06 ನವೆಂಬರ್ 2018

ದಿನವೂ ದೀಪಾವಳಿ (ಹನಿಗವನ)

            *ದಿನವೂ ದೀಪಾವಳಿ*

ಬೆಳಕ ನೀಡಿ ಬೆಳಕ ಪಡೆವ
ಸೂರ್ಯ ತಾರೆ ಚಂದ್ರರಿಂದ
ಮಾಲಿನರಹಿತ  ಪರಿಸರ ಸ್ನೇಹಿ
ದೀಪಗಳ  ಹಬ್ಬ ನಿರಂತರ .

ಬಾನಿನ ದಿನಕರ ಚುಕ್ಕಿ ಗಳಿಂದ
ಸ್ಪೂರ್ತಿ ಪಡೆದು ನಾವೂ ಸಹ
ಅಜ್ಞಾನ ಓಡಿಸಿ ತಮವ ನೀಗಿ
ದೀಪದಿಂದ ದೀಪಗಳ ಹಚ್ಚಿ
ದಿನವೂ ದೀಪಾವಳಿ ಆಚರಿಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ನವೆಂಬರ್ 2018

ಕನ್ನಡ ಓರಾಟಗಾರ (ನ್ಯಾನೋ ಕಥೆ)

                *ನ್ಯಾನೋ ಕಥೆ*

*ಕನ್ನಡ ಓರಾಟಗಾರ*

"ನಮ್ಮ ನಾಡು ನಮ್ಮ ನುಡಿಯ ಬಗ್ಗೆ ನಾವು ಅಭಿಮಾನ ಪಡದಿದ್ದರೆ ಮತ್ಯಾರು ಬರುವರು? ನಮ್ಮ ಭಾಷೆ ಉಳಿಸಲು ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಕೊಂಡು ಓದಬೇಕು.ಕನ್ನಡ ಶಾಲೆಗಳ ಬಲಪಡಿಸಬೇಕು" ಎಂದು ಸಮಾರಂಭದಲ್ಲಿ ಭಾಷಣ ಮಾಡಿದ ರಮೇಶನು  ಸನ್ಮಾನ ಸ್ವೀಕರಿಸಿ ಮನೆಗೆ ಬಂದ
"ಅಪ್ಪ ಇಲ್ಲಿದ್ದ ಟೈಮ್ಸ್ ಆಪ್ ಇಂಡಿಯಾ ಪೇಪರ್ ನೋಡಿದೆಯಾ?  " ಎಂದು ಮಗಳು ಕೇಳುವ  ಹೊತ್ತಿಗೆ  ಮಗ "ನಾಳೆ ನಮ್ಮ ಕಾನ್ವೆಂಟ್ ನಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ ನೀನು ಮಮ್ಮಿ ಬರಬೇಕಂತೆ " ಅಂದ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಂಧದ ಬೀಡು( ಕವನ)

                    *ಗಂಧದ ಬೀಡು*

ಕನ್ನಡ ನಾಡು ನಮ್ಮ ಚಿನ್ನದ ಬೀಡು
ಕನ್ನಡ ನಾಡು ನಮ್ಮ ಗಂಧದ ನಾಡು |ಪ|

ಹಕ್ಕ ಬುಕ್ಕರಾಳಿದ ನಾಡಿದು
ಒಡೆಯರು ಗೌಡರು ಕಟ್ಟಿದ ಬೀಡಿದು
ಕದಂಬ ಹೋಯ್ಸಳರಾಳಿದ ನಾಡಿದು
ಚೆನ್ನಮ್ಮ ಓಬವ್ವರ ಕಂಡ ನೆಲವಿದು     
                                |ಕನ್ನಡ  ನಾಡು |                                                                                                         

ಬೇಲೂರು ಹಳೇಬೀಡು ಕೆತ್ತನೆ ಸೊಬಗು
ಬಾದಾಮಿ ಐಹೊಳೆ ಹಂಪಿಯ ವೈಭವ
ಶಿಲ್ಪಕಲೆಯ ತವರೂರು ನಮ್ಮದು
ಲಲಿತ ಕಲೆಗಳ ಸುಂದರ ತಾಣವು
                         |ಕನ್ನಡ ನಾಡು|

ಪಂಪ ರನ್ನ ಜನ್ನರ ನೆಲೆಯಿದು
ಅಷ್ಟ ಜ್ಞಾನ ಪೀಠಿಗಳ ನೆಲೆಯಿದು
ನವ್ಯ ನವೋದಯ ಕವಿಗಳ ಧರೆಯಿದು
ಜೇನಿನ ಸವಿ ನುಡಿ ನಮ್ಮಯ ನುಡಿಯು
                       |ಕನ್ನಡ ನಾಡು|

ಕನ್ನಡವನ್ನು ಎಲ್ಲರು ಕಲಿಯುವ
ನಮ್ಮಯ ನುಡಿಯ ಎಲ್ಲರಿಗೆ ಕಲಿಸುವ
ಕಲಿತು ಕಲಿಸುತಾ ಕನ್ನಡ ಬೆಳೆಸುವ
ನಮ್ಮ ನಾಡಿನ ಕೀರ್ತಿಯ ಬೆಳಗುವ
                        |ಕನ್ನಡ ನಾಡು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



31 ಅಕ್ಟೋಬರ್ 2018

ಪರಿಹಾರ (ನ್ಯಾನೋ ಕಥೆ)

             
*ನ್ಯಾನೋ ಕಥೆ*
*ಪರಿಹಾರ*
"ನಾನು ಆ ಬೀದಿಯಲಿ ಹುಡುಕಿದೆ ಸಿಗಲಿಲ್ಲ ನಿನಗೇನಾದರೂ ಸಿಕ್ಕನೆ? " ಗಂಡ ಕೇಳಿದಾಗ  ಹೆಂಡತಿಯ  ದುಃಖದ ಕಟ್ಟೆಯೊಡೆದು ಅಳಲು ಆರಂಬಿಸಿದಳು .
ನಾನು ಶಾಲೆಗೆ ಹೋಗುವುದಿಲ್ಲ ಎಂದು ವಾರದಿಂದ ಹಠ ಹಿಡಿದ ಎರಡನೇ ತರಗತಿ ಓದುವ ವಿವೇಕ್  ಬಲವಂತಕ್ಕೆ ಶಾಲೆಗೆ ಹೋದವನು ಮನೆಗೆ ಬಂದಿರಲಿಲ್ಲ .ಬೈಕ್ನಲ್ಲಿ  ಬಂದ ಪಕ್ಕದ ಮನೆಯ ರಮೇಶ್  ನಿಮ್ಮ ಮಗ ಬಸ್ ಸ್ಟಾಂಡ್ನಲ್ಲಿ ನಿಂತಿದ್ದ ಎಂದು ಕರೆದುಕೊಂಡು ಬಂದಾಗ ದಂಪತಿಗಳಿಬ್ಬರು ಮಗನನ್ನು ತಬ್ಬಿ ಗದ್ಗದಿತರಾದರು .ಜೋಯಿಸರ ಸಲಹೆಯ ಮೇರೆಗೆ ತಾಯಿ ಏನೋ ಶಾಂತಿ ಮಾಡಿದರು. ತಂದೆ ಹಿರಿಯರ ಕರೆಸಿ ಮಗನಿಗೆ ಆಪ್ತಸಮಾಲೋಚನೆ ಮಾಡಿಸಿದರು .ಮೂರು ದಿನದ ನಂತರ ಮಗ "ಅಮ್ಮ ಬೇಗ ರೆಡಿ ಮಾಡು ನಾನು ಶಾಲೆಗೆ ಹೋಗಬೇಕು" ಅಂದ .!
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಅಕ್ಟೋಬರ್ 2018

ಪರಿವರ್ತನೆ (ನ್ಯಾನೋ ಕಥೆ)

                  *ನ್ಯಾನೋ ಕಥೆ*

*ಪರಿವರ್ತನೆ*

ಅಲ್ಸರ್ ಮತ್ತು ಗ್ಯಾಸ್ಟ್ರಸೈಟಸ್  ನಿಂದ ಎರಡು ತಿಂಗಳು ಚಿಕಿತ್ಸೆ ಪಡೆದ ಶಕುಂತಲಮ್ಮ ಸಂಪೂರ್ಣವಾಗಿ ಗುಣಮುಖವಾಗಿ  ಆಸ್ಪತ್ರೆಯಿಂದ ಮನೆಗೆಬಂದರು .ಬೆಳಗ್ಗೆ ಹತ್ತು ಗಂಟೆಗೆ ಮಗಳು " ಅಮ್ಮಾ ಪೂಜೆಗೆ ಎಲ್ಲಾ ಸಿದ್ದ ಮಾಡಿರುವೆ" ಎಂದಳು " ಟಿಫನ್ ಕೊಡು ಮೊದಲು ಹೊಟ್ಟೆ ಪೂಜೆ ಆಮೇಲೆ ದೇವರ ಪೂಜೆ" ಎಂಬ ಅಮ್ಮನ ಮಾತು ಕೇಳಿ ಮಗಳು   ಬಿಟ್ಟ ಕಣ್ಣು ಬಿಟ್ಟು ಬಾಯಿತೆರೆದುಕೊಂಡು ಅಮ್ಮನನ್ನೇ ನೋಡುತ್ತಾ ನಿಂತಳು .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*