04 ಫೆಬ್ರವರಿ 2022

ಪ್ರಿಯತಮೆ .


 


ಪ್ರಿಯತಮೆ.


ಅಂದು ನಾ ಕೇಳಿದಾಗಲೆಲ್ಲಾ

ಸಿಹಿಮುತ್ತನಿಡುತ್ತಿದ್ದಳು ಪ್ರಿಯತಮೆ|

ಮದುವೆಯ ನಂತರ ಮುತ್ತ ಕೇಳಿದರೆ

ಸಿಟ್ಟಾಗಿ ಬೈಯುತ್ತಾ ಕೇಳುವಳು  ಮಾಡಲೇನು ಇಲ್ಲವೆ ಕ್ಯಾಮೆ?  ||


ಸಿಹಿಜೀವಿ.


03 ಫೆಬ್ರವರಿ 2022

ಸಾಹಿತ್ಯಾಭಿಮಾನಿ ದೇವರುಗಳು. ಲೇಖನ


 


ಪಾಶ್ಚಾತ್ಯ ಕವಿ ಬಹರೇಸ್ ರವರು ನೂರಾರು ಮೌಲಿಕ ಪುಸ್ತಕಗಳನ್ನು ಬರೆದಿದ್ದರು ಅವುಗಳು ಪ್ರಕಟವೂ ಆದವು . ಪ್ರಕಾಶಕರಿಂದ ಬಂದ ಮಾಹಿತಿಯನ್ನು ಕೇಳಿದ  ಕವಿಗೆ ಅಚ್ಚರಿಯುಂಟಾಯಿತು. ಅವರ ಪುಸ್ತಕಗಳನ್ನು ಕೊಂಡು ಓದಿದವರು ಕೇವಲ ಇಪ್ಪತ್ತೇಳು ! ಇದರಿಂದ ಕೊಂಚ ವಿಚಲಿತರಾದ ಕವಿಯು ತಕ್ಷಣ ಆ ಪ್ರಕಾಶಕರಿಂದ ಎಲ್ಲಾ ಇಪ್ಪತ್ತೇಳು ಓದುಗರ ವಿಳಾಸ ಪಡೆದು ಪ್ರತಿಯೋರ್ವ ಸಾಹಿತ್ಯಾಭಿಮಾನಿಗಳನ್ನು ಭೇಟಿ ಮಾಡಿ ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸಿ ಬಂದರು. ಮುಂದೆ ಕವಿಯ ಪುಸ್ತಕಗಳು ನೂರಾರು ಮುದ್ರಣ ಕಂಡು ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತಿವೆ.

ಸಾಹಿತ್ಯ ಕೃತಿಗಳು ಬರೆಯುವವರೆಗೆ ತಮ್ಮದು ನಂತರ ಓದುಗರದು ಎಂಬುದು ಅಷ್ಟೇ ಸತ್ಯ. ಲೇಖಕರು ಜನಸಾಮಾನ್ಯರ ಕಷ್ಟ ಸುಖಗಳ ಕುರಿತಾಗಿ ಬರೆದರೆ ಖಂಡಿತವಾಗಿಯೂ ಅದಕ್ಕೆ ಓದುಗರು ಇದ್ದೇ ಇರುವರು. ಇದು ಲೇಖಕರ ಮತ್ತು ಓದುಗರ ಮಧ್ಯ ಅವ್ಯಕ್ತ ಬಂಧ ಏರ್ಪಡಲು ಕಾರಣವಾಗುತ್ತದೆ.

ನಾನೇನು ಮಹಾನ್ ಸಾಹಿತಿ ಅಥವಾ ಲೇಖಕ ಎಂಬ ಭ್ರಮೆಯಿಲ್ಲ. ನಾನು ನನಗೆ ತೋಚಿದ್ದನ್ನು ಗೀಚುವ ಪ್ರಕ್ರೀಯೆ ಜಾರಿಯಲ್ಲಿದೆ. ನಾನು ಗೀಚಿದ ಕೆಲ ಸಾಲುಗಳನ್ನು ಬಹಳ ಖುಷಿಯಿಂದ ಓದಿ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಸಹೃದಯ ಓದುಗರು.  ಕೇವಲ ಬೆರಳೆಣಿಕೆಯಷ್ಟು ಪುಸ್ತಕ ಪ್ರಕಟವಾಗಿವೆ.  ನನ್ನ ಕೃತಿಗಳನ್ನು ಕೊಂಡು ಓದುತ್ತಿರುವ ಓದುಗ ಪ್ರಭುಗಳು ನಿಜಕ್ಕೂ ಸಾಹಿತ್ಯಾಭಿಮಾನಿಗಳು . ಅವರಿಗೆ ನನ್ನ ಕಡೆಯಿಂದ  ಕೃತಜ್ಞತೆಯ ಮಾತುಗಳ ಹೇಳುವ ಹೊರತು ಮತ್ತೇನು ಹೇಳಲಿ?

ನಾನು ಬರೆದ ಬರಹಗಳನ್ನು ಓದಿ ಸೂಕ್ತವಾದ ತಿದ್ದುಪಡಿ ನೀಡಿ ಸಲಹೆಗಳನ್ನು ನೀಡುತ್ತಾ ಈಗಲೂ ನಾನು ಬರೆದ ಬರೆಹಗಳನ್ನು ಓದಿ ಪ್ರೋತ್ಸಾಹ ಮಾಡುವ ಕನ್ನಡ ಬಾಷಾ ಶಿಕ್ಷಕರು ಹಾಗೂ ಉಪಪ್ರಾಂಶುಪಾಲರಾದ ಇಸಾಫುಲ್ಲರವರಿಗೆ ಧನ್ಯವಾದಗಳನ್ನು ಹೇಳಲೇಬೇಕು.
ಅಂತರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರಾದ ತಿಪ್ಪೇಸ್ವಾಮಣ್ಣ ರವರು ಮುಖಪುಟದಲ್ಲಿ ನನ್ನ ಬರೆಹಗಳನ್ನು ಓದಿ ಪ್ರೋತ್ಸಾಹ ನೀಡುತ್ತಿದ್ದಾರೆ ಅವರಿಗೆ ಧನ್ಯವಾದಗಳನ್ನು ಹೇಳದೇ ಹೇಗಿರಲಿ.
ಗೌರಿಬಿದನೂರಿನ ಎಸ್ಸೆಲ್ಲೆನ್ ಪೋಟೋ ಸ್ಟುಡಿಯೋದ ಮಾಲಿಕರು ಸಹೃದಯರಾದ ವಿಜಯಪ್ಪ ರವರು ನನ್ನ ಬರೆಹಗಳನ್ನು ಓದಿ ಪ್ರತಿ ದಿನ ಪ್ರತಿಕ್ರಿಯೆ ನೀಡೇ ನೀಡುವರು ನನ್ನ ಕವಿತೆಗಳು ಮತ್ತು ಸಾಹಿತ್ಯದ ಬಗ್ಗೆ ಅವರಿಗಿರುವ ಪ್ರೀತಿಗೆ ನನ್ನ ಕಡೆಯಿಂದ ನಮನಗಳು.
ಶಾಲೆಗೆ ಓದಿ ಕಲಿತದ್ದು ಕಡಿಮೆ ಜೀವನದಲ್ಲಿ ಕಲಿತದ್ದು ಹೆಚ್ಚು ಗಂಡನ ಹೂವಿನ ವ್ಯಾಪಾರದಲ್ಲಿ ನೆರವಾಗುವ ಸದ್ಗೃಹಿಣಿ ಅರುಣಾ ಗಂಗಾಧರ್  ರವರು ನನ್ನ ಬ್ಲಾಗ್ ಮತ್ತು ಅಂಕಣಗಳ ಖಾಯಂ ಓದುಗರು ಅವರ ಮುಕ್ತ ಅಭಿಪ್ರಾಯಗಳು ಪ್ರಭುದ್ದತೆಯಿಂದ ಕೂಡಿರುತ್ತವೆ.

ಆಗಮಿಕರು ಅನ್ನಪೂರ್ಣೇಶ್ವರಿ ದೇವಿಯ ಉಪಾಸಕರಾದ ಚಂದನ್ ಶರ್ಮ ರವರು ನನ್ನ ಗಜಲ್ ಮತ್ತು ಲೇಖನದ ಅಭಿಮಾನಿಗಳು ಅವರಿಗೆ ಇಷ್ಟವಾದ ಗಜಲ್ ಮತ್ತು ಲೇಖನಗಳ ಬಗ್ಗೆ ಕರೆ ಮಾಡಿ ಮೆಚ್ಚುಗೆ ಸೂಚಿಸುವರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಣ ಶಿಕ್ಷಕರು ಹಾಗೂ ಆತ್ಮೀಯರಾದ ಸದಾಶಿವರೆಡ್ಡಿ ಸರ್ ರವರಂತೂ ನನ್ನ ಎಲ್ಲಾ ಪುಸ್ತಕಗಳನ್ನು ಕೊಂಡು ಓದುತ್ತಾ ಆ ಪುಸ್ತಕಗಳ ಬಗ್ಗೆ ನಾಲ್ಕು ಸಾಲಿನ  ಅಭಿಪ್ರಾಯಗಳನ್ನು  ಬರೆದು ಹಂಚಿಕೊಳ್ಳುತ್ತಾರೆ. ಅವರಿಗೆ ನಮನಗಳು.ಸಮಾಜ ಸೇವಕರಾದ ಬಿ. ಎನ್ .  ಶ್ರೀನಿವಾಸ್ ರವರು ನನ್ನ ರಚನೆಯ ಖಾಯಂ ಓದುಗರು ಹಾಗೂ ನನ್ನ ಪುಸ್ತಕಗಳ ಪ್ರಕಟಿಸಲು ಧನಸಹಾಯ ಮಾಡಿರುವ ಸಹೃದಯರು ಅವರ ಸಾಹಿತ್ಯ ಪ್ರೀತಿಗೆ ಶರಣು.
ನನ್ನ ಗೆಳೆಯ ಜಬೀಉಲ್ಲಾ ವೃತ್ತಿಯಲ್ಲಿ ಪೋಲಿಸ್ ಆದರೂ ಸಾಹಿತ್ಯಾಭಿಮಾನಿ. ಉಚಿತವಾಗಿ ಅಥವಾ  ಡಿಸ್ಕೌಂಟದ ನನ್ನ ಎಲ್ಲಾ ಪುಸ್ತಕಗಳನ್ನು ಮುಖ ಬೆಲೆಗಿಂತ ಹೆಚ್ಚು ಹಣ ಕೊಟ್ಟು ಓದಿ ಪ್ರೋತ್ಸಾಹ ನೀಡುತ್ತಲೇ ಇದ್ದಾನೆ.
ಇವರ ಜೊತೆಗೆ  ಗೌರೀಶ್ ವೀರಣ್ಣ,ಭಾನುಪ್ರಕಾಶ ಮಣಿವಾಲ ರವರು. ಕವಿಗಳು ಮತ್ತು ಲೇಖಕರಾದ ಜಿ ವೆಂಕಟೇಶ ರವರು, ಶಿಕ್ಷಕರಾದ ನರಸಿಂಹಮೂರ್ತಿ  ರವರು. ಉಪನ್ಯಾಸಕರಾದ ಸಿ ಎನ್ ಶಂಕರ ರೆಡ್ಡಿ ರವರು. ವರ್ತಕರಾದ ನವೀನ್ ರವರು, ವಿಕಲಚೇತನ ಉದ್ಯಮಿಯಾದ ಉದಯಕುಮಾರ್ ರವರು, ನನ್ನ  ವಿದ್ಯಾರ್ಥಿಗಳಾದ ಮಂಜುಳ, ಫಣೀಂದ್ರ, ವಿಶ್ವನಾಥ್,  ವೈಶಾಲಿ , ಸ್ವಾತಿ.  ಶಿಕ್ಷಕರಾದ ಸುರೇಶ್ ರವರು.ಶಿಕ್ಷಕರಾದ ಸಪ್ತಗಿರಿ ರವರು ಸಿಎಮ್ ಸಿ ಎ ದ ಮರುಳಪ್ಪ ರವರು,
ವಿದ್ಯಾಧರ ದುರ್ಗೇಕರ್ ರವರು, ನಿಖಿಲ್ ರವರು , ಸಂಘಟಕರಾದ
ಸಿದ್ದು ಮೂರ್ತಿ ರವರು . ಕವಿಗಳಾದ  ರವಿಕುಮಾರ್ ರವರು ,ಮುರಾರ್ಜಿ ಶಾಲೆಯ  ಪ್ರಾಂಶುಪಾಲರಾದ ಲೋಕೇಶ್ ರವರು .ಈವಿ ಕಂಪನಿಯ ಮಾಲಿಕರು ಮತ್ತು ಲೇಖಕರಾದ ಕಾಂತರಾಜು ರವರು .....
ಇನ್ನೂ ಪಟ್ಟಿ ಮುಂದುವರೆಯುತ್ತದೆ... ಕೆಲ ಹೆಸರುಗಳು ಸೇರುತ್ತವೆ... ರಾಜ್ಯಮಟ್ಟದ ಆಧಿಕಾರಿಗಳಾದ  ಟಿ‌ ಎಲ್ ಎಸ್ ಪ್ರೇಮ ರವರು ಮತ್ತು ಆತ್ಮೀಯ ಗೆಳೆಯ ಶಾಂತಕುಮಾರ್...ರವರು

ಹೀಗೆ ನನ್ನ ಬರೆಹಗಳನ್ನು ಓದುತ್ತಾ ಪ್ರೋತ್ಸಾಹ ಮಾಡುವ ಸಾಹಿತ್ಯಾಭಿಮಾನಿ ಸಹೃದಯರಿಗೆ ನನ್ನ ಮನದುಂಬಿದ ನಮನಗಳು .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.


01 ಫೆಬ್ರವರಿ 2022

ಅವಕಾಶವಾದಿಗಳು .ಕವನ



ಅವಕಾಶವಾದಿಗಳು.


ಅವಕಾಶವಾದಿಗಳು ಸ್ವಾಮಿ

ನಾವು ಅವಕಾಶವಾದಿಗಳು .


ದೇಶದ ಭದ್ರತೆಯ ಬಗ್ಗೆ 

ನೂರಾರು ಮಾತುಗಳು .

ಸೈನ್ಯಕ್ಕೆ ಸೇರಲು ಪಕ್ಕದ

ಮನೆಯ ಮಗನಿರಲಿ 

ಎಂಬ ಅವಕಾಶವಾದಿಗಳು.


ಮಾತೃಭಾಷೆಯೇ ಮೇಲು

ಎಂದು ಬೀದಿಯಲಿ ಭಾಷಣ 

ಬಿಗಿವ ಶೂರರು .ನಮ್ಮ ಮಕ್ಕಳು

ಮಾತ್ರ ಕಾನ್ವೆಂಟ್ ಕೂಸುಗಳಾಗಲಿ

ಎಂಬ ಅವಕಾಶವಾದಿಗಳು.


ನಾವು ಕಷ್ಟದಲಿದ್ದಾಗ ಇತರರ  ಸಹಾಯ ಬೇಡುತಾ ,ನಮಗೆ 

ಅನುಕೂಲತೆಯಿದ್ದಾಗ ಸಾವಕಾಶವಾಗಿ ಜಾಗ ಖಾಲಿ 

ಮಾಡುವ ಅವಕಾಶವಾದಿಗಳು.


ಮತದಾನದ ವೇಳೆ ದುಡ್ಡಿಗೆ ,ಹೆಂಡಕ್ಕೆ

ಮತವ ಮಾರಿಕೊಂಡವರು .

ಭ್ರಷ್ಟ ರಾಜಕಾರಣಿಗಳು ಲೂಟಿ

ಹೊಡೆಯುವಾಗ ಅವರ ಬೆನ್ನ ಹಿಂದೆ

ಬೈಯುತಾ ಸಾಗುವ ಅವಕಾಶವಾದಿಗಳು.


ಅವಕಾಶವಾದಿಗಳು ಸ್ವಾಮಿ

ನಾವು ಅವಕಾಶವಾದಿಗಳು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು.

 

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ಎಂ. ವಿ .ಶಂಕರಾನಂದ ರವರ ಕೃತಿ ವಿಮರ್ಶೆ*೧/೨/೨೨


 

30 ಜನವರಿ 2022

ಚೆಲ್ಲಾಡಿದ ಚಿತ್ರಗಳು .ವಿಮರ್ಶೆ


 

ಚೆಲ್ಲಾಡಿದ ಚಿತ್ರಗಳು
ಪುಸ್ತಕ ವಿಮರ್ಶೆ.

ಈ ವರ್ಷ ಗಣರಾಜ್ಯೋತ್ಸವದ ದಿನದಂದು ತುಮಕೂರಿನ ಗೋಕುಲ ಬಡಾವಣೆಯ ಗಣೇಶ ಮಂದಿರದಲ್ಲಿ  ನಗರ ಕ ಸಾ ಪ ವತಿಯಿಂದ ನಡೆದ ವತಿಯಿಂದ ನಡೆದ ಕವಿ ಗೋಷ್ಠಿಯಲ್ಲಿ  ಪಾಲ್ಗೊಂಡ ನನಗೆ ಬಹುಮಾನವಾಗಿ ನೀಡಿದ ಪುಸ್ತಕವೇ ಚೆಲ್ಲಾಡಿದ ಚಿತ್ರಗಳು.
ಡಾ. ಸೋ ಮು ಭಾಸ್ಕರಾಚಾರ್ ರವರ ಆತ್ಮಕಥನ ಓದುತ್ತಿದ್ದರೆ ಇದು ನನ್ನದೇ ಕಥೆಯೆಂದು ಭಾಸವಾಯಿತು.
ಈ ಕಥಾನಕದ ಭಾಷೆ , ನಿರೂಪಣೆ ಬಹಳ ಸುಂದರವಾಗಿರುವುದು ವಿಶೇಷವಾದದು.
ಇದು ಇವರ ಹನ್ನೊಂದನೇ ಕೃತಿ. ಅವರು ಉಪನ್ಯಾಸಕರಾಗಿ  ನಿವೃತ್ತಿ ಹೊಂದಿದ ತರುವಾಯ   ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಶ್ರೀಯುತರ ಬದುಕು ತುಂಬಾ ತಿರುವುಗಳಿಂದ ಕೂಡಿದ್ದು ರೋಚಕವಾಗಿದೆ. ಹಾಗಾಗಿ ಅವರು  ಕಂಡುಂಡ ಸತ್ಯಗಳನ್ನು, ಎದುರಾದ ಘಟನೆಗಳನ್ನು ಒಂದೊಂದಾಗಿ ನಮ್ಮೆದುರು ತೆರೆದಿಟ್ಟಿದ್ದಾರೆ  . ಇಲ್ಲಿನ ಘಟನೆಗಳು ಒಂದೇ ಬಾರಿಗೆ ಘಟಿಸಿದವುಗಳಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಎದುರಾದ ರೋಚಕ ಅನುಭವಗಳು. ಇವುಗಳನ್ನು ಕೇಳಿದ್ದ ಮಿತ್ರರು ಬರವಣಿಗೆ ರೂಪದಲ್ಲಿ ಪ್ರಕಟಿಸಲು ಯೋಗ್ಯವಾಗಿವೆ, ಪ್ರಕಟಿಸಿ ಎಂದು ನೀಡಿದ ಸಲಹೆ ಮೇರೆಗೆ ಈ ಕೃತಿ ಹೊರಬರಲು ಸಾಧ್ಯವಾಗಿದೆ. ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

'ಚೆಲ್ಲಾಡಿದ ಚಿತ್ರಗಳು' ಈ ಪುಸ್ತಕಕ್ಕೆ ಡಾ .ಮನು ಬಳಿಗಾರ್ ರವರು ಬರೆದ ಮುನ್ನುಡಿ ಪುಸ್ತಕದ ತೂಕವನ್ನು ಹೆಚ್ಚಿಸಿದೆ.
ಈ ಪುಸ್ತಕ ಆಶ್ಚರ್ಯ ಹಾಗೂ ಅದ್ಭುತವೆನಿಸುವ ಜೀವನಾನುಭವಗಳಿಂದ ಕೂಡಿದ್ದು ಓದುಗರಿಗೆ ವಿಶಿಷ್ಟ ಅನುಭವ ತಂದುಕೊಡುತ್ತದೆ, ಇದೊಂದು ರೋಚಕ ಅನುಭವ ನೀಡುವ ಕೃತಿಯಾಗಿದೆ. 'ಅಪ್ಪನಿಗೆ ಹೆದರಿ ಶಾಲೆಗೆ ಹೋದೆ', 'ಸಾಲ ವಸೂಲಿಗೆ ಬಂದ ವ್ಯಕ್ತಿಯೇ ಬುಕ್ಸ್ ಕೊಡಿಸಿದ್ದು, ಪ್ರೀತಿಯ ಮುದ್ದೆ ತಿನ್ನಿಸಿದ ಮುಖ್ಯೋಪಾಧ್ಯಾಯ', 'ಸೊಡರೆಮ್ಮೆ ಸವಾರಿ ಮಾಡಿ  ಕೈ  ಮುರಿದುಕೊಂಡೆ', 'ಪಂಡರ  ಭಜನೆಯಲ್ಲೂ ಜಾತಿ ಕುಣಿತ', 'ನಾಟಕಾಭಿನಯಕ್ಕೆ ಇನಾಮು', 'ಸ್ನೇಹದಲ್ಲೂ ಇಣುಕಿದ ಜಾತಿ ಜಂಜಾಟ' . . ಮುಂತಾದ ಲೇಖನಗಳು ಇದ್ದು, ಒಂದೊಂದೂ ಸ್ವಂತಿಕೆಯನ್ನು ಪಡೆದಿದ್ದು, ಓದುಗರಿಗೆ ಬಾಲ್ಯದ ದರ್ಶನವನ್ನು ಆಪ್ಯಾಯಮಾನವಾಗಿ ಮಾಡಿಸಿದ್ದಾರೆ.

ತಮ್ಮ ಬಡತನದ ಬದುಕು, ಆ ಕಾಲದಲ್ಲೇ ಕಂಡ ಜಾತಿ ವ್ಯವಸ್ಥೆಯನ್ನು ಕಂಡು ಕನಲಿರುವ ಶ್ರೀಯುತರು ಅದನ್ನು ಕಲಾತ್ಮಕವಾಗಿ ಬಿಡಿಸಿದ್ದಾರೆ. ಅದರಲ್ಲೂ ಇವರು ಶಾಲೆಗೆ ತಪ್ಪಿಸಿಕೊಂಡು ತಮ್ಮ ಊರಿನ ಆಂಜನೇಯ ದೇವಸ್ಥಾನದ ವಿಗ್ರಹದ ಹಿಂದೆ ಆಶ್ರಯ ಪಡೆದು, ಶಾಲೆಯ ಎಲ್ಲಾ ಮಕ್ಕಳು ಮನೆಗೆ ತಲುಪುವಾಗ ಹೊರ ಬಂದು ಸೇರುವ ಪ್ರಸಂಗ, ಆಗ ಇವರ ತಂದೆಯವರಿಂದ ಸಿಕ್ಕಿದ ಬಳುವಳಿಯ ಏಟುಗಳನ್ನು ಸ್ಮರಿಸಿಕೊಂಡಿದ್ದಾರೆ. ಮುಗ್ಧತೆಯ ಪ್ರತೀಕವಾಗಿರುವ ಈ ಪ್ರಸಂಗ ಬಹಳಷ್ಟು ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಆ ಕಾಲದ ಆಚಾರ, ವಿಚಾರಗಳು ಹೇಗಿದ್ದವೆಂಬುದನ್ನು ತಿಳಿಯಲು ಸಹಕಾರಿಯಾಗಿದೆ. ಇಲ್ಲಿನ ಬಹಳಷ್ಟು ಲೇಖನಗಳಲ್ಲಿ ಶ್ರೀಯುತರು ತಮ್ಮ ಕಾಲದಲ್ಲಿ ಘಟಿಸಿದ ಘಟನಾವಳಿಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ. ಅವರ ಊರಿನಲ್ಲಿ ನಡೆದ ಪ್ರಸಂಗಗಳಲ್ಲಿ ಕೆಲವು ನಗು ಬರಿಸುವಂತಿದ್ದರೆ, ಮತ್ತೆ ಕೆಲವು ಆ ಕಾಲದ ಸಂಪ್ರದಾಯಗಳನ್ನು ಯಥಾವತ್ತಾಗಿ ನೀಡಿರುವುದರಿಂದ ತಮ್ಮ ಸಮಕಾಲೀನ ಸಂಗತಿಗಳನ್ನು ತಿಳಿದುಕೊಳ್ಳಲು ಈ ಕೃತಿ ನೆರವಾಗುತ್ತದೆ ಎನಿಸುತ್ತದೆ. ತಮ್ಮ ಬರವಣಿಗೆಯಲ್ಲಿ ಎಲ್ಲಿಯೂ ಅತಿರೇಕವನ್ನಾಗಲೀ, ಉತ್ಪ್ರೇಕ್ಷೆಯನ್ನಾಗಲೀ ತೋರಿಸದಿರುವುದು ಇವರ ಗಂಭೀರ ಚಿಂತನೆಗೆ ಸಾಕ್ಷಿಯಾಗಿದೆ. ಇಲ್ಲಿನ ಒಂದೊಂದು ಪ್ರಸಂಗಗಳೂ ಕೂಡ ಆ ಕಾಲದ ಬದುಕನ್ನು ಕಟ್ಟಿಕೊಡುವಲ್ಲಿ ಸಾಫಲ್ಯ ಪಡೆದಿರುವುದು ಕಂಡುಬರುತ್ತದೆ. ಹರೆಯದಲ್ಲಿ ನಡೆದ ಪ್ರೇಮ, ಕಾಲೇಜಿನಲ್ಲಿ ಒಂದು ವರ್ಷದ ಪಿಯುಸಿಯಲ್ಲಿ ನಪಾಸಾಗಿ ತಮ್ಮ ಗುರುಗಳ ಸಹಕಾರದಿಂದ ಕನ್ನಡದಲ್ಲಿ ವಿಜ್ಞಾನದ ವಿಷಯವನ್ನು ಬರೆದು ತೇರ್ಗಡೆಯಾದುದು. ಪ್ರೌಢ ಶಾಲೆಯಲ್ಲಿರಬೇಕಾದರೆ ತಮ್ಮ ಮುಖ್ಯೋಪಾಧ್ಯಾಯರಿಗೆ ಧಿಕ್ಕಾರ ಕೂಗಿದ್ದು ಹಾಗೂ ನಾಟಕಾಭಿನಯದಲ್ಲಿ ತೋರಿದ ಉತ್ಸಾಹ ಮತ್ತು ಅದಕ್ಕೆ ನಡೆದ ಪ್ರೋತ್ಸಾಹವನ್ನು ಯಥಾವತ್ತಾಗಿ ನೀಡಿದ್ದಾರೆ. ಜೊತೆಗೆ ತಮಗೆ ನೀಡಿದ ಸಹಕಾರದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಒಟ್ಟಾರೆ  ನೀವು ನಿಮ್ಮ ಬಾಲ್ಯದ ಮತ್ತು ಕಾಲೇಜು ದಿನದ ನೆನಪಗಳ ಮೆಲಕು ಹಾಕಲು ಒಮ್ಮೆ ಈ ಕೃತಿ ಓದಿಬಿಡಿ.

ಪುಸ್ತಕ: ಚೆಲ್ಲಾಡಿದ ಚಿತ್ರಗಳು
ಲೇಖಕರು: ಸೋ ಮು ಭಾಸ್ಕರಾಚಾರ್.
ಪ್ರಕಾಶನ: ಕಿರಣ್ ಪ್ರಕಾಶನ ತುಮಕೂರು.
ಬೆಲೆ: 100₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
9900925529