12 ಅಕ್ಟೋಬರ್ 2021

ಕಪ್ಪು ಬಿಳುಪಿನ ಪಟದ ಬಣ್ಣದ ನೆನಪುಗಳು . ಬಾಲ್ಯದ ನೆನಪಿನ ಮೆರವಣಿಗೆ.


 


*ಕಪ್ಪು ಬಿಳುಪಿನ ಪಟದ ಬಣ್ಣದ ೆನೆಪುಗಳು*

ಅದು 1984 ರ ವರ್ಷ ನಾನಾಗ ನನ್ನೂರು  ಚೌಡಗೊಂಡನಹಳ್ಳಿಯಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ.ಏಕೋಪಾದ್ಯಾಯ ಶಾಲೆಗೆ ತಿಪ್ಪೇಶಪ್ಪ ಎಂಬ ಶಿಕ್ಷಕರು ನಮಗೆ ಬೋಧಿಸುತ್ತಿದ್ದರು. ಒಂದರಿಂದ ನಾಲ್ಕು ತರಗತಿಗಳನ್ನು ಅವರು ನಿಭಾಯಿಸುತ್ತಾ ನಮಗೆ ಪಾಠ ಮಾಡುತ್ತಿದ್ದ ಕೌಶಲ್ಯ ನೆನದು ಈಗಲೂ ನನಗೆ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಕಾರಣ ಪ್ರಸ್ತುತ ಶಿಕ್ಷಕನಾದ ನಾನು ಕೇವಲ ಒಂದು ವಿಭಾಗಕ್ಕೆ  ಸೀಮಿತವಾದ ಮಕ್ಕಳಿಗೆ ಬೋಧಿಸುವ ವೇಳೆ ಹಲವಾಯ ಸವಾಲುಗಳು ಎದುರಾಗುತ್ತವೆ, ಅಂತದ್ದರಲ್ಲಿ ಅಂದು ನಾಲ್ಕು ತರಗತಿಯ ಮಕ್ಕಳನ್ನು ಅವರು ನಿಭಾಯಿಸುತ್ತಿದ್ದರು ಜೊತೆಗೆ ಈಗಿನಂತೆ ಆಗ ವಿಷಯವಾರು ಶಿಕ್ಷಕರು ಇರಲಿಲ್ಲ ,ಕನ್ನಡ , ಗಣಿತ, ಸಮಾಜ ಪರಿಚಯ, ವಿಜ್ಞಾನ ಹೀಗೆ ಎಲ್ಲಾ ವಿಷಯಗಳನ್ನು ಅವರೇ ನಮಗೆ ಕಲಿಸುತ್ತಿದ್ದರು ಅವರ ಜ್ಞಾನ ಮತ್ತು ಚಾಕಚಕ್ಯತೆಯನ್ನು ಮೆಚ್ಚಲೇ ಬೇಕು.

ಪಾಠವನ್ನು ಬಹಳ ಸೊಗಸಾಗಿ ಮಾಡುತ್ತಿದ್ದ ಜೊತೆಗೆ ನಮಗೆ ಕ್ರೀಡೆ, ಹೊರಸಂಚಾರ, ಪ್ರವಾಸ ಹೀಗೆ ನಮ್ಮ ನ್ನು ಸದಾ ಸಂತೋಷಪಡಿಸುತ್ತಾ ನಮಗರಿವಿಲ್ಲದೇ ಜ್ಞಾನದ ಊಟ ಬಡಿಸುತ್ತಿದ್ದರು.
ವಾರಕ್ಕೊಮ್ಮೆ ಎಂಬಂತೆ, ಕೆರೆಯಾಗಲ ಹಳ್ಳಿಯ ಕೆರೆ, ಹೊರಕೆರೆದೇವರಪುರದ ಕಲ್ಯಾಣಿ, ದೇವಸ್ಥಾನ ಹೀಗೆ ಹೊರಸಂಚಾರ ಮಾಡಿಸಿ ನಮಗರಿವಿಲ್ಲದ ಹೊಸ ಜಗತ್ತಿನ ದರ್ಶನ ಮಾಡಿಸಿದ್ದರು ನಮ್ಮ ಮೇಷ್ಟ್ರು.
ಮುಂದಿನ ವಾರ ದುರ್ಗ ಕ್ಕೆ ಟೂರ್  ಕರೆದುಕೊಂಡು ಹೋಗುತ್ತೇನೆ ಬರುವವರು ಹತ್ತು ರೂಪಾಯಿಗಳನ್ನು ನಿಮ್ಮ ಮನೆಯಲ್ಲಿ ಕೇಳಿ ತಂದು ಕೊಡಿ ಎಂದಿದ್ದರು. ನಾನು ನನ್ನ ಅಮ್ಮನ ಬಳಿ ವಿಷಯ ಹೇಳಿದೆ ಅಮ್ಮ ಸೀರೆ ಸೆರಗಿನ ಕೊನೆಯ ಗಂಟು ಬಿಚ್ಚಿ ಹತ್ತು ರೂಗಳ ನೋಟು ಕೊಟ್ಟರು. ಅರ್ಧ ಗಂಟೆಯ ಹಿಂದೆ    ಗೌಡರ ಮನೆಗೆ ಹೋಗಿ ಒಂದು ದಿನ ಕೂಲಿ ಮಾಡಿದ ದುಡ್ಡು ಇಸ್ಕಂಬರಬೇಕು ಎಂದು ಅಮ್ಮ ಅಂದದ್ದು ನಂತರ ನನಗೆ ನೆನಪಾಯಿತು.

ದುರ್ಗಕ್ಕೆ ಟೂರ್ ಹೋಗುವ ಹಿಂದಿನ ದಿನ ಬಹುಶಃ ನನ್ನಮ್ಮ ನಿದ್ದೆ ಮಾಡಿರಲಿಲ್ಲ ಎನಿಸುತ್ತದೆ. ಎರಡು ಗಂಟೆಗೇ ಎದ್ದು ಮೊಸರನ್ನದ ಬುತ್ತಿ ಕಟ್ಟಿದ್ದರು , ಅದನ್ನು ಸ್ಟೀಲ್ ಟಿಪನ್ ಕ್ಯಾರಿಯರ್ ಗೆ ಹಾಕಿ ರಡಿ ಮಾಡಿದ್ದರು. ನಾಲ್ಕು ಗಂಟೆಗೆ ನನ್ನ ಎಬ್ಬಿಸಿ ಬಿಸಿ ನೀರಿನ ಸ್ನಾನ ಮಾಡಿಸಿ ಬಟ್ಟೆಗಳನ್ನು ಹಾಕಿ ಕ್ರಾಪು ತೆಗೆದು , ಕಣ್ಣಾಸರ ತೆಗೆದು ನೆಟಿಗೆ ಮುರಿದು , "ಹುಸಾರು ಕಣಪ್ಪ ,ದುರ್ಗ ದೊಡ್ಡ ಪೇಟೆ ಮೇಷ್ಟ್ರು ನ  ಬಿಟ್ಟು ಎಲ್ಲೂ ಹೋಗಬ್ಯಾಡಾ , ತಗಾ ಇದನ್ನ ಖರ್ಚಿಗೆ ಇಕ್ಯಾ"
ಎಂದು ಮನೆಯ ಜೀರಿಗೆ ಡಬ್ಬಿಯಿಂದ ತೆಗೆದು ಒಂದು ರೂಪಾಯಿ ಕೊಟ್ಟರು.

ನಮ್ಮೂರಿನಿಂದ ನೇರವಾಗಿ ದುರ್ಗ ಕ್ಕೆ ಹೋಗಲು ಬಸ್ ಸೌಲಭ್ಯವಿರಲಿಲ್ಲ ಈಗಲೂ ಇಲ್ಲ ಅದು ಬೇರೆ ಮಾತು.
ಬೆಳಗಿನ ಜಾವದ ಐದೂವರೆಗೆ ನಮ್ಮ ಸ್ನೇಹಿತರು ಅವರ ಪೋಷಕರು  ಮೇಷ್ಟ್ರು ನಡೆದುಕೊಂಡು ಉಪ್ಪರಿಗೇನಹಳ್ಳಿಗೆ ಹೋದೆವು ಅಲ್ಲಿ ಖಂಡೇನಹಳ್ಳಿ ತಿಪ್ಪೇಸ್ವಾಮಿ ಬಸ್ ಹತ್ತಿ ಅಮ್ಮನಿಗೆ ಟಾಟಾ ಮಾಡಿದೆ. ಬಸ್  ಪಶ್ಚಿಮಾಭಿಮುಖವಾಗಿ ಚಲಿಸಿತು. ಗೆಳೆಯರ ಜೊತೆಯಲ್ಲಿ ಬಸ್ ಪಯಣದ ಅನಂದ ಅನುಭವಿಸುತ್ತಾ ನಂದನ ಹೊಸೂರು, ಹೊರಕೆರೆದೇವರಪುರ, ಮತಿಘಟ್ಟ, ಈಚಘಟ್ಟ, ಚಿತ್ರ ಹಳ್ಳಿ, ಹೀಗೆ ಪ್ರತಿ ಊರಿಗೆ ಬಸ್ ಬಂದಾಗ ಆ ಊರಿನ ಬೋರ್ಡ್ ಜೋರಾಗಿ ಎಲ್ಲಾ ಗೆಳೆಯರು ಸೇರಿ ಓದುತ್ತಿದ್ದೆವು ಅದನ್ನು ನೋಡುತ್ತಾ ನಮ್ಮ ಮೇಷ್ಟ್ರು ಒಳಗೊಳಗೆ ಖುಷಿ ಪಟ್ಟರು .ಯಾರೋ ಸಹಪ್ರಯಾಣಿಕರು "ಸೆನಾಗಿ ಬೋರ್ಡ್ ಒದ್ತೀರಾ ಕಣ್ರಾ ಹುಡುಗ್ರಾ,ಯಾರೋ ಮೇಷ್ಟ್ರು ಸೆನಾಗಿ ಹೇಳ್ಕೊಟ್ಟದಾರೆ" ಎಂದಾಗ ನಮಗೂ ಖುಷಿಯಾಯಿತು.

ದುರ್ಗ ಯಾರ್ ಇಳೀರಿ ಎಂದರು ಕಂಡಕ್ಟರ್ ,ಆಗಲೇ ನನಗೆ ಅರ್ಥವಾಗಿದ್ದು ನಾನು ಮೊದಲ ಬಾರಿಗೆ ದುರ್ಗ ತಲುಪಿದೆ ಎಂದು.
ಮೊದಲ ಬಾರಿಗೆ ಚಿತ್ರದುರ್ಗದ ದೊಡ್ಡ ಕಟ್ಟಡಗಳನ್ನು ನೋಡುತ್ತಾ ನಡೆದುಕೊಂಡು ರಂಗಯ್ಯನ ಬಾಗಿಲ ದಾಟಿ ದುರ್ಗದ ಕೋಟೆ ನೋಡಲು ಹೊರಟೆವು . ಮದ್ದು ಅರೆಯುವ ಕಲ್ಲುಗಳು, ಏಕನಾಥೇಶ್ವರಿ ದೇವಾಲಯ, ಮದ್ದಿನ ಮನೆ , ಅಕ್ಕತಂಗೇರ ಹೊಂಡ, ಓಬವ್ವನ ಕಿಂಡಿ ,ಹೀಗೆ ದುರ್ಗದ ಕೋಟೆಯ ಸ್ಥಳಗಳನ್ನು ಬೆರಗಿನಿಂದ ನೋಡಿದೆವು ಆ ಸ್ಥಳಗಳ ಬಗ್ಗೆ ಕೋಟೆಯ ಬಗ್ಗೆ ನಮ್ಮ ಮೇಷ್ಟ್ರು ನೀಡಿದ ವಿವರಣೆ ದುರ್ಗದ ಬಗ್ಗೆ ಹೆಮ್ಮೆ ಮೂಡಿಸಿತು.
"ಅಗೋ ನೋಡ್ರಿ ಅದು ಕುದುರೆ ಹೆಜ್ಜೆ ಅಲ್ಲಿಗೆ ನೀವು ಹತ್ತಾಕೆ ಆಗಲ್ಲ ದೊಡ್ಡಾರಾದ ಮೇಲೆ ಹತ್ತುವಿರಂತೆ ಬನ್ನಿ ಈಗ ಕೆಳಗೆ ಹೋಗೋಣ " ಅಂದ್ರು ನಮ್ಮ ಮೇಷ್ಟ್ರು.

ಏಳು ಸುತ್ತಿನ ಕೋಟೆ ಇಳಿದು
ಚಂದವಳ್ಳಿಯ ಕೆರೆಗೆ ಹೋದೆವು ಅಲ್ಲಿ ಗುಹೆಗಳನ್ನು ಹೊರಗಿನಿಂದಲೇ ನೋಡಿದೆವು ಆ ವೇಳೆಗಾಗಲೆ ನಮ್ಮ ಹೊಟ್ಟೆಗಳು ತಾಳ ಹಾಕುತ್ತಿದ್ದವು ಇದನ್ನು ಅರಿತ ನಮ್ಮ ಮೇಷ್ಟ್ರು "ಮಕ್ಕಳ .. ನಿಮ್ ಬುತ್ತಿ ಬಿಚ್ಚಿ ತಿನ್ರಿ, ಇಲ್ಲೇ ಕುಡಿಯಾಕೂ ನೀರಿದೆ" ಅಂದರು ಎಲ್ಲರ ಬುತ್ತಿ ಬಿಚ್ಚಿ, ಎಲ್ಲರ ತರ ತರದ ತಿಂಡಿಗಳನ್ನು ಹಂಚಿಕೊಂಡು ತಿಂದೆವು . ಅಲ್ಲೇ ಇರುವ ಪಾರ್ಕ್ ನಲ್ಲಿ ಸ್ವಲ್ಪ ಹೊತ್ತು ಆಟ ಆಡಿದೆವು.

ನಂತರ ನಡೆದುಕೊಂಡು ಗಾಯತ್ರಿ ಹೋಟೆಲ್, ದಾಟಿ ನೀಲಕಂಠೇಶ್ವರ ದೇವಾಲಯದಲ್ಲಿ ಕೈಮುಗಿದು ಮುಂದೆ ಸಾಗಿದೆವು .ನಮ್ಮ ಮೇಷ್ಟ್ರು ಒಂದು ದೊಡ್ಡ ಕಟ್ಟಡದ ಮುಂದೆ ನಿಲ್ಲಲು ಹೇಳಿದರು .ಆ ಕಟ್ಟಡದ ಮೇಲೆ ಪ್ರಭಾತ್ ಸ್ಟುಡಿಯೋ ಎಂಬ ಬೋರ್ಡ್ ಇತ್ತು , ಎಲ್ಲರೂ ಒಳಗೆ ನಡೆಯಿರಿ ಎಂದರು ,ಒಳಗೆ ಹೋದಾಗ ಪೋಟೊಗ್ರಾಪರ್ ನಮ್ಮನ್ನು ಸಾಲಾಗಿ ಕುಳ್ಳಿರಿಸಿ ಪೋಟೋ ತೆಗೆದರು.
ಪೋಟೋ ಸ್ಟುಡಿಯೋ ದಿಂದ ಹೊರಬಂದಾಗ ಸಂಜೆಯಾಗುತ್ತಿದ್ದದು ನಮ್ಮ ಗಮನಕ್ಕೆ ಬಂದಿತು , ಬಸ್ ಸ್ಟ್ಯಾಂಡ್ ಗೆ ಬಂದು  ರಾಜ್ ನೀನ್ ಬಸ್ ಹತ್ತಿ ಕುಳಿತೆವು .ಓಡಾಡಿ ಸುಸ್ತಾದ ನಾವು ಬಸ್ ನಲ್ಲಿ ತೂಕಡಿಸಲು ಶುರುಮಾಡಿದೆವು ಕೆಲವರು ನಿದ್ರೆಯನ್ನು ಮಾಡಿದರು .ನಮ್ಮ ಬಸ್ ಉಪ್ಪರಿಗೇನಹಳ್ಳಿ ತಲುಪಿದಾಗ ಕತ್ತಲಾಗಿತ್ತು .ಅಮ್ಮ ಬಸ್ಟಾಂಡ್ ನಲ್ಲಿ ನನಗಾಗಿ ಕಾದಿದ್ದರು. ನನ್ನ ಮಗ ಟೂರ್ ಹೋಗಿ ಬಂದ ಎಂಬ ಸಂತಸ ಅಮ್ಮನ ಮೊಗದಲ್ಲಿ ಇತ್ತು ಅದೇ ಆನಂದ ನನ್ನಲ್ಲೂ ಇತ್ತು.

ಒಂದು ವಾರದ ಬಳಿಕ ನಮ್ಮ ಮೇಷ್ಟ್ರು ನಮಗೆ ಒಂದೊಂದು ರಟ್ಟಿನ ಗ್ರೂಪ್ ಪೋಟೋ ಕೊಟ್ಟರು. ಅದರಲ್ಲಿ ನಮ್ಮನ್ನು ನಾವು ನೋಡಿ ಹಿರಿಹಿರಿ ಹಿಗ್ಗಿದೆವು .ನಾನಂತೂ ಯಾವಾಗಲೂ ಅದೇ ಪೋಟೋ ನೋಡುತ್ತಾ ಕೂರುತ್ತಿದ್ದೆ , ಏಕೆಂದರೆ ಅದು ನನ್ನ ಜೀವನದ ಮೊದಲ ಪಟ!

ನಲವತ್ತಾರು ವರ್ಷಗಳಲ್ಲಿ ಹೊರದೇಶ ನೇಪಾಳ ಸೇರಿದಂತೆ ನೂರಾರು ಸ್ಥಳಗಳಲ್ಲಿ ಪ್ರವಾಸ ಮಾಡಿರುವೆ ಆದರೆ ನನ್ನ ಮೊದಲ ದುರ್ಗದ ಪ್ರವಾಸವೇ ನನಗೆ ವಿಶೇಷವಾದ ಮತ್ತು ಹೆಚ್ಚು ಖುಷಿ ನೀಡಿದ ಪಯಣ ಎಂಬುದಂತೂ ಸತ್ಯ.
ವಿವಿಧ ಲೆನ್ಸ್ ಕ್ಯಾಮೆರಾಗಳಲ್ಲಿ  ,ಹೊಸ ಮಾದರಿಯ ಹೆಚ್ಚು ಮೆಗಾಪಿಕ್ಸಲ್ ಮೊಬೈಲ್ ಕ್ಯಾಮೆರಾಗಳಲ್ಲಿ ಸಾವಿರಾರು ಪೋಟೋ ತೆಗೆದುಕೊಂಡಿರುವೆ. ನಮ್ಮದೇ ಪೋಟೋಗಳು ಹೇಗಿದ್ದರೂ ನಮಗೆ ಚೆಂದ ಆದರೆ  ಮೊದಲ ಬಾರಿಗೆ ಪ್ರಭಾತ್ ಸ್ಟುಡಿಯೋದಲ್ಲಿ ಅಂದು  ತೆಗೆದ ಕಪ್ಪು ಬಿಳುಪಿನ ನನ್ನ ಜೀವನದ ಮೊದಲ ಪಟ ಅತ್ಯಂತ ಸುಂದರ ಪಟ. ಆ ಪಟದಲ್ಲಿ ನನ್ನ ಬಾಲ್ಯದ ನೂರಾರು ಬಣ್ಣದ ನೆನಪುಗಳಿವೆ.

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
990092529

ಜನಮಿಡಿತ ೧೨/೧೦/೨೧


 

ಸಿಂಹ ಧ್ವನಿ ೧೨/೨೦/೨೧

 


11 ಅಕ್ಟೋಬರ್ 2021

ಮಕ್ಕಳೇಕೆ ಮನೆ ಬಿಟ್ಟು ಹೋದರು?


 


ಮಕ್ಕಳೇಕೆ ಮನೆ ಬಿಟ್ಟು ಹೋದರು?


ಒಂದೇ ದಿನ ಮನೆ ಬಿಟ್ಟು ಹೋದ 7 ವಿಧ್ಯಾರ್ಥಿಗಳು,ಮೊಬೈಲ್ ನೋಡುವುದು ಬಿಟ್ಟು ಓದು ಎಂದಿದ್ದಕ್ಕಾಗಿ ಮಗನ ಆತ್ಮಹತ್ಯೆ , ಶಾಲೆಗಳಲ್ಲಿ ಮಕ್ಕಳ ಅತಿರೇಕದ ವರ್ತನೆಗಳ ಕಂಡು ಶಿಕ್ಷಕರು ಕಂಗಾಲು ,ಖಿನ್ನತೆಗೆ ಜಾರುತ್ತಿರುವ ಮಕ್ಕಳು. ಇಂತಹ  ಹಲವಾರು ಸುದ್ದಿಗಳನ್ನು ಮಾಧ್ಯಮದಲ್ಲಿ ನೋಡಿದಾಗ ಮನಸಿಗೆ ಬಹಳ ನೋವಾಗುತ್ತದೆ. ಈ ಸಮಸ್ಯೆಗಳಿಗೆ ಮೂಲ ಹುಡುಕುತ್ತಾ ಹೊರಟರೆ ಮೊದಲ ಬೆರಳು ಮಹಾಮಾರಿ ಕರೋನ ಕಡೆಗೆ ತೋರಿಸಿದರೆ ಉಳಿದ ಬೆರಳುಗಳು ಶಿಕ್ಷಣ ವ್ಯವಸ್ಥೆ, ಪೋಷಕರು, ಸಮುದಾಯದ ಕಡೆಗೆ ತೋರಿಸುತ್ತವೆ ಎಂಬ ಕಟು ಸತ್ಯ ಒಪ್ಪಿಕೊಳ್ಳಲೇಬೇಕಿದೆ.


ಇತ್ತೀಚಿಗೆ ವರದಿಯಾದ ಪ್ರಕರಣದಲ್ಲಿ  ಮಕ್ಕಳು ಪತ್ರ ಬರೆದಿಟ್ಟು 

"ಓದುವಂತೆ ಒತ್ತಡ ಹೇರುತ್ತಿದ್ದೀರಿ, ಆದರೆ ನಮಗೆ ಆಸಕ್ತಿ ಇಲ್ಲ ಆದ್ದರಿಂದ ಮನೆ ಬಿಟ್ಟು ಹೋಗುತ್ತಿದ್ದೇವೆ"  ಎಂದು ನಾಪತ್ತೆಯಾಗಿದ್ದಾರೆ.

ಪತ್ರದಲ್ಲಿ ಮುಂದುವರೆದು  ಆ ಬಾಲಕರು "ನೀವು ಓದುವಂತೆ ಒತ್ತಾಯ ಮಾಡಿದರೂ ನಮಗೆ ಓದಿನಲ್ಲಿ ಆಸಕ್ತಿ ಇಲ್ಲ. ಕ್ರೀಡೆಯಲ್ಲೇ ಹೊಸ ಜೀವನ ರೂಪಿಸಿಕೊಳ್ಳುತ್ತೇವೆ, ಕ್ರೀಡೆ ಎಂದರೆ ಕಬಡ್ಡಿ ತುಂಬ ಇಷ್ಟ, ಅದರಲ್ಲೇ ಉತ್ತಮ ಹೆಸರು, ವೃತ್ತಿ ಹಾಗೂ ಹಣ ಸಂಪಾದಿಸುತ್ತೇವೆ. ಕ್ರೀಡೆಯಲ್ಲೇ ಉತ್ತಮ ಸಾಧನೆ ಮಾಡಿ ಮತ್ತೆ ವಾಪಸ್ ಬರುತ್ತೇವೆ." ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .


ಈ ಘಟನೆ ಗಮನಿಸಿದಾಗ  ಮಕ್ಕಳು ಓದಲಿ ಎಂದು ಪೋಷಕರು ಅಪೇಕ್ಷೆ ಪಡಯವುದೇ ತಪ್ಪೇ? ಪೋಷಕರಿಗೆ ಅಷ್ಟೂ ಹಕ್ಕಿಲ್ಲವೇ? ಎಂದು ಸಾಮಾನ್ಯವಾಗಿ ಕೇಳುತ್ತೇವೆ .ಓದು ಎಂಬುದು ತಪ್ಪಲ್ಲ ಆದರೆ ಇದನ್ನೇ ಓದು, ಇಷ್ಟೇ ಓದು, ಇದೇ ಕೋರ್ಸ್ ಓದು, ಡಾಕ್ಟರ್ ಆಗಲೇಬೇಕು, 99% ಸ್ಕೋರ್ ಮಾಡಲೇ ಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಿದರೆ ಮಕ್ಕಳೇನು ಮೆಷಿನ್ನಾ? ಅಥವಾ ರೋಬಾಟಾ? ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಮಾದ್ಯಮಗಳು ಕ್ರೀಡಾಕ್ಷೇತ್ರದ ಸಾಧಕರ ಸಾಧನೆ ತೋರಿಸುವುದೇ ತಪ್ಪ? ತಪ್ಪಲ್ಲ ಆದರೆ ಕ್ರೀಡಾ ಕ್ಷೇತ್ರ, ಸಿನಿಮಾ ರಂಗದಲ್ಲಿ ಮಾತ್ರ ದುಡ್ಡು ಮಾಡಬಹುದು , ಅವರು ಮಾತ್ರ ಅತಿಮಾನುಷರು ಎಂದು 24/7 ಅವರ ಬಗ್ಗೆಯೇ ಅವರು ಕುಂತರೂ ,ನಿಂತರೂ ಸೀನಿದರೂ ಇನ್ನೊಂದು ಮಾಡಿದರೂ ತಿರುಗಿಸಿ ತಿರುಗಿಸಿ ತೋರಿಸಿದರೆ ಮಕ್ಕಳಿಗೆ ಆ ಕ್ಷೇತ್ರ ಮಾತ್ರ ಶ್ರೇಷ್ಠ ಎಂದು ಮಕ್ಕಳು ತೀರ್ಮಾನಕ್ಕೆ  ಬರುವುದು ಸಹಜ. ಮಾದ್ಯಮಗಳೂ ಕೇವಲ ಟಿ ಆರ್ ಪಿ ಅಥವಾ ಹಣಕ್ಕಾಗಿ ಕೆಲಸ ಮಾಡದೆ ಸ್ವಲ್ಪ ಮಟ್ಟಿನ ಸಾಮಾಜಿಕ ಬದ್ಧತೆಯನ್ನು ತೋರ್ಪಡಿಸಬೇಕಿದೆ.

ಯಾವುದೂ ಅತಿಯಾಗಬಾರದು . ಮಕ್ಕಳ ಇಷ್ಟ ಕಷ್ಟಗಳ ಕಡೆ ಪೋಷಕರು , ಶಿಕ್ಷಕರು ಸಮುದಾಯಗಳು ಸಹ ಸೂಕ್ಷ್ಮವಾಗಿ ಸ್ಪಂದಿಸಬೇಕಿದೆ.


 ಕೊರೋನಾಸಾಂಕ್ರಾಮಿಕದಿಂದ ಬರೋಬ್ಬರಿ19ತಿಂಗಳಿನಿಂದ ಜಗತ್ತಿನಾದ್ಯಂತ ಶಾಲಾ-ಕಾಲೇಜುಗಳು ಮುಚ್ಚಿದ್ದು ಸದ್ಯ ಈ ಪೈಕಿ ಅರ್ಧ ಶಾಲೆಗಳು ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಿವೆ. ಶೇ.34ರಷ್ಟು ಶಾಲೆಗಳು ಭೌತಿಕ ಮತ್ತು ಆನ್ಲೈನ್ ಎರಡೂ ತರಗತಿಗಳನ್ನು ಮುಂದುವರೆಸಿವೆಎಂದುಕೊವಿಡ್-19 ಗ್ಲೋಬಲ್ ಎಜುಕೇಶನ್ ರಿಕವರಿ ಟ್ರಾಕರ್ ತಿಳಿಸಿದೆ.


ಜಾನ್ಸ್ ಹಾಪ್ಟಿನ್ ವಿ.ವಿ, ವಿಶ್ವಬ್ಯಾಂಕ್ ಮತ್ತು ಯುನಿಸೆಫ್ ಜಂಟಿಯಾಗಿ 200ಕ್ಕೂ ಹೆಚ್ಚು ದೇಶಗಳಲ್ಲಿ ಶಾಲೆಗಳನ್ನು ತೆರೆ ಯಲು ರೂಪಿಸಿದ ಯೋಜನೆಯನ್ನು ಆಧರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಿವೆ. ವರದಿಯ ಪ್ರಕಾರ ಶೇ.80ರಷ್ಟು ಶಾಲೆಗಳು ನಿರಂತರ ತರಗತಿಗಳನ್ನು ಆರಂಭಿಸಿವೆ. ಈ ಪೈಕಿ ಶೇ.54ರಷ್ಟು ಶಾಲೆಗಳು ಭೌತಿಕ ತರಗತಿಗಳನ್ನು ಆರಂಭಿಸಿವೆ, ಶೇ.34ರಷ್ಟು ಶಾಲೆಗಳು ಭೌತಿಕ, ಆನ್ ಲೈನ್ ಎರಡೂ ರೀತಿಯ ತರಗತಿ ನಡೆಸುತ್ತಿವೆ. ಉಳಿದ ಶೇ.10ರಷ್ಟು ಶಾಲೆಗಳು  ಆನ್ಲೈನ್ ತರಗತಿಯನ್ನೇ ಮುಂದುವರೆಸಿವೆ. ಆನ್ಲೈನ್ ತರಗತಿಗಳು ಎಷ್ಟು ಪರಿಣಾಮಕಾರಿ? ಎಂಬುದು ಹಲವಾರು ಸಮೀಕ್ಷೆಗಳಿಂದ ಬಹಿರಂಗವಾಗಿದೆ.


ಮಕ್ಕಳ ಅನುಚಿತ ವರ್ತನೆ , ವ್ಯಸನಗಳಿಗೆ ಬಲಿಯಾಗುವುದು , ಪೋಷಕರು ಮತ್ತು ಶಿಕ್ಷಕರ ಜೊತೆಯಲ್ಲಿ ಸಂಘರ್ಷ ಏರ್ಪಡಲು,  ಶಾಲೆಗಳಿಂದ ಮಕ್ಕಳು ಬಹುಕಾಲ ದೂರು ಉಳಿಯುವಂತೆ ಮಾಡಿದ್ದು ಕರೋನಾ ಎಂದು ಒಪ್ಪಿದರೂ   ಇದರ ಜೊತೆಗೆ ಪೋಷಕರ ಅನವಶ್ಯಕ ಒತ್ತಡ  ಸಹ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ .


ಇಂತಹ ಸೂಕ್ಷ್ಮ ಕಾಲದಲ್ಲಿ ನಮ್ಮ ಮಕ್ಕಳನ್ನು ಸರಿದಾರಿಗೆ ತರಲು ಮನಶ್ಶಾಸ್ತ್ರಜ್ಞರು, ಶಿಕ್ಷಕರು, ಪೋಷಕರು ಸಮುದಾಯ ಶಿಕ್ಷಣ ಇಲಾಖೆ ಎಲ್ಲರೂ ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

10 ಅಕ್ಟೋಬರ್ 2021

ಕೂಶ್ಮಾಂಡಾದೇವಿ.


 *ಕೂಶ್ಮಾಂಡಾ ದೇವಿಗೆ ನಮನ*


ನವರಾತ್ರಿಯ ನಾಲ್ಕನೇ ದಿನದಿ

ಕೂಶ್ಮಾಂಡಾ ದೇವಿಯ ಭಜಿಸೋಣ

ಆದಿ ಶಕ್ತಿಯ ಕರುಣೆಯ ಪಡೆದು

ನೆಮ್ಮದಿಯ ಜೀವನ ಪಡೆಯೋಣ.


ಸಕಲ ಸೃಷ್ಟಿಯ ಮೂಲರೂಪಿಣಿ

ಆದಿಮಾತೆಗೆ ನಮಿಸೋಣ

ಸಂತಾನ ದೇವತೆ, ಆರೋಗ್ಯದಾತೆಗೆ

ಕೈಮುಗಿದು ವರಗಳ ಬೇಡೋಣ.


ಅನಂತ ಗರ್ಭದ ಬ್ರಹ್ಮಾಂಡ ಸೃಷ್ಟಿಯ

ಅಮ್ಮನ ನಾಮವ ಸ್ಮರಿಸೋಣ 

ತಾರಕಾಸುರರ ಸಂಹಾರ ಮಾಡಿಸಿದ

ಶಾಂತಿದೂತಳಿಗೆ ಶಿರಬಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529