05 ಅಕ್ಟೋಬರ್ 2018

ಕೇಳಿಲ್ಲ (ಹನಿಗವನ)

          *ಕೇಳಿಲ್ಲ*

ನನಗೆ ಬುದ್ದಿ ಬಂದಾಗಿನಿಂದ
ಗಮನಿಸುತ್ತಲೇ ಇರುವೆ
ಮಾಮ ಪ್ರತಿದಿನ ಅಮ್ಮನ
ನೋಡಲು ರಾತ್ರಿಯೇ ಬರುವನು
ಅದು ಅಪ್ಪನಿಲ್ಲದಾಗ ಬರುವನು
ಯಾಕೆ ಹೀಗೆಂದು ಮೂವರನು
ಕೇಳಬೇಕಿನಿಸಿದರೂ ಕೇಳಿಲ್ಲ
ಏಕೆಂದರೆ ಚಂದಮಾಮನೆಂದರೆ
ನನಗೆ ಅಚ್ಚು ಮೆಚ್ಚು
ಸೂರ್ಯಪ್ಪ ಎಂದರೆ ಎಲ್ಲಿಲ್ಲದ ಗೌರವ
ಭೂತಾಯಿಯೆಂದರೆ ನನ್ನ ಜೀವ

 *ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

02 ಅಕ್ಟೋಬರ್ 2018

ಪರೋಪಕಾರಿಗಳಾಗೋಣ (ಪತ್ರಿಕಾ ಲೇಖನ)

               ಪರೋಪಕಾರಿಗಳಾಗೋಣ

"ಕರ್ನಾಟಕ ಉತ್ತಮ ಪರೋಪಕಾರಿ ಹಾಗೂ ವೈದ್ಯ ವೃತ್ತಿಪರ ಮಸೂದೆಗೆ" ರಾಷ್ಟ್ರಪತಿಗಳು ಅಂಕಿತ ಹಾಕಿ ಕಾನೂನಾಗಿರುವುದು ಸಂತಸದ ವಿಷಯ .ಇಂತಹ ಕಾನೂನು ಇಡೀ ದೇಶದಲ್ಲಿ ಮೊದಲು ನಮ್ಮ ರಾಜ್ಯದಲ್ಲಿ ಜಾರಿಯಾಗುತ್ತಿರುವ ಈ ಸಂಧರ್ಭದಲ್ಲಿ ಕರ್ನಾಟಕದವನಾಗಿ ನನಗೆ ಬಹಳ ಹೆಮ್ಮೆಯಿದೆ . ಇದನ್ನು ಕೇಂದ್ರ ಮತ್ತು ಇತರೆ ರಾಜ್ಯಗಳು ಜಾರಿಗೊಳಿಸುವ ಅಗತ್ಯವಿದೆ. ಅಪಘಾತದಲ್ಲಿ ಗಾಯಗೊಂಡರೆ  ಮೊದಲ ಒಂದು ಗಂಟೆ ಗೋಲ್ಡನ್ ಅವಧಿ ಈ ಸಂದರ್ಭಗಳಲ್ಲಿ ಬಹುತೇಕರು ಆಸ್ಪತ್ರೆಗೆ ಸಾಗಿಸಲು ಮುಂದಾದರೂ ನಂತರದ ಕಾನೂನಿನ ಭಯ ಮತ್ತು ಕೋರ್ಟ್ ಗೆ ಅಲೆಯಬೇಕಾಗ ಬಹುದು ಎಂಬ ಭಯದಿಂದ ಸಹಾಯವನ್ನು ಮಾಡಲು ಹಿಂಜರಿಯುತ್ತಿದ್ದರು  ಇದರಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿದ್ದವು .ಪ್ರಸ್ತುತ "ಪರೋಪಕಾರಿ ಕಾಯ್ದೆ" ಪ್ರಕಾರ ಪೊಲೀಸ್ ಮತ್ತು ಕೋರ್ಟ್ ನ ಅನಗತ್ಯ ಕಿರಿಕಿರಿ ಇರುವುದಿಲ್ಲ. ಇದರ ಬದಲಾಗಿ ಸೂಕ್ತ ಬಹುಮಾನ ಸಿಗಲಿದೆ .
ಈಗ ಅಪಘಾತದಲ್ಲಿ ಗಾಯಗೊಂಡ ವರ ರಕ್ಷಿಸಲು  ಕಾನೂನು ಇದೆ ಇದರ ಜೊತೆಗೆ ಅಪಘಾತದಲ್ಲಿ ತೊಂದರೆ ಗೀಡಾದವರ ವಿಡಿಯೋ ಪೋಟೋ ತೆಗೆಯುವ ಅಮಾನವೀಯ ಚಟುವಟಿಕೆಗಳನ್ನು ಬಿಟ್ಟು ಮಾನವೀಯತೆಯ ತೋರಿ ಅಮೂಲ್ಯವಾದ ಜೀವಗಳನ್ನು ಉಳಿಸೋಣ

ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು

01 ಅಕ್ಟೋಬರ್ 2018

ಮದುವೆಯಾಗಿದೆ (ಕವನ)

                  *ಮದುವೆಯಾಗಿದೆ*

ಅವನಿಗೆ  ಇಪ್ಪತ್ತೊಂದು ತುಂಬಿದೆ
ನಕ್ಷತ್ರಗಳನ್ನು ಮಾತಾಡಿಸಬಲ್ಲ
ಚಂದ್ರನ ಕೈಯಲ್ಲಿ ಹಿಡಿಯಬಲ್ಲ
ಆತ್ಮವಿಶ್ವಾಸ ಉಕ್ಕಿ ಹರಿದಿದೆ

ಅವನಿರುವ ಜಾಗದಲ್ಲಿ
ಜಗವೇ ಮೆಚ್ಚವ ಕಾರ್ಯ
ಮಾಡುವ ಹುಮ್ಮಸ್ಸು
ಗುಂಡೇಟಿಗೂ ಗುಂಡಿಗೆ
ಒಡ್ಡುವ ಕೆಚ್ಚೆದೆಯ ಕಲಿ

ಸಮಯದ ಪರಿವೆಯಿಲ್ಲದೆ
ಹಗಲಿರುಳೆನ್ನದೇ ದುಡಿವನು
ಎಲ್ಲರಿಗೂ ಮಾದರಿ ಇವನು
ಜಗವನೆ ಬದಲಿಸುವ ತಾಕತ್ತಿದೆ

ಅವನು ಈಗೀಗ ಏಕೋ
ಹರಳೆಣ್ಣೆ ಕುಡಿದಂತೆ ಮುಖ
ಎಲ್ಲದಕ್ಕೂ ಹೌದೆಂಬ ಕೋಲೆ ಬಸವ
ಟಿ ವಿ ರಿಮೋಟ್ನಲ್ಲಿ ಚಾನೆಲ್
ಬದಲಾಯಿಸಲೂ ಆಗುತ್ತಿಲ್ಲ
ಕಾರಣ ಅವನಿಗೆ ಮದುವೆಯಾಗಿದೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



29 ಸೆಪ್ಟೆಂಬರ್ 2018

ಗಜಲ್47(ಭಗತ್ ಸಿಂಗ್)

                  *ಗಜಲ್*

ದೇಶಭಕ್ತರಾದ  ಭಗತ್ ಸಿಂಗ್ ಹೆಸರು ಕೇಳಿದರೇನೋ ಪುಳಕ
ಇನ್ ಕ್ವಿಲಾಬ್ ಜಿಂದಾಬಾದ್  ಎಂದವನ ನೆನೆದರೇನೋ ಪುಳಕ

ಮದುವೆ ಮಕ್ಕಳಾದರೆ ಮಾತ್ರ ಜೀವನವೆಂದರು
ಬಾಲ್ಯವಿವಾಹ ಧಿಕ್ಕರಿಸಿದ ಧೀರನ ಸ್ಮರಿಸಿದರೇನೋ ಪುಳಕ

ಬದುಕಲು ನೂರಾರು ವೇಷ ಬಣ್ಣ ಹಚ್ಚದೇ ನಟನೆ
ಬಾಲ್ಯದಿ ರಾಣಾಪ್ರತಾಪ್ ಚಂದ್ರ ಗುಪ್ತರ ಪಾತ್ರ ಅಭಿನಯ ಸವಿದರೇನೋ ಪುಳಕ

ಅನವಶ್ಯಕ ರಕ್ತದೋಕುಳಿ‌ಹರಿಯುತಿದೆ ಪ್ರತಿದಿನ
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮಣ್ಣನು ಪೂಜಿಸಿದವನ ಭಜಿಸಿದರೇನೋ ಪುಳಕ

ಗೊತ್ತು ಗುರಿಯಿಲ್ಲ ಇಂದಿನ ಯುವ ಪೀಳಿಗೆಗೆ
ಚಿಂತನೆಯ ಕೊಲ್ಲಲಾಗದು ಸ್ಪೂರ್ತಿ ಹೊಸಕಲಾಗದೆಂದು ಕರೆನೀಡಿದವನ ನೋಡಿದರೇನೋ ಪುಳಕ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

27 ಸೆಪ್ಟೆಂಬರ್ 2018

ಪ್ರೀತಿಸೋಣ (ಕವನ) ಸ್ನೇಹ ಸಂಗಮ ಬಳಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಕವನ ಎಂದು ಪುರಸ್ಕೃತ ಕವನ


              *ಪ್ರೀತಿಸೋಣ*

ನಮ್ಮ ಸುತ್ತಮುತ್ತಲಿರುವರುವರು
ನಮಗೆ ಪರಿಚಿತರಾಗಿಲ್ಲ
ನೆರೆಯಲ್ಲಿರುವವರ ಹೊರೆಯಂತೆ ಕಾಣುವೆವು
ಹಗೆ ಸಾದಿಸುವೆವು ಯಾವುದೋ ಊರಿನ ಯಾರನ್ನೋ ಮುಖಪುಟದಲ್ಲಿ
ಬಲವಂತದಿ ಪ್ರೆಂಡ್ ರಿಕ್ವೆಸ್ಟ್ ಕಳಿಸಿ ಅವರ ಮುಖ ಹೇಗಿದ್ದರೂ ಲೈಕ್ ಒತ್ತಿದ್ದೇ ಒತ್ತಿದ್ದು .


ನಮ್ಮ ಬಂಧುಗಳ ಕಷ್ಟಗಳಿಗೆ ಸ್ಪಂದಿಸಲಿಲ್ಲ
ಸಾವು ತಿಥಿಗಳಿಗೆ ಹೋಗಲೇಇಲ್ಲ
ಟಿ ವಿ ಧಾರಾವಾಹಿಗಳಲಿ ಬರುವ ಪುಟ್ಟ ಗೌರಿ
ರಾಧಾ ಳ ಸಂಕಟಕ್ಕೆ ಮರುಗಿ ಕಣ್ಣೀರಿನ
ಕೋಡಿ ಹರಿಸುವರು ಸಾಲದೆಂಬಂತೆ
ಮತ್ತೊಮ್ಮೆ ವೂಟ್ ನಲ್ಲಿ ನೋಡಿ
ಅವರ ನಾಟಕದ ಕಷ್ಟಕ್ಕೆ ಅತ್ತಿದ್ದೇ ಅತ್ತಿದ್ದು

ಮನೆಯಲಿ‌ಗಂಟು ಕಟ್ಟಿಕೊಂಡ ಮುಖ
ಮಕ್ಕಳು‌ ಬಂದು‌ ನಗಿಸಿದರೂ ಅರಳೆಣ್ಣೆ
ಕುಡಿದವರ ಹಾಗೆ ನಗಲು ಚೌಕಾಸಿ ಮಾಡಿ
ಕೋಣೆಗೆ ಹೋಗಿ ಯೂಟ್ಯೂಬ್ ನಲ್ಲಿ
ಸ್ಟಾಂಡ್ಅಪ್ ಕಾಮಿಡಿ ಎಪಿಸೋಡ್
ನೋಡಿ ನಕ್ಕುದ್ದೇ ನಕ್ಕಿದ್ದು

ದೇವರಂತಹ ಅಪ್ಪ ಅಮ್ಮಂದಿರ ಪೂಜೆಯಿಲ್ಲ
ಇನ್ನೆಲ್ಲೋ ಇರುವ ದೇವರ ಕಾಣುವ ಹಂಬಲ
ಬ್ರಹ್ಮಾಂಡ ಬೃಹತ್‌ ಬ್ರಹ್ಮಾಂಡದ ಲ್ಲಿ  ದೇವರ
ಕಾಣಲು ಟಿ ವಿ ಯೂಟೂಬ್ ಪೇಸ್ ಬುಕ್
ಗಳಲಿ ಹುಡುಕಿದ್ದೇ ಹುಡುಕಿದ್ದು

ಈ ಸಾಮಾಜಿಕ ಮಾದ್ಯಮಗಳಿಗೆ
ನಾವು ದಾಸರಾಗಿದ್ದು ಸಾಕು
ಇನ್ನಾದರೂ ಮನುಷ್ಯರನ್ನು  ಪ್ರೀತಿಸೋಣ
ಸಾಮಾಜಿಕ ಮಾಧ್ಯಮಗಳನ್ನು
ವಿವೇಚನೆಯಿಂದ ಬಳಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*