This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
09 ಮೇ 2021
08 ಮೇ 2021
ಗಜಲ್
*ಗಜಲ್*
ಈ ದೇಹ ಮಣ್ಣಾಗುವ ಮುನ್ನ ಒಳಿತುಮಾಡು
ಜಗವು ಮೆಚ್ಚುವುದು ನಿನ್ನ ಒಳಿತು ಮಾಡು
ಶಾಶ್ವತವು ಯಾವೂದೂ ಅಲ್ಲ ಭುವಿಯಲಿ
ಅಳಿವ ಮುನ್ನ ಉಳಿಸಲು ಹೆಸರನ್ನ ಒಳಿತುಮಾಡು
ಕಲಹ ಮಾಡುತಲೇ ಕಾಲ ಕಳೆದದ್ದು ಸಾಕು
ಸಕಲರೂ ಕೂಡಿ ಬಾಳಿದರೇನೆ ಚೆನ್ನ ಒಳಿತುಮಾಡು
ಬದ್ದಿದ್ದು ಏಕಾಂಗಿ ಹೋಗುವುದು ಒಬ್ಬಂಟಿ
ಸಮಾಜದಲ್ಲಿ ಸೇರುತ್ತ ಜನರನ್ನ ಒಳಿತು ಮಾಡು
ತುತ್ತು ಕೂಳಿಗೂ ತತ್ವಾರ ದುರಿತ ಸಮಯದಲ್ಲಿ
ಸಿಹಿಜೀವಿಯಂತೆ ಹಸಿದವರಿಗೆ ನೀಡುತ ಅನ್ನ ಒಳಿತು ಮಾಡು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
07 ಮೇ 2021
ಕೈಗೆ ಸಿಗದ ಬಣ್ಣದ ಚಿಟ್ಟೆ .ಕಥೆ
*ಕೈಗೆ ಸಿಗದ ಬಣ್ಣದ ಚಿಟ್ಟೆ*
ಹಸಿರಾದ ಸುಂದರವಾದ ಬೆಟ್ಟದ ತಪ್ಪಲಲ್ಲಿ ತಾನೇ ಬೆಳೆಸಿದ ಸುಂದರವಾದ ರೇಷ್ಮೆ ತೋಟದಲ್ಲಿ ತೆಂಗಿನ ಮರದ ಕೆಳಗೆ ಕುಳಿತಿದ್ದ ಸತೀಶ, ಈ ಮೊದಲು ತನ್ನ ನೆರೆಹೊರೆಯವರು, ಸ್ನೇಹಿತರು, ಅವರಿವರನ್ನು ಅವನೇ ಕರೆದು ಕೊಂಡು ಹೋಗಿ , ಅವರು ಕೇಳದಿದ್ದರೂ ,ಆ ರೇಷ್ಮೆ ತೋಟದ ಬಗ್ಗೆ, ಆ ಎಲೆಗಳ ಬಗ್ಗೆ, ಬೆಳೆದ ರೇಷ್ಮೆ ಗೂಡಿನ ಬಗ್ಗೆ, ತನ್ನ ಆರ್ಥಿಕ ಸ್ಥಿತಿ ಸುಧಾರಿಸಿದ್ದರ ಬಗ್ಗೆ, ತನ್ನ ಮನೆಯನ್ನು ರಿಪೇರಿ ಮಾಡಿಸಿ ಹೊಸ ಮನೆಯಂತೆ ಮಾಡಿದ್ದರ ಬಗ್ಗೆ, ಇದರಲ್ಲಕ್ಕೂ ಕಾರಣ ನನ್ನ ರೇಷ್ಮೆ ಕೃಷಿ ಎಂದು ಹೆಮ್ಮೆಯಿಂದ ದೀರ್ಘವಾಗಿ ಹೇಳುತ್ತಿದ್ದ , ಸತೀಶನ ಮಾತು ಗಂಟೆಗಿಂತ ಜಾಸ್ತಿ ಆದಾಗ "ಸತೀಶಣ್ಣ ಸ್ವಲ್ಪ ವಂದ (ಮೂತ್ರ ವಿಸರ್ಜನೆ) ಮಾಡಿ ಬತ್ತೀನಿ ಇರು " ಎಂದು ಹೊರಟವರು ಮತ್ತೆ ಸತೀಶನ ಬಳಿ ಸುಳಿದಿರಲಿಲ್ಲ.
ಅಂತಹ ಹೆಮ್ಮೆಯ ತೋಟದ ಮುಂದೆ ಕುಳಿತರೂ ಇಂದು ಯಾಕೋ ಮನಸ್ಸು ಬೇಸರದಿಂದ ಕೂಡಿತ್ತು, ಪಕ್ಕದ ಹೊಲದ ತಿಮ್ಮಣ್ಣ " ಏನ್ ಸತೀಶಣ್ಣ ,ರೇಷ್ಮೆ ತ್ವಾಟ ಸೆನಾಗೈತೆ , ಈ ಸಲ ಮೊಟ್ಟೆ ಯಾವಾಗ ತರ್ತಿಯಾ?" ಎಂದಾಗ
"ಮುಂದಿನ ವಾರ" ಅಷ್ಟೇ ಉತ್ತರ ನೀಡಿದ್ದು ಕಂಡು ಸದ್ಯ ಬದುಕಿದೆ ,ಎಂದು ತಲೆಯ ಮೇಲೆ ಹುಲ್ಲು ಹೊತ್ತು ಊರ ಕಡೆ ಹೊರಟ ತಿಮ್ಮಣ್ಣ.
ಅದೇ ವೇಳೆಗೆ ಬಣ್ಣದ ಚಿಟ್ಟೆಯೊಂದು ಬಂದು ಅವನ ಕೈ ಮೇಲೆ ಕುಳಿತುಕೊಂಡಿತು ,ಆಗಲೂ ಅದೇ ನಿರಾಸಕ್ತಿ, ಮೊದಲಾಗಿದ್ದರೆ ಚಿಟ್ಟೆ ಗಳೆಂದರೆ ಪಂಚ ಪ್ರಾಣ ಅವುಗಳನ್ನು ಹಿಡಿಯಲು ಅರ್ಧದಿನಗಟ್ಟಲೆ ಪ್ರಯತ್ನ ಮಾಡಿ ಮನೆಗೆ ಲೇಟಾಗಿ ಹೋಗಿದ್ದಕ್ಕೆ ಅಜ್ಜಿ ,ಮತ್ತು ಮಾವನವರಿಂದ ಬೈಸಿಕೊಂಡಿದ್ದಿದೆ, ಆದರೆ ಇಂದು ಅದೇ ಚಿಟ್ಟೆ ಬಂದು ಅವನ ಕೈ ಮೇಲೆ ಕುಳಿತರೂ ಯಾಕೆ ಅಷ್ಟು ತಾತ್ಸಾರ ಮತ್ತು ಬೇಸರ ಎಂದು ಪ್ತಶ್ನೆ ಹಾಕಿಕೊಂಡ.
ಹೌದು ನಿನ್ನೆ ಚಿದಾನಂದ ಯರಬಳ್ಳಿಯಿಂದ ಬಂದು "ಸುಜಾತಾಳ ಮದುವೆ ಲಕ್ಷ್ಮಜ್ಜಿ ಛತ್ರದಲ್ಲಿ ಆಗಿಹೋಯಿತು , ಸುಜಾತಾಳ ಗೆಳತಿಯರನ್ನು ಸಹ ಕರೆಯಲಿಲ್ಲವಂತೆ , ನನಗೂ ಗೊತ್ತಿರಲಿಲ್ಲ ಇಂದು ಅವರ ಮನೆಯ ಬಳಿ ಇರುವ ಮದುವೆ ಚಪ್ಪರ ನೋಡಿ ಕೇಳಿದಾಗ ಮಹಾಲಿಂಗ ವಿಷಯ ತಿಳಿಸಿದ " ಎಂದು ಒಂದೇ ಸಮನೆ ಬೇಸರ ದಿಂದಲೇ ವರದಿ ಒಪ್ಪಿಸಿದ.
ಸತೀಶನಿಗೆ ಆಕಾಶವೇ ಕುಸಿದಂತಾಯಿತು, ತನಗರಿವಿಲ್ಲದೇ ಕಣ್ಣುಗಳಲ್ಲಿ ನೀರು ಜಿನುಗಿದವು,
ಮೊನ್ನೆ ಮಹೇಶ ನ ಮದುವೆಯಲ್ಲಿ ಸಿಕ್ಕಾಗ ಸತೀಶ ನಾನು ನಿನ್ನ ಬಿಟ್ಟರೆ ಯಾರನ್ನೂ ಮದುವೆಯಾಗಲ್ಲ , ಮುಂದಿನ ವರ್ಷ ಮದುವೆ ಆಗೋಣ ಎಂದು ಭರವಸೆ ನೀಡಿದ ನನ್ನ ಸುಜಾತ ನನಗೆ ಮೋಸ ಮಾಡಿದಳೆ ? ಅಯ್ಯೋ.... ಯಾರನ್ನು ನಂಬಲಿ......? ಚಿದಾನಂದ.... ಜೋಕ್ ಮಾಡುತ್ತಿಲ್ಲ ತಾನೆ? ..."
ಎಂದಾಗ ಅಳುವ ಸರದಿ ಚಿದಾನಂದ ನದು."ಇಂತಹ ವಿಷಯದಲ್ಲಿ ಜೋಕ್ ಎಂಗೆ ಮಾಡಲಿ ಗೆಳೆಯ , ಮದುವೆ ಆಗಿರೋದು ಸತ್ಯ, ಬಹುಶಃ ಇದಕ್ಕೆ ಸುಜಾತಾಳ ಒಪ್ಪಿಗೆ ಇಲ್ಲದಿದ್ದರೂ ಅವರಪ್ಪ ಶಕುನಿ ಬಲವಂತವಾಗಿ ಮದುವೆ ಮಾಡಿರಬೇಕು , ಹೋಗಲಿ ಬಿಡು, ನಿನ್ನ ಅವಳ ಲಗ್ನ ಹಣೇಲಿ ಬರ್ದಿಲ್ಲ, ಅವ್ಳಿಗಿಂತ ಒಳ್ಳೆಯ ಹೆಣ್ ಸಿಗ್ತಾಳೆ ನಿನಗೆ " ಕಣ್ಣಿಂದ ನೀರು ಒರೆಸಿಕೊಂಡು ಹೇಳಿದ
"ಅವಳು ಸಿಗಲಿಲ್ಲವಲ್ಲ ಗೆಳೆಯ" ಮತ್ತೆ ಅಳಲು ಶುರು ಮಾಡಿದ
ಈಗೆ ಒಬ್ಬರಿಗೊಬ್ಬರು ಸಮಾಧಾನ ಮಾಡುತ್ತಾ ನಿನ್ನೆ ಸಂಜೆಯವರೆಗೆ ಇದೇ ರೇಷ್ಮೆ ತೋಟದಲ್ಲಿ ಕುಳಿತಿದ್ದರು, ರೇಷ್ಮೆ ಗಿಡಗಳು ಬಾಗಿ ಹಸಿರಿನಿಂದ ನರ್ತಿಸುತ್ತಿದ್ದವು ,ಗೆಳೆಯರ ಹೃದಯ ಬಿರಿದು ,ನೋವಿನಿಂದ ಮುದುಡಿತ್ತು.
*"*****""*********
" ಈ ಚಿಟ್ಟೆ ಯಾಕೆ ಇಂದು ಬಂದು ನನ್ ಕೈ ಮೇಲೆ ನಾನು ಕೇಳದಿದ್ದರು ಬಂದು ಕುಳಿತಿದೆ,
"ಈ ಹುಡ್ಗೀರು ಒಂಥರ ಚಿಟ್ಟೆ ಇದ್ದಂಗೆ ಒಂದು ಹೂವಿಂದ ಮತ್ತೊಂದು ಹೂವಿಗೆ ಹಾರೋದೆ ಕೆಲ್ಸ ಹುಷಾರು ಸತೀಶ "ಎಂದು ಮಹೇಶ ಒಮ್ಮೆ ನಾನು ಸುಜಾತಾಳ ಜೊತೆಗಿರುವಾಗ ಹೇಳಿದ್ದ ಹೌದು ಈಗ ಅದೇ ಆಗಿದೆ.
ಈ ಚಿಟ್ಟೆ ನಾನು ಕೇಳದಿದ್ದರೂ ನನ್ ಕೈ ಮೇಲೆ ಬಂದು ಕುಂತಿದೆ, ಸುಜಾತಾ ಅಷ್ಟೇ ನಾನು ಕೇಳದಿದ್ದರೂ ಈ ದೇಹ ನಿನದೇ ನಾವು ಮದುವೆಯಾಗುವವರು ಬಾ... ಎಂದು ಪದೇ ಪದೇ ಸನಿಹಕ್ಕೆ ಸರಸಕ್ಕೆ ಹಾತೊರೆದಿದ್ದಳು... ನಾನೇ ಮದುವೆಗೆ ಮುನ್ನ ಅದೆಲ್ಲಾ ಬೇಡ... ಸಂಯಮಿರಲಿ ಎಂದಿದ್ದೆ..... ಅದೇ ನನ್ನ ತಪ್ಪಾ? ಅದೇ ಕಾರಣದಿಂದಾಗಿ ಸುಜಾತಾ ಅವಳ ಕಾಮನೆಗಳನ್ನು ತೀರಿಸಿಕೊಳ್ಳಲು ಬೇರೆಯವರ ಮದುವೆ ಆದಳೆ?
ಇಲ್ಲಾ ಅವರ ಅಪ್ಪನ ಬಲವಂತಕ್ಕೆ ಮದುವೆಯಾದಳೆ ? ಎಂದು ಆ ಚಿಟ್ಟೆಯ ಬಣ್ಣಗಳನ್ನೇ ನೋಡುತ್ತಾ..... ತನ್ನಲ್ಲೇ ಪ್ರಶ್ನಿಸಿಕೊಂಡ...
ಇದ್ದಕ್ಕಿದ್ದಂತೆ ಚಿಟ್ಟೆ ತನ್ನ ಕೈಯಿಂದ ಹಾರಿ ರೇಷ್ಮೆ ಗಿಡದ ಹಸಿರೆಲೆಯ ಮೇಲೆ ಕುಳಿತಿತು, ಹಾರಲಿ ಬಿಡು ಹಿಡಿಯುವುದು ಬೇಡ ಎಂದು ಒಂದು ಮನಸ್ಸು ಹೇಳಿದರೂ ...ನಿಧಾನವಾಗಿ ಎದ್ದು ಚಿಟ್ಟೆ ಹಿಡಿಯಲು ಹೊರಟ... ಚಿಟ್ಟೆ ಮತ್ತೆ ಹಾರಿತು .... ಇವನ ಕೈಗೆ ಸಿಗದೆ ......
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು