15 ಜನವರಿ 2020

ಒಳ್ಳೆಯ ಮಾತಾಡು (ನ್ಯಾನೋ ಕಥೆ)

*ಒಳ್ಳೆಯ ಮಾತಾಡು*

"ಏ  ಕಂಡಿದೀನಿ ಕುತ್ಕೊಳ್ಳೋ ---------- ಮಗನೆ, ನಿಂದು ಜಾಸ್ತಿ ಆಯ್ತು,"  ಎಂದು ಏರುಧ್ವನಿಯಲ್ಲಿ ರಮೇಶ ಕಿರುಚುತ್ತಿದ್ದರೆ "ನಾನು ನಿನ್ನ ಬಾಳ ನೊಡಿದ್ದೀನಿ ನಿಮ್ಮ ವಂಶದ ಜಾತಕ ಬಿಚ್ಚಲಾ? ಈಗ ಮುಚ್ಕೊಂಡಿರೋ ------ ಮಗನೆ" ಎಂಬ ಸುರೇಶನ ಮಾತು ಇಡೀ ಬೀದಿಗೆ ಕೇಳುತ್ತಿತ್ತು.ಸಂಜೆಯಾಗುತ್ತ ಕತ್ತಲು ಆವರಿಸುತ್ತಿತ್ತು.ರಮೇಶನ ಮಗ ಅಪ್ಪ ಬಳಸಿದ ಬೈಗುಳಗಳಿಗೆ ಶಬ್ದಕೋಶದಲ್ಲಿ ಅರ್ಥ ಹುಡುಕುತ್ತಿದ್ದ.ಸುರೇಶನ ಮಗಳಿಗೆ ಬೆಳಿಗ್ಗೆ ಅಪ್ಪ ಹೇಳಿದ " ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂಬ ನುಡಿ ಕಿವಿಯಲ್ಲಿ ಮಾರ್ಧನಿಸುತ್ತಿತ್ತು.

*ಸಿ ಜಿ ವೆಂಕಟೇಶ್ವರ*

ಹಬ್ಬವ ಮಾಡೋಣ( ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು)

*ಮಕರ  ಸಂಕ್ರಾಂತಿ ಹಬ್ಬದ ಶುಭಾಶಯಗಳು*

*ಹಬ್ಬವ ಮಾಡೋಣ*

ಹಬ್ಬವ ಮಾಡೋಣ
ಬನ್ನಿ ಹಬ್ಬವ ಮಾಡೋಣ||

ಸಂಕ್ರಮಣ ದಿನದಿ
ರವಿಯನು ಪೂಜಿಸಿ
ಕಹಿಯನು ತೊಲಗಿಸಿ
ಸಿಹಿಯನು ಪಡೆಯಲು
ಎಳ್ಳು ಬೆಲ್ಲವ ಹಂಚಿ
ಒಳ್ಳೆಯ ಮಾತನಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೧||

ವ್ರತವನು ಮಾಡುತ
ಹದಿನೆಂಟು ಮೆಟ್ಟಿಲ
ಒಡೆಯನ ನೆನೆಯುತ
ಇರುಮುಡಿ ಗಂಟನು ಹೊತ್ತು
ಮಕರ ಜ್ಯೋತಿಯ
ದರುಶನ ಮಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೨||

ಬೇಯಿಸಿ ಅವರೆ
ಕಡಲೆಯ ತಿಂದು
ಸುಗ್ಗಿಯ ಹಾಡನು
ಹಾಡುತ ನಾವು
ರಾಸುಗಳನ್ನು ಪೂಜಿಸಿ
ಕಿಚ್ಚು ಹಾಯಿಸಿ
ಸಂಕ್ರಾಂತಿ ಹಬ್ಬವ ಮಾಡೋಣ||೩||

*ಸಿ ಜಿ ವೆಂಕಟೇಶ್ವರ*

13 ಜನವರಿ 2020

ಹೀಗೂ ಉಂಟು(ನ್ಯಾನೋ ಕಥೆ)

*ಹೀಗೂ ಉಂಟು*

"ಇಂದು ಬೈಕ್ ಬೇಡ ಮಗಳೆ ಕೇವಲ ಮುನ್ನೂರು ಮೀಟರ್ ತಾನೇ ಇರೋದು ನಡೆದುಕೊಂಡು ಹೋದರೆ ಆರೋಗ್ಯಕ್ಕೆ ಒಳ್ಳೆಯದು" ಎಂದು ಮಗಳ ಮನ ಒಲಿಸಿ ನಡೆದುಕೊಂಡು ಹೋಗಿ ಶಾಲಾ ಬಸ್ ಹತ್ತಿಸಿದ ಅಪ್ಪ .ಆ ಕಡೆಯಿಂದ ಸ್ನೇಹಿತ ಕಾರಿನಲ್ಲಿ ಬಂದ "ಬಾರೋ ಮನೆ ಕಡೆ ಡ್ರಾಪ್ ಮಾಡ್ತೀನಿ" ಎಂದಿದ್ದೆ ತಡ ಕಾರನ್ನೇರಿ ಮನೆ ತಲುಪಿದ .

*ಸಿ.ಜಿ.ವೆಂಕಟೇಶ್ವರ*