02 ಜನವರಿ 2022

ಸಿಹಿಜೀವಿಯ ದಿನಚರಿ ೧

 


ಸಿಹಿಜೀವಿಯ ದಿನಚರಿ ೧


2022 ರ ಹೊಸ ಕ್ಯಾಲೆಂಡರ್ ವರ್ಷದ ಮೊದಲ ದಿನ ಮಾರ್ನಿಂಗ್ ಕ್ಲಾಸ್ ಇದ್ದದ್ದರಿಂದ ಎಂದಿನಂತೆ ಬೆಳಿಗ್ಗೆ  ನಾಲ್ಕೂವರೆಗೆ ಎದ್ದು ನಿತ್ಯ ಕರ್ಮ ಮುಗಿಸಿ ದೇವರಿಗೆ ನಮಿಸಿ ಒಂದು ಗಂಟೆಯ ಕಾಲ ಯೋಗ ,ಧ್ಯಾನ, ಪ್ರಾಣಾಯಾಮ ಮಾಡಿದೆ. ನನ್ನ ಜೊತೆಯಲ್ಲಿ ಎದ್ದ ನನ್ನ ಅರ್ಧಾಂಗಿ ಮನೆ ಮುಂದೆ ನೀರು ಹಾಕುವುದು, ರಂಗೋಲಿ ಹಾಕುವ ಕಾರ್ಯದಲ್ಲಿ ಮಗ್ನವಾದಳು  ನಿಧಾನವಾಗಿ ಎದ್ದ ನನ್ನ ಇಬ್ಬರೂ ಮಕ್ಕಳು ನನಗೆ ಹೊಸ ವರ್ಷದ ಶುಭಾಶಯ ಹೇಳಿದರು. 


ದೋಸೆ ಮತ್ತು ಚಟ್ನಿ ಯನ್ನು ತಿಂದು ಮನೆ ಬಿಟ್ಟು ತುಮಕೂರಿನ ಮಹಾಲಕ್ಷ್ಮಿ ನಗರದ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಾಲಯಕ್ಕೆ ಹೋಗಿ ದೇವರ ಆಶೀರ್ವಾದ ಪಡೆದು ಮತ್ತೆ ನನ್ನ ಬೈಕ್ ಶಾಲೆಯ ಕಡೆ ತಿರುಗಿಸಿದೆ. ಶಾಲೆಯ ಒಳಗೆ ಪ್ರವೇಶಿಸುವಾಗ ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟ ಮಕ್ಕಳು ಸ್ವಾಗತಿಸಿ ಹೊಸ ವರ್ಷದ ಶುಭಾಶಯಗಳ ಕೋರಿದರು ನನ್ನ ಸಹೋದ್ಯೋಗಿ ಮಿತ್ರರೊಂದಿಗೆ  ಶುಭಾಶಯಗಳ ವಿನಿಮಯ ಮಾಡಿಕೊಂಡೆವು.


ಶಾಲೆಯ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ಇದು ಕ್ಯಾಲೆಂಡರ್ ಹೊಸ ವರ್ಷ ನಮಗೆ ಯುಗಾದಿ ಹೊಸ ವರ್ಷ ಆದರೂ ನಾನು ನಮ್ಮ ಶಿಕ್ಷಕರ ಪರವಾಗಿ ಹೊಸ ವರ್ಷದ ಶುಭಾಶಯ ಕೋರಿದೆ.


ಆಚರಣೆಯ ಗುಂಗಲ್ಲಿ ಇದ್ದ ಮಕ್ಕಳಿಗೆ

ಪಾಠ ಕೇಳಲು ಅಂತಹ ಆಸಕ್ತಿ ಇಲ್ಲದಿದ್ದರೂ "ಪೋಸ್ಟ್ ಇಂಡಿಪೆಂಡೆಂಟ್ ಇಂಡಿಯಾ" ಎಂಬ ಹತ್ತನೆಯ ತರಗತಿಯ ಪಾಠ ಆರಂಭಿಸಿ ಪಟೇಲರು ಭಾರತವನ್ನು ಏಕೀಕರಣ ಮಾಡಿದ ಪಾಠವನ್ನು ಮಾಡಿದೆ.

ನಮ್ಮ ಎರಡನೇ ಕುಟುಂಬವಾದ ಶಾಲೆಯಲ್ಲಿ ನಮ್ಮ ಕಲಾವಿದ ಮಿತ್ರರಾದ ಕೋಟೆ ಕುಮಾರ್ ರವರು ನಮಗೆಲ್ಲ ಕೇಕ್ ಮತ್ತು ಬೆಳಗಿನ ತಿಂಡಿಕೊಡಿಸಿದರು. ಸಂತಸದಿಂದ ಮಾತನಾಡುತ್ತಾ ಸಹೋದ್ಯೋಗಿಗಳು ತಿಂಡಿಯ ತಿಂದು ಅವರಿಗೆ ಧನ್ಯವಾದ ತಿಳಿಸಿದೆವು 


ಎಲ್ಲಾ ಮಕ್ಕಳು ಅವರವರ ತರಗತಿಯಲ್ಲಿ ತಂದಿದ್ದ ಕೇಕ್ ಗಳನ್ನು ಕತ್ತರಿಸಿ ಮಕ್ಕಳಿಗೆ ಹರಸಿದೆವು ಹೊಟ್ಟೆಗೆ ತಿನ್ನಬೇಕಾದ ಕೇಕ್ ನ್ನು ಮುಖ ಕೈಗೆ ಸವರಿ ಕಿರುಚುವ ಮಕ್ಕಳಿಗೆ ಹೊಸ ವರ್ಷವಾದರೂ  ಬೈಯ್ದು ಬುದ್ದಿ ಹೇಳಬೇಕಾಯಿತು.


ಕ್ಯಾತ್ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಆದ ಶ್ರೀ ರವೀಶ್ ರವರು ನಮ್ಮ ಶಾಲೆಗೆ ಬಂದು ಪೋಷಕರಿಗೆ ಮತ್ತು ಮಕ್ಕಳಿಗೆ ಮಕ್ಕಳ ಲಸಿಕೆಯ ಮಹತ್ವ ತಿಳಿಸಿ ಒಂಭತ್ತು ಮತ್ತು ಹತ್ತನೆಯ ತರಗತಿಯ ಮಕ್ಕಳಿಗೆ ಲಸಿಕೆ ನೀಡವ ಸರ್ಕಾರದ ನಿರ್ಧಾರವನ್ನು ಪೋಷಕರಿಗೆ ತಿಳಿಸಿದರು .


ತರಗತಿ ಮುಗಿಸಿ ಮನೆಗೆ ಬಂದು ಹೊಸ ವರ್ಷದ ಅಂಗವಾಗಿ ಕುಟುಂಬದ ಸದಸ್ಯರೊಂದಿಗೆ  ವಿಶೇಷ ಕಾಯಿ ಹೋಳಿಗೆ ಊಟ ಮಾಡಿ ವಿಶ್ರಾಂತಿ ಪಡೆದೆ. 


ಸಂಜೆ ಮನರಂಜನೆಗೆ ದುರ್ಗದ ಜಗನ್ನಾಥ ಚಲನಚಿತ್ರ ಮತ್ತು ಸರಿಗಮಪ ಹಾಡಿನ ಕಾರ್ಯಕ್ರಮ ‌ನೋಡಿದೆ ಈ ನಡುವೆ ಆತ್ಮೀಯರು ಮತ್ತು ಹಿತೈಷಿಗಳಾದ ಶ್ರೀ ನಂಜುಂಡಪ್ಪ ಸರ್ ರವರ ‌ಮನೆಗೆ ಹೋಗಿ ಅವರಿಗೆ ಹೊಸ ವರ್ಷದ ಶುಭಾಶಯಗಳ ತಿಳಿಸಿ ಮಾತಾನಾಡಿ ಬಂದೆ. 


ರಾತ್ರಿಯ ಚಪಾತಿ ಊಟದ ನಂತರ ಪಲ್ಲವಿ ಇಡೂರು ಬರೆದ "ಆಗಸ್ಟ್‌ ಮಾಸದ ನೆನಪು " ಪುಸ್ತಕ ಓದಿ ಮುಗಿಸಿದೆ ಆ ಪುಸ್ತಕ ಭಾರತದ ಸ್ವಾತಂತ್ರ್ಯ ಹೋರಾಟದ ಕೆಲ ಒಳಮಗ್ಗಲುಗಳ ಪರಿಚಯಿಸಿತು ಭಾರತ ಎರಡು ದೇಶಗಳಾಗಲು ನೈಜ ಕಾರಣ ತಿಳಿಯಲು ಎಲ್ಲರೂ ಆ ಪುಸ್ತಕ ಓದಲೇಬೇಕು.


ಹೀಗೆ ಹೊಸ ಕ್ಯಾಲೆಂಡರ್ ವರ್ಷದ ಮೊದಲ ದಿನ ಬಹಳ ಸಂತಸದಿಂದ ಕಳೆದ ನನ್ನನ್ನು ರಾತ್ರಿ ಹನ್ನೊಂದು ಗಂಟೆಗೆ ನಿದ್ರಾದೇವಿಯ ಸ್ವಾಗತಿಸಿದಾಗ ಇಲ್ಲ ಎನ್ನುವ ಮನಸಾಗಲಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

01 ಜನವರಿ 2022

ಹೊಸ ವರ್ಷದ ಸಂಕಲ್ಪಗಳು


 



ಹೊಸ ವರ್ಷದ ಸಂಕಲ್ಪ


ಪ್ರತಿ ದಿನ ಪ್ರತಿ ಕ್ಷಣವನ್ನು ಸ್ಮರಣಾರ್ಹವಾಗಿಸಲು ನಾನು ಪ್ರಯತ್ನ ಪಡುತ್ತಿರುವೆ ಆದರೆ ಕೆಲವೊಮ್ಮೆ ನೋವು ದುಃಖಗಳು ನಮ್ಮನ್ನು ಕಾಡುತ್ತವೆ. 2021 ರಲ್ಲಿ ಸ್ಮರಣಾರ್ಹ ಕೆಲದಿನಗಳ ಪಟ್ಟಿ ಮಾಡುವುದಾದರೆ 


೧ ನನ್ನ "ಸಿಹಿಜೀವಿಯ ಗಜಲ್ ಪುಸ್ತಕ " ಲೋಕಾರ್ಪಣೆ ಆದ ದಿನ 

೨ ನನ್ನ " ವಿದ್ಯಾರ್ಥಿಗಳಿಗೆ ಪ್ರಬಂಧಗಳು " ಪುಸ್ತಕ ಬಿಡುಗಡೆಯಾದ ದಿನ

೩ ನೇಶನ್ ಬಿಲ್ಡರ್ ಅವರ್ಡ್ ಪಡೆದ ದಿನ

೪ ಮೂರು ವರ್ಷಗಳ ನಂತರ ಧರ್ಮಸ್ಥಳ ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಮಾಡಿದ ದಿನ

೫ ನಮ್ಮ ತೋಟದಲ್ಲಿ ಕಳೆದ ದಿನಗಳು 

೬ ನನ್ನ ಶಾಲಾ ಮಕ್ಕಳಿಗೆ ಪಾಠ ಮಾಡಿದ ಪ್ರತಿದಿನ

೭ ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ ಪ್ರತಿ ಕ್ಷಣ.


2022 ರ ನನ್ನ ಸಂಕಲ್ಪಗಳು


೧ ನನ್ನ ತರಗತಿಯನ್ನು ಇನ್ನೂ ಆಕರ್ಷಕವಾಗಿ ಮಾಡಿ ಮಕ್ಕಳಿಗೆ ಇನ್ನೂ ಉತ್ತಮ ಕಲಿಕೆ ಮಾಡಿಸುವುದು

೨ ಕನಿಷ್ಟಪಕ್ಷ ೫ ಹೊಸ ಪುಸ್ತಕಗಳನ್ನು ಬರೆದು ಪ್ರಕಟ ಮಾಡುವುದು.

೩ ಕನಿಷ್ಟ ಪಕ್ಷ ೨೫ ಕ್ಕೂ ಹೆಚ್ಚು ಪುಸ್ತಕಗಳನ್ನು ಓದುವುದು.

೪.  ಐತಿಹಾಸಿಕ ಸ್ಥಳಗಳಿಗೆ  ಪ್ರವಾಸ ಮಾಡುವುದು .



ಸಿಹಿಜೀವಿ. 

ಸಿ ಜಿ ವೆಂಕಟೇಶ್ವರ



31 ಡಿಸೆಂಬರ್ 2021

ಭ್ರಷ್ಟಾಚಾರಕ್ಕೆ ಕೊನೆ ಎಂದು


 


ಭ್ರಷ್ಟಾಚಾರ ಕಡಿಮೆಯಾಗಿದೆಯಾ?


ಡಿಜಿಟಲ್‌ ತಂತ್ರಜ್ಞಾನದಿಂದ ಭ್ರಷ್ಟಾಚಾರ ಖಂಡಿತವಾಗಿಯೂ ಕಡಿಮೆಯಾಗಿಲ್ಲ . ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳಿ ರಾಜಾರೋಷವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ . ಆರ್ ಟಿ ಓ .ಕಂದಾಯ ಮುಂತಾದ ಇಲಾಖೆಯ ಭ್ರಷ್ಟಾಚಾರ ತೊಡೆಯಲು ದೇವರೇ ಬಂದರೂ ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ.


ಡಿಜಿಟಲ್ ತಂತ್ರಜ್ಞಾನದ ಪರಿಣಾಮವಾಗಿ ಮೂಡಿಬಂದ 

ಡಿಜಿಟಲ್ ಕರೆನ್ಸಿ ಇನ್ನೊಂದು ಮಟ್ಟದ ಭ್ರಷ್ಟಾಚಾರದ ಮೂಲ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗಿದೆ.ಭ್ರಷ್ಟಾಚಾರ ಮಾಡದ ಅಧಿಕಾರಿಗಳನ್ನು ದುರ್ಬೀನು ಹಾಕಿ ಹುಡಕಬೇಕಾದ ಕಾಲ ಬಂದಿದೆ .ಇನ್ನೂ ಕೆಲವರು ಅವರು  ಭ್ರಷ್ಟಾಚಾರ ಮಾಡದಿದ್ದರೂ ಖಂಡಿತವಾಗಿಯೂ ಅವರ ಜೀವನದಲ್ಲಿ ಒಂದಲ್ಲ ಒಂದು ದಿನ ಭ್ರಷ್ಟಾಚಾರಕ್ಕೆ ಒಳಗಾಗೇ ಇರುವರು.



ಒಟ್ಟಾರೆ ಭ್ರಷ್ಟಾಚಾರ ಅವಿನಾಶಿ ನಾವು ಅದಕ್ಕೆ ಹೊಂದಿಕೊಂಡುಬಿಟ್ಟಿದ್ದೇವೇನೋ ಎಂಬ ಮಟ್ಟಿಗೆ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಮಾಸದ ನೆನಪು .ಹನಿಗವನ


 




*ಮಾಸದ ನೆನಪು*


ಚುಮು ಚುಮು 

ಕೊರೆವ ಚಳಿಯೆಂದರೆ

ಅದು ಡಿಸೆಂಬರ್ 

ಮಾಸದ ನೆನಪು |

ಅವನೊಂದಿಗೆ 

ಬಿಸಿಯಪ್ಪುಗೆಯಲಿ ಕಳೆದ

ಮಾಸದ ನೆನಪು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ನೇತಾಜಿಯವರೇ ನಿಜವಾದ ನೇತಾರ


 


ನೇತಾಜಿಯವರೇ ನಿಜವಾದ ನೇತಾರ.


ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅವರ ಅಹಿಂಸೆ, ಸತ್ಯಾಗ್ರಹ ಮುಂತಾದ ಅಸ್ತ್ರಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು.ಆದರೂ  ಸ್ವಾತಂತ್ರ್ಯ ಪಡೆಯಲು ಸುಭಾಷ್ ಚಂದ್ರ ಬೋಸ್ ರವರ ಮಾರ್ಗವೇ ಸರಿಯಾಗಿತ್ತು ಎಂಬುದು ನನ್ನ ಅನಿಸಿಕೆ.


ನರಿ ಬುದ್ದಿಯ ಕೆಂಪು ಮೂತಿಯವರ ಕುತಂತ್ರಗಳು , ಕೆಟ್ಟ ನಡೆಗಳು, ಗೋಮುಖ ವ್ಯಾಘ್ರ ಗುಣಗಳು, ಒಡೆದು ಆಳುವ ನಿಸ್ಸೀಮರಿಗೆ ಶಾಂತಿ ಅಹಿಂಸೆಯ ನಡೆಗಳು ನಾಟಲೇ ಇಲ್ಲ ಎಂಬುದನ್ನು ನಮ್ಮ ದೇಶದ ಇತಿಹಾಸ ಓದಿದ ಯಾರಾದರೂ ಒಪ್ಪಿಕೊಳ್ಳಲೇ ಬೇಕು . ಪರಂಗಿಗಳಿಗೆ ದಂಡಂ ದಶಗುಣಂ ನೀತಿಯೇ ಸರಿಯಾಗಿತ್ತು.ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಿವೆ ಎಂದು ಗುಡುಗಿದ ನೇತಾಜಿವರ ಘರ್ಜನೆಗೆ ಬ್ರಿಟಿಷರು ಅಕ್ಷರಶಃ ಕಂಗಾಲಾಗಿ ಹೋದರು.ಅವರ ಆಕ್ರಮಣಕಾರಿ ನೀತಿಗೆ ಆಗಿನ ಯುವಜನ ಮಾರುಹೋಗಿ ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.ಇದರಲ್ಲಿ ಮಹಿಳೆಯರು ಸಹ ಪಾಲ್ಗೊಂಡರು ಎಂಬುದನ್ನು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ರಂತವರನ್ನು ಉದಾಹರಣೆ ನೀಡಬಹುದು.


ಹಿಂಸೆಯನ್ನು ಯಾರೂ ಪ್ರಚೋದಿಸಬಾರದು ಎಂಬುದನ್ನು ನಾನೂ ಒಪ್ಪುವೆ ಆದರೆ ದುಷ್ಟ ಸಂಹಾರ ಕ್ಕೆ ಕೊನೆಯ ಅಸ್ತ್ರವಾಗಿ ಹಿಂಸೆ ತಪ್ಪಲ್ಲ ಎಂಬ ನಮ್ಮ ಶಾಸ್ತ್ರ ಪುರಾಣಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಲೇಬೇಕು. ಮಹಿಷ ,ರಕ್ತಬೀಜರಂತಹ ರಕ್ಕಸರ ಸಂಹಾರ ಮಾಡದೇ ಶಾಂತಿ ಮಂತ್ರ ಪಠಿಸುತ್ತಾ ದೇವಿ ಕುಳಿತಿದ್ದರೆ ಜನರ ಪಾಡೇನಾಗುತ್ತಿತ್ತು? ಇನ್ನೂ ಕೃಷ್ಣಾವತಾರಗಳಲ್ಲಿಯೂ ಅಸುರಿ ಶಕ್ತಿಗಳ ಸಂಹಾರಕ್ಕೆ ಹಿಂಸೆ ತಪ್ಪಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ನೇತಾಜಿಯವರ ಮಾರ್ಗವೇ ಸರಿ ಎಂಬುದನ್ನು ಕೊನೆಗೆ ಮಹಾತ್ಮ ಗಾಂಧೀಜಿಯವರೇ ರೋಸಿ 1942 ರಲ್ಲಿ "ಬ್ರಿಟೀಷರೇ ಭಾರತ ಬಿಟ್ಟು ತೊಲಗಿ " ಎಂದು ಗುಡುಗಿ ಡೂ ಆರ್ ಡೈ ಎಂದು ಪರೋಕ್ಷವಾಗಿ ಪ್ರಭಲವಾದ ಹೋರಾಟಕ್ಕೆ ಕರೆ ನೀಡಿದ್ದು ನೇತಾಜಿವರ ಮಾರ್ಗವೇ ಸರಿ ಎಂಬುದನ್ನು ಒಪ್ಪಿದಂತೆ ಎಂದು ಕೆಲವರು ಹೇಳುವುದು ತಪ್ಪಲ್ಲ ಎನಿಸುತ್ತದೆ.



ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತು ಎಂದಿಗೂ ಪ್ರಸ್ತುತ. ದುಷ್ಟ ಬುದ್ದಿಯ ಆಂಗ್ಲರ ಮಣಿಸಲು ಅಹಿಂಸೆಯ ಮಾರ್ಗ ಹಿಡಿಯದೇ ಬೇರೆ ದಾರಿಯಿರಲಿಲ್ಲ ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬಂತೆ ನಮ್ಮ ನೇತಾಜಿವರು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸೆಯ ಮಾರ್ಗ ಅನುಸರಿಸಿದ್ದು ತಪ್ಪಲ್ಲ ಅಂದು ಅದು ಅನಿವಾರ್ಯವಾಗಿತ್ತು. ನೇತಾಜಿವರ ಮುಂದಾಲೋಚನೆ, ಅವರ ಚಿಂತನೆ ಎಂದಿಗೂ ಅನುಕರಣೀಯ ಅದಕ್ಕೆ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಈಗಲೂ ಭಾರತೀಯರಿಗೆಲ್ಲ ಒಬ್ಬರೇ ನೇತಾಜಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ