27 ಮೇ 2023

ಮೊಬೈಲ್ ಅವಶ್ಕಕ , ಅನಿವಾರ್ಯವಲ್ಲ..

 



ಈ ವಾರದಲ್ಲಿ ಮೊಬೈಲ್ ಹೊರಗಿನ ಪ್ರಪಂಚದ ಅರಿವು ನನಗೆ ಎರಡು ಬಾರಿಯಾಯಿತು.ಒಮ್ಮೆ ಚಿಕ್ಕಮಗಳೂರು ಸಮೀಪದ ಝರಿ ಇಕೋ ಸ್ಟೇ ನಲ್ಲಿ ವಾಸ್ತವ್ಯದಲ್ಲಿ ಮೊಬೈಲ್ ಇದ್ದರೂ ಯಾವುದೇ ನೆಟ್ವರ್ಕ್ ಇರಲಿಲ್ಲ ಮೊಬೈಲ್ ಆ ಕಡೆ ಬಿಸಾಡಿ ಸುಮ್ಮನೆ ಪ್ರಕೃತಿ ಸೌಂದರ್ಯವ ಸವಿಯುತ ಆತ್ಮೀಯರೊಂದಿದೆ ,ಮರ,ಗಿಡ, ಝರಿ, ಜಿಗಣೆ,  ಕಾನನ, ಕೀಟಗಳ ನಡುವೆ ಕಾಲ ಸರಿದದ್ದೇ ತಿಳಿಯಲಿಲ್ಲ.

ಎರಡನೆ ಬಾರಿಗೆ ನಾಲ್ಕು ದಿನ  ನನ್ನ ಹುಟ್ಟೂರಿನ ನಮ್ಮ ಅಡಿಕೆ ತೋಟಕ್ಕೆ ಮಣ್ಣು ಹೊಡೆಸುವ ಕಾರ್ಯದಲ್ಲಿ ತೊಡಗಿದಾಗ ಕೆಲಸದ ನಡುವೆ ಮೊಬೈಲ್ ಕಡೆ ಗಮನವೇ ಹೋಗಲಿಲ್ಲ .ಕಾಯಕವೇ ಕೈಲಾಸ... 


ಮೊಬೈಲ್ ಅವಶ್ಯಕ ,ಆದರೆ ಅನಿವಾರ್ಯವಲ್ಲ ಮೊಬೈಲ್ ಬಳಕೆ  ವ್ಯಸನವಾಗದಂತೆ , ಕಾಲಹರಣ ಸಾಧನವಾಗದಂತೆ  ನೋಡಿಕೊಳ್ಳುವುದು ನಮ್ಮ ಕೈಯಲ್ಲಿದೆ ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಲಿ...



24 ಮೇ 2023

ಬೇಸಿಗೆ ರಜೆಯಲ್ಲಿ ಪ್ರವಾಸ...

 

ರಜಾ ಮಜ

ಬೇಸಿಗೆ ರಜೆಯಲ್ಲಿ..ಕುಟುಂಬ ಸದಸ್ಯರೊಂದಿಗೆ  ಧರ್ಮಸ್ಥಳ ಮತ್ತು ಕುಕ್ಕೆಗೆ ಭೇಟಿ ನೀಡಿದ ವಾರದ ಅಂತರದಲ್ಲಿ   ಆತ್ಮೀಯರಾದ  ಕೋಟೆ ಕುಮಾರ್ ,ರಂಗಸ್ವಾಮಯ್ಯ ಮತ್ತು ದಯಾನಂದ್ ರವರ ಜೊತೆಯಲ್ಲಿ ಹಿರೇಮಗಳೂರು, ಚಿಕ್ಕಮಗಳೂರು, ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ, ದತ್ತಪೀಠ ದರ್ಶನ ಮಾಡಿದೆವು.ಎಂದಿನಂತೆ  ಪ್ರಕೃತಿ ನಮ್ಮನ್ನು ಮಂತ್ರಮುಗ್ದಗೊಳಿಸಿತು.


ಮೊದಲ ಬಾರಿಗೆ ಝರಿ ಇಕೋ ಸ್ಟೇ ನಲ್ಲಿ ವಾಸ್ತವ್ಯ ಮತ್ತು ಪರಿಸರದೊಂದಿಗೆ ಊಟ  ಆಟ, ಟ್ರಕ್ಕಿಂಗ್, ರೋಪ್ ಆಕ್ಟಿವಿಟಿ , ಜಲಪಾತದ ಸ್ನಾನ ಮರೆಯಲಾರದ ಅನುಭವ ನೀಡಿದವು. ಅಂದ ಹಾಗೆ ಮೊದಲಬಾರಿಗೆ ನಾನೇ  ಚಾರ್ಮಾಡಿ ಘಾಟ್, ಶಿರಾಡಿ ಘಾಟ್, ಮತ್ತು ದತ್ತ ಪೀಠ, ಮುಳ್ಳಯ್ಯನ ಗಿರಿ  ಈ ದುರ್ಗಮ ಹಾದಿಯಲ್ಲಿ ಸಾವಿರಾರು ಕಿಲೋಮೀಟರ್ ಕಾರ್‌ ಡ್ರೈವ್ ಮಾಡಿದ ಖುಷಿ ನನ್ನದು .

ನುಡಿಸಂಭ್ರಮ....

 




*ನುಡಿತೋರಣ ಕಟ್ಟುತ್ತಿರುವ ಕವಿಮನಗಳು...* 


ಸಮಾನ ಮನಸ್ಕರು , ಸಹೃದಯಿಗಳು, ಕನ್ನಡದ ಬಗ್ಗೆ ಅಭಿಮಾನ ಇರುವ ಕವಿಮನಗಳು ಕೂಡಿದ ಬಳಗವೇ "ನುಡಿತೋರಣ" 

ನುಡಿತೋರಣ ಚೊಚ್ಚಲ ವಾರ್ಷಿಕ ನುಡಿ ಸಂಭ್ರಮವನ್ನು ಆಚರಿಸಲಿದೆ . ಇದೇ ತಿಂಗಳ 27 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆವ ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ನೂರಾರು ಕವಿಮನಗಳು ಬರಲು ಸಿದ್ದತೆ ಮಾಡಿಕೊಳ್ಳುತ್ತಲಿವೆ. 


ಕನ್ನಡ ನಾಡು, ನುಡಿ , ಸಂಸ್ಕೃತಿಗಳನ್ನು  ಉಳಿಸಿ ಬೆಳೆಸುವ ಉದ್ದೇಶದಿಂದ ಆರಂಭವಾದ ವಾಟ್ಸಪ್ ಬಳಗ ಇಂದು ಎಲ್ಲರ ಮನಗೆದ್ದಿದೆ.

ಈ ಬಳಗದಲ್ಲಿ  ಸಾಹಿತ್ಯ, ಸಂಗೀತ, ನಾಟ್ಯ, ಸಮಾಜಸೇವೆ ಇತ್ಯಾದಿ ಎಲ್ಲಾ ರಂಗದ ಹಿರಿಯರಿದ್ದಾರೆ. ಯುವಕರಿದ್ದಾರೆ, ವಿದ್ಯಾರ್ಥಿಗಳು ಸಹ ಇರುವರು .  ಹಿರಿಯರು ಉದಯೋನ್ಮುಖ ಬರಹಗಾರರ ತಿದ್ದುವ ಪರಿ ಚೆನ್ನ ನಿಯತಕಾಲಿಕ ಅಂಕಣ ಬರಹಗಳು ನನ್ನ ಬಹಳ ಸೆಳೆದಿವೆ. ಈ ಬಳಗಲ್ಲಿ  ಕವನ ,ಗಜಲ್, ಹಾಸ್ಯ,  ಕಥೆಗಳು ಹನಿಗವನಗಳು ಪ್ರತಿದಿನ ಓದುಗರಿಗೆ ಲಭ್ಯ.ಈ ಎಲ್ಲಾ ಸಾಹಿತ್ಯದ ಪ್ರಕಾರಗಳು  ಗುಣಮಟ್ಟದಿಂದ ಕೂಡಿವೆ .  


ಈ ಬಳಗದ ಸದಸ್ಯನಾಗಿ ನಾನು ಗಮನಿಸಿದ ಮತ್ತೊಂದು ಅಂಶವೆಂದರೆ 

ಇತರೆ ಗುಂಪುಗಳು ಕೇವಲ ಶುಭಾಶಯ ಕೋರಲು ಶುಭ ದಿನ ಶುಭರಾತ್ರಿ ಮತ್ತು ಕೆಲವು ಅನಾವಶ್ಯಕ ಅಂಚೆಗಳ ಕಳಿಸಿ ಕಿರಿಕಿರಿ ಮಾಡುವುದರ ಮೂಲಕ ಕಾಲಹರಣದ ತಾಣಗಳಾಗಿವೆ ಆದರೆ  ಇಲ್ಲಿ  ಕಿರಣ್ ಹಿರಿಸಾವೆ, ಶ್ರೀಕಾಂತ್ ಪತ್ರೇಮರ ಮುಂತಾದ ಹಿರಿಯರನ್ನೊಳಗೊಂಡ    ಸಂಚಾಲನ ಸಮಿತಿಯ ನೇತೃತ್ವದಲ್ಲಿ  ಕಾರ್ಯನಿರ್ವಹಿಸುವ  ಈ ಗುಂಪಿನಲ್ಲಿ ತಪ್ಪು ಮಾಡಿದವರಿಗೆ ತಿದ್ದಿ ಹೇಳಿ ಕುಟುಂಬದ ಸದಸ್ಯರಂತೆ  ಕಾಣುವ  ಮತ್ತು ಉತ್ತಮ ಬರವಣಿಗೆಗೆ ಮೆಚ್ಚುಗೆ ಸೂಚಿಸುವ ಅವರ ಗುಣ ನನಗೆ ಬಹಳ ಇಷ್ಟ.

 ಗುಂಪಿನ ಎಲ್ಲ ಸದಸ್ಯರು ಉತ್ತಮ ಭಾವನೆ ಹೊಂದಿ ಪರಸ್ಪರ ಗೌರವಿಸುವ  ಪ್ರೋತ್ಸಾಹ ಮಾಡುವ ಗುಣ ಬೆಳೆಸಿಕೊಂಡು ಉತ್ತಮ ಬಾಂಧವ್ಯ  ಬೆಸೆದು ಕೊಂಡಿದ್ದೇವೆ .


ಈ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯುವ ನುಡಿಸಂಭ್ರಮಕ್ಕೆ ತಿಂಗಳಿನಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.ಕವಿಮನಗಳಿಗೆ ಚುಟುಕು, ಲೇಖನ, ಕವನ, ನ್ಯಾನೋಕಥೆ ರಚನಾ ಸ್ಪರ್ಧೆಗಳನ್ನು  ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.  

ಅಂದಿನ ಕಾರ್ಯಕ್ರಮದಲ್ಲಿ 

ಬೆಳಗಿನ ಅವದಿಯಲ್ಲಿ

ಉದ್ಘಾಟನೆಯ ನಂತರ  ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ.

ಶ್ರೀ. ತ.ನಾ. ಶಿವಕುಮಾರ್ ಅವರ

"ಕಂದನ ಪದಗಳು" ಹಾಗೂ

 ಶ್ರೀಮತಿ ಸಿ ಬಿ ಶೈಲಾ  ಜಯಕುಮಾರ್ ಅವರ

ಪುರಾಣ ಪ್ರಮಾಣ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ . 

ನಂತರ ನುಡಿತೋರಣ ಬಳಗದ ಅಂಕಣಕಾರರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಇರುವುದು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಇಪ್ಪತ್ತಕ್ಕೂ ಹೆಚ್ಚು ಕವಿಮನಗಳು ತಮ್ಮ ಕವಿತೆ ವಾಚಿಸಲಿದ್ದಾರೆ.

ಕನ್ನಡ ನಾಡು ನುಡಿಯ ಸುತ್ತ ಕೇಂದ್ರೀತವಾದ ಈ ಸಂಭ್ರಮದಲ್ಲಿ ನಾವೆಲ್ಲರೂ ಸಡಗರದಿಂದ ಪಾಲ್ಗೊಳ್ಳಲು ಕಾತರರಾಗಿರುವೆವು ನೀವೂ ಬನ್ನಿ ನಿಮ್ಮವರನ್ನು ಕರೆತನ್ನಿ...


ನಿಮ್ಮ...

*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

  

*

15 ಮೇ 2023

ವಿಶ್ವಗುರು ಭಾರತ...

 





ಭಾರತ ದೇಶವು ವಿಶ್ವಗುರುವಾಗಲು ಯತ್ನಿಸುತ್ತಿರುವ ಇಂದಿನ ಪರ್ವಕಾಲದಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆ .


ಅನಾದಿ ಕಾಲದಿಂದಲೂ ನಮ್ಮ ದೇಶವು ಇತರೆ ದೇಶಗಳಿಗೆ ಕಲೆ, ಸಂಸ್ಕೃತಿ, ಸಂಸ್ಕಾರ, ಶಿಕ್ಷಣ, ಮೌಲ್ಯ ಮುಂತಾದ ವಿಷಯಗಳಲ್ಲಿ ಮಾದರಿಯಾಗಿ ನಿಂತಿದೆ. ವಿದೇಶಿ ವಿದ್ವಾಂಸರು, ಕವಿಗಳು, ದಾರ್ಶನಿಕರು ನಮ್ಮ ದೇಶದ ಹಿರಿಮೆ ಗರಿಮೆ ಕಂಡು ಮುಕ್ತ ಕಂಠದಿಂದ ಹಾಡಿ ಹೊಗಳಿದರು. ಅಮೃತ ಆತ್ಮರು ಅಮೃತ ಪುತ್ರರಾದ ನಮ್ಮನ್ನು ಬ್ರಿಟೀಷರು  ನಮ್ಮ ಅಮೂಲ್ಯವಾದ ಶಿಕ್ಷಣ ಪದ್ದತಿ, ನಮ್ಮ ಸಂಪ್ರದಾಯ ,ಸಂಸ್ಕೃತಿಗಳ ನಾಶ ಮಾಡುತ್ತಾ ನಮ್ಮ ಬಗ್ಗೆ ಅವಹೇಳನ ಮಾಡುತ್ತಾ ನಮ್ಮನ್ನು ಕೀಳಾಗಿ ಕಂಡು ಪಾಶ್ಚಾತ್ಯ ದೇಶಗಳ ಸಂಸ್ಕೃತಿ ಹೆಚ್ಚು ಎಂದು ತೋರಿಸುವ ನಾಟಕವಾಡಿದರು. ಚಿನ್ನ ಎಂದಿದ್ದರೂ ಚಿನ್ನವೇ ಪಾಶ್ಚಿಮಾತ್ಯರು ತಮ್ಮ ಆಳ್ವಿಕೆಯನ್ನು ಅಂತ್ಯ ಮಾಡಿ ಅವರ ದೇಶಕ್ಕೆ ತೆರಳಿದ ಮೇಲೆ ಕ್ರಮೇಣವಾಗಿ ನಮ್ಮತನ ಬೆಳಕಿಗೆ ಬಂದು ಈಗ ಭಾರತವು ಪುನಃ ವಿಶ್ವ ಗುರುವಿನ ಸ್ಥಾನ ಅಲಂಕರಿಸಲು ಸಿದ್ದವಾಗಿದೆ. 

ದೇಶದ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ, ಆರೋಗ್ಯ, ಜೀವನಮಟ್ಟ , ತಲಾಆದಾಯ , ಜಿಡಿಪಿ , ಹ್ಯಾಪಿನೆಸ್ ಇಂಡೆಕ್ಸ್  ಮುಂತಾದ ಅಂಶಗಳು  ಯಾವುದೇ ದೇಶದ ಔನ್ನತ್ಯ ಸೂಚಿಸುವ ಅಂಶಗಳೆಂದು ಎಲ್ಲರೂ ಒಪ್ಪುತ್ತಾರೆ. ಅದರ ಜೊತೆಯಲ್ಲಿ ಸಾಹಿತ್ಯ ಸಂಸ್ಕೃತಿಗಳು ಸಹ ದೇಶವು ವಿಶ್ವಗುರುವಾಗಲು ನಿರ್ಧಾರಕ ಅಂಶಗಳು ಎಂದರೆ ತಪ್ಪಾಗಲಾರದು.

ವೇದಗಳ ಕಾಲದಿಂದಲೂ 

ನಮ್ಮ ದೇಶದ ಹಲವಾರು ಭಾಷೆಗಳಲ್ಲಿ ಉತ್ಕೃಷ್ಟ ಸಾಹಿತ್ಯ ರಚನೆಯಾಗಿರುವುದು ನಮ್ಮ ದೇಶದ ಹಿರಿಮೆಯನ್ನು ಸೂಚಿಸುತ್ತದೆ. ರವೀಂದ್ರನಾಥ ಟ್ಯಾಗೋರ್ ರವರಂಥವರು ಸಾಹಿತ್ಯಕ್ಕೆ ನೋಬಲ್ ತಂದುಕೊಟ್ಟಾಗ ವಿಶ್ವ ಮತ್ತೊಮ್ಮೆ ನಮ್ಮತ್ತ ನೋಡಿತು. ಆಧುನಿಕ ಕಾಲದಲ್ಲೂ ಹಲವಾರು ಕವಿಗಳು ಲೇಖಕರು ನಮ್ಮ ದೇಶದ ಜನಜೀವನವನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಡುತ್ತಿದ್ದಾರೆ. 

ಒಂದು ಕಾಲದಲ್ಲಿ ಪಾಶ್ಚಿಮಾತ್ಯರಿಗೆ ಭಾರತವೆಂದರೆ ಹಾವಾಡಿಗರ , ಬುದ್ಧಿರಹಿತ ಜನ ಎಂಬ ಭಾವನೆಗಳನ್ನು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ವಿದ್ವತ್ಪೂರ್ಣ ಭಾಷಣ ಮತ್ತು ಪುಸ್ತಕಗಳಿಂದ ಹೋಗಲಾಡಿಸಿ ಭಾರತೀಯರು ಅಮರ ಆತ್ಮರು  ಅಮೃತ ಪುತ್ರರು ಎಂದು ಸಾರಿದರು. 

ಸಾಹಿತ್ಯದ ಮೂಲಕ ಕಥೆ, ಕವನ, ಕಾದಂಬರಿಗಳ ರೂಪದಲ್ಲಿ ಸಾಹಿತಿಗಳು ನಮ್ಮ ನೆಲ ,ಜಲ , ಸಂಸ್ಕೃತಿ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ವಿಶ್ವವನ್ನು ತಲುಪಿ ನಮ್ಮ ದೇಶದ ಬಗ್ಗೆ ಹೆಮ್ಮೆಯ ಭಾವನೆ ಮೂಡುತ್ತದೆ. ಈ ಮೂಲಕ ಭಾರತವು ವಿಶ್ವಗುರುವಾಗಲು ಸಾಹಿತ್ಯವೂ ತನ್ನದೇ ಆದ ಯೋಗದಾನ ನೀಡುತ್ತದೆ ಎಂದು ಹೇಳಬಹುದು.



ಸಿ ಜಿ ವೆಂಕಟೇಶ್ವರ

ತುಮಕೂರು.


14 ಮೇ 2023

ದಯಮಾಡಿಸು...ಕವನ..

 



*ದಯಮಾಡಿಸು..*


ಅಕ್ಷರ ವಿಸ್ತಾರ ಕವನ..1 ರಿಂದ 16 ಅಕ್ಷರ..

16 ಸಾಲು...



ನೀ

ಬಾರೋ

ವರುಣ 

ಕಾದಿಹೆವು

ಕಾತುರದಿಂದ 

ನಿನ್ನಾಗಮನಕೆ 

ತಡವೇಕೆ ಇನ್ನೂ ಬಾ

ಭುವಿಗೆ ಹರುಷವ ತಾ 

ನಿನ್ನಾಗಮನವೇ ಹಬ್ಬವು

ನಿನ್ನಿಂದಲೇ ಉಳಿವುದೀ ಜಗ 

ಹಿತಮಿತವಾಗಿ ದಯಮಾಡಿಸು 

ಶತವಂದನೆಯ ಮಾಡುವೆನು ನಾನು

ಅತಿಮಾಡುತ ತೊಂದರೆಯ   ಕೊಡದಿರು 

ರೌದ್ರರೂಪ ತಾಳುತಲಿ  ಹೆದರಿಸದಿರು 

ನೀನೇ ನಮ್ಮಯ  ದೈವವು ನೀನೇ ನಮ್ಮ ಜೀವವು 

ಸಕಾಲಕೆ ನೀನು ಬಂದರೆ  ಜೀವನ ಪಾವನವು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.