31 ಡಿಸೆಂಬರ್ 2021

ಭ್ರಷ್ಟಾಚಾರಕ್ಕೆ ಕೊನೆ ಎಂದು


 


ಭ್ರಷ್ಟಾಚಾರ ಕಡಿಮೆಯಾಗಿದೆಯಾ?


ಡಿಜಿಟಲ್‌ ತಂತ್ರಜ್ಞಾನದಿಂದ ಭ್ರಷ್ಟಾಚಾರ ಖಂಡಿತವಾಗಿಯೂ ಕಡಿಮೆಯಾಗಿಲ್ಲ . ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳಿ ರಾಜಾರೋಷವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ . ಆರ್ ಟಿ ಓ .ಕಂದಾಯ ಮುಂತಾದ ಇಲಾಖೆಯ ಭ್ರಷ್ಟಾಚಾರ ತೊಡೆಯಲು ದೇವರೇ ಬಂದರೂ ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ.


ಡಿಜಿಟಲ್ ತಂತ್ರಜ್ಞಾನದ ಪರಿಣಾಮವಾಗಿ ಮೂಡಿಬಂದ 

ಡಿಜಿಟಲ್ ಕರೆನ್ಸಿ ಇನ್ನೊಂದು ಮಟ್ಟದ ಭ್ರಷ್ಟಾಚಾರದ ಮೂಲ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗಿದೆ.ಭ್ರಷ್ಟಾಚಾರ ಮಾಡದ ಅಧಿಕಾರಿಗಳನ್ನು ದುರ್ಬೀನು ಹಾಕಿ ಹುಡಕಬೇಕಾದ ಕಾಲ ಬಂದಿದೆ .ಇನ್ನೂ ಕೆಲವರು ಅವರು  ಭ್ರಷ್ಟಾಚಾರ ಮಾಡದಿದ್ದರೂ ಖಂಡಿತವಾಗಿಯೂ ಅವರ ಜೀವನದಲ್ಲಿ ಒಂದಲ್ಲ ಒಂದು ದಿನ ಭ್ರಷ್ಟಾಚಾರಕ್ಕೆ ಒಳಗಾಗೇ ಇರುವರು.



ಒಟ್ಟಾರೆ ಭ್ರಷ್ಟಾಚಾರ ಅವಿನಾಶಿ ನಾವು ಅದಕ್ಕೆ ಹೊಂದಿಕೊಂಡುಬಿಟ್ಟಿದ್ದೇವೇನೋ ಎಂಬ ಮಟ್ಟಿಗೆ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಮಾಸದ ನೆನಪು .ಹನಿಗವನ


 




*ಮಾಸದ ನೆನಪು*


ಚುಮು ಚುಮು 

ಕೊರೆವ ಚಳಿಯೆಂದರೆ

ಅದು ಡಿಸೆಂಬರ್ 

ಮಾಸದ ನೆನಪು |

ಅವನೊಂದಿಗೆ 

ಬಿಸಿಯಪ್ಪುಗೆಯಲಿ ಕಳೆದ

ಮಾಸದ ನೆನಪು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ನೇತಾಜಿಯವರೇ ನಿಜವಾದ ನೇತಾರ


 


ನೇತಾಜಿಯವರೇ ನಿಜವಾದ ನೇತಾರ.


ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅವರ ಅಹಿಂಸೆ, ಸತ್ಯಾಗ್ರಹ ಮುಂತಾದ ಅಸ್ತ್ರಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು.ಆದರೂ  ಸ್ವಾತಂತ್ರ್ಯ ಪಡೆಯಲು ಸುಭಾಷ್ ಚಂದ್ರ ಬೋಸ್ ರವರ ಮಾರ್ಗವೇ ಸರಿಯಾಗಿತ್ತು ಎಂಬುದು ನನ್ನ ಅನಿಸಿಕೆ.


ನರಿ ಬುದ್ದಿಯ ಕೆಂಪು ಮೂತಿಯವರ ಕುತಂತ್ರಗಳು , ಕೆಟ್ಟ ನಡೆಗಳು, ಗೋಮುಖ ವ್ಯಾಘ್ರ ಗುಣಗಳು, ಒಡೆದು ಆಳುವ ನಿಸ್ಸೀಮರಿಗೆ ಶಾಂತಿ ಅಹಿಂಸೆಯ ನಡೆಗಳು ನಾಟಲೇ ಇಲ್ಲ ಎಂಬುದನ್ನು ನಮ್ಮ ದೇಶದ ಇತಿಹಾಸ ಓದಿದ ಯಾರಾದರೂ ಒಪ್ಪಿಕೊಳ್ಳಲೇ ಬೇಕು . ಪರಂಗಿಗಳಿಗೆ ದಂಡಂ ದಶಗುಣಂ ನೀತಿಯೇ ಸರಿಯಾಗಿತ್ತು.ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಿವೆ ಎಂದು ಗುಡುಗಿದ ನೇತಾಜಿವರ ಘರ್ಜನೆಗೆ ಬ್ರಿಟಿಷರು ಅಕ್ಷರಶಃ ಕಂಗಾಲಾಗಿ ಹೋದರು.ಅವರ ಆಕ್ರಮಣಕಾರಿ ನೀತಿಗೆ ಆಗಿನ ಯುವಜನ ಮಾರುಹೋಗಿ ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.ಇದರಲ್ಲಿ ಮಹಿಳೆಯರು ಸಹ ಪಾಲ್ಗೊಂಡರು ಎಂಬುದನ್ನು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ರಂತವರನ್ನು ಉದಾಹರಣೆ ನೀಡಬಹುದು.


ಹಿಂಸೆಯನ್ನು ಯಾರೂ ಪ್ರಚೋದಿಸಬಾರದು ಎಂಬುದನ್ನು ನಾನೂ ಒಪ್ಪುವೆ ಆದರೆ ದುಷ್ಟ ಸಂಹಾರ ಕ್ಕೆ ಕೊನೆಯ ಅಸ್ತ್ರವಾಗಿ ಹಿಂಸೆ ತಪ್ಪಲ್ಲ ಎಂಬ ನಮ್ಮ ಶಾಸ್ತ್ರ ಪುರಾಣಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಲೇಬೇಕು. ಮಹಿಷ ,ರಕ್ತಬೀಜರಂತಹ ರಕ್ಕಸರ ಸಂಹಾರ ಮಾಡದೇ ಶಾಂತಿ ಮಂತ್ರ ಪಠಿಸುತ್ತಾ ದೇವಿ ಕುಳಿತಿದ್ದರೆ ಜನರ ಪಾಡೇನಾಗುತ್ತಿತ್ತು? ಇನ್ನೂ ಕೃಷ್ಣಾವತಾರಗಳಲ್ಲಿಯೂ ಅಸುರಿ ಶಕ್ತಿಗಳ ಸಂಹಾರಕ್ಕೆ ಹಿಂಸೆ ತಪ್ಪಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ನೇತಾಜಿಯವರ ಮಾರ್ಗವೇ ಸರಿ ಎಂಬುದನ್ನು ಕೊನೆಗೆ ಮಹಾತ್ಮ ಗಾಂಧೀಜಿಯವರೇ ರೋಸಿ 1942 ರಲ್ಲಿ "ಬ್ರಿಟೀಷರೇ ಭಾರತ ಬಿಟ್ಟು ತೊಲಗಿ " ಎಂದು ಗುಡುಗಿ ಡೂ ಆರ್ ಡೈ ಎಂದು ಪರೋಕ್ಷವಾಗಿ ಪ್ರಭಲವಾದ ಹೋರಾಟಕ್ಕೆ ಕರೆ ನೀಡಿದ್ದು ನೇತಾಜಿವರ ಮಾರ್ಗವೇ ಸರಿ ಎಂಬುದನ್ನು ಒಪ್ಪಿದಂತೆ ಎಂದು ಕೆಲವರು ಹೇಳುವುದು ತಪ್ಪಲ್ಲ ಎನಿಸುತ್ತದೆ.



ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತು ಎಂದಿಗೂ ಪ್ರಸ್ತುತ. ದುಷ್ಟ ಬುದ್ದಿಯ ಆಂಗ್ಲರ ಮಣಿಸಲು ಅಹಿಂಸೆಯ ಮಾರ್ಗ ಹಿಡಿಯದೇ ಬೇರೆ ದಾರಿಯಿರಲಿಲ್ಲ ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬಂತೆ ನಮ್ಮ ನೇತಾಜಿವರು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸೆಯ ಮಾರ್ಗ ಅನುಸರಿಸಿದ್ದು ತಪ್ಪಲ್ಲ ಅಂದು ಅದು ಅನಿವಾರ್ಯವಾಗಿತ್ತು. ನೇತಾಜಿವರ ಮುಂದಾಲೋಚನೆ, ಅವರ ಚಿಂತನೆ ಎಂದಿಗೂ ಅನುಕರಣೀಯ ಅದಕ್ಕೆ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಈಗಲೂ ಭಾರತೀಯರಿಗೆಲ್ಲ ಒಬ್ಬರೇ ನೇತಾಜಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ವಿದಾಯ , ಸ್ವಾಗತ


 



*ವಿದಾಯ*


ನಿಧಾನವಾಗಿ ಸರಿಯುತಿದೆ

ಎರಡು ಸಾವಿರದ ಇಪ್ಪತ್ತೊಂದು|

ಸರ್ವರಿಗೆ  ನಲಿವಿಗಿಂತ

ನೋವುಗಳನೇ ನೀಡಿತು 

ಒಂದರ ಮೇಲೊಂದು| |


*ಸ್ವಾಗತ*


ಸ್ವಾಗತಿಸೋಣ ಬರುವ

ಎರಡು ಸಾವಿರದ ಇಪ್ಪತ್ತೆರಡು|

ಆಶಾವಾದವಿಟ್ಟುಕೊಳ್ಳೊಣ

ಈ ವರ್ಷ ಚಿಗುರಲಿದೆ

ಬರಡಾದ ಕೊರಡು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.


ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು .



30 ಡಿಸೆಂಬರ್ 2021

ಮುಂಬರುವ ವರ್ಷದಲ್ಲಿ ಸಾರ್ಥಕ ಜೀವನ ನಮ್ಮದಾಗಲಿ


 

ಮುಂಬರುವ ವರ್ಷದಲ್ಲಿ ಸಾರ್ಥಕ ಜೀವನ ನಮ್ಮದಾಗಲಿ.

ಹಾಗೆ ನೋಡಿದರೆ ಉಗಾದಿ ನಮ್ಮ ಹೊಸ ವರ್ಷ ಆಗಲೂ ನಮಗೆ ಬೆಲ್ಲಕ್ಕಿಂತ ಬೇವೇ ಹೆಚ್ಚಾಗಿ ಕಂಡುಬಂತು . ಕ್ಯಾಲೆಂಡರ್ ಪ್ರಕಾರದ  ಹೊಸ ವರ್ಷವಾದರೂ ನಮ್ಮ ಬಾಳಲ್ಲಿ ನಿಜವಾದ ಹೊಸತನ ತರಲಿ ಎಂದು ಆಶಾವಾದ ಹೊಂದಿರುವವನು ನಾನು.

ಇದಮಿತ್ತಂ ,ಹೀಗೇ ಜೀವನವಿರುವಿದು. ಹೀಗೇ ಮುಂಬರಲಿರುವ ವರ್ಷ ಇರುವುದು ಎಂಬುದನ್ನು ಊಹೆ ಮಾಡಿದರೆ ನಮ್ಮಂತಹ ಮೂರ್ಖರು ಬೇರೊಬ್ಬರಿಲ್ಲ.
ಬರುವ ಹೊಸ ವರ್ಷಗಳಲ್ಲಿ ನಮಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಖಚಿತ ಅದಕ್ಕೆ ನಾವೆಲ್ಲರೂ ಮಾನಸಿಕವಾಗಿ ಸಿದ್ದರಿರಬೇಕು.

ಕೋವಿಡ್ ಕಾಲದಲ್ಲಿ ಮಾನವನ ಆರ್ಥಿಕ ,ಸಾಮಾಜಿಕ, ಶೈಕ್ಷಣಿಕ, ಮಾನಸಿಕ ಮುಂತಾದ ಎಲ್ಲಾ ರಂಗಗಳಲ್ಲಿ ಮಾನವನಿಗೆ ನೋವೇ  ಅಧಿಕವಾಗಿದೆ.ಈ ವರ್ಷ ಕೂಡಾ ಕೋವಿಡ್ ತನಯ ಅಟ್ಟಹಾಸ ಮೆರೆಯಲು ಕಾದು ಕುಳಿತಂತಿದೆ.  ಇದರ ಜೊತೆಯಲ್ಲಿ ನಾವೇ ಸೃಷ್ಟಿಸಿದ ಪರಿಸರ ಅಸಮತೋಲನ ಮತ್ತು ಪರಿಸರದ ಮೇಲೆ ನಾವು ಮಾಡಿರುವ ಅನಾಚಾರಗಳ ಪರಿಣಾಮವಾಗಿ ಅಕಾಲಿಕವಾದ ಮಳೆ ,ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಭೂಕುಸಿತಗಳು ನಮ್ಮಯ ಬದುಕನ್ನು ನುಂಗಲು ಬಾಯಿ ತೆರೆದು‌ಕುಳಿತಿರಬಹುದು. ಅಂತಹ ಪರಿಸ್ಥಿತಿ ಬಂದರೆ ನಾವು ಸಿದ್ದರಿರಬೇಕು. ಏಕೆಂದರೆ ಮಾಡಿದ್ದುಣ್ಣೋ ಮಹರಾಯ.

ಜೀವನದಲ್ಲಿ ನಾವು ಯೋಜನೆ ಮಾಡಿ ಜೀವಿಸುವೆವವು ಎಂದರೆ ಪ್ರಕೃತಿ ಮತ್ತು ಭಗವಂತ ಅದನ್ನು ಉಲ್ಟಾ ಮಾಡಿ ಈಗ ಹೇಗಿದೆ ನೋಡು ಆಟ? ಎಂದು  ನಗುವನು ಆದ್ದರಿಂದ ನಾವು ಮುಂಬರುವ ವರ್ಷದಲ್ಲಿ ಅತಿಯಾಗಿ ಪ್ಲಾನ್ ಮಾಡದೆ ಬಂದದ್ದೆಲ್ಲಾ ಬರಲಿ ಅವನ ದಯವೊಂದಿರಲಿ ಎಂದು ಆಶಾವಾದದ ಮೂಲಕ ಹೊಸ ವರ್ಷ ಸ್ವಾಗತಿಸೋಣ. ಎಲ್ಲಾ ವರ್ಷದಂತೆ ಮುಂಬರುವ 2022 ಸಹ ನಮ್ಮ ಬದುಕಲ್ಲಿ ಒಂದು ನಂಬರ್ ಆ ನಂಬರ್ ದಾಟಲೇಬೇಕು ದಾಟುತ್ತೇವೆ. ಆದರೆ ಆ ವರ್ಷದಲ್ಲಿ ನಾನು ಸವಾಲುಗಳು ಎದುರಿಸಿ ನನ್ನ ಜೀವನದಲ್ಲಿ ಮರೆಯಲಾಗದ ಎಷ್ಟು ಅವಿಸ್ಮರಣೀಯ ಘಟನೆಗಳನ್ನು ಸೃಷ್ಟಿ ಮಾಡಿಕೊಂಡೆ? ನನ್ನಿಂದ ಎಷ್ಟು ಜನರ ಮೊಗದಲ್ಲಿ ನಗುವರಳಿತು? ನಾನು ಎಷ್ಟು ಜನರಿಗೆ ಸಣ್ಣ ಪುಟ್ಟ ಸಹಾಯ ಮಾಡಿದೆ? ಎಂಬುವ ಅಂಶಗಳು ನಮ್ಮ ಜೀವನದ ಸಾರ್ಥಕತೆಯನ್ನು ಪ್ರತಿಬಿಂಬಿಸುತ್ತವೆ.

ಇಂತಹ ಸಾರ್ಥಕ ಜೀವನವು ಮುಂಬರುವ ವರ್ಷದಲ್ಲಿ ನಮ್ಮದಾಗಲಿ ಎಂದು ಆಶಿಸುವ

ನಿಮ್ಮ ಸಿಹಿಜೀವಿ.

ಸಿ ಜಿ ವೆಂಕಟೇಶ್ವರ
ತುಮಕೂರು.