06 ಡಿಸೆಂಬರ್ 2022

ಹೃದಯವ ಮೀಟಿದವಳೆ...

 



ಹೃದಯವ ಮೀಟಿದವಳೆ ...


ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ

ಅನುಕ್ಷಣವೂ ಮುದ್ದಿಸಿ ಹೃದಯವ ಮೀಟಿದವಳೆ  


ನವಭಾವ ತುಂಬಿ ನನ ಮದಗೊಳಿಸಿದವಳೆ 

ಕವಿಭಾವಗಳನು ಅರಳಿಸಿ ಕವಿತೆ ಸೃಷ್ಟಿಸಿದವಳೆ


ಚೈತ್ರದಲಿ ಪ್ರೀತಿಯ ಚಿಗುರಿಸಿ ಆಶಾಡದಲೂ ರಮಿಸಿದವಳೆ

ಮಾಘದ  ಚಳಿಯಲಿ ಬಾಗಿ ಮುದ್ದಿಸಿ ಬಿಸಿಯಪ್ಪಿಗೆ ನೀಡಿದವಳೆ


ಹೀಗೆಯೇ ಸರ್ವ ಋತುಗಳಲೂ ನನ್ನೊಂದಿಗೆ ನೀನಿದ್ದರೆ ಸಾಕು

ಸ್ವರ್ಗವೆಂಬ ಲೋಕ ಅಲ್ಲಲ್ಲೋ ಇರುವುದಂತೆ ಅದೇಕೆ ಬೇಕು? 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.




02 ಡಿಸೆಂಬರ್ 2022

ವಧು ಬೇಕಾಗಿದೆ.

 


*ವಧು ಬೇಕಾಗಿದೆ...*


ನಾನು ವಯಸ್ಸಿಗೆ ಬಂದ ವರ 

ಮದುವೆಯಾಗಲು ನನಗೊಂದು ವಧು ಬೇಕಾಗಿದೆ

ನಾನೇನೂ ಸಂತನಲ್ಲ ನನ್ನ ಸಂತಾನ ಅಭಿವೃದ್ಧಿಮಾಡಿಕೊಳ್ಳಲು ವಧು ಬೇಕಾಗಿದೆ.


ನೇಗಿಲ ಯೋಗಿ, ದೇಶದ ಬೆನ್ನೆಲುಬು

ಹೀಗೆ ಏನೋನೋ  ಹೊಗಳಿ ಅಟ್ಟಕ್ಕೇರಿಸುವ ನೀವು ನನಗೆ ಹೆಣ್ಣು ಕೊಡುವಾಗ ಮಾತ್ರ ಹಿಂಜರಿಯದಿರಿ 

ನನ್ನ ಸಂಸಾರದ ನೊಗಕ್ಕೆ ಹೆಗಲು ಕೊಡೋ ವಧು ಬೇಕಾಗಿದೆ.


ರಟ್ಟೆಯಲಿ ಶಕ್ತಿಇದೆ,ದುಡಿದುಣ್ಣೋ ಬುದ್ದಿ ಇದೆ 

ಕೆಟ್ಟಗುಣಗಳೇನೂ ಇಲ್ಲ ಒಟ್ಟಾರೆ ರಾಣಿಯಂತೆ ನೋಡಿಕೊಳ್ಳುವೆ ದಯವಿಟ್ಟು ಕೊಟ್ಟು ಬಿಡಿ ನನಗೂ ವಧು ಬೇಕಾಗಿದೆ.


ನಗರದವರೇ ಬೇಕು, ನಗದವರೇಬೇಕು ಎಂಬ ಹಠವೇಕೆ ನಗು ನಗು ನಗುತಾ ಭೂತಾಯಿ ಸೇವೆ ಮಾಡುವ ನನಗೂ ಒಂದು ವಧು ಬೇಕಾಗಿದೆ.


ಸರಕಾರಿ ನೌಕರಿ ನಮಗಿಲ್ಲ ,ನಮ್ಮ ತರಕಾರಿ ಇಲ್ಲದಿರೆ ನಿಮ್ಮ ಅಡುಗೆ ರುಚಿಇಲ್ಲ ತಿಂಗಳ ಪಗಾರವಿಲ್ಲದಿದ್ದರೂ ತಿಂಗಳ ಬೆಳಕಿನಲ್ಲಿ ನನ್ನವಳ ಮುದ್ದಿಸಿ  ಸಂಸಾರ ನಡೆಸಲು ನನಗೆ ವಧು ಬೇಕಾಗಿದೆ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


01 ಡಿಸೆಂಬರ್ 2022

ನಮ್ಮ ದುರ್ಗ ಭಾಗ ೧.

 

ನಮ್ಮ ದುರ್ಗ...


ನಾಲ್ಕನೇ ತರಗತಿಯಲ್ಲಿ ಓದುವಾಗ ಮೊದಲು ನೋಡಿದ್ದ ದುರ್ಗದ ಕೋಟೆಯನ್ನು ನಂತರ ಹತ್ತಾರು ಬಾರಿ ನೋಡಿದ್ದೆ.ದುರ್ಗಾಸ್ತಮಾನ, ದುರ್ಗದ ಬೇಡರ್ದಂಗೆ, ಗಂಡುಗಲಿ ಮದಕರಿ ನಾಯಕ ಮುಂತಾದ ಪುಸ್ತಕಗಳನ್ನು ಓದಿದ ಮೇಲೆ ಪುನಃ ಕೋಟೆ ನೋಡಬೇಕೆನಿಸಿ ಆತ್ಮೀಯರಾದ ಶಂಕರಾನಂದ ಅವರ ಜೊತೆಯಾಗಿ ಕೋಟೆ ನಾಡಿನ ಕಡೆ ಕಾರ್ ಓಡಿಸಿಯೇಬಿಟ್ಟೆ. 

ಹೈವೇಯಲ್ಲಿ ಪಯಣ ಮಾಡುತ್ತಾ   ಹಿರಿಯೂರು ದಾಟಿ ಬುರುಜಿನರೊಪ್ಪದ ಗಣೇಶನ ದರ್ಶನ ಪಡೆದು ಅಲ್ಲೇ ಇರುವ ಹೋಟೆಲ್ ನಲ್ಲಿ ಇಡ್ಲಿ , ಪಲಾವ್ ತಿಂದು ಮತ್ತೆ ಕಾರ್ ಏರಿ ದುರ್ಗದತ್ತ ಹೊರೆಟೆವು .

ದುರ್ಗ ತಲುಪಿದಾಗ ಹತ್ತುಗಂಟೆಯಾಗಿತ್ತು..


ಕಲ್ಲಿನ ಕೋಟೆಯ ಮುಂದೆ ನಿಂತು ಅದನ್ನು ನೋಡುವಾಗ ಈಗಾಗಲೇ ಎಷ್ಟೋ ಬಾರಿ ನೋಡಿದರೂ ಹೊಸದಾಗಿ ಕಂಡಿತು.ಟಿಕೆಟ್ ಪಡೆದು ಒಳಹೊಕ್ಕಾಗ ಮತ್ತೆ ನಮ್ಮ ಕೋಟೆಯ ಬಗ್ಗೆ ಮತ್ತೊಮ್ಮೆ ಹೆಮ್ಮೆ ಮೂಡಿತು.


ಚಿತ್ರದುರ್ಗದ ಕೋಟೆಯ ಒಳಹೊಕ್ಕ ನಮ್ಮನ್ನು ಬೃಹದಾಕಾರದ ಶಿಲೆಗಳು ಹಾಗೂ ಕಲ್ಲಿನ ಗೋಡೆಗಳು ಸ್ವಾಗತಿಸಿದವು ಅದರ ಮೇಲಿನ ನಾಗರಹಾವಿನ ಚಿತ್ರಗಳು ವಿಷ್ಣುವರ್ಧನ್ ,ಅಂಬರೀಶ್ ಮತ್ತು ಪುಟ್ಟಣ್ಣ ಹಾಗೂ ಆರತಿಯನ್ನು ನೆನಪು ಮಾಡಿದವು.   ಬೃಹತ್ ಕಲ್ಲು, ಬೆಟ್ಟಗಳು ಹಾಗು ದೃಶ್ಯ ಕಣಿವೆಗಳು ಸುತ್ತಮುತ್ತಲಿನಿಂದ ಕಂಡು ಬರುತ್ತವೆ.  ಈ ಕೋಟೆಯನ್ನು ಕಟ್ಟಲು ರಾಷ್ಟ್ರಕೂಟರು,ಚಾಲುಕ್ಯರು ಹಾಗು ದುರ್ಗದ  ನಾಯಕರು ವಹಿಸಿದ ಶ್ರಮ ಎದ್ದು ಕಾಣುತ್ತದೆ 

 


ಕನ್ನಡದಲ್ಲಿ ಈ ಕೋಟೆಯನ್ನು ಕಲ್ಲಿನ ಕೋಟೆ,ಉಕ್ಕಿನ ಕೋಟೆ ಹಾಗು ಏಳು ಸುತ್ತಿನ ಕೋಟೆ ಎಂದು ಸಹ  ಕರೆಯುವ ಮಹಾನ್  ಸ್ಮಾರಕಕವನ್ನು ನೋಡಲು ಪ್ರವಾಸೋದ್ಯಮ ಇಲಾಖೆಯ ಮತ್ತು ಪುರಾತತ್ವ ಇಲಾಖೆಯು ಉತ್ತಮ ಮಾಹಿತಿ ಫಲಕಗಳನ್ನು ಹಾಕಿಸಿರುವುದು ಬಹಳ ಉತ್ತಮ ಅಂಶವಾಗಿದೆ.

ಆ ಫಲಕಗಳ ಆಧಾರದ ಮೇಲೆ ಕೋಟೆಯಲ್ಲಿ ಪ್ರಮುಖವಾಗಿ ಪ್ರವಾಸಿಗರು ನೋಡಬಹುದಾದ 25 ಪ್ರದೇಶಗಳ ಪಟ್ಟಿ ಮಾಡಿದ್ದಾರೆ.

ಅವುಗಳನ್ನು ನೋಡಲು ನಕ್ಷೆ ಮತ್ತು ಆ ಸ್ಥಳಗಳ ವಿವರ ನೀಡಿರುವುದು ಪ್ರಶಂಸನಾರ್ಹ .


ವಿಜಯ ಕರ್ನಾಟಕ