮ್ ಪೋಲಿಸರಿಗೆ ಮಾಹಿತಿ ನೀಡಿ.ಮಕ್ಕಳಿಗೆ ಜಾಗೃತಿ ಮೂಡಿಸಿ.ಮಕ್ಕಳ ಕೈಗೆ ಅನವಶ್ಯಕವಾಗಿ ಪೋನ್ ಕೊಡದಿರಿ.ಇದು ಮಕ್ಕಳ ಮತ್ತು ಪೋಷಕರ ಹಿತಾಸಕ್ತಿಯ ಭಾಗವಾಗಿ  ಆರ್ಥಿಕ ಸಾಕ್ಷರತೆ ಮತ್ತು ಜಾಗೃತಿ ಮೂಡಿಸುವ ಅಭಿಯಾನ.ಬನ್ನಿ ಎಲ್ಲರೂ ಕೈಜೋಡೊಸೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಮತ್ತು ಲೇಖಕರು

ತುಮಕೂರು 

9900925529