22 ಮಾರ್ಚ್ 2019

ಗಜಲ್ ೫೩(ಜೀವಜಲ)

*ಗಜ್ಹಲ್*

ಜೀವಿಗಳು ಉಳಿಯಲು ರಕ್ಷಿಸಬೇಕಿದೆ  ಜೀವಜಲ
ನಾವುಗಳು ಅಳಿಯದಿರಲು ಸಂಗ್ರಹಿಸಬೇಕಿದೆ ಜೀವಜಲ

ಬಳಸಿಯಾಗಿದೆ ಮಂದಿನ ಪೀಳಿಗೆಯ ಸಲಿಲ
ಭುವಿಯ ವಾರಸುದಾರರಿಗೆ  ಬಳುವಳಿ ನೀಡಬೇಕಿದೆ ಜೀವಜಲ

ಉಳಿಸಿದ  ಹನಿ ಗಳಿಸಿದ ಕೋಟಿ ಹನಿಗೆ ಸಮ
ಅತಿ ಕಡಿತಗೊಳಿಸಿ  ಮಿತವಾಗಿ ಬಳಸಬೇಕಿದೆ ಜೀವಜಲ

ನೀರಿನ ಮೂಲಗಳಿಗೆ ಕನ್ನಹಾಕಿದ್ದು ಸಾಕು
ಸ್ವಾಭಾವಿಕ ರೀತಿಯಲಿ ಪಡೆಯಬೇಕಿದೆ ಜೀವಜಲ

ಸಿಹಿಜೀವಿಯಂತೆ ಜಲಸಂಸ್ಕೃತಿ ಪಾಲಿಸಬೇಕಿದೆ ನಾವೆಲ್ಲ
ಹನಿ ಹನಿಗೂಡಿಸಿ ಹಳ್ಳವಾಗಿಸಲು ಉಳಿಸಬೇಕಿದೆ ಜೀವಜಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಇಂದು ವಿಶ್ವ ಜಲದಿನ ಬನ್ನಿ ಜಲಸಂರಕ್ಷಣೆಯ ಪಣ ತೊಡೋಣ*

15 ಮಾರ್ಚ್ 2019

ಸಿಹಿಜೀವಿಯ ಹನಿಗಳು (ಕುಂಬಕರ್ಣ,ಸಂತಸ,ವಿರಳ)

              *ಸಿಹಿಜೀವಿಯ ಹನಿಗಳು*

*೧*

*ಕುಂಬಕರ್ಣ*

ಪಾತ್ರಾಭಿನಯ
ನಮ್ಮ ರಾಜಕಾರಣಿಗಳಿಗೆ
ಕರತಲಾಮಲಕ
ಚುನಾವಣೆಯ ಮೊದಲು
ಎಲ್ಲರೂ ನಟಿಸುವರು
ದಾನಶೂರ ಕರ್ಣನಂತೆ
ಗೆದ್ದ ನಂತರ ಆಗುವರು
ಕುಂಬಕರ್ಣನಂತೆ

*೨*

*ಸಂತಸ*

ದಿನನಿತ್ಯದ ಜೀವನದಿ
ಅಪ್ಪ‌ ,ಅಮ್ಮ ಅಣ್ಣ ತಮ್ಮ
ವಿವಿಧ ಪಾತ್ರಗಳ ನಿರ್ವಹಣೆ
ಮಾಡಲೇಬೇಕು
ಏತಕೆ ಎಲ್ಲೆಡೆ ವಿರಸ
ಬಾಳೋಣ ಹಂಚಿ ಸಂತಸ

*೩*

*ವಿರಳ*

ಜಗದಲಿ ಬಹಳ
ಸಂತಸದ ಜನರಿರುವ
ದೇಶ ಭೂತಾನ
ಕಾರಣ ಅತೀ ಸರಳ
ಆ ದೇಶದಲಿ
ಹಣವೊಂದೇ ಸಂತಸ
ಎಂಬುವರು ವಿರಳ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 ಮಾರ್ಚ್ 2019

ಸಿಹಿಜೀವಿಯ ಹನಿಗಳು (ಮೂತ್ರ ಪಿಂಡ ದಿನ ವಿಶೇಷ)

          *ಸಿಹಿಜೀವಿಯ ಹನಿಗಳು*

*೧*

*ಮೂತ್ರ ಪಿಂಡ*

ಅನವಶ್ಯಕ ಗುಳಿಗೆ
ನುಂಗದಿರಿ
ತೃಪ್ತಿಯಾಗುವಂತೆ
ನೀರು ಕುಡಿಯಿರಿ
ಆರೋಗ್ಯವಾಗಿರುವುದು
ಮೂತ್ರಪಿಂಡ
ಇಲ್ಲವಾದರೆ ಬೇಗ
ಇಡುವರು ಪಿಂಡ

(ಇಂದು ವಿಶ್ವ ಮೂತ್ರ ಪಿಂಡ ದಿನ)


*೨*

*ಫಲಿತಾಂಶ*


ಅತೃಪ್ತ ಮನಗಳ
ಕೊಂಕು ನುಡಿಗೆ
ಜಗ್ಗದೇ ಮುಂದಡಿ ಇಡು
ಆತ್ಮತೃಪ್ತಿಯಿಂದ
ಕಾಯಕಮಾಡು
ಜಗವೇ ನಿನ್ನೆಡೆ
ತಿರುಗುವುದು ನೋಡು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಮಾರ್ಚ್ 2019

ಸಿಹಿಜೀವಿಯ ಹನಿಗಳು

           *೧*

*ಮೆರೆಯುವೆ*

ಸಕಾಲಕ್ಕೆ ಸಕಲವ
ನೀಡುವ ಸರ್ವಶಕ್ತನ
ಮರೆಯುವೆ
ಸಲಿಲದ ಮೇಲಿನ
ಗುಳ್ಳೆ ಈ‌ ಜೀವನ
ಗೊತ್ತಿದ್ದರೂ ನೀ
ಮೆರೆಯುವೆ

*೨*

*ಜಾಗೃತವಾಗು*

ನಿನಗಿಂತ ಇತರರು
ಸುಂದರ ,ಬಲಿಷ್ಠ
ಸಿರಿವಂತ ಧೀಮಂತ
ಎಂದು ಕೊರಗಬೇಡ
ನಿನ್ನಲೇ ಸಕಲವಿದೆ
ಜಾಗೃತವಾಗು ನೀ
ಕೀಳರಿಮೆ ಬೇಡ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*



08 ಮಾರ್ಚ್ 2019

ಮಹಿಳಾ ಸಬಲೀಕರಣ?(ಕವನ)

       
*ಮಹಿಳಾ ಸಬಲೀಕರಣ?*


ಇತ್ತೀಚಿನ ದಿನಗಳಲ್ಲಿ
ಮಹಿಳಾ ಸಬಲೀಕರಣವಾಗಿದೆ
ಆಗೊಮ್ಮೆ ಈಗೊಮ್ಮೆ
ಮಹಿಳಾಪರ ಘೋಷಣೆ ಕೇಳುತ್ತಿದೆ.


ಶಾಸನ ಸಭೆಗಳಲಿ
ಮಹಿಳೆಯರಿಗೆ ಮೀಸಲಾತಿ
ದೊರೆತಿದೆ ಜಿಲ್ಲಾ ,ತಾಲೂಕು ಗ್ರಾಮ ಪಂಚಾಯತಿಗಳಲಿ ಮಹಿಳಾ ಪ್ರತಿನಿಧಿಗಳು ಇದ್ದಾರೆ.
ಸಭೆ ಸಮಾರಂಭಗಳಲ್ಲಿ ಮಾತ್ರ
ಅವರ ಗಂಡಂದಿರು ಭಾಗವಹಿಸುತ್ತಾರೆ.
ಹೌದು ಮಹಿಳಾ ಸಬಲೀಕರಣವಾಗಿದೆ.!


ಮನೆಯಲ್ಲದೆ  ಹೊರಗೂ
ಮಹಿಳೆಯರು ದುಡಿಯುತ್ತಿದ್ದಾರೆ.
ಎ ಟಿ‌ ಎಮ್  ಕಾರ್ಡ್‌ ಮಾತ್ರ
ಅವರ  ಗಂಡಂದಿರ ಬಳಿ ಇದೆ.
ಹೌದು ಮಹಿಳಾ ಸಬಲೀಕರಣವಾಗಿದೆ!

ಅವಳೆಂದರೆ ಸರ್ವಶಕ್ತೆ
ಎಲ್ಲಾ ರಂಗದಲ್ಲಿಯೂ
ಮಹಿಳೆಯರು ಮುಂದೆ ಬರುತ್ತಿದ್ದಾರೆ
ಎಲ್ಲದರಲ್ಲೂ ‌ಪ್ರಮುಖ
ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಗಂಡಸರು.
ಹೌದು ಮಹಿಳಾ ಸಬಲೀಕರಣವಾಗಿದೆ!

*ಸಿ‌.ಜಿ.ವೆಂಕಟೇಶ್ವರ*
*ಗೌರಿಬಿದನೂರು*