This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
05 ಜೂನ್ 2021
ಸಾವು ಗೆದ್ದ ಸುನಿತಾ.ಕಥೆ .ಲೇಖನ
*ಸಾವು ಗೆದ್ದ ಸುನಿತ*
ಒಂಭತ್ತು ವರ್ಷದ ಸುನಿತ ಕೈಚೀಲ ಹಿಡಿದು ರಾಜ್ಯ ಹೆದ್ದಾರಿ ದಾಟಿ ಮತ್ತೊಂದು ಬದಿ ಇರುವ ಶಾಲೆಯ ಕಡೆ ಓಡಿ ಬರುತ್ತಿದ್ದಳು, ರಸ್ತೆಯಲ್ಲಿ ವೇಗವಾಗಿ ಬಂದ ಲಾರಿಯ ಚಾಲಕ ಬ್ರೇಕ್ ಹಾಕಿದರೂ , ಆ ಬಾಲಕಿಗೆ ಡಿಕ್ಕಿ ಹೊಡೆದ.ಡಿಕ್ಕಿಯ ರಭಸಕ್ಕೆ ಅವಳು ರಸ್ತೆಯ ಮತ್ತೊಂದು ಬದಿಗೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಳು ,ರಸ್ತೆಯ ಪಕ್ಕದಲ್ಲೇ ಇರುವ ಶಾಲಾ ಕೊಠಡಿಯ ಮುಂದೆ ನಿಂತಿದ್ದ ನಾನು ಈ ಘಟನೆಯನ್ನು ನೋಡಿ, ಹೌಹಾರಿ ಸುನಿತಾಳತ್ತ ಓಡಿದೆ.
ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ 2001 ನೇ ಇಸವಿಯ ಜನವರಿ ತಿಂಗಳ ಒಂದು ಸೋಮವಾರದಂದು ನಾನೂ ಮತ್ತು ಮಕ್ಕಳು ರಜದ ಮಜಾ ಸವಿದು ಶಾಲೆಗೆ ಬರುವಾಗ ನಡೆದ ಈ ದುರ್ಘಟನೆ ಕಂಡು ಎಲ್ಲರಿಗೂ ಭಯದೊಂದಿಗೆ ಏನು ಮಾಡಬೇಕೆಂದು ತೋಚದೇ ನೋಡುತ್ತಾ ನಿಂತೆವು.
ಲಾರಿಯವನು ರಸ್ತೆಯ ಬದಿಗೆ ನಿಲ್ಲಿಸಿದ , ತಪ್ಪಾಯಿತೆಂದು ಹೇಳುವ ಮೊದಲೇ ಸಿಟ್ಟಿನಲ್ಲಿದ್ದ ಊರ ಜನರು ಅವನಿಗೆ ಧರ್ಮದೇಟು ನೀಡಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದರು.
ಆ ಬಾಲಕಿಯ ಕಡೆ ಯಾರಿಗೂ ಲಕ್ಷ್ಯ ಇಲ್ಲ
ನಾನು ಅವಳ ಬಳಿ ಹೋಗಿ ನೋಡಿದೆ ಉಸಿರಾಡುತ್ತಿದ್ದಳು, "ದಾದು ಬಾ ಇಲ್ಲಿ ಅಂದೆ" ನನ್ನ ಪರಿಚಿತ ಆಟೋ ಡ್ರೈವರ್ ಆಟೋ ತಂದ ,ನಾನೇ ಆ ಬಾಲಕಿಯನ್ನು ಆಟೋದಲ್ಲಿ ಕೂರಿಸಿಕೊಂಡು ನಮ್ಮ ಮುಖ್ಯ ಶಿಕ್ಷಕಿಯಾಗಿದ್ದ ಗಾಯತ್ರಿ ದೇವಿ ಮೇಡಂ ರವರ ಕಡೆ ನೋಡಿದೆ , ಅವರು ಸಹ ಬಂದು ಆಟೋ ದಲ್ಲಿ ಕುಳಿತರು, ಐದು ನಿಮಿಷಗಳಲ್ಲಿ ಹಿರಿಯೂರಿನ ತಾಲೂಕು ಆಸ್ಪತ್ರೆಗೆ ತಲುಪಿದೆವು, ಡ್ಯೂಟಿಯಲ್ಲಿದ್ದ ಡಾಕ್ಟರ್ ಕ್ಷಿಪ್ರವಾಗಿ ಸ್ಪಂದಿಸಿ ಬಾಲಕಿಗೆ ಚಿಕಿತ್ಸೆ ನೀಡಿದರು ,ನಮ್ಮ ಕಡೆ ತಿರುಗಿ ನೀವು ಅಂದರು?
"ಸರ್ ನಾನು ಶಿಕ್ಷಕ ,ಇವರು ನಮ್ಮ ಹೆಚ್, ಎಂ" ಅಂದೆ
" ನೀವು ಸಮಯಕ್ಕೆ ಸರಿಯಾಗಿ ಈ ಮಗುವನ್ನು ಕರೆದುಕೊಂಡು ಬಂದಿದ್ದೀರಿ ಇನ್ನೂ ಹತ್ತು ನಿಮಿಷ ಲೇಟ್ ಆಗಿದ್ರೆ ಈ ಮಗು ಜೀವಕ್ಕೆ ಅಪಾಯವಿತ್ತು, ಟ್ರಿಟ್ಮೆಂಟ್ ಕೊಟ್ಟಿದಿನಿ, ಈ ಡ್ರಿಪ್ ಮುಗಿಯೋ ಮುಂಚೆ ಪ್ರಜ್ಞೆ ಬರುತ್ತೆ , ನಥಿಂಗ್ ಟು ವರಿ" ಎಂದು ನನ್ನ ಭುಜ ತಟ್ಟಿ ಹೊರಟರು ಡಾಕ್ಟರ್,
ಇಪ್ಪತ್ತು ನಿಮಿಷಗಳ ನಂತರ ಸುನಿತಾ ಕಣ್ ಬಿಟ್ಟು ನನ್ನ ಮತ್ತು ನಮ್ಮ ಹೆಚ್. ಎಂ "ನೋಡಿ ನೀರು ಕುಡಿತಿನಿ ಸಾ" ಎಂದಳು
ನಾನು ಬೇಗ ಹೋಗಿ ಅಂಗಡಿಯಲ್ಲಿ ಒಂದು ಲೀಟರ್ ನೀರಿನ ಬಾಟಲ್ ತಂದು ಕೊಟ್ಟೆ ,ಸ್ವಲ್ಪ ಕುಡಿದು ಅಲ್ಲಲ್ಲಿ ಆಗಿದ್ದ ತರಚು ಗಾಯ ನೋಡಿಕೊಂಡು ಅಳಲು ಶುರುಮಾಡಿದಳು, ನಮ್ಮ ಹೆಚ್ ಎಂ ಮೇಡಂ ರವರು ಸಮಾಧಾನ ಮಾಡಿದರು.ಅಷ್ಟೊತ್ತಿಗೆ ವಿಷಯ ತಿಳಿದ ಅವರ ತಾಯಿ ಅಳುತ್ತಲೇ ಆಸ್ಪತ್ರೆಗೆ ಬಂದರು , ಮಗಳ ಸ್ಥಿತಿ ನೋಡಿ ಅಳಲು ಶುರುಮಾಡಿದರೂ ಜೀವಕ್ಕೇ ಏನೂ ತೊಂದರೆ ಇಲ್ಲವೆಂದು ತಿಳಿದು ಸ್ವಲ್ಪ ಸಮಾಧಾನದಿಂದ ನಮ್ಮಿಬ್ಬರ ಕಡೆ ಕೈಮುಗಿದು ಧನ್ಯವಾದ ಹೇಳಿದರು.
ಊರಿನ ಉದ್ರಿಕ್ತ ಜನರು ಲಾರಿಯವನ ವಿಚಾರಿಸಿದ ಬಳಿಕ ಆಸ್ಪತ್ರೆಗೆ ಲಗ್ಗೆ ಇಟ್ಟರು ಕೊಠಡಿಯ ತುಂಬಾ ಗಾಳಿಯಾಡದಂತೆ ನಿಂತರು ,ಇದನ್ನು ಕಂಡ ಡಾಕ್ಟರ್ ಬಂದು ಎಲ್ಲರೂ ಹೊರಹೋಗಲು ಹೇಳಿದರು.
ಹದಿನೈದು ದಿನಗಳ ನಂತರ ಸಂಪೂರ್ಣ ಗುಣಮುಖಳಾದ ನಂತರ ಸುನಿತಾ ಳ ತಂದೆ ಮಗಳನ್ನು ಕರೆದುಕೊಂಡು ಬಂದು ಶಾಲೆಗೆ ಬಂದು ನನ್ನ ನೋಡಿ ಕೈ ಮುಗಿದು
" ನೀವು ನನ್ನ ಮಗಳ ಕಾಪಾಡಿದ ದೇವರು ಇದ್ದಂಗೆ ಸಾ, ನಿಮ್ ಋಣ ಎಂಗ್ ತೀರ್ಸ್ ಬೇಕೋ ಗೊತ್ತಾಗಲ್ಲ "ಎಂದರು
" ಅಂತ ದೊಡ್ ಮಾತು ಬೇಡ ಯಜಮಾನರೆ, ಅವಳು ನಮ್ಮ ಶಾಲೆ ಹುಡುಗಿ ಅವಳ ರಕ್ಷಣೆ ನಮ್ಮ ಹೊಣೆ " ಎಂದೆ .
"ಸಾ ,ನಿಮ್ದು ಯರಬಳ್ಳಿ ಅಂತೆ ಹೌದೆ , ಅಂಗಾದ್ರೆ ನೀವು ನಮ್ಮ ದೂರದ ಸಂಬಂಧ ಅಂತು ಗೊತ್ತಾತು " ಎಂದರು ಅವರು
" ಯಜಮಾನರೆ ನನ್ನ ಶಾಲೆಯ ಎಲ್ಲಾ ಶಿಕ್ಷಕರು, ಮತ್ತು ಮಕ್ಕಳು ನನ್ನ ಸಂಬಂಧಿಗಳೇ ಅಲ್ಲವೇ ?" ಎಂದೆ
"ಹೌದು ಸಾ ಅದು ನಿಮ್ ದೊಡ್ ಗುಣ , ನಿಮ್ಮಂತಹ ಮೇಷ್ಟ್ರು ನಮ್ ಊರಿಗೆ ಬಂದಿದ್ದು ನಮ್ಮ ಪುಣ್ಯ " ಎಂದು ಹೇಳುವಾಗ ಅವರ ಕಣ್ಣುಗಳು ತೇವವಾಗಿದ್ದು ನನ್ನ ಗಮನಕ್ಕೆ ಬಂತು ಅದನ್ನು ನೋಡಿ ನಾನೂ ಭಾವುಕನಾಗಿ ಬಿಟ್ಟೆ ......
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
04 ಜೂನ್ 2021
ಪ್ರೀತಿಯ ಆಶ್ರಮ .ಲೇಖನ
ಪ್ರೀತಿಯ ಆಶ್ರಮ..ಲೇಖನ, ಪತ್ರ
ನಿನಗೆ ಹೃತ್ಪೂರ್ವಕ ವಂದನೆಗಳು
ದೇಶ ವಿದೇಶಗಳಲ್ಲಿ ನೂರಾರು ಶಾಖೆಗಳ ಹೊಂದಿರುವ ಓ ನನ್ನ ಹೆಮ್ಮೆಯ ರಾಮಕೃಷ್ಣ ಆಶ್ರಮವೇ ನಿನಗೆ ನನ್ನ ಸಾಸಿರ ನಮನಗಳು.
೧೯೯೦ ದಶಕದಲ್ಲಿ ಹಿರಿಯರಿನಲ್ಲಿ ನಾನು ಪದವಿ ಮತ್ತು ಟಿ ಸಿ ಎಚ್ ವ್ಯಾಸಾಂಗ ಮಾಡುವಾಗ ಗಾಯತ್ರಿ ದೇವಿ ಭಟ್ ಎಂಬ ಮಾತೆಯವರ ಸಂಪರ್ಕ ಲಬಿಸಿತು, ಪತಿಯು ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದರು ಅವರ ಮನೆಯು ರಾಮಕೃಷ್ಣ ಶಾರದಾಶ್ರಮವಾಗಿತ್ತು, ಅಲ್ಲಿ ನಡೆವ ಸತ್ಸಂಗಗಳು ನನ್ನ ಜೀವನದ ದಿಕ್ಕನ್ನೇ ಬದಲಿಸಿದವು, ಅಲ್ಲಿ ನನಗೆ, ವೀರೇಶಾನಂದರು, ನಿರ್ಭಯಾನಂದರ ಪರಿಚಯವಾಯಿತು, ತನ್ಮೂಲಕ ತುಮಕೂರು, ಮತ್ತು ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮ ನೋಡುವ ಸೌಭಾಗ್ಯ ಲಬಿಸಿತು.
ಅದರಲ್ಲೂ ಪೊನ್ನಂಪೇಟೆ ಆಶ್ರಮದಲ್ಲಿ ಸ್ವಾಮಿ ಜಗದಾತ್ಮಾನಂದ ರ ದರ್ಶನ ಮಾಡಿ ಪುನೀತನಾದೆ .ಒಂದೆರಡು ದಿನ ಆಶ್ರಮದಲ್ಲಿ ವಾಸ ಮಾಡಲು ಅದೃಷ್ಟ ಲಭಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ಆಶ್ರಮ ವಾಸಿಗಳ ದಿನಚರಿ ಬೆರಗು ಮೂಡಿಸುವಂತದು.ಬೆಳಿಗ್ಗೆ ನಾಲ್ಕು ವರೆಗೆ ಎದ್ದರೆ ನಿತ್ಯಕರ್ಮ ಮುಗಿಸಿ ಬೆಳಗಿನ ಭಜನೆ ಸತ್ಸಂಗ ದಲ್ಲಿ ಸಮಯ ಸೇರಿದ್ದದ್ದೇ ತಿಳಿಯುವುದಿಲ್ಲ, ಅಂದು ಸುಮಾರು ತೊಂಬತ್ತು ವರ್ಷ ವಯಸ್ಸಿನ ಸ್ವಾಮಿ ಗಳು ಭಜನೆ ಹೇಳಿಕೊಡುತ್ತಿದ್ಧರೆ ನಾವು ಮಂತ್ರ ಮುಗ್ದರಾಗಿ ಹಾಡುತ್ತಿದ್ದೆವು.
ಬೆಳಗಿನ ಉಪಾಹಾರವಾದ ಬಳಿಕ ಆಶ್ರಮದ ಸುತ್ತ ಇರುವ ತೋಟದಲ್ಲಿ ಆಸಕ್ತರು ಕೆಲಸ ಮಾಡಬಹುದಾಗಿತ್ತು, ಕೆಲವರು ಗ್ರಂಥಾಲಯಕ್ಕೆ ಭೇಟಿ ಕೊಟ್ಟು ಅಧ್ಯಯನ ಮಾಡುತ್ತಿದ್ದೆವು.
ಮಧ್ಯಾಹ್ನ ದ ಊಟದ ಬಳಿಕ ವಿಶ್ರಾಂತಿ ಸಂಜೆಯ ಸತ್ಸಂಗ ದೇವರ ನಾಮ ಹಾಡುವುದು ,ಸ್ವಾಮೀಜಿಯವರ ಪ್ರವಚನ ಊಟದ ನಂತರ ಅಂದಿನ ದಿನಚರಿ ಮೆಲುಕು ಹಾಕಿ ಮಲಗುವುದು.
ನಿಜಕ್ಕೂ ಆಶ್ರಮದಲ್ಲಿ ನಾನು ಕಳೆದ ಆ ದಿನಗಳು ನನ್ನ ಜೀವನದ ಸುವರ್ಣ ದಿನಗಳು
ಮತ್ತೊಮ್ಮೆ ಆಶ್ರಮಕ್ಕೆ ಬರಲು ನಾನು ಕಾತುರನಾಗಿರುವೆನು ನಿರೀಕ್ಷಿಸುತ್ತಿರು
ಇಂತಿ ನಿನ್ನ ವಿಶ್ವಾಸಿ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಬಾಲಜಣ್ಣ .ಕಥೆ
*ಬಾಲಾಜಣ್ಣ*
ಕುಂಟ , ಶ್ಯವ್ಟಾ, ಲಂಗ್ಡಾ, ಎಳವ , ಹೀಗೆ ದಿನಕ್ಕೊಂದು ಹೆಸರಿನಿಂದ ಕರೆದು ಅವಮಾನವನ್ನು ಬಾಲಾಜಿಯು ಮೊದ ಮೊದಲು ಅಳುತ್ತಲೇ ಸ್ವೀಕರಿಸಿ, ಬರು ಬರುತ್ತಾ, ಅದು ಮಾಮೂಲಿಯಾಗಿ ತನ್ನ ಹೆಸರೇ ಅವನಿಗೆ ಮರೆತುಹೋಗಿತ್ತು, ತಂದೆಯಿಲ್ಲದ ಮಗನನ್ನು ಅಮ್ಮ ಕೂಲಿ ನಾಲಿಮಾಡಿ ಸಾಕುತ್ತಿದ್ದರು,
ಒಂದು ದಿನ ರಾತ್ರಿ ಮನನೊಂದ ಮಗ ಅಮ್ಮನ ಕೇಳಿಯೇ ಬಿಟ್ಟ " ಅಮ್ಮ ನನ್ನ ಒಂದು ಕಾಲೇಕೆ ಹೀಗಾಗಿದೆ? ನನ್ನ ಗೆಳೆಯರು ಮತ್ತು ಊರವರು ನಾನು ನಡೆಯುವುದನ್ನು ಹಂಗಿಸುವರು, ಮತ್ತು ನನ್ನ ಹೆಸರು ಹಿಡಿದು ಕರೆಯದೇ ಕೆಟ್ಟ ಪದಗಳಿಂದ ಬೈಯುವರು. ಅದನ್ನು ಕೇಳಿ ನನಗೆ ಅಳು ಬರುವುದು " ಎಂದು ಕಣ್ಣಲ್ಲಿ ನೀರು ಹಾಕುತ್ತಲೇ ಕೇಳಿದ.
ಮಗನ ಕಣ್ಣೀರ ವರೆಸಿ ತಾನೂ ತನ್ನ ಕಣ್ಣಲ್ಲಿ ಬಂದ ನೀರನ್ನು ಸೆರಗಿನಿಂದ ವರೆಸಿಕೊಂಡು ಮಗನ ಸಮಾಧಾನ ಮಾಡುತ್ತಾ
"ಅಳಬ್ಯಾಡ ಕಣೋ ನನ್ ಮಗನೆ, ಇದ್ರಲ್ಲಿ ನಿಂದೇನೂ ತಪ್ಪಿಲ್ಲ ಕಣಪ್ಪ,ನೀನು ಹುಟ್ಟಿದಾಗಿಂದ ಒಂದು ಕಾಲು ಐಬು ಕಣಪ್ಪ, ತಾಲೂಕ್ ಆಸ್ಪತ್ರೆ, ದೊಡ್ ಆಸ್ಪತ್ರೆ ಎಲ್ಲಾ ತೋರ್ಸಿದೆ ಕಣಪ್ಪ , ಆ ಡಾಕ್ಟ್ರು ಅದೆಂತದೋ, ಪೋಲಿಯಾ ಅಂದ್ರು, ಅದು ವಾಸಿ ಆಗಲ್ಲಂತೆ ಕಣಪ್ಪ, ...
ಯಾರಪ್ಪ ನಿನ್ನ ಬೈದೋರು? ನಾಳೆ ಅವರ್ನ ನನಿಗೆ ತೋರ್ಸು ,ಅವ್ರ ಗಾಚಾರ ಬಿಡಿಸ್ತಿನಿ, ನೀನೇನು ಅದ್ನ ತಲೆಗೆ ಹಚ್ಕಬ್ಯಾಡ ಇವತ್ತಿಂದ ಇನ್ನೂ ಸೆನಾಗಿ ಓದು, ನಿನ್ ಬೈಯ್ಯೋ ಜನ , ಹಂಗ್ಸೋ ಜನ ಬಾಯ್ ಮುಚ್ಕೆಂಪ್ತಾರೆ, ಎಂದು ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮತ್ತು ಧೈರ್ಯ ಹೇಳಿದರು ತಾಯಿ ದೇವಕ್ಕ . ಅಮ್ಮನ ಧೈರ್ಯದ ಮಾತು ಕೇಳಿ ಮಗ ಹಾಗೆಯೇ ಅಮ್ಮನ ತೊಡೆಯ ಮೇಲೆ ನಿದ್ರೆಗೆ ಜಾರಿದ ಬಾಲಾಜಿ.
ಅಮ್ಮನಿಗೆ ನಿದ್ರೆ ಬರಲಿಲ್ಲ ಬದಲಿಗೆ ಪ್ರಶ್ನೆಗಳ ಸರಮಾಲೆ ಅವಳ ಮುಂದೆ ಬಂದು ನಿಂತಿತು, " ಸಿಕ್ ವಯಸ್ಸಲ್ಲೆ ಗಂಡನ್ ಕಳ್ಕೊಂಡು ಈ ಮಗನ್ ಸಾಕಕೆ ಕೂಲಿ ಮಾಡ್ಕಂಡು ಜೀವ್ನ ಮಾಡೋದು ನನ್ ತಪ್ಪೇ?
ನನ್ ಮಗಂಗೆ ಕಾಲ್ ಸೆನಾಗ್ ಇಲ್ದೇ ಇರೊಂಗಾಗಿದ್ ನಮ್ ತಪ್ಪೆ?
ನಮ್ ಪಾಡಿಗೆ ನಾವ್ ಮರ್ವಾದೆಯಿಂದ ಜೀವ್ನ ಮಾಡ್ತಾ ಇದ್ರು ಈ ಜನ ಯಾಕ್ ನನ್ ಮಗನ್ನ ಇಂಗೆ ಮಾತಾಡ್ತಾರೆ? ಎಂದು ಮತ್ತೆ ಎರಡು ಹನಿಗಳನ್ನು ಉದುರಿಸಿದರು, ಆ ಹನಿಗಳು ಮಗನ ಕೈ ಮೇಲೆ ಬಿದ್ದು ನಿದ್ರೆಯಲ್ಲಿದ್ದ ಮಗ ಕೈ ಅಲುಗಾಡಿಸಿದ, ಮಗನನ್ನು ಎತ್ತಿ ಚಾಪೆಯ ಮೇಲೆ ಮಲಗಿಸಿ, ಉತ್ತರ ದಿಕ್ಕಿಗೆ ನಿಂತು " ತಾಯಿ ದೇವಸತ್ತಿ ಚೌಡವ್ವ ನನ್ ಮಗುಂಗೆ ,ನಂಗೆ ಯಾವ ತೊಂದ್ರೆ ಇಲ್ದೆ ಕಾಪಾಡವ್ವ ಎಂದು ಕೈಮುಗಿದು ತನ್ನ ಬಲಗೈಯನ್ನು ಮಡಿಚಿ ತಲೆದಿಂಬಿನಂತೆ ತಲೆ ಕೆಳಗೆ ಇಟ್ಟುಕೊಂಡು ಮಗನ ಪಕ್ಕದಲ್ಲೇ ಮಲಗಿದರು ದೇವಕ್ಕ.
ಅಮ್ಮನ ಧೈರ್ಯದ ಮಾತುಗಳು, ಮಗನಿಗೆ ಮಾರ್ಗದರ್ಶನದಂತೆ ನಿಂತವು, ಆಗಾಗಾ ಜನರಾಡುವ ಕುಹಕದ ಮಾತುಗಳಿಗೆ ಬಾಲಜಿ ಕಿವುಡಾದ ಓದಿನ ಕಡೆ ಗಮನಹರಿಸಿದ.
" ನಾಲ್ಕನೇ ತರಗತಿಯಲ್ಲಿ ಈ ವರ್ಷ ಬಾಲಾಜಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆದಿರುವನು ಎಲ್ಲರೂ ಚಪ್ಪಾಳೆ ಹೊಡಿಯಿರಿ " ಎಂದು ಶಿಕ್ಷಕರಾದ ತಿಪ್ಪೇಸ್ವಾಮಿ ಹೇಳಿದಾಗ ಮಕ್ಕಳು ಜೋರಾಗಿ ಚಪ್ಪಾಳೆ ತಟ್ಟಿದರು ,ಬಾಲಾಜಿ ಗೆ ತನಗರಿವಿಲ್ಲದೇ ಕಣ್ಣಲ್ಲಿ ನೀರು ಜಿನುಗಿದವು ಆದರೆ ಈ ಬಾರಿ ಆನಂದದಿಂದ.
ರಿಸಲ್ಟ್ ಕಾರ್ಡ್ ಹಿಡಿದು ಅಮ್ಮನ ಬಳಿ ಬಂದು ಅದನ್ನು ತೋರಿಸಿ "ಅಮ್ಮ ನೋಡು ನಾನು ಇಡೀ ಸ್ಕೂಲ್ ಗೆ ಪಸ್ಟ್ ಬಂದಿದಿನಿ" ಎಂದು ಮೊಗದಲ್ಲಿ ನಗುತುಂಬಿಕೊಂಡು ತೋರಿಸಿದ.
ಅಮ್ಮ ಹಿರಿಹಿರಿ ಹಿಗ್ಗುತ್ತಾ" ಬಾಳ ಸಂತೋಸ ಕಣಪ್ಪ, ನನಗೆಲ್ಲಿ ಇದುನ್ನ ಓದಾಕೆ ಬರುತ್ತೆ ,ಆದ್ರೂ ನೀನಿಗೆ ಸೆನಾಗಿ ನಂಬ್ರು ಬಂದಿರೋದು ಬಾಳ ಸಂತೋಸ ಕಣಪ್ಪ ,ಆ ನಮ್ ಸತ್ತಿ ಚೌಡವ್ವ ಕಣ್ ಬಿಟ್ಲು ಕಣಪ್ಪ ನಾಳಿಕೆ ಸುಕ್ರುವಾರ ಅವ್ವನ್ ಗುಡಿಗೆ ಹೋಗಿ ಹಣ್ಣು ಕಾಯಿ ಮಾಡಿಸ್ಕೆಂಡು ಬಾ, ಇಂಗೆ ಸೆನಾಗಿ ಓದಿ ,ಗೌರ್ಮೆಂಟ್ ಕೆಲ್ಸ ತಗಾಳಪ್ಪ " ಎನ್ನತ್ತಾ ತನ್ನ ಎರಡೂ ಕೈಗಳಿಂದ ಮಗನ ಮುಖವ ನೇವರಿಸಿ ತಲೆಗೆ ಒತ್ತಿಕೊಂಡು ನೆಟಿಕೆ ಮುರಿದರು ದೇವಕ್ಕ.
ಬಾಲಾಜಿಯ ಶೈಕ್ಷಣಿಕ ಪ್ರಗತಿಯನ್ನು ಕಂಡ ಅವನ ಸ್ನೇಹಿತರು ಐದನೆಯ ತರಗತಿಯಲ್ಲಿ ಅವನಿಗೆ ಗೌರವ ಕೊಡಲಾರಂಭಿಸಿದರು, ಕುಂಟ ಬಾಲ, ಬಾಲ, ಎಂದು ಹಂಗಿಸುವವರು ಕ್ರಮೇಣ ,ಬಾಲಾಜಿ, ಎನ್ನಲು ಆರಂಭ ಮಾಡಿದರು, ಇದಕ್ಕೆ ಪೂರಕವಾಗಿ ತರಗತಿಯ ಶಿಕ್ಷಕರಾದ ತಿಪ್ಪೇಸ್ವಾಮಿ ಮಾಸ್ಟರ್ " ಮಕ್ಕಳೇ ಅಂಗವಿಕಲತೆ ಶಾಪವಲ್ಲ, ಅವರೂ ನಮ್ಮಂತೆ ಮನುಷ್ಯರು ಅವರಿಗೂ ಜೀವಿಸುವ ಹಕ್ಕಿದೆ" ಎಂಬ ಮಾತುಗಳು ಸಹ ಮಕ್ಕಳ ಮನ ಪರಿವರ್ತನೆ ಗೆ ಸಾಕ್ಷಿಯಾಗಿದ್ದವು.
ಬಾಲಾಜಿಯು ಓದಿನಲ್ಲಿ ಹಿಂತಿರುಗಿ ನೋಡಲೇ ಇಲ್ಲ, ಅದಕ್ಕೆ ತಕ್ಕಂತೆ ಅಮ್ಮ ಕೂಲಿನಾಲಿ ಮಾಡಿ ಮಗನ ಓದಿಸಿದರು, ಹತ್ತನೇ ತರಗತಿಯಲ್ಲಿ ಮಗ ಇಡೀ ತಾಲೂಕಿಗೆ ಹೆಚ್ಚು ಅಂಕ ಪಡೆದು ಪಾಸಾಗಿದ್ದ, ಪತ್ರಿಕೆಯಲ್ಲಿ ಅವನ ಪೋಟೋ ಬಂದಿದ್ದನ್ನು ಕಂಡ ಅಕ್ಕ ಪಕ್ಕದ ಜನ ದೇವಕ್ಕನ ಮನೆಗೆ ಬಂದು ಮಗನ ಸಾಧನೆ ಹೊಗಳಿದಾಗ ಅಮ್ಮನಿಗೆ ಒಳಗೊಳಗೆ ಮಗನ ಸಾಧನೆ ಕಂಡು ಹೆಮ್ಮೆ ಉಂಟಾಯಿತು.
ಪಿಯುಸಿ, ಡಿಗ್ರಿಯಲ್ಲಿ ,ಅಂಗವಿಕಲ ವಿದ್ಯಾರ್ಥಿ ವೇತನ ಮತ್ತು ಅಮ್ಮನ ನೆರವಿನಿಂದ ಚೆನ್ನಾಗಿ ಓದಿದ ಬಾಲಾಜಿ ಡಿಗ್ರಿಯಲ್ಲಿ ಬಂಗಾರದ ಪದಕ ಪಡೆದು , ಬಿ ಎಡ್ ಮಾಡಿದ ಒಂದೇ ವರ್ಷಕ್ಕೆ ಸರ್ಕಾರಿ ಶಾಲೆಯ ಶಿಕ್ಷಕನಾದ ,
ಊರವರ ಬಾಯಲ್ಲಿ ಬಾಲಾಜಿ ಕ್ರಮೇಣ "ಬಾಲಾಜಣ್ಣ " ಆಗಿದ್ದ ಇಡೀ ಊರಿಗೆ ಮೊದಲ ಸರ್ಕಾರಿ ಉದ್ಯೋಗ ಪಡೆದ ಬಾಲಜಣ್ಣ ಊರಿನ ಓದುವ ಹುಡುಗರ ಮಾದರಿಯಾಗಿ ನಿಂತಿದ್ದ,
ಕೋಲಾರಕ್ಕೆ ಶಿಕ್ಷಕನಾಗಿ ನಿಯೋಜಿತವಾದ ನೇಮಕ ಪತ್ರ ಪಡೆದ ಬಾಲಾಜಿ ಅಮ್ಮನ ಪಾದದ ಬಳಿ ಆ ಪತ್ರ ಇಟ್ಟು ಕಾಲಿಗೆರಗಿ ಆಶೀರ್ವಾದ ಪಡೆದ
"ಬಾಲಾಜಿ, ಇದಕ್ಕೆಲ್ಲ ಕಾರಣ ಆ ಮಾ ಸತ್ತಿ ಚೌಡಮ್ಮ ಆಯಮ್ಮನ ಗುಡಿಗೋಗಿ ಇದಕ್ಕೆ ಪೂಜೆ ಮಾಡಿಸ್ಕೆಂಡು ನೀನು ದೂಟಿ ಗೆ ಹೋಗಪ್ಪ" ಎಂದರು ದೇವಕ್ಕ.
"ಅಮ್ಮಾ... ನಾನ್ ಒಬ್ಬನೇ ಹೋಗಲ್ಲ ನೀನು ನನ್ ಜೊತೆಗೆ ಬಾ, ಇಬ್ರು ಅಲ್ಲೇ ಇರಾನಾ, " ಎಂದು ಮಗ ಹೇಳುತ್ತಲೇ ಆಗಲಿ ಎಂದು ತಲೆಯಾಡಿಸಿದರು ಅಮ್ಮ.
ಒಂದು ತಿಂಗಳು ಶಿಕ್ಷಕನಾಗಿ ಸಂಬಳ ಪಡೆದ ಬಾಲಾಜಿ ಅಮ್ಮನಿಗೆ ರೇಷ್ಮೆ ಸೀರೆ ತಂದು ಕೊಟ್ಟನು.
ಅಮ್ಮನ ಬಹುದಿನದ ಬಯಕೆಯಂತೆ ತಿರುಪತಿ ಗೆ ಕರೆದುಕೊಂಡು ಹೋದನು. ವೆಂಕಟರಮಣಸ್ವಾಮಿಯ ದರ್ಶನದಿಂದ ಭಾವಪರವಶರಾದ ದೇವಕ್ಕ ತಮಗರಿವಿಲ್ಲದೇ ಜೋರು ಧ್ವನಿಯಲ್ಲಿ ಗೋವಿಂದಾ...... ಗೋವಿಂದಾ..... ಎಂದು ಕೂಗಲಾರಂಬಿಸಿದರು, ಅಮ್ಮನ ಧ್ವನಿಗೆ ಬಾಲಜಿಯೂ ಧ್ವನಿಸೇರಿಸಿದ ಅಕ್ಕಪಕ್ಕದವರೂ ಗೋವಿಂದಾ.... ಎಂದು ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಿದ್ದರು....
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು