06 ಆಗಸ್ಟ್ 2022

ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು


 


ವಿಮರ್ಶೆ ೪೮
ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು .

ಆತ್ಮೀಯರು ಪ್ರಕಾಶಕರು ಹಾಗೂ ಲೇಖಕರಾದ ಎಂ ವಿ ಶಂಕರಾನಂದ ರವರು ಬರೆದ ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು ಎಂಬ ಪುಸ್ತಕವನ್ನು ನಾನು ಓದಲು ಕಾರಣ ನಾನೂ ಒಬ್ಬ ಹವ್ಯಾಸಿ ಕಲಾವಿದ .ಈ ಪುಸ್ತಕದಲ್ಲಿ ಲೇಖಕರು ಕರ್ನಾಟಕದ ರಂಗಭೂಮಿಯ ಸಾಧಕರಲ್ಲಿ ಪ್ರಮುಖವಾದ  64 ನಕ್ಷತ್ರಗಳ ಬಗ್ಗೆ ಪರಿಚಯಿಸಿದ್ದಾರೆ.
ಜೊತೆಯಲ್ಲಿ ಕರ್ನಾಟಕದ ರಂಗಭೂಮಿಯ ಬಗ್ಗೆ ವಿವರಣೆಯನ್ನು ಸಹ ನೀಡಿರುವುದು ಪ್ರಶಂಸನಾರ್ಹ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರದಲ್ಲಿನ ಒಂದು ಪುರೋಹಿತ ಕುಟುಂಬದಲ್ಲಿ,ಜನಿಸಿದ ಶಂಕರಾನಂದ ರವರು ಹುಟ್ಟೂರಿನಲ್ಲೇ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ,ಮುಂದೆ ಮಧುಗಿರಿಯಲ್ಲಿ ಪಿಯುಸಿ, ಪದವಿ ವ್ಯಾಸಂಗ  ಮಾಡಿ  ಮೈಸೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ) ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಮಾಡಿರುವ ಇವರಿಗೆ
ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ . ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ, ಜಿಲ್ಲಾ ಪತ್ರಿಕೆಗಳ ಉಪ ಸಂಪಾದಕರೂ, ಅಂಕಣಕಾರರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಆನಂದ್ ಪಬ್ಲಿಕೇಷನ್ಸ್ ಸಂಸ್ಥೆ ಆರಂಭಿಸಿ ಹಲವಾರು ಉದಯೋನ್ಮುಖ ಕವಿ, ಲೇಖಕರ ಕೃತಿಗಳನ್ನು ಹೊರತರುವ ಜೊತೆ ಜೊತೆಯಲ್ಲಿ ಅವರೂ ಸಹ ಹಲವಾರು ಕೃತಿಗಳನ್ನು ರಚನೆ ಮಾಡುತ್ತಾ ಕನ್ನಡ ತಾಯಿಗೆ   ಸೇವೆ ಸಲ್ಲಿಸುತ್ತಿದ್ದಾರೆ .

ರಂಗಭೂಮಿ ಎಂದರೆ, ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ, ಸಾಹಿತ್ಯ ಕೃತಿಯಾಗಿ, ರಂಗ ಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳ ರಂಗಭೂಮಿ ರೂಪು ಗೊಂಡುದುದನ್ನು ನಾವು ಕಾಣುತ್ತೇವೆ.

ಕನ್ನಡದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು. ಕನ್ನಡ ಜನಪದ ರಂಗಭೂಮಿಯಿಂದ ಪ್ರೇರಣೆ ಪಡೆದ ಮರಾಠಿಯ ಸೀತಾಸ್ವಯಂವರ ನಾಟಕ ಮಹಾರಾಷ್ಟ್ರದ ಉದ್ದಗಲಕ್ಕೂ ಪ್ರದರ್ಶನ ಕಂಡು ಮುಂಬಯಿ ಪ್ರಾಂತ್ಯಕ್ಕೊಳಪಟ್ಟ ಉತ್ತರ ಕರ್ನಾಟಕದ ಪಟ್ಟಣಗಳಿಗೂ ಲಗ್ಗೆ ಇಟ್ಟು, ಕನ್ನಡ ನೆಲದಲ್ಲಿ ಮರಾಠಿ ಮತ್ತು ಪಾರ್ಸಿ ಕಂಪನಿಗಳದ್ದೆ ನಾಟಕದಾಟ, ನಾಟಕದೂಟ, ಕಾರುಬಾರುಗಳಾದಾಗ ಕನ್ನಡಿಗರ ಸ್ವಾಭಿಮಾನ ಕೆಣಕುವಂತಾಯಿತು. ಈ ವೇಳೆಗೆ ಶಾಂತ ಕವಿಗಳೆಂದು ಹೆಸರಾದ ಸಕ್ಕರಿ ಬಾಳಾಚಾರ್ಯರು ಮರಾಠಿ ನಾಟಕಕ್ಕೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ರಚಿಸುವಲ್ಲಿ ಕಾರಣರಾದರು. ಹೀಗೆ ಸಮಗ್ರ ಕರ್ನಾಟಕ ವೃತ್ತಿ ರಂಗ ಭೂಮಿ ಇತಿಹಾಸದಲ್ಲಿ ಗದಗಿಗೆ ಪ್ರಥಮ ಕೀರ್ತಿ ಸಲ್ಲುವಂತಾಯಿತು.

1856ನೇ ಜನವರಿ 15ರಂದು ಜನಿಸಿದ ಸಕ್ಕರಿ ಬಾಳಾಚಾರ್ಯರು ಗದಗಿನ ಶ್ರೀಮಂತ ಉಮಚಗಿ ಲಚಪ್ಪ ನಾಯಕ ಎಂಬುವರ ಪ್ರೋತ್ಸಾಹದಿಂದ ಹಲವಾರು ಯುವಕರ ನೆರವಿನಿಂದ 1872ರಲ್ಲಿ ವೀರನಾರಾಯಣ ಪ್ರಸಾದಿತ ನಾಟಕ ಮಂಡಳಿ' ಸ್ಥಾಪಿಸಿದರು. ಇದು ಉತ್ತರ ಕರ್ನಾಟಕದ ಪ್ರಥಮ ವೃತ್ತಿ ನಾಟಕ ಸಂಸ್ಥೆ.

ಮುಂದೆಯೂ ಪಾರಸಿ ಕಂಪನಿಗಳ ಪಾರಮ್ಯ ಮೈಸೂರು ಪ್ರಾಂತ್ಯದಲ್ಲಿ ಮುಂದುವರೆದಾಗ, ಮೈಸೂರಿನ ಕೆಲವು ಮಂದಿ ಕಲಾವಿಲಾಸಿಗಳು ಸುಮಾರು 1879-80ರಲ್ಲಿ ಸಿ.ಆರ್.ರಘುನಾಥರಾಯರ ನೇತೃತ್ವದಲ್ಲಿ ಒಂದು ಕನ್ನಡ ನಾಟಕ ಸಂಘವನ್ನು ಆರಂಭಿಸಿ 'ಶ್ರೀ ಶಾಕುಂತಲ ಕರ್ನಾಟಕ ನಾಟಕಸಭಾ' ಎಂದು ಹೆಸರಿಟ್ಟು ಕಾರ್ಯನಿರತರಾದರು. ಮುಂದೆ ಮೈಸೂರು ಒಡೆಯರಾದ ಚಾಮರಾಜೇಂದ್ರರ ನೆರವಿನೊಂದಿಗೆ 1880ರಲ್ಲಿ 'ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಎಂಬ ಹೆಸರಿನಿಂದ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಕನ್ನಡ ರಂಗಭೂಮಿಗೆ ಭದ್ರ ಬುನಾದಿ ಹಾಕಿ ಸತ್‌ ಸಂಪ್ರದಾಯವೊಂದನ್ನು ನಿರ್ದಿಷ್ಟವಾಗಿ ರೂಪಿಸಿದರು.

1882ರಲ್ಲಿ ಅರಮನೆಗೆ ಸೇರಿದ ವಿದ್ಯಾರ್ಥಿಗಳಿಂದ 'ಮೈಸೂ‌ರ್  ರಾಯಲ್ ಸ್ಕೂಲ್ ಡ್ರಾಮ್ಯಟಿಕ್ ಕಂಪನಿ' ಸ್ಥಾಪನೆಯಾಯಿತು. ಮುಂದೆ ಪೆರಿಸ್ವಾಮಿ ಅಯ್ಯಂಗಾರ್ -ಚಿನ್ನಸ್ವಾಮೀ ಅಯ್ಯಂಗಾರ್ ಸಹೋದರರ 'ರಸಿಕ ಮನೋಲ್ಲಾಸಿನಿ ನಾಟಕ ಕಂಪನಿ' ಜನ್ಮ ತಾಳಿತು. ನಂತರ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ನಿಂತ ಮೇಲೆ ಅದರಲ್ಲಿನ ಕೆಲವರು ಸೇರಿ 1919ರಲ್ಲಿ 'ಶ್ರೀಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ' ಎಂದು ಎನ್. ಸುಬ್ಬಣ್ಣನವರ ನೇತೃತ್ವದಲ್ಲಿ ಹೊಸ ತಂಡ ರಚನೆಯಾಗಿ ಮುನ್ನಡೆಯಿತು. ಇದರಲ್ಲಿ ಮುಂದೆ ಆರ್. ನಾಗೇಂದ್ರರಾವ್, ಮಳವಳ್ಳಿ ಸುಂದರಮ್ಮನವರು ಬೇರೆ ಬೇರೆ ಕಾಲದಲ್ಲಿ ಆಡಳಿತ ಹೊಣೆ ಹೊತ್ತರು.

ನಾಟ್ಯ ಶಿರೋಮಣಿ ವರದಾಚಾರ್ಯರು 'ರತ್ನಾವಳಿ ನಾಟಕ ಸಭಾ'ವನ್ನು 1902ರಲ್ಲಿ ಸ್ಥಾಪಿಸಿದರು. ಮೈಸೂರು ರಂಗಭೂಮಿಯಲ್ಲಿ ಮೊಟ್ಟಮೊದಲು ವಿದ್ಯುತ್‌ ಶಕ್ತಿಯ ಸಹಾಯದಿಂದ ದೀಪಾಲಂಕಾರ, ಬಣ್ಣಗಳ ವಿಧವನ್ನು ಅಳವಡಿಸಿದರು.

ಮೈಸೂರು ಪ್ರಾಂತ್ಯದಲ್ಲಿ ಇನ್ನೊಂದು ಹೆಸರಾಂತ ಸಂಸ್ಥೆ 'ಶ್ರೀ ಗುಬ್ಬಿ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ' 1884ರಲ್ಲಿ ಗುಬ್ಬಿ ಚಂದಣ್ಣನವರ ನೇತೃತ್ವದಲ್ಲಿ ಹುಟ್ಟಿತು. ಹೀಗೆ ಜನನವಾದ ಕನ್ನಡ ರಂಗಭೂಮಿ ಇಂದು ವಿಶ್ವದ ಗಮನವನ್ನು ಸೆಳೆಯುವ ಮಟ್ಟಿಗೆ ಬೆಳೆದು ನಿಂತಿದೆ.
ಹೀಗೆ ಲೇಖಕರು ಕನ್ನಡ ರಂಗಭೂಮಿ ಬೆಳೆದುಬಂದ ಹಾದಿಯ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಕನ್ನಡದ ಅರವತ್ತನಾಲ್ಕು  ಕಲಾ ಪ್ರತಿಭೆಗಳ ಸಾಧನೆಗಳ ಬಗ್ಗೆ ಈ ಕೃತಿಯಲ್ಲಿ ಪರಿಚಯಿಸಿಕೊಡುವ ಪ್ರಯತ್ನ ಮಾಡಿರುವ ಲೇಖಕರು ಈ ಕೆಳಗಿನ ನಕ್ಷತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ಟಿ.ಎಸ್.ಲೋಹಿತಾಶ್ವ,ಅವಿನಾಶ್ ಕಾಮತ್, ಮುಖ್ಯಮಂತ್ರಿ ಚಂದ್ರು, ಮಂಡ್ಯ ರಮೇಶ್, ಕೆ.ಮಂಜುನಾಥಯ್ಯ,ಉಮಾಶ್ರೀ ,ಲೋಕನಾಥ್, ಲಕ್ಷ್ಮೀ ಚಂದ್ರಶೇಖರ್
,ಪ್ರಕಾಶ್ ಬೆಳವಾಡಿ,ಅಹಲ್ಯಾ ಬಲ್ಲಾಳ್ ,ಡಿ.ಆರ್. ಕಾಮತ್
, ಬಿ.ಆರ್. ಮಂಜುನಾಥ್ ,ಚಂದ್ರಶೇಖರ ಕಂಬಾರ , ವಾಸುದೇವ ಗಿರಿಮಾಜಿ
, ಧೀರೇಂದ್ರ ಗೋಪಾಲ್, ಜಿ.ವಿ.ಶಿವಾನಂದ್‌ ,ಶಾಂತಾ ಹುಬೈಕ‌
, ಯಶವಂತ ಸರದೇಶಪಾಂಡೆ,
ವಸಂತ ನಾಕೋಡ , ಕಾಳಪ್ಪ ಪತ್ತಾರ, ಕೆ.ಎಸ್.ಪೂರ್ಣಿಮಾ , ರೋಹಿಣಿ ಹಟ್ಟಂಗಡಿ,ಡಾ. ವಿಜಯಾ,ಆದವಾನಿ ಲಕ್ಷ್ಮೀದೇವಿ,ಎಂ.ವಿ.ರಾಜಮ್ಮ,ಕಲ್ಪನಾ
ಬಿ.ಆರ್. ಪಂತಲು,ಕಣಗಲ್ ಪ್ರಭಾಕರ ಶಾಸ್ತ್ರಿ , ಉದಯಕುಮಾರ್
ಸಿ.ಜಿ.ವೆಂಕಟೇಶ್ವರ,ಸುಪ್ರಿಯಾ ಎಸ್. ರಾವ್,ಬಾಲಕೃಷ್ಣ ನಿಲ್ದಾಣ್ಣಾಯ, ಸರೋಜಾ ಹೆಗಡೆ , ಸದಾನಂದ ಸುವರ್ಣ, ವಾಸುಕಿ ವೈಭವ್ , ಭರತ್ ಕುಮಾರ್,ಮರಿಯಪ್ಪ, ನಾಟೇಕ‌ರ್ ಮೋಹನ್,ಕಿಕ್ಕೇರಿ ಕೃಷ್ಣಮೂರ್ತಿ,ಕಿಶೋರಿ ಬಲ್ಲಾಳ್‌,ಆಶಾಲತಾ,ಗಿರಿಜಾ ಲೋಕೇಶ್,  ಲೋಕೇಶ್,
ವೈಶಾಲಿ ಕಾಸರವಳ್ಳಿ,ಕಲ್ಪನಾ ನಾಗನಾಥ್, ದಾಕ್ಷಾಯಿಣಿ ಭಟ್,
ಪ್ರೇಮಾ ಕಾರಂತ,ಯಮುನಾ ಮೂರ್ತಿ,ದೀಪಾ ರವಿಶಂಕರ್,ಪ್ರಸನ್ನ,
ಚಿಟ್ಟಾಣಿ ರಾಮಕೃಷ್ಣ ಹೆಗಡೆ,
ಕಾಳಿಂಗ ನಾವಡ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ
ಹೊ. ಮಂಜುನಾಥ ಭಾಗವತ, ಕ. ಮಂಜುನಾಥ ಭಾಗವತ. ಲೀಲಾವತಿ ಬೈಪಡಿತ್ತಾಯ,ಬಲಿಪ ನಾರಾಯಣ ಭಾಗವತ,ಶೇಣಿ ಗೋಪಾಲಕೃಷ್ಣ ಭಟ್
ನೆಟ್ಟೂರು ನಾರಾಯಣ ಭಾಗವತ .
ಈ ಕಲಾವಿದರ ಬಗ್ಗೆ ತಿಳಿದು ಬಹಳ ಸಂತೋಷವಾಯಿತು.

ಈ ಪುಸ್ತಕದ  ಮುಖಪುಟ ಗಮನ ಸೆಳೆಯುತ್ತದೆ ಅದಕ್ಕೆ ವಿ ಎಲ್ ಪ್ರಕಾಶ್ ರವರು ಅಭಿನಂದನಾರ್ಹರು .ಪುಸ್ತಕ ಅಚ್ಚುಕಟ್ಟಾಗಿ ಬರಲು ಅದರ ಒಳ ವಿನ್ಯಾಸ ಸಹ ಚೆನ್ನಾಗಿ ಮೂಡಿಬಂದಿರುವುದು ಗಮನಾರ್ಹ. ಕಲಾ ನಕ್ಷತ್ರಗಳಿಗೆ ಪೂರಕವಾದ ಚಿತ್ರಗಳು ಬಹಳ ಚೆನ್ನಾಗಿವೆ .ಒಟ್ಟಾರೆ ಈ ಪುಸ್ತಕ ಚೆನ್ನಾಗಿದೆ ರಂಗಭೂಮಿಯ ಬಗ್ಗೆ ಆಸಕ್ತಿ ಇರುವ ಮತ್ತು ಕಲಾರಾಧಕರು ಈ ಪುಸ್ತಕ ಓದಲೇಬೇಕು

ಪುಸ್ತಕದ ಹೆಸರು:ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು
ಲೇಖಕರು: ಎಂ ವಿ ಶಂಕರಾನಂದ
ಪ್ರಕಾಶನ: ಆನಂದ್ ಪಬ್ಲಿಕೇಶನ್ .ತುಮಕೂರು
ಬೆಲೆ:450₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ೬/೮/೨೨ ಪ್ರಕಟವಾದ ನನ್ನ ಪುಸ್ತಕ ವಿಮರ್ಶೆ " ಧ್ವಜವೆಂದರೆ ಬಟ್ಟೆಯಲ್ಲ "*


 

05 ಆಗಸ್ಟ್ 2022

ಸೋನಾಗಾಚಿ....


 


ವಿಮರ್ಶೆ ೪೭ 

ಸೋನಾಗಾಚಿ


ಹದಿಮೂರು ಕಥೆಗಳನ್ನು ಹೊಂದಿರುವ "ಸೋನಾಗಾಚಿ " ಕಥಾ ಸಂಕಲನದ ಪ್ರತಿಯೊಂದು ಕಥೆಯೂ ವಿಭಿನ್ನವಾದ ಕಥಾವಸ್ತುವನ್ನು ಹೊಂದಿವೆ. ಇಲ್ಲಿನ ಬಹುತೇಕ ಕಥೆಗಳು ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟ ಗೊಂಡಂಥವುಗಳೇ ಆಗಿವೆ. ಸುಧಾ ವಾರಪತ್ರಿಕೆ ಮತ್ತು ಸಂಜೆ ವಾಣಿ ವಿಶೇಷಾಂಕದಲ್ಲಿ ಪ್ರಕಟವಾದ ಕಥೆಗಳು ಇವೆ ಕೆಲವನ್ನು ಈಗಾಗಲೇ ಓದಿರುವೆ.ಎಲ್ಲಾ ಕಥೆಗಳು ಒಂದೆಡೆ ಇರುವುದರಿಂದ ಆಗಾಗ ಓದಿ ಮೆಲುಕು ಹಾಕಬಹುದು.

ಹಂದ್ರಾಳ ರವರು ಪಾತ್ರಗಳ ಸೃಷ್ಟಿ ಮಾಡುವಲ್ಲಿ ಘಟನೆಗಳನ್ನು ಕಟ್ಟಿಕೊಡುವುದರಲ್ಲಿ ನಿಸ್ಸೀಮರು 

ರಾಮಲಾಲ್, ಅತ್ತರು ಮಾರುವ ಸಲೀಮ್, ಮಾದೇಗೌಡ  ಕೆಲವು ಉದಾಹರಣೆಗಳು .ಈ ಪಾತ್ರಗಳು  ಸಾಮಾನ್ಯರಲ್ಲಿ ಸಾಮಾನ್ಯರಾದರೂ ಇವರೆಲ್ಲ ಕೊನೆಗೆ ತಮ್ಮ ನಿಜಕ್ಕೆ ಮರಳುವ ಧೀಮಂತರು, ಹಂದ್ರಾಳರ ಕತೆಗಳಿಗಾಗಿಯೇ ಇವರು ನಿಜವಾಗುವ ಪಾತ್ರಗಳಲ್ಲ; ನಿಜ ಜೀವನದಲ್ಲಿಯೂ ನಾವು ಕಾಣುವ ಇಂತಹ ಅಪರೂಪದ ವ್ಯಕ್ತಿಗಳೇ ಹಂದ್ರಾಳರ ಕತೆಗಳಲ್ಲಿ ಹೊಸದಾಗಿ ಜೀವಧಾರಣೆ ಮಾಡಿ ಹೀರೋಗಳಾಗುತ್ತಾರೆ. ಅನೂಹ್ಯಳ ಸುತ್ತ ಕಟ್ಟಿಕೊಂಡಿದ್ದ ಬ್ರೆಕ್ಟನ ಕನಸು ಮುರಿದು ಬಿದ್ದಾಗ ಆತ ವಾಸ್ತವಕ್ಕೆ ಮರಳುತ್ತಾನೆ. 'ಸೋನಾಗಾಚಿ'ಯ ಅಲ್ಲಮಪ್ರಭು ವೇಶ್ಯೆಯನ್ನು ವರಿಸಿ ಉದ್ಧಾರವಾಗುತ್ತಾನೆ. ಇವರೆಲ್ಲರ ಉದ್ಧಾರ ಕತೆಗಾರನ ಕಲ್ಪನೆಯಲ್ಲಷ್ಟೆ ರೂಪು ಪಡೆದದ್ದಲ್ಲ. ನಮ್ಮ ಸುತ್ತ ಕಾಣುವ ವ್ಯಕ್ತಿಗಳ ದೈನಂದಿನ ವಾಸ್ತವಗಳೇ ಇಲ್ಲಿ ಕತೆಯಾಗುತ್ತವೆ. ಸಾಮಾನ್ಯ ಮನುಷ್ಯನ ವಿವೇಕ, ಮತ್ತು ಜಾಣತನಗಳನ್ನು ಈ ಕತೆಗಳು ಗೆಲ್ಲಿಸುತ್ತವೆ. ಬೈ ಎಲೆಕ್ಷನ್‌ನಲ್ಲಿ ಹುರಿಯಾಳಾಗಿ ನಿಲ್ಲುವ ಗಿರಿಗೌಡನಳ್ಳಿಯ ಮಾದೇಗೌಡನ ಒಂದು ಕತೆಯಿದೆ ಇಲ್ಲಿ. ಮಾದೇಗೌಡ ಇಂದಿನ ನಡತೆಗೆಟ್ಟ ಶಕ್ತಿರಾಜಕಾರಣಕ್ಕೆ ತನ್ನ ಹುಂಬತನದಲ್ಲಿ ಬಲಿಯಾದವನು. ಅವನು ಚುನಾವಣೆಯಲ್ಲಿ ಸೋತು, ಕೈ ಬರಿದಾಗಿ ನಿಂತಾಗ, ಹತಾಶೆಗೊಳ್ಳದೆ ಮತ್ತೆ ತನ್ನ ರಾಗಿ ಮಿಶನ್ ಕೆಲಸಕ್ಕೆ ನಿಲ್ಲುತ್ತಾನೆ. ಇವು ಹಂದ್ರಾಳರ ಕಥಾಜಗತ್ತು. ಓದುಗರ ಮನವೊಲಿಸಲು ಹಂದ್ರಾಳರು ಎಲ್ಲಿಯೂ ಕಲ್ಪನೆಯನ್ನು ಉತ್ರ್ಪೇಕ್ಷಿಸು ವುದಿಲ್ಲ. ಇವರು ಕಾಣುವ ವಾಸ್ತವ ಜಗತ್ತು ತೃಣಮಾತ್ರವೂ ಕಲ್ಪಿತ ಎನಿಸುವುದಿಲ್ಲ.  


 'ಪೆಂಚಾಲಯ್ಯನ ಪೆನ್ಷನ್ ಫೈಲು', 'ಕತ್ತಲು ಮತ್ತು ಮಳೆ' 'ಇನ್ನಾದರೂ ಸಾಯಬೇಕು' ಕತೆಗಳನ್ನು ಇಲ್ಲಿ ಉಲ್ಲೇಖಿಸಲೇಬೇಕಿದೆ. ಪೆಂಚಾಲಯ್ಯ ತನ್ನ ಪೆನ್ಷನ್ ಫೈಲಿನಲ್ಲಿ ಸಿಕ್ಕಿಕೊಂಡ ಒಂದು ತೊಡಕನ್ನು ನಿವಾರಿಸಿಕೊಳ್ಳುವ ಕತೆ 'ಪೆಂಚಾಲಯ್ಯನ ಪೆನ್ಷನ್ ಫೈಲು', ಹೆಚ್ಚಿನ ಸಂದರ್ಭಗಳಲ್ಲಿ, ಮನುಷ್ಯ ತನ್ನ ಸಹಜವಾದ ಜಾಣತನವನ್ನೇ ನೆಚ್ಚಿಕೊಳ್ಳುತ್ತಾನೆ. ಆಳದಲ್ಲಿ ನಾವೆಲ್ಲ. ಅಂತಹ ಉಪಾಯಗಾರರೇ, ಕಾನೂನಿನ ಕುರುಡನ್ನೂ ನೌಕರಶಾಹಿಯ ಸಂಚುಗಳನ್ನೂ ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹಂದ್ರಾಳರು ನಿರೂಪಿಸುವ ಸುಲಭದ ಮಾರ್ಗವನ್ನು ಹಿಡಿಯದೆ ಮನುಷ್ಯರ ತಿಳಿವಳಿಕೆಗೆ ಸಂಭ್ರಮಿಸುವ ಸಂಯಮ ತೋರುತ್ತಾರೆ.  

 ಹಂದ್ರಾಳರ ಕಥಾಜಗತ್ತಿನ ಮನುಷ್ಯರನ್ನ ನಿಕಟವಾಗಿ ನೋಡುವುದರಲ್ಲಿ ಒಂದು ಆನಂದವಿದೆ. ಇವರೆಲ್ಲ ಏಕಾಂತದಲ್ಲಿ ತಮ್ಮ ನೈತಿಕತೆಗೆ ನಿಜ ಎನ್ನುವಂತೆ ಯೋಚಿಸಬಲ್ಲವರು. ಯೋಚನೆಯಂತೆ ಬದುಕಿ ತೋರಿಸಬಲ್ಲ ಈ ಧೀರರು ಯಾವತ್ತೂ ಸದ್ಯಕ್ಕೆ ಸ್ಪಂದಿಸುತ್ತಾರೆ: 'ಪರಿವರ್ತನೆ' ಕತೆಯ ರಾಜಕಾರಣಿ ತಿರುಬೋಕಿ ಜೈಲಿನಲ್ಲಿರುವಾಗ ತನ್ನ ಅಂತರಂಗದ ಮಾತನ್ನು ಆಲಿಸುವುದು ಒಂದು ಲೋಕೋತ್ತರ ವಿದ್ಯಮಾನ. 'ಕತ್ತಲು ಮತ್ತು ಮಳೆ'ಯ ಶಾಲ್ಮಲ ಕೂಡ ತನ್ನ ಆತ್ಮಸಾಕ್ಷಿಯಂತೆ ವರ್ತಿಸುವವಳು. ಆದರೆ ಲೋಕದ ರೀತಿಯನ್ನೂ ಬಲ್ಲವಳು. ಆದ್ದರಿಂದ ತನ್ನನ್ನು ಹಿಂದೊಮ್ಮೆ ಪ್ರೀತಿಸಿದವನ ಬಳಿಗೆ ಆಕೆ ಮರಳಿದಾಗ ಅದೊಂದು ಅನೈತಿಕ ಕ್ರಿಯೆ ಎನಿಸುವುದಿಲ್ಲ.


ಈ ಸಂಕಲನದಲ್ಲಿರುವ ಒಂದು ಅಪೂರ್ವವಾದ ಕತೆ 'ಇನ್ನಾದರೂ ಸಾಯಬೇಕು'. ಹಂದ್ರಾಳರ ಕತೆಗಳಲ್ಲಿ ಅಸಹಜವಾದ ಸಾವು ಕಡಿಮೆ, ಆದರೆ ಈ ಕತೆಯ ಪ್ರೊಫೆಸರ್ ಋಗ್ವದಿ ನೇಣು ಬಿಗಿದುಕೊಂಡು ಸಾಯುತ್ತಾರೆ. ಪ್ರೊ. ಋಗ್ವದಿ ಸಾಯುವ ಉದ್ದೇಶ ಹೊಂದಿರಲಿಲ್ಲವಾದರೂ, ತಮ್ಮ ತಲೆಯೆಲ್ಲ ತುಂಬಿಕೊಂಡ ಸಾವಿನ ಧ್ಯಾನದಿಂದ, ಆತ್ಮಹತ್ಯೆಯ ಒಂದು ಸನ್ನಿವೇಶವನ್ನು ರಿಹರ್ಸಲ್ ಮಾಡುವ ಲಘುವಾದ ಮನಸ್ಥಿತಿಯಲ್ಲೇ ತಂದುಕೊಂಡ ಸಾವು ಇದು. ಸಾಯಬೇಕೆಂದು ಬೆಂಕಿ ಹಚ್ಚಿಕೊಂಡು ಸಾಯದೆ ಆಸ್ಪತ್ರೆ ಸೇರಿದ್ದ ಶಿಷ್ಯ ವೆಂಕಟೇಶ್ ಯಾದವನನ್ನು ಕಾಣಲು ಹೋಗುವ ಪ್ರೊ. ಋಗ್ವದಿ ಅಲ್ಲಿ ಹೇಳುವ ಮಾತು ಅವರ ಮನಸ್ಥಿತಿಯನ್ನು ತೋರುವಂಥದ್ದು, “ಎಂಥ ಅವಿವೇಕಿಯಯ್ಯಾ ನೀನು! ಅದಕ್ಕೊಂದು ಪ್ರಾಪರ್ ಪ್ರಿಪರೇಶನ್ ಬೇಕಾಗುತ್ತೆ. ನೀನು ನೇಣು ಬಿಗಿದುಕೊಳ್ಳಬೇಕಾಗಿತ್ತು” ಎಂದುಬಿಡುತ್ತಾರೆ. ಮಾರನೆಯ ದಿನ ತಾನೇ “ಆರೆ, ಒಂದು ಅಟೆಂಪ್ಟ್ ಏಕೆ ಮಾಡಬಾರದು?” ಎಂದು ತನ್ನ ಕುತೂಹಲಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವ ಋಗ್ವದಿಯ ಕತೆ ಕೇಶವರೆಡ್ಡಿ ಹಂದ್ರಾಳ ಲೋಕ ವೀಕ್ಷಣೆಯ ಪ್ರತಿಭೆಗೆ ಉದಾಹರಣೆಯಾಗುತ್ತದೆ. ಈ ಕತೆ ನಮ್ಮ ವಿರುದ್ಧ ನಮ್ಮನ್ನೇ ಎಚ್ಚರಿಸುತ್ತದೆ.


ಹೀಗೆ ನಮ್ಮ ಮನೆಯ ಸುತ್ತ ಮುತ್ತ ನಡೆಯುವ ಪಾತ್ರಗಳನ್ನು ಚಿತ್ರದಲ್ಲಿ ಕಟ್ಟಿಕೊಡುವ ಕಥೆಗಳು ಕೆಲವೊಮ್ಮೆ ನಮ್ಮ ಕಥೆಯೇನೋ ಅನಿಸುವಷ್ಟು ನಮ್ಮನ್ನು ಕಾಡುತ್ತವೆ.ನೀವು ಒಮ್ಮೆ ಸೋನಾಗಾಚಿ ಓದಿಬಿಡಿ.



ಪುಸ್ತಕದ ಹೆಸರು: ಸೋನಾಗಾಚಿ

ಲೇಖಕರು: ಕೇಶವರೆಡ್ಡಿ ಹಂದ್ರಾಳ 

ಪ್ರಕಾಶನ: ಸಪ್ನ ಬುಕ್ ಹೌಸ್ .ಬೆಂಗಳೂರು

ಬೆಲೆ: 190 ₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಧ್ವಜವೆಂದರೆ ಬಟ್ಟೆಯಲ್ಲ....

 



ವಿಮರ್ಶೆ ೪೬

ಧ್ವಜವೆಂದರೆ ಬಟ್ಟೆಯಲ್ಲ .

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ "ಘರ್ ಘರ್ ತಿರಂಗಾ" ಮನೆ ಮನೆಯಲ್ಲಿ ಬಾವುಟ" ಅಭಿಯಾನ ಸದ್ದು ಮಾಡುತ್ತಿದೆ. ಇದರ ಜೊತೆಯಲ್ಲಿ ಕೆಲ ದಿನಗಳ ಹಿಂದೆ  ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ಕೆಲವು ತಿದ್ದುಪಡಿಗಳನ್ನು ತಂದು ರಾತ್ರಿ ವೇಳೆಯಲ್ಲಿ ಸಹ ದ್ವಜ ಹಾರಾಡಿಸಬಹುದು ಎಂದು ಹೇಳಿದ್ದು ವಿವಾದಕ್ಕೆ ತಿರುಗಿದ್ದು ನಮಗೆ ತಿಳಿದೇ ಇದೆ.ನಮ್ಮ ಹೆಮ್ಮೆ ಹಾಗೂ  ಅಸ್ಮಿತೆಗಳಾದ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಲಾಂಛನಗಳ ಹೆಸರಿನಲ್ಲಿ  ವಿವಾದಗಳು ಉಂಟಾಗುತ್ತಿರುವುದು ಬೇಸರದ ಸಂಗತಿ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಪರ್ವ ಕಾಲದಲ್ಲಿ ಭಾರತೀಯರು ಹೆಮ್ಮೆಯಿಂದ ತಮ್ಮ ವಾಟ್ಸಪ್  ಡೀಪಿಗಳಲ್ಲೂ ನಮ್ಮ ತಿರಂಗಾ ಹಾಕಿಕೊಂಡಿರುವುದು ದೇಶಭಕ್ತಿಯ ಜೋಶ್ ನ ಸೂಚಕ ಎಂದರೂ ತಪ್ಪಾಗಲಾರದು.
ಈ ಹಿನ್ನೆಲೆಯಲ್ಲಿ  ಸಂತೋಷ್ ಜಿ ಆರ್ ರವರು ಬರೆದ ಪುಸ್ತಕ ಧ್ವಜವೆಂದರೆ ಬಟ್ಟೆಯಲ್ಲ ಎಂಬ ಪುಸ್ತಕ ನನ್ನ ಆಕರ್ಷಿಸಿತು. ಅದರ ಟ್ಯಾಗ್ ಲೈನ್ ಓದಿದಾಗ ಪುಸ್ತಕ ಓದಲೇ ಬೇಕೆಂದು ಕೈಗೆತ್ತಿಕೊಂಡೆನು. ಆ ಟ್ಯಾಗ್ ಲೈನ್ ಈಗಿತ್ತು. " ವೇದಗಳಿಂದ ವಿವಾದಗಳವರೆಗೆ.... ಸಾಗಿ ಬಂದ ಹಾದಿ".
ಪುಸ್ತಕ ಓದಿ ಮುಗಿಸಿದಾಗ ಒಂದು ಉತ್ತಮ ಆಕರಗ್ರಂಥ ಓದಿದ ಅನುಭವವಾಯಿತು.
ಜಿ.ಆರ್. ಸಂತೋಷ್ ಅವರು ಧ್ವಜವನ್ನು ವಸ್ತುವಾಗಿ ಆಯ್ಕೆ ಮಾಡಿಕೊಂಡು ಈ ಪುಸ್ತಕ ರಚಿಸಿದ್ದಾರೆ. ಇದು ಒಂದು ರೀತಿಯಿಂದ ನಮ್ಮ ದೇಶದ ವಿವಿಧ ಯುಗಗಳ ಧ್ವಜದ ಚರಿತ್ರೆ, ಆದರೆ ಕೇವಲ ರಾಜಮಹಾರಾಜರ ಧ್ವಜಗಳನ್ನು ಚರ್ಚಿಸದೆ, ಸಾಂಸ್ಕೃತಿಕವಾಗಿ ಮಹತ್ವ ಪಡೆಯುವ, ಜನಸಾಮಾನ್ಯರ, ಮಿಡಿತಕ್ಕೆ ಸ್ಪಂದಿಸುವ ಅಂಶಗಳನ್ನು ಚರ್ಚೆಗೆ ತಂದಿರುವುದು ಸ್ವಾಗತಾರ್ಹ. ಇದರೊಂದಿಗೆ ಹೊಯ್ಸಳ, ವಿಜಯನಗರ ಮೊದಲಾದ ರಾಜವಂಶಗಳ ಧ್ವಜದ ವಿವರಗಳಿವೆ. ಪಾಲಿ ಧ್ವಜದ ಕುರಿತ ವಿಶೇಷ ಅಂಶಗಳು ಒತ್ತಟ್ಟಿಗೆ ಬಂದಿವೆ.

ಸಂತೋಷ್ ಜಿ.ಆರ್ ಕನ್ನಡದ ಉದಯೋನ್ಮುಖ ಲೇಖಕರು ಮತ್ತು ಸಂಶೋಧನ ಪ್ರವೃತ್ತಿಯನ್ನು ಹೊಂದಿರುವ ಅಧ್ಯಯನಕಾರರು. ಸಂಸ್ಕೃತಿ, ತತ್ತ್ವಶಾಸ್ತ್ರ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆ, ಆರ್ಥಿಕತೆ ಮತ್ತು ಸಂತುಲಿತ ಅಭಿವೃದ್ಧಿ ಈ ಕ್ಷೇತ್ರಗಳಲ್ಲಿ ಸಂಶೋಧನೆಯ ಕಾರ್ಯದಲ್ಲಿ ನಿರತವಾಗಿರುವ Foundation for Indic Research Studies (FIRST) ಸಂಸ್ಥೆಯಲ್ಲಿ ಆಡಳಿತಾಧಿಕಾರಿಗಳಾಗಿದ್ದಾರೆ.
ಇವರು ಮೂಲತಃ ವಿಜ್ಞಾನ ಪದವೀಧರರು, ಕಾರ್ಪೋರೇಟ್ ಉದ್ಯಮ ಕ್ಷೇತ್ರದಲ್ಲಿ ಮಾನವಸಂಪನ್ಮೂಲ ಮತ್ತು ಆಡಳಿತ ನಿರ್ವಹಣೆಯ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿ ಮತ್ತು ಯುವಜನರಲ್ಲಿ ವ್ಯಕ್ತಿತ್ವವಿಕಾಸ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅನೇಕ ಸ್ವಯಂಸೇವಾ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇತಿಹಾಸ, ಸಾಹಿತ್ಯ ಮತ್ತು ಪ್ರಾಚೀನ ವಿಜ್ಞಾನ ಪರಂಪರೆ ಇವರ ಆಸಕ್ತಿಯ ವಿಷಯ. ಇದರೊಟ್ಟಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರಜಾಗೃತಿಯ ಚಿಂತನೆಗಳನ್ನು ಹೊಂದಿರುವ ನೂರಾರು ಲೇಖನಗಳನ್ನು ಕನ್ನಡದ ಅನೇಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಪ್ರಸ್ತುತ ಪುಸ್ತಕದಲ್ಲಿ ಪ್ರಸ್ತಾವಿತ ಕೆಲ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಧ್ವಜ, ರಾಷ್ಟ್ರಗೀತೆ ಇವು ನಮ್ಮಲ್ಲಿ ಬೆಚ್ಚನೆಯ ಭಾವನೆ ಮೂಡಿಸದಿದ್ದರೆ ಎಲ್ಲವೂ ವ್ಯರ್ಥ, ರಾಜಕಾರಣಿಯ ಚಾಲಾಕಿತನ, ಸಾಹಿತಿಯ ಆತ್ಮರತಿ, ಪತ್ರಕರ್ತನ ಸ್ವಯಂಘೋಷಿತ ಜ್ಞಾನ ಎಲ್ಲವನ್ನೂ ಮೀರಿದ ಎಳೆಯ ಹುಡುಗಿಯ ಚಂಚಲತೆ, ನಿಷ್ಟುರತೆ, ಕಾವ್ಯಮಯ ಬದುಕು ಧ್ವಜಕ್ಕಿದೆ. ಇಲ್ಲದಿದ್ದರೆ ನೂರಾರು ಸೈನಿಕರು ಧ್ವಜಕ್ಕಾಗಿ ರಕ್ತ ಸುರಿಸಿದ್ದನ್ನು ವಿವರಿಸುವುದು ಕಷ್ಟ, ಧ್ವಜ ಹಾರಿಸಲು ಆದೇಶ ಹೊರಡಿಸುವುದನ್ನು ಬಿಟ್ಟು ಬೇರೆ, ಹೃದಯ ಪರಿವರ್ತನೆಯ ದಾರಿಗಳನ್ನು ಅಧಿಕಾರದಲ್ಲಿರುವವರು ಯೋಚಿಸಬೇಕು.  ಸಂತೋಷ್ ರವರು ಬರೆದಿರುವ ಪುಸ್ತಕ ಇತಿಹಾಸ, ಪರಂಪರೆ ಕುರಿತು ಮೆಚ್ಚುಗೆ, ವಿಮರ್ಶೆ ಎರಡನ್ನೂ ಬೆಳೆಸಿಕೊಳ್ಳಲು ಸಹಾಯ ಮಾಡಿದರೆ ಅವರ ಪರಿಶ್ರಮ ಸಾರ್ಥಕ.  ಯಾವುದೇ ಇತಿಹಾಸದ ಅಧ್ಯಯನ ನಮ್ಮನ್ನು ಒಳಗೇ ನೋಯುವಂತೆ, ಮಾಗುವಂತೆ ಮಾಡಬೇಕು. ಭಾರತದ ಇತಿಹಾಸದಲ್ಲಿ ಧ್ವಜ ಒಂದು ಸಂಕೇತ. ಈಗ ಎಡ, ಬಲ ಎಂದು ಕೃತಕ ಪರಿಮಿತ ಗೆರೆ ಕುಯ್ದುಕೊಂಡು ಮುಕ್ತ ಚರ್ಚೆಯೇ ಸಾಧ್ಯವಾಗುತ್ತಿಲ್ಲ.

ಲೇಖಕರು ಈ ಪುಸ್ತಕದಲ್ಲಿ ಕೇವಲ ರಾಷ್ಟ್ರ ಧ್ವಜದ ಬಗ್ಗೆ ಮಾತ್ರ ಉಲ್ಲೇಖ ಮಾಡಿಲ್ಲ ಬದಲಾಗಿ ವಿವಿಧ ಪ್ರಕಾರದ ಧ್ವಜಗಳು ಅವುಗಳ ಅರ್ಥ ಮತ್ತು ಹಿನ್ನೆಲೆಗಳನ್ನು ಸಚಿತ್ರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ರಾಮಾಯಣ ಮಹಾಭಾರತದ ಕಾಲದಲ್ಲಿ ಬಳಸಿಕೊಂಡು ಬಂದ ಧ್ವಜಗಳು ಅವುಗಳ ಅರ್ಥ ,ವಿಶ್ವವಿದ್ಯಾಲಯ ಮತ್ತು ರಾಷ್ಟ್ರ ಧ್ವಜದ ಬಗ್ಗೆ ವಿವರಗಳನ್ನು ನೀಡಿರುವರು.ಧ್ವಜ ಶಕುನಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಈ ಪುಸ್ತಕದಲ್ಲಿ ಬರುವ
ಕಣ್ಣುರಿಸಿದ ಹಸಿರು ಧ್ವಜ , ಶೌರ್ಯ ಸಾರಿದ ವೀರರು, ಮೇರೆ ಮೀರಿದ ಕನ್ನಡ ಧ್ವಜಗಳು, ವೀರ ಪರಂಪರೆಯ ಕರುನಾಡ ಧ್ವಜಗಳು ,ಪಾಲಿ ಧ್ವಜದ ವಿಶೇಷತೆ, ಪಾಲಿ ಧ್ವಜಾಧೀಶ ಇಮ್ಮಡಿ ಪುಲಕೇಶಿ,ವಿಶ್ವ ಸಾಮ್ರಾಜ್ಯ ಸ್ಥಾಪಿಸಿದ ರಾಷ್ಟ್ರಕೂಟರು,ಶಾರ್ದೂಲ ಧ್ವಜದ ವಿಜಯಗಾಥೆ, ವಿಜಯನಗರದ ವರಾಹ ಧ್ವಜ,ಕೆಳದಿಯ ಗಂಡಭೇರುಂಡ,ವಿಜಯ್ ಧ್ವಜಸ್ತಂಭಗಳು, ಧ್ವಜತಾರಿಣಿ ನಿವೇದಿತಾ, ಧ್ವಜಯುದ್ಧದಿಂದ ಸ್ವಾತಂತ್ರ್ಯದೆಡೆಗೆ,ಹಾರಾಡಿದ ಸ್ವಾತಂತ್ರ್ಯ ಧ್ವಜಗಳು,ಧ್ವಜಧಾರಿಣಿ ಮೇಡಂ ಕಾಮಾ, ಸ್ವರಾಜ್ಯ ಧ್ವಜ ಚರಕಾಂಕಿತ ತ್ರಿವರ್ಣ, ತ್ರಿವರ್ಣದ ವರ್ಣಸಂಕರ,ಧ್ವಜಾರ್ಪಣೆಗೊಂಡ ನವಸುಮಗಳು ,ಸುಭಾಷರ ವ್ಯಾಘ್ರ ಧ್ವಜ,ಆರೆಸ್ಸೆಸ್ ಮತ್ತು ರಾಷ್ಟ್ರ ಧ್ವಜ.,ಧ್ವಜವೇ ಗುರುವಾದಾಗ , ಕರ್ನಾಟಕದಲ್ಲಿ ಧ್ವಜ ಸತ್ಯಾಗ್ರಹಗಳು
ಮುಂತಾದ ಶೀರ್ಷಿಕೆಯ ಅಧ್ಯಾಯಗಳು ನಮಗೆ ವಿಶೇಷವಾದ ಜ್ಞಾನವನ್ನು ನೀಡುತ್ತವೆ.

ದೇಶವಿದೇಶಗಳಲ್ಲಿ ಈ ಪುಸ್ತಕದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದಿದೆ ಕೆಲ ಗಣ್ಯರು ಈ ಪುಸ್ತಕದ ಬಗ್ಗೆ ಆಡಿರುವ ಮಾತುಗಳಲ್ಲಿ ಕೆಲವನ್ನು ಹೇಳುವುದಾದರೆ...
"ಮನೆ ಎಂದ ಮೇಲೆ ಅದಕ್ಕೊಂದು ಸೂರು ಇರಬೇಕಲ್ಲವೇ? ಸಮುದಾಯ ಎಂದರೆ ಅದಕ್ಕೊಂದು ಅಸ್ಮಿತೆ ಇರಬೇಕಲ್ಲವೇ? ದೇಶ ಎಂದ ಮೇಲೆ ಅದನ್ನು ಸಂಕೇತಿಸುವ ಹಲವು ಕಿರೀಟಗಳು ನಮಗೆ ಹೆಮ್ಮೆಯಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಅಕ್ಷರ ಲೋಕದಲ್ಲಿ ಉತ್ತರ ಕೊಟ್ಟ ಪುಸ್ತಕ 'ಧ್ವಜವೆಂದರೆ ಬಟ್ಟೆಯಲ್ಲ'- ಇದರಲ್ಲಿನ ವಿಷಯ ವಿಸ್ತಾರ, ಚಾರಿತ್ರಿಕ ನಿಖರತೆ, ಸತ್ಯದರ್ಶನ ನಮ್ಮ ಭಾರತೀಯತೆಯ ಹೆಮ್ಮೆಯನ್ನ ಮತ್ತು ಗರಿಮೆಯನ್ನ ಇನ್ನೂ ಗಟ್ಟಿಗೊಳಿಸುತ್ತದೆ. ಓದಿಗೆ ಮನನಕ್ಕೆ ಅರಿವಿಗೆ, ಇಂದು ಅರ್ಥೈಸಿಕೊಳ್ಳಬೇಕಾದ ಪುಸ್ತಕ, ಈ ಅಕ್ಷರ ಜ್ಞಾನ ಎಂದು ಟಿ. ಎಸ್. ನಾಗಾಭರಣ ರವರು ಅಭಿಪ್ರಾಯ ಪಟ್ಟಿದ್ದಾರೆ.
"ನಮ್ಮ ರಾಷ್ಟ್ರಧ್ವಜ ರೂಪುಗೊಂಡ ಬಗೆಯ ಇತಿಹಾಸವನ್ನು ತಿಳಿಸುವುದರೊಂದಿಗೆ ಸ್ವಾತಂತ್ರ್ಯ ಚಳವಳಿಯ ಸ್ವರೂಪದ ಪಕ್ಷಿನೋಟವನ್ನೂ ನೀಡುವ ಈ ಅಪೂರ್ವ ಕೃತಿಯು ಆದಷ್ಟೂ ಬೇಗ ಇಂಗ್ಲಿಷ್ ಮತ್ತು ನಮ್ಮ ದೇಶದ ಇತರ ಪ್ರಮುಖ ಭಾಷೆಗಳಿಗೂ ಅನುವಾದಗೊಂಡು ಭಾರತದ ಸಮಸ್ತ ಮನೆ ಮನಗಳನ್ನು ತಲುಪುವಂತಾಗಲಿ ಎಂಬುದೇ ನನ್ನ ಆಶಯ ಎಂದು ಇತಿಹಾಸ ತಜ್ಞರಾದ ಸುರೇಶ್ ಮೂನ ರವರು ಮೆಚ್ಚುಗೆ ಸೂಚಿಸಿದ್ದಾರೆ.
ಭಾರತೀಯರೆಲ್ಲರೂ ಸಹ ಇಂತಹ ಮೌಲಿಕ ಕೃತಿಯನ್ನು ಓದಿ ನಮ್ಮ ಧ್ವಜ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕಿದೆ
ನೀವೂ ಸಹ ಓದುವಿರಲ್ಲವೆ?

ಪುಸ್ತಕದ ಹೆಸರು: ಧ್ವಜವೆಂದರೆ ಬಟ್ಟೆಯಲ್ಲ .
ಲೇಖಕರು: ಸಂತೋಷ್ ಜಿ ಆರ್
ಪ್ರಕಾಶನ: ಹಂಸ ಪ್ರಕಾಶನ. ಬೆಂಗಳೂರು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


ಅಪ್ಪ ಅಂದ್ರೆ ಆಕಾಶ...


 


ಅಪ್ಪ ಅಂದ್ರೆ ಆಕಾಶ. 
ವಿಮರ್ಶೆ.೪೫
ಬಹುತೇಕ ದಿನಪತ್ರಿಕೆಗಳಲ್ಲಿ ಓದಿದ್ದ ಲೇಖನಗಳ ಗುಚ್ಛ ಒಂದೇ ಕಡೆ ಓದುವ ಅವಕಾಶ ಅಪ್ಪ ಅಂದ್ರೆ ಆಕಾಶ  .ಒಮ್ಮೆ ಓದಿ ಸುಮ್ಮನಿದ್ದರೆ ಸಾಲದು ಆಗಾಗ್ಗೆ ಓದುವ ನಮಗೆ ಚೈತನ್ಯ ನೀಡುವ ಘಟನೆಗಳ ಕಣಜ ಇದು.ಇದರ ಕತೃ ಆತ್ಮೀಯರು ಸಜ್ಜನರಾದ ಎ ಆರ್ ಮಣಿಕಾಂತ್ ರವರು.
ಎ ಆರ್ ಮಣಿಕಾಂತ್
ಜನಿಸಿದ್ದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯಿತನಹಳ್ಳಿ, ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ ಆಟೊಮೊಬೈಲ್, ಒಲಿದಿದ್ದು ಪತ್ರಿಕೋದ್ಯಮ. ಮೊದಲು ಹಾಯ್ ಬೆಂಗಳೂರ್, ನಂತರ ಸಂಯುಕ್ತ ಕರ್ನಾಟಕ, ಆನಂತರ ವಿಜಯ ಕರ್ನಾಟಕದಲ್ಲಿನೌಕರಿ. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ 'ಉಭಯ ಕುಶಲೋಪರಿ ಸಾಂಪ್ರತ', 'ಹಾಡು ಹುಟ್ಟಿದ ಸಮಯ', 'ಮರೆಯಲಿ ಹ್ಯಾಂಗ', 'ಈ ಗುಲಾಬಿಯು ನಿನಗಾಗಿ' ಅಂಕಣಗಳು ಸಕಲೆಂಟು ಮಂದಿಯ ಮೆಚ್ಚುಗೆಗೆ  ಪಾತ್ರವಾದವು.  ಪ್ರಕಟವಾಗಿರುವ ಪುಸ್ತಕಗಳಲ್ಲಿ.  'ಹಾಡು ಹುಟ್ಟಿದ ಸಮಯ ಮತ್ತು ಈ ಗುಲಾಬಿಯು ನಿನಗಾಗಿ ಪುಸ್ತಕಗಳು ತಲಾ ನಾಲ್ಕು ಮುದ್ರಣಗಳನ್ನು ಕಂಡಿವೆ. 'ಅಮ್ಮ ಹೇಳಿದ ಎಂಟು ಸುಳ್ಳುಗಳು' 60 ತಿಂಗಳಲ್ಲಿ 75,000 ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿರುವ ಪುಸ್ತಕ. ಈ ಪುಸ್ತಕಕ್ಕೆ ಸೇಡಂನ 'ಅಮ್ಮ' ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಮಣಿಕಾಂತ್ ರವರ  ಬರಹಕ್ಕೆ ಒಂದು ಚಂದದ ಶೈಲಿ ಸಿದ್ಧಿಸಿದೆ. ಇಂಥ ಬರವಣಿಗೆಗೆ ಹೇಳಿ ಮಾಡಿಸಿದ ಶೈಲಿ ಅದು! ಇಲ್ಲಿರುವ ಹಲವಾರು ಕತೆಗಳನ್ನು ಅವರು ಪ್ರತ್ಯಕ್ಷ ನೋಡಿ ಬರೆದಿದ್ದಾರೆ, ಕೇಳಿ ಬರೆದಿದ್ದಾರೆ. ಅಂತರ್ಜಾಲದಿಂದ ಬಸಿದುಕೊಂಡು ಬರೆದಿದ್ದಾರೆ. 'ಒಂದು ಮಾವಿನಮರ', 'ಒಬ್ಬ ಹುಡುಗ ಮತ್ತು ನಾವು ನೀವು...', 'ಪ್ರಾರ್ಥನೆ' ಇಂಥ ಕತೆಗಳನ್ನು ತನ್ನ ಕಲ್ಪನೆಯಿಂದ ಕಡೆದು ಬಿಡಿಸಿದ್ದಾರೆ. ಕೆಲವು ಕತೆಗಳ ಪಾತ್ರಗಳೊಂದಿಗೆ ಮಾತಾಡಿದ್ದಾರೆ! 'ಅಮ್ಮ ಮತ್ತು ಒಂದು ರೂಪಾಯಿ', 'ಅಪ್ಪ ಅಂದ್ರೆ ಆಕಾಶ' - ಕತೆಗಳಲ್ಲಿ ತಾವೇ ಪಾತ್ರವಾಗಿದ್ದಾರೆ! ಇಲ್ಲಿರುವ ಅಷ್ಟೂ 'ಕತೆ'ಗಳಲ್ಲಿ ಮಾತಿನ ತೇವ ಆರದಂತೆ, ತಾವೇ  ಎದುರುಕೂತು ಮಾತಾಡಿದಂತೆ 'ಕತೆ' ಹೇಳಿದ್ದಾರೆ.

ಮಣಿಕಾಂತ್ ರವರುಬರೆಯಲು ಆರಿಸಿಕೊಳ್ಳುವ ಕತೆಗಳಲ್ಲೇ ಅವರ  ಮನಸ್ಸು ಅರ್ಥವಾಗುತ್ತದೆ.  ತನ್ನ ತಮ್ಮ ತಂಗಿಯರಂಥ ಹುಡುಗ ಹುಡುಗಿಯರು ಸೋತು ಕೈಚೆಲ್ಲಿದಾಗ ಅವರನ್ನೊಂದಿಷ್ಟು ಚಂದದ ಬದುಕಿಗೆ ತಿರುಗಿಸಬೇಕೆನ್ನುವ ತಹತಹವಿದೆ. ಸ್ವತಃ ಭಾವುಕರಾದ  ಅವರಿಗೆ ಒಂದು ಭಾವನಾ ಪ್ರಪಂಚವನ್ನು ತನ್ನ ಹೊರಗೂ ಕಟ್ಟಬೇಕೆಂಬ ಆಸೆಯಿದೆ. ಹಾಗಾಗಿ ಅವರ ಬರಹಗಳೆಲ್ಲ ಇಂಥ ಆಸೆಗೆ ಸಾಕ್ಷಿಯಾಗುತ್ತವೆ - ತೋಡಿದ್ದಕ್ಕೆ ಜಲವೇ ಸಾಕ್ಷಿಯಾಗುವಂತೆ!

ಇವರ ಬರವಣಿಗೆಯಲ್ಲಿ ಅವರದೇ ಒಂದು 'ರಿದಂ' ಇದೆ. ಒಂದು ಲಾಲಿತ್ಯವಿದೆ. ಭಾಷೆಯನ್ನು ತೀರಾ ಅಲಂಕಾರಗಳಿಂದ ತುಂಬದೆಯೂ ಅದಕ್ಕೆ ಒಂದು ಲಾಲಿತ್ಯವನ್ನು ಲಯವನ್ನು ನೀಡುವಂಥ ಕಲಾವಂತಿಕೆ ಇದೆ. ಅದರಲ್ಲೂ ತನ್ನ ಬರಹಗಳೊಳಗಿನ ಪಾತ್ರಗಳನ್ನು ಮಾತನಾಡಿಸುವಾಗ ಮಣಿರವರ  ಬರವಣಿಗೆ ಸೂಪರ್, ಬಹುಪಾಲು ಪಾತ್ರಗಳು ಆಡುವ ಮಾತು ಮಣಿಯವರದೇ ! ಅಲ್ಲಿ ಮಾತಾಡುವುದು ಆ ಪಾತ್ರಗಳಲ್ಲಿ ವ್ಯಕ್ತಿಗಳು ಮಣಿಕಾಂತ್ ರವರ ಗುಣಗ್ರಾಹಿ ಮನಸ್ಸು ನಿರ್ವ್ಯಾಜ ಅಂತಃಕರಣ!

ಈ ಪುಸ್ತಕದ ಎಲ್ಲಾ ಅಧ್ಯಾಯಗಳು ಇಷ್ಟವಾದರೂ ಕೆಲವು ನನ್ನ ಈಗಲೂ ಕಾಡುತ್ತಿವೆ ಅವುಗಳು ...ಎಮ್ಮೆ ಕಾಯುತ್ತಿದ್ದ ಹುಡುಗ ಎಂ.ಎ ಮಾಡಿದವರನ್ನೂ ಮೀರಿಸಿದ,ಅಮ್ಮ ಮತ್ತು ಒಂದು ರುಪಾಯಿ... ಮಕ್ಕಳನ್ನು ಕಳೆದುಕೊಂಡವರು ,
ಅಪ್ಪನಿಂದ ಅನಿಷ್ಟ ಅನ್ನಿಸಿಕೊಂಡವಳು, ಮಿಸ್ ಇಂಡಿಯ ಆದಳು,ಈ ಡಿ.ಸಿ.ಗೆ ವರ್ಗವಾದರೆ ಜನ ಬೀದಿಗಿಳಿದು ಪ್ರತಿಭಟಿಸುತ್ತಾರೆ,
ಟ್ಯೂಶನ್ ಮಾಡಿ ಕೋಟಿ ದುಡಿದ!
'ನೆನಪಿಲ್ಲ' ಎಂದವಳನ್ನೂ ನೆಪ ಹೇಳದೆ ಮದುವೆಯಾದೆ,ಬೇಕರಿಯಲ್ಲಿ ಕ್ಲೀನರ್ ಆಗಿದ್ದ ಹುಡುಗ ಬಾನೆತ್ತರ ಬೆಳೆದ , ಆತ ಒಂದೇ ಬೆರಳಲ್ಲಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಪಡೆದ , ಒಂದು ಲೋಟ ಹಾಲಿನ ರೂಪದಲ್ಲಿ ಹಣ ಸಂದಾಯವಾಗಿದೆ,
ಇನ್ನೇಕೆ ತಡ ನೀವೂ ಪುಸ್ತಕ ಖರೀದಿಸಿ ಒಮ್ಮೆ ಓದಿಬಿಡಿ ಕೆಲ ಘಟನೆಗಳು ನಿಮ್ಮನ್ನು ಕಾಡದೇ ಬಿಡವು.

ಪುಸ್ತಕ: ಅಪ್ಪಾ ಅಂದ್ರೆ ಆಕಾಶ
ಲೇಖಕರು: ಎ ಆರ್ ಮಣಿಕಾಂತ್
ಬೆಲೆ: 130
ಪ್ರಕಾಶನ: ನೀಲಿಮಾ ಪ್ರಕಾಶನ ಬೆಂಗಳೂರು.