This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
21 ಅಕ್ಟೋಬರ್ 2021
20 ಅಕ್ಟೋಬರ್ 2021
ಇಜಯಾ ಕಾದಂಬರಿ ವಿಮರ್ಶೆ
ಇಜಯಾ ಕಾದಂಬರಿ ವಿಮರ್ಶೆ
ಪೂರ್ಣಿಮಾ ಮಾಳಗಿಮನಿ ರವರ ಇಜಯ ಕಾದಂಬರಿ ಓದಿದೆ ಈ ಕಾದಂಬರಿ ಓದಿ ಮುಗಿಸಿದಾಗ
ಕಾದಂಬರಿ ನಮ್ಮನ್ನು ಚಿಂತನೆಗೆ ಹಚ್ಚುವ ಮೂಲಕ ನಮ್ಮ ಬದುಕಿನ ಆದ್ಯತೆಗಳು , ಸಾಮಾಜಿಕ ಚೌಕಟ್ಟುಗಳು ,ಜವಾಬ್ದಾರಿ, ಕ್ರಿಯಾಶೀಲತೆ ,ಹೆಸರು, ಆತ್ಮತೃಪ್ತಿ, ಇವುಗಳಲ್ಲಿ ಯಾವುದು ಮೇಲು ಯಾವುದು ಮೊದಲು, ನಮ್ಮ ಸಂಬಂಧಗಳ ಬೆಲೆ ಏನು? ಮುಂತಾದವುಳ ಬಗ್ಗೆ ಇರುವ ನಮ್ಮ ಮೂಲಭೂತ ನಂಬಿಕೆಗಳನ್ನು ಮತ್ತೊಮ್ಮೆ ಯೋಚಿಸುವಂತಿದೆ.
ಈ ಕಾದಂಬರಿಯನ್ನು
ರಾತ್ರಿ ಏಳು ಗಂಟೆಗೆ ಓದಲು ಕುಳಿತ ನಾನು ಊಟ ಮಾಡಲು ಹತ್ತು ನಿಮಿಷಗಳ ಬ್ರೇಕ್ ನೀಡಿ ,ರಾತ್ರಿ ಹನ್ನೆರಡು ನಲವತ್ತೇಳಕ್ಕೆ ಮುಗಿಸಿದೆ.ಕಾದಂಬರಿ ಮುಗಿಸಿದಾಗ ನನ್ನವಳು ಪದೇ ಪದೇ ಏನ್ರೀ ಅದು ಇನ್ನೂ ಮುಗಿಲಿಲ್ವ ನಿಮ್ ಓದು ಎಂದು ಬೇಸರ ವ್ಯಕ್ತ ಪಡಿಸಿದರೂ ನಾನು ಮಂಜನಂತೆ ನನ್ನವಳನ್ನು ಕಾಣಿಕೆಯ ಹುಂಡಿಯ ಕಡೆ ಕಳಿಸಲು ಇಷ್ಟ ಪಡಲಿಲ್ಲ !
ಪೂರ್ಣಿಮಾ ಮಾಳಗಿಮನಿ ರವರು
2017 ರಲ್ಲಿ 'ಎನಿ ವನ್ ಬಟ್ ದಿ ಬ್ರೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ ಸಂಕಲನ ಪ್ರಕಟಿಸಿದ್ದಾರೆ. ಇಂಗ್ಲೀಷಿನಲ್ಲಿ ಹೆಚ್ಚು ಓದುಗರನ್ನು ತಲುಪುವುದು ಸುಲಭವಾದರೂ, ಬರಹವನ್ನು ಆನಂದಿಸುವ ಸಲುವಾಗಿ ಅವರು ಇತ್ತೀಚೆಗೆ ಹೆಚ್ಚಾಗಿ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದಾರೆ. 'ಸಂಗಾತ', 'ಸಮಾಜಮುಖಿ', 'ಸಂಗಾತಿ' ಮುಂತಾದ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ಕಿರುಗತೆಗಳು, ಕವನಗಳು, ತಾಂತ್ರಿಕ ವಿಷಯಗಳ ಕುರಿತ ಲೇಖನಗಳು, ಸಾಹಿತ್ಯಕ ಲೇಖನಗಳು ಪ್ರಕಟವಾಗಿವೆ.
ಚಿಕ್ಕಂದಿನಿಂದಲೂ ಸಾಹಿತ್ಯದ ಕಡೆಗೆ ಅಪಾರ ಒಲವಿದ್ದರೂ ಪೂರ್ಣಿಮಾ ರವರು ಪದವಿ ಪಡೆದದ್ದು ಮಾತ್ರ ಚಿತ್ರದುರ್ಗದ ಎಸ್.ಜೆ.ಎಮ್.ಐ.ಟಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯದಲ್ಲಿ, ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಇಂಜಿನೀಯರ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾದಂಬರಿಯ ಮುಖ್ಯ ಪಾತ್ರ ವಿಜಯ ಬ್ಯಾಂಕ್ ಉದ್ಯೋಗಿ ಕೈತುಂಬ ಸಂಬಳ ಉತ್ತಮ ಸಹೋದ್ಯೋಗಿಗಳ ಒಡನಾಟ ಕ್ರಮೇಣವಾಗಿ ಇಬ್ಬರು ಸಹೋದ್ಯೋಗಿಗಳು ದೂರಾದ ಮೇಲೆ ಅದೇ ಯೋಚನೆಯಲ್ಲಿ ಪತಿಯ ಸಹಕಾರದಿಂದ ಮತ್ತು ಪ್ರೇರಣೆಯಿಂದ ಅವಳಲ್ಲಿರುವ ಕಥೆಗಾರ್ಥಿ ಹೊರಬರುವಳು. ಕೆಲಸ, ಮನೆಯ ಜವಾಬ್ದಾರಿ ನಡುವೆ ಸಾಹಿತ್ಯದಲ್ಲಿ ಅವಳು ಸಾಧನೆ ಮಾಡಬೇಕೆಂದು ಕಂಡ ಕನಸು ನನಸಾಯಿತೇ ಅವಳು ಈ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾದವೇ ಎಂಬುದನ್ನು ನೀವೇ ಕಾದಂಬರಿ ಓದಿ ಅನುಭವಿಸಬೇಕು.
ನರೇಂದ್ರ ಪೈ ರವರು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿರುವಂತೆ
ಪತ್ತೇದಾರಿ ಕತೆಯೊ ಎಂಬಂತೆ ತೊಡಗುವ ಈ ಕಾದಂಬರಿ ಕ್ರಮೇಣ ಒಂದು ತ್ರಿಲ್ಲರ್ ಆಗುವ ಎಲ್ಲ ಲಕ್ಷಣಗಳನ್ನೂ ಮೈಗೂಡಿಸಿಕೊಂಡು ಓದುಗನನ್ನು ಕುತೂಹಲದ ಸೆಳೆತಕ್ಕೆ ಒಡ್ಡಿ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸ್ವಲ್ಪ ಹದತಪ್ಪಿದರೂ ಕೇವಲ ಮೊನಲಾಗ್ ಆಗಿಬಡಬಹುದಾಗಿದ್ದ ಉತ್ತಮ ಪುರುಷ ನಿರೂಪಣೆಯ ಅಪಾಯಗಳಿಂದ ತಪ್ಪಿಸಿಕೊಂಡು, ದೈನಂದಿನ ಬದುಕಿಗೇ ಸಂಬಂಧಿಸಿದ ಸತ್ಯದ ಶೋಧಕ್ಕೀಳಿಯುವಲ್ಲಿ ಜನಪ್ರಿಯ ಮಾದರಿಯ ಕಥಾನಕ ಸಾಧಿಸಬಹುದಾದ ಒಂದು ವಿಧವನ್ನು ಇಲ್ಲಿ ಪೂರ್ಣಿಮಾ ಅವರು ನಮಗೆ ತೋರಿಸಿ ಕೊಡುತ್ತಾರೆ. ನಮ್ಮ ಅಸ್ತಿತ್ವ, ಅದನ್ನು ದೃಢೀಕರಿಸುವ ಮನುಷ್ಯ ಸಂಬಂಧಗಳು, ಅದರ ಅಸ್ಮಿತೆ, ಅದನ್ನು ದೃಢೀಕರಿಸುವ ನಮ್ಮ ಕ್ರಿಯಾಶೀಲ ಸಾಧನೆಗಳು, ಅಸ್ತಿತ್ವ ಮತ್ತು ಅಸ್ಮಿತೆಯ ಮೂರ್ತರೂಪವಾದ ದೇಹ ಹಾಗೂ ಅಮೂರ್ತರೂಪವಾದ ಮನಸ್ಸು ಎರಡರಲ್ಲಿ ಯಾವುದು ನಮ್ಮ ಒಡನಾಡಿಗಳ ಮಟ್ಟಿಗೆ ರಿಲವಂಟ್ ಆಗಿ ಉಳಿಯುತ್ತದೆ, ಎರಡೂ ಮುಖ್ಯ ಯಾರಿಗೆ ಎರಡೂ ಮುಖ್ಯವಲ್ಲ ಯಾರಿಗೆ, ಇವುಗಳಲ್ಲಿ ಒಂದರ ಹೊರತು ಇನ್ನೊಂದಕ್ಕೆ ಇರುವ ಪರಿಕಲ್ಪನೆ ಎಷ್ಟರಮಟ್ಟಿಗೆ ನಿಜ ಎನ್ನುವುದೆಲ್ಲ ಸೈಕಲಾಜಿಕಲ್/ಫಿಲಾಸಫಿಕಲ್ ಎನ್ನುವುದು ನಿಜ. ಆದರೆ ಒಂದು ಸುಂದರ ಕಥನದ ಓಘದಲ್ಲ ಪೂರ್ಣಿಮಾ ಅವರು ಇದನ್ನು ಓದುಗನ ಮನಸ್ಸಿನಲ್ಲಿ ಹುಳ ಬಿಟ್ಟಂತೆ ಯಶಸ್ವಿಯಾಗಿರುವುದು ಮೆಚ್ಚುಗೆಗೂ ಅಚ್ಚರಿಗೂ ಕಾರಣವಾಗುತ್ತದೆ.
ಜನಪ್ರಿಯ ಕಥೆಗಾರರು ಮತ್ತು ಅನುವಾದಕರೂ ಆದ ಕೇಶವ ಮಳಗಿರವರು ಈ ಕಾದಂಬರಿಗೆ ಸುದೀರ್ಘವಾದ ಮುನ್ನುಡಿ ಬರೆದಿರುವರು .ಕಾದಂಬರಿ ಓದಿದ ಮೇಲೆ ಮತ್ತೆ ಮುನ್ನುಡಿ ಓದಿದರೆ ಇನ್ನೊಂದು ಹೊಳವು ಹೊಳೆದು ಮತ್ತೊಮ್ಮೆ ಕಾದಂಬರಿ ಓದಬೇಕು ಎನಿಸುತ್ತದೆ.
ಕೇಶವ ಮಳಗಿರವರವ ಮಾತುಗಳನ್ನು ಉಲ್ಲೇಖಿಸುವುದಾದರೆ
"ಈ ಕಾದಂಬರಿಯ ನಾಯಕಿಯ ಉಭಯ ಕುಟುಂಬಗಳು (ತಂದೆ-ತಾಯಿ, ಗಂಡನ ಮನೆಯ ಪರಿವಾರ) ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಸಂಸಾರಗಳು, ಆ ನಿಮಿತ್ತವಾಗಿಯೇ ಸಾಮಾಜಿಕ ಭದ್ರತೆಯ ರೂಪವಾದ ನೌಕರಿ, ಅದರ ಹಣ ನೀಡಬಹುದಾದ ಸುಖವನ್ನು ಕಂಡುಕೊಳ್ಳುವಲ್ಲಿ ಪ್ರಯತ್ನಿಸುವವರು. ಇಲ್ಲಿ ಹೆಣ್ಣಿನ ನಿರೀಕ್ಷಿತ ಪಾತ್ರವೆಂದರೆ, ಕುಟುಂಬ ನಿರ್ವಹಣೆ, ಸಂಪಾದನೆ, ಮಕ್ಕಳ ಪಾಲನೆ ಪೋಷಣೆ, ರುಚಿರುಚಿಗಳ ಆದ್ಯತೆ, ಪ್ರವಾಸ ಇತ್ಯಾದಿ. ನಿಜವಾದ ಸಂಘರ್ಷವಿರುವುದೇ ಇಲ್ಲಿ. ಇಲ್ಲಿನ ನಾಯಕಿ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಆಕೆಯ ಪತಿಯೇ ಉತ್ತೇಜಕ ಶಕ್ತಿಯಾಗಿದ್ದಾನೆ. ಆತನೊಬ್ಬ ಪತ್ನಿಯ ಇಚ್ಛೆಯರಿತು ನಡೆವ ನಮ್ರನಂತೆ ಕಂಡರೂ ಕಥಾನಾಯಕಿಯ ನಿರ್ಧರಿತ ಕ್ಷಣದಲ್ಲಿ ಇಂಥ ದುಸ್ಸಾಹಸದ ಸಹವಾಸ ನನಗೆ ಬೇಡ ಎಂಬ ಲಕ್ಷಣಗಳನ್ನು ತೋರುವವನು. ಸಮಸ್ಯೆಯಿರುವುದು ಹೊರಗಿನ ಸಹಜ ಬೆಂಬಲ ದೊರಕಿಸಿಕೊಳ್ಳುವುದರಲ್ಲಲ್ಲ. ತನ್ನ ರೋಚಕ ವಿಚಾರ, (ದು)ಸಾಹಸಗಳನ್ನು ಹಂಚಿಕೊಳ್ಳುವ, ಹಂಗಿರದ ಸ್ವಾತಂತ್ರ್ಯವನ್ನು ತನ್ನೊಡನೆ ಆಸ್ವಾದಿಸಬಲ್ಲ ಮತ್ತು ಆಂಟಿನ ಗುಣ ಹೊಂದಿರದ, ನೀರಿನಷ್ಟು ಪಾರದರ್ಶಕವಾಗಿರಬಲ್ಲ ಸಾಂಗತ್ಯ ಅದರ ಗೈರು ಹಾಜರಿಯ ವಿಷಾದ ಹೊರಗೆ ಪ್ರಕಟವಾಗದೆ, ಆಳದಲ್ಲಿ ಕೊರೆದು ಮರವನ್ನು ಬೀಳಿಸುವಷ್ಟು ಪ್ರಬಲವಾಗಿರುವಂಥದ್ದು, ಈ ವಿಷಾದ ಮಡುಗಟ್ಟಿ ಬದುಕು ಮೂರಾಬಟ್ಟೆಯಾಗಲು ಕಾರಣ ನಾವು ಕನಸುಗಳನ್ನು ಗ್ರಹಿಸುವ ರೀತಿಯಲ್ಲಿರುವ ಸಾಂಸ್ಕತಿಕ ದೋಷಗಳೇ ಆಗಿವೆ. ಇಲ್ಲಿ ಹೆಣ್ಣು ಸ್ವತಂತ್ರಳು ಎಂದರೂ ಆಕೆ ಸ್ವಾತಂತ್ರತೆಯ ಭ್ರಮೆಯಲ್ಲಿರುವ ಬಂಧಿ.ಕಥೆ ಬೆಳೆದಂತೆ ಈ ಅಂಶಗಳು ಬಹುಬೇಗ ಓದುಗರು ಅರಿಯುತ್ತ ರೋಚಕತೆ, ವಿಷಾದ, ಆಘಾತ ಇತ್ಯಾದಿಗಳನ್ನು ಅನುಭವಿಸುವರು ಪೂರ್ಣಿಮಾರ ಕಥನ ಶೈಲಿ, ತಂತ್ರ, ವಿನ್ಯಾಸ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕಥೆಯನ್ನು ತೀರ ಹೊಸತೊಂದು ಬಗೆಯಲ್ಲಿ ನಡೆಸಬೇಕೆಂಬ ಛಲದ ನಿರೂಪಣೆ ನನ್ನನ್ನು, ಬಹುವಾಗಿ ಆಕರ್ಷಿಸಿದ ಅಂಶವಾಗಿದೆ. ಘಟನೆಗಳನ್ನು ಹೆಣೆಯುವ ಕ್ರಮ ಮತ್ತು ಸಿಕ್ಕು ನಿರೂಪಣೆಯ ಮೂಲಕ ಕಥನದ ಮೇಲೆ ನಿಯಂತ್ರಣ ಸಾಧಿಸುವ ವಿಧಾನ ಕೂಡ ಮೇಲುಸ್ತರದ್ದಾಗಿದೆ. "
ಸ್ವತಃ ಹವ್ಯಾಸಿ ಬರಹಗಾರನಾದ ನಾನು ಕೂಡಾ ನನ್ನ ಜೀವನದಲ್ಲಿ ಇಜಯ ರೀತಿಯಲ್ಲಿ ತುಮಲಗಳನ್ನು ಅನುಭವಿಸಿದ್ದೇನೆ .ಕೆಲವೊಮ್ಮೆ ಇದು ನನ್ನದೇ ಕಥೆಯೇನೊ ಅನಿಸಿದ್ದು ಸುಳ್ಳಲ್ಲ.
ಒಟ್ಟಾರೆ ಉತ್ತಮ ಕಾದಂಬರಿ ಓದಿಸಿದ, ಚಿಂತನೆಗೆ ಹಚ್ಚಿದ , ಲೇಖಕಿಯವರ ಭಾಷೆಯಲ್ಲಿ ಹೇಳುವುದಾದರೆ ತಲೆಯಲ್ಲಿ ಹುಳ ಬಿಟ್ಟ ಅವರಿಗೆ ನಮನಗಳು.ಇನ್ನೂ ಇಂತಹ ಉತ್ತಮ ಕೃತಿಗಳು ಅವರ ಲೇಖನಿಯಿಂದ ಬರಲಿ ಎಂದು ಆಶಿಸುವೆ.
ಕಾದಂಬರಿ ಹೆಸರು: ಇಜಯಾ
ಲೇಖಕಿ: ಪೂರ್ಣಿಮಾ ಮಾಳಗಿಮನಿ
ಪ್ರಕಾಶನ: ಗೋಮಿನಿ ಪ್ರಕಾಶನ
ಪುಟಗಳು :184
ಬೆಲೆ: 160.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು.
9900925529
ಪಿ ಎಂ ಪೋಷಣ್ .ಕಾರ್ಯಕ್ರಮವನ್ನು ಯಶಸ್ವಿಗೊಳಿಸೀಣ.
ಪಿ ಎಂ ಪೋಷಣ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
ಭಾರತವು ಜಾಗತಿಕ ಆಹಾರ ಭದ್ರತೆ ಯಲ್ಲಿ ನೂರಾ ಹದಿಮೂರು ದೇಶಗಳ ಪೈಕಿ ಎಪ್ಪತ್ತೊಂದನೇ ಸ್ಥಾನ ಹೊಂದಿದೆ. ಇದು ಸಂತಸ ಪಡುವ ವಿಷಯವಲ್ಲ ಅಂದ ಮಾತ್ರಕ್ಕೆ ಕಳಪೆ ಸಾಧನೆಯೇನಲ್ಲ.
ಕೋವಿಡ್ ನಂತಹ ದುರಿತ ಕಾಲದಲ್ಲಿ ಭಾರತದ ಪಡಿತರ ವಿತರಣಾ ವ್ಯವಸ್ಥೆಯ ಪಾತ್ರವನ್ನು ನಾವು ಮೆಚ್ಚಲೇ ಬೇಕು. ಇದರ ಜೊತೆಗೆ ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಯು ಎರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೂ ಕೂಡಾ ಮಕ್ಕಳ ಅಪೌಷ್ಟಿಕತೆ ಮತ್ತು ಆಹಾರ ಭದ್ರತೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲು ಕಾರಣವಾಗಿತ್ತು ಎಂದು ನಂಬಲೇಬೇಕು.
ಈಗ ಕರ್ನಾಟಕ ರಾಜ್ಯ ಸರ್ಕಾರ ಇದೇ ತಿಂಗಳ 21 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪಿ.ಎಂ ಪೋಷಣ್ ಹೆಸರಿನಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲು ಯೋಜಿಸಿರುವುದು ಸ್ವಾಗತಾರ್ಹ.
ಕೋವಿಡ್ ಪೂರ್ಣವಾಗಿ ತೊಲಗಿರದ ಈ ಕಾಲದಲ್ಲಿ ಆರಂಭವಾಗುತ್ತಿರುವ ಈ ಕಾರ್ಯಕ್ರಮಕ್ಕೆ ಸರ್ವರೂ ಕೈಜೋಡಿಸಿ ಹಸಿದ ಮಕ್ಕಳ ಹೊಟ್ಟೆ ತುಂಬಿಸುವ ಕಾರ್ಯ ಮಾಡಬೇಕಿದೆ.
ಇದಕ್ಕೆ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಅಡುಗೆ ಕೋಣೆಯೊಳಗೆ ಮಕ್ಕಳ ಪ್ರವೇಶ ನಿಷಿದ್ಧ ಮಾಡಬೇಕಿದೆ.
ನಂದಕಗಳ ಅಳವಡಿಕೆ ಕಡ್ಡಾಯ ಮಾಡಬೇಕು
ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸುವ ಮುನ್ನ ಸ್ವಚ್ಛತೆಯ ಬಗ್ಗೆ (ಕ್ರಿಮಿ ಕೀಟಗಳು ಹಲ್ಲಿ, ಜಿರಲೆ ಇರದಂತೆ) ಎಚ್ಚರಿಕೆ ವಹಿಸಬೇಕು
ದಿನಸಿ ಪಾಕೆಟ್‌ಗಳ ಮೇಲೆ ಅವಧಿ ಮೀರುವ ದಿನಾಂಕ ಪರಾಮರ್ಶಿಸಿ ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು. ಅಡುಗೆ ತಯಾರಿಸುವ ಮುನ್ನ ತರಕಾರಿಗಳನ್ನು ನೀರಿನಿಂದ ಸಚ್ಛಗೊಳಿಸತಕ್ಕದ್ದು.
ಊಟಕ್ಕೆ ಮುಂಚೆ ಶಿಕ್ಷಕರು ರುಚಿ ನೋಡಿ ರುಚಿ ಪುಸ್ತಕದಲ್ಲಿ ದಾಖಲಿಸಬೇಕು.
ಆಕಸ್ಮಿಕ ಅವಘಡಗಳ ಬಗ್ಗೆ ತುರ್ತು ಕ್ರಮಕ್ಕೆ ಎಚ್ಚರಿಕೆ ವಹಿಸಲು “ಎಮರ್ಜೆನಿ ಮಡಿಕಲ್ ಪ್ಲಾನ್" ತಯಾರಿಸಿ ಶಾಲೆಯಲ್ಲಿಡಬೇಕು
ಅಡುಗೆ ಸಾಮಗ್ರಿಗಳಾದ, ಎಣ್ಣೆ, ಉಪ್ಪು ಮತ್ತು ಹಾಲಿನ ಪುಡಿ ಇತ್ಯಾದಿಗಳನ್ನು ನಿಗದಿತ ತೂಕ / ಪರಿಮಾಣದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು.
ಊಟಕ್ಕೆ ಮುಂಚೆ ಮತ್ತು ನಂತರ ಮಕ್ಕಳು ಸೋಪು ಬಳಸಿ ಕೈತೊಳೆಯುವ ವಿಧಾನವನ್ನು ರೂಢಿಸಿಕೊಳ್ಳಲು ಸಲಹೆ ನೀಡಬೇಕು .
ಶಾಲೆ ನಡೆಯುವ ಎಲ್ಲಾ ದಿನಗಳಲ್ಲಿ ಕಡ್ಡಾಯವಾಗಿ ಬಿಸಿಯೂಟವನ್ನು ನೀಡಲು ಕ್ರಮ ಕೈಗೊಳ್ಳಬೇಕು.
ಆಹಾರ ತಯಾರಿಸಿದ ನಂತರ ಕಡ್ಡಾಯವಾಗಿ ಸರಿಯಾಗಿ ಮುಚ್ಚಿಡಬೇಕು.
ಕುಡಿಯುವ ನೀರಿನ ಟ್ಯಾಂಕನ್ನು ಕ್ರಮಬದ್ಧವಾಗಿ ಸ್ವಚ್ಛಗೊಳಿಸಬೇಕು.ಮತ್ತು ಮಕ್ಕಳು ಕುಡಿಯಲು ಮನೆಯಿಂದ ಬಿಸಿನೀರು ತರಲು ಮಾರ್ಗದರ್ಶನ ನೀಡಬೇಕು.
ನಿಗದಿತ ಪ್ರಮಾಣದ ತರಕಾರಿಯ ಬಳಸಿ ಊಟ ತಯಾರಿಸಬೇಕು.
ಅಡುಗೆಯವರು ಏಪ್ರಾನ್ ಮತ್ತು ತಲೆಗೆ ಟೋಪಿ ಬಳಸಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.
ಊಟದ ವೇಳೆಯಲ್ಲಿ ಎಲ್ಲಾ ಶಿಕ್ಷಕರ ಹಾಗೂ ಅಡುಗೆಯವರು ಹಾಜರಿದ್ದು ಸಾಮಾಜಿಕ ಅಂತರ ಕಾಪಾಡಿಕೊಂಡು ಎಸ್. ಓ .ಪಿ. ಪ್ರಕಾರ ಊಟ ಬಡಿಸಬೇಕು.
ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಆಹಾರವನ್ನು ತುಂಬಿಕೊಂಡು ಬಡಿಸಬೇಕು
ಅಡುಗೆಗೆ ಬಳಸುವ ಪಾತ್ರೆಗಳು ಸ್ವಚ್ಚವಾಗಿರುವುದನ್ನು ಮತ್ತು ಕಿಲುಬು ಬಾರದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು .
ಚಿಕ್ಕ ಮಕ್ಕಳನ್ನು ಅಡುಗೆಕೋಣೆಯಲ್ಲಿ ಕಡೆ ಬರದಂತೆ ಎಚ್ಚರ ವಹಿಸಬೇಕು.
ಕಳಪೆ ಅಥವಾ ಹಾಳಾದ ಆಹಾರಧಾನ್ಯಗಳ ಬಳಕೆ ಮಾಡಲೇಬಾರದು.
ಅಡುಗೆ ಕೋಣೆಯಲ್ಲಿ ಅನುಪಯುಕ್ತ ವಸ್ತುಗಳ ಸಂಗ್ರಹ ಮಾಡದೇ ಸ್ವಚ್ಚತೆ ಕಾಪಾಡಿಕೊಳ್ಳಬೇಕು.
ಯಾವುದೇ ಕಾರಣಕ್ಕೂ ಮಕ್ಕಳು ಪಾತ್ರೆ ಮುಂದೆ ನಿಂತು ಆಹಾರವನ್ನು
ತಟ್ಟೆಗೆ ಹಾಕಿಸಿಕೊಳ್ಳದಂತೆ ಕ್ರಮ ವಹಿಸಬೇಕು.
ಈ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳಲ್ಲಿ ಮಕ್ಕಳು ,ಪೋಷಕರು, ಎಸ್ ಡಿ .ಎಂ.ಸಿ .ಸಮುದಾಯ ಶಾಲಾ ಶಿಕ್ಷಕರು, ಅಧಿಕಾರಿಗಳು ಪಿ. ಎಂ. ಪೋಷಣ್ ಕಾರ್ಯಕ್ರಮದ ಯಶಸ್ಸಿಗೆ ಪಣ ತೊಡಬೇಕಿದೆ.ತನ್ಮೂಲಕ ಮಕ್ಕಳಿಗೆ ಅನ್ನದ ಜೊತೆಗೆ ಜ್ಞಾನ ನೀಡುವ ಸತ್ಕಾರ್ಯಕ್ಕೆ ಮುನ್ನುಡಿ ಬರೆಯಬೇಕಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
ಜೀವಿಗಳ ಪ್ರಶ್ನೆ. ಹನಿಗವನ
*ಜೀವಿಗಳ ಪ್ರಶ್ನೆ*
ಗಿಡ ಮರ ಬಳ್ಳಿ ಗಾಳಿ
ನೀರು ಭೂಮಿ ಎಲ್ಲಾ
ಪರೋಪಕಾರ ಮಾಡುತಾ
ಪ್ರತಿದಿನ ನಮಗೆ ಸಂತಸವ
ನೀಡುತಿವೆ ಮರೆಸುತ ನೋವ|
ನಮ್ಮ ಸ್ವಾರ್ಥವ ನೋಡುತ್ತಾ
ಪ್ರಕೃತಿಯ ಸಕಲ ಜೀವಿಗಳು
ಪ್ರಶ್ನಿಸುತ್ತಿವೆ ನೀನಾರಿಗಾದೆಯೋ
ಎಲೆ ಮಾನವ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.

 



