29 ಜುಲೈ 2019

*ದಿನ*(ಹನಿಗವನ)

    *ದಿನ*

ದಿನವು
ಬರುವ ದಿನವೇ
ನೀ ಬರದೆ ದಿನವಿಲ್ಲ
ಬರುವೆ ಅನುದಿನ.

ದೀನ ದಲಿತ
ಬಡವ ಬಲ್ಲಿದ
ಎಂಬ ಬೇಧ
ಮಾಡುವುದಿಲ್ಲ
ದಿನಕರ.

ನೀ ಬಂದ ದಿನವೇ ಶುಭ
ಅಶುಭ ದಿನವಿಲ್ಲ
ಏಕೆಂದರೆ
ದಿನವೂ ನೀನು
ಬರುವೆಯಲ್ಲ.

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

26 ಜುಲೈ 2019

ಸೈನಿಕ ,( ಕವನ)





*ಸೈನಿಕ*

(ಕಾರ್ಗಿಲ್ ವಿಜಯ ದಿವಸದ 20 ನೇ ವರ್ಷಾಚರಣೆಯ ನೆನಪಿಗೆ ಸೈನಿಕರಿಗೆ ನುಡಿನಮನ)

ಬಿಸಿಲೇ ಇದ್ದರೂ
ಮಳೆಯೇ ಸುರಿದರೂ
ನಿಂತಾ ನೋಡು ಸೈನಿಕ|ಪ|

ಎದುರಾಳಿ ನಿಂತರೂ
ಯುದ್ದ ನಡೆದರೂ
ಎದೆಕೊಟ್ಟು ನಿಲ್ಲುವ ಸೈನಿಕ|

ಕೂಗಿ ಕೂಗಿ ಹೇಳುತೈತೆ
ನಮ್ಮ ಭಾರತ
ಸ್ವಾಭಿಮಾನಿ ನಿನಗೆ ಇದೋ‌
ನಮ್ಮ ಪ್ರಣಾಮ

ಇವನೇ ನೋಡು ಸೈನಿಕ.|೨|

ದೇಶಕ್ಕೆ ಎಲ್ಲಾನೂ  ತ್ಯಾಗ ಮಾಡಿದ
ವೇಶದ ಮಾತೆಂದರೆ ಗೊತ್ತಿಲ್ಲದ
ಭಾಷೆ ಧರ್ಮದ ಹಂಗೆ ಇಲ್ಲ
ಎಲ್ಲರ ರಕ್ಷಣೆ ನಿನ್ನ ಗುರಿ .

ಬೇದ ಭಾವದ ಮಾತೇ ಇಲ್ಲ
ಮಾತೆಯ ಸೇವಕ ನೀನು
ನಿನ್ನ ಶೌರ್ಯವೂ, ನಮ್ಮ ಗರ್ವವೂ
ತನ್ನ ಕಷ್ಟದಿ ಇತರರ ಸುಖವ ಬಯಸೊ
ಆ ಗುಣ
ತಾಯ ರಕ್ಷಣೆಗಾಗಿ ಇವನು ಮಾಡಿದ ಪ್ರಮಾಣ .

ಇವನೇ ನೋಡು‌ಸೈನಿಕ|೧|  ಬಿಸಿಲೇ ಇದ್ದರೂ

ಗುಂಡಿನ ಎದುರು ನಗುವಂತ ಭೂಪ
ಗುಂಡಿಗೆ ಕೊಟ್ಟು ಸೆಣಸಾಡೋ ಧೀರ
ಯಾವುದೆ ತೊಂದರೆ ಬರದುನಿನಗೆ
ನಾವಿರುವೆವು ನಿನ್ನೊಂದಿಗೆ
ಸೋಲು ಗೆಲುವು ನೋಡಿದ ವೀರ.
ನಮನ ನಿನಗೆ ಸಾವಿರ
ಶಿಸ್ತಿಗೆ ಸಿಪಾಯಿ
ಕರುಣೆಗೆ ತಾಯಿ
ದೇಶದಲ್ಲಿ ಎಲ್ಲೆಡೆ ನಿನ್ನ ಹೆಸರೇ ಸವಾಲು
ಬಗ್ಗದೆ ಕುಗ್ಗದೆ ನುಗ್ಗಿ ಹೊಡೆವ  ನಿನ ನಡೆಯೇ ಕಮಾಲು

ಇವನೇ ನೋಡು ಸೈನಿಕ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

24 ಜುಲೈ 2019

ಪ್ರಾಮಾಣಿಕ? (ನ್ಯಾನೋ ಕಥೆ )

*ಪ್ರಾಮಾಣಿಕ?*

ಪ್ರಾಮಾಣಿಕ ಅಂಗಡಿಯಲ್ಲಿ ನಿಗದಿತ ಹಣವನ್ನು ಡಬ್ಬಿಯಲ್ಲಿ ಹಾಕಿ ವಸ್ತುಗಳನ್ನು ಪಡೆಯಲು ಒಳಹೊಕ್ಕ ವ್ಯಕ್ತಿ ವಸ್ತು ತೆಗೆದುಕೊಂಡು ಹಣವನ್ನು ಡಬ್ಬಿಯಲ್ಲಿ ಹಾಕದೇ ಹೊರಬರುವುದನ್ನು ಮನೆಯಲ್ಲೇ ಕುಳಿತು ಸಿ ಸಿ ಟೀವಿಯಲ್ಲಿ ನೋಡಿದ ಮಾಲೀಕನ ಮನದಲ್ಲಿ ಹುಟ್ಟಿದ ಪ್ರಶ್ನೆ ಪ್ರಮಾಣಿಕವಾಗಿರುವುದು  ವ್ಯಕ್ತಿಯೋ? ಯಂತ್ರವಾದ ಸಿ ಸಿ ಟೀವಿಯೋ?

*ಸಿ.ಜಿ  ವೆಂಕಟೇಶ್ವರ*
*ಗೌರಿಬಿದನೂರು*

ಆತ್ಮಶೋಧನೆ (ಬಹುಮಾನಿತ ನ್ಯಾನೋ ಕಥೆ)


*ಆತ್ಮಶೋಧನೆ*
(ಹನಿ ಹನಿ ಇಬ್ಬನಿ ಬಳಗದ ಸ್ಪರ್ಧೆಯಲ್ಲಿ  *ಉತ್ತಮಕಥೆ*  ಎಂಬ ಪುರಸ್ಕಾರ ಪಡೆದ
ನ್ಯಾನೋ ಕಥೆ )
ಕಳ್ಳತನ ಮಾಡಿದ ಸರಕಿನೊಂದಿಗೆ ಅವನು ಸರಸರನೆ ಹೆಜ್ಜೆ ಹಾಕುತ್ತಾ ಭಯದಿಂದ ನಡೆಯುವಾಗ ಇದ್ದಕ್ಕಿದ್ದಂತೆ" ಅಂಕಲ್ " ಎಂಬ ಬಾಲಕಿಯ ಧ್ವನಿ ಕೇಳಿ ಹಿಂತಿರುಗಿದ " ಈ ಪರ್ಸ್  ನಿಮ್ಮ ಪ್ಯಾಂಟ್  ನಿಂದ ಬಿತ್ತು ತೊಗೊಳ್ಳಿ" ಎಂದು ಕೊಟ್ಟು ನಗುತ್ತಾ ಹೊರಟಳು .
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

22 ಜುಲೈ 2019

ಮಾಂತ್ರಿಕ (ಕವನ)

*ಮಾಂತ್ರಿಕ*

ಅದು
ನೋಡಲು ಕಾಣದಿದ್ದರೂ
ತಿಳಿದವರು ,ಕಂಡವರು
ಹೇಳಿದಂತೆ ,ಚಿತ್ರದಲ್ಲಿ
ನೋಡಿದಂತೆ ಮೆದುವಾಗಿರುವುದು.

ಅದರ ಮಾಯೆ ಒಂದೇ ಎರಡೇ
ಅದು ಸರಿಯಿದ್ದರೆ ಸನ್ಮಾನ
ಬಹುಮಾನ , ಪುರಸ್ಕಾರ ಎಲ್ಲವೂ.
ಸ್ವಲ್ಪ ಸರಿಯಿಲ್ಲದಿದ್ದರೆ
ತಿರಸ್ಕಾರ ,ಕೊಂಕು ನುಡಿಗಳು.

ಗಾತ್ರದಲಿ ಒಂದೇ ಇದ್ದರೂ
ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾದ
ಬಳಕೆ ,ತಿಳುವಳಿಕೆ
ಮಾನವನ‌ ಸಕಲ ಅಂಗಗಳ
ನಿಯಂತ್ರಕ ,ಮಾಂತ್ರಿಕ .

ಕೆರಳಿಸುವುದೊಮ್ಮೆ ,
ಅರಳಿಸುವುದೊಮ್ಮೆ
ಬಳಸಿದರೆ ಬೆಳೆಸುವುದು
ಬಳಸದಿರರೆ  ಹಳಸುವುದು
ಏನೆಂದು ಬಣ್ಣಿಸಲಿ ನಿನ್ನ ಲೀಲೆಯ
ಓ ನನ್ನ ಮೆದುಳು
ನೀನು ಆರೋಗ್ಯವಾಗಿದ್ದರೆ
ಹಸನಾಗುವುದು ನಮ್ಮ ಬಾಳು .

*ಸಿ.ಜಿ  ವೆಂಕಟೇಶ್ವರ*
*ಗೌರಿಬಿದನೂರು*

(ಇಂದು ವಿಶ್ವ ಮೆದುಳು ದಿನ)