09 ಆಗಸ್ಟ್ 2022

ಬಂದು ಬಿಡು ಅಮ್ಮ.....

 ನಾನು  ಚಿಕ್ಕವನಿದ್ದಾಗ ಹೆದರಿಸುತ್ತಿದ್ದೆ

ಅಗೋ ಬಂತು ನೋಡು ಗುಮ್ಮ |

ದೊಡ್ಡವನಾಗಿರುವೆ.... ಈಗಲೂ 

ಭಯವಾಗುತ್ತಿದೆ ನನ್ನೇಕೆ ಬಿಟ್ಟುಹೋದೆ

ಬೇಗ ಬಂದು ಬಿಡು ಅಮ್ಮಾ ||


ಸಿಹಿಜೀವಿ 

ನಮ್ಮ ಧ್ವಜ ...


 #ನಮ್ಮ_ರಾಷ್ಟ್ರಧ್ವಜ 


ಧ್ವಜವೆಂದರೆ ಬಟ್ಟೆಯಲ್ಲ

ಮಹಾನ್ ಅಸ್ಮಿತೆ ,ಅದು

ಹೊಂದಿದೆ ಕೇಸರಿ ಬಿಳಿ ಹಸಿರು |

ಮನೆ ಮನೆಯಲೂ ಹಾರಾಡಿಸಿ

ತೋರಿಸುವೆವು  ಧ್ವಜವು ಭಾರತೀಯರ ಉಸಿರು ||


#ಸಿಹಿಜೀವಿ 


07 ಆಗಸ್ಟ್ 2022

ಅಂದನಾ ತಿಂಮ..


ವಿಮರ್ಶೆ ೫೦

ಅಂದನಾ ತಿಂಮ

ಬೀಚಿ ಪ್ರಕಾಶನದಿಂದ ಹೊರಬಂದಿರುವ ಅಂದನಾ ತಿಂಮ ಪುಸ್ತಕ ಬೀಚಿಯರೇ ಹೇಳುವಂತೆ ಇದು ಅವರ ಐವತ್ತೊಂದನೇ ಅಪರಾಧ .ಈ ಪುಸ್ತಕ ಓದಿದ ಅಪರಾಧಕ್ಕೆ ನನಗೆ ನಿಜವಾಗಿಯೂ ಬಹಳ ಸಂತಸದ ಶಿಕ್ಷೆ ಲಭಿಸಿತು ಎಂದು ಹೇಳಲು ಸಂತಸವಾಗುತ್ತದೆ .
ಪುಸ್ತಕ ವಿಮರ್ಶಾ ಕಾರ್ಯದಲ್ಲಿ ಇದು ನನಗೆ ಸುವರ್ಣ ಸಂಭ್ರಮ ನಾನು ಓದಿ ನನ್ನ ಅನಿಸಿಕೆ ಬರೆವ ಕಾರ್ಯದಲ್ಲಿ ಇದು ಐವತ್ತನೇ ಪುಸ್ತಕ! ನೂರಾರು ಪುಸ್ತಕ ಓದಿದ್ದರೂ ಕೆಲವೇ ಪುಸ್ತಕಗಳ ಬಗ್ಗೆ ಅನಿಸಿಕೆ ಬರೆಯುವ ಮನಸಾಗಿ ಅದು ಐವತ್ತು ತಲುಪಿದೆ. ಬೀಚಿಯವರ ಪುಸ್ತಕಕ್ಕೆ ವಿಮರ್ಶೆ ಬರೆಯಲು ಎಂಟೆದೆ ಬೇಕು .ನಾನು ಕೇವಲ ಅವರ ಪುಸ್ತಕದ ಬಗ್ಗೆ ನಾಲ್ಕು ಅಭಿಪ್ರಾಯ ಹೇಳಬಹುದು.
ಅಂದನಾ ತಿಂಮ  ಮುಕ್ತಕ, ಹನಿಗವನ, ಕವನ ಮುಂತಾದ ಪ್ರಕಾರಗಳ ಪುಸ್ತಕ .ಎಂದಿನಂತೆ ತಮ್ಮ ಮೊನಚು ವಿಡಂಬನಾತ್ಮಕ ಬರಹ ನಮ್ಮನ್ನು ಸೆಳೆಯುತ್ತದೆ.
ಬೀಚಿಯವರೇ ಹೇಳಿರುವಂತೆ ಕೃತಿ ರಚನೆ ಬರೆಯುವವರು  ತಮ್ಮ ಆತ್ಮ ತೃಪ್ತಿಗಾಗಿ ಮಾಡುವ ಕಾಯಕ ಓದುಗರ ಪ್ರಶಂಸೆ ಮತ್ತು ವಿಮರ್ಶೆ ನಂತರದ ಪ್ರಕ್ರಿಯೆ.
ಸಮಾಜದ ಹಲವಾರು ಮುಖಗಳನ್ನು, ಅರ್ಥಾತ್ ನನ್ನ ಮನದ ಏರಿಳಿತಗಳನ್ನು ಈ ಕೃತಿಯಲ್ಲಿ ಪ್ರತಿಬಿಂಬಿಸಲು ಪ್ರಯತ್ನ ಮಾಡಿದ್ದೇನೆ. ಆದರೆ, ಸಾಧಿಸಿದ್ದೆಷ್ಟು ? ಇದಕ್ಕೆ ಉತ್ತರ, ಕನ್ನಡ ರಸಿಕ ಓದುಗರಲ್ಲಿದೆ. ಈ ಎಲ್ಲವೂ ಮೇರು ಪರ್ವತದಂತಹ ಮಹಾಕೃತಿಗಳೊ ? ಆಚಂದ್ರಾರ್ಕವಾಗಿ ಸದಾ ಇವು ಉಳಿಯುತ್ತವೆಯೇ ? ಅಥವಾ ಇವೆಲ್ಲವೂ ಒಂದು ದೊಡ್ಡ ಕಸದ ಬುಟ್ಟಿಗೆ ಅನ್ನವಾಗುತ್ತವೆಯೇ ? ಈ ಪ್ರಶ್ನೆಗಳಿಗೆ ಉತ್ತರವನ್ನು ಹೇಳುವ ಅಧಿಕಾರ ಯಾರಾದರೊಬ್ಬ ವ್ಯಕ್ತಿಗೆ ಇಲ್ಲ ಎಂಬುದಾದರೆ ಆ ವ್ಯಕ್ತಿ ನಾನು. ನನ್ನ ಕೃತಿಯ ಬೆಲೆಯನ್ನು ನಾನೇ ಕಟ್ಟಲೇ ? ಕಾಲರಾಯ ತನ್ನ ಜರಡಿಯನ್ನು ಸದಾ ಆಡಿಸುತ್ತಲೇ ಇರುತ್ತಾನೆ, ಹುಟ್ಟಿದುದೆಲ್ಲವೂ ಅದರಲ್ಲಿ ಬೀಳಲೇಬೇಕು ಇದು ಪ್ರಕೃತಿಯ ನಿಯಮ.  ಹಾರಿಹೋದುದು ಜೊಳ್ಳು, ಉಳಿದುದು ಕಾಳು. ಇಂದು ಜೊಳ್ಳಾಗಿ ಕಂಡುದುದು ನಾಳೆ ಕಾಳಾದೀತು, ಇಂದು ಕಾಳಾಗಿ ಕಂಡುದುದು ನಾಳೆ ಜೊಳ್ಳಾದೀತು. ಮೌಲ್ಯವನ್ನು ಮುಂದಿನ ಪೀಳಿಗೆ ನಿರ್ಧರಿಸುತ್ತದೆ. ಆ ತಲೆನೋವು ನನಗೇಕೆ ?
“ನಿಮ್ಮ ಇಷ್ಟು ಕೃತಿಗಳಲ್ಲಿ ಅತ್ಯುತ್ತಮ ಕೃತಿ  ಯಾವುದು ?” ಎಂದೊಬ್ಬ ನನ್ನ ಕಿರಿಯ ಮಿತ್ರರು ಹೇಳಿದರು. ಇದುವರೆಗೂ ಆಗಿರುವ ಕೃತಿಗಳಲ್ಲಿ ಒಂದೂ ಅಲ್ಲ, ಆ ಅತ್ಯುತ್ತಮ ಕೃತಿ ಇನ್ನು ಮೇಲಾಗಬೇಕು ಎಂಬುದಷ್ಟೇ ನನ್ನ ಉತ್ತರ. ಈ ಜೀವಮಾನದಲ್ಲಿ ಅದು ಆಗಬಹುದು. ಆಗದೆಯೂ ಇರಬಹುದು. ಆಗದಿದ್ದಲ್ಲಿ ನನಗೆ ದುಃಖವೂ ಇಲ್ಲ. ಬೇರಿನ್ನಾರಾದರೂ ಮಾಡಿ ಯಾರು ಎಂಬ ಆಶೆ ಇದೆ, ನಾನಿದುವರೆಗೂ ಮಾಡಿರುವ ಕೆಲಸದಿಂದ ನನಗೆ ಸಂಪೂರ್ಣ ತೃಪ್ತಿ ಆಗಿದೆ, ಇನ್ನು ನಾನು ಮಾಡುವುದೇನೂ ಉಳಿದಿಲ್ಲ ಎಂದು ಕಾಲು ಚಾಚಿ ಕುಳಿತವನು ಇನ್ನು ಬದುಕಿರುವ ಅವಶ್ಯಕತೆಯಾದರೂ ಏನಿದೆ ? ಆಗಬೇಕಾದ ಕೆಲಸ ಇದೆ ಎಂಬುದಕ್ಕೆ ನಾನಿನ್ನೂ ಬದುಕಿರುವುದೇ ಸಾಕ್ಷಿ. ಕೈಲಿರುವ ಪೇನಾ ಕೆಳಕ್ಕೆ ಬಿದ್ದ ನಂತರ ಸಾಹಿತಿ ಸಾಯಬಾರದು, ಅವನು ಸತ್ತ ನಂತರ ಅವನ ಕೈಲಿರುವ ಪೇನಾ ಕೆಳಕ್ಕೆ ಬೀಳಬೇಕು." ಎಂಬ ಮಾತುಗಳು ಯುವ ಬರಹಗಾರರಿಗೆ ಪಾಠದಂತಿವೆ.

ಈ ಪುಸ್ತಕದಲ್ಲಿ ಮುದ್ರಿತವಾಗಿರುವ ನನ್ನ ಕಾಡಿದ  ಕೆಲ ಸಾಲುಗಳ ಬಗ್ಗೆ ಗಮನಹರಿಸುವುದಾದರೆ
“ಬದುಕಲಿಕೆ ತಿನಬೇಕು, ತಿನ್ನಲು ಬದುಕಲ್ಲ”
"ಗುರಿ ಬೇಕು ಬಾಳಿಂಗೆ, ಗುರಿ ಹಿರಿದು ಬೇಕು”
ಎಂಬುದಾಗಿ ಎಚ್ಚರಿಕೆ ಕೊಡುತ್ತಾ, ಆತ್ಮಮೆಚ್ಚುವಂತೆ ಜೀವನ
ನಡೆಸಬೇಕೆನ್ನುತ್ತಾರೆ ಬೀಚಿಯವರು .

“ದೊಡ್ಡ ಜೇಬಿದೆ ಇವಗೆ, ಹೃದಯ ಬಹು ಚಿಕ್ಕದು; ದೊಡ್ಡ ಹೃದಯದವಗೆ ಚಿಕ್ಕ ಜೇಬು"
ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೆ?
“ಎಲೆ, ಎಲೆ ಹೋಗಲಿ, ಬೇರು ಒಣಗಿಸಬೇಡ
ಬಾಳವೃಕ್ಷದ ಬೇರು ನಂಬಿಕೆಯೊ ತಿಂಮ”
ದೇವರಲ್ಲಿ ನಂಬಿಕೆ, ತಂದೆ-ತಾಯಿಗಳಲ್ಲಿ ನಂಬಿಕೆ, ಮಡದಿ ಮಕ್ಕಳಲ್ಲಿ
ನಂಬಿಕೆ, ತನ್ನಲ್ಲೇ ತನಗೆ ನಂಬಿಕೆ-ಜೀವನದ ಭಾಗ್ಯವೆಲ್ಲ ನಂಬಿಕೆಯ ಆಧಾರದ ಮೇಲಿದೆ. 'ನಂಬಿ ಕೆಟ್ಟವರಿಲ್ಲವೊ' ಎಂಬುದು ದಾಸರು ಕೊಟ್ಟ ಅಭಯ!
ಕಾಲಪ್ರವಾಹದಲ್ಲಿ ರಾಜ್ಯ-ಸಾಮ್ರಾಜ್ಯಗಳೂ, ಮತ ಮಠಗಳೂ, ಭಾಷಾ ಸಾಹಿತ್ಯಗಳೂ, ಕಲಾ-ವೃತ್ತಿಗಳೂ ಕೊಚ್ಚಿಕೊಂಡು ಹೋದವು, ನಾಗರಿಕತೆ ಗಳೆಷ್ಟೋ ಮಣ್ಣುಗೂಡಿದವು. “ಮಾನವತೆ ನಿಂತಿಹದು” ಅಂದನಲ್ಲದೆ
'ಮಂಕುತಿಮ್ಮ' ! ತಿಂಮನೂ ಸಹ “ದೈವಕಿಂತಲು ದೊಡ್ಡದಿನ್ನೊಂದು ಇದೆ ಎನಗೆ ಮಾನವತೆಯೇ ದಾರಿ, ನಡೆಯೋ”
ಎಂದು ಬೆನ್ನು ತಟ್ಟುತ್ತಾನೆ.
ಅನ್ನುವಾಗ ಬೀchiಯವರು ನಮ್ಮ ದೃಷ್ಟಿಗೊಂದು ಹೊಸ ತಿರುವನ್ನೇ
ಕೊಡುತ್ತಾರೆ.
“ಮಕ್ಕಳೊಂದಿಗೆ ಆಟ ಅದು ಸ್ವರ್ಗ ತಿಂದು ಮಕ್ಕಳೇ ದೇವರು | ಹೌದೇನೋ ತಿಂಮ?”
ಬಾಳ ಸಾರ್ಥಕತೆಗೆ ಹೊಸ ದಾರಿ ತೋರಿಸುತ್ತಾರೆ. ಜೀವನ ನಮಗೆ ಸಹ್ಯವಾಗಬೇಕಾದರೆ ಏನು ಮಾಡಬೇಕೆಂಬುದನ್ನು ಬೀchi ಯವರು
“ಎಲ್ಲರೂ ನಗಬೇಕು, ನಗು ಜೀವದುಸಿರು,
ಬಲ್ಲವರ ಹಾಸ್ಯ ರಸಕವಳದೂಟ” ಎಂದು ಹೇಳಿ ನಗು ನಗುತಾ ಬಾಳಬೇಕು ಎಂದು ಕರೆನೀಡಿದ್ದಾರೆ.

ಒಟ್ಟಾರೆ ಬೀಚಿಯವರ ಈ ಪುಸ್ತಕ ಓದುತ್ತಿದ್ದಾಗ ಕಾವ್ಯ ಓದುತ್ತಲೇ ಜೀವನದ ಸತ್ಯಗಳ ಬಗ್ಗೆ ಪ್ರವಚನ ಕೇಳಿದ ಅನುಭವವನ್ನು ಪಡೆದೆ .ನೀವು ಇಂತಹ ಅನುಭವ ಪಡೆಯಬೇಕಾದರೆ  ಒಮ್ಮೆ ತಿಂಮ ಏನಂದ ಎಂದು ಓದಲೇಬೇಕು.

ಪುಸ್ತಕದ ಹೆಸರು: ಅಂದನಾ ತಿಂಮ
ಲೇಖಕರು: ಬೀಚಿ
ಪ್ರಕಾಶನ: ಬೀಚಿ ಪ್ರಕಾಶನ
ಬೆಲೆ: 125₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

 

06 ಆಗಸ್ಟ್ 2022

ಹಂಪಿ ವಿಜಯನಗರ ...


 


ವಿಮರ್ಶೆ ೪೯


ಹಂಪಿ ವಿಜಯನಗರ  


ಹಂಪಿ ವಿಜಯನಗರ ಒಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಇದರಲ್ಲಿ ಬರುವ  ಹತ್ತೊಂಬತ್ತು ಬರಹಗಳಲ್ಲಿ  ಒಂದೊಂದು ಬರಹವೂ ವಿಜಯನಗರ ಇತಿಹಾಸ ಸಂಶೋಧನೆಯ ಒಂದೊಂದು ಸವಾಲುಗಳನ್ನು ಪ್ರತಿನಿಧಿಸುವಂತಹದು. ಪ್ರೊ. ಲಕ್ಷಣ್ ತೆಲಗಾವಿ ಯವರು ಪ್ರತಿಯೊಂದು ಬರಹಕ್ಕೂ ಆಯ್ಕೆಮಾಡಿಕೊಂಡಿರುವ ವಿಷಯ, ಸಂಗ್ರಹಿಸಿರುವ ವಿಪುಲ ಅಕರಸಾಮಗ್ರಿ   ವಿಷಯದ ಒಳಹೊಕ್ಕು ನೋಡಿರುವ ಪರಿ ಇವೆಲ್ಲವೂ ನಮಗೆ  ಬೆರಗನ್ನುಂಟುಮಾಡುತ್ತವೆ . ಈ ಸಂಕಲನದಲ್ಲಿರುವ ಬಹುತೇಕ ಬರಹಗಳು ಸಂಶೋಧನಾತ್ಮಕ ವಾಗಿದ್ದು, ಪ್ರಥಮಬಾರಿಗೆ ಹಲವಾರು ಹೊಸ ವಿಷಯಗಳನ್ನು ಪ್ರಕಟಪಡಿಸುವಲ್ಲಿ ಯಶಸ್ವಿಯಾಗಿವೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಮಾತ್ರವಲ್ಲ, ವಿದ್ವಾಂಸರಿಗೂ ಸಂಶೋಧಕ ರಿಗೂ ಈ ಬರಹ ಸಂಗ್ರಹ ಹೆಚ್ಚಿನ ಪ್ರಯೋಜನವುಳ್ಳ ಪುಸ್ತಕ. ಹಲವಾರು ವರ್ಷಗಳಿಂದ  ಪರಿಶ್ರಮವಹಿಸಿ ಸಿದ್ಧಪಡಿಸಲಾಗಿರುವ ಇಲ್ಲಿಯ ಬರಹಗಳು  ಹಿರಿಯ ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿಯವರ ವಿದ್ವತ್ತಿಗೆ  ಹಿಡಿದಿರುವ ಕನ್ನಡಿಯಂತಿವೆ. ಹಂಪಿ ಸ್ಮಾರಕಗಳು ಪ್ರೇರಣೆಯ ಪ್ರತೀಕಗಳಾಗಿದ್ದರೆ, ತೆಲಗಾವಿಯವರ ಇಂತಹ ಬರಹಗಳು ಸ್ಫೂರ್ತಿಯ ಸೆಲೆಗಳಾಗಿವೆ. 

 ಈ ಪುಸ್ತಕದಲ್ಲಿ ನನ್ನ ಗಮನವನ್ನು ಗಾಢವಾಗಿ ಸೆಳೆದ ಬರಹವೆಂದರೆ 'ಒಂದನೇ ಬುಕ್ಕನ ನಾಣ್ಯದ ಮರುಪರಿಶೀಲನೆಯ ನೆಲೆಯಲ್ಲಿ ಆತನ ಶಿಲ್ಪದ ಶೋಧ' ಎಂಬುದು. ಸಂಶೋಧನ ಬರವಣಿಗೆಗೆ ಇದೊಂದು ಅತ್ಯುತ್ತಮ ಉದಾಹರಣೆ. ಪ್ರೊ. ತೆಲಗಾವಿಯವರ ಆಳವಾದ ಅಧ್ಯಯನವನ್ನು ಸಮರ್ಥಿಸುವ ಬರಹವಿದು. ವಿಷಯವನ್ನು ಬೆಳೆಸುವುದು, ವಿವಿಧ ಆಯಾಮಗಳ ಮೂಲಕ ಅದನ್ನು ವಿಶ್ಲೇಷಿಸುವುದು, ತಾರ್ಕಿಕವಾಗಿ ಅಂತ್ಯಗೊಳಿಸುವುದು ಈ ಸಾಧ್ಯತೆಗಳನ್ನು ಅವರು ಇಲ್ಲಿ ಬಹು ಸಮರ್ಪಕವಾಗಿ ತೋರಿಸಿಕೊಟ್ಟಿದ್ದಾರೆ. ಕೆಲವು ನಾಣ್ಯಶಾಸ್ತ್ರಜ್ಞರು ಕೈಗೊಂಡ ಅವಸರದ ಅಥವಾ ಉದ್ದೇಶಪೂರ್ವಕ ಅಧ್ಯಯನದ ಕಾರಣವಾಗಿ ಒಂದನೇ ಬುಕ್ಕನ ನಾಣ್ಯವನ್ನು ತಪ್ಪಾಗಿ ಗುರುತಿಸಿ ಪ್ರಚಾರಕ್ಕೆ ತಂದುದನ್ನು ಪ್ರೊ. ತೆಲಗಾವಿಯವರು ಸಾಧಾರವಾಗಿ ಖಂಡಿಸಿದ್ದಾರೆ.ಅವರ ನಿಲುವು ನಿರ್ಣಯಗಳನ್ನು ಪ್ರಶ್ನಿಸಿದ್ದಾರೆ. ಅವರ ಸಂಶೋಧನೆಯ ಫಲವಾಗಿ ಚಿತ್ರದುರ್ಗ ಬೆಟ್ಟದಲ್ಲಿ ಒಂದನೇ ಬುಕ್ಕನ ಸಮಪ್ರಮಾಣದ ಕುಳಿತಿರುವ ಭಂಗಿಯ ಶಿಲ್ಪ ಬೆಳಕಿಗೆ ಬಂದುದನ್ನು ಕರ್ನಾಟಕದ ವಿದ್ವಾಂಸರು ಗಮನಿಸಬೇಕು.


ಕನ್ನಡದ ಬಖೈರುಸಾಹಿತ್ಯ ಕುರಿತು ಆಳವಾಗಿ ಅಧ್ಯಯನ ಮಾಡಿದವರಲ್ಲಿ ಪ್ರೊ. ತೆಲಗಾವಿಯವರೂ ಒಬ್ಬರು. ಈ ಸಂಕಲನದಲ್ಲಿ ಸೇರಿರುವ 'ರಾಮರಾಜನ ಬಖೈರು: ಪುನರಾವಲೋಕನ' ಎಂಬ ಬರಹವು ಅವರ ಆಳವಾದ ಚಿಂತನೆಯನ್ನು ದೃಢಪಡಿಸುತ್ತದೆ. ಈ ಬಖೈರ್ನ ಅಧ್ಯಯನಮಾರ್ಗವನ್ನು ಪರಿಶೀಲಿಸುವುದರೊಡನೆ, ಈ ಬಖೈರ್ನ ಹುಟ್ಟಿನ ಜತೆಯಲ್ಲಿ ಕಾಣಿಸಿಕೊಂಡ ಇತರ ಪರ್ಶಿಯನ್ಗ್ರಂಥಗಳ ತುಲನೆಯನ್ನೂ ಅವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಂಪ್ರದಾಯಗಳ ಪಠ್ಯಗಳಲ್ಲಿಯ ವ್ಯತ್ಯಾಸಗಳನ್ನು ಸ್ಥೂಲವಾಗಿ ಯಾದರೂ ಪ್ರಸ್ತಾಪಿಸಿದ್ದಾರೆ. ಇದರೊಡನೆ, ಈ ಬಖೈರ್ನ ಉಪಯುಕ್ತತೆ, ವಿಶೇಷಗಳು ಹಾಗೂ ಇತಿಮಿತಿಗಳನ್ನು ಕುರಿತು ಸೂಕ್ಷ್ಮವಾಗಿ ವಿವರಿಸಿದ್ದಾರೆ.


ಪ್ರೊ. ತೆಲಗಾವಿಯವರು ಶ್ರೀಕೃಷ್ಣದೇವರಾಯನ ಆಡಳಿತಾವಧಿಯಲ್ಲಿದ್ದ ವಿಜಯನಗರ ಸೇನೆಯ ವಿವರವಂತೂ ತೀರಾ ರೋಚಕವಾದುದು, ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಸೇನಾಸಂಖ್ಯೆ ಇತ್ಯಾದಿ ಮಾಹಿತಿ ಕುತೂಹಲ ಕಾರಿಯಾಗಿದೆ. ಈಗಾಗಲೇ ಈ ಸಂಬಂಧದಲ್ಲಿ ವಿದೇಶಿ ಪ್ರವಾಸಿಗರ ಬರಹಗಳನ್ನಾಧರಿಸಿ ಸ್ವಲ್ಪಮಟ್ಟಿಗೆ ಇತರ ಇತಿಹಾಸಕಾರರು ಬರೆದಿದ್ದರೂ ಅವುಗಳ ಪುನರಾವಲೋಕನ ದೊಡನೆ ಪ್ರೊ. ತೆಲಗಾವಿಯವರು ಕೆಲವು ನೂತನಾಂಶಗಳನ್ನು ಪ್ರಸ್ತಾಪಿಸಿದ್ದಾರೆ.


ಈಗಾಗಲೇ ಕೆಲವಾರು ವಿಜಯನಗರ ಶಾಸನಗಳ   ಪತ್ತೆಹಚ್ಚಿ ಬೆಳಕಿಗೆ ತರುವುದರೊಡನೆ, ಅವುಗಳ ಅಳವಾದ ಅಧ್ಯಯನ ಕೈಗೊಂಡ ಪ್ರೊ, ತೆಲಗಾವಿಯವರು, ಒಂದನೆಯ ಬುಕ್ಕ ಹಾಗೂ ಅವನ ಅಧೀನದ ರಾಜಪ್ರತಿನಿಧಿಗಳ ಶಾಸನಗಳನ್ನು ಮರು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ಸಂಕಲನದಲ್ಲಿ ಸೇರಿರುವ 'ದೊಡ್ಡೇರಿ ,ಹರ್ತಿಕೋಟೆ ಶ್ರೀರೇವಣ ಸಿದ್ಧೇಶ್ವರಮಠದ ಸಂಗ್ರಹದಲ್ಲಿರುವ ಒಂದನೇ ಬುಕ್ಕ ಮತ್ತು ರಾಮರಾಯರಿಗೆ ಸಂಬಂಧಿಸಿದ ತಾಮ್ರಪಟಗಳ ನಕಲು ಪ್ರತಿಗಳು ಬರಹವು ಅವರ ಪಾಲಿಗೆ ಸವಾಲಿನದಾಗಿದ್ದು, ಈಗ ಕಾಗದದ ಮೇಲೆ ಉಳಿದುಕೊಂಡಿರುವ ಮೂಲಶಾಸನಪಾಠಗಳನ್ನು ಸಂಶೋಧನಾತ್ಮಕವಾಗಿ ಅಧಿಕೃತಗೊಳಿಸುವ ಕಾರ್ಯದಲ್ಲಿ ಅವರು ಹೆಜ್ಜೆಯಿರಿಸಿದ್ದಾರೆ. ಈ ದಾಖಲೆಗಳನ್ನು ಪರಿಶೀಲನೆ ಗೊಳಪಡಿಸಿ ಅವುಗಳಿಂದ ಕೆಲವು ವಾಸ್ತವಾಂಶಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.


ವಿಜಯನಗರ ಇತಿಹಾಸದ ಸಮಗ್ರತೆ ಕುರಿತು ಎಷ್ಟು ಹೇಳಿದರೂ ಕಡಿಮೆಯೇ, ಕರ್ನಾಟಕದಲ್ಲಿ ಈ ಇತಿಹಾಸದ ಬಗೆಗೆ ನಡೆದಿರುವ ಸಂಶೋಧನೆಗಳಿಗೆ ಹೊರಬಿದ್ದಿರುವ ಪ್ರಕಟಣೆಗಳಿಗೆ ಲೆಕ್ಕವೇ ಇಲ್ಲ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಇತಿಹಾಸ ಅಧ್ಯಯನದಲ್ಲಿ ತೊಡಗಿಸಿ ಕೊಂಡಿರುವ ವಿದ್ವಾಂಸರ ಸಂಖ್ಯೆಯೂ ಬಹು ದೊಡ್ಡದು ಆದರೂ ಹಂಪಿ ಸ್ಮಾರಕಗಳು ಹಾಗೂ ವಿಜಯನಗರ ಸಾಮ್ರಾಟರ ಇತಿಹಾಸ- ಇವುಗಳ ಅಧ್ಯಯನ  ಪೂರ್ಣಗೊಂಡಿಲ್ಲ. ತೋಡಿದಷ್ಟೂ ದೂರೆಯುವ  ಆಕರಸಂಪತ್ತಾಗಲಿ, ಬರೆದು ಮತ್ತೆ ಮತ್ತೆ ಎದುರಾಗುವ  ಚರ್ಚಾಸ್ಪದ ಸಂಗತಿಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ .ಆ ಚರ್ಚೆಗಳಿಗೆ ತೆಲಗಾವಿರವರ ಈ ಪುಸ್ತಕ ಸಮರ್ಪಕವಾದ ಉತ್ತರ ಎಂಬುದು ನನ್ನ ಅಭಿಪ್ರಾಯ.



ಪುಸ್ತಕದ ಹೆಸರು: ಹಂಪಿ ವಿಜಯನಗರ

ಲೇಖಕರು: ಪ್ರೊ ಲಕ್ಷಣ್ ತೆಲಗಾವಿ.

ಪ್ರಕಾಶನ: ವಾಲ್ಮೀಕಿ ಸಾಹಿತ್ಯ ಸಂಪದ.ಹರ್ತಿಕೋಟೆ.

ಬೆಲೆ: 200₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು


 


ವಿಮರ್ಶೆ ೪೮
ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು .

ಆತ್ಮೀಯರು ಪ್ರಕಾಶಕರು ಹಾಗೂ ಲೇಖಕರಾದ ಎಂ ವಿ ಶಂಕರಾನಂದ ರವರು ಬರೆದ ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು ಎಂಬ ಪುಸ್ತಕವನ್ನು ನಾನು ಓದಲು ಕಾರಣ ನಾನೂ ಒಬ್ಬ ಹವ್ಯಾಸಿ ಕಲಾವಿದ .ಈ ಪುಸ್ತಕದಲ್ಲಿ ಲೇಖಕರು ಕರ್ನಾಟಕದ ರಂಗಭೂಮಿಯ ಸಾಧಕರಲ್ಲಿ ಪ್ರಮುಖವಾದ  64 ನಕ್ಷತ್ರಗಳ ಬಗ್ಗೆ ಪರಿಚಯಿಸಿದ್ದಾರೆ.
ಜೊತೆಯಲ್ಲಿ ಕರ್ನಾಟಕದ ರಂಗಭೂಮಿಯ ಬಗ್ಗೆ ವಿವರಣೆಯನ್ನು ಸಹ ನೀಡಿರುವುದು ಪ್ರಶಂಸನಾರ್ಹ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರದಲ್ಲಿನ ಒಂದು ಪುರೋಹಿತ ಕುಟುಂಬದಲ್ಲಿ,ಜನಿಸಿದ ಶಂಕರಾನಂದ ರವರು ಹುಟ್ಟೂರಿನಲ್ಲೇ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ,ಮುಂದೆ ಮಧುಗಿರಿಯಲ್ಲಿ ಪಿಯುಸಿ, ಪದವಿ ವ್ಯಾಸಂಗ  ಮಾಡಿ  ಮೈಸೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ) ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಮಾಡಿರುವ ಇವರಿಗೆ
ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ . ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ, ಜಿಲ್ಲಾ ಪತ್ರಿಕೆಗಳ ಉಪ ಸಂಪಾದಕರೂ, ಅಂಕಣಕಾರರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಆನಂದ್ ಪಬ್ಲಿಕೇಷನ್ಸ್ ಸಂಸ್ಥೆ ಆರಂಭಿಸಿ ಹಲವಾರು ಉದಯೋನ್ಮುಖ ಕವಿ, ಲೇಖಕರ ಕೃತಿಗಳನ್ನು ಹೊರತರುವ ಜೊತೆ ಜೊತೆಯಲ್ಲಿ ಅವರೂ ಸಹ ಹಲವಾರು ಕೃತಿಗಳನ್ನು ರಚನೆ ಮಾಡುತ್ತಾ ಕನ್ನಡ ತಾಯಿಗೆ   ಸೇವೆ ಸಲ್ಲಿಸುತ್ತಿದ್ದಾರೆ .

ರಂಗಭೂಮಿ ಎಂದರೆ, ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ, ಸಾಹಿತ್ಯ ಕೃತಿಯಾಗಿ, ರಂಗ ಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳ ರಂಗಭೂಮಿ ರೂಪು ಗೊಂಡುದುದನ್ನು ನಾವು ಕಾಣುತ್ತೇವೆ.

ಕನ್ನಡದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು. ಕನ್ನಡ ಜನಪದ ರಂಗಭೂಮಿಯಿಂದ ಪ್ರೇರಣೆ ಪಡೆದ ಮರಾಠಿಯ ಸೀತಾಸ್ವಯಂವರ ನಾಟಕ ಮಹಾರಾಷ್ಟ್ರದ ಉದ್ದಗಲಕ್ಕೂ ಪ್ರದರ್ಶನ ಕಂಡು ಮುಂಬಯಿ ಪ್ರಾಂತ್ಯಕ್ಕೊಳಪಟ್ಟ ಉತ್ತರ ಕರ್ನಾಟಕದ ಪಟ್ಟಣಗಳಿಗೂ ಲಗ್ಗೆ ಇಟ್ಟು, ಕನ್ನಡ ನೆಲದಲ್ಲಿ ಮರಾಠಿ ಮತ್ತು ಪಾರ್ಸಿ ಕಂಪನಿಗಳದ್ದೆ ನಾಟಕದಾಟ, ನಾಟಕದೂಟ, ಕಾರುಬಾರುಗಳಾದಾಗ ಕನ್ನಡಿಗರ ಸ್ವಾಭಿಮಾನ ಕೆಣಕುವಂತಾಯಿತು. ಈ ವೇಳೆಗೆ ಶಾಂತ ಕವಿಗಳೆಂದು ಹೆಸರಾದ ಸಕ್ಕರಿ ಬಾಳಾಚಾರ್ಯರು ಮರಾಠಿ ನಾಟಕಕ್ಕೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ರಚಿಸುವಲ್ಲಿ ಕಾರಣರಾದರು. ಹೀಗೆ ಸಮಗ್ರ ಕರ್ನಾಟಕ ವೃತ್ತಿ ರಂಗ ಭೂಮಿ ಇತಿಹಾಸದಲ್ಲಿ ಗದಗಿಗೆ ಪ್ರಥಮ ಕೀರ್ತಿ ಸಲ್ಲುವಂತಾಯಿತು.

1856ನೇ ಜನವರಿ 15ರಂದು ಜನಿಸಿದ ಸಕ್ಕರಿ ಬಾಳಾಚಾರ್ಯರು ಗದಗಿನ ಶ್ರೀಮಂತ ಉಮಚಗಿ ಲಚಪ್ಪ ನಾಯಕ ಎಂಬುವರ ಪ್ರೋತ್ಸಾಹದಿಂದ ಹಲವಾರು ಯುವಕರ ನೆರವಿನಿಂದ 1872ರಲ್ಲಿ ವೀರನಾರಾಯಣ ಪ್ರಸಾದಿತ ನಾಟಕ ಮಂಡಳಿ' ಸ್ಥಾಪಿಸಿದರು. ಇದು ಉತ್ತರ ಕರ್ನಾಟಕದ ಪ್ರಥಮ ವೃತ್ತಿ ನಾಟಕ ಸಂಸ್ಥೆ.

ಮುಂದೆಯೂ ಪಾರಸಿ ಕಂಪನಿಗಳ ಪಾರಮ್ಯ ಮೈಸೂರು ಪ್ರಾಂತ್ಯದಲ್ಲಿ ಮುಂದುವರೆದಾಗ, ಮೈಸೂರಿನ ಕೆಲವು ಮಂದಿ ಕಲಾವಿಲಾಸಿಗಳು ಸುಮಾರು 1879-80ರಲ್ಲಿ ಸಿ.ಆರ್.ರಘುನಾಥರಾಯರ ನೇತೃತ್ವದಲ್ಲಿ ಒಂದು ಕನ್ನಡ ನಾಟಕ ಸಂಘವನ್ನು ಆರಂಭಿಸಿ 'ಶ್ರೀ ಶಾಕುಂತಲ ಕರ್ನಾಟಕ ನಾಟಕಸಭಾ' ಎಂದು ಹೆಸರಿಟ್ಟು ಕಾರ್ಯನಿರತರಾದರು. ಮುಂದೆ ಮೈಸೂರು ಒಡೆಯರಾದ ಚಾಮರಾಜೇಂದ್ರರ ನೆರವಿನೊಂದಿಗೆ 1880ರಲ್ಲಿ 'ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಎಂಬ ಹೆಸರಿನಿಂದ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಕನ್ನಡ ರಂಗಭೂಮಿಗೆ ಭದ್ರ ಬುನಾದಿ ಹಾಕಿ ಸತ್‌ ಸಂಪ್ರದಾಯವೊಂದನ್ನು ನಿರ್ದಿಷ್ಟವಾಗಿ ರೂಪಿಸಿದರು.

1882ರಲ್ಲಿ ಅರಮನೆಗೆ ಸೇರಿದ ವಿದ್ಯಾರ್ಥಿಗಳಿಂದ 'ಮೈಸೂ‌ರ್  ರಾಯಲ್ ಸ್ಕೂಲ್ ಡ್ರಾಮ್ಯಟಿಕ್ ಕಂಪನಿ' ಸ್ಥಾಪನೆಯಾಯಿತು. ಮುಂದೆ ಪೆರಿಸ್ವಾಮಿ ಅಯ್ಯಂಗಾರ್ -ಚಿನ್ನಸ್ವಾಮೀ ಅಯ್ಯಂಗಾರ್ ಸಹೋದರರ 'ರಸಿಕ ಮನೋಲ್ಲಾಸಿನಿ ನಾಟಕ ಕಂಪನಿ' ಜನ್ಮ ತಾಳಿತು. ನಂತರ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ನಿಂತ ಮೇಲೆ ಅದರಲ್ಲಿನ ಕೆಲವರು ಸೇರಿ 1919ರಲ್ಲಿ 'ಶ್ರೀಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ' ಎಂದು ಎನ್. ಸುಬ್ಬಣ್ಣನವರ ನೇತೃತ್ವದಲ್ಲಿ ಹೊಸ ತಂಡ ರಚನೆಯಾಗಿ ಮುನ್ನಡೆಯಿತು. ಇದರಲ್ಲಿ ಮುಂದೆ ಆರ್. ನಾಗೇಂದ್ರರಾವ್, ಮಳವಳ್ಳಿ ಸುಂದರಮ್ಮನವರು ಬೇರೆ ಬೇರೆ ಕಾಲದಲ್ಲಿ ಆಡಳಿತ ಹೊಣೆ ಹೊತ್ತರು.

ನಾಟ್ಯ ಶಿರೋಮಣಿ ವರದಾಚಾರ್ಯರು 'ರತ್ನಾವಳಿ ನಾಟಕ ಸಭಾ'ವನ್ನು 1902ರಲ್ಲಿ ಸ್ಥಾಪಿಸಿದರು. ಮೈಸೂರು ರಂಗಭೂಮಿಯಲ್ಲಿ ಮೊಟ್ಟಮೊದಲು ವಿದ್ಯುತ್‌ ಶಕ್ತಿಯ ಸಹಾಯದಿಂದ ದೀಪಾಲಂಕಾರ, ಬಣ್ಣಗಳ ವಿಧವನ್ನು ಅಳವಡಿಸಿದರು.

ಮೈಸೂರು ಪ್ರಾಂತ್ಯದಲ್ಲಿ ಇನ್ನೊಂದು ಹೆಸರಾಂತ ಸಂಸ್ಥೆ 'ಶ್ರೀ ಗುಬ್ಬಿ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ' 1884ರಲ್ಲಿ ಗುಬ್ಬಿ ಚಂದಣ್ಣನವರ ನೇತೃತ್ವದಲ್ಲಿ ಹುಟ್ಟಿತು. ಹೀಗೆ ಜನನವಾದ ಕನ್ನಡ ರಂಗಭೂಮಿ ಇಂದು ವಿಶ್ವದ ಗಮನವನ್ನು ಸೆಳೆಯುವ ಮಟ್ಟಿಗೆ ಬೆಳೆದು ನಿಂತಿದೆ.
ಹೀಗೆ ಲೇಖಕರು ಕನ್ನಡ ರಂಗಭೂಮಿ ಬೆಳೆದುಬಂದ ಹಾದಿಯ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಕನ್ನಡದ ಅರವತ್ತನಾಲ್ಕು  ಕಲಾ ಪ್ರತಿಭೆಗಳ ಸಾಧನೆಗಳ ಬಗ್ಗೆ ಈ ಕೃತಿಯಲ್ಲಿ ಪರಿಚಯಿಸಿಕೊಡುವ ಪ್ರಯತ್ನ ಮಾಡಿರುವ ಲೇಖಕರು ಈ ಕೆಳಗಿನ ನಕ್ಷತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ಟಿ.ಎಸ್.ಲೋಹಿತಾಶ್ವ,ಅವಿನಾಶ್ ಕಾಮತ್, ಮುಖ್ಯಮಂತ್ರಿ ಚಂದ್ರು, ಮಂಡ್ಯ ರಮೇಶ್, ಕೆ.ಮಂಜುನಾಥಯ್ಯ,ಉಮಾಶ್ರೀ ,ಲೋಕನಾಥ್, ಲಕ್ಷ್ಮೀ ಚಂದ್ರಶೇಖರ್
,ಪ್ರಕಾಶ್ ಬೆಳವಾಡಿ,ಅಹಲ್ಯಾ ಬಲ್ಲಾಳ್ ,ಡಿ.ಆರ್. ಕಾಮತ್
, ಬಿ.ಆರ್. ಮಂಜುನಾಥ್ ,ಚಂದ್ರಶೇಖರ ಕಂಬಾರ , ವಾಸುದೇವ ಗಿರಿಮಾಜಿ
, ಧೀರೇಂದ್ರ ಗೋಪಾಲ್, ಜಿ.ವಿ.ಶಿವಾನಂದ್‌ ,ಶಾಂತಾ ಹುಬೈಕ‌
, ಯಶವಂತ ಸರದೇಶಪಾಂಡೆ,
ವಸಂತ ನಾಕೋಡ , ಕಾಳಪ್ಪ ಪತ್ತಾರ, ಕೆ.ಎಸ್.ಪೂರ್ಣಿಮಾ , ರೋಹಿಣಿ ಹಟ್ಟಂಗಡಿ,ಡಾ. ವಿಜಯಾ,ಆದವಾನಿ ಲಕ್ಷ್ಮೀದೇವಿ,ಎಂ.ವಿ.ರಾಜಮ್ಮ,ಕಲ್ಪನಾ
ಬಿ.ಆರ್. ಪಂತಲು,ಕಣಗಲ್ ಪ್ರಭಾಕರ ಶಾಸ್ತ್ರಿ , ಉದಯಕುಮಾರ್
ಸಿ.ಜಿ.ವೆಂಕಟೇಶ್ವರ,ಸುಪ್ರಿಯಾ ಎಸ್. ರಾವ್,ಬಾಲಕೃಷ್ಣ ನಿಲ್ದಾಣ್ಣಾಯ, ಸರೋಜಾ ಹೆಗಡೆ , ಸದಾನಂದ ಸುವರ್ಣ, ವಾಸುಕಿ ವೈಭವ್ , ಭರತ್ ಕುಮಾರ್,ಮರಿಯಪ್ಪ, ನಾಟೇಕ‌ರ್ ಮೋಹನ್,ಕಿಕ್ಕೇರಿ ಕೃಷ್ಣಮೂರ್ತಿ,ಕಿಶೋರಿ ಬಲ್ಲಾಳ್‌,ಆಶಾಲತಾ,ಗಿರಿಜಾ ಲೋಕೇಶ್,  ಲೋಕೇಶ್,
ವೈಶಾಲಿ ಕಾಸರವಳ್ಳಿ,ಕಲ್ಪನಾ ನಾಗನಾಥ್, ದಾಕ್ಷಾಯಿಣಿ ಭಟ್,
ಪ್ರೇಮಾ ಕಾರಂತ,ಯಮುನಾ ಮೂರ್ತಿ,ದೀಪಾ ರವಿಶಂಕರ್,ಪ್ರಸನ್ನ,
ಚಿಟ್ಟಾಣಿ ರಾಮಕೃಷ್ಣ ಹೆಗಡೆ,
ಕಾಳಿಂಗ ನಾವಡ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ
ಹೊ. ಮಂಜುನಾಥ ಭಾಗವತ, ಕ. ಮಂಜುನಾಥ ಭಾಗವತ. ಲೀಲಾವತಿ ಬೈಪಡಿತ್ತಾಯ,ಬಲಿಪ ನಾರಾಯಣ ಭಾಗವತ,ಶೇಣಿ ಗೋಪಾಲಕೃಷ್ಣ ಭಟ್
ನೆಟ್ಟೂರು ನಾರಾಯಣ ಭಾಗವತ .
ಈ ಕಲಾವಿದರ ಬಗ್ಗೆ ತಿಳಿದು ಬಹಳ ಸಂತೋಷವಾಯಿತು.

ಈ ಪುಸ್ತಕದ  ಮುಖಪುಟ ಗಮನ ಸೆಳೆಯುತ್ತದೆ ಅದಕ್ಕೆ ವಿ ಎಲ್ ಪ್ರಕಾಶ್ ರವರು ಅಭಿನಂದನಾರ್ಹರು .ಪುಸ್ತಕ ಅಚ್ಚುಕಟ್ಟಾಗಿ ಬರಲು ಅದರ ಒಳ ವಿನ್ಯಾಸ ಸಹ ಚೆನ್ನಾಗಿ ಮೂಡಿಬಂದಿರುವುದು ಗಮನಾರ್ಹ. ಕಲಾ ನಕ್ಷತ್ರಗಳಿಗೆ ಪೂರಕವಾದ ಚಿತ್ರಗಳು ಬಹಳ ಚೆನ್ನಾಗಿವೆ .ಒಟ್ಟಾರೆ ಈ ಪುಸ್ತಕ ಚೆನ್ನಾಗಿದೆ ರಂಗಭೂಮಿಯ ಬಗ್ಗೆ ಆಸಕ್ತಿ ಇರುವ ಮತ್ತು ಕಲಾರಾಧಕರು ಈ ಪುಸ್ತಕ ಓದಲೇಬೇಕು

ಪುಸ್ತಕದ ಹೆಸರು:ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು
ಲೇಖಕರು: ಎಂ ವಿ ಶಂಕರಾನಂದ
ಪ್ರಕಾಶನ: ಆನಂದ್ ಪಬ್ಲಿಕೇಶನ್ .ತುಮಕೂರು
ಬೆಲೆ:450₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು