14 ಮಾರ್ಚ್ 2019

ಸಿಹಿಜೀವಿಯ ಹನಿಗಳು (ಮೂತ್ರ ಪಿಂಡ ದಿನ ವಿಶೇಷ)

          *ಸಿಹಿಜೀವಿಯ ಹನಿಗಳು*

*೧*

*ಮೂತ್ರ ಪಿಂಡ*

ಅನವಶ್ಯಕ ಗುಳಿಗೆ
ನುಂಗದಿರಿ
ತೃಪ್ತಿಯಾಗುವಂತೆ
ನೀರು ಕುಡಿಯಿರಿ
ಆರೋಗ್ಯವಾಗಿರುವುದು
ಮೂತ್ರಪಿಂಡ
ಇಲ್ಲವಾದರೆ ಬೇಗ
ಇಡುವರು ಪಿಂಡ

(ಇಂದು ವಿಶ್ವ ಮೂತ್ರ ಪಿಂಡ ದಿನ)


*೨*

*ಫಲಿತಾಂಶ*


ಅತೃಪ್ತ ಮನಗಳ
ಕೊಂಕು ನುಡಿಗೆ
ಜಗ್ಗದೇ ಮುಂದಡಿ ಇಡು
ಆತ್ಮತೃಪ್ತಿಯಿಂದ
ಕಾಯಕಮಾಡು
ಜಗವೇ ನಿನ್ನೆಡೆ
ತಿರುಗುವುದು ನೋಡು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಮಾರ್ಚ್ 2019

ಸಿಹಿಜೀವಿಯ ಹನಿಗಳು

           *೧*

*ಮೆರೆಯುವೆ*

ಸಕಾಲಕ್ಕೆ ಸಕಲವ
ನೀಡುವ ಸರ್ವಶಕ್ತನ
ಮರೆಯುವೆ
ಸಲಿಲದ ಮೇಲಿನ
ಗುಳ್ಳೆ ಈ‌ ಜೀವನ
ಗೊತ್ತಿದ್ದರೂ ನೀ
ಮೆರೆಯುವೆ

*೨*

*ಜಾಗೃತವಾಗು*

ನಿನಗಿಂತ ಇತರರು
ಸುಂದರ ,ಬಲಿಷ್ಠ
ಸಿರಿವಂತ ಧೀಮಂತ
ಎಂದು ಕೊರಗಬೇಡ
ನಿನ್ನಲೇ ಸಕಲವಿದೆ
ಜಾಗೃತವಾಗು ನೀ
ಕೀಳರಿಮೆ ಬೇಡ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*



08 ಮಾರ್ಚ್ 2019

ಮಹಿಳಾ ಸಬಲೀಕರಣ?(ಕವನ)

       
*ಮಹಿಳಾ ಸಬಲೀಕರಣ?*


ಇತ್ತೀಚಿನ ದಿನಗಳಲ್ಲಿ
ಮಹಿಳಾ ಸಬಲೀಕರಣವಾಗಿದೆ
ಆಗೊಮ್ಮೆ ಈಗೊಮ್ಮೆ
ಮಹಿಳಾಪರ ಘೋಷಣೆ ಕೇಳುತ್ತಿದೆ.


ಶಾಸನ ಸಭೆಗಳಲಿ
ಮಹಿಳೆಯರಿಗೆ ಮೀಸಲಾತಿ
ದೊರೆತಿದೆ ಜಿಲ್ಲಾ ,ತಾಲೂಕು ಗ್ರಾಮ ಪಂಚಾಯತಿಗಳಲಿ ಮಹಿಳಾ ಪ್ರತಿನಿಧಿಗಳು ಇದ್ದಾರೆ.
ಸಭೆ ಸಮಾರಂಭಗಳಲ್ಲಿ ಮಾತ್ರ
ಅವರ ಗಂಡಂದಿರು ಭಾಗವಹಿಸುತ್ತಾರೆ.
ಹೌದು ಮಹಿಳಾ ಸಬಲೀಕರಣವಾಗಿದೆ.!


ಮನೆಯಲ್ಲದೆ  ಹೊರಗೂ
ಮಹಿಳೆಯರು ದುಡಿಯುತ್ತಿದ್ದಾರೆ.
ಎ ಟಿ‌ ಎಮ್  ಕಾರ್ಡ್‌ ಮಾತ್ರ
ಅವರ  ಗಂಡಂದಿರ ಬಳಿ ಇದೆ.
ಹೌದು ಮಹಿಳಾ ಸಬಲೀಕರಣವಾಗಿದೆ!

ಅವಳೆಂದರೆ ಸರ್ವಶಕ್ತೆ
ಎಲ್ಲಾ ರಂಗದಲ್ಲಿಯೂ
ಮಹಿಳೆಯರು ಮುಂದೆ ಬರುತ್ತಿದ್ದಾರೆ
ಎಲ್ಲದರಲ್ಲೂ ‌ಪ್ರಮುಖ
ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಗಂಡಸರು.
ಹೌದು ಮಹಿಳಾ ಸಬಲೀಕರಣವಾಗಿದೆ!

*ಸಿ‌.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕನ್ನಡ ಪ್ರೀತಿ (ನ್ಯಾನೋ ಕಥೆ)

           *ಕನ್ನಡ ಪ್ರೀತಿ*

"ಅಪ್ಪಾ ಈ ‌ಕನ್ನಡ ಪದ್ಯ ನಮ್ಮ ಮಿಸ್ಸು ಶಾಲೆಯಲ್ಲಿ ಹೇಳಿಕೊಟ್ಟಿದ್ದು  ಸರಿಯಾಗಿ ಅರ್ಥ ಆಗಿಲ್ಲ ಸ್ವಲ್ಪ ಹೇಳಿಕೊಡಪ್ಪ " ಎಂದು ಐದನೇ ತರಗತಿ ಓದುವ ಸುಷ್ಮಿತ ಪ್ರೀತಿಯಿಂದ ಕೇಳಿದಾಗ " ನನಗೆ ಅಖಿಲಭಾರತ ಸಾಹಿತ್ಯ ಸಮ್ಮೇಳನಕ್ಕೆ ಹೊರಡಲು ಸಮಯವಾಗಿದೆ ನಿನ್ನಮ್ಮ ಅಥವಾ ಪಕ್ಕದ ಮನೆಯವರ ಹತ್ತಿರ ಹೇಳಿಸಿಕೋ ಚಿನ್ನು ಬಾಯ್ " ಎಂದು ಬ್ಯಾಗ್ ತಗಲಾಕಿಕೊಂಡು  ಹೊರಟೇಬಿಟ್ಟರು ರಾಯರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಮಾರ್ಚ್ 2019

ಶುಕ್ರದೆಸೆ( ಕವನ)

         *ಶುಕ್ರದೆಸೆ?*


ಮೊಟ್ಟೆಯಿಂದ ಹೊರಬಂದು
ಜೀವತಳೆದಾಗ ಏನೋ ಆನಂದ
ಮಿಲಿ ಮೀಟರ್ ಗಾತ್ರದ
ಜೀವಿಗೆ ಸೊಪ್ಪು ಹಾಕಿದ
ದಣಿಯ ನೆನೆದು
ಸಂತಸಸಗೊಂಡು
ಮೇಯುತ ಪೊರೆಬಿಡುತ
ಜೀವನ ಮುಂದುವರೆಯಿತು.

ಜ್ವರದಿಂದ ಜ್ವರಕೆ
ಬೆಳೆಯುತ
ಮಿಲೀಮೀಟರ್ ಸೆಂಟಿಮೀಟರ್
ಆದದ್ದು ತಿಳಿಯಲೇ ಇಲ್ಲ
ನಾಲ್ಕನೇ ಜ್ವರ ದಾಟಿ
ಹಣ್ಣಾಗಿ ಬಂಗಾರದ ಬಣ್ಣ
ಕಂಡು ಮೈಪುಳಕ.

ಶುಕ್ರ ದೆಸೆ ಬಂತೆಂದು
ಬಂಗಾರದೆಳೆಯ ಗೂಡು
ಕಟ್ಟುತ ಸ್ವಂತ ನೆಲೆಗೆ ಸೇರಿದ
ಅನುಭವ ಒಳಗೊಳಗೆ
ನೆಮ್ಮದಿಯ ಭಾವ
ಚಿಟ್ಟೆಯಾಗಿ ಹಾರುವೆನೆಂದು
ನೂರಾರು ಮೈಲು ಹಾರುವೆನೆಂದು
ಸಾವಿರಾರು ಕನಸು ಕಾಣತಿರಲು

ಮಾರನೆಯ ದಿನ
ರೀಲರ್ ರೇಷ್ಮೆಯ ಗೂಡನು
ಬಿಸಿನೀರಿನಲಿ ಕುದಿಸಿ
ನೂಲು ತೆಗೆಯುವಾಗ
ಪ್ರಾಣಪಕ್ಷಿ ಹಾರಿಹೋಗುದೆಂದು
ಪಾಪ ರೇಷ್ಮೆ ಹುಳುವಿಗೆ
ತಿಳಿದಿರಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*