02 ಏಪ್ರಿಲ್ 2021

ಬದಲಾಗು .ಹನಿ


 



*ಬದಲಾಗು*


ಇನ್ನೂ ಸುಂದರವಾಗಿ

ಕಾಣಬೇಕೆಂಬ ಹಂಬಲದಿ

ಮುಖವನೇಕೆ ಬದಲಾಯಿಸುವೆ?

ನಿನ್ನನ್ನೇ ನೀ 

ಸರಿಯಾಗಿ ನೋಡು|

ನೀನಿರುವುದೇ ಸುಂದರ 

ಮೊದಲು

ಬದಲಾವಣೆಯ ಕಡೆ

ಮುಖ ಮಾಡು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

01 ಏಪ್ರಿಲ್ 2021

ಸಿಹಿಜೀವಿಯ ವಚನ


  

*ಸಿಹಿಜೀವಿಯ ವಚನ*


ಸತತ ಮಾತನಾಡುವರೊಂದಿಗೆ

ರಹಸ್ಯ ಹೇಳಬೇಡ 

ವಾದಿಸುವವರೊಂದಿಗೆ

ಪ್ರತಿ ವಾದ ಮಾಡಬೇಡ 

ಬುದ್ಧಿವಂತರೊಂದಿಗೆ

ಸ್ಪರ್ಧೆಗಿಳಿಯಬೇಡ 

ಎಲ್ಲಬಿಟ್ಟವರೊಂದಿಗೆ 

ಜಗಳವಾಡಬೇಡೆಂದ ಸಿಹಿಜೀವಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ 

30 ಮಾರ್ಚ್ 2021

*ನಮ್ಮಯ ಕಂದ* ಶಿಶುಗೀತೆ


 



*ನಮ್ಮಯ ಕಂದ*


ನಮ್ಮಯ ಕಂದನ ಲೀಲೆಯ ನೋಡಲು

ಕಣ್ಣಿಗೆ ಹಬ್ಬವು 

ಕಣ್ಣನು ಮಿಟುಕುಸಿ ಆಡುವ ಆಟವ

ನೋಡಲು ಆನಂದವು.


ಗೊಂಬೆಗಳೊಂದಿಗೆ ಆಟವನಾಡುತ 

ಕಿಲ ಕಿಲ ನಗುವುದು

ಆಟದ ವಸ್ತುವು  ಕೈಜಾರಿದರೆ 

ರಚ್ಚೆ ಹಿಡಿಯುವುದು.


ಅಮ್ಮನು ತೋರುವ ಚಂದ್ರನ ನೋಡುತ 

ಕೈತುತ್ತು ತಿನ್ನುವುದು

ಆಗಸದ ಬಿಳಿಯ ಚೆಂಡನಿಡಿಯಲು

ಕೈಯ ಚಾಚುವುದು.


ತೊಟ್ಟಿಲು ಕಂಡರೆ ಕೈಯನು ತೋರುತ

ಆ ಕಡೆ ಓಡುವುದು

ಅಮ್ಮನ ಲಾಲಿಯ ಹಾಡನು ಕೇಳುತ

ನಿದ್ದೆಗೆ ಜಾರುವುದು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

28 ಮಾರ್ಚ್ 2021

ಗಜಲ್


 




*ಗಜಲ್*


ನೋವಿನಲ್ಲೂ ನಗುತಿರವ  ಜನಗಳ ಸಂತೈಸು

ನೊಂದು ಬೇಯುತಿರುವ ಮನಗಳ ಸಂತೈಸು


ಧರಣಿಯು ಕೇವಲ ಮಾನವರದು ಮಾತ್ರವಲ್ಲ

ಭುವಿಯಲಿರುವ ಎಲ್ಲಾ ಪ್ರಾಣಿಗಳ ಸಂತೈಸು


ರೆಕ್ಕೆ ಬಲಿತ ಪಕ್ಷಿಗಳು ಹಾರಾಡುವುದು ಸಹಜ 

ವೃದ್ಧಾಶ್ರಮದಲಿರುವ ಜನ್ಮದಾತರುಗಳ ಸಂತೈಸು


ಝಗಮಗಿಸುತಿವೆ ಉಳ್ಳವರ ಮಹಲುಗಳು

ಸೂರಿರದೆ ಕೊರುಗಿರುವ ಹಾಡಿಗಳ ಸಂತೈಸು 


ದುರ್ಜ‌ನರು ಅಟ್ಟಹಸಾದಿ ಮೆರೆಯುತಿಹರು

ಬೆಂದು ಬಳಲುತಿರುವ "ಸಿಹಿಜೀವಿ"ಗಳ ಸಂತೈಸು 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಹೋಳಿ ಹಾಡೋಣ (ಶಿಶುಗೀತೆ)


 *ಹೋಳಿ ಆಡೋಣ*


ಶಿಶುಗೀತೆ


ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು💐💐


ಬಾರೋ ಗೆಳೆಯ ಬಾರೋ ಗೆಳೆಯ

ಹೋಳಿ ಆಡೋಣ

ವಿಧ ವಿಧ ಬಣ್ಣವ ಎರಚುತ ನಾವು

ಹಬ್ಬವ ಮಾಡೋಣ


ಸರ್ವಕಾಲಕೂ ಉಲ್ಲಾಸವಾಗಿರಲೆಂದು 

ಕೆಂಪು ಬಣ್ಣ ಎರಚೋಣ

ಭುವಿಯಲಿ ಸಮೃದ್ಧಿ ನೆಲೆಸಲಿ ಎನುತಾ

ಹಸಿರನು ಹಚ್ಚೋಣ.


ಸಕಲರ ಜೀವನದಿ ಸಂಭ್ರಮ ಉಳಿಸಲು

ಹಳದಿಯ ಬಳಿಯೋಣ

ನೋವುಂಡವರಿಗೆ ಸಂತೋಷ ಹಂಚಲು

ಗುಲಾಬಿಯ ಹಚ್ಚೋಣ.


ದೀನ ದಲಿತರಿಗೆ ಸಂಪತ್ತು ನೀಡಲು

ನೇರಳೆ ಎರಚೋಣ

ನಕಾರ ಭಾವನೆ ತೊಲಗಿಸಲು

ನೀಲಿಯ ಹಚ್ಚೋಣ.


ಬಣ್ಣಗಳೇಳು ಇರಲಿ ಎಂದಿಗೂ 

ನಮ್ಮಯ ಜೀವನದಿ

ಬಣ್ಣ ಬಣ್ಣದಲಿ ಕಂಗೊಳಿಸುತಾ 

ಹರಿಯುತಿರಲಿ ಜೀವ ನದಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

🔴🟠🟡🟢🔵