08 ಮಾರ್ಚ್ 2019

ಕನ್ನಡ ಪ್ರೀತಿ (ನ್ಯಾನೋ ಕಥೆ)

           *ಕನ್ನಡ ಪ್ರೀತಿ*

"ಅಪ್ಪಾ ಈ ‌ಕನ್ನಡ ಪದ್ಯ ನಮ್ಮ ಮಿಸ್ಸು ಶಾಲೆಯಲ್ಲಿ ಹೇಳಿಕೊಟ್ಟಿದ್ದು  ಸರಿಯಾಗಿ ಅರ್ಥ ಆಗಿಲ್ಲ ಸ್ವಲ್ಪ ಹೇಳಿಕೊಡಪ್ಪ " ಎಂದು ಐದನೇ ತರಗತಿ ಓದುವ ಸುಷ್ಮಿತ ಪ್ರೀತಿಯಿಂದ ಕೇಳಿದಾಗ " ನನಗೆ ಅಖಿಲಭಾರತ ಸಾಹಿತ್ಯ ಸಮ್ಮೇಳನಕ್ಕೆ ಹೊರಡಲು ಸಮಯವಾಗಿದೆ ನಿನ್ನಮ್ಮ ಅಥವಾ ಪಕ್ಕದ ಮನೆಯವರ ಹತ್ತಿರ ಹೇಳಿಸಿಕೋ ಚಿನ್ನು ಬಾಯ್ " ಎಂದು ಬ್ಯಾಗ್ ತಗಲಾಕಿಕೊಂಡು  ಹೊರಟೇಬಿಟ್ಟರು ರಾಯರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಮಾರ್ಚ್ 2019

ಶುಕ್ರದೆಸೆ( ಕವನ)

         *ಶುಕ್ರದೆಸೆ?*


ಮೊಟ್ಟೆಯಿಂದ ಹೊರಬಂದು
ಜೀವತಳೆದಾಗ ಏನೋ ಆನಂದ
ಮಿಲಿ ಮೀಟರ್ ಗಾತ್ರದ
ಜೀವಿಗೆ ಸೊಪ್ಪು ಹಾಕಿದ
ದಣಿಯ ನೆನೆದು
ಸಂತಸಸಗೊಂಡು
ಮೇಯುತ ಪೊರೆಬಿಡುತ
ಜೀವನ ಮುಂದುವರೆಯಿತು.

ಜ್ವರದಿಂದ ಜ್ವರಕೆ
ಬೆಳೆಯುತ
ಮಿಲೀಮೀಟರ್ ಸೆಂಟಿಮೀಟರ್
ಆದದ್ದು ತಿಳಿಯಲೇ ಇಲ್ಲ
ನಾಲ್ಕನೇ ಜ್ವರ ದಾಟಿ
ಹಣ್ಣಾಗಿ ಬಂಗಾರದ ಬಣ್ಣ
ಕಂಡು ಮೈಪುಳಕ.

ಶುಕ್ರ ದೆಸೆ ಬಂತೆಂದು
ಬಂಗಾರದೆಳೆಯ ಗೂಡು
ಕಟ್ಟುತ ಸ್ವಂತ ನೆಲೆಗೆ ಸೇರಿದ
ಅನುಭವ ಒಳಗೊಳಗೆ
ನೆಮ್ಮದಿಯ ಭಾವ
ಚಿಟ್ಟೆಯಾಗಿ ಹಾರುವೆನೆಂದು
ನೂರಾರು ಮೈಲು ಹಾರುವೆನೆಂದು
ಸಾವಿರಾರು ಕನಸು ಕಾಣತಿರಲು

ಮಾರನೆಯ ದಿನ
ರೀಲರ್ ರೇಷ್ಮೆಯ ಗೂಡನು
ಬಿಸಿನೀರಿನಲಿ ಕುದಿಸಿ
ನೂಲು ತೆಗೆಯುವಾಗ
ಪ್ರಾಣಪಕ್ಷಿ ಹಾರಿಹೋಗುದೆಂದು
ಪಾಪ ರೇಷ್ಮೆ ಹುಳುವಿಗೆ
ತಿಳಿದಿರಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಠೀವಿ ( ಕವನ)

          
   *ಠೀವಿ*

ನೀನಿರದೇ ಏನೋ
ಕಳೆದುಕೊಂಡಂತೆ
ನೀರಿರದ ಮೀನಿನಂತೆ
ನಿನ್ನನೇಕೋ ಬಹಳ
ಮೆಚ್ಚಿಕೊಂಡು ಹಚ್ಚಿ ಕೊಂಡೆ
ನೀ ಬಂದ ಮೇಲೆ ಬಂಧು
ಬಾಂಧವರ ಕಳೆದುಕೊಂಡೆ
ಮನೆಯವರ ಪ್ರೀತಿಸುವುದ
ಮರೆತೆ

ನಮ್ಮನೆಯವರು ಹಾಗೆ
ನೀನಿಲ್ಲದೆ ಅರೆಕ್ಷಣ
ಬದುಕಲಾರರು
ನೀನಾಗಿರುವೆ ಅವರ ಸಂಗಾತಿಯು
ನೀ ಮಾಡಿರುವುದು ಮಾಯೆಯೋ
ಮೋಡಿಯೋ ನಾ ಕಾಣೆ

ಇನ್ನೂ ಮಕ್ಕಳು ನೀನಿರದಿದ್ದರೆ
ಊಟ ತಿಂಡಿ ಮಾಡಲ್ಲ
ನಿನ್ನ ಒಮ್ಮೆ ನೋಡಿದರೆ
ಮತ್ತೆ ನೋಡವ ಕಾತರ
ಅವರಲಿ ಓದಲು ಆಸಕ್ತಿ ಇಲ್ಲ
ಏಕಾಗ್ರತೆ ಇಲ್ಲವೇ ಇಲ್ಲ
ಹಗಲು ರಾತ್ರಿಯ ಪರಿವೆಇಲ್ಲ
ನಿದ್ರೆ ಏರುಪೇರಾಗಿದೆಯಲ್ಲ .

ನಿನ್ನ ನೋಡುತಾ ಕುಂತಲ್ಲೆ
ಕುಂತು ಹೆಚ್ಚಾಗಿದೆ ದೇಹದ
ಸುತ್ತಳತೆಯ
ಇತ್ತೀಚೆಗೆ ತೂಕದ ಯಂತ್ರ
ಹೇಳಿತು ನಿಂದು ಅತಿಯಾಯಿತು.

ನೀನು ಕುಂತಲ್ಲೆ ಬುದ್ದಿವಂತನಂತೆ
ನಟಿಸಿ ನಮ್ಮನ್ನೆಲ್ಲಾ ಮೂರ್ಖರಂತೆ
ಮಾಡುವ ಟೀವಿಯೇ ಎಷ್ಟು
ಹೇಳಿದರೂ ಮುಗಿಯದು
ನಿನ್ನ ಠೀವಿ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*







ಅಭಿನಂದನೆಎ(ಅಭಿನಂದನ್ ಗೆ)

            *ಅಭಿನಂದನೆ*

ವಂದನೆ
ನಿನಗೆ ಅಭಿನಂದನೆ
ಭಾರತಾಂಬೆಯ ಕಂದನೆ
ಶತೃಗಳ ನಡುಗಿಸಿದವನೆ
ಪಾಪಿಗಳ ವಿರುದ್ದ ಗುಡುಗಿದವನೆ
ಸ್ಬಾಗತವು ನಿನಗೆ ತಾಯ್ನೆಲಕೆ
ನಮ್ಮಯ ಹೃದಯ ಮಂದಿರಕೆ
ನೀನೆಂದಿಗೂ ಮಹಾನ್
ನಿನ್ನ ಮರೆಯಲ್ಲ *ಅಭಿನಂದನ್*

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಅರಿಯಬೇಕಿದೆ (ಕವನ)

*ಅರಿಯಬೇಕಿದೆ*

ಪ್ರಾಮಾಣಿಕತೆ ಶಾಂತಿ ಸಹಕಾರ ದಯೆ
ಎಲ್ಲಿವೆ  ದುರ್ಬೀನು ಹಾಕಿ ಹುಡುಕಬೇಕಿದೆ
ಕಳೆದ ದಿನಗಳ ಗತ ಕಾಲ ಮರಳಬೇಕಿದೆ
ಮೌಲ್ಯಗಳ ಎಲ್ಲರೂ ಪಾಲಿಸಬೇಕಿದೆ.

ಬರೀ ಗಂಡು ಹೆಣ್ಣಿನ ಆಕರ್ಷಣೆ
ಸಂಕುಚಿತ ಅರ್ಥದ ಕಾಮವೇ
ಪ್ರೀತಿಯಲ್ಲ ಪ್ರತಿಫಲಾಪೇಕ್ಷೆ ಇಲ್ಲದೇ
ಸಕಲರ ಪ್ರೀತಿಸುವ ಮೌಲ್ಯ ಇಂದು ಎಲ್ಲರೂ ಕಲಿಯಬೇಕಿದೆ

ಪ್ರಾಣಿ ಪಕ್ಷಿಗಳ ಹಿಂಸೆ ಎಲ್ಲೆಡೆ
ಪ್ರಾಣಿಗಳು ನಿಕೃಷ್ಟ ಎಂಬ ನಡೆ
ಭುವಿ ಕೇವಲ ಮಾನವನದಲ್ಲ
ದುರಾಸೆಯಿಂದ ಮೆರೆಯುತಿಹನಲ್ಲ
ದಯವಿಲ್ಲ ಸಕಲ ಜೀವಿಗಳಲಿ
ಕರುಣೆಯ ಮೌಲ್ಯವ ಪಾಲಿಸಬೇಕಿದೆ.

ಅಸಹನೆಯಿಂದ ಕುದಿಯುತಿದೆ ಜಗ
ಅನಾಹುತಗಳು ಸಾಮಾನ್ಯ ಆಗಾಗ
ಸಹನೆಯ ಮೂರ್ತಿ ನಮ್ಮಮ್ಮನಿಂದ ಕಲಿಯಬೇಕಿದೆ
ಭೂತಾಯಿಯ ಸಹನಾ ಮೌಲ್ಯ ಅರಿಯಬೇಕಿದೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*