29 ಅಕ್ಟೋಬರ್ 2018

*ನ್ಯಾನೋ ಕಥೆ* *ಚಳಿಯಲ್ಲೂ ಬೆವರು*

             
*ನ್ಯಾನೋ ಕಥೆ*
*ಚಳಿಯಲ್ಲೂ ಬೆವರು*
"ಈ ಸರ್ಕಾರದವರು ಇಪ್ಪತ್ನಾಲ್ಕು ಗಂಟೆ ಕರೆಂಟ್ ಕೊಡ್ತೀವಿ ಅಂತಾರೆ ಹಗಲೊತ್ತು ಸಿಂಗಲ್ ಫೇಸ್ ಕೊಟ್ಟು ರಾತ್ರಿ ತ್ರೀಪೇಸ್ ಕೊಡ್ತಾರೆ ಈ ಚಳೀಲಿ ನಾನು ತೋಟಕ್ಕೆ ನೀರು ಕಟ್ಟಬೇಕು ಎಲ್ಲಾ ನನ್ನ ಕರ್ಮ" ಎಂದು ಗೊಣಗುತ್ತ ರಾಮಪ್ಪ ನೀರು ಕಟ್ಟುವಾಗ " ಹೌದು ಕಣಪ್ಪ ನಾನು ಈಗ ನನ್ನ ತೋಟದ ಮೋಟರ್ ಸ್ಟಾರ್ಟ್ ಮಾಡಿ ಬಂದೆ ನಮ್ಮ ಸರ್ಕಾರದಾಗೆ ಇಂಗ್ ಇರ್ಲಿಲ್ಲ ಬಿಡು" ಎಂದು ಬೀಮಪ್ಪ  ಹೇಳಿದಾಗ ನಿಮ್ಮದ್ಯಾವ ಸರ್ಕಾರ?  ಓ  ನಿಮ್ಮ ಪಾರ್ಟಿ ಬೇರೆ ಎಂದು ರಾಮಪ್ಪ ಮಾತು ಮುಂದುವರೆಸುತ್ತಾ ನೀರು ಕಟ್ಟುವ ಕಾರ್ಯ ಮುಂದುವರೆಸಿದ ಮತ್ತೆ ೧೨ .೩೦ ಕ್ಕೆ  ಕರೆಂಟ್ ಹೋಯ್ತು ಸರಿ ನಾನು ಇಲ್ಲೆ ಮಲಗಿ ಬೆಳಗ್ಗೆ ಊರಿಗೆ ಹೋಗುವೆ ಎಂದು ರಾಮಪ್ಪ ಮಲಗಲು ಅಣಿಯಾದ ಭೀಮಪ್ಪ ನನಗೆ
ಹೊಲದಲ್ಲಿ ಮಲಗಲು ತುಂಬಾ ಇಷ್ಟ ಎಂದು ಅಲ್ಲೇ ಮಲಗಿದ.
ರಾಮಪ್ಪ ತೋಟದಿಂದ  ಮುಂಜಾನೆ ಬೇಗ ಎದ್ದು ಊರಿನ ಸಮೀಪ ನಡೆದುಬರುತ್ತಿರುವಾಗ ಭೀಮಪ್ಪ ಕುರಿಮರಿಯೊಂದಿಗೆ ಎದುರಾದಾಗ "ಏನು ಇಷ್ಟು ಬೇಗ ತೋಟದಿಂದ ಬಂದು ಮತ್ತೆ ತೋಟಕ್ಕೆ ಹಿಂತಿರುಗುತ್ತಿರುವೆಯಾ?! ಎಂದಾಗ "ರಾತ್ತಿ ನನಗೆ ತಲೆನೋವಿದ್ದದ್ದರಿಂದ ತೋಟಕ್ಕೆ ಬಂದಿರಲಿಲ್ಲ" ಎಂದಾಗ ರಾಮಪ್ಪ ಬೆಳಗಿನ ಚಳಿ ಯಲ್ಲೂ ಬೆವರಲಾರಂಬಿಸಿದನು .!
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

27 ಅಕ್ಟೋಬರ್ 2018

ಬೆಳಕಿನೆಡೆಗೆ ಸಾಗೋಣ (ಕವನ)

                       ಬೆಳಕಿನೆಡೆಗೆ ಸಾಗೋಣ

ಬುದ್ದ ಬಸವಾದಿ ಮಹಾಪುರಷರು
ಕಾಲ ಕಾಲಕ್ಕೆ ಪಂಜನಿಡಿದು
ಬೆಳಕ ನೀಡಲು ಧರೆಯಲಿ
ಅವತರಿಸುತ್ತಲೇ ಇದ್ದಾರೆ
ಆದರೂ ಕತ್ತಲಲಿರುವವರು
ಹೆಚ್ಚಾಗುತ್ತಲೇ ಇದ್ದಾರೆ .

ಕಾರಣ ಹುಡಕಹೊರಟರೆ
ಅವರಿಡಿದಿರುವ ಪಂಜುಗಳಿಂದ
ನಾವು  ಬೆಳಗಿಸಿಕೊಳ್ಳದಿರುವುದು
ನಮ್ಮ ಅಲ್ಪ ಬೆಳಕಿನ ಪಂಜಿಗೆ
ಉತ್ತಮ ತೈಲ‌ಹಾಕದಿರುವುದು
ಅಲ್ಪ ಸ್ವಲ್ಪ ಉರಿವ ಪಂಜುಗಳ
ಆರಿಸಲು ಯತ್ನಮಾಡುತಿರುವುದು
ಇನ್ನೆಲ್ಲಿಯ ಬೆಳಕು ಬರೀ‌ಕೊಳಕು

ಕತ್ತಲಲಿದ್ದುದು ಸಾಕು ಬನ್ನಿ
ಬರಲಿರುವ ಬುದ್ದ ಬಸವರ
ಕಾಯುವುದು ಬೇಡ
ಪಂಜಿನಿಂದ ಪಂಜುಗಳ
ಪ್ರಜ್ವಲಿಸೋಣ ಜಗವನೆಲ್ಲ
ಜಗಮಗಿಸೋಣ
ತಮವ ಹೊಡೆದೋಡಿಸೋಣ
ಎಲ್ಲರೂ ಬುದ್ದ ಬಸವರಾಗೋಣ
ಕತ್ತಲಿನಿಂದ ಬೆಳಕಿನೆಡೆಗೆ  ಸಾಗೋಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

26 ಅಕ್ಟೋಬರ್ 2018

ಗಜ಼ಲ್ 50(ಅಮ್ಮನ ಅಳಲು) ಈ ಗಜ಼ಲ್ ನನ್ನ ಅಮ್ಮನಿಗೆ ಮತ್ತು ನನ್ನ ಗಜ಼ಲ್ ಗುರುಗಳಾದ ಡಾ. ಗೋವಿಂದ ಹೆಗಡೆ ರವರಿಗೆ ಸಮರ್ಪಣೆ ಮಾಡುವೆ .ಮತ್ತೊಂದು ಸಂತಸದ ಸುದ್ದಿ ನನ್ನ ಬ್ಲಾಗ್ ಒದುಗರ ಸಂಖ್ಯೆ 27000 ದಾಟಿದೆ ನನ್ನ ಎಲ್ಲಾ ಬ್ಲಾಗ್ ಓದುಗರಿಗೆ ಅನಂತ ಧನ್ಯವಾದಗಳು🙏🙏


                    *ಗಜ಼ಲ್50*

ಮುತ್ತು  ಕೊಟ್ಟವಳು ಬಂದಾಗ ತುತ್ತುಕೊಟ್ಟವಳ ಮರೆಯುತಿಹರು
ದುಷ್ಟ ಬುದ್ದಿಯಿಂದ   ಬಟ್ಟೆಗಳನ್ನು ಹಾಕಿಯೂ  ಬೆತ್ತಲಾಗಿಹರು

ಹೊಟ್ಟೆ ಬಟ್ಟೆ ಕಟ್ಟಿ ತುತ್ತು ತುತ್ತಿಗೂ ತತ್ವಾರದಿ ಅನ್ನ ನೀಡಿದೆ
ರೆಕ್ಕೆ ಬಲಿತ ಮೇಲೆ ಹಾರಿ ನನ್ನ ಹೊರ ತಳ್ಳಲು ಸಿದ್ದರಾಗಿಹರು

ಮಕ್ಕಳಿಗೆ ದುಡಿಯಲು ಗಾಣದೆತ್ತಾದೆ ರಕ್ಷಿಸಲು ಕರಡಿಯಾದೆ
ನಾನು ವಯಸ್ಸಾದ  ಮೃಗವೆಂದು ತಿಳಿದು ನನ್ನ  ಮಾರಾಟ ಮಾಡುತಿಹರು

ಮಾತೃದೇವೋಭವ, ಮೊದಲ ಶಿಕ್ಷಕಿ, ಕ್ಷಮಯಾಧರಿತ್ರಿ ಎಂದರು
ಪೀಡೆ ,ಕಾಲಕಸ ,ದಂಡ ಗುಣವಿಶೇಷಣಗಳ ನೀಡುತಿಹರು

ಯಯಾತಿಗಳು ಯಾರೂ ಇಲ್ಲ ಕೋಲಿಡಿಯುವುದು ತಪ್ಪಲ್ಲ
ದೋಸೆ ತಿರುವಿ ಹಾಕಲು ಹೆಚ್ಚು ಕಾಲ ಬೇಕೆಂದು ತಿಳಿದಿಹರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಯಕವೇ ಕೈಲಾಸ (ಕವನ)ಕವಿ ಸಾಹಿತಿಗಳ ಜೀವಾಳ ಗುಂಪಿನ ರಾಜ್ಯ ಮಟ್ಟದ ಚಿತ್ರ ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕವನ


                         *ಕಾಯಕವೇ ಕೈಲಾಸ*

ಇಳಿ ವಯಸ್ಸಿನಲ್ಲೂ
ಇಳೆಗೆ ನಾ ಭಾರವಲ್ಲ
ಭಾರ ಹೊರುವ ಶಕ್ತಿ
ದೇವರು ನೀಡಿರುವನಲ್ಲ

ಜೀವನವೆಂಬ ಸೈಕಲ್
ಬಹಳ ತುಳಿದಿರುವೆ
ಕಾಯಕವೆ ಕೈಲಾಸ
ತತ್ಬ ಪಾಲಿಸುತಿರುವೆ

ಬಸ್ಸಿಗಿಂತ ಹಿರಿದು ಸೈಕಲ್
ಯಂತ್ರದ ಹಂಗು ಬೇಕಿಲ್ಲ
ಸ್ವಾಭಿಮಾನವ ಮರೆಯಲ್ಲ
ಮೈಯಲ್ಲಿ ಶಕ್ತಿ ಇದೆಯಲ್ಲ

ಚಳಿ ಮಳೆಯ ಹಂಗಿಲ್ಲ
ಕೆಲಸ ಮಾಡಿ ಮುಗಿಸುವೆ
ನನ್ನ ಮತ್ತು ಅವಲಂಬಿತರ
ತುತ್ತಿನ ಚೀಲ ತುಂಬಿಸುವೆ

*ಸಿ .ಜಿ ವೆಂಕಟೇಶ್ವರ*
*ಗೌರಿಬಿದನೂರು*

25 ಅಕ್ಟೋಬರ್ 2018

ಉದಯಕುಮಾರ್ (ಕವನ)

                   *ಉದಯ ಕುಮಾರ*

ಹುಟ್ಟುವಾಗ ತಣ್ಣನೆಯ ಗುಣ
ಮೇಲೇರಿದಂತೆ ಬೆಳಗುವ
ಹೊತ್ತಿಳಿದಂತೆ ತಣ್ಣಗಾಗುವ
ಇದು ದೈನಂದಿನ ಕಾಯಕ
ನಮ್ಮ ಬಾನಿನ ನೇಸರನಿಗೆ
ಭುವಿಯಲೊಂದು ರವಿ
ಸೂರ್ಯನಂತೆ ಪ್ರತಿದಿನ
ಕಾಯಕನಿರತರಾಗಿರುವ  ನನ್ನ
ಗೆಳೆಯ ಉದಯಕುಮಾರ

ಧಣಿವರಿಯದ ಕಾಯಕ
ತೋಟದಲಿ ಮಾದರಿ ಕೃಷಿಕ
ವಿಕಲಚೇನರಿಗೆ ಪ್ರೇರಕ
ವ್ಯಾಪಾರದಲಿ ಶ್ರೇಷ್ಠ ವಣಿಕ
ವಯೋವೃದ್ದ  ಹೆತ್ತವರ ರಕ್ಷಕ
ಗೆಳೆಯರ ಪಾಲಿಗೆ  ಆಪ್ತರಕ್ಷಕ
ಮಕ್ಕಳ ಉತ್ತಮ ಪಾಲಕ
ದಾನ ಧರ್ಮದ ಪ್ರವರ್ತಕ
ಸದಾ ತರುಣ ನಮ್ಮ ಕುಮಾರ
ಇವರೇ ನಮ್ಮ ಉದಯಕುಮಾರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*