16 ಡಿಸೆಂಬರ್ 2019

ವಿಳಾಸ ತಿಳಿಸಿ (ಕವನ)

*ವಿಳಾಸ ತಿಳಿಸಿ*

ಇಂದು ಸ್ವತಂತ್ರ ,ಸಮಾನತೆ,ಮಾನವೀಯ ಮೌಲ್ಯಗಳು ಸಂಬಂಧಗಳು  ಭಾಗಶಃ ಸತ್ತಿವೆ
ಭಾವನೆಗಳು ಬತ್ತುತ್ತಿವೆ.
ನೀವನ್ನಬಹುದು ನನ್ನನ್ನು ನಿರಾಶಾವಾದಿ
ಯಾವುದೋ ಪಂಗಡ,ಯಾರ ಪರ
ಇನ್ಯಾರದೋ ವಿರೋಧಿ
ನಾನೂ ಆಶಾವಾದಿ
ಕೆಟ್ಟದರ ವಿರೋಧಿ

ಕೆಲವರು ಸ್ವಾತಂತ್ರ್ಯ ದಾಟಿ
ಮಾಡುತಿರುವರು ಸ್ವೇಚ್ಛಚಾರ
ಇನ್ನೂ ಕೆಲವರಿಗೆ ಸ್ವಾತಂತ್ರ್ಯದ
ಮಾತೆತ್ತಿದರೆ ಅಪಚಾರ
ಕೆಲವರಿಗಂತೂ ಸ್ವಾತಂತ್ರ್ಯ ಮಾರುದೂರ
ಸ್ವತಂತ್ರ ಭಾಗಶಃ ಸತ್ತಿದೆ.

ಮಹಲಿನ ಮೇಲೆ ಮಹಲನ್ನೇರಿ
ಜೀವಿಸುತಿಹರು ಧನಿಕರು
ಜೋಪಡಿಗೆ ಪರದಾಡಿ ತುತ್ತು
ಅನ್ನಕ್ಕೆ ಪರದಾಡುತಿಹರು ಬಡವರು
ಸಮಾನತೆ ಭಾಗಶಃ ಸತ್ತಿದೆ.

ದಾರಿಯಲಿ ಅಪಘಾತವಾದರೆ
ಸಹಾಯಮಾಡುವ ಬದಲು
ಚಿತ್ರ ತೆಗೆಯಲು ಹಾತೊರೆವರು
ಮಹಿಳೆ ಮಕ್ಕಳ ಮೇಲೆ
ವಿಕೃತಿ ಮೆರೆವರು
ಮಾನವೀಯತೆ ಮರೆಯುವರು
ಮಾನವೀಯತೆ ಭಾಗಶಃ ಸತ್ತಿದೆ.

ಹೇಳಲು ಮಾತ್ರ ಇಂದು
ವಿಶ್ವವೇ ಹಳ್ಳಿಯಾಗಿದೆ
ಪಕ್ಕದಲಿರುವ ನಮ್ಮವರೊಂದಿಗೆ
ಮಾತನಾಡಲು ಸಮಯ ಇಲ್ಲದಾಗಿದೆ
ವಸ್ತುಗಳನ್ನು ಪ್ರೀತಿಸಿ ಮನುಷ್ಯರ
ಬಳಸುವವರ ಸಂಖ್ಯೆ ಹೆಚ್ಚಾಗಿದೆ
ಸಂಬಂಧಗಳು ಭಾಗಶಃ ಸತ್ತಿವೆ.

ಜೀವನ ಮೌಲ್ಯಗಳು, ಸಂಸ್ಕಾರ,
ಮಾನವೀಯ ಮೌಲ್ಯಗಳು ಕ್ರಮೇಣ ಅವಸಾನಗೊಳ್ಳುವ ಈ ದಿನಗಳಲ್ಲಿ
ಅವುಗಳ ಬದುಕಿಸುವ *ಸಂಜೀವಿನಿ*
ಬೇಕಿದೆ ದಯವಿಟ್ಟು ವಿಳಾಸ ಗೊತ್ತಿದ್ದರೆ ತಿಳಿಸಿ

*ಸಿ ಜಿ ವೆಂಕಟೇಶ್ವರ*

15 ಡಿಸೆಂಬರ್ 2019

ನಾನೂ ಒಬ್ಬ ಕುಡುಕ (ಕವನ)


          *ನಾನೂ ಒಬ್ಬ ಕುಡುಕ*

ಹೌದು ನಾನೂ ಒಬ್ಬ ಕುಡುಕ
ದಿನವೂ ತಪ್ಪದೇ ಕುಡಿವ ಕುಡುಕ
ನಾಚಿಕೆ ಬಿಟ್ಟು ಹೇಳುತಿರುವೆ
ನಾನೂ ಕುಡುಕ.

ಬಹಳ ಸಲ ಬೆಳಿಗ್ಗೆ ಎದ್ದ ತಕ್ಷಣ
ಕುಡಿಯುವೆ.ಕುಡಿಯದಿದ್ದರೆ ಎನೋ  ಕಳೆದುಕೊಂಡಂತೆ, ಸ್ನೇಹಿತರು
ಸಿಕ್ಕರೆ ಮುಗಿಯಿತು
ಕುಡಿಯಲೇ ಬೇಕು.

ವೈದ್ಯರು ಕೆಲವೊಮ್ಮೆ
ಕಡಿಮೆ ಕುಡಿಯಿರಿ
ಎಂದರೂ ಅವರ ಮಾತು
ಲೆಕ್ಕಿಸದೇ ತುಸು ಹೆಚ್ಚೇ
ಕುಡಿವ ಕುಡುಕ ನಾನು.

ನಾನೂ ಕುಡಿವುದಲ್ಲದೇ
ನನಗೆ ಪರಿಚಿತರನು
ವಿವಿಧ ಸಂಶೋಧನೆಯ ನೆಪ
ಹೇಳಿ ಒಳಿತಾಗುವುದು
ಕುಡಿಯಿರಿ ಎಂದು
ಅವರನ್ನು ಕುಡುಕರನ್ನಾಗಿ
ಮಾಡುವ ಕುಡುಕ ನಾನು.

ಆ ಬ್ರಾಂಡ್ ಈ ಬ್ರಾಂಡ್
ಎಂದು ನೂರಾರು ಬ್ರಾಂಡ್
ಇದ್ದರೂ ಇಂತದೇ ಬ್ರಾಂಡ್
ಎಂದು ನಾನೇನೂ ಬ್ರಾಂಡ್
ಆದವನಲ್ಲ ಯಾವುದಾದರೂ ಸರಿ
ಕುಡಿಯಲೇ ಬೇಕು.

ಹೌದು ನಾನೂ ಕುಡುಕ
ದಿನವೂ *ಟೀ* ಕುಡಿವ
ಮಹಾನ್ ಕುಡುಕ.

(ಇಂದು ಅಂತರರಾಷ್ಟ್ರೀಯ ಟೀ ದಿನ)

*ಸಿ ಜಿ ವೆಂಕಟೇಶ್ವರ*

11 ಡಿಸೆಂಬರ್ 2019

ಮನದ ಪ್ರಶ್ನೆಗಳು (ಕವನ)

*ಮನದ ಪ್ರಶ್ನೆಗಳು*

ನಾ ಸಾಯ ನೀ ಸಾಯ ಮನೆ ಮಂದಿಯಲ್ಲಾ ಸಾಯ ಬೇಸಾಯ
ಸಾಲದಲಿ ಹುಟ್ಟಿ ಸಾಲದಿ ಬೆಳೆದು ಸಾಲದಲಿ  ಮರಣಿಸುವ ಚಿತ್ರಣಗಳು
ಆಳುವವರಿಗೆ ಸಾಲುತ್ತಿಲ್ಲವೆ? ಇನ್ನೆಷ್ಟು ಬಲಿ ಬೇಕು?

ಭರವಸೆಯ ಮಾತುಗಳು ಭರಪೂರ ಆಶ್ವಾಸನೆಗಳಿಗೆ ಬರವಿಲ್ಲ
ಒಳಗಿನ ನೋವ ನುಂಗಿ ಹೊರಗೆ ನಗುವ
ಕಣ್ಣಲಿ ರೈತಕಣ್ಣೀರು ಸುರಿಸುವ ರೈತನ  ಗೋಳು ಕೇಳುವವರು ಯಾರೂ ಇಲ್ಲವೆ?

ಮಳೆರಾಯನೊಡನೆ ಜೂಜಾಡಿ
ಇಳೆಯನೇ ನಂಬಿ ಕಾಯಕ ಮಾಡಿ
ದೇಹ ಕೃಶವಾದರೂ ಕೃಷಿಯ ಬಿಡದೇ
ದುಡಿದು ತಿನ್ನು ಎಂದು ಸಾರುವ
ಅನ್ನದಾತನು ಖುಷಿಯಾಗುವುದು ಯಾವಾಗ?

ರಾಜ್ಯಗಳುದಿಸಿ ರಾಜ್ಯಗಳಳಿದರೂ
ರಾಜರಿಗನ್ನವ ನೀಡುವ ಇವನು
ಕೋಟಿಜನರ ಜೀವದ ಒಡೆಯ
ಮೇಟಿ ವಿದ್ಯೆಬಲ್ಲ ವ್ಯವಸಾಯಗಾರನ ಬವಣೆ  ನೀಗುವುದು ಯಾವಾಗ?

*ಸಿ ಜಿ ವೆಂಕಟೇಶ್ವರ*

20 ನವೆಂಬರ್ 2019

ದಿಟ್ಟ ಹೆಜ್ಜೆ ( ಚಿತ್ರ ಕವನ)


*ದಿಟ್ಟ ಹೆಜ್ಜೆ*

ಇಟ್ಟಿಗೆಯ ಗೂಡಿನಲಿ ಕಾಯಕ ಮಾಡುತಿರುವೆ
ಎದೆಗೂಡಿನಲಿರುವ ನೋವ ಮರೆತಿರುವೆ
ಹಿಟ್ಟು ಸಂಪಾದಿಸಲು ದಿಟ್ಟ ಹೆಜ್ಜೆ ಇಟ್ಟಿರುವೆ
ಇಳಿವಯಸಿನಲೂ ಇಟ್ಟಿಗೆಯ ಹೊರತಿರುವೆ
ಸ್ವತಃ ದುಡಿದು ಹೊಟ್ಟೆ ಹೊರೆಯುತಿರುವೆ .

*ಸಿ ಜಿ ವೆಂಕಟೇಶ್ವರ*

ಗಜಲ್ ೬೦ (ಸಾಲುವುದಿಲ್ಲ)


*ಗಜಲ್*

ಭೂರಮೆಯ ಸೊಬಗು ನೋಡಲು ಕಣ್ಣುಗಳು ಸಾಲವುದಿಲ್ಲ
ಪ್ರಕೃತಿ ಸಿರಿಯ ಬಣ್ಣಿಸಲು ಪದಗಳು ಸಾಲುವುದಿಲ್ಲ.

ಪರಿಸರದಲಿದೆ ಸಂಗೀತ ಹಕ್ಕಿಗಳ ಕಲರವ ದುಂಬಿಗಳ ಝೇಂಕಾರ .
ಸಿಡಿಲು ಮಳೆ ಗುಡುಗಿನಲೂ ಸಾಮಗಾನ ಕೇಳಲು ಕಿವಿಗಳು ಸಾಲುವುದಿಲ್ಲ.


ತರುಲತೆಗಳು ಖಗಮೃಗಗಳು ಕಾನನದ ಸೊಬಗಿನ ಮೂಲ
ನದನದಿ ಝರಿ ತೊರೆಗಳ ಅಂದ ಹೊಗಳಲು ರೂಪಕಗಳು ಸಾಲುವುದಿಲ್ಲ

ಮಲ್ಲೆ ಮಲ್ಲಿಗೆ ಜಾಜಿ ಕೇದಗೆ ಸಂಪಿಗೆಯ ಸುವಾಸನೆ ಬಲು ಚೆಂದ
ವರ್ಷಕಾಲದ ಮಣ್ಣವಾಸನೆಯ ಕಂಪು ಹೊಗಳಲು ಕವನಗಳು ಸಾಲುವುದಿಲ್ಲ.

ಈ ಜಗವು ಆನಂದಮಯವಾಗಲು ಸಿಹಿಜೀವಿಗಳ ಕೊಡುಗೆ ಅಪಾರ
ಪರಿಸರವ  ಬಳಸಿ ಉಳಿಸಿ ಬೆಳೆಸಲು ಸಣ್ಣ ಪ್ರಯತ್ನಗಳು ಸಾಲುವುದಿಲ್ಲ.

*ಸಿ ಜಿ ವೆಂಕಟೇಶ್ವರ*