21 ಜನವರಿ 2023

ಕರುವ್ಗಲ್ಲು...


 

ಪುಸ್ತಕ  ವಿಮರ್ಶೆ...
ಕುರುವ್ಗಲ್ಲು...

ಹಾಲ್ಪ್ ಸರ್ಕಲ್ ಕ್ಲಬ್  ಹೌಸ್ ಕಾರ್ಯಕ್ರಮದಲ್ಲಿ ಡಾ ಮಾರುತಿ ಎನ್ ಎನ್ ರವರ "ದ್ಯಾಮವ್ವನ ಮಗ" ಕಥೆ ಕೇಳಿ ಅವರ ಪರಿಚಯ ಮಾಡಿಕೊಂಡು ಕುರುವ್ಗಲ್ಲು ಪುಸ್ತಕ ತಂದು ಓದಿದೆ.

ಸಪ್ನಾ ಬುಕ್ ಹೌಸ್ ನವರು ಪ್ರಕಟಿಸಿದ ಕುರುವ್ಗಲ್ಲು ವಿಭಿನ್ನವಾದ ಶೀರ್ಷಿಕೆಯಿಂದ ಗಮನಸೆಳೆವ  ಕಥಾಸಂಕಲನ. ಈ ಪುಸ್ತಕವು ಓದುಗರನ್ನು ಸೆಳೆಯುವಲ್ಲಿ ಸಫಲವಾಗಿದೆ  ಎಂದು ಹೇಳಬಹುದು.ಇಲ್ಲಿ ಗ್ರಾಮೀಣ ಸಮಾಜದ ಚಿತ್ರಣವಿದೆ. ನಗರದ ಸಂಕೀರ್ಣವಾದ ಬದುಕಿನ ನೋಟವಿದೆ.  ಶತಮಾನಗಳಿಂದ ಅಳಿಯದೇ ಈಗಲೂ ಸಮಾಜದಲ್ಲಿ ಅಲ್ಲಲ್ಲಿ ಕಾಡುವ ಸಾಮಾಜಿಕ ಸಮಸ್ಯೆಗಳ  ಮೇಲೆ ಬೆಳಕು ಚೆಲ್ಲುವ ನೋವಿನ ಕಥೆಯಿದೆ.

ಡಾ. ಮಾರುತಿ ಎನ್.ಎನ್ ರವರು ಹುಟ್ಟಿದ್ದು, ಬೆಳೆದಿದ್ದು ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿ, ಪದವಿ ಪೂರ್ವ ಶಿಕ್ಷಣಕ್ಕೆಂದು ತುಮಕೂರು ನಗರಕ್ಕೆ ಬಂದವರು ಇಪ್ಪತ್ತೆರಡು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಉನ್ನತ ಶಿಕ್ಷಣವನ್ನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪಡೆದ ಇವರು ರಸಾಯನಶಾಸ್ತ್ರದಲ್ಲಿ, ಮನೋವಿಜ್ಞಾನದಲ್ಲಿ, ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕ್ಷಣದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ ಇವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರವೂ ಲಭಿಸಿದೆ. ಮನೋವಿಜ್ಞಾನದ ವಿಷಯದಲ್ಲಿ ಸಂಶೋಧನೆಯಲ್ಲೂ ತೊಡಗಿಕೊಡಿದ್ದಾರೆ.  ಪ್ರಸ್ತುತ ಪ್ರತಿಷ್ಠಿತ ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಹೊಂದಿರುವ,
ಶೈಕ್ಷಣಿಕ ಮನೋವಿಜ್ಞಾನ ಮತ್ತು ಶೈಕ್ಷಣಿಕ ತಂತ್ರಶಾಸ್ತ್ರದಲ್ಲಿ ಹೆಚ್ಚಿನ ಒಲವಿರುವ ಇವರು ನೂರಾರು ವಿಚಾರ ಸಂಕಿರಣ, ಪುನಶ್ವೇತನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಪ್ರಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿದ್ದಾಗ ಶ್ರೀಯುತರು ಅನೇಕ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಗಳನ್ನು ಸಂಘಟಿಸಿರುತ್ತಾರೆ.

ಹೊಸದನ್ನು ಕಲಿಯಬೇಕು, ಇತರರಿಗೆ ಕಲಿಸಬೇಕು ಎಂಬ ಮಹದಾಸೆಯಿಂದ ಪ್ರತಿದಿನ ತುಡಿಯುವ ಇವರು ಯೂಟ್ಯೂಬ್ ಚಾನೆಲ್ ಮೂಲಕ ವಿಚಾರಧಾರೆಗಳನ್ನು ಕಲಿಕಾಸಕ್ತರಿಗೆ ಪಸರಿಸುತ್ತಿದ್ದಾರೆ.

ಇವರ  ಚೊಚ್ಚಲ ಕಥಾ ಸಂಕಲನ "ನಿಗೂಢ ನಿಶಾಚರಿಗಳು" ಓದುಗರಿಂದ ಮೆಚ್ಚುಗೆ ಪಡೆದ ಕೃತಿಯಾಗಿದೆ.
ಪ್ರಸ್ತುತ ಕಥಾ ಸಂಕಲನದಲ್ಲಿ ಒಟ್ಟು ಒಂಭತ್ತು ಕಥೆಗಳಿವೆ. ಎಲ್ಲಾ ಕಥೆಗಳು ಉತ್ತಮವಾಗಿವೆ

ಮೂರು ಅನುಮಾನ,ಹಳೇಪಾತ್ರೆ ರಾಮ್ಯಾ,ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು, ಕರುವಲ್ಲು ಇವು ನನ್ನನ್ನು ಕಾಡಿದ  ಕಥೆಗಳು.
ಈ ಕೃತಿಗೆ ಇಜಯ ಖ್ಯಾತಿಯ ಪೂರ್ಣಿಮಾ ಮಾಳಗಿಮನಿ ರವರು ಮುನ್ನುಡಿ ಬರೆದಿದ್ದು ನಾಡೋಜ ಕಮಲಾ ಹಂಪನಾ ಬೆನ್ನುಡಿ ಬರೆದಿದ್ದಾರೆ.

ಡಾ.ಮಾರುತಿ ರವರು ತಮ್ಮ ಕರುವ್ಗಲ್ಲು ಕಥಾ ಸಂಕಲನ ಓದುವಾಗ ಅದೇ ಮಾದರಿಯ  ನನ್ನ ಬಾಲ್ಯದ ಯರಬಳ್ಳಿಯಲ್ಲಿ ಕಂಡ  "ಬಿದ್ ಕಲ್ ರಂಗಪ್ಪ "ನ ನೆನಪಾಯಿತು.
ಈ ಕಥಾ ಸಂಕಲನದ ಪ್ರತಿಯೊಂದು ಕಥೆಯೂ ವಿಭಿನ್ನವಾಗಿ ಮೂಡಿ ಬಂದಿವೆ.
"ದ್ಯಾಮವ್ವನ ಮಗ" ಕಥೆಯನ್ನು ಓದಿದಾಗ ಇತ್ತೀಚಿಗೆ ಪತ್ರಿಕೆಯಲ್ಲಿ ದೇವದಾಸಿ ಪದ್ಧತಿ ಬಗ್ಗೆ ಓದಿದ ನೆನಪಾಯಿತು. ದೇವರ ಹೆಸರಿನಲ್ಲಿ ಶೋಷಣೆ ಮಾಡುವ, ಊರಿನ ಕಾಮುಕರ  ದೌರ್ಜನ್ಯಕ್ಕೊಳಗಾಗಿ, ಮುತ್ತು ಕಟ್ಟಿಸಿಕೊಳ್ಳುವ ಸಂಪ್ರದಾಯಕ್ಕೆ ಬಲಿಯಾಗುವ ದ್ಯಾಮವ್ವನ ನತದೃಷ್ಟ ಮಗನ ಕಥೆಯನ್ನು ಕಥೆಗಾರರು   ಚೆನ್ನಾಗಿ ಚಿತ್ರಿಸಿದ್ದಾರೆ .

ದಾಯಾದಿ ಮತ್ಸರವು  ಅನಾದಿ ಕಾಲದಿಂದಲೂ ಇದ್ದದ್ದೆ, ಅಧಿಕಾರಕ್ಕಾಗಿ, ಆಸ್ತಿಗಾಗಿ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯಬಹುದೆನ್ನುವ ಕಟು ಸತ್ಯದ ಅನಾವರಣವನ್ನು "ಹೊಸ ಶಿಕಾರಿ" ಕಥೆಯಲ್ಲಿ  ಚಿತ್ರಿಸಿದ್ದಾರೆ.

ರೇಲ್ವೆ ಹಳಿಯ ಪಕ್ಕ ಸ್ಲಮ್ ನಲ್ಲಿ ವಾಸಿಸುವ, ತಮಿಳು ನಾಡಿನಿಂದ ವಲಸೆ ಬಂದ ಕಾರ್ಮಿಕರ ಹೃದಯಸ್ಪರ್ಶಿ ಕಥೆಯಾದ "ಚಿನ್ನ ತಂದವರು" ಕಥೆಯಲ್ಲಿ ಬಡ ಕೂಲಿ ಕಾರ್ಮಿಕರ ಜೀವನಕ್ಕೆ ಹೋರಾಟ ಮಾಡುವ ಪರಿ ಪೋಲೀಸ್ ವ್ಯವಸ್ಥೆಯ ಅಣಕ ಮುಂತಾದವುಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಅಲ್ಲಿಯ ಪಾತ್ರದಾರಿಗಳು ಚಿನ್ನ ತಂದರೆ? ನೀವು ಕಥಾ ಸಂಕಲನ ಓದಿಯೇ ತಿಳಿಯಬೇಕು.

"ಆನಂತ್ಯ"ಕಥೆಯಲ್ಲಿ  ಚರಂಡಿ  ಶುಚಿ ಮಾಡುವ ಕಾರ್ಮಿಕನ ಧಾರುಣ ಕಥೆಯನ್ನು ಕಟ್ಟಿ ಕೊಟ್ಟಿರುವ ಮಾರುತಿ ರವರು  ಸಮಾಜವನ್ನು ಸೂಕ್ಷ್ಮ ವಾಗಿ ಗಮನಿಸಿ ಅವರ ಬದುಕಿನ ಕಷ್ಟಗಳನ್ನು ನಮ್ಮ ಮುಂದೆ ಅನಾವರಣ ಮಾಡಿದ್ದಾರೆ.

''ಮೂರು ಅನುಮಾನ"  ಕಥೆಯ ಬಗ್ಗೆ ಹೇಳುವುದಾದರೆ... ಒಂದು ದೇಹ ಬಿದ್ದಿದೆ. ಅದು ಕೊಲೆಯೋ, ಆಕಸ್ಮಿಕ ಸಾವೋ, ಯಾಕೆ, ಹೇಗೆ, ಎಲ್ಲಿ? ಯಾವಾಗ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ  ಬೇಕಿದ್ದರೆ ನೀವೇ ಆ ಕಥೆಯನ್ನು ಓದಬೇಕಿದೆ. 

"ಹಳೇ ಪಾತ್ರೆ ರಾಮ್ಯ"ಕಥೆಯ ಬಗ್ಗೆ ಹೇಳುವುದಾದರೆ ರಾಮ್ಯ  ಸೈಕಲ್ ಮೇಲೆ ಪಾತ್ರೆಗಳ ಬುಟ್ಟಿಯನ್ನಿಟ್ಟುಕೊಂಡು ಊರೂರು ತಿರುಗುತ್ತ ಜೀವನ ಸಾಗಿಸುವ ನಿರುಪದ್ರವಿ ಅಲೆಮಾರಿ. ರಾಮ್ಯಾ ತನ್ನ ಅಣ್ಣ ಮತ್ತು ಅತ್ತಿಗೆಯರಿಗಾಗಿ ಪಡುವ ಕಷ್ಟ, ಮಾಡುವ ತ್ಯಾಗ, ಒಂಟಿಯಾಗೇ ಇರುತ್ತೇನೆಂದರೂ ಬಿಡದ. ಬಂಧು ಬಳಗದ ಒತ್ತಾಯಕ್ಕೆ ಮಣಿದು ಮದುವೆಯಾಗಿ, ಮಡದಿಯ ಅನೈತಿಕ ಸಂಬಂಧದಿಂದ ಅವನ ಜೀವನ  ಹೇಗೆ ಜೀವನ ಜಟಿಲವಾಗುತ್ತಲೇ ಹೋಗುವುದನ್ನು ಓದುವ ನಮಗೆ ರಾಮ್ಯಾನ ಬಗ್ಗೆ ಅನುಕಂಪ ಹುಟ್ಟದೇ ಇರದು.

"ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು"  ಕಥೆಯಲ್ಲಿ  ಊರವರ ಚುಡಾಯಿಸುವುದರಿಂದ ನೊಂದು ಕೊಳ್ಳುತ್ತಿದ್ದ ಸೂರಣ್ಣ  ಕ್ರಮೇಣ  ತೃತೀಯ ಲಿಂಗಿಯಾಗಿ  ತೆರೆದುಕೊಳ್ಳುವ ಬಗೆ   ಮತ್ತು ತೃತೀಯ ಲಿಂಗಿಗಳ ತಳಮಳಗಳನ್ನು   ಉತ್ತಮವಾಗಿ ಚಿತ್ರಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ವಿಭಿನ್ನ ಕಥಾ ವಸ್ತುಗಳಿಂದ ಕೂಡಿದ   ಮಾರುತಿ ರವರ ಈ ಕಥಾಸಂಕಲನ ಓದುಗರ ಮನಗೆಲ್ಲುತ್ತಲಿದೆ.ನೀವು ಒಮ್ಮೆ ಈ ಕಥೆಗಳನ್ನು ಓದಿಬಿಡಿ.
ಮಾರುತಿಯವರ ಬರಹ ಪಯಣ ಮುಂದುವರೆಯಲಿ ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಹಾರೈಸುವೆ...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

20 ಜನವರಿ 2023

ಬದುಕು ನಿಂತ ನೀರಲ್ಲ...

 

ಬದುಕು ನಿಂತ ನೀರಲ್ಲ...

ಒಂದು ಕಾಲದಲ್ಲಿ ಎಲ್ಲರ ಕೈಯಲ್ಲೂ
ನೋಕಿಯಾ  ಫೋನ್  ಗಳು  ಪ್ರಪಂಚದ ಬಹುತೇಕ ದೇಶಗಳಲ್ಲಿ ನೋಕಿಯಾ ತನ್ನ ಗ್ರಾಹಕರನ್ನು ಹೊಂದಿ  ಮಾರುಕಟ್ಟೆಯಲ್ಲಿ ಪಾರಮ್ಯ  ಹೊಂದಿತ್ತು...ಈಗ ಆಪಲ್, ಸ್ಯಾಮ್ಸಂಗ್, ರೆಡ್ಮಿ  ,ರಿಯಲ್ ಮಿ ಮುಂತಾದ ಹೊಸ ಕಂಪನಿಗಳ ಅಬ್ಬರದಲಿ ನೋಕಿಯಾ ಕಳೆದು ಹೋಗುವ ಅಪಾಯದಲ್ಲಿದೆ.ಹಾಗಾದರೆ ನೋಕಿಯಾ ಮಾಡಿದ ತಪ್ಪೇನು? ಏನೂ ಇಲ್ಲ ಕಾಲಕ್ಕೆ ತಕ್ಕನಾಗಿ ಬದಲಾವಣೆಗಳಿಗೆ  ಹೊಂದಿಕೊಳ್ಳಲಿಲ್ಲ  ತನ್ನನ್ನು  ತಾನು  ಅಪ್ಡೇಟ್ ಮಾಡಿಕೊಳ್ಳಲಿಲ್ಲ . ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಬದಲಾಗಲಿಲ್ಲ ಅಷ್ಟೇ.

ಜೀವನದಲ್ಲಿ ಬದಲಾವಣೆ ಬಹಳ ಮುಖ್ಯ. ಅದರಲ್ಲೂ ಈ ಪ್ರಸ್ತುತ ಪ್ರಪಂಚದಲ್ಲಿ ಸರಾಸರಿ ಹತ್ತು ವರ್ಷಗಳಿಗೊಮ್ಮೆ ವ್ಯಾವಹಾರಿಕ ಪ್ರಪಂಚದ ವಾಸ್ತವ ಬದಲಾಗುತ್ತಿದೆ. ದಶಕದ ಹಿಂದೆ ಊಹೆಗೂ ಸಿಗದಿದ್ದ ನೌಕರಿಗಳು ಇಂದು  ಮಾರುಕಟ್ಟೆಯನ್ನು ಆಕ್ರಮಿಸಿವೆ. ಈವೆಂಟ್ ಮ್ಯಾನೇಜರ್, ಫ್ಲವರ್ ಡೆಕೋರೇಟರ್,  ಡಿಲೆವರಿ ಬಾಯ್, ಯ್ಯೂಟೂಬರ್ ,ಬ್ಲಾಗರ್,  ಇಂತಹ ಹೊಸ ಉದ್ಯೋಗಗಳು ಸುಮಾರು ಮೂವತ್ತು ವರ್ಷಗಳ ಹಿಂದೆ ಕಿವಿಯ ಮೇಲೆ ಬಿದ್ದಿರಲಿಲ್ಲ. ಇವು ಕೆಲ ಉದಾಹರಣೆಗಳು ಮಾತ್ರ. ನಾನು ಈ ಲೇಖನ ಬರೆಯುತ್ತಿರುವಾಗ ಜಗದ ಎಲ್ಲೊ ಒಂದು ಕಡೆ ಹೊಸ ಉದ್ಯಮ, ಉದ್ಯೋಗ ಸೃಜನವಾಗಿರುತ್ತದೆ. ಇಂತಹ ಉದ್ಯೋಗಗಳ  ಅರಿವು ನಮಗಿರಬೇಕು ಅದಕ್ಕೆ ತಕ್ಕ ಶಿಕ್ಷಣ ಕೌಶಲಗಳನ್ನು ಪಡೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಹೀಗಾಗಿ ನಮ್ಮ ಅರಿವನ್ನು ಬೆಳೆಯಲು ಬಿಡದಿದ್ದರೆ ಅವಕಾಶವಂಚಿತರಾಗುತ್ತೇವೆ. Update ಆಗದಿದ್ದರೆ outdated ಆಗಿಬಿಡಬಹುದು. ಬಹಳ ಬಾರಿ ನನಗಿಷ್ಟು ಸಾಕು, ನಾನು ಬದಲಾಗುವುದು ಬೇಕಿಲ್ಲ  ಎನಿಸಬಹುದು. ಆದರೆ, ನಾವು ಯಾವುದನ್ನು ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೇವೋ ಅದು ನಾಳೆ ಇಲ್ಲವಾದರೆ ನಮ್ಮ ಅಸ್ತಿತ್ವಕ್ಕೇ ಸಂಚಕಾರ ಮೂಡಿದಂತಾಗುತ್ತದೆ. ಒಂದು ಕಾಲದಲ್ಲಿ ರಾರಾಜಿಸುತ್ತಿದ್ದ ಟೈಪ್ ರೈಟರ್ ಯಂತ್ರಗಳು ಇಂದು ಸಂಗ್ರಹಾಲಯದ ವಸ್ತುಗಳಾಗಿವೆ.ಗ್ರಾಮಾಪೋನ್,  ಟೇಪ್ ರೆಕಾರ್ಡರ್ , ವಾಲ್ಕ್ಮಾನ್ , ವಿಸಿಪಿ, ವಿ ಸಿ ಆರ್ , ಕ್ಯಾಸೆಟ್ ಗಳು  ಮೂಲೆ ಗುಂಪಾಗಿವೆ. ಮೊಬೈಲ್ ಫೋನುಗಳು ಬಂದ ಮೇಲೆ ಪೇಜರ್ ಅಗತ್ಯ ಇಲ್ಲದೇ ಹೋಗಿದೆ. ಆದ್ದರಿಂದ ನಮ್ಮ ವೃತ್ತಿ ಇಂದು ಎಷ್ಟೇ ಸುರಕ್ಷಿತ ಎನಿಸಿದರೂ ಪರಿಸ್ಥಿತಿ ದಿಢೀರನೆ ಬದಲಾಗಬಹುದು ಇದಕ್ಕೆ ಉತ್ತಮ ಉದಾಹರಣೆ ಎಂದರೆ ಲಕ್ಷಗಳ ಪ್ಯಾಕೇಜ್ ಹೋಂದಿ ಕೆಲಸ ಮಾಡುತ್ತಿದ್ದ ಟೆಕ್ಕಿಗಳನ್ನು ಡೌನ್ ಸೈಜಿಂಗ್, ರಿಸೆಷನ್ ಕಾಸ್ಟ್ ಕಟ್ ಇನ್ನೂ ಏನೇನೊ ಹೆಸರಲ್ಲಿ ಕೆಲಸದಿಂದ ತೆಗೆದು ಸದ್ದಿಲ್ಲದೇ ಮನೆಗೆ ಕಳಿಸುವ ಚಿತ್ರಣ ನಮ್ಮ ಮುಂದಿದೆ. ಇಂತಹ ಸಂದರ್ಭಗಳಲ್ಲಿ  ಸಮಯಕ್ಕೆ ತಕ್ಕಂತೆ ಜ್ಞಾನದ ವಿಸ್ತರಣೆ, ಹೊಸ ಕೌಶಲಗಳ ಕಲಿಕೆ ನಮ್ಮ ನೆರವಿಗೆ ಬಂದೇ ಬರುತ್ತವೆ.  ಅರಿವನ್ನು ವಿಸ್ತರಿಸದೆ ಹೋದರೆ ನಮ್ಮ ಅಸ್ತಿತ್ವವೇ ಉಳಿಯದಿರಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಮರೆಯಬಾರದು .
ವ್ಯಾಯಾಮ, ಧ್ಯಾನ, ಧನಾತ್ಮಕ ಚಿಂತನೆಗಳು, ಹೊಸಬರೊಡನೆ ಬೆರೆಯುವ ಮನಃಸ್ಥಿತಿ, ಹೊಸದನ್ನು ಕಲಿಯುವ ಬಯಕೆ, ಪ್ರವಾಸ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿಕೆ, ಸೋಮಾರಿತನ ಬಿಟ್ಟು ಯಾವುದೋ ಉತ್ಪಾದಕ ಕೆಲಸದಲ್ಲಿ ತೊಡಗಿಕೊಳ್ಳುವಿಕೆ, ಆರೋಗ್ಯಕರ ಆಹಾರ, ಒಳ್ಳೆಯ ನಿದ್ರೆ, ಸಾಮಾಜಿಕ ಸಂಬಂಧಗಳು, ಮೊದಲಾದವು ನಮ್ಮ ಅರಿವನ್ನು ಬೆಳೆಸುತ್ತವೆ. ನಮ್ಮ ನಿಯಮಿತ ಜೀವನಾವಧಿಯನ್ನು ಉತ್ತಮ ರೀತಿಯಿಂದ ಕಳೆಯಲು ಮನಸ್ಸನ್ನು ಚಿಂತನೆಗಳ ವಿಸ್ತರಣೆಗೆ ಸಜ್ಜುಗೊಳಿಸುವುದು ಒಳ್ಳೆಯ ವಿಧಾನ. ಈ ಪ್ರಕ್ರಿಯೆ ಸದಾ ಜಾರಿಯಲ್ಲಿರಲಿ ಅದಕ್ಕೆ ತಿಳಿದವರು ಹೇಳಿರುವುದು ಬದುಕು ನಿಂತ ನೀರಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

17 ಜನವರಿ 2023

R V M ವೋಟಿಂಗ್ ಮೆಷಿನ್ ಏನು ಎತ್ತ....


 



ವೋಟಿಂಗ್ ಹೆಚ್ಚಳಕ್ಕೆ ಆರ್ ವಿ ಎಂ  ಪೂರಕವಾಗಲಿದೆ. 


ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತವನ್ನು ಕಂಡ ಪ್ರಪಂಚದ ಹಲವಾರು ದೇಶಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ.140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಅಚ್ಚುಕಟ್ಟಾಗಿ ಚುನಾವಣೆ ನಡೆಸುವುದೇ ಒಂದು ಸವಾಲು. ಆ ಸವಾಲು ಮೆಟ್ಟಿ ಚುನಾವಣೆ ನಡೆಸುತ್ತಾ ಬಂದಿರುವ ಭಾರತದ ಚುನಾವಣಾ ಆಯೋಗಕ್ಕೆ ಅಭಿನಂದಿದಲೇಬೇಕು .ಇಷ್ಟೆಲ್ಲಾ ಸಂತಸದ ಸುದ್ದಿಯ ನಡುವೆ ಬೇಸರದ ಸಂಗತಿಯೆಂದರೆ ಇದುವರೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ ನೂರು ಇರಲಿ ಶೇಕಡಾ ತೊಂಬತ್ತು ಮತದಾನ ಆಗಿಲ್ಲ! 

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂದರೆ 2019 ರಲ್ಲಿ ನಡೆದ ಚುನಾವಣೆಯಲ್ಲಿ  ಚುನಾವಣಾ ಆಯೋಗ ,ಸ್ವೀಪ್ ಮತ್ತು ಶಾಲಾಕಾಲೇಜುಗಳ  ಇ ಎಲ್ ಸಿ ಕ್ಲಬ್ ಗಳ ಮತದಾನದ ಜಾಗೃತಿಯ ಪರಿಣಾಮವಾಗಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕೊಂಚ ಹೆಚ್ಚು ಎನ್ನುವಷ್ಟು 

 67.4 % ಮತದಾನ ಆಗಿದೆ . ನೊಂದಾಯಿತ 

30 ಕೋಟಿ ಜನ ತಮ್ಮ ಮತದಾನದ  ಹಕ್ಕು ಚಲಾಯಿಸಿಲ್ಲ ಎಂಬುದು ನಮ್ಮ ಜನರು ಮತದಾನದ ಬಗ್ಗೆ ಇರುವ ನಿರಾಸಕ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ.


ಮತದಾನ ಕಡಿಮೆಯಾಗಲು ಜನರ ನಿರಾಸಕ್ತಿ, ರಾಜಕಾರಣಿಗಳ ಬಗ್ಗೆ ಅನಾದರ ಮುಂತಾದ ಅಂಶಗಳು ಕಾರಣವಾದರೂ ವಲಸೆ  ಮತದಾನ ಕಡಿಮೆಯಾಗಲು ಅತಿ ದೊಡ್ಡ ಕಾರಣ ಎಂಬ ಸತ್ಯ ಅರಿತ ಚುನಾವಣಾ ಆಯೋಗ ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಅದೇ  

ವಲಸಿಗರ   ವಾಸಸ್ಥಳದಿಂದಲೇ ಮತದಾನ ಅವಕಾಶ ನೀಡುವ  ಆರ್ ವಿ ಎಂ ಅಂದರೆ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ 


ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅನುವಾಗುವಂತೆ ದೂರನಿಯಂತ್ರಿತ. ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು ಕೇಂದ್ರ ಚುನಾವಣಾ

ಆಯೋಗವು ಅಭಿವೃದ್ಧಿಪಡಿಸಿದೆ.

ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಆರ್ವಿಎಂ) ಕಾರ್ಯಶೈಲಿಯ ಬಗ್ಗೆ ಆಯೋಗವು ರಾಜಕೀಯ ಪಕ್ಷಗಳಿಗೆ ಜ.16ರಂದು ಪ್ರಾತ್ಯಕ್ಷಿಕೆ ನೀಡಲು ಉದ್ದೇಶಿಸಿತ್ತು .ಆದರೆ ಅದು ನೆರವೇರಲಿಲ್ಲ. ಈ  ಸೌಲಭ್ಯ ಜಾರಿಗೆ ಬಂದರೆ, ವಲಸಿಗರು

ತಾವು ವಾಸವಿರುವ ಸ್ಥಳದಿಂದಲೇ ಮತದಾನ ಮಾಡಬಹುದು. ಮತದಾನ ಮಾಡಲೆಂದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ  ಸ್ಥಳಕ್ಕೆ  ಪ್ರಯಾಣಿಸುವ ಅಗತ್ಯ ಬರುವುದಿಲ್ಲ.     


ಪ್ರಾತ್ಯಕ್ಷಿಕೆ ಹಾಗೂ ಆರ್ವಿಎಂ ನ  ಕಾರ್ಯಶೈಲಿ ವಿವರಿಸಲು  "ಮಾನ್ಯತೆ  ಪಡೆದ ಎಂಟು ರಾಷ್ಟ್ರೀಯ ಮತ್ತು  57 ಪ್ರಾದೇಶಿಕ ಪಕ್ಷಗಳಿಗೆ ಆಯೋಗ   ಅಹ್ವಾನ ಕಳುಹಿಸಿ ಆಯೋಗದ ಪರಿಣತರು ಮತ್ತು ಸದಸ್ಯರು ಸಭೆಯಲ್ಲಿ ಭಾಗವಹಿಸಿ  ಇವಿಎಂಗಳ  ದೂರನಿಯಂತ್ರಿತ  ನಿರ್ವಹಣೆ ಸಾಧ್ಯವಿದೆ ಎಂದು ಪ್ರಾತ್ಯಕ್ಷಿಕೆಯನ್ನು ನೀಡಬೇಕಿತ್ತು ಅದು ಈಗ ಮುಂದಕ್ಕೆ ಹೋಗಿದೆ. 


ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು  ತಾಂತ್ರಿಕ ಸಹಾಯ ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶ. ಒಂದು   ಆರ್ಪಿಎಂ. ಮತಗಟ್ಟೆಯಿಂದ ಒಟ್ಟು 72 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ   ಇರಲಿದೆ. ಇಲ್ಲಿ ಯಾವುದೇ  ಲೋಪಕ್ಕೆ ಅವಕಾಶ ಇರುವುದಿಲ್ಲ, ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುವುದಿಲ್ಲ  ಎಂದು ಆಯೋಗ ಹೇಳಿದೆ. 



ಅಲ್ಲದೆ ವಲಸಿಗರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ಕ್ರಮ, ಪ್ರಕ್ರಿಯೆಯ ಅನುಷ್ಠಾನ ಕ್ರಮ, ಪೂರಕವಾಗಿ ಆಡಳಿತಾತ್ಮಕವಾಗಿ ಆಗಬೇಕಿರುವ ಬದಲಾವಣೆ, ಪ್ರತ್ಯೇಕ ಕಾಯ್ದೆಯ ಅಗತ್ಯ ಕುರಿತಂತೆ ಅಭಿಪ್ರಾಯ ತಿಳಿಸುವಂತೆಯೂ ಪಕ್ಷಗಳಿಗೆ ಕೋರಲಾಗಿದೆ. 


ಸಮರ್ಪಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಕುಗ್ರಾಮಗಳ ಮತಗಟ್ಟೆಗಳಿಗೆ ಮತಯಂತ್ರ ಸಾಗಣೆ, ಸಿಬ್ಬಂದಿ ಪ್ರಯಾಣ ಕಷ್ಟವಾಗಿದೆ ಮತ್ತು ಮತ  ಎಣಿಕ ಕೂಡಾ ತಾಂತ್ರಿಕವಾಗಿ ಸವಾಲಿನದ್ದಾಗಿದೆ

ಮದುವೆ,ಶಿಕ್ಷಣ, ಉದ್ಯೋಗ ಮುಂತಾದ ಕಾರಣದಿಂದಾಗಿ 85% ಜನರು ಮತದಾನದಿಂದ ವಂಚಿತರಾಗುತ್ತಿದ್ದಾರೆ  ಅಂತಹವರಿಗೆ ಆರ್ ಪಿ ಎಮ್ ವರದಾನವಾಗಲಿದೆ.

ಎಂದು ಆಯೋಗದ ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಈ ಪ್ರಯೋಗಗಳನ್ನು ರಾಜಕೀಯ ಪಕ್ಷಗಳು ಒಪ್ಪಿದರೆ 2023 ರಲ್ಲಿ ನಡೆಯುವ ಒಂಭತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ  ಜಾರಿಗೆ ತರಲಾಗುತ್ತದೆ. ಇದರ ಸಾಧಕ ಬಾಧಕ ಪರಿಗಣಿಸಿ  

2024  ರ ಲೋಕಸಭೆ ಚುನಾವಣೆಯಲ್ಲಿ ಈ ಆರ್ ಪಿ ಎಂ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.


ಈ ಆರ್ ಪಿ ಎಂ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನೋಡುವುದಾದರೆ ವಲಸೆ ಹೋದ ವ್ಯಕ್ತಿ 

ಮೊದಲು ತಮ್ಮ ಮತವಿರುವ  ಮೂಲ  ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ದೂರದ ಸ್ಥಳದಲ್ಲಿ ಮತದಾನ ಮಾಡಲು ಅನುಮತಿ ಕೋರಬೇಕು.ನಂತರ ವಲಸೆ ಜನಗಳಿಗೆ ಮೀಸಲಾದ ಮತಗಟ್ಟೆಯಲ್ಲಿ ಮತದಾನದ ಇತರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅನುಸರಿಸಿ ಮತದಾನಕ್ಕೆ ಅವಕಾಶವನ್ನು ನೀಡಲಾಗುತ್ತದೆ 



ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗೆ    ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು ರಿಮೋಟ್ ವೋಟಿಂಗ್ ಮಷೀನ್ ನ  ಅಗತ್ಯವೇನಿದೆ ಎಂದು ಕೇಳಿರುವುದಲ್ಲದೇ ಚುನಾವಣ ಆಯೋಗಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿವೆ.

ಇದೇ ವೇಳೆ ಮೊಟ್ಟಮೊದಲಿಗೆ ಆರ್ವಿಎಂ ಪರಿಕಲ್ಪನೆಯೇ ಸ್ವೀಕಾರಾರ್ಹವಲ್ಲ. ಇದನ್ನು ಪರಿಚಯಿಸುವ ಮೊದಲು ಚುನಾವಣಾ ಆಯೋಗವು ದೇಶದ ಹಲವು ಪಕ್ಷಗಳು ಇವಿಎಂ ಕುರಿತು ಎತ್ತಿರುವ ಕಳವಳಗಳಿಗೆ ಉತ್ತರಿಸಬೇಕು. ನಗರ ಪ್ರದೇಶದ ಮತದಾರರು ಏಕೆ ಹಕ್ಕು ಚಲಾವಣೆಯಲ್ಲಿ ಹಿಂದಿದ್ದಾರೆ ಎಂಬುದನ್ನು ಅರಿತು, ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದೂ ವಿಪಕ್ಷಗಳು ಸಲಹೆ ನೀಡಿವೆ. 

 ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ವಿಪಕ್ಷಗಳು ಆಗ್ರಹಿಸಿದ ಕಾರಣ ಆರ್ವಿಎಂ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಚುನಾವಣ ಆಯೋಗ ಮುಂದೂಡಿತು. ಅಲ್ಲದೇ ರಿಮೋಟ್ ವೋಟಿಂಗ್ ಮಷೀನ್ ಬಳಕೆ ಕುರಿತು ಪ್ರತಿಕ್ರಿಯೆ ಸಲ್ಲಿಸಲು ನೀಡಲಾಗಿದ್ದ ಗಡುವನ್ನೂ ಫೆ.28ರ ವರೆಗೆ ವಿಸ್ತರಣೆ ಮಾಡಿತು. ಈ ಹಿಂದೆ ಜ.31ರೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು.


ವಿಪಕ್ಷಗಳು ಕೇಳಿರುವ ಕೆಲ ಪ್ರಶ್ನೆಗಳು ಈ ಹೀಗಿವೆ 

ವಲಸೆ ಕಾರ್ಮಿಕನು ಬೇರೆ ರಾಜ್ಯದಲ್ಲೂ ನೋಂದಣಿ ಮಾಡಿಕೊಂಡು, ತನ್ನ ಊರಲ್ಲೂ ನೋಂದಣಿ ಮಾಡಿಕೊಂಡಿದ್ದರೆಆಗ ಡುಪ್ಲಿಕೇಟ್ ತಡೆಯಲು ಏನು ಮಾಡುತ್ತೀರಿ?

ದೂರದೂರಲ್ಲಿ ಮತಗಟ್ಟೆ ಸ್ಥಾಪಿಸಲು ನಿಗದಿತ ಸ್ಥಳವನ್ನು ಹೇಗೆ ನಿರ್ಧರಿಸುತ್ತೀರಿ?

ಕ್ಷೇತ್ರದಾಚೆಗೆ ದೂರದೂರಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ಪೋಲಿಂಗ್ ಏಜೆಂಟ್ ನಿಗಾ ವಹಿಸುವುದು ಹೇಗೆ?

ವಿವಿಪ್ಯಾಟ್ ಸ್ಲಿಪ್ಗಳ ಸಾಗಾಟ ಹಾಗೂ ದಾಸ್ತಾನು ಎಲ್ಲಿ, ಹೇಗೆ ಮಾಡುತ್ತೀರಿ?

ದೂರದೂರಲ್ಲಿ ಚಲಾವಣೆಯಾದ ಮತಗಳನ್ನು ಪ್ರತ್ಯೇಕವಾಗಿ ಎಣಿಸುತ್ತೀರಾ ಅಥವಾ ಕ್ಷೇತ್ರದ ಮತಗಳೊಂದಿಗೆ ಮಿಶ್ರ ಮಾಡುತ್ತೀರಾ? 

ಅರ್ಹ ವಲಸೆ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿರುವಾಗ ನಾವು(ಪಕ್ಷಗಳು) ಚುನಾವಣಾ ಪ್ರಚಾರ ಮಾಡುವುದು ಹೇಗೆ?


ಪ್ರತಿಪಕ್ಷಗಳು ಎತ್ತಿರುವ ಈ ಎಲ್ಲಾ ಪ್ರಶ್ನೆಗಳಿಗೆ ಆಯೋಗವು ಸೂಕ್ತವಾದ ಉತ್ತರ ನೀಡಿ ಆರ್ ವಿ ಎಂ ಬಗ್ಗೆ ಇರುವ ಸಂದೇಹಗಳನ್ನು ದೂರ ಮಾಡಬೇಕಿದೆ. ಹೊಸ ತಂತ್ರಜ್ಞಾನ ಮತ್ತು ಉಪಕ್ರಮಗಳನ್ನು ಪರಿಚಯಿಸುವಾಗ ಆರಂಭದಲ್ಲಿ ಕೆಲ ತೊಡಕು ಸಂದೇಹಗಳು ಸಹಜ ಅವುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗಿದರೆ ಆರ್ ವಿ ಎಂ ಮುಂದೊಂದು ದಿನ ಶೇಕಡಾ ನೂರು ಮತದಾನ ನಡೆದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಉಪಕ್ರಮ ಆಗಬಹುದು ಎಂಬ ಆಶಾವಾದ ಹೊಂದೋಣ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು 

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು.





*ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ೧೭/೧/೨೩*


 

13 ಜನವರಿ 2023

ಸಣ್ ಪಿನ್ ಚಾರ್ಜರ್ ಮಾಯವಾಗಲಿದೆ....

 


ಮಾಯವಾಗಲಿದೆ ಗುಂಡ್ ಪಿನ್ ಚಾರ್ಜರ್... 

ನಿಮ್ ಮನೇಲಿ ಗುಂಡ್ ಪಿನ್  ಚಾರ್ಜರ್ ಇದ್ಯಾ? ನಿಮ್ ಮನೇಲಿ ದೆಬ್ಬೇ ಚಾರ್ಜರ್ ಇದ್ಯಾ? ಇವು ಸಾಮಾನ್ಯವಾಗಿ  ನಾವು ಬೇರೆ ಊರುಗಳಿಗೆ ಹೋದಾಗ ,ಪ್ರವಾಸ ಮಾಡುವಾಗ ಚಾರ್ಜರ್ ಖಾಲಿಯಾಗಿ ಪವರ್ ಬ್ಯಾಂಕ್ ಕೂಡಾ ದಮ್ ಕಳೆದುಕೊಂಡಾಗ  ಮೊಬೈಲ್  ಚಾರ್ಜರ್ ಮರೆತು ಬಂದಾಗ ನಮ್ಮ ಬಾಯಿಂದ ಬರುವ ಅಮ್ಮಾ ..ತಾಯಿ..ನುಡಿಗಳು . ಬಹುತೇಕ ನಾವೆಲ್ಲರೂ ಒಂದಲ್ಲ ಒಂದು ಬಾರಿ ಇಂತಹ ಮುಜುಗರದ ಘಟನೆಗಳಿಗೆ ಸಾಕ್ಷಿಯಾಗಿರುತ್ತೇವೆ.
ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮಾನಕ ಸಂಸ್ಥೆ
(ಬಿಐಎಸ್ ) ಎಲ್ಲ ಉಪಕರಣಗಳಿಗೆ ಟೈಪ್-ಸಿ ಚಾರ್ಜರ್ ಅಳವಡಿಕೆ ಮಾಡಲು ಶಿಪಾರಸು ಮಾಡಿದೆ.
ಹಾಗೂ  ಮೂರು ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್ಗಳು, ಟೈಪ್-ಸಿ ಯುಎಸ್ಬಿ ಕೇಬಲ್ ಹಾಗೂ ವಿಡಿಯೊ ಕಣ್ಣಾವಲು ವ್ಯವಸ್ಥೆಗಳಿಗೆ (ಬಿ ಐಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ.

ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಲ್ಲೂ ಏಕರೂಪ ಬಳಕೆಗೆ ಹೊಂದುವ ರೀತಿಯಲ್ಲಿ ಟೈಪ್- ಸಿ ವಿಧದ ಪೋರ್ಟ್, ಪ್ಲಗ್, ಕೇಬಲ್ಗಳನ್ನು ತಯಾರಿಸಬೇಕು. ಎಂಬ ಮಾನದಂಡ ರೂಪಿಸಲಾಗಿದೆ. ದೇಶದಲ್ಲಿ ಮಾರಾಟವಾಗುವ ಎಲ್ಲ ರೀತಿಯ ಸ್ಮಾರ್ಟ್ಫೋನ್ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಏಕರೂಪದ ಚಾರ್ಜಿಂಗ್ ಸವಲತ್ತು ಒದಗಿಸುವುದಕ್ಕಾಗಿ ಈ ಮಾನದಂಡ ಗೊತ್ತುಪಡಿಸಲಾಗಿದೆ.

ಈ ಮಾನದಂಡದಿಂದಾಗಿ, ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕ ಚಾರ್ಜರ್ ಅನ್ನು ಒದಗಿಸುವ ಅಗತ್ಯ ಇರುವುದಿಲ್ಲ. ಪ್ರತಿ ಬಾರಿ ಉಪಕರಣ ಖರೀದಿಸಿದಾಗ ಗ್ರಾಹಕರು ತಮ್ಮ ಮೊಬೈಲ್ಗೆ ಹೊಂದಿಕೆಯಾಗಬಲ್ಲ ಪ್ರತ್ಯೇಕ ಚಾರ್ಜರ್ ಅನ್ನು ಖರೀದಿಸುವ ಅಗತ್ಯವಿರುವುದಿಲ್ಲ. ಈ ಕ್ರಮದಿಂದ ಇ ತ್ಯಾಜ್ಯ ಉತ್ಪಾದನೆಯೂ ತಗ್ಗಲಿದ್ದು, ಚಾರ್ಜರ್ ಖರೀದಿಗೆ ಮಾಡುವ ವೆಚ್ಚವೂ ಉಳಿತಾಯವಾಗಲಿದೆ. ಹಲವು ದೇಶಗಳು ಈ ಮಾನದಂಡವನ್ನು ಅನುಸರಿಸುವತ್ತ ಈಗಾಗಲೇ ಹೆಜ್ಜೆ ಇರಿಸಿವೆ.

ಇತ್ತೀಚಿನ ದಿನಗಳಲ್ಲಿ ವಿಡಿಯೊ ನಿಗಾ ವ್ಯವಸ್ಥೆಗೆ ಹೆಚ್ಚಿನ ಬೇಡಿಕೆಯಿದ್ದು, ಗ್ರಾಹಕರಿಗೆ ಯಾವ ರೀತಿಯ ಉಪಕರಣಗಳನ್ನು ಖರೀದಿಸುವುದು ಸೂಕ್ತ ಎಂಬ ಗೊಂದಲವಿದೆ. ಇದನ್ನು ನಿವಾರಣೆ ಮಾಡುವುದಕ್ಕಾಗಿ ಮಾನಕ ಸಂಸ್ಥೆಯು ವಿಡಿಯೊ ನಿಗಾ ವ್ಯವಸ್ಥೆಗೆ ಮಾನದಂಡ ರೂಪಿಸಿದೆ. ಕ್ಯಾಮರಾ, ಇಂಟರ್ಫೇಸ್, ಇನ್ಸ್ಟಾಲೇಷನ್ ಮೊದಲಾದವುಗಳಿಗೆ ನಿಯಮಗಳನ್ನು ಗೊತ್ತುಪಡಿಸಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚು ನಿಖರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪಡೆಯಲು ಈ ಮಾನದಂಡಗಳು ನೆರವಾಗುತ್ತವೆ.
ಇದರ ಜೊತೆಯಲ್ಲಿ ಬಿ ಐ ಎಸ್ ಮತ್ತೊಂದು ಸಲಹೆ ನೀಡಿದೆ  

ಸೆಟ್ ಟಾಪ್ ಬಾಕ್ಸ್ ಇಲ್ಲದೆ ಪ್ರೀ ಟು ಏರ್ ಟಿ ವಿ ಚಾನೆಲ್ ನೋಡಲು ಅನುವಾಗುವಂತೆ ಎಲ್ಲಾ ಟಿ ವಿ ಗಳಲ್ಲಿ ಇನ್ ಬಿಲ್ಟ್ ರಿಸೀವರ್ ಅಳವಡಿಸಲು ತಿಳಿಸಿದೆ ಇದು ಸಹ ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿ ಪರಿಣಮಿಸಲಿದೆ.
ಪ್ರಸ್ತುತ ಸನ್ನಿವೇಶದಲ್ಲಿ
ಜನರು ಶುಲ್ಕ ಸಹಿತ ಹಾಗೂ ಉಚಿತ ಟಿ.ವಿ ವಾಹಿನಿಗಳನ್ನು ವೀಕ್ಷಿಸಬೇಕಾದರೆ, ಸೆಟ್ಟಾಪ್ ಬಾಕ್ಸ್ಗಳನ್ನು ಖರೀದಿಸಬೇಕಿದೆ. ದೂರದರ್ಶನದ ಉಚಿತ ಚಾನಲ್ಗಳನ್ನು ವೀಕ್ಷಿಸಬೇಕಿದ್ದರೂ, ಸೆಟ್ ಟಾಪ್ ಬಾಕ್ಸ್ ಖರೀದಿಸಲೇಬೇಕಿದೆ. ಆದರೆ  ಉಚಿತ ಚಾನಲ್ಗಳನ್ನು ಸೆಟ್ ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದು ಇನ್ನುಮುಂದೆ ಸಾಧ್ಯವಾಗಲಿದೆ.

ಸ್ಯಾಟಲೈಟ್ ಟ್ಯೂನರ್ಗಳನ್ನು ಅಳವಡಿಸಿದ ರಿಸೀವರ್ಗಳನ್ನು ಟಿ ವಿ  ತಯಾರಿಸುವಾಗಲೇ ಅಳವಡಿಸಲಾಗುತ್ತದೆ. ತಂತ್ರಜ್ಞಾನದ ಈ ಸೌಲಭ್ಯದಿಂದ ಸರ್ಕಾರದ ಹಲವು ಕಾರ್ಯಕ್ರಮಗಳು, ಶೈಕ್ಷಣಿಕ ಮಾಹಿತಿ ವೀಕ್ಷಕರಿಗೆ ಸುಲಭವಾಗಿ ಸಿಗಲಿವೆ.
ಇದು ಹೆಚ್ಚಾಗುತ್ತಿರುವ ಈ ವೇಸ್ಟ್ (e waste) ತಡೆಗಟ್ಟಲು ದಾರಿಯಾಗಲಿದೆ. ಪರಿಸರ ಕಾಳಜಿಹೊಂದಿದ ಮತ್ತು ಗ್ರಾಹಕ ಸ್ನೇಹಿಯಾದ ಇಂತಹ ಸಣ್ಣ ಸಣ್ಣ ನಡೆಗಳು ಪರಿಸರ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ಸರ್ಕಾರಗಳು ಇಂತಹ ಕ್ರಮಗಳನ್ನು ಹೆಚ್ಚಾಗಿ  ಜಾರಿಗೆ ತರಬೇಕು ಇಂತಹ ಉಪಕ್ರಮಗಳಿಗೆ ಜನರು ಸಹ ಬೆಂಬಲ ನೀಡಬೇಕಿದೆ ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಕೈಜೋಡಿಸಬೇಕಿದೆ.

ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತ್ಸಂದ್ರ
ತುಮಕೂರು