17 ಏಪ್ರಿಲ್ 2022

ಹಾಸನ ವಾಣಿ ೧೭/೪/೨೨


 

ಸಿಂಹ ಧ್ವನಿ ೧೭/೪/೨೨


 

ಪ್ರಜಾ ಪ್ರಗತಿ.೧೭/೪/೨೨


 

16 ಏಪ್ರಿಲ್ 2022

ಅನ್ಯಲೋಕದ ಪತ್ರ...ಲೇಖನ

 


ಅನ್ಯಲೋಕದ ಪತ್ರ.. 


ಭುವಿಯ ಸಕಲ ಜನರಿಗೆ ಅನ್ಯಲೋಕದ ಜೀವಿಯ ನಮನಗಳು.....


ನಾವು ಇಲ್ಲಿ ಸರ್ವಜೀವಿಗಳು ಕ್ಷೇಮ ಮತ್ತು ಸಂತೋಷದಿಂದ ಇದ್ದೇವೆ. ನಿಮ್ಮ ಕ್ಷೇಮ ಸಂತೋಷದ ಬಗ್ಗೆ ನಮಗೆ ತಿಳಿದೇ ಇದೆ .ನಾವು ಅನ್ಯಲೋಕದಲ್ಲಿ ಇದ್ದರೂ ನಿಮ್ಮನ್ನು ಗಮನಿಸುತ್ತಲೇ ಇದ್ದೇವೆ. ತೋರಿಕೆಗೆ ಮಾತ್ರ ನೀವು ಸಂತಸ ಕ್ಷೇಮದಿಂದಿರುವಿರಿ ,ಆಂತರಿಕವಾಗಿ ನೀವು ಬಹುತೇಕರು ನೆಮ್ಮದಿಯಿಂದಿಲ್ಲ ಎಂದು ನಮಗೆ ತಿಳಿದಿದೆ.ಆದರೂ ನೆಮ್ಮದಿಯ ಜೀವನ ನಡೆಸುವವರಂತೆ ಪೋಸು ಕೊಡುತ್ತಾ ಮಹಾನ್ ನಟರಂತೆ ನಟಿಸುತ್ತಿರುವಿರಿ.


ವಸುದೈವ ಕುಟುಂಬಕಂ ಎನ್ನುವಿರಿ, ಸರ್ವೇ ಜನಾಃ ಸುಖಿನೋಭವಂತು ಎನ್ನುವಿರಿ, ನಿಮ್ಮ ನೆರೆಹೊರೆಯವರನ್ನು ನಿಮ್ಮಂತೆ ಪ್ರೀತಿಸಿ ಎನ್ನುವಿರಿ    ಆದರೆ ಧರ್ಮ,ಜಾತಿ, ಪಂಗಡದ ಹೆಸರಲ್ಲಿ ದಿನವೂ ಕಚ್ಚಾಡಿ ಬಡಿದಾಡುವಿರಿ ಇದೇನು ವಿಪರ್ಯಾಸ! 


ವಿಜ್ಞಾನದ ಅಭಿವೃದ್ದಿಯಿಂದ ಜಗವೇ ಹಳ್ಳಿಯಾಗಿದೆ ಎನ್ನುವಿರಿ. ಗಡಿಗಳ ಗೆರೆ ಕೊರೆದುಕೊಂಡು ಗಡಿಗಾಗಿ ಸಮರ ಸಾರುತಿರುವಿರಿ ಇದ್ಯಾವ ತರ್ಕ?


ಅಭಿವೃದ್ದಿಯ ಹೆಸರಲ್ಲಿ ನಮ್ಮ  ಸಹೋದರಿ ವಸುಂಧರೆಯ  ಒಡಲಿಗೆ ಕೈಇಟ್ಟು ಅವಳ ಶೋಷಣೆ ಮಾಡುತ್ತಿರುವಿರಿ. ಭುವಿಯಲ್ಲಿ ಮಾಲಿನ್ಯದ್ದೇ ಕಾರುಬಾರು.ನಿಮ್ಮ ಸ್ವಾರ್ಥಕ್ಕೆ ಇತರೆ ಜೀವಿಗಳಿಗೆ ಬದುಕದ ಸ್ಥಿತಿ ನಿರ್ಮಾಣವಾಗಿದೆ.ನಿಮಗೂ ಅದರ ಬಿಸಿ ತಾಗಿ, ಅತಿಯಾದ ಮಳೆ, ಬರಗಾಲ, ಭೂಕಂಪ, ಸುನಾಮಿ, ಮುಂತಾದವುಗಳು ವಿನಾಶದ ಸೂಚನೆ ನೀಡಿದರೂ ಬುದ್ದಿ ಕಲಿತಿಲ್ಲ.


ಎಲ್ಲಾ ದೇಶಗಳಲ್ಲೂ ಕಾಲ ಕಾಲಕ್ಕೆ ನಿಮ್ಮ ದುಷ್ಟ ಬುದ್ದಿಗೆ ತಿಳುವಳಿಕೆ ನೀಡಲು ಬಂದ ಮಹಾನ್ ವ್ಯಕ್ತಿಗಳ ಮಾತಿಗೆ ನೀವು ಕಿವಿಯಾಗಲೇ ಇಲ್ಲ. ಬದಲಿಗೆ ಅವರನ್ನೇ ಅವಹೇಳನ ಮಾಡುವ ಕೀಳು ಮಟ್ಟಕ್ಕೆ ಇಳಿದಿರಿ.


ನಿಮಗಿನ್ನೂ ಬುದ್ದಿ ಬರಲೇ ಇಲ್ಲ .ಹಿಂಸೆ,ಕಚ್ಚಾಟ ಯುದ್ಧದಿಂದ ಯಾರಿಗೂ ನೆಮ್ಮದಿಯಿಲ್ಲ ಎಂದು ತಿಳಿದಿದ್ದರೂ ಸಣ್ಣ ಪುಟ್ಟ ಯುದ್ದಗಳಿಂದಿಡಿದು ಎರಡು ವಿಶ್ವ ಮಹಾಸಮರ ನಡೆದು ಅಪಾರ ಸಾವು ನೋವುಗಳೊಂದಿಗೆ ನಷ್ಟ ಅನುಭವಿಸಿದರೂ ಮತ್ತೆ ಕಾಲು ಕೆರೆದು ಜಗಳವಾಡಿ ಯುದ್ದಕ್ಕೆ ನಿಂತಿರುವಿರಲ್ಲ ನಿಮಗೆ ಏನು ಹೇಳಬೇಕು?


ನಮ್ಮ ಲೋಕದಿಂದ ನಿಮ್ಮ ಲೋಕಕ್ಕೆ ದಂಡೆತ್ತಿ ಬಂದು ನಿಮ್ಮನ್ನು ನಾವೇ ಆಳ್ವಿಕೆ ಮಾಡೋಣ ಎಂದು ನಾವು ಕೆಲವೊಮ್ಮೆ ಆಲೋಚಿಸಿದ್ದೂ ಉಂಟು .ಆದರೆ ನಮ್ಮ ಪೂರ್ವಜರು ನೀಡಿದ ಸಂಸ್ಕಾರದ ಪರಿಣಾಮವಾಗಿ ನಾವು ಹಾಗೆ ಮಾಡುವುದಿಲ್ಲ.  ಆದರೂ ನಿಮ್ಮ ಮೇಲೆ ನಾವು ಕಣ್ಣಿಟ್ಟು ನಿಮ್ಮ. ನಡೆನುಡಿಗಳನ್ನು ಗಮನಿಸುತ್ತಿಹೆವು.ನೀವು ಬದಲಾಗದಿದ್ದರೆ  ಯುದ್ಧ, ಪ್ರಕೃತಿ ವಿನಾಶ ಮುಂತಾದವುಗಳಿಂದ ನೀವೆಲ್ಲರೂ ಖಂಡಿತವಾಗಿಯೂ  ನಾಶವಾಗುತ್ತೀರಿ ಆಗ ನಮ್ಮ ಲೋಕದಿಂದ ಬಂದು ಭುವಿಯಲ್ಲಿ ನಮ್ಮ ಅಸ್ತಿತ್ವದೊಂದಿಗೆ ನಂದನವನ ಮಾಡುವೆವು. ಆಗ ನೋಡಿ ಭುವಿಯ ಜೀವನ ಹೇಗಿರುತ್ತದೆ ಎಂದು.ಓ ...ನೀವೆಲ್ಲಿ ರುವಿರಿ ನಾವು ಬರುವ ಮೊದಲೇ ನೀವು ಅಂದುಕೊಂಡ ಸ್ವರ್ಗ ಅಥವಾ ನರಕದಲ್ಲಿ ಇರುತ್ತೀರಿ ಅಲ್ಲವೆ?


ಈ ಪತ್ರ ಓದಿದ ಮೇಲಾದರೂ ಮನುಜರೇ ನೀವು ಬದಲಾಗಿ, ಇತರರನ್ನು ಬದಲಾಯಿಸಿ, ಇತರೆ ಜೀವಿಗಳಿಗೂ ಈ ಧರೆಯಲ್ಲಿ ಜೀವಿಸಲು ಅವಕಾಶ ನೀಡಿ, ಅನವಶ್ಯಕವಾಗಿ ಕಚ್ಚಾಡಬೇಡಿರಿ. ಕೆಲ ಮಹಾತ್ಮರು ನೀಡಿದ  ಉತ್ತಮ   ಸಂದೇಶಗಳನ್ನು ಪಾಲಿಸಿ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


15 ಏಪ್ರಿಲ್ 2022

ನಮಗಾಗಿ ಪ್ರಾರ್ಥಿಸೋಣ.


 ಮೂರನೇ ವಿಶ್ವ ಮಹಾಯುದ್ದ ಆದರೆ ಅದರ ಪರಿಣಾಮ ಊಹಿಸಲೂ ಅಸಾಧ್ಯ .ಆದರೂ ಕೆಲ ತಜ್ಞರು ಅದರ ಪರಿಣಾಮಗಳನ್ನು ಅಂದಾಜು ಮಾಡಿದ್ದಾರೆ. ಪ್ರಪಂಚದ ಬಹುತೇಕ ರಾಷ್ಟ್ರಗಳು ಮಾರಕವಾದ ಜೈವಿಕ ಅಸ್ತ್ರಗಳು, ರಸಾಯನಿಕ ಅಸ್ತ್ರಗಳು ಸೇರಿದಂತೆ ಸುಮಾರು ಆರು ಸಾವಿರಕ್ಕೂ ಹೆಚ್ಚು ಅಣು ಬಾಂಬ್ ಗಳನ್ನು ಗುಡ್ಡೆ ಹಾಕಿಕೊಂಡಿವೆ. ಒಂದು ಅಣು ಬಾಂಬ್ ಗೆ ಕೋಟಿಗೂ ಹೆಚ್ಚು ಬಲಿ ಪಡೆಯುವ ಶಕ್ತಿ ಇದೆ ಎಂಬುದು ಹಿರೋಷಿಮಾ ನಾಗಸಾಕಿಯಿಂದ ಸಾಬೀತಾಗಿದೆ. ಈಗ ನೀವೆ ಲೆಕ್ಕ ಹಾಕಿ ಸಾವಿರಾರು  ಬಾಂಬ್ ಗೆ ಎಷ್ಟು ದೇಶ ಎಷ್ಟು ಜ‌ನ ಉಳಿಯಬಹುದು? ತಜ್ಞರ ಮತ್ತೊಂದು ಅಂದಾಜಿನ ಪ್ರಕಾರ ಈಗಿರುವ ಎಲ್ಲಾ ಅಸ್ತ್ರಗಳ ಬಳಸಿದರೆ ಇಡೀ ವಿಶ್ವವನ್ನು ಐದು ಬಾರಿ ಸುಟ್ಟ ಬೂದಿ ಮಾಡಬಹುದಂತೆ ! ಯುದ್ಧ ಎಂದು ಎಗರಾಡುವ ಪುಟಿನ್ ,ಕಿಮ್ ಮತ್ತು ನಮ್ಮ ದೇಶದ ನೆರೆಹೊರೆಯ ಸಮಯಸಾಧಕರಿಗೆ ದೇವರೇ ಒಳ್ಳೆಯ ಬುದ್ದಿ ಕೊಡು ಎಂಬುದನ್ನು ಮಾತ್ರ ನಾವು ಕೋರಬಹುದು ಅಷ್ಟೇ.

ಸಿಹಿಜೀವಿ

ಸಿ ಜಿ ವೆಂಕಟೇಶ್ವರ