02 ಅಕ್ಟೋಬರ್ 2021

ಸಿಂಹ ಧ್ವನಿ ೧/೨ ೨೧


 

ವೈಬ್ರಂಟ್ ಮೈಸೂರು ೧/೨/೨೧


 

ಆನ್ಲೈನ್ ಖರೀದಿ ಏಕೆ ?


 




ಬಿಗ್ ಬಿಲಿಯನ್ ಡೇ 

ಸ್ಪೆಷಲ್ ಧಮಾಕ ಡೇ 

ಸಾಲು ಸಾಲು ಹಬ್ಬಗಳ ವೇಳೆ ಮಾದ್ಯಮಗಳಲ್ಲಿ ರಂಗು ರಂಗಾದ ಜಾಹಿರಾತುಗಳು ನಮ್ಮ ಕಣ್ಣುಗಳ ಕುಕ್ಕುತ್ತವೆ  ಖರೀದಿ ಮಾಡಲು ನಮ್ಮನ್ನು ಖರೀದಿ ಮಾಡಲು ಪ್ರೇರೇಪಿಸುತ್ತವೆ .

ಈ ರೀತಿಯ ಆಫರ್ ನೀಡಿ ನಮ್ಮನ್ನು  ಕೊಳ್ಳುವಂತೆ ಪ್ರಚೋದಿಸುವ  ವಿವಿಧ ಆನ್ಲೈನ್ ಮಾರಾಟ ಕಂಪನಿಗಳು ಎರಡು ಮೂರು ದಿನಗಳಲ್ಲಿ ಆರು ತಿಂಗಳಷ್ಟು ವಹಿವಾಟು ಮಾಡಿ ,ಸಾಕಷ್ಟು ಲಾಭ ಮಾಡಿಕೊಂಡು ಗ್ರಾಹಕರಿಗೆ ಕೊಡುಗೆ ಹಾಗೂ ರಿಯಾಯಿತಿ ಪ್ರಕಟಿಸಿ ನಮಗರಿವಿಲ್ಲದೇ  ಕೊಳ್ಳುಬಾಕ ಸಂಸ್ಕೃತಿಯನ್ನು ಪರಿಚಯಿಸಿತ್ತಾ,  ನಮ್ಮಿಂದ ಹಣ ಪೀಕಿಸುವ ಆನ್ಲೈನ್ ಕಂಪನಿಗಳು ನಾಯಿಕೊಡೆಗಳಂತೆ ದಿನಕ್ಕೊಂದು ಹುಟ್ಟಿ , ಸಾಂಪ್ರದಾಯಿಕ ಕಿರಾಣಿ ಅಂಗಡಿಗಳು ಅಲ್ಲಲ್ಲಿ ಬಾಗಿಲು ಮುಚ್ಚುವ ಹಂತಕ್ಕೆ ಬಂದಿರುವುದನ್ನು ಗಮನಿಸಬಹುದು.


ಆನ್ಲೈನ್ ಖರೀದಿಯಿಂದ ಅನುಕೂಲ ಮತ್ತು ಅನಾನೂಲಗಳೂ ಇವೆ


ಮೊದಲಿಗೆ ಅನುಕೂಲಗಳನ್ನು ನೋಡುವುದಾದರೆ

೧ ಖರೀದಾರರ ಸಮಯ ಮತ್ತು ಹಣದ ಉಳಿತಾಯ ಸಾಧ್ಯವಾಗುತ್ತದೆ.

೨ ಮನೆ ಬಳಿಗೆ ಸಾಮಾನುಗಳನ್ನು ತಲುಪಿಸುವುದರಿಂದ ಗ್ರಾಹಕರಿಗೆ   ಸಾಗಣೆಯು ವೆಚ್ಚ ಉಳಿತಾಯವಾಗುತ್ತದೆ.

೩ ಸ್ಪರ್ಧಾತ್ಮಕ ಬೆಲೆಗಳಲ್ಲಿ ವಸ್ತುಗಳು ಸಿಗುವುದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ.

೪ ಸಾಂಪ್ರದಾಯಿಕ ಅಂಗಡಿಗಳಿಗಿಂತ ವಿಭಿನ್ನ ವಿನ್ಯಾಸ, ಬಣ್ಣದ ಮತ್ತು ಮಾದರಿಯ ವಸ್ತುಗಳನ್ನು ಆಯ್ಕೆ ಮಾಡಿ ಖರೀದಿ ಮಾಡಬಹುದು.

೫ ಕೋವಿಡ್ ನಂತಹ ಸಂದರ್ಭಗಳಲ್ಲಿ ಮನೆಯ ಹೊರಗೆ ಕಾಲಿಡದ ವೇಳೆಯಲ್ಲಿ ಆನ್ಲೈನ್ ಖರೀದಿಯು ನಮಗೆ ವರದಾನ ಆಗಲಿದೆ.


ಅನಾನುಕೂಲಗಳು


೧ ಕೆಲವೊಮ್ಮೆ ಹೇಳಿದ ಸಮಯಕ್ಕೆ ವಸ್ತುಗಳು ತಲುಪುವುದಿಲ್ಲ.

೨  ಮೊದಲೇ  ನಾವು ಖರೀದಿ ಮಾಡಿದ ವಸ್ತುಗಳ ಬದಲಾಗಿ ಕಲ್ಲು ,ಮಣ್ಣು,  ಮರದ ಹೊಟ್ಟು ಇತ್ಯಾದಿ ಕಳಿಸಿ ಮೋಸ ಮಾಡಿದ ಉದಾಹರಣೆ ಇವೆ.

೩ ನಾವು ಖರೀದಿ ಮಾಡುವಾಗ ನೀಡುವ ನಮ್ಮ ವೈಯಕ್ತಿಕ ಖಾಸಗಿ ವಿವರಗಳನ್ನು ಆನ್ಲೈನ್ ಕಂಪನಿಗಳು ದುರುಪಯೋಗ ‌ಮಾಡಿಕೊಂಡಿರುವ ಉದಾಹರಣೆ ಇವೆ.

೪ ಹಣಕಾಸಿನ ವ್ಯವಹಾರ ಮಾಡುವಾಗ ನಾವು ನೀಡುವ ಬ್ಯಾಂಕ್ ವಿವರ ಒ.ಟಿ ಪಿ ಗಳು ಸೈಬರ್ ಅಪರಾಧ ಎಸಗಲು ದಾರಿ ಮಾಡಿಕೊಡುತ್ತವೆ.

೫ ನಕಲಿ ಆನ್ಲೈನ್ ಕಂಪನಿಗಳು ಗ್ರಾಹಕರಿಗೆ ಮೋಸ ಮಾಡಿರುವ ನೂರಾರು ಉದಾಹರಣೆಗಳಿವೆ.

೬ ನಾವು ಆರ್ಡರ್ ಮಾಡಿದ ವಸ್ತುಗಳಿಗಿಂತ ಕಡಿಮೆ ಗುಣಮಟ್ಟದ ವಸ್ತುಗಳನ್ನು ಕಳಿಸಿ ಗ್ರಾಹರಿಗೆ ವಂಚಿಸುವ ಆನ್ಲೈನ್ ಕಂಪನಿಗಳು ಇವೆ.


ಪ್ರತಿಯೊಂದರಲ್ಲೂ ಒಳಿತು ಕೆಡುಕುಗಳು ಇರುವಂತೆ ಆನ್ಲೈನ್ ಖರೀದಿಯಲ್ಲೂ ಇವೆ .ಎಲ್ಲಾ ಸಂಧರ್ಭಗಳಲ್ಲಿ ಸಣ್ಣ ಪುಟ್ಟದ್ದಕ್ಕೂ ಆನ್ಲೈನ್ ಖರೀದಿ ಮಾಡದೆ , ನಾಲ್ಕಾರು ಕಡೆ ವಿಚಾರಿಸಿ ಕಡಿಮೆ ಬೆಲೆ ಇದ್ದಾಗ ಮಾತ್ರ ಆನ್ಲೈನ್ ಖರೀದಿ ಮಾಡಿದರೆ ಗ್ರಾಹಕರು ಜಾಣರಾಗಬಹುದು.ಸೈಬರ್ ಅಪರಾಧಗಳನ್ನು ತಡೆಯಲು ನಮ್ಮ ವೈಯಕ್ತಿಕ ವಿವರಗಳನ್ನು ಮತ್ತು  ಬ್ಯಾಂಕ್ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ ಈ ಮುನ್ನೆಚ್ಚರಿಕೆ ಮತ್ತು ವಿವೇಚನೆ ನಮ್ಮಲ್ಲಿ ಇದ್ದರೆ ಆನ್ಲೈನ್ ಖರೀದಿ ಗ್ರಾಹಕರಿಗೆ ನಿಜಕ್ಕೂ ವರದಾನವೇ ಸರಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

30 ಸೆಪ್ಟೆಂಬರ್ 2021

ಯೇಗ್ದಾಗೆಲ್ಲಾ ಐತೆ . ವಿಮರ್ಶೆ


 



ಯೇಗ್ದಾಗೆಲ್ಲಾ ಐತೆ 

ವಿಮರ್ಶೆ

ಬೆಳಗೆರೆ ಕೃಷ್ಣಶಾಸ್ತ್ರಿಗಳು


ಮುಕುಂದೂರು ಸ್ವಾಮಿಗಳೊಂದಿಗೆ ಕಳೆದ ಸುಮಧುರ ಕ್ಷಣಗಳು , ಅವರಿಂದ  ಅರಿವು  ಪಡೆದ  ಘಳಿಗೆಗಳನ್ನು ತಮ್ಮ ನೆನಪುಗಳ ಭಂಢಾರದಿಂದ  ಬುತ್ತಿಯನ್ನು ಬಿಚ್ಚಿ ಉಣಬಡಿಸಿದ ಪುಸ್ತಕವೇ ಏಗ್ದಾಗೆಲ್ಲಾ ಐತೆ. 

ಕಾಮದೇನು ಪುಸ್ತಕ ಭವನ ಪ್ರಕಾಶನ

ಸಂಸ್ಥೆ ಪ್ರಕಟಿಸಿದ ಈ ಪುಸ್ತಕ 1995 ರಿಂದ 2015 ರ ವೇಳೆಗೆ 

ಹನ್ನೊಂದು ಬಾರಿ ಮುದ್ರಣ ಕಂಡಿರುವುದು ಆ ಪುಸ್ತಕಕ್ಕೆ ಇರುವ ಬೇಡಿಕೆ ಮತ್ತು  ಮಹತ್ವ  ಸೂಚಿಸುತ್ತದೆ.


೫೪ ಚಿಕ್ಕ ಅಧ್ಯಾಯಗಳು ಇರುವ ಪುಟ್ಟ ಪುಸ್ತಕದಲ್ಲಿ ಏನುಂಟು ಏನಿಲ್ಲ?  ಇಡೀ ಜೀವನದ ರಹಸ್ಯವಿದೆ . ಆಧ್ಯಾತ್ಮ ಇದೆ, ಜೀವನ ಪ್ರೀತಿ ಇದೆ, ತಿಳುವಳಿಕೆ ಇದೆ, ಸಂದೇಶವಿದೆ ಒಟ್ಟಾರೆ ಸರ್ವರೂ ಈ ಪುಸ್ತಕ ಓದಿದರೆ ಸಾಲದು ,ಆಗಾಗ್ಗೆ ಅದರ ತಿರುಳನ್ನು ಚಿಂತನ ಮಂಥನ ಮಾಡಿಕೊಳ್ಳಬೇಕು.


ಮಧ್ಯ ಕರ್ನಾಟಕದ ಹಳ್ಳಿಯ ಭಾಷೆಯಲ್ಲಿ ಮಾತನಾಡುವ ಸ್ವಾಮೀಜಿ ಸರಳ ಪದಗಳಲ್ಲಿ  ಮಾತನಾಡುತ್ತಾ, ನಗುತ್ತಾ ನಗಿಸುತ್ತಾ, ಜೀವನ ದರ್ಶನ ಮಾಡಿಸಿಬಿಡುವರು.


ಒಮ್ಮೆ ಕೃಷ್ಣ ಶಾಸ್ತ್ರಿಗಳಿಗೆ ತೀವ್ರವಾದ ಅನಾರೋಗ್ಯ ಕಾಡಿದಾಗ ತಮ್ಮ ಶಿಷ್ಯ ನ ಕಾಣಲು ಬಂದು ಹೀಗೆ ಧೈರ್ಯ ಹೇಳುತ್ತಾರೆ

"ಆರೈಕೆ ಮಾಡೋರ ಮೈಯಾಗೆ ಆರು ತಿಂಗಳು ಇರ್ತೀನಿ ಅನ್ನುತ್ತೆ ಕಾಯಿಲೆ. ಏನೂ ಮಾಡಬೇಡ.ಅವನ್ಯಾರ್ ಕರೆದಿದ್ದು? ಮುತುವರ್ಜಿ ಮಾಡಿದಷ್ಟು ಮೇಲೇರುತ್ತಾನೆ .ತಿರುಗಿ ನೋಡದಂತೆ ಸುಮ್ನಿದ್ರೆ ,ಇವರ್ಯಾಕೋ ಮರ್ಯಾದೆ ಕೊಡೊಲ್ಲ ಅಂತ ಜಾಗ ಬಿಡ್ತಾನೆ ಅಷ್ಟೇ" ಎಂದು ಧೈರ್ಯ ಹೇಳಿದರು ಪವಾಡ ಸದೃಶವಾಗಿ ಕಾಯಿಲೆ ವಾಸಿಯಾಯಿತು.

ಈ ಪ್ರಕರಣ ಗಮನವಿಟ್ಟು ನೋಡಿದರೆ ಇಂದಿಗೂ ಪ್ರಸ್ತುತ. ಇತ್ತೀಚಿನ ದಿನಗಳಲ್ಲಿ ನಮ್ಮ ಬಾಧಿಸುವ ವಿವಿಧ ರೋಗಗಳಿಗೆ ಹೆದರಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ರೋಗಕ್ಕಿಂತ ಅವರಲ್ಲಿ ಇರುವ ಅವ್ಯಕ್ತ ಭಯ ಕೆಲವೊಮ್ಮೆ ರೋಗಿಗಳನ್ನು ಸಾವಿನ ಮನೆಗೆ ಕೊಂಡೊಯ್ಯುತ್ತದೆ.


ಕಾಡಿನ ಹೂಗಳೊಂದಿಗೆ ಸ್ವಾಮೀಜಿ ಮಾತನಾಡುವ ಬಗೆ ಸುಂದರ ಇದು ನಾವು ಪ್ರಕೃತಿಯ ಜೊತೆಗೆ ಹೊಂದಿಕೊಂಡು ಹೋಗಬೇಕು ಎಂಬ ಸಂದೇಶವನ್ನು ನೀಡುತ್ತದೆ.

"ಮನುಸ್ಯ ತಾನೇ ತಿರನಾಗಿ ಬಾಳೋನು ಅಂಬಂಗೆ ಕಣ್ಣಿಗೆ ಕಂಡದ್ದನ್ನೆಲ್ಲಾ ತನ್ನ ಸುಖಕ್ಕೇಂತ ಹಾಳು ಮಾಡೋದನ್ನು ಕಲಿತು ತಾನೂ ಹಾಳಾಗ್ತಾನೆ " ಎಂಬ ಸ್ವಾಮೀಜಿಯವರ ಮಾತಿನಲ್ಲಿ ಪರಿಸರದ ಬಗ್ಗೆ ಕಾಳಜಿ ಇದೆ ಇತರ ಜೀವಗಳ ಬಗ್ಗೆ ಸಹಾನುಭೂತಿ ಇದೆ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಬರೀ ಯೋಜನೆ ಮಾಡಿ ಭಾಷಣ ಬಿಗಿವ ನಾಯಕರು ಸ್ವಾಮೀಜಿ ರವರ ಈ ಸಂದೇಶಗಳನ್ನು ಅಳವಡಿಸಿಕೊಂಡು ಬಾಳಬೇಕಿದೆ.


ಇಂದಿನ ನಮ್ಮ ಬಹುತೇಕ ರೋಗಿಗಳಿಗೆ ನಮ್ಮ ಅಹಾರ ಪದ್ದತಿ, ಜೀವನ ಶೈಲಿ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ  .ಇದರ ಹಿನ್ನೆಲೆಯಲ್ಲಿ ಸ್ವಾಮೀಜಿ ರವರ ಮಾತುಗಳು ಹೀಗಿವೆ

"ಮುದ್ದೆ ಅಂತ ಊಟ ಇಲ್ಲ ಸಿದ್ದಪ್ಪನಂತ ದೇವ್ರಿಲ್ಲ ಅಂತಾರೆ.ಆದ್ರೆ ಒಂದ್ಮಾತು ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಹೇಳ್ಕಂಡು ಮುದ್ದೆ ಮುರೀರಪ್ಪಾ ಅದರಾಗೈತೆ ಮುಕುಂದೂರಿನ ಸೊಗಸು"

ಹಳ್ಳಿಯ ಜನರ ಆಧ್ಯಾತ್ಮಿಕ ಜೀವನದ ಕಡೆಗೆ ಗಮನ ನೀಡಿದ್ದ ಸ್ವಾಮೀಜಿ ರವರು

ಭಜನೆಯ ಮೂಲಕ ಸತ್ಸಂಗಗಳ ಮೂಲಕ   ಕುಂಡಲಿನಿ ಯೋಗದ ಬಗ್ಗೆ 

ವಿವಿಧ ಚಕ್ರ ಗಳ ಬಗ್ಗೆ ಆಂಗಿಕ ಅಭಿನಯ ಮಾಡಿ ಜನರಿಗೆ ಪ್ರವಚನ ನೀಡುತ್ತಿದ್ದ ಬಗ್ಗೆ ಕೃಷ್ಣ ಶಾಸ್ತ್ರಿಗಳು ತಮ್ಮ ಪುಸ್ತಕದಲ್ಲಿ ಚೆನ್ನಾಗಿ ವಿವರಗಳನ್ನು ನೀಡಿದ್ದಾರೆ.


ಅರಿಷಡ್ ವರ್ಗಗಳು ನಮ್ಮ ನಿಜವಾದ ಶತ್ರುಗಳು ಅವು ಒಂದಕ್ಕೊಂದು ಪೂರಕವಾಗಿ ನಮ್ಮ ನಾಶಮಾಡಲು ಹೊಂಚು ಹಾಕುತ್ತವೆ ಎಂಬುದನ್ನು ಸ್ವಾಮೀಜಿ ರವರು ಹೀಗೆ ಹೇಳಿದರು.

"ಅರಿಷಡ್ ವರ್ಗ ದಲ್ಲಿ ಕಾಮ ಎಂಬ ಒಂದನ್ನು ಹತ್ತಿರ ಕರೆದರೆ ಉಳಿದ ಐದು ಒಳಹೊಕ್ಕು ನಮ್ಮನ್ನು ನಾಶ ಮಾಡಿ ಬಿಡುತ್ತವೆ " 


ಅಹಂ ನಿಂದ ಏನೆಲ್ಲಾ ಅನಾಹುತಗಳಾಗಿವೆ ಎಂದು ನಾವು ನೋಡಿದ್ದೇವೆ ಅದನ್ನೇ ಸ್ವಾಮೀಜಿಯವರು ತಮ್ಮ ಭಾಷೆಯಲ್ಲಿ

"ಗರಾ ಬುಟ್ರೇನೆ ಗುರು ನೋಡಪ್ಪ

ಸಾವ್ಕಾರಂತಾವ ದುಡ್ಡಿರೋದು ಸಂನ್ಯಾಸಿತಾವ ಸಿದ್ದಿ ಇರೋದು ಎಳ್ಡು ಒಂದೇ ಕಣೋ ಮಗ ಅವ್ನಿಗೂ ಹಾಂಕಾರ ಬಿಟ್ಟಿಲ್ಲ ,ಇವ್ನಿಗೂ ಹಾಂಕಾರ ಬಿಟ್ಟಿಲ್ಲ" .ಎಂದು ಅರ್ಥ ನೀಡಿರುವರು.

"ಸಮಾಧಿ ಏನಿದ್ದರೂ ಬದುಕಿದ್ದಾಗಲೂ ಆಗೋದನ್ನು ಕಲೀಬೇಕು "ಎಂದು ಹೇಳುವ ಮೂಲಕ ಜೀವನವೇ ಯೋಗವಾಗಬೇಕು ,ನಾವು ಬದುಕಿರುವಾಗ ಸಮಾಧಿ ಸ್ಥಿತಿ ತಲುಪಬೇಕು ಎಂದು ಸೂಚ್ಯವಾಗಿ ಹೇಳಿರುವರು.

ಸ್ವಾಮೀಜಿರವರು ರಾಮಾಯಣ, ಮಹಾಭಾರತ, ಭಗವದ್ಗೀತೆ ಗಳ  ವಿವರಣೆಯನ್ನು ಬಹಳ ಸರಳವಾಗಿ ಎಲ್ಲರಿಗೂ ತಿಳಿಯುವ ಭಾಷೆಯಲ್ಲಿ ಅರ್ಥ ಮಾಡಿಸುತ್ತಿದ್ದರು.


ಮುಕುಂದೂರು ಸ್ವಾಮೀಜಿ ರವರ ಕುರಿತು ಕೃಷ್ಣ ಶಾಸ್ತ್ರಿಗಳು ಹೇಳುವಂತೆ

"ಅವರ ಒಂದೊಂದು ಮಾತಿಗೂ ವಿಶೇಷವಾದ ಅರ್ಥವುಂಟು ,ಹರವುಉಂಟು,ಆಳ ಎತ್ತರಗಳುಂಟು .ಅದೆಲ್ಲಾ ತಿಳಿಯುವವರ ಸಾಮರ್ಥ್ಯವನ್ನು ಅನುಸರಿಸಿ ಬಿಚ್ಚಿಕೊಳ್ಳುತ್ತವೆ " 

ಹೌದು ಈ ಮಾತು ಶತ ಪ್ರತಿಶತ ಸತ್ಯ ಈ ಅನುಭವ ನಿಮಗೆ ಆಗಬೇಕಾದರೆ ನೀವೂ ಒಮ್ಮೆ, ಅಲ್ಲ ಹಲವು ಬಾರಿ ಈ ಪುಸ್ತಕ ಓದಲೇಬೇಕು.


ಕೃತಿ: ಏಗ್ದಾಗೆಲ್ಲಾ ಐತೆ.

ಲೇಖಕರು: ಬೆಳಗೆರೆ ಕೃಷ್ಣಶಾಸ್ತ್ರಿಗಳು

ಪ್ರಕಾಶನ;ಕಾಮದೇನು ಪುಸ್ತಕ ಭವನ ಪ್ರಕಾಶನ

ಬೆಲೆ: ೬೦


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


ಕೊಳ್ಳುಬಾಕರಾಗದಿರೋಣ .


 


ಕೊಳ್ಳುಬಾಕ ಸಂಸ್ಕೃತಿ ತ್ಯಜಿಸೋಣ 


ಇಷ್ಟು ಇದ್ದರೆ ಮತ್ತಷ್ಟು ಬೇಕು, ಒಂದು ಕಾರು ಸಾಲದು ಮತ್ತೊಂದು ಬೇಕೇೆ ಬೇಕು  ಹೊಸ ಮಾಡೆಲ್ ವಾಷಿಂಗ್ ಮೆಷಿನ್ ಕೊಳ್ಳೋಣ , ಈಗ ಎರಡು ಆಂಡ್ರಾಯ್ಡ್ ಪೋನ್ ಇವೆ, ಇರಲಿ ಒಂದು ಐ ಪೋನ್ ಕೊಳ್ಳೋಣ, ಪಕ್ಕದ ಮನೆಯವನು ಬುಲೆಟ್ ಬೈಕ್ ತಂದ, ನನ್ನ ಹೀರೋ ಹೊಂಡಾ ಜೊತೆಗೆ ನಾನು ಒಂದು ಬುಲೆಟ್ ಬುಕ್ ಮಾಡುವೆ ....ಹೀಗೆ ಪಟ್ಟಿ ಬೆಳೆಯುತ್ತದೆ.

ಈ ರೀತಿಯಲ್ಲಿ ಬೇಕಿದ್ದರೂ ಬೇಡದಿದ್ದರೂ ಅನವಶ್ಯಕವಾಗಿ ತೋರ್ಪಡಿಕೆಗೆ ಮತ್ತು ಅಗತ್ಯವಿಲ್ಲದಿದ್ದರೂ  ಕೊಳ್ಳುವ ಕೆಟ್ಟ ಚಟವೇ ಕೊಳ್ಳುಬಾಕ ಸಂಸ್ಕೃತಿ .


ಕೆಲವೊಮ್ಮೆ ಅವನು

ಕೊಂಡ ವಸ್ತುಗಳ ಉಪಯೋಗ

ತಿಳಿಯದೇ ಅವನೇ ಪ್ರಶ್ನೆ ಮಾಡಿಕೊಂಡ ನಾನು ಈ

ವಸ್ತು ಕೊಂಡಿದ್ದು ಯಾಕ?|

ಇಂತವರಿಗೆ ನಮ್ಮ ಪರಮೇಶಿ

ಕರೆಯುವನು ಕೊಳ್ಳುಬಾಕ||


ಅವಶ್ಯಕತೆ ಇಲ್ಲದಿದ್ದರೂ ಅನುಕರಣೆ, ವಿದೇಶಿ ಸಂಸ್ಕೃತಿಗಳ ಪ್ರಭಾವ ,ಮಾಧ್ಯಮಗಳ ಜಾಹಿರಾತಿನ  ಭರಾಟೆ , ವಿವೇಚನೆಯ ಕೊರತೆ, ಸಂಪತ್ತು ಮತ್ತು ಪ್ರತಿಷ್ಠೆಯ ತೋರ್ಪಡಿಕೆ ಇವುಗಳು ಕೊಳ್ಳುಬಾಕ ಸಂಸ್ಕೃತಿಗೆ ನಾಂದಿ ಹಾಡಿವೆ .


ಜಾಹೀರಾತುಗಳಲ್ಲಿ ಹೊಸ

ವಸ್ತುಗಳು ಯಾವುದೇ ಬರಲಿ

ಖರೀದಿಸುವಳು ಚಿಂತಿಸದೇ

ಎಷ್ಟೇ ಆದರೂ ದುಬಾರಿ|

ಯಾಕೆಂದರೆ ನನ್ನವಳು

ಕೊಳ್ಳುಬಾಕ ಸಂಸ್ಕೃತಿಯ

ಅಂತರರಾಷ್ಟ್ರೀಯ ರಾಯಭಾರಿ||


ಕೊಳ್ಳುಬಾಕ ಸಂಸ್ಕೃತಿ ಮತ್ತು ಮಿತಿ ಮೀರಿದ ನಿರೀಕ್ಷೆಗಳನ್ನು ಹೊಂದುತ್ತಿರುವ ಮನುಷ್ಯ ಇಂದು ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಳೆದುಕೊಂದು ಖಿನ್ನತೆಗೆ ಒಳಗಾಗುತ್ತಿದ್ದೇವೆ.ಇದು ಕೌಟುಂಬಿಕ ಕಲಹಗಳಿಗೂ ಕಾರಣವಾಗುತ್ತದೆ

.

ಕೊಳ್ಳುಬಾಕ ಸಂಸ್ಕೃತಿಯು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಉದಾಹರಣೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೆಲೆಯ   ಒಂದು ಫೋನ್ ಕೊಂಡು ಒಂದು ವರ್ಷದ ಬಳಿಕ ನಾವು ಮಾರಲು ಹೋದರೆ ಸಾವಿರ ರೂಗೂ ಮಾರಲು ಆಗುವುದಿಲ್ಲ. ಅಷ್ಟು ಹಣ ನಮಗೆ ನಷ್ಟ ,ಆದರೂ ಅದು ಸುಸ್ಥಿತಿಯಲ್ಲಿದ್ದರೂ ಅದನ್ನು ಕೊಟ್ಟು ಮತ್ತೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೆಲೆಯ ಪೋನ್ ಕೊಳ್ಳುತ್ತೇವೆ ಹೇಗೂ ಡೆಬಿಟ್ ,ಕ್ರೆಡಿಟ್ ಕಾರ್ಡ್ ಇರುತ್ತವೆ ಉಜ್ಜಿ ತೆಗೆದುಕೊಂಡು ಬಿಲ್ ಕಟ್ಟಲು ಮತ್ತೆ ಸಾಲ ಮಾಡುವೆವು . ಇ. ಎಮ್.ಐ  ಕಟ್ಟಲು ಒದ್ದಾಡುವೆವು , ಆ ಸಾಲ ತೀರಿಸಲು  ಕ್ರಮೇಣ ಓ.ಟಿ ಮಾಡುವುದು ,ಚಿಂತೆ ಮಾಡುವುದು ,ಖಿನ್ನತೆಗೆ ಜಾರುವುದು ಇದರ ಪರಿಣಾಮವಾಗಿ ಬಿ. ಪಿ ಶುಗರ್ ಆಗಮನ !ಇದು  ಕೊಳ್ಳುಬಾಕ ಸಂಸ್ಕೃತಿಯ ವಿಷವರ್ತುಲ.


ಹಾಗಾದರೆ ಈ ರೋಗದಿಂದ ಹೊರಬರಲು ಸಾದ್ಯವಿಲ್ಲವೇ? 


ಏಕಿಲ್ಲ ಮನಸ್ಸಿದ್ದರೆ ಮಾರ್ಗ ಭಾರತೀಯ ಸನಾತನ ಪರಂಪರೆಯಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತತ್ವ ಇದೆ ಅದನ್ನು ಪಾಲಿಸಿದರೆ ಸಾಕು. ನಮ್ಮ ಅಂಕೆ ತಪ್ಪಿದ ಮನಸ್ಸಿನ ನಿಯಂತ್ರಣ ಮಾಡಿಕೊಳ್ಳಬೇಕು. ಆರ್ಥಿಕ ಶಿಸ್ತು ಬೆಳಸಿಕೊಳ್ಳಬೇಕು. ಸರಳತೆಯಲ್ಲಿ ಸೌಂದರ್ಯವಿದೆ ಎಂಬುದನ್ನು ಅರಿಯಬೇಕು.ಅಂಧವಾಗಿ ಇತರರ ಅನುಕರಿಸುವ ಗುಣವನ್ನು ಬಿಟ್ಟು ಸ್ವಂತ ಯೋಚಿಸಿ ನಿರ್ದಾಕ್ಷಿಣ್ಯವಾಗಿ ಉತ್ತಮ ತೀರ್ಮಾನ ತೆಗೆದುಕೊಳ್ಳುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.


 ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧ ಜಾಗೃತಿ ಮೂಡಿಸಿ ಅದನ್ನು ವಿರೋದಿಸುವೆವು ಅಂದ ಮಾತ್ರಕ್ಕೆ ಕಂಜೂಸ್ ಕೂಡಾ ಆಗಬಾರದು. ಯಾವುದು ಅಗತ್ಯ ಅದನ್ನು ಕೊಳ್ಳಲೇಬೇಕು .ಅಗತ್ಯ ಮತ್ತು ಅನಗತ್ಯದ ಮಧ್ಯದ ಸೂಕ್ಷವಾದ ಗೆರೆಯನ್ನು ಯಾರು ಚೆನ್ನಾಗಿ ಅರ್ಥ ಮಾಡಿಕೊಳ್ಳವರೋ ಅಂತವರು ಕೊಳ್ಳುಬಾಕರಾಗುವುದಿಲ್ಲ.

ಆದ್ದರಿಂದ ನಾವೆಲ್ಲರೂ ಕೊಳ್ಳುಬಾಕರಾಗದೇ ಬುದ್ದಿವಂತರಾಗೋಣ ಆರ್ಥಿಕ ಶಿಸ್ತು ರೂಢಿಸಿಕೊಂಡು ನೆಮ್ಮದಿಯ ಜೀವನ ಸಾಗಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ