26 ಸೆಪ್ಟೆಂಬರ್ 2018

*ಮಗು ಅಳುವ ಸದ್ದು(ನ್ಯಾನೋ ಕಥೆ)

                     *ನ್ಯಾನೋ ಕಥೆ*

*ಮಗು ಅಳುವ ಸದ್ದು*

ವಾರ ,ತಿಂಗಳು, ವರ್ಷಗಟ್ಟಲೆ ಆಸ್ಪತ್ರೆಗಳಿಗೆ ಅಲೆದ ದಂಪತಿಗಳು ,ವಿವಿಧ ದೇವರುಗಳಿಗೆ ಹರಕೆ ಹೊತ್ತರು ,15 ವರ್ಷಗಳಾದರೂ ಮಕ್ಕಳಾಗಲಿಲ್ಲ ."ಇವಳು ಬಂಜೆ ಬಿಡು " "ಇವರಿಗೆಲ್ಲಿ ಮಕ್ಕಳಾಗುತ್ತವೆ " ಎಂಬ ಚುಚ್ಚು ನುಡಿಗಳ ಕೇಳಿದರೂ  ದಂಪತಿಗಳು ಭರವಸೆ ಕಳೆದುಕೊಳ್ಳಲಿಲ್ಲ .ಕಳೆದ ರಾತ್ರಿ ಆ ದಂಪತಿಗಳ ಮನೆಯಲ್ಲಿ ಮಗು ಅಳುವ ಸದ್ದು ಕೇಳಿತು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಸೆಪ್ಟೆಂಬರ್ 2018

ಯಾವಾಗ?(ಹನಿಗವನ)

                        *ಯಾವಾಗ?*

ದಿನ ದಿನ ಬರುವ
ದಿನಕರನು
ದಿನದಲಿ ಧರೆ ಬೆಳಗಿ
ಚಂದಿರಗೆ ಸಾಲ ನೀಡಿ
ಇರುಳಲಿ ಬೆಳಗುವನು
ತಮವ ಓಡಿಸುವನು
ಅಂದಕಾರದಲಿರುವ
ನಾವು ಬೆಳಗುವುದು
ಯಾವಾಗ?

*ಸಿ ಜಿ.ವೆಂಕಟೇಶ್ವರ
*ಗೌರಿಬಿದನೂರು*

21 ಸೆಪ್ಟೆಂಬರ್ 2018

ಮೌನವಾಗಿರೋಣ (ಕವನ)

             *ಮೌನವಾಗಿರೋಣ*

ಅತಿಯಾಗಿ ಬಾಯಿಬಿಟ್ಟರೆ
ಮೀನು ಬದುಕಲಾರದು
ಮಿತಿ ಮೀರಿ  ಮಾತನಾಡಿದರೆ
ತೊಂದರೆಗಳು  ತಪ್ದದು

ನಾಲಿಗೆಯ ಹರಿ ಬಿಟ್ಟರೆ
ಹರಿ ಹರರು  ಮುನಿವರು
ಯೋಚಿಸದೆ ಮಾತನಾಡಿದರೆ
ಕಷ್ಟಗಳು ಸಾವಿರಾರು

ಮಾತು ಮಾತಿಗೆ ‌ಜಗಳವೇಕೆ
ಮಾತಿನಲಿ ಹಿತವಿರಲಿ
ಮಾತಿನಲಿ ಮಧುರವಿರಲಿ
ಮಾತುಗಳು ಮೃದುವಾಗಿರಲಿ

ಮಾತು ಮನ ನೋಯಿಸದಿರಲಿ
ಮಾತುಗಳ ತುಪ್ಪದಂತೆ ಬಳಸೋಣ
ಮಾತುಮನೆ ಮುರಿಯದಿರಲಿ
ಕೆಟ್ಟ ಮಾತಿಗಿಂತ ಮೌನವಾಗಿರೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


20 ಸೆಪ್ಟೆಂಬರ್ 2018

ಸಮರಸ(ಕವನ)

                      *ಸಮರಸ*
   

                          ನೀ
                         ಹೀಗೆ
                      ಮೌನವ
                      ತಾಳಿದರೆ
                    ನಾ ಸಹಿಸೆನು
                 ಒಮ್ಮೆ ನಕ್ಕುಬಿಡು

                            ನಾ
                         ಅಂದು
                        ಮುನಿದು
                     ಮಾತನಾಡಲಿಲ್ಲ
                 ಅದನು ಮರೆತು ಬಿಡು
               ಒಮ್ಮೆ ಮಾತನಾಡಿ ಬಿಡು

                             ನೀ
                          ನಾನು
                         ಎನ್ನದೇ
                      ಅಹಂ ಬಿಟ್ಟು
                    ಮಾತನಾಡೋಣ
               ಸಮರಸದಿ  ಬಾಳೋಣ

                     *ಸಿ ಜಿ*
                *ವೆಂಕಟೇಶ್ವರ*
             *ಗೌರಿಬಿದನೂರು*
           

ಕ್ಷಮಿಸಿ ಬಿಡು (ಕವನ)

             *ಕ್ಷಮಿಸಿ ಬಿಡು*

ಬರೆವೆನೊಂದು ಓಲೆ ಅಮ್ಮ
ಅರಿಯದೆ ತಪ್ಪೆಸಗಿದರೆ
ಹೊಟ್ಟೆಯೋಳಗಾಕಿ ಕೊಳ್ಳಮ್ಮ
ಅಕ್ಕರೆಯಲಿ ನಮ್ಮ ಪೊರೆಯಮ್ಮ

ಸುಂದರವಾದ ಪ್ರಕೃತಿ ಗೆ
ಕೊಡಲಿ ಹಾಕಿ ವಿಕೃತಿ ಮೆರೆದಿಹವು
ನದಿ ನದಗಳ  ಮಲಿನಗೊಳಿಸಿ
ತೊಂದರೆ ಅನುಭವಿಸುತಿಹೆವು

ಜಾತಿ ಮತಧರ್ಮದ ಹೆಸರಲಿ
ಕಚ್ಚಾಡಿ ಸಾಯುತಿಹೆವು
ಕ್ಷಮಿಸಿ ಬಿಡು ನಮ್ಮನ್ನು
ನಮಿಪೆವು ತೊರೆದು ಹಮ್ಮನ್ನು

ಭರತನ ಪೊರೆದ  ಭಾರತಿಯೆ
ನಾರಿಯರ  ಗೌರವಿಸದೆ
ಬಾರಿ ಅವಮಾನ ಮಾಡುತಿಹೆವು
ಕ್ಷಮಿಸಿ ಬಿಡು ನಮ್ಮನ್ನು


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*