06 ಜೂನ್ 2021

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ"ಪವಾಡದ ಪುಸ್ತಕ "* ೬/೬/೨೧


 

ಛಲಬಿಡದ ತ್ರಿವಿಕ್ರಮ ನಾರಾಯಣ ಮೂರ್ತಿ .ಲೇಖನ


 


ಛಲಬಿಡದ ತ್ರಿವಿಕ್ರಮ ಶ್ರೀ ನಾರಾಯಣ ಮೂರ್ತಿ ರವರು. ಲೇಖನ

"ಮನಸ್ಸಿದ್ದಲ್ಲಿ ಮಾರ್ಗ" , "ಕಾಯಕವೇ ಕೈಲಾಸ " ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದರೆ ಸಾಮಾನ್ಯನೂ ಅಸಮಾನ್ಯ ಆಗುವನೆಂದು ಹಲವಾರು ಮಹಾತ್ಮರು ಸಾಧಿಸಿ ತೊರಿಸಿರುವರು. ಅಂತಹ ಸಾಧಕರ ಪಟ್ಟಿಯಲ್ಲಿ ಕಾಣಸಿಗುವ ಹೆಮ್ಮೆಯ ಕನ್ನಡಿಗರೇ ನಮ್ಮ ನಾರಾಯಣ ಮೂರ್ತಿ ರವರು.

ತಮ್ಮ ಬುದ್ದಿ ಮತ್ತು ಶ್ರಮದಿಂದ ಒಂದು ಚಿಕ್ಕ ಕಾರ್ ಶೆಡ್ ನಲ್ಲಿ ಆರಂಭವಾದ ಐಟಿ ಕಂಪನಿಯು ಇಂದು ಪ್ರಪಂಚದ ಟಾಪ್ ಟೆನ್ ಕಂಪನಿಗಳಲ್ಲಿ ಒಂದಾಗಿ ಬೆಳೆದಿರುವುದು ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ. ಇದಕ್ಕೆ ಅವರ ಧರ್ಮ ಪತ್ನಿ ಸುಧಾ ಮೂರ್ತಿ ರವರ ಸಹಕಾರ, ಪ್ರೋತ್ಸಾಹ, ಮತ್ತು ತ್ಯಾಗ ವನ್ನು ಸ್ಮರಿಸಲೇಬೇಕು,

 ಬೆಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ೧,೪೫,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಭಾರತದಲ್ಲಿ ಒಂಬತ್ತು ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ ೨೯ ಕಛೇರಿಗಳನ್ನು ಭಾರತ, ಯುಸ್‌ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿದೆ. ಇನ್ಫೋಸಿಸ್‌ವು ೩೦ಕ್ಕೂ ಹೆಚ್ಚು ದೇಶದ ಕಂಪನಿಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಔಟ್ ಸೋರ್ಸ್‌ ಸೇವೆಗಳನ್ನು ಒದಗಿಸುತ್ತಿದೆ.

ಅಮೇರಿಕಾದ ಪ್ರತಿಷ್ಠಿತ ನಾಸ್ಡಾಕ್ ( ನಮ್ಮಲ್ಲಿ ಬಾಂಬೆ ಶೇರು ಮಾರುಕಟ್ಟೆಯ ತರಹ) ನಲ್ಲಿ ಲಿಸ್ಟ್ ಆದ ಮೊದಲ ಭಾರತೀಯ ಕಂಪನಿ ಎಂದರೆ ನಿಮಗೆ ಅರ್ಥವಾಗಬೇಕು ನಾರಾಯಣಮೂರ್ತಿ ರವರು ತಮ್ಮ ಕಂಪನಿಯನ್ನು ಬೆಳೆಸಿದ ಪರಿಯನ್ನು.

ಈಗಲೂ ಲಕ್ಷಗಟ್ಟಲೆ ಉದ್ಯೋಗಿಗಳು ಇನ್ಪೋಸಿಸ್ ಕಂಪನಿಯಿಂದ ಉದ್ಯೋಗ ಪಡೆದು ಜೀವನ ಮಾಡುತ್ತಿದ್ದಾರೆ, ಆ ಕಂಪನಿಯ ಶೇರುಗಳನ್ನು ಕೊಂಡ ಸಾವಿರಾರು ಮಂದಿ ಕೋಟ್ಯಾದಿಶರಾಗಿರುವರು.

ಸಿ ಎಸ್ ಆರ್ ಅಡಿಯಲ್ಲಿ ಕೋಟಿಗಟ್ಟಲೆ ಹಣವನ್ನು ನಾರಾಯಣ ಮೂರ್ತಿ ರವರು, ಮತ್ತು ತಮ್ಮ ಧರ್ಮ ಪತ್ನಿ ಸುಧಾ ಮೂರ್ತಿ ರವರು ಸಮಾಜಮುಖಿ ಕೆಲಸಗಳಿಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ ಕಾರ್ಯ.

೧೯೯೬ರಲ್ಲಿ ಇನ್ಫೊಸಿಸ್  ಫೌಂಡೇಶನ್ ಸ್ಥಾಪಿಸಿ, ಆರೊಗ್ಯ, ಶಿಕ್ಷಣ, ಸಾಮಾಜಿಕ, ಕಲೆ, ಸಂಸ್ಕೃತಿ ಮತ್ತು ಹಳ್ಳಿಗಳ ಅಭಿವೃಧ್ಧಿ ಯೋಜನೆಗಳನ್ನು ಹಾಕಿಕೊಂಡಿದೆ. ಅಂದಿನಿಂದ ಈ ಪ್ರತಿಷ್ಠಾನವು, ತನ್ನ ಕಾರ್ಯಗಳನ್ನು ಕರ್ನಾಟಕ ಮುಖ್ಯಕೇಂದ್ರದಿಂದ ಭಾರತದ ಇತರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ, ಒರಿಸ್ಸ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಸಮಾಜದ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ಕಂಪನಿಯನ್ನು ಆರಂಭಮಾಡಲು ಹಣಕಾಸಿನ ‌ಕೊರತೆ ಬಿದ್ದಾಗ ಹೆಂಡತಿಯ ಒಡವೆಗಳನ್ನು ಒತ್ತೆ ಇಟ್ಟು ಹಣ ಹೊಂದಿಸಿ ಛಲಬಿಡದ ತ್ರಿವಿಕ್ರಮನಂತೆ ಕಂಪನಿಯನ್ನು ಕಟ್ಟಿ ಬೆಳೆಸಿ ತೋರಿಸಿದವರು ನಮ್ಮ ನಾರಾಯಣ ಮೂರ್ತಿ ರವರು.

ಇಂದಿನ ಯುವ ಉದ್ದಿಮೆದಾರರಿಗೆ ಇಂತಹ ಕಷ್ಟದ ಪರಿಸ್ಥಿತಿಗಳಿಲ್ಲ, ಸರ್ಕಾರಗಳು ಸ್ಟಾರ್ಟ್ ಅಪ್, ಮೇಕ್ ಇನ್ ಇಂಡಿಯಾ, ಮುದ್ರಾ, ಸ್ಕಿಲ್ ಇಂಡಿಯಾ, ಮುಂತಾದ ಯೋಜನೆಗಳನ್ನು ಜಾರಿಗೆ ತಂದಿವೆ  ,ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಾರಾಯಣ ಮೂರ್ತಿ ರವರನ್ನು ರೋಲ್ ಮಾಡಲ್ ಆಗಿ ಸ್ವೀಕಾರ ಮಾಡಿ ವಿವಿಧ ರಂಗಗಳಲ್ಲಿ ಕಂಪನಿಗಳನ್ನು ಸ್ಥಾಪಿಸಿದರೆ ,ನಮ್ಮ ದೇಶದಲ್ಲಿ ಯುವ ಉದ್ದಿಮೆದಾರರು ಹೆಚ್ಚಾದರೆ, ಇನ್ಫೋಸಿಸ್ ನಂತಹ ನೂರಾರು ಕಂಪನಿಗಳು ದೇಶದಲ್ಲಿ ತಲೆ ಎತ್ತಿ ,ಉದ್ಯೋಗ, ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶವು ಇನ್ನೂ ಪ್ರಗತಿ ಹೊಂದುವುದರಲ್ಲಿ ಸಂಶಯವಿಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ 6/6/21


 

05 ಜೂನ್ 2021

ವಿಶ್ವ ವಾಣಿ 5/6/21


 

ಸಾವು ಗೆದ್ದ ಸುನಿತಾ.ಕಥೆ .ಲೇಖನ


 

*ಸಾವು ಗೆದ್ದ ಸುನಿತ*

ಒಂಭತ್ತು ವರ್ಷದ ಸುನಿತ ಕೈಚೀಲ ಹಿಡಿದು ರಾಜ್ಯ ಹೆದ್ದಾರಿ ದಾಟಿ ಮತ್ತೊಂದು ಬದಿ ಇರುವ  ಶಾಲೆಯ ಕಡೆ ಓಡಿ ಬರುತ್ತಿದ್ದಳು, ರಸ್ತೆಯಲ್ಲಿ ವೇಗವಾಗಿ ಬಂದ ಲಾರಿಯ ಚಾಲಕ ಬ್ರೇಕ್ ಹಾಕಿದರೂ ,  ಆ ಬಾಲಕಿಗೆ ಡಿಕ್ಕಿ ಹೊಡೆದ.ಡಿಕ್ಕಿಯ ರಭಸಕ್ಕೆ ಅವಳು ರಸ್ತೆಯ ಮತ್ತೊಂದು ಬದಿಗೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಳು ,ರಸ್ತೆಯ ಪಕ್ಕದಲ್ಲೇ ಇರುವ ಶಾಲಾ ಕೊಠಡಿಯ ಮುಂದೆ ನಿಂತಿದ್ದ ನಾನು ಈ ಘಟನೆಯನ್ನು ನೋಡಿ, ಹೌಹಾರಿ ಸುನಿತಾಳತ್ತ ಓಡಿದೆ.

ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ 2001 ನೇ ಇಸವಿಯ ಜನವರಿ ತಿಂಗಳ ಒಂದು ಸೋಮವಾರದಂದು  ನಾನೂ ಮತ್ತು ಮಕ್ಕಳು ರಜದ ಮಜಾ ಸವಿದು ಶಾಲೆಗೆ ಬರುವಾಗ ನಡೆದ ಈ ದುರ್ಘಟನೆ ಕಂಡು ಎಲ್ಲರಿಗೂ ಭಯದೊಂದಿಗೆ ಏನು ಮಾಡಬೇಕೆಂದು ತೋಚದೇ ನೋಡುತ್ತಾ ನಿಂತೆವು.

ಲಾರಿಯವನು ರಸ್ತೆಯ ಬದಿಗೆ ನಿಲ್ಲಿಸಿದ , ತಪ್ಪಾಯಿತೆಂದು ಹೇಳುವ ಮೊದಲೇ  ಸಿಟ್ಟಿನಲ್ಲಿದ್ದ ಊರ ಜನರು ಅವನಿಗೆ ಧರ್ಮದೇಟು ನೀಡಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದರು.

ಆ ಬಾಲಕಿಯ ಕಡೆ ಯಾರಿಗೂ ಲಕ್ಷ್ಯ ಇಲ್ಲ
ನಾನು ಅವಳ ಬಳಿ ಹೋಗಿ ನೋಡಿದೆ ಉಸಿರಾಡುತ್ತಿದ್ದಳು, "ದಾದು ಬಾ ಇಲ್ಲಿ ಅಂದೆ" ನನ್ನ ಪರಿಚಿತ ಆಟೋ ಡ್ರೈವರ್ ಆಟೋ ತಂದ ,ನಾನೇ ಆ ಬಾಲಕಿಯನ್ನು ಆಟೋದಲ್ಲಿ ಕೂರಿಸಿಕೊಂಡು ನಮ್ಮ ಮುಖ್ಯ ಶಿಕ್ಷಕಿಯಾಗಿದ್ದ ಗಾಯತ್ರಿ ದೇವಿ ಮೇಡಂ ರವರ ಕಡೆ ನೋಡಿದೆ , ಅವರು ಸಹ ಬಂದು ಆಟೋ ದಲ್ಲಿ ಕುಳಿತರು, ಐದು ನಿಮಿಷಗಳಲ್ಲಿ ಹಿರಿಯೂರಿನ ತಾಲೂಕು ಆಸ್ಪತ್ರೆಗೆ ತಲುಪಿದೆವು, ಡ್ಯೂಟಿಯಲ್ಲಿದ್ದ ಡಾಕ್ಟರ್ ಕ್ಷಿಪ್ರವಾಗಿ ಸ್ಪಂದಿಸಿ ಬಾಲಕಿಗೆ ಚಿಕಿತ್ಸೆ ನೀಡಿದರು ,ನಮ್ಮ ಕಡೆ ತಿರುಗಿ ನೀವು ಅಂದರು?
"ಸರ್ ನಾನು ಶಿಕ್ಷಕ ,ಇವರು ನಮ್ಮ ಹೆಚ್, ಎಂ" ಅಂದೆ
" ನೀವು ಸಮಯಕ್ಕೆ ಸರಿಯಾಗಿ ಈ ಮಗುವನ್ನು ಕರೆದುಕೊಂಡು ಬಂದಿದ್ದೀರಿ ಇನ್ನೂ ಹತ್ತು ನಿಮಿಷ ಲೇಟ್ ಆಗಿದ್ರೆ ಈ ಮಗು ಜೀವಕ್ಕೆ ಅಪಾಯವಿತ್ತು, ಟ್ರಿಟ್ಮೆಂಟ್ ಕೊಟ್ಟಿದಿನಿ, ಈ ಡ್ರಿಪ್ ಮುಗಿಯೋ ಮುಂಚೆ ಪ್ರಜ್ಞೆ ಬರುತ್ತೆ , ನಥಿಂಗ್ ಟು ವರಿ" ಎಂದು ನನ್ನ ಭುಜ ತಟ್ಟಿ ಹೊರಟರು ಡಾಕ್ಟರ್,

ಇಪ್ಪತ್ತು ನಿಮಿಷಗಳ ನಂತರ ಸುನಿತಾ ಕಣ್ ಬಿಟ್ಟು ನನ್ನ ಮತ್ತು ನಮ್ಮ ಹೆಚ್. ಎಂ "ನೋಡಿ ನೀರು ಕುಡಿತಿನಿ ಸಾ" ಎಂದಳು
ನಾನು ಬೇಗ ಹೋಗಿ ಅಂಗಡಿಯಲ್ಲಿ ಒಂದು ಲೀಟರ್ ನೀರಿನ ಬಾಟಲ್ ತಂದು ಕೊಟ್ಟೆ ,ಸ್ವಲ್ಪ ಕುಡಿದು ಅಲ್ಲಲ್ಲಿ ಆಗಿದ್ದ ತರಚು ಗಾಯ ನೋಡಿಕೊಂಡು ಅಳಲು ಶುರುಮಾಡಿದಳು, ನಮ್ಮ ಹೆಚ್ ಎಂ ಮೇಡಂ ರವರು ಸಮಾಧಾನ ಮಾಡಿದರು.ಅಷ್ಟೊತ್ತಿಗೆ ವಿಷಯ ತಿಳಿದ ಅವರ ತಾಯಿ ಅಳುತ್ತಲೇ ಆಸ್ಪತ್ರೆಗೆ ಬಂದರು , ಮಗಳ ಸ್ಥಿತಿ ನೋಡಿ ಅಳಲು ಶುರುಮಾಡಿದರೂ ಜೀವಕ್ಕೇ ಏನೂ ತೊಂದರೆ ಇಲ್ಲವೆಂದು ತಿಳಿದು ಸ್ವಲ್ಪ ಸಮಾಧಾನದಿಂದ ನಮ್ಮಿಬ್ಬರ ಕಡೆ ಕೈಮುಗಿದು ಧನ್ಯವಾದ ಹೇಳಿದರು.

ಊರಿನ ಉದ್ರಿಕ್ತ ಜನರು ಲಾರಿಯವನ ವಿಚಾರಿಸಿದ ಬಳಿಕ ಆಸ್ಪತ್ರೆಗೆ ಲಗ್ಗೆ ಇಟ್ಟರು ಕೊಠಡಿಯ ತುಂಬಾ ಗಾಳಿಯಾಡದಂತೆ ನಿಂತರು ,ಇದನ್ನು ಕಂಡ ಡಾಕ್ಟರ್ ಬಂದು ಎಲ್ಲರೂ ಹೊರಹೋಗಲು ಹೇಳಿದರು.

ಹದಿನೈದು ದಿನಗಳ ನಂತರ ಸಂಪೂರ್ಣ ಗುಣಮುಖಳಾದ ನಂತರ  ಸುನಿತಾ ಳ ತಂದೆ ಮಗಳನ್ನು ಕರೆದುಕೊಂಡು ಬಂದು ಶಾಲೆಗೆ ಬಂದು ನನ್ನ ನೋಡಿ ಕೈ ಮುಗಿದು
" ನೀವು ನನ್ನ ಮಗಳ ಕಾಪಾಡಿದ ದೇವರು ಇದ್ದಂಗೆ ಸಾ, ನಿಮ್ ಋಣ ಎಂಗ್ ತೀರ್ಸ್ ಬೇಕೋ ಗೊತ್ತಾಗಲ್ಲ "ಎಂದರು
" ಅಂತ ದೊಡ್ ಮಾತು ಬೇಡ ಯಜಮಾನರೆ, ಅವಳು ನಮ್ಮ ಶಾಲೆ ಹುಡುಗಿ ಅವಳ ರಕ್ಷಣೆ ನಮ್ಮ ಹೊಣೆ " ಎಂದೆ .

"ಸಾ ,ನಿಮ್ದು ಯರಬಳ್ಳಿ ಅಂತೆ ಹೌದೆ , ಅಂಗಾದ್ರೆ ನೀವು ನಮ್ಮ ದೂರದ ಸಂಬಂಧ ಅಂತು ಗೊತ್ತಾತು " ಎಂದರು ಅವರು

" ಯಜಮಾನರೆ ನನ್ನ ಶಾಲೆಯ ಎಲ್ಲಾ ಶಿಕ್ಷಕರು, ಮತ್ತು ಮಕ್ಕಳು ನನ್ನ ಸಂಬಂಧಿಗಳೇ ಅಲ್ಲವೇ ?" ಎಂದೆ
"ಹೌದು ಸಾ ಅದು‌ ನಿಮ್ ದೊಡ್ ಗುಣ , ನಿಮ್ಮಂತಹ ಮೇಷ್ಟ್ರು ನಮ್ ಊರಿಗೆ ಬಂದಿದ್ದು ನಮ್ಮ ಪುಣ್ಯ " ಎಂದು ಹೇಳುವಾಗ ಅವರ ಕಣ್ಣುಗಳು ತೇವವಾಗಿದ್ದು ನನ್ನ ಗಮನಕ್ಕೆ ಬಂತು ಅದನ್ನು ನೋಡಿ ನಾನೂ ಭಾವುಕನಾಗಿ ಬಿಟ್ಟೆ ......

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು