01 ಜೂನ್ 2023

ಆಶಾದಾಯಕ ಜಿ ಡಿ ಪಿ ಬೆಳವಣಿಗೆ.

 


ಆಶಾದಾಯಕ ಆರ್ಥಿಕ ಪ್ರಗತಿ.


ನೆರೆಯ ಶ್ರೀಲಂಕಾ, ಮತ್ತು ಪಾಕಿಸ್ತಾನ ದೇಶಗಳಲ್ಲಿ ಹಣದುಬ್ಬರ ಮಿತಿಮೀರಿ ಆ ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ‌

ವಿಶ್ವದ ಬಹುತೇಕ ದೇಶಗಳು ಆರ್ಥಿಕ ಹಿಂಜರಿತದ ಭೀತಿಯಿಂದ ಬಳಲುತ್ತಾ , ಜಗತ್ತಿನ ಕೆಲ ದೈತ್ಯ ಕಂಪನಿಗಳು ಉದ್ಯೋಗ ಕಡಿತ ಮಾಡುವ ಈ ದಿನಗಳಲ್ಲಿ ಭಾರತದ ಜಿ ಡಿ ಪಿ ಏರಿಕೆಯ ಗತಿ ದಾಖಲಿಸಿರುವುದು ಭಾರತದ ಮತ್ತು ಜಗತ್ತಿನ ಪಾಲಿಗೆ ಇದು ಆಶಾದಾಯಕ ಸಂಗತಿಯಾಗಿದೆ.

ಭಾರತದ ಅರ್ಥವ್ಯವಸ್ಥೆಯು ಜನವರಿ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 6.1ರಷ್ಟು ಬೆಳವಣಿಗೆ ಕಂಡಿದೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆಯು  2022-23ನೆಯ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆಯು ಶೇ 7.2ರಷ್ಟು ಅದಂತಾಗಿದೆ. ತನ್ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಜಿ ಡಿ ಪಿ ಇರುವ ದೇಶವಾಗಿದೆ ಹೊರಹೊಮ್ಮಿದೆ.ಇದೇ ವೇಳೆಯಲ್ಲಿ ಬಲಿಷ್ಠ ಆರ್ಥಿಕತೆ ಎಂದೇ ಹೆಸರಾದ ಅಮೆರಿಕ4%, ಚೀನಾ 3%. ಜಿಡಿಪಿ ಬೆಳವಣಿಗೆ ದಾಖಲಿಸಿ ಮೂರನೆ ಸ್ಥಾನಕ್ಕೆ ಕುಸಿದಿದೆ.

ಕೋವಿಡ್ ನಂತರ ಹಲವಾರು ಜಾಗತಿಕ ಸವಾಲುಗಳ ನಡುವೆಯೂ 

2021-22ರಲ್ಲಿ ದೇಶದ ಜಿಡಿಪಿ ಶೇ 9.1ರಷ್ಟು ಬೆಳವಣಿಗೆ ಸಾಧಿಸಿತ್ತು. 

ಕೃಷಿ, ತಯಾರಿಕೆ, ಗಣಿಗಾರಿಕೆ, ಹಾಗೂ  ನಿರ್ಮಾಣ ವಲಯಗಳಲ್ಲಿನ ಉತ್ತಮ ಬೆಳವಣಿಗೆಯು ಒಟ್ಟು ಬೆಳವಣಿಗೆಯು ನಿರೀಕ್ಷೆಗೆ ಮೀರಿದ ಮಟ್ಟವನ್ನು ತಲುಪುವಲ್ಲಿ ಕೊಡುಗೆ ನೀಡಿವೆ.


ಈ ಪ್ರಮಾಣದ ಬೆಳವಣಿಗೆಯ ಪರಿಣಾಮವಾಗಿ ದೇಶದ ವ್ಯವಸ್ಥೆಯ ಗಾತ್ರವು 3.3 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಲ್ಲದೆ, ಇದು ಮುಂದಿನ ಕೆಲವು ವರ್ಷಗಳಲ್ಲಿ ಅರ್ಥ ವ್ಯವಸ್ಥೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್‌ಗೆ ಬೆಳೆಸುವುದಕ್ಕೆ ಭೂಮಿಕೆ ಸಜ್ಜುಮಾಡಿ ಕೊಟ್ಟಂತೆ ಆಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ದೇಶದ ಅರ್ಥ ವ್ಯವಸ್ಥೆಯು ಮಾರ್ಚ್ ತ್ರೈಮಾಸಿಕದಿಂದ ವೇಗವಾಗಿ ಬೆಳವಣಿಗೆ ಮುಖ್ಯ ಅರ್ಥ ಕಾಣುತ್ತಿದೆ ಎಂಬುದನ್ನು ಜಿಡಿಪಿ ಅಂಕಿ- ಅಂಶಗಳು ಹೇಳುತ್ತಿವೆ ಎಂದು ತಜ್ಞರು. ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ .

ಕಚ್ಚಾವಸ್ತುಗಳ ಬೆಲೆ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ತಗ್ಗಿದೆ. ಇದು ಸಹ ಆರ್ಥಿಕ   ಚೇತರಿಕೆಗೆ ಕಾರಣವಾಗಿದೆ.

ಜಿಡಿಪಿಯ ಬೆಳವಣಿಗೆಯ ಜೊತೆಯಲ್ಲಿ ಕೆಲ ಸವಾಲುಗಳನ್ನು ಸಹ ನಾವು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ.  ಹಣದುಬ್ಬರ ನಿಯಂತ್ರಣಕ್ಕೆ ಬರಬೇಕಿದೆ. ಜಿಡಿಪಿಗೆ ಸೇವಾ ವಲಯದಷ್ಟೇ ಕೊಡುಗೆ ಸಲ್ಲಿಸಲು ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ರೈತರ ಆದಾಯವನ್ನು ದ್ಬಿಗುಣಗೊಳಿಸಲು ಕ್ರಮಕೈಗೊಂಡರೆ ಹಾಗೂ ಎಲ್ಲಾ ಮೂರು ವಲಯಗಳ ಆರ್ಥಿಕ ಚಟುವಟಿಕೆಗಳನ್ನು ಇನ್ನೂ ಉತ್ತೇಜನ ನೀಡುವ ಉಪಕ್ರಮಗಳನ್ನು ಜಾರಿಗೆ ತಂದದ್ದೇ ಆದರೆ ಭಾರತವು 5 ಟ್ರಿಲಿಯನ್ ಆರ್ಥಿಕತೆ ಹೊಂದಿದೆ ದೇಶವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

 

ಸ್ಯಾರಿಗೆ ಸಂಸ್ಥೆ.

 


*ಸ್ಯಾರಿಗೆ ಸಂಸ್ಥೆ*


ಮಹಿಳೆಯರಿಗೆ ಉಚಿತವಾಗಿ

ಪ್ರಯಾಣ ಕೈಗೊಳ್ಳಲು 

ಸಿದ್ದತೆ ನಡೆಸಿದೆ  ರಾಜ್ಯ ಸಾರಿಗೆ ಸಂಸ್ಥೆ|

ಪುರುಷರು ಕೈ ಕೈ ಹಿಸುಕಿಕೊಂಡು

ಹೆಸರು ಬದಲಾವಣೆ ಮಾಡಿದ್ದಾರೆ

ಕರ್ನಾಟಕ ಸ್ಯಾರಿಗೆ ಸಂಸ್ಥೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

31 ಮೇ 2023

ಹೃದಯದಲ್ಲಿದೆ.

 



ಹೃದಯದಲ್ಲಿದೆ...


ಈಗೀಗ ಅಲ್ಲಲ್ಲಿ ಯಾವದೋ

ಕಾರಣಕ್ಕಾಗಿ ಬೀದಿಗಳಲ್ಲಿ

ರಕ್ತ ಚೆಲ್ಲುತ್ತಲಿದೆ|

ಎಲ್ಲರೂ ಸೇರಿ ಎಲ್ಲಾ ಕಡೆ

ಹುಡುಕುತ್ತಲೇ ಇರುವರು

ಮಾನವೀಯತೆ ಎಲ್ಲಿದೆ?

ನಿಮ್ಮಂತರಾತ್ಮಗಳ ಪ್ರಶ್ನಿಸಿಕೊಳ್ಳಿ

ಅದು ನಿಮ್ಮ ಹೃದಯದಲ್ಲಿದೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


ಅತ್ತೆಯೂ ತಾಯಿಯೇ..

 



ಅತ್ತೆಯೂ ತಾಯಿಯೇ...

ಇತ್ತೀಚಿನ ದಿನಗಳಲ್ಲಿ  ಸರ್ಕಾರ ಪ್ರತಿ ತಿಂಗಳು ಕೊಡಲು ಉದ್ದೇಶಿರುವ  ಎರಡು ಸಾವಿರ ರೂಪಾಯಿಗಳನ್ನು ಮನೆಯ ಯಜಮಾನಿಗೆ ಕೊಡಲು ತೀರ್ಮಾನ ಮಾಡಿರುವಾಗ ಕೆಲವೆಡೆ ಯಜಮಾನಿ ಅತ್ತೆ ಅಥವಾ ಸೊಸೆಯೇ? ಎಂಬ ವಾದ ಮರುಜೀವ ಪಡೆದಿದೆ. 

ಕೆಲವು ಮನೆಗಳಲ್ಲಿ ಅತ್ತೆ ಸೊಸೆಯರು ತಾಯಿ ಮಗಳ ಸಂಬಂಧ ಹೊಂದಿದ್ದರೆ ಕೆಲ ಮನೆಗಳಲ್ಲಿ ತದ್ವಿರುದ್ಧವಾದ ವಾತಾವರಣ.

ಈ ಅಂಶಗಳನ್ನು ಗಮನಿಸಿದಾಗ ಕಥಾಮೃತ ದ ಒಂದು ಕಥೆ ನೆನಪಾಗುತ್ತದೆ.

ಒಬ್ಬ ತಾಯಿಗೆ ಒಬ್ಬ ಮಗನಿದ್ದ. ತಂದೆ ತೀರಿ ಹೋಗಿದ್ದ. ತಾಯಿಗೆ ಆಗಲೇ ಮುಪ್ಪು ಆವರಿಸಿತ್ತು. ಮಗನ ಮದುವೆಯೂ ಆಗಿತ್ತು. ಹೊಸದಾಗಿ ಸೊಸೆ ಮನೆ ನಡೆಸಲು ಬಂದಿದ್ದಳು. ಸೊಸೆಗೆ ಸ್ವಾತಂತ್ರ್ಯ ಬೇಕಾಗಿ ತಾನೇ ಮನೆಯ ಮಾಲೀಕಳಾಗುವ ಅದಮ್ಯ ಬಯಕೆ ಅವಳಿಗಿತ್ತು. ಆದರೆ ಮನೆಯಲ್ಲಿ ಅತ್ತೆ ಇರುವವರೆಗೆ ಅದು ಸಾಧ್ಯವಿರಲಿಲ್ಲ.

ಒಂದು ದಿನ ಸತಿಯು ಪತಿಗೆ ಹೇಳಿದಳು-''ನಮ್ಮದು ಸಣ್ಣ ವಯಸ್ಸು, ನಾವು ಈ ಮನೆಯಲ್ಲಿ ಸಂತಸದಿಂದ ಜೀವನ ಸಾಗಿಸಬೇಕು. ಅದಕ್ಕೆ ನಮಗೆ ಸ್ವಾತಂತ್ರ್ಯ ಬೇಕು. ನಿಮ್ಮ ತಾಯಿ ಈ ಮನೆಯಲ್ಲಿ ಇರುವವರೆಗೆ ಸಂತಸದ ಜೀವನ ನಡೆಸುವುದು ಸಾಧ್ಯವಿಲ್ಲ. ಎಲ್ಲಿಯಾದರೂ ದೂರ ಹೋಗಿ ತಿರುಗಿ ಬಾರದಂತೆ ನಿಮ್ಮ ತಾಯಿಯನ್ನು ಬಿಟ್ಟು ಬಾ,'' ಎಂದಳು. ''ಸ್ವಾತಂತ್ರ್ಯ ಇಲ್ಲದೆ ಸಂತಸ ಇಲ್ಲ,'' ಎಂಬ ಸತಿಯ ಮಾತು ಪತಿಗೂ ಒಪ್ಪಿಗೆಯಾಯಿತು. ಪತ್ನಿ ಹೇಳಿದ್ದೇ ವೇದವಾಕ್ಯವೆಂದು ಭಾವಿಸಿದ ಪತಿ ಮರುದಿನವೇ ತಾಯಿಯನ್ನು ಊರ ಆಚೆಗೆ ಇರುವ ಅರಣ್ಯಕ್ಕೆ ಕರೆದುಕೊಂಡು ಹೋದ. ಮೊದಲೇ ಅವಳಿಗಾಗಿ ಅಲ್ಲಿ ನಿರ್ಮಿಸಲಾಗಿದ್ದ ಒಂದು ಗುಡಿಸಲಲ್ಲಿ ಬಿಟ್ಟು ಹೇಳಿದ- ''ತಾಯಿಯೇ, ನಿನಗೂ ನನ್ನ ಸತಿಗೂ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ ನಮ್ಮ ಸಂತಸದ ಜೀವನಕ್ಕೆ ಅವಕಾಶ ಸಿಗುತ್ತಿಲ್ಲ. ನೀನು ಇಲ್ಲಿಯೇ ಸುಖವಾಗಿರು. ನಿನಗೆ ಜೀವನೋಪಾಯಕ್ಕೆ ಬೇಕಾಗುವುದನ್ನೆಲ್ಲ ಇಲ್ಲಿಯೇ ತಂದು ಕೊಡುತ್ತೇನೆ,'' ಅದು ಕ್ರೂರ ಮೃಗಗಳಿಂದ ತುಂಬಿದ ಅರಣ್ಯವಾಗಿತ್ತು. ಅಲ್ಲಿ ಎಂಥವರಿಗೂ ಇರುವುದು ಅಸಾಧ್ಯವಾಗಿತ್ತು. ಆದರೆ ಮಗನ ಸುಖದ ಮುಂದೆ ಯಾವ ತೊಂದರೆಯೂ ಲೆಕ್ಕಕ್ಕಿಲ್ಲ ಎಂದು ಭಾವಿಸಿದ ತಾಯಿ ಅಲ್ಲಿಯೇ ಗುಡಿಸಲಿನಲ್ಲಿ ವಾಸಿಸಲು ಒಪ್ಪಿದಳು. ತಾಯಿಯನ್ನು ಬಿಟ್ಟು ಮಗನು ಮನೆಗೆ ಹೊರಟು ನಿಂತ. ತಾಯಿ ತನ್ನ ಕೊರಳಲ್ಲಿದ್ದ ಒಂದು ಆಭರಣವನ್ನು ಕೊಡುತ್ತ ಮಗನಿಗೆ ಹೇಳಿದಳು, ''ಇದು ನಿನ್ನ ತಂದೆ ನನಗೆ ಕೊಟ್ಟ ಅತ್ಯಂತ ಪ್ರೀತಿಯ ಕಾಣಿಕೆ. ಇದನ್ನು ನನ್ನ ಪ್ರಾಣದಂತೆ ಇದುವರೆಗೆ ಕಾಪಾಡಿರುವೆ. ಇನ್ನು ಮುಂದೆಯೂ ಕಾಪಾಡಬೇಕೆಂಬುಂದು ನಿನ್ನ ಸತಿಗೆ ನನ್ನ ಕೊನೆಯ ಹರಕೆ. ನೀವಿಬ್ಬರೂ ಸುಖವಾಗಿರಿ,'' 


ಮಗನು ಅರಣ್ಯದಿಂದ ಮನೆಗೆ ವಾಪಸ್‌ ಬಂದ. ಅವನ ಸತಿಗೆ ಅಪಾರ ಸಂತಸ. ನಾವಿನ್ನು ಸ್ವಚ್ಛಂದವಾಗಿರಬಹುದು ಎಂದುಕೊಂಡಳು. ತಾಯಿ ಕೊಟ್ಟ ಆಭರಣವನ್ನು ಸತಿಗೆ ಕೊಡುತ್ತ ಪತಿಯು ಹೇಳಿದ-''ಇದು ನಿನಗೆ ನನ್ನ ತಾಯಿಯ ಕೊನೆಯ ಹರಕೆ,'' ಅದನ್ನು ಕೇಳುತ್ತಲೇ ಅವಳ ಹೃದಯ ಪರಿವರ್ತನೆಯಾಯಿತು ! ''ನಾನೆಂಥ ಕ್ರೂರಿ, ಕರುಣೆ ಇಲ್ಲದವಳು. ಅತ್ತೆಯವರು ಎಂಥ ದಯಾಮಯಿ !,'' ಇಂಥ ಸದ್ಗುಣದ ಅತ್ತೆಯನ್ನು ಹೊರಗೆ ಹಾಕಿದುದು ಅಪರಾಧವೆನಿಸಿತು ಅವಳಿಗೆ. ಮನಪರಿವರ್ತನೆ ಆಗಿದ್ದೇ ತಡ ಮಧ್ಯರಾತ್ರಿಯನ್ನೂ ಗಮನಿಸದೆ ಅತ್ತೆಯನ್ನು ಮನಗೆ ವಾಪಸ್‌ ಕರೆತರಲು ಪತಿಯೊಂದಿಗೆ ಅರಣ್ಯಕ್ಕೆ ಹೋದಳು. 

ಅಷ್ಟರಲ್ಲಿ ಅತ್ತೆಯು ಹಾವು ಕಚ್ಚಿ ಮೃತ್ಯುವಿನ ಬಾಯಿಗೆ ತುತ್ತಾಗಿದ್ದಳು. ಆದರೆ ಆ ತಾಯಿಯ ಮೊಗದಲ್ಲಿ ದಿವ್ಯ ಪ್ರಸನ್ನತೆ ನೆಲೆಸಿತ್ತು! ಆ ಕಾರುಣ್ಯಮಹಿ ಸಾವಿನಲ್ಲೂ ಧೀಮಂತಿಕೆ ಮರೆದಿದ್ದಳು. ಅದನ್ನು ಕಂಡು ಸೊಸೆ ಕರುಳು ಚುಚ್ಚಿದಂತಾಯ್ತು. ತನ್ನ ಸಣ್ಣತನವನ್ನು ನೆನೆದು ಆಕೆ ರೋಧಿಸಿದಳು. ದೈವ ಕಣ್ಣ ಮುಂದಿದ್ದರೂ ಅದನ್ನು ಕಾಣದೆ ಹೋದೆನ್ನಲ್ಲ ಎಂದು ಆಕೆ ಕಣ್ಣೀರು ಹಾಕಿದಳು. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಜನರ ಸೇವೆಯೇ ಜನಾರ್ಧನ ಸೇವೆ...

 



ಜನರ ಸೇವೆಯೇ ಜನಾರ್ದನ ಸೇವೆ..



ನಮ್ಮಲ್ಲಿ ಬಹಳ ಜನ ಆಡಂಬರದ ಭಕ್ತಿ ಪ್ರದರ್ಶನ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವರು.

ದೇವಾಲಯ ಸೇರಿ ಧಾರ್ಮಿಕ ಕೇಂದ್ರಗಳಿಗೆ ಸಣ್ಣ ದೇಣಿಗೆ ನೀಡಿ ದೊಡ್ಡ ಅಕ್ಷರಗಳಲ್ಲಿ ಹೆಸರು ಕರೆಸಿಕೊಳ್ಳುವ ಮಾಹಾನ್ ಭಕ್ತರನ್ನು ಕಾಣುತ್ತೇವೆ. ನಿಜಕ್ಕೂ ದೇವರು ಇಂತಹ ಆಡಂಬರದ ಭಕ್ತಿ ಮೆಚ್ಚಲಾರ. ಅದಕ್ಕೆ ಈ ಘಟನೆಯನ್ನು ಉದಾಹರಣೆ ನೀಡಬಹುದು.

ಒಬ್ಬ ಶ್ರೀಮಂತ ತನ್ನ ತೋಟದಲ್ಲಿ ಬೆಳೆದಿದ್ದ ಒಂದು ಬಾಳೆಯ ಗೊನೆಯನ್ನು ತನ್ನ ತೋಟದಲ್ಲಿ ಕೆಲಸ ಮಾಡುವವನ ಕೈಯಲ್ಲಿ ಕೊಟ್ಟು  ಇದನ್ನು ದೇವಸ್ಥಾನದಲ್ಲಿ ಕೊಟ್ಟು ಬಾ ಎಂದು ಹೇಳಿ ಕಳಿಸಿದನು.

ಆ ಕೆಲಸದವ ಹಸಿವಾಗಿ ಎರಡು ಹಣ್ಣನ್ನ ಬರುವ ದಾರಿಯಲ್ಲಿ ತಿಂದು ಬಿಡುತ್ತಾನೆ ಮಿಕ್ಕಿದ್ದನ್ನ ದೇವಸ್ಥಾನದಲ್ಲಿ ಕೊಟ್ಟು ಮನೆಗೆ ಹಿಂತಿರುಗುತ್ತಾನೆ.

ಅಂದು ರಾತ್ರಿ ದೇವರು ಆ ಶ್ರೀಮಂತನ ಕನಸಲ್ಲಿ ಬಂದು ನೀನು ಕಳುಹಿಸಿದ ಎರಡು ಹಣ್ಣನ್ನ ನಾನು ತಿಂದೆ ತುಂಬಾ ಚೆನ್ನಾಗಿತ್ತು ಎಂದು ಹೇಳಿ ಆ ದೇವರು ಮರೆಯಾಗಿ ಬಿಟ್ಟರು.

ದೇವರ ಮಾತು ಕೇಳಿ ಆ ಶ್ರೀಮಂತ ಕೋಪ ಗೊಂಡ.ನಾನು ಒಂದು ಗೊನೆ ಹಣ್ಣನಲ್ಲವ ದೇವರಿಗೆ ಕಳುಹಿಸಿದ್ದು ಮತ್ತೆ ದೇವರು ಯಾಕೆ ಎರಡು ಹಣ್ಣನ್ನ ಮಾತ್ರ ತಿಂದೆ ಎಂದರು ಎಂದು.

ಕೋಪದಲ್ಲಿ ಆ ಕೆಲಸದವನನ್ನ ವಿಚಾರಿಸಿದರು ಆಗ ಕೆಲಸದವನು ವಿವರಿಸಿದ ದಾರಿಯಲ್ಲಿ ಹಸಿವಾಗಿ ಎರಡು ಹಣ್ಣನ್ನ ನಾನೇ ಬುದ್ದಿ ತಿಂದಿದ್ದು ನನ್ನನ್ನ ಕ್ಷಮಿಸಿ ಎಂದು ಕೇಳಿಕೊಂಡನು.

ಆಗ ಆ ಶ್ರೀಮಂತನಿಗೆ ಅರ್ಥವಾಯಿತು ಕೆಲಸದವನು ತಿಂದ ಎರಡು ಹಣ್ಣು ಮಾತ್ರ ದೇವರಿಗೆ ಹೋಗಿ ಸೇರಿದೆ ಎಂದು. ಅಂದು ಒಂದು ವಿಷಯ ಅರ್ಥವಾಯಿತು ಆ ಶ್ರೀಮಂತನಿಗೆ 

ಒಬ್ಬ ಬಡವ ತಿಂದರೆ ಭಗವಂತ ತಿಂದಹಾಗೆ ಎಂದು. ಇದನ್ನೇ ಹಿರಿಯರು ಹೇಳಿದ್ದು  ಮಾನವನ ಸೇವೆಯೇ ಮಾಧವನ ಸೇವೆ  ಜನತಾ ಸೇವೆಯೇ ಜನಾರ್ದನ ಸೇವೆ ಎಂದು!

ಇನ್ನು ಮುಂದಾದರೂ ಅತ್ಮವಿರುವ ಪ್ರತಿಯೊಬ್ಬರ ಸೇವೆ ಮಾಡುತ್ತಾ ಪರಮಾತ್ಮನ ಸೇರಲು ಪ್ರಯತ್ನಿಸೋಣ...


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.