19 ಮೇ 2021

ಧೈರ್ಯವಂತರಾಗೋಣ .ಲೇಖನ


 

ಮಾನವರಾಗೋಣ ೩

*ಧೈರ್ಯವಂತರಾಗೋಣ*

ನಮ್ಮಲ್ಲಿ ಬಹಳ ಜನರು ಸಣ್ಣ ವಿಷಯಗಳಿಗೂ ಭಯ ಬಿದ್ದು ಮುಂಬರುವ ಅಪಾಯಗಳ ನೆನದು ಮತ್ತೂ ಭಯಗೊಳ್ಳುತ್ತಾರೆ.ಆದರೆ ಈ ಘಟನೆ ನೋಡೋಣ,
ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ್ಷಗಳ ಹಿಂದೆ ಒಂದು ವಿಮಾನ ಪತನ ಆಯಿತು...
ವಿಮಾನ ನಾಪತ್ತೆ ಆದ ಸುದ್ದಿ ತಿಳಿದರು ಅದು ಎಲ್ಲಿ ಪತನ ಆಯಿತು ಎಂದು ತಿಳಿಯದೇ ಹುಡುಕಾಟ ನಡೆಸಿದರು ನಾಲ್ಕು ಐದು ದಿನಗಳ ನಂತರ
ವಿಮಾನ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪತನ ಆಗಿದೆ ಎಂದು ತಿಳಿದುಬಂತು..
ಅದರಲ್ಲಿ ಯಾರಾದರೂ ಬದುಕಿ ಉಳಿಯುವ ಸಾಧ್ಯತೆ ಎಲ್ಲರೂ ಕೈ ಬಿಟ್ಟಿದ್ದರು
ಸೈನಿಕರ ಸರ್ಚ್ ಟೀಂ ಸಾಗರದಲ್ಲಿ ಹುಡುಕಾಟ ಶುರು ಮಾಡಿದರು
ಕೊನೆಗೂ ಸರ್ಚ್ ಟೀಂ ವಿಮಾನದ ಅವಶೇಷ ಪತ್ತೆ ಹಚ್ಚಿದರು
ಎಲ್ಲಿ ನೋಡಿದರೂ ಹೆಣಗಳು ಕಾಣುತ್ತಿದ್ದವು
ಅನತಿ ದೂರದಲ್ಲಿ ಅವರಿಗೆ ಕಂಡು ಬಂದ ದೃಶ್ಯ ನೋಡಿ ಸೈನಿಕರಿಗೆ ತಮ್ಮ ಕಣ್ಣುಗಳನ್ನೇ ನಂಬಲು ಆಗಲಿಲ್ಲ
ತೇಲುತ್ತಿರುವ ವಿಮಾನದ ಒಂದು ತುಂಡು ಮೇಲೆ ಒಬ್ಬಳು ಮಹಿಳೆ ಒಂದು ಸಣ್ಣ ಮಗುವನ್ನು ಎದೆಗೆ ಅಪ್ಪಿಕೊಂಡು ಮಲಗಿರುವ ದೃಶ್ಯ ಕೂಡಲೇ ಅಲ್ಲಿಗೆ ಹೋಗಿ ಅವರನ್ನು ಪರೀಕ್ಷೆ ಮಾಡಿ ನೋಡಿದರು ತಾಯಿ ಮಗು ಇನ್ನೂ ಉಸಿರಾಡುತ್ತಿದ್ದರು..
ಅವರು ಜೀವಂತ ಇರುವುದು ಖಾತ್ರಿ ಮಾಡಿಕೊಂಡು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿಸಿದರು..
ಇಡೀ ಜಗತ್ತಿಗೆ ಇದೊಂದು ಪವಾಡ ಎಂದು ಅನಿಸಿತು..
ಮೈ ಹೆಪ್ಪುಗಟ್ಟಿಸುವ ಚಳಿ ಸುತ್ತಲೂ ನೀರು ತೇಲುತ್ತಿರುವ ಹೆಣಗಳು ಆಹಾರ ಇಲ್ಲ ನೀರು ಇಲ್ಲ ಎಂತಹ ಗಟ್ಟಿ ಗುಂಡಿಗೆ ಇದ್ದರೂ ಅಂತಹ ಸನ್ನಿವೇಶದಲ್ಲಿ ಬದುಕಿ ಉಳಿಯುವುದು ನಿಜಕ್ಕೂ ಒಂದು ಪವಾಡ..
ಆಕೆ ಚೇತರಿಸಿಕೊಂಡ ಬಳಿಕ ಅವಳನ್ನು ಸಂದರ್ಶನ ಮಾಡಿದಾಗ ಆಕೆ ಹೇಳಿದ ಮಾತು
ಆಕಾಶದಲ್ಲಿ ವಿಮಾನ ಸ್ಪೋಟ ಆಯಿತು ಏನಾಯಿತು ಎಂದು ಅರಿವು ಆಗುವಷ್ಟರಲ್ಲಿ ನಾವು ವಿಮಾನದಿಂದ ಸಿಡಿದು ಗಾಳಿಯಲ್ಲಿ ತೇಲುತ್ತಾ ನೀರಿಗೆ ಬಂದು ಬಿದ್ದೆವು
ಸುತ್ತಲೂ ನೋಡಿದಾಗ ಬರೀ ನೀರು ಕೆಲವರು ಈಜಲು ಪ್ರಯತ್ನಿಸಿದರು ಕೆಲವರು ಆದ ಅಪಘಾತಕ್ಕೆ ನೀರಿಗೆ ಬೀಳುವ ಮೊದಲೇ ಮೃತಪಟ್ಟಿದ್ದರು
ಮಗು ನನ್ನ ತೊಡೆ ಮೇಲೆ ಇದ್ದುದರಿಂದ ನೀರಿಗೆ ಬೀಳುವ ವರೆಗೆ ಮಗುವನ್ನು ಅಪ್ಪಿಕೊಂಡೆ ಇದ್ದೆ ನಾನು ಈಜಲು ಪ್ರಯತ್ನಿಸಿದೆ ಮಗು ಹಿಡಿದುಕೊಂಡು ಈಜಲು ಆಗಲಿಲ್ಲ..
ತೇಲುತ್ತಿರುವ ವಿಮಾನದ ತುಣುಕು ಕಣ್ಣಿಗೆ ಬಿತ್ತು ಏನಾದರೂ ಆಗಲಿ ನಾನು ಸಾಯುವುದಿಲ್ಲ ಬದುಕಿಯೇ ಬದುಕುತ್ತೇನೆ ಎಂದು ಕಷ್ಟಪಟ್ಟು ಈಜಿ ಅದರ ಮೇಲೆ ಏರಿ ಕುಳಿತೆ
ನನಗೆ ಭರವಸೆ ಇತ್ತು ಯಾರಾದರೂ ಕಾಪಾಡುತ್ತಾರೆ ಎಂದು
ನನ್ನ ಧೈರ್ಯವೇ ನನ್ನನ್ನು ಬದುಕಿಸಿತು ...

ಈ ಮೇಲಿನ ಘಟನೆ ಗಮನಿಸಿದಾಗ ಕಷ್ಟ ಕಾಲದಲ್ಲಿ ಧೈರ್ಯ ನಮ್ಮ ಅಸ್ತ್ರವಾಗಬೇಕು ಎಂಬುದು ಮನವರಿಕೆಯಾಗುತ್ತದೆ ,ಇತ್ತೀಚಿನ ಕೆಲವು ಘಟನೆಗಳಲ್ಲಿ ಒಂದು ರೋಗಾಣುವಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡವರ ಸುದ್ದಿ ಓದಿದಾಗ ಇಂತಹ ದಿಟ್ಟ ಮಹಿಳೆಯ ಧೈರ್ಯ ಎಲ್ಲರಲ್ಲೂ ಎಲ್ಲಾ ಕಾಲದಲ್ಲೂ ಬರಬೇಕಿದೆ ,"ಧೈರ್ಯಂ ಸರ್ವತ್ರ ಸಾಧನಂ "ಎಂಬಂತೆ  ಧೈರ್ಯ ನಮ್ಮ ಮೂಲಮಂತ್ರವಾಗಬೇಕು .ಜೀವನದಲ್ಲಿ ಏನೇ ಕಷ್ಟಗಳು ಎದುರಾದರೂ ಅವುಗಳನ್ನು ಎದುರಿಸಿ ಬಾಳಬೇಕು.

" ಹಿಂತಿರುಗಿ ನೋಡಬೇಡಿ,ಯಾವಾಗಲೂ ಮುನ್ನೆಡಿಯಿರಿ,ಅನಂತ ಶಕ್ತಿ, ಅನಂತ ಉತ್ಸಾಹ,ಅನಂತ ಸಾಹಸ,ಅನಂತ ತಾಳ್ಮೆ,ಇವುಗಳಿದ್ದರೆ ಮಾತ್ರ ಮಹತ್ಕಾರ್ಯ ಸಾಧಿಸಲು ಸಾಧ್ಯ " ಎಂಬ ಸ್ವಾಮಿ ವಿವೇಕಾನಂದರ ವಾಣಿ ನಮಗೆ ಮಾರ್ಗದರ್ಶನವಾಗಲಿ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

ಬೈಬ್ರಂಟ್ ಮೈಸೂರು . ೧೯.೫.೩೧


 

ಪ್ರತಿನಿಧಿ ಕಥೆ ೧೯.೫ ೨೧


 

18 ಮೇ 2021

ಮಧುರ ಮೈತ್ರಿ .ಕಥೆ


 


"ಮಧುರ ಮೈತ್ರಿ* ಕಥೆ

ಅಲ್ಲಿ ನಗುವಿತ್ತು, ಸಂಭ್ರಮವಿತ್ತು, ಸಂತಸವಿತ್ತು, ದಂಪತಿಗಳು ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಮನಬಿಚ್ಚಿ ಮಾತನಾಡುತ್ತಿದ್ದರು, ಹೃದಯತುಂಬಿ ನಗುತ್ತಿದ್ದರು .

ಬೆಳೆಸೆಗೆ ಬಂದ ರಾಗಿ ಹೊಲದ ಬದುವಿನ ಮೇಲೆ ಕುಳಿತ ದಂಪತಿಗಳು ಆಗ ತಾನೆ ನಾಗಪ್ಪನ ಪೂಜೆ ಮಾಡಿ ಹುತ್ತಕ್ಕೆ ಹಾಲೆರೆದು ಮುತೈದೆಯರಿಗೆ ಬಾಗಿನ ನೀಡಿ, ಮನೆಗೆ ಹೋಗುವ ಮುನ್ನ ಲೋಕಾಭಿರಾಮವಾಗಿ ಮಾತನಾಡುತ್ತಾ, ನಗುತ್ತಾ, ಇರುವುದನ್ನು ಕಂಡ ಮರದ ಗಿಳಿಗಳು ಇವರನ್ನೇ ನೋಡುತ್ತಿದ್ದವು, ಹೊಲದ ಸನಿಹ ಇರುವ ರಸ್ತೆಯಲ್ಲಿ ಹೋಗುವ ಬೈಕ್ ಸವಾರರ ಕಣ್ಣುಗಳು ಇವರ ಮೇಲೆ ಬೀಳದಿರಲಿಲ್ಲ.

ಯಾರು ತಾನೆ ನೋಡಲ್ಲ ಹೇಳಿ, ಜರೀ ಪಂಚೆ ,ಕೆಂಪನೆಯ ಅಂಗಿ ತೊಟ್ಟ ಸ್ಪುರದ್ರೂಪಿ ಸುಜಯ್ ಯಾವ ಸಿನಿಮಾ ನಟನಿಗಿಂತ ಕಡಿಮೆ ಇರಲಿಲ್ಲ.ಜೊತೆಗೆ ಕುಳಿತ ನೀಲಿ ಸಾಂಪ್ರದಾಯಿಕ ಸೀರೆ ಉಟ್ಟು, ಅದಕ್ಕೆ ಹೊಂದಿಕೆಯಾಗುವ ರವಿಕೆ ತೊಟ್ಟು, ಎಡಕ್ಕೆ ಬಾಗಿದ ತುರುಬಿಗೆ  ತಮ್ಮ ಹೊಲದಲ್ಲಿ ಬೆಳೆದ ಮಲ್ಲಿಗೆ ಕಾನಕಾಂಬರ ಹೂಗಳ ತಾನೆ ಕಟ್ಟಿಕೊಂಡು ಮುಡಿದಿದ್ದಳು ಆರತಿ, ಮೆಹೆಂದಿಯ ರಂಗು ಅವಳ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು.

"ಇದೆಲ್ಲಾ ಹೇಗೆ ಸಾದ್ಯವಾಯಿತು ಸುಜಯ್, ನೀನು ಉತ್ತರ ನಾನು ದಕ್ಷಿಣ, ನೀನು ಹಳ್ಳಿಯ ರೈತನ ಮಗ ನಾನು ಪಟ್ಟಣದ ಕೆ ಎ ಎಸ್ ಅಧಿಕಾರಿಯ ಮಗಳು, ನೀನು ಪಕ್ಕಾ ಭಾರತೀಯ ಸಂಪ್ರದಾಯ ಪಾಲಿಸುವವ ನಾನು ಪಾಶ್ಚಾತ್ಯ ಸಂಸ್ಕೃತಿಯ ಆರಾಧಕಳು    ಆದರೂ ನಾವು ಜೊತೆಯಾಗಿದ್ದು ಹೇಗೆ "

" ನಿನಗೇ ಗೊತ್ತು ಆರತಿ ,ಇದು ಶುರುವಾಗಿದ್ದು ,ತುಮಕೂರು ಯೂನಿವರ್ಸಿಟಿ ಕಲಾ ಕಾಲೇಜಿನಲ್ಲಿ ನಾವಾಗ ಬಿ ಎ ಓದುತ್ತಿದ್ದೆವು ... ಪ್ರೆಶರ್ಸ್ ವೆಲ್ಕಂ ಸಮಾರಂಭದಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿತು, ಮೈಕ್ ಮುಂದೆ ನಿಂತು.  " ನೀನೊಂದು .....ಮುಗಿಯದ ಮೌನ.......   ನಾನೇಗೆ.....ತಲುಪಲಿ ನಿನ್ನ......." ಎಂಬ ಹಾಡನ್ನು ಹಾಡಿ ನಾನು ಮುಗಿಸುವ ಮುನ್ನವೇ ಕರತಾಡನ ಮುಗಿಲು ಮುಟ್ಟಿತ್ತು. ಮತ್ತೊಮ್ಮೆ ಅದೇ ಹಾಡು ಹಾಡಲು ಒನ್ಸ್ ಮೋರ್ ಅಂದರು, ಎರಡನೆಯ ಬಾರಿಗೆ ಹಾಡನ್ನು ಹಾಡಿ  ಮುಗಿಸಿದಾಗ ಶಿಳ್ಳೆಗಳ ಜೊತೆ ಚಪ್ಪಾಳೆ ಸದ್ದು ಕೇಳುತ್ತಲೇ ಇತ್ತು ,ಅದರಲ್ಲೂ ಎಲ್ಲರೂ ಚಪ್ಪಾಳೆ ನಿಲ್ಲಿಸಿದರೂ ,ನೀನು ಮಾತ್ರ ಮೈಮರೆತಂತೆ ಚಪ್ಪಾಳೆ ತಟ್ಟುತ್ತಲೇ ಇದ್ದೆ ಎಲ್ಲರೂ ನಿನ್ನತ್ತ ನೋಡಿದಾಗ ನಿನ್ನ ಗೆಳತಿಯರು ನಿನ್ನ ಕೈಗಳನ್ನು ಹಿಡಿದಾಗ ಮಾತ್ರ ನಿನ್ನ ಚಪ್ಪಾಳೆ ನಿಂತಿತು."

"ಹೌದು ಸುಜಯ್ ಈಗ ನನಗೆಲ್ಲಾ ನೆನಪಾಗುತ್ತಿದೆ. ನಮ್ಮಪ್ಪ ಗೆಜೆಟೆಡ್ ಅಧಿಕಾರಿಯಾಗಿದ್ದರಿಂದ ನಾನು ಚಿಕ್ಕವಳಿದ್ದಾಗಿನಿಂದ ಕಾನ್ವೆಂಟ್ ಶಾಲೆಯಲ್ಲಿ ಬೆಳೆದವಳು ಆ ಪ್ರಭಾವ ನನ್ನ   ಉಡುಗೆ ,ತೊಡುಗೆ, ಆಹಾರ ವಿಹಾರ ಎಲ್ಲದರ ಮೇಲೆ ಕಂಡುಬಂತು, ನಾನು ಕೂಡಾ ಅಧಿಕಾರಿಯಾಗಬೇಕೆಂಬ ಗುರಿಯೊಂದಿಗೆ ಡಿಗ್ರಿ ಮಾಡಲು ಯೂನಿವರ್ಸಿಟಿ ಆರ್ಟ್ಸ್ ಕಾಲೇಜಿಗೆ ಸೇರಿದೆ.
ನಿನ್ನ ಹಾಡು ನನ್ನ ಮಂತ್ರಮುಗ್ದಗೊಳಿಸಿತು.

" ಮಂತ್ರವೋ ,,ಮುಗ್ದವೋ ,,ನೀನು ಮಾರನೆ ದಿನ ಬಂದು ನನಗೆ ಐ ಲವ್ ಯೂ  ಹೇಳಿದಾಗ ಮಂತ್ರ, ತಾಯಿತ ಕಟ್ಟಿಸಿಕೊಳ್ಳುವಂತೆ ಶಾಕ್ ಆಗಿ ಬೆದರಿದ್ದೆ,
ನಾನು ನಿನಗೆ ತಕ್ಕವನಲ್ಲ , ಅಪ್ಪ ರೈತನಾಗಿ ಕಷ್ಟ ಪಡುತ್ತಿರುವರು,  ನಾನು ಓದಿ ಲೆಕ್ಚರ್ ಆಗಬೇಕು ಅಪ್ಪ, ಅಮ್ಮನನ್ನು ಸುಖವಾಗಿ ನೋಡಿಕೊಳ್ಳಬೇಕು, ಸುಮ್ಮನೆ  ನನ್ನ ಪಾಡಿಗೆ ನನ್ನ ಬಿಡು ಎಂದು  ಅಂಗಲಾಚಿದೆ" ಎಂದು ನೆನೆಪು ಬಿಚ್ಚಿದ ಸುಜಯ್.

"ಆ..ಹಾ... ನಾನು ಬಿಟ್ಟೆನೆ ? ಬಿಡಲಿಲ್ಲ , ಈಗಲೂ ಬಿಟ್ಟಿಲ್ಲ ನೋಡು ನಿನ್ನ ಪಕ್ಕದಲ್ಲೇ ಕೂತಿರುವೆ "ಎಂದು ಮೈಗೆ ಮೈ ತಾಗಿಸಿ ಹಿತವಾಗಿ ಗುದ್ದುತ್ತಾ ಕೇಳಿದಳು ಆರತಿ.

" ಹೌದು ಮಾರಾಯ್ತಿ ನಿನ್ ಎಲ್ಲಿ ಸುಮ್ನೆ ಬಿಟ್ಟೆ ?ಪ್ರೀತಿ ಒಪ್ಪದಿದ್ದರೆ ವಿಷ ಕುಡಿಯುವೆ ಎಂದು ವಿಷದ ಬಾಟಲ್ ಅನ್ನು ಒಳ್ಳೆಯ ವಾಟರ್ ಬಾಟಲ್ ತರ ಯಾವಾಗಲೂ ಆ ಇಂಪೋರ್ಟೆಡ್ ಬ್ಯಾಗ್ ನಲ್ಲಿ ಇಟ್ಕೊಂಡು ಪದೇ ಪದೇ ಹೆದರಿಸುತ್ತಿದ್ದೆ, ಅದನ್ನು ನೋಡಿ , ಡಿಗ್ರೀ ಮುಗಿಯುವ ಮೊದಲೇ ಮದುವೆ ಬೇಡ ಎಂಬ  ಒಂದು ಷರತ್ತಿನ ಮೇಲೆ ನಿನ್ನ ಪ್ರೀತಿಸಲು ಒಪ್ಪಿದ್ದು.

"ಹೌದು ಕಣೋ , ನಿನಗೆ ಇಷ್ಟ ಇಲ್ಲದಿದ್ದರೂ ಜೀನ್ಸ್ , ಮತ್ತು ಮಾಡ್ ಡ್ರೆಸ್ ಹಾಕಿಸಿ ಕಾಲೇಜಿಗೆ ಬಂದಾಗ ಹುಡುಗಿಯರು ನಿನ್ನೇ ನೋಡಿದಾಗ ಅವರ ಜೊತೆ ಜಗಳ ಮಾಡಿದ್ದು ನೆನಪಿದೆಯಾ?"

" ಅಯ್ಯೋ ನೆನಪಾ!?  ಭಯಂಕರ ನೆನಪು ಅವತ್ತು ಪ್ರಿನ್ಸಿಪಾಲ್ ಬರದಿದ್ದರೆ ಆ ಸುರೇಖಾ ಳನ್ನು ಅದೇನು ಮಾಡುತ್ತಿದ್ದೆಯೋ ಮೊದಲ ಬಾರಿ ಇಡೀ ಕಾಲೇಜು ನಿನ್ನ ಮಾರಿ ರೂಪ ನೋಡಿತ್ತು " ಎಂದು ಜೋರಾಗಿ ನಕ್ಕ ಸುಜಯ್

"ಹೌದು ಮತ್ತೆ ನನ್ ಹುಡ್ಗನ್ನ ಲೈನ್ ಹಾಕೋಕೆ ಬಂದ್ಲು ಆ ಬಿತ್ರಿ ಬಿಡ್ತೀನಾ ನಾನು? .
ನಮ್ಮ ಪ್ರೀತಿ ವಿಷಯ ಮನೇಲಿ ಗೊತ್ತಾಗಿ ಅಪ್ಪಾ ಕಿರುಚಾಡಿದ್ರು ,ಚಿಕ್ಕವಳಿದ್ದಾಗಿಂದ ನನ್ ಹಠ ನೋಡಿದ್ದ ಅಪ್ಪ ,ಕೊನೆಗೆ ಏನಾರ ಮಾಡ್ಕೊಂಡು ಹಾಳಾಗೋಗು ಅಂದ್ರು, ಅದೇ ನಮ್ ಮದುವೆಗೆ ಗ್ರೀನ್ ಸಿಗ್ನಲ್,
ಡಿಗ್ರಿ ಮುಗೀತು ಮದುವೆ ಆಗೋಣ ಬಾ ಎಂದು ನಾನು ಕೇಳಿದಾಗ ನಿಂದು ಅದೇ ಹಳೇ ರಾಗ... ಲೆಕ್ಚರ್.... ರೈತರು.....ಕಷ್ಟ.....
ಕೊನೆಗೂ ಎರಡು ವರ್ಷ ಮದುವೆ ಬೇಡ ಎಂದೂ ನಾನೂ ತೀರ್ಮಾನ ಮಾಡಿ  ನೀನು ಮಾನಸ ಗಂಗೋತ್ರಿಯಲ್ಲಿ ಎಂ ಎ ಮಾಡಲು ಹೊರಟೆ   ನಾನು ಕೆ ಎ ಎಸ್ ಗೆ ಓದಲು ಬೆಂಗಳೂರಿಗೆ ಹೋದೆ, ಹೋಗುವಾಗ ನಿನಗೊಂದು ವಾರ್ನಿಂಗ್ ಕೊಟ್ಟಿದ್ದೆ ,"ವಾರಕ್ಕೊಮ್ಮೆ ಪತ್ರ ಬರೆಯದಿದ್ದರೆ ನಿನ್ನ ಕಥೆ ಅಷ್ಟೇ." ಎಂದು

" ಹದಿನೈದು ದಿನ ನನ್ನ ಕಾಗದ ಬರದಿದ್ದಾಗ ನೀನು ಹುಡುಕಿಕೊಂಡು ನಮ್ಮ ಹಳ್ಳಿ ಶೆಟ್ಟಿಹಳ್ಳಿ ಪಾಳ್ಯಕ್ಕೆ ಕಪ್ಪು ಕಾರಲ್ಲಿ ಬರ್... ಎಂದು ಡುಮು ಡುಮು ಮುಖದಲ್ಲಿ ಬಂದೆ. ಅಂದು ನಮ್ಮ ಅಪ್ಪನ ಹನ್ನೊಂದು ದಿನದ ತಿಥಿ ಕಾರ್ಯ ನೋಡಿ ನಿನ್ನ ಕಣ್ಣಲ್ಲಿ ನಾನು ಎರಡು ಹನಿ ಕಂಡೆ, " ಎಂದು ದೀರ್ಘವಾಗಿ ಉಸಿರು ಬಿಟ್ಟು ರಾಗಿಯ ಹೊಲದ ಕಡೆ ನೋಡುತ್ತಾ ಹೇಳಿದ ಸುಜಯ್.

" ಅಪ್ಪನಿಗೆ ಇಷ್ಟ ಇಲ್ಲದಿದ್ದರೂ  ಒಪ್ಪಿಸಿ ದೇವರಾಯನದುರ್ಗ ದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದೆವು , ಅಪ್ಪ ಹಣ ಕೊಡುವೆ ಏನಾದರೂ ಬಿಸಿನೆಸ್ ಮಾಡಿ ಇದನ್ನಾದರೂ ಕೇಳು , ಹಳ್ಳಿಗೆ ಹೋಗಬೇಡ ಎಂದಾಗ , ನೀನು ಅದಕ್ಕೆ ಒಪ್ಪಲಿಲ್ಲ ಅದಕ್ಕೆ ನಿನ್ನೊಂದಿಗೆ ಹಳ್ಳಿಗೆ ಬಂದು ಬಿಟ್ಟೆ ಅಲ್ವ? ಪ್ರಶ್ನಿಸಿದಳು ಆರತಿ

" ಹೌದು ನೀನು ಮೊದಲು ನಮ್ಮ ಹಳ್ಳಿಗೆ ಬಂದಾಗ ನಮ್ಮ ಹಳ್ಳಿಯ ಪಡ್ಡೆ ಹುಡುಗರು ಮೊಳಕಾಲ‌ ಮೇಲಿನ ನಿನ್ನ ಮಿಡಿಯನ್ನೇ  ಜೊಲ್ಲು ಸುರಿಸಿಕೊಂಡು ನೋಡುತ್ತಿದ್ದುದನ್ನು ನಾನು ನಿನ್ನ ಗಮನಕ್ಕೆ ತಂದಾಗ ಅವತ್ತಿನಿಂದ ಈ ರೀತಿಯಾಗಿ ಸೀರೆ ಉಡುತ್ತಿರುವೆ ಎಂದು ಹೆಮ್ಮೆಯಿಂದ ಆರತಿಯ ಕಡೆ ನೋಡಿದ ಸುಜಯ್.

"   ಹೌದು ಸುಜಯ್  ನೀನು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆ ನಮ್ಮದು ದೇವರೇ ಬೆಸೆದ ಮಧುರ ಮೈತ್ರಿ .
ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ  ನೀನು ಇರುವಾಗ , ಒಳ್ಳೆಯ ಅಮ್ಮನಂತಹ ಅತ್ತೆ, ಸುಂದರವಾದ ರಾಗಿ ಹೊಲ ,ಇದೆಲ್ಲಾ ಇರುವಾಗ ಇನ್ನೇನು ಬೇಕು..."

ಮಧ್ಯ ದಲ್ಲೆ ಬಾಯಿ ಹಾಕಿ ಹೇಳಿದ
" ನಮ್ದು ಅಂತ ಒಂದು ಜೀವ...? ಮದುವೆಯಾಗಿ ಎರಡು ವರ್ಷಗಳ ನಂತರವೂ ನಮಗೊಂದು ಮಗು ಆಗಿಲ್ಲ ಅದೊಂದೇ ಕೊರಗು ಚಿನ್ನ "ಎಂದು ಬೇಸರದಿಂದ ನುಡಿದ ಸುಜಯ್.

" ಏಯ್ ಅದ್ಯಾಕೆ ಅಷ್ಟು ಬೇಜಾರ್ ಮಾಡ್ಕೊತಿಯಾ? ನಮಗೇನು ಮಹಾ ವಯಸ್ಸು ಆಗಿದೆ ? ಭಗವಂತ ಕಣ್ ಬಿಟ್ರೆ ಅದ್ಯಾವ ಲೆಕ್ಕ ....ಎಂದು ಥೇಟ್ ಹಳ್ಳಿಯ ಹೆಂಗಸಂತೆ ಮಾತನಾಡಿದಾಗ ರತ್ನಪಕ್ಷಿ( ಸಂಬಾರ್ ಗಾಗೆ) ಅವರ ಮುಂದೆ ಹಾರುತ್ತಾ ಹೋಗಿ ಮರದಲ್ಲಿ ‌ಕುಳಿತಿತು.....

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

*ಇಂದಿನ "೧೮/೫/೨೧ ವೈಬ್ರಂಟ್ ಮೈಸೂರು "ಪತ್ರಿಕೆಯಲ್ಲಿ ಪ್ರಕಟವಾದ ನನ್ನ ವ್ಯಕ್ತಿತ್ವ ವಿಕಸನ ಕುರಿತಾದ ಲೇಖನ* ಸಿಹಿಜೀವಿ. ಸಿ ಜಿ ವೆಂಕಟೇಶ್ವರ


 *ಇಂದಿನ " ವೈಬ್ರಂಟ್ ಮೈಸೂರು "ಪತ್ರಿಕೆಯಲ್ಲಿ ಪ್ರಕಟವಾದ ನನ್ನ  ವ್ಯಕ್ತಿತ್ವ ವಿಕಸನ ಕುರಿತಾದ ಲೇಖನ*                          ಸಿಹಿಜೀವಿ. ಸಿ ಜಿ ವೆಂಕಟೇಶ್ವರ