19 ಅಕ್ಟೋಬರ್ 2018

ಕಲಿಕೆ (ಕವನ)

                *ಕಲಿಕೆ*

ಎಸ್ ಎಸ್ ಎಲ್ ಸಿ‌ ಯಲ್ಲಿ
ತನ್ನ ಮಗ ಪಾಸಾಗಿದ್ದ
ಪಕ್ಕದ ಮನೆಯ ಹುಡುಗಿ
ತೊಂಬತ್ತು ತಗೆದುಕೊಂಡಾಗ
ಇವನಪ್ಪ ಮತ್ಸರದಿ ಬೈದು
ನೀನ್ಯಾವಾಗ ತೊಂಬತ್ತು
ತೆಗೆದುಕೊಳ್ಳುವುದು ಎಂದಿದ್ದ

ಪಿ ಯು ಸಿ ಯಲ್ಲಿಯೂ
ಮಗ ಉತ್ತಮ ಅಂಕಗಳೊಂದಿಗೆ
ತೇರ್ಗಡೆಯಾದ ಅಪ್ಪನದು
ಅದೇ ರಾಗ ನೀನ್ಯಾವಾಗ
ತೊಂಬತ್ತು ತೆಗೆದುಕೊಳ್ಳುವುದು

ದೊಡ್ಡವನಾದ ಮೇಲೆ ಮಗ
ತೂರಾಡುತ್ತಾ ಮನೆಗೆ ಬಂದ
ದಿಗಿಲುಗೊಂಡ ಅಪ್ಪ
ಏನು ಬಂತೋ ರೋಗ
ಎಂದು  ಬೈದರು ಮಗ
ಉತ್ತರಿಸಿದ ಈಗೀಗ ತೊಂಬತ್ತು
ತೆಗೆದುಕೊಳ್ಳಲು ಕಲಿತಿದ್ದೇನೆ


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

18 ಅಕ್ಟೋಬರ್ 2018

ಆಯುಧಪೂಜಾ ಆನಂದ(ಕವನ)

                   *ಆಯುಧ ಪೂಜಾ ಆನಂದ*

ಬಾಲ್ಯದ ಆ ದಿನದಿ
ಹಳೆ ಸೈಕಲ್ ಟೈರ್ಗೆ
ಹೂ ಹಾಕಿ ಹರಿಷಣ
ಕುಂಕುಮು ಹಚ್ಚಿ
ಅದರ ಸೌಂದರ್ಯ ನಾ ಮೆಚ್ಚಿ
ಕೈಯಲೊಂದು ಕೋಲಿಡಿದು
ಟೈರ್ ತಳ್ಳತ್ತಾ ಗೆಳೆಯರೊಂದಿಗೆ
ಓಡುತ್ತಿದ್ದರೆ ಅದರ ಆನಂದ
ವರ್ಣಿಸಲಸದಳ

ನಮ್ಮನೆಗೂ ಸೈಕಲ್ ಬಂತು
ಆಯುಧ ಪೂಜೆಗೆ ಅಮ್ಮನ ಕಾಡಿ
ಬೇಡಿ ಹಣ ಪಡೆದು ಬಲೂನು
ಹೂ ಗಳಿಂದ ಸಿಂಗರಿಸಿ
ಕ್ಯಾರಿಯರ್ ಹಿಂದೆ ಡಬ್ಬ
ಅದಕ್ಕೊಂದು ತೂತು ಮಾಡಿ
ಹಬ್ ಗೆ ಕಟ್ಟಿ ಬರ್ ಎಂದು
ಸದ್ದು ಮಾಡಿ ಮುನ್ನೆಡೆದಾಗ
ಏನೋ  ಆನಂದ ಮನದಲ್ಲಿ

ಇಂದು ಬೈಕಿದೆ ಕಾರಿದೆ
ಹೂ ಹಣ್ಣಿಗೆ ಹಣವಿದೆ
ಅಲಂಕಾರ ಜೋರಿದೆ
ಆದರೂ ಬಾಲ್ಯದ ಆ
ಸೈಕಲ್ ಟೈರ್‌ ನೀಡಿದ
ಆನಂದ ಈ ಬೈಕ್ ಕಾರ್
ನೀಡುತ್ತಿಲ್ಲ

*ಸಿ ಜಿ ವೆಂಕಟೇಶ್ವರ*

ದಸರಾ (ಹನಿಗವನ)

                       *ದಸರಾ*

ದಶ ದುರ್ಗುಣಗಳಾದ
ಕಾಮ,ಕ್ರೋಧ,ಮೋಹ,
ಲೋಭ,ಮದ,ಮತ್ಸರ,
ಸ್ವಾರ್ಥ,ಅನ್ಯಾಯ,
ಅಮಾನವೀಯತೆ,
ಅಹಂಕಾರ...ಗಳ
ಹೊಡೆದೋಡಿಸೋಣ
ದಸರಾ ಹಬ್ಬ ಆಚರಿಸೋಣ
ಉತ್ತಮ ಗುಣಗಳ ಗಳಿಸಲು
ಮುನ್ನುಡಿ ಬರೆಯೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಅಕ್ಟೋಬರ್ 2018

ಮದರಂಗಿ (ಹನಿಗವನ)

              *ಮದರಂಗಿ*

ಏನಿದು ಕನಕಾಂಗಿ
ಕೈ ಕಾಲಿಗೆ ಮದರಂಗಿ
ಕಾಲಿಗೆ ಕಟ್ಟುತಿರುವೆ
ಹೊಳೆಯುವ ಕಾಲ್ಗೆಜ್ಜೆ
ಸೆಳೆಯುವೆ ಇಟ್ಟು ಹೆಜ್ಜೆ
ಮುಖ ಕೆಂಪಾಗಿರಬಹುದು
ನೆನೆದು ಬರುವ   ಇನಿಯನ
ಅದ ಪ್ರತಿಫಲಿಸುತಿದೆ ನಿನ್ನ
ಕಾಲಿನ ರಂಗಾದ ಬಣ್ಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


15 ಅಕ್ಟೋಬರ್ 2018

ಕನವರಿಕೆ ( ಕವನ)

                  *ಕನವರಿಕೆ*

ನನ್ನಲಿ ನಾನಿಲ್ಲ
ನನಗೇನಾಗಿದೆ ತಿಳಿದಿಲ್ಲ
ಚಿಗರೆಯಂತೆ  ಜಿಗಿದಿದ್ದೆ
ಬುಗರಿಯಂತೆ ತಿರುಗಿದ್ದೆ
ಈಗೇಕೋ ಹಾಗಿಲ್ಲ
ಏಕೆಂದು ತಿಳಿಯುತಿಲ್ಲ

ನನ ಗೆಳತಿಗೂ ಈಗೆ
ಆಗಿತ್ತಂತೆ ಊಟ
ಸೇರಿರಲಿಲ್ಲವಂತೆ
ಅವಳಿನಿಯನ ಸೇರಿದಾಗ
ಎಲ್ಲಾ ಸರಿಯಾಯಿತಂತೆ

ಮೊನ್ನೆ ಜಾತ್ರೆಯಲಿ
ಆ ಸುಂದರಾಂಗನ ಕಂಡೆ
ಅವನ ನೋಟಕೆ ಬೆರಗಾದೆ
ಈಗವನ ಕಾಣದೆ ಸೊರಗಿದೆ
ಮುಂದಿನ ಜಾತ್ರೆಗೆ ಅವನು
ಬರುವನೆ ಅವನ ಮನೆಯಲಿ
ನಾ ನೀರು ತರುವೆನೆ?

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*